ಆ ದಿನ, ಆಯಿಗೆ ಫಿಟ್ಸ್ ಬಂದ ದಿನ; ಅದು ಫಿಟ್ಸ್ ಇರಬಹುದೆಂದು ಊಹಿಸಲೂ ಆಗಿರಲಿಲ್ಲ. ನನ್ನ ಕೈ ಕಾಲು ತಣ್ಣಗಾಗಿದ್ದವು. ಮಗಳು ಅಳುತ್ತಿದ್ದರೂ, ನನ್ನ ಕಣ್ಣುಗಳಲ್ಲಿ ನೀರಿರಲಿಲ್ಲ. ಗಾಬರಿಯಾಗಿದ್ದೇನೋ ನಿಜ. ಇವರು ಮೌಥ್ ಬ್ರೀದಿಂಗ್ ಮಾಡಿದರೂ ಪ್ರಯೋಜನವಾಗಲಿಲ್ಲ. ಹಾರ್ಟ್ ಅಟ್ಯಾಕ್, ಅಥವಾ ಪ್ಯಾರಾಲಿಸಿಸ್ ಇರಬಹುದೆಂಬ ಗೆಸ್ ವರ್ಕ್. ಅಷ್ಟರಲ್ಲೇ ಅಕ್ಕ ಪಕ್ಕ ದವರೆಲ್ಲಾ ಬಂದು ಕುಳಿತ ವ್ಹೀಲ್ ಚೇರ್’ನಲ್ಲೇ ಅಯಿಯನ್ನು ಕರೆದುಕೊಂಡು ಹೊಗುವುದೆಂದು ನಿಶ್ಚಯಿಸಲಾಯಿತು. ಅವರೆಲ್ಲ ಹೊಗುತ್ತಿದ್ದಂತೆ, ನಾನು ಸಹ ಮಗಳೊಂದಿಗೆ ಹೊರಟೆ. ಗ್ಯಾಸ್ ಆಫ಼್ ಮಾಡಿ, ಪರ್ಸ್ ತೆಗೆದುಕೊಂಡು ಹೊರಟಾಗಲೇ ಅನಿಸಿದ್ದು, ದೇವರ ಮುಂದೆ ದೀಪ ಹಚ್ಚಿ, ನಮಸ್ಕರಿಸಿ ಹರಕೆ ಹೊರಬೇಕೆ ಎಂದು.
ತಕ್ಷಣ, ಅಜ್ಜಿಯ ನೆನಪು. ಸಣ್ಣಪುಟ್ಟದ್ದಕ್ಕೆಲ್ಲ ಹರಕೆ ಹೊತ್ತು, ತನ್ನ ಹರಕೆಯಿಂದಲೇ ಎಲ್ಲ ಸರಿಯಯಿತೆನ್ನುತ್ತಿದ್ದವಳನ್ನು ಚುಡಾಯಿಸುತ್ತಿದ್ದೆ.
ನಾನು ಪ್ರತಿದಿನ ಬೆಳಿಗ್ಗೆ ದೇವರಿಗೆ ನಮಸ್ಕಾರ ಮಡುತ್ತೇನೆ. ಚಿಕ್ಕವಳಿದ್ದಾಗಿನಿಂದ, ಬುದ್ಧಿ ತಿಳಿದಾಗಿನಿಂದ ರೂಢಿ. ಗಣಪತಿ ಸ್ತೋತ್ರವನ್ನು ಯಾವಾಗಲೂ ಹೇಳುತ್ತೇನೆ. ಒಮ್ಮೊಮ್ಮೆ ಬೇರೆ ಹೇಳಿದ್ದೂ ಇದೆ, ಕೆಲವೊಮ್ಮೆ ಮರೆತಿದ್ದೂ ಇದೆ, ಆದರೂ ಮರೆತ ಪ್ರಮಾಣ ತೀರ ಕಡಿಮೆ. ಆದರೆ ಯಾವತ್ತೂ ದೇವರಲ್ಲಿ ಏನೂ ಬೇಡಿಕೊಂಡಿಲ್ಲ. ಅದು ಪರೀಕ್ಷೆಗೆ ಹೊರಡುವಾಗಲೇ ಇರಬಹುದು, ಇಂಟರ್ವ್ಯೂ ಇರಬಹುದು, ಮಾಡುವುದು ಬರೀ ನಮಸ್ಕಾರ ಮಾತ್ರ. ನನ್ನ ಪ್ರಕಾರ, ದೇವರು ಸರ್ವಶಕ್ತ, ನಾವೆಷ್ಟೇ ಲಾಗ ಹಾಕಿದರೂ ಅವನು ತನಗೇನು ಬೇಕೋ ಅದನ್ನೇ ಮಾಡುತ್ತಾನೆ. ಹರಕೆ ಹೊತ್ತು ಅವನನ್ನು ಬ್ಲಾಕ್ ಮೇಲ್ ಮಾಡುವುದಕ್ಕಿಂತ, ಅಥವಾ ಅವನಿಗೆ ಆಮಿಷ ತೋರಿಸುವುದಕ್ಕಿಂತ ಬಂದದ್ದನ್ನು ಎದುರಿಸುವುದು ಮೇಲು. ಅಲ್ಲದೇ, ದೇವರು ನಾವು ಬೇಡಿದ್ದನ್ನು ವರದಂತೆ ಕೊಟ್ಟರೂ, ಅದರ ಜೊತೆ ಒಂದಿಷ್ಟು ಕಂಡಿಷನ್ನೋ, ಅಥವಾ ದೌರ್ಭಾಗ್ಯವನ್ನೋ ಇಟ್ಟಿರುತ್ತಾನೆ, ಇದು ನನ್ನ ಅನಿಸಿಕೆ ಮಾತ್ರ. ಚಿಕ್ಕಂದಿನಿಂದ ಕೇಳಿದ ಸತ್ಯನಾರಯಣ ಪೂಜೆಯ ಕಥೆ, ಹರಿಶ್ಚಂದ್ರನ ಮಗನ ಕಥೆ, ನಚಿಕೇತನ ಕಥೆ, ಇವೆಲ್ಲದರಿಂದ ಪ್ರಭಾವಿತವಾದ ಅನಿಸಿಕೆ ಇದು.
ಒಂದು ಕ್ಷಣದಲ್ಲಿ ದೇವರ ಮನೆ ಕಡೆ ಮುಖ ಮಡಿದ್ದೆನೋ ನಿಜ, ಆದರೆ ಅಷ್ಟರಲ್ಲೆ ಬಂದ ವಿಚಾರ, ನಾನೀಗ ಏನಂತ ಹರಕೆ ಹೊರಲಿ? ಆಯಿ ಹೇಗಾದರೂ ಬದುಕಲಿ, ನಾನು ……. ಮಾಡುತ್ತೇನೆ ಅಂತಲೆ? ಒಂದುವೇಳೆ ನನ್ನಹರಕೆ ಫಲಿಸಿ ಅಯಿ ಬದುಕಿದರೂ ಯಾವ ಸ್ಥಿತಿಯಲ್ಲಿರುತ್ತಾರೆ? ಬರೀ ಜೀವವೊಂದುಳಿದರೆ ಸಾಕೆ? ಅವರು ಮೊದಲಿನಂತಾಗುವುದು ಬೇಡವೆ? ಅದಕ್ಕಾಗಿ ಮತ್ತೊಂದು ಹರಕೆ?
ಯಾವಾಗಲೂ ಹರಕೆ ಹೊರುವವರನ್ನು ಟೀಕಿಸುವ ನಾನು ಈಗ ಹರಕೆ ಹೊತ್ತರೆ ಉಳಿದವರು ಏನೆನ್ನುತ್ತಾರೆ ಎಂಬುದು ಇಲ್ಲಿ ಅಪ್ರಸ್ತುತ. ಆದರೆ ನಾನು ಹೊರುವ ಹರಕೆಯ ಮೇಲೆ ನನಗೇ ವಿಶ್ವಾಸವಿಲ್ಲವಲ್ಲ? ಬೇಡ, ದೇವರಿದ್ದರೆ ಆತನೊಂದಿಗೆ ಜೂಜಾಡುವ ಕೆಲಸ ಬೇಡ. ಸದ್ಯಕ್ಕೆ ಮಾಡಬೇಕಾಗಿದ್ದುದು, ಅವರನ್ನು ಆಸ್ಪತ್ರೆಗೆ ಕರೆದೊಯ್ದು ಟ್ರೀಟ್ಮೆಂಟ್ ಕೊಡಿಸುವುದು. ದೇವರಿಗೆ ಬೇಕಾದರೆ ಅಮೇಲೆ ನಮಸ್ಕಾರ ಮಾಡಿದರಾಯಿತು. ಅವನೇನೂ ನನ್ನ ನಮಸ್ಕಾರಕ್ಕಾಗಿ ಕಾದು ಕುಳಿತಿರುವುದಿಲ್ಲ. ಅವನಿಗೆ ಅವನದೇ ಬೇಕಾದಷ್ಟು ಕೆಲಸಗಳಿವೆ. ಅವನೀಗಾಗಲೇ ಅಯಿಯತ್ತ ಕ್ರಪಾದ್ರಷ್ಟಿ ಬೀರಿರಲೂ ಬಹುದು. ಅರೇ, ಆಂಬುಲೆನ್ಸ್ ಸಹ ಬಂದಿತು. ಮನೆಗೆ ಬೀಗ ಹಾಕಿ ಬೇಗ ಓಡಿದೆ.
-Usha Jogalekar
Facebook ಕಾಮೆಂಟ್ಸ್