X

ನನ್ನ ಪ್ರೀತಿಯ ಹುಡುಗಾ…

     ಮನಸು ಮುನಿಸುಗಳ ಯುದ್ಧದಲ್ಲಿ ಮನಸು ಗೆಲ್ಲುವ ಬದಲು ಮುನಿಸು ಗೆದ್ದಿತಲ್ಲಾ ಗೆಳೆಯಾ…..ಅದಕ್ಕೆ  ವಿಷಾದವೆನಿಸುತಿದೆ ನನಗೆ…ಮನಸು ಗೆದ್ದಿದ್ದರೆ ಪ್ರೀತಿ ಎನ್ನಬಹುದಿತ್ತು …ಮುನಿಸು ಗೆದ್ದಿದೆ ಏನೆನ್ನಲಿ ನೀನೇ ಹೇಳು.. …ಜೊತೆಯಾಗಿ ನಿನ್ನ ಕೈ ಹಿಡಿದು ನಡೆದ ದಾರಿಯಲ್ಲಿ ನಿನ್ನ ಹೆಜ್ಜೆ ಗುರುತುಗಳಿವೆ…,
ನೀನಿಲ್ಲ.ನೀನಿಲ್ಲದೇ ಕ್ಷಣವೂ ಕೂಡಾ ಇರಲಾರದ ನಾನು ಯಶಸ್ವಿಯಾಗಿ ಎಷ್ಟೋ ದಿನಗಳನ್ನ ಪೂರೈಸಿದ್ದೇನೆ…ಆದರೆ ಕೇವಲ ನನ್ನ ಸ್ವಾಭಿಮಾನ, ಸ್ವಂತಿಕೆಗಳಿಗೆ  ಮಾತ್ರ ಯಶಸ್ವಿ ದಿನಗಳನ್ನ ಪೂರೈಸಿದ ಸಂತೋಷವಿದೆ ….ನನ್ನ ಮನಸ್ಸು, ಹೃದಯಕ್ಕಲ್ಲ.
ನನ್ನ ತಲೆದಿಂಬಿಗೆ ಮಾತ್ರ ಗೊತ್ತು ನನ್ನ ನೋವು, ಸಂಕಟ ದುಃಖ ದುಮ್ಮಾನಗಳು…

ನಾನೊಂದು ತೀರ
ನೀನೊಂದು ತೀರ
ಮನಸು ಮನಸು ದೂರ
ಪ್ರೀತಿ ಹೃದಯ ಭಾರ

    ಎನ್ನುವ ಹಾಡನ್ನ ನಮ್ಮಿಬ್ಬರನ್ನ ನೋಡಿಯೇ ಬರೆದಂತೆನಿಸುತ್ತದೆ.ಬೊಗಸೆ ತುಂಬ ಪ್ರೀತಿ ತಂದವನು..ನನ್ನ ಬೊಗಸೆಗೆ ಹಾಕದೇ ಅತ್ತ -ಇತ್ತ ಚೆಲ್ಲಿಬಿಟ್ಟೆಯಲ್ಲ….ಮಣ್ಣು ಪಾಲಾಗಿದೆ ಪ್ರೀತಿ… ಖಾಲಿಯಾದ ನಿನ್ನ ಬೊಗಸೆಯಲ್ಲಿ ನನ್ನ ಕಣ್ಣೀರುಗಳು ತುಂಬಿ ಹರಿದರೂ ನೀನು ಮಾತ್ರ ಕಲ್ಲಾಗಿದ್ದೆ ಏಕೆ…? ಅದರಲ್ಲೊಮ್ಮೆ ನಿನ್ನ ಪ್ರತಿಬಿಂಬ ನೋಡಿಕೊಂಡಿದ್ದರೆ ನನ್ನ ಪ್ರೀತಿ ಎಂತಹದ್ದೆಂದು ತಿಳಿದಿರುತ್ತಿತ್ತು.

      ನನಗಿಂತ ತುಂಬಾ ಎತ್ತರವಿದ್ದ ನಿನ್ನ ಕಿರುಬೆರಳು ಹಿಡಿದು ನಾನು ನಿನ್ನೊಡನೆ ಹೊರಟಿದ್ದರೆ ನೋಡಿದ ಪರಿಚಯದವರು “ಏನೋ ಇಷ್ಟು ಪುಟ್ಟ ಹುಡುಗಿಯ ಕೈ ಹಿಡಿದುಬಿಟ್ಟೆ  ನೀನು…! ” ಎಂದು ನಿನ್ನನ್ನ ಅಣುಕಿಸುತ್ತಿದ್ದರು.

ಕುಳ್ಳಿ ಇವಳು ಅಯ್ಯೋ ಕುಳ್ಳಿ ಇವಳು
ನನ್ನ ಕೊಂದೆ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ  ಇವಳು
ಇವಳ ಹಿಂದೆ ಹಿಂದೆ ಹೋದೆ ನಾ ತುಂಬಾ ಹಿಡಿಸಿ

    ಅಂತ ಹಾಡು ಹೇಳಿ ಕಣ್ಣು ಮಿಟುಕಿಸಿ ಅವರೊಡನೇ ಸೇರಿ ನೀನೂ ನನ್ನ ರೇಗಿಸುತ್ತಿದ್ದೆ. ರೇಗಿಸಿ ನಗುತ್ತಿದ್ದ ನಿನ್ನ ನಗು ಮಾತ್ರ ಇನ್ನೂ ನನ್ನ ಅಣುಕಿಸುತ್ತಿದೆ….ಇನ್ನೂ ನನ್ನ ಕಲ್ಪನೆಯಲ್ಲಿ ಆ ತುಂಟ ಹುಡುಗನೇ ನೀನು.ನಿನ್ನ ಕಿರುಬೆರಳು ಹಿಡಿದು ನಡೆಯವುದರಲ್ಲಿನ ಸಂತೋಷ ಏನೆಂದು ನನಗೆ ಗೊತ್ತು….ಭಾವನೆಗಳೇ ಇಲ್ಲದೇ ಪ್ರ್ಯಾಕ್ಟಿಕಲ್ , ಪ್ರ್ಯಾಕಿಟಕಲ್ ಅಂತ ಅದರ ಹಿಂದೆಯೇ ಓಡಿ ಹೋದ ನಿನಗೆ ಗೊತ್ತಿಲ್ಲ…ಇನ್ನೊಂದು ಕಿರುಬೆರಳ ಹುಡುಕಾಟದಲ್ಲಿದ್ದಿಯಾ ನೀನು…ಎನ್ನುವ ಸುದ್ದಿ ತಿಳಿದು ಚಡಪಡಿಸುತ್ತಿರುವ ನನ್ನ ಕಿರುಬೆರಳಿಗೆ ಏನಂತ ಸಮಾಧಾನಿಸಲಿ ನಾನು…..?

ನಿನ್ನಷ್ಟೇ ಪಾನಿಪುರಿಯನ್ನ ಪ್ರೀತಿಸುತ್ತಿದ್ದೆ ನಾನು. ಪ್ರತಿದಿನವೂ ಸಂಜೆ ಪಾನಿಪುರಿ ಹೊಟ್ಟೆ ಸೇರದಿದ್ದರೆ  ಏನು ತಿಂದರೂ ಹೊಟ್ಟೆ ಹಸಿದಂತೆಯೇ ಅನಿಸುತ್ತಿತ್ತು. ಪಾರ್ಕ್ ನ ಪಕ್ಕದಲ್ಲಿ ಪಾನಿಪುರಿ ಮಾರುವ ಆ ಭಯ್ಯಾ  ನಮ್ಮ ಕುಟುಂಬದ ಸದಸ್ಯನಂತಾಗಿದ್ದ.ನೀನು ಮಾತ್ರ ಯಾವಾಗಲೂ ಒಂದೇ ಪ್ಲೇಟ್ ಆರ್ಡರ್ ಮಾಡುತ್ತಿದ್ದೆ. ನಿನಗೆ ಗೊತ್ತಿತ್ತು ,ನಾನು ಪಾನಿಪುರಿಯನ್ನ ಹಂಚಿ ತಿನ್ನುವ ದೊಡ್ಡ ಮನಸಿನವಳಲ್ಲ ಅಂತ.ನನ್ನ ಪ್ಲೇಟ್ ನಲ್ಲೇ ತಿನ್ನುವ ತವಕ ನಿಂದು,ಅದೂ ಬೇಕಂತಲೇ…ನೀನಿಲ್ಲದೇ ನಿನ್ನಷ್ಟೇ ಇಷ್ಟದ   ಪಾನಿಪುರಿಯೂ ಕೂಡಾ ಸಪ್ಪೆಯೆನಿಸುತಿದೆ ಹುಡುಗಾ…ನೀನು ದೂರ ಸರಿದು ತುಂಬಾ ದಿನಗಳ ನಂತರ ಪಾನಿಪುರಿ ತಿನ್ನಲು ಹೋದರೆ, ನಾವಿಬ್ಬರೂ ಕುಳಿತು ಕಿತ್ತಾಡುತ್ತ ಪಾನಿಪುರಿ ತಿಂದ ಜಾಗವೂ ಕೂಡಾ ನಮ್ಮಿಬ್ಬರ ಅಗಲಿಕೆಯಿಂದ ಅತ್ತಂತೆನಿಸಿತು.ನೀನಿಲ್ಲದೆ ಪಾನಿಪುರಿ ಬೇಡವೆನಿಸಿ ತಿನ್ನದೇ ಹಾಗೇ ಬಿಟ್ಟು ಬಿಲ್ ಕೊಟ್ಟು ಬರುವಾಗ ಆ ಭಯ್ಯಾನಿಗೂ ಖೇದವೆನಿಸಿತ್ತು ನನ್ನ ಕಂಡು …
“ತುಮ್ ದೋನೋ, ಸಾಥ್ ಮೆ ಏಕಿ ಥಾಲಿ ಮೆ ಪಾನೀಪುರಿ ಖಾಯೇ ತೋ ಅಚ್ಛಾ ರೆಹತಾ ಹೈ.. ಮೇಡಂ…” ಅಂದಾಗ ನೀನಿಲ್ಲದೇ ನಾನು ಅಪೂರ್ಣಳು ಅನ್ನಿಸಿ ಕಣ್ಣಲ್ಲಿ ನೀರಿನ ತೆಳು ಪದರ ಕಂಡಿತ್ತು. “ಹಾಂ !ಭಯ್ಯಾ  “ಎನ್ನುವಾಗ ನನ್ನ ಧ್ವನಿ ಗದ್ಗದವಾಗಿತ್ತು…ನೀನಿಲ್ಲದೇ ಪಾನಿಪುರಿಯಷ್ಟೇ ಅಲ್ಲ….ಈ ಜಗತ್ತಿನಲ್ಲಿ ಏನೂ ಬೇಡವೆನಿಸಿದೆ..

   ಪಾರ್ಕ್ ನಲ್ಲಿ ನಾವಿಬ್ಬರೂ ಯಾವಾಗಲೂ ಕೂರುತ್ತಿದ್ದುದು ಆ ಒಂದೇ ಬೆಂಚ್….ಅದೇ ನಿನಗೆ ಗೊತ್ತಲ್ವಾ…?  ನಾವಿಬ್ಬರೂ  ಜೋಡಿಯಾಗಿ ಕುಳಿತ ಮೊಟ್ಟ ಮೊದಲ ಬೆಂಚ್….ಯಾರಾದರೂ ಕುಳಿತಿದ್ದರೆ ಅವರೆದ್ದು ಹೋಗುವವರೆಗೂ ಕಾಯ್ದು ಅದೇ ಬೆಂಚ್ ಮೇಲೆ ಹತ್ತು ನಿಮಿಷ ಕುಳಿತು ಹಳೆ ದಿನಗಳ ಮೆಲುಕು ಹಾಕುತ್ತಿದ್ದಾಗಿನ ಆನಂದವನ್ನ ಹೇಗೆ ತಾನೇ ಮರೆಯಲಿ? ಆ ಬೆಂಚ್ ಈಗ ಖಾಲಿಯಿದ್ದರೂ ಕುಳಿತುಕೊಳ್ಳಬೇಕೆನಿಸುತ್ತಿಲ್ಲ ನನಗೆ…..ನೀನಿಲ್ಲದೇ ಎಲ್ಲ ಶೂನ್ಯವೆನಿಸಿದೆ ಗೆಳೆಯಾ …

     ಹಸಿರು ಸೀರೆಯುಟ್ಟು ನಿನ್ನ ಕೈ ಹಿಡಿದು ಬರುವಾಗ ನೋಡುತ್ತಿದ್ದ ಮನೆ ಪಕ್ಕದಲ್ಲಿ ಹೂ ಮಾರುವ ಅಮ್ಮ “ಎಷ್ಟು ಚೆನ್ನಾಗಿದೆ ಜೋಡಿ “ಅಂತ ಯಾವಾಗಲೂ ಅನ್ನುತ್ತಿದ್ದಳು.ಈಗಲೂ “ನೀನೆಲ್ಲಿ “ಅಂತ ಕೇಳುತ್ತಾಳೆ ಹುಡುಗಾ… ಅರ್ಧ ದಾರಿಯಲ್ಲಿ ಬಿಟ್ಟು ಹೋದ ಎಂದು ಹೇಳಲಾ….? ತಿಳಿಯುತ್ತಿಲ್ಲ.

      ಎಷ್ಟೋ ಬಾರಿ ನಮ್ಮಿಬ್ಬರಿಗೂ ಜಗಳವಾದಾಗ, ನಿನ್ನದೇ ತಪ್ಪಿದ್ದರೂ ನೀನು ನನ್ನೊಡನೆ ಮಾತು ಬಿಟ್ಟಿದ್ದೆ. ಕೇವಲ….ಕೇವಲ… ಅರ್ಧ ಗಂಟೆ ನನ್ನಿಂದ ನಿನ್ನ ಜೊತೆ ಮಾತಿಲ್ಲದೆ ಬದುಕಲಾಗುತ್ತಿರಲಿಲ್ಲ ನನಗೆ …ಎಷ್ಟೋ  ಬಾರಿ ನನ್ನ ಸ್ವಾಭಿಮಾನ ಸ್ವಂತಿಕೆಗಳು ಅಡ್ಡ ಬಂದು ನನ್ನನ್ನು  ತಡೆಯುತ್ತಿದ್ದರೂ ” ನಿಮಗಿಂತ ನನ್ನ ಹುಡುಗ ಮುಖ್ಯ ನನಗೆ “ಎಂದು ಅವುಗಳನ್ನ ಒದ್ದು ನಿನ್ನ ಕಾಲಡಿಗೆ ಬಂದಿದ್ದೇನೆ ನಾನು.ನನ್ನ ಈ ಒಂದು ವೀಕ್ ನೆಸ್ ನಿನ್ನನ್ನ ಇನ್ನೂ ಗಟ್ಟಿ ಕಲ್ಲಾಗಿಸಿತ್ತು. ಈಗಲೂ ಅದನ್ನೇ ಮಿಸ್ ಯೂಸ್ ಮಾಡಿಕೊಳ್ಳುತ್ತಿದಿಯಾ ಅಲ್ವಾ ನೀನು…..? ನಿನ್ನ ಪ್ರಕಾರ ಪ್ರೀತಿಯಂದರೆ ನನ್ನ ವೀಕ್ ನೆಸ್ ನ್ನ ಈ ರೀತಿ ಮಿಸ್ ಯೂಸ್ ಮಾಡಿಕೊಳ್ಳವುದಾ? ಹಾಗೆಯೇ ಅನ್ನಿಸಿದೆ ನನಗೆ.

ಸೋನಿಯೇ ಹೀರಿಯೇ
ತೇರಿ ಯಾದ್ ಆಂದಿ ಯೇ
ಸೀನೇ ವಿಚ್ ತಡಪ್ತಾ ಹೈ ದಿಲ್
ಜಾನೇ ಜಾನ್ ದಿ ಏ..

  ಎನ್ನುವ ಹಾಡನ್ನ ಬಾರಿ ಬಾರಿ ನೋಡಬೇಕೆನ್ನಿಸುತ್ತದೆ ನನಗೆ.ಆ ಹೀರೋ ಪಾತ್ರದಂತೆಯೇ ನಿನ್ನ ಕಲ್ಪಿಸಿಕೊಳ್ಳುತ್ತೇನೆ ಆ ಹಾಡು ನೋಡಿದಾಗಲೆಲ್ಲಾ. ನೀನೂ ನನ್ ಮಿಸ್ ಮಾಡಿಕೊಳ್ಳಬಹುದಾ? ನನ್ನ ನೆನಪುಗಳು ನಿನ್ನ ಕಣ್ಣುಗಳಲ್ಲಿ  ನೀರು ತರಿಸಬಹುದಾ? ಕಣ್ಣೆದುರಿಗೇ ಅಪರಿಚಿತನಂತೆ ಹೋಗುವ ನೀನು ಮತ್ತೆ ,ಆ ಹೀರೋ ಪಾತ್ರ  ಇಬ್ಬರೂ ವಿರುದ್ಧ ದಿಕ್ಕುಗಳು…ನನ್ನ ಜೀವನದಲ್ಲಿ ಈ ಹಾಡಿನ ಅಂತ್ಯದಂತಾಗದಿರಲಿ ಕಣೋ ಹುಡುಗಾ….  ಹಾಗಾಗಲೂ ಸಾಧ್ಯವಿಲ್ಲ ಬಿಡು… ನಿನ್ನೊಂದಿಗೇ ಆ ಅಂತ್ಯವಾಗಲಿ….ಅಲ್ಲಿಯವರೆಗೂ ಕಾಯುತ್ತೇನೆ ನಾನು ಶಬರಿಯಂತೆ. ಆಗದಿದ್ದರೂ ಚಿಂತೆಯಿಲ್ಲ ನನಗೆ ,ಒಂದಿಡಿ ಬದುಕಿಗಾಗುವಷ್ಟು ನಿನ್ನ ನೆನಪುಗಳಿವೆ…

       ನಿನ್ನ ಅರ್ಥ ಮಾಡಿಕೊಳ್ಳುವ ಸಾಹಸದಲ್ಲಿ ನನ್ನತನವೆನ್ನುವುದನ್ನೇ ಎಷ್ಟೋ ದಿನಗಳು ಮರೆತಿದ್ದೆ. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ.ಆದರೆ ತಿದ್ದಿ ನಡೆದರೆ ಅದಕ್ಕೊಂದು ಅರ್ಥವಿರುತ್ತದೆ.ನಿನ್ನ ತಪ್ಪನ್ನೂ ಸಮರ್ಥನೆ ಮಾಡಿಕೊಳ್ಳುವ ನೀನು, ನಿನಗಿರುವಂತೆ ನನಗೂ ಸ್ವಾಭಿಮಾನ ಸ್ವಂತಿಕೆಗಳಿವೆ ಎಂದೇಕೆ ಅರ್ಥ ಮಾಡಿಕೊಳ್ಳಲಿಲ್ಲ ….?

     ಕೇವಲ ನಿಟ್ಟುಸಿರಗಳನ್ನ ಬಳುವಳಿಯಾಗಿ  ಕೊಟ್ಟು ಹೋದೆ ನೀನು.ಕಾರಣ ಏನೇ ಇರಲಿ.. ನಾ ನಿನ್ನ ಪ್ರೀತಿಗೆ ದ್ರೋಹವನ್ನಂತೂ ಮಾಡಿಲ್ಲ.ಅದೂ ನಿನಗೆ ಗೊತ್ತು …ಸಂಬಂಧವನ್ನೇ ಮುರಿದುಕೊಳ್ಳುವ ಸನ್ನಾಹದಲ್ಲಿರುವ ನಿನಗೆ ಅದು ಹೇಗೆ ತಾನೇ ಅರ್ಥವಾಗುತ್ತದೆ…?ನಿನ್ನ ಕಿರುಬೆರಳು ಹಿಡಿದು ನಡೆಯಲು ಹವಣಿಸುತ್ತಿದ್ದೇನೆ ನಾನು…ಪಾನಿಪುರಿ ಅಂಗಡಿಯ ಭಯ್ಯಾ  ನಮಗೋಸ್ಕರ ಒಂದು ಪ್ಲೇಟ್ ಸ್ಪೆಷಲ್ ಪಾನಿಪುರಿ ತಯಾರಿಸುತ್ತಿದ್ದಾನೆ…ಒಂದೇ ತಟ್ಟೆಯಲ್ಲಿ ನಾವಿಬ್ಬರೂ ಪಾನಿಪುರಿಯನ್ನ ಮತ್ತೆ ತಿನ್ನುವ ಆಸೆ ಹೊತ್ತು ಕಾಯುತ್ತಿದ್ದೇನೆ ನಾನು…ಪಾರ್ಕ್ ನಲ್ಲಿ ನಾವು ಜೋಡಿಯಾಗಿ ಮೊದಲು ಕುಳಿತ ಬೆಂಚ್ ಮೇಲೆ ಇನ್ನು  ಯಾರೂ ಬಂದು ಕುಳಿತಿಲ್ಲ, ನಮಗೋಸ್ಕರ ಖಾಲಿಯಿದೆ…ನಮ್ಮ ನಗುವನ್ನ ಆನಂದಿಸಲು ಅದೂ ಕಾಯುತಿದೆ ಯಾರಾದರೂ ಬಂದು  ಕೂರುವ ಮುನ್ನ……ಬಾ.. ನಾವಿಬ್ಬರೂ ಕುಳಿತುಕೊಳ್ಳೋಣ…..ನಮ್ಮ ಹಳೆಯ ಖುಷಿಯ ಕ್ಷಣಗಳನ್ನಷ್ಟೇ ಮೆಲಕು ಹಾಕುವ ಖುಷಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ ನಾನು….ಹೂ ಮಾರುವ ಅಮ್ಮನಿಗೆ  “ನನ್ನ ಹುಡುಗಾ ಇಲ್ಲೇ ಇದ್ದಾನೆ ನೋಡು….ನನ್ನ ಬಿಟ್ಟು ಹೋಗಲಿಲ್ಲ “ಎಂದು ಹೇಳಿ ಅವಳಿಂದಲೇ ಮೊಳ ಮಲ್ಲಿಗೆ ಪಡೆದು, ಅವಳೆದುರೇ ನಿನ್ನ ಕೈಯಾರೆ  ನನ್ನ ಮುಡಿಗೆ ಹೂ ಮುಡಿಸಿಕೊಳ್ಳಲು ಕಾಯ್ದಿದ್ದೇನೆ ನಾನು …ಬಾ ಹುಡುಗಾ ಮುನಿಸುಗಳ ಮರೆತು ಮನಸುಗಳ ಒಂದಾಗಿಸೋಣ….

                              ಇಂತಿ
ನಿನ್ನವಳು..

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post