X

ಆತ್ಮ ಸಂವೇಧನಾ- 25

ಆತ್ಮ ಸಂವೇದನಾ-24

ಗಾಳಿ ಬಂದರೆ ಎಲೆಯಲುಗುವ ಶಬ್ಧವೂ ಕೇಳುವಷ್ಟು ಸ್ತಬ್ಧತೆ; ಚಲನೆಗೆ ಆಸ್ಪದವೇ ಇಲ್ಲದಷ್ಟು ನಿಶ್ಚಲ. ಹೃದಯದ ಬಡಿತವೇ ಮೊಳಗುವಷ್ಟು ಶಾಂತವಾಗಿತ್ತು ಭೂಮಿ, ಕೇವಲ ಆಗಸದ ಪರದೆಯಿಂದ ಆ ಜೀವಿಯ ಮಾತಷ್ಟೇ ಕೇಳುವಂತೆ. ಉಳಿದೆಲ್ಲವೂ ಸ್ಮಶಾನ ಮೌನ.
ಕಪ್ಪು ಜೀವಿ ಮಾತನಾಡತೊಡಗಿತು. ಅದರ ಭಾಷಾಂತರ ಎಷ್ಟು ಮುಂದುವರೆದ ತಂತ್ರಜ್ಞಾನವೆಂದರೆ ಕೇಳುವವರೆಲ್ಲರಿಗೂ ಅವರವರ ಮಾತೃಭಾಷೆಯಲ್ಲಿಯೇ ಕೇಳತೊಡಗಿತು.ಶಬ್ಧಗಳು ಸ್ಪಷ್ಟ, ಧ್ವನಿಯಲ್ಲಿ ಗಡುಸಿತ್ತು. ಕಟುತ್ವ ಎದ್ದು ತೋರುತ್ತಿತ್ತು. ಎಲಿಯನ್ಸ್ ಗಳ ಮಾತಿನ ಒಳಾರ್ಥಗಳು ಮನುಷ್ಯನಿಗೆ ಮಾತ್ರವಲ್ಲ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳೂ ಅರ್ಥಮಾಡಿಕೊಂಡವು.
ಅದು ಮನುಷ್ಯನ ಮರಣ ಸಂದೇಶ. ಉಳಿದ ಎಲಿಯನ್ ಗಳಿಗೆ ಮನುಷ್ಯನನ್ನು ಸರ್ವನಾಶ ಮಾಡಲು ನೀಡಿದ ಸೂಚನೆ. ಎಲಿಯನ್ ಗಳಿಗೆ ಮನುಷ್ಯನ ಜೀವ ತೆಗೆಯಲು, ಹೃದಯ ಬಗೆಯಲು ಪ್ರೇರೆಪಿಸುವಂಥ ಮಾತುಗಳು.
“ಇಂದು ಭೂಮಿಯ ಮೇಲೆ ಮನುಷ್ಯನ ಕೊನೆಯ ದಿನ. ಮನುಷ್ಯ ತನ್ನ ಬುದ್ಧಿಯಿಂದ ಏನೆಲ್ಲ ಸೃಷ್ಟಿಸಿದ, ಎಲ್ಲವೂ ಬ್ರಷ್ಟವಾಯಿತು.ಆತ ತನ್ನ ಬುದ್ಧಿಯನ್ನು, ಯೋಚನೆಗಳನ್ನು ಕೇವಲ ಬದುಕಲು ಬಳಸಿಕೊಂಡಿಲ್ಲ. ಉಳಿದೆಲ್ಲವುಗಳ ಬದುಕು ಕೊನೆಯಾಗಿಸಲು ಬಯಸಿದ. ಭೂಮಿಯೆಂಬ ಸುಂದರ ಜೀವಿಯನ್ನು ಕುರೂಪವಾಗಿಸಲು ಉಪಯೋಗಿಸಿಕೊಂಡ.
ಇಂತಹ ಬದುಕು ಬದುಕಬೇಕೇ??”
ಆಗಸದ ಪರದೆಯಲ್ಲಿ ಆ ಜೀವಿಯ ಪ್ರಶ್ನೆ ಸಿಡಿಲಾಯಿತು. ಉಳಿದ ಜೀವಿಗಳಲ್ಲಿ ರೋಷ ಕಡಲಾಯಿತು. ಮರುಕ್ಷಣದಲ್ಲಿ ಭೂಮಿಯ ಮೇಲಿದ್ದ ಉಳಿದ ಜೀವಿಗಳು ಬದುಕಬಾರದು, ಬದುಕಲು ಬಿಡಬಾರದು ಎಂದು ಕೂಗಿಕೊಂಡವು.
ಅವುಗಳ ಕೂಗು ಭೂಮಿಯ ಮೇಲೆ ಪ್ರತಿಧ್ವನಿಸಿತು.
ಮಾತನಾಡುತ್ತಿರುವ ಎಲಿಯನ್ ಗಹಗಹಿಸಿತು.
“ಇಲ್ಲಿ ಮನುಷ್ಯರನ್ನು ಬಿಟ್ಟರೆ ಉಳಿದೆಲ್ಲವೂ ನಿರ್ವೀರ್ಯರೇ. ಅವುಗಳ ಬದುಕಿಗೂ, ಸಾವಿಗೂ ವ್ಯತ್ಯಾಸವೇ ಇಲ್ಲ, ಎರಡೂ ಒಂದೇ ಆಗುತ್ತದೆ. ಅದೆಷ್ಟೋ ವರ್ಷಗಳಿಂದ ಮನುಷ್ಯನ ಕ್ರೂರತೆಯನ್ನು ಸಹಿಸಿ, ರಕ್ಷಿಸಲು ಯಾರದೋ ಪ್ರತೀಕ್ಷೆಯಲ್ಲಿರುವಂತೆ ಬದುಕಿದ ಬದುಕು ನಿರ್ವೀರ್ಯವೇ. ಇದೊಂದು ಬದುಕೇ??” ಕೇಳಿತು ಎಲಿಯನ್.
ಇತರ ಜೀವಿಗಳು ಗೆಲುವಿನ ಲಹರಿಯಲ್ಲಿ “ಇಲ್ಲ, ಇಲ್ಲ” ಎಂದು ಕೂಗತೊಡಗಿದವು.
ಅದೊಂದು ಶಬ್ದ ಕಿವಿಗೆ ಸೇರಿದೊಡನೆ ಭೂಮಿಯ ಎಲ್ಲ ಜೀವಿಗಳಲ್ಲಿಯೂ ಸಂಚಲನ ಉಂಟಾಯಿತು. ಮನುಷ್ಯನ ಕ್ರೌರ್ಯತೆಯನ್ನು ಎದುರಿಸದೆ ಅನುಭವಿಸಿದ್ದು ಏಕೆ? ಅಷ್ಟು ಹೇಡಿಯೇ ನಮ್ಮ ಬದುಕು? ಎಂದು ನಾಚಿಕೆಯುಂಟಾಯಿತು. ಮುಷ್ಯನನ್ನು ಹೊರತುಪಡಿಸಿ ಉಳಿದೆಲ್ಲವುಗಳೂ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳತೊಡಗಿದವು.
ಎಲಿಯನ್ ಮಾತು ಮುಂದುವರೆಸುತ್ತಲೇ ಇತ್ತು.
“ವಿಜ್ಞಾನ ನಮ್ಮಲ್ಲಿಯೂ ಇದೆ, ಮನುಷ್ಯನ ಬುದ್ಧಿಯನ್ನು ಮೀರಿದ ತಂತ್ರಜ್ಞಾನದ ಬಳಕೆಯಿದೆ. ಎಲ್ಲರಿಗಿಂತ ಸಾವಿರ ಪಾಲು ಮುಂದಿರುವ ಜೀವಿಗಳು ಈ ವಿಶ್ವದಲ್ಲಿವೆ. ಅವು ಯಾವುದೂ ಇತರರ ಮೇಲೆ ಬಲ ಪ್ರಯೋಗಿಸುತ್ತಿಲ್ಲ. ಆದರೆ ಮನುಷ್ಯ? ಕಪ್ಪು ರಂಧ್ರದ ಚಿತ್ರಣಗಳನ್ನು ತೋರಿಸಿತು ಕಪ್ಪು ಪರದೆ. ಎಲ್ಲ ಜೀವಿಗಳಲ್ಲಿ ಅದನ್ನು ನೋಡಿ ರೋಷ ಉಕ್ಕಿತು ಮನುಷ್ಯನ ಬಗ್ಗೆ. ಆತನ ಆಣತಿಯೊಂದಿದ್ದರೆ ಎದುರಿನವರೆಲ್ಲರನ್ನು ಸಿಕ್ಕ ಸಿಕ್ಕಲ್ಲಿ ಸೀಳಿ ಹಾಕಲು ಕಾಯುತ್ತಿದ್ದವು.
ಮನುಷ್ಯ ಅದನೆಲ್ಲವನ್ನು ನೋಡುತ್ತಿದ್ದ. ಭೂಮಿ ಕಂಡ ಅತಿ ದೊಡ್ಡ ದರ್ಶಕ ಪರದೆ. ಪ್ರಪಂಚದಲ್ಲಿ ಎಲ್ಲರೂ ನೋಡಿದ ಅತ್ಯಂತ ಭಯಾನಕ ಕೆಟ್ಟ ಕುತೂಹಲಕಾರಿ ದೃಶ್ಯಾವಳಿಗಳು.ಇಂತಹ ಮನುಷ್ಯನು ಬದುಕಲು ಅರ್ಹನೆ?ಅರ್ಹತೆಯೊಂದಿಗೆ ಬದುಕು ಎಂದಾಗಿದ್ದರೆ ಪ್ರಪಂಚವೆಲ್ಲ ಖಾಲಿಯೇ ಇರುತ್ತಿತ್ತು.
ಬದುಕಲು ಅರ್ಹನೇ ಮನುಷ್ಯ??
ಪ್ರಶ್ನೆ ಪ್ರತಿಧ್ವನಿಸಿತು. ಅದು ಕೇವಲ ಪ್ರಶ್ನೆಯಲ್ಲ, ಪ್ರಚೋದನೆ, ಕೊಲ್ಲಲು ಪ್ರಚೋದನೆ. ಉಳಿದ ಕಪ್ಪು ಜೀವಿಗಳ ಉಸಿರಲ್ಲಿ ರೋಷ ಉಸಿರಾಡಿತು.
“ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ.”
ಇದನ್ನೆಲ್ಲಾ ನೋಡುತ್ತಿದ್ದ ಮನುಷ್ಯನ ಒಳಗೊಳಗೆ ಭಯ. ಹೇಗೆ ತಪ್ಪಿಸಿಕೊಳ್ಳುವುದು ಈ ಜೀವಿಗಳಿಂದ?ಇದು ಮನುಕುಲದ ಕೊನೆಯ ಹಂತ. ತಪ್ಪು ಮಾಡಿದೆವು. ನಮ್ಮ ನಮ್ಮಲ್ಲಿಯೇ ಬಡಿದಾಡಿಕೊಳ್ಳುತ್ತ ಎದುರಲ್ಲಿ ಬೇರೊಬ್ಬ ಯುದ್ಧಕ್ಕೆ ನಿಂತದ್ದು ಅರಿವಾಗಲಿಲ್ಲ, ಅವರನ್ನು ಎದುರಿಸಲೂ ಜೊತೆಯಾಗದೇ ಬೇರಾಗಿ ಬಿಟ್ಟೆವಲ್ಲ ಎಂದು ಹಳಿದುಕೊಂಡರು.
ಒಂದು ಸಮಾಜ,ಒಂದೆಂಬ ಭಾವನೆಯ ಗುಂಪು, ದೇಶ ಸೈನ್ಯಗಳನ್ನು ಕಟ್ಟಿಕೊಳ್ಳುವುದು ನಮ್ಮ ನಡುವೆಯೇ ಕಿಚ್ಚೆಬ್ಬಿಸಲು ಅಲ್ಲ, ಎದುರಿನವ ಹೋರಾಟಕ್ಕೆ ನಿಂತರೆ ಮೆಟ್ಟಿ ನಿಲ್ಲಲು. ಆದರೆ ಮನುಷ್ಯ ಏನು ಮಾಡಿದ?
ಎಲ್ಲವನ್ನೂ ಮಾಡಬಾರದ್ದು.
ತನ್ನಲ್ಲೇ, ತನ್ನವರಲ್ಲೇ ಭೇದ ಸೃಷ್ಟಿಸಿಕೊಂಡ. ಪರಿಪೂರ್ಣತೆಯ ಸಂಕೇತ ಭೂಮಿ. ಅದನ್ನೇ ತನ್ನದು, ಬೇರೆಯವರದೆಂದು ವಿಚ್ಛಿದ್ರಗೊಳಿಸಿದ. ಮನುಷ್ಯ ಮನುಷ್ಯರಲ್ಲೇ ಮೂರು ಮಹಾ ಯುದ್ಧಗಳು. ಲೆಕ್ಕವಿಲ್ಲದಷ್ಟು ಜೀವಿಗಳ ಉಸಿರು ನಿಂತಿತು. ಸಾವಿನ ಮನೆ ಉಸಿರಾಡಿತು. ನಾಶವಾಗಿದ್ದು ಕೇವಲ ಮನುಷ್ಯ ಮಾತ್ರವಲ್ಲ. ಪಂಚಭೂತಗಳು ಅದರ ಪರಿಣಾಮ ಸಹಿಸಿಕೊಂಡವು. ದಬ್ಬಾಳಿಕೆಗೆ ಸೆರಗು ಹಾಸಿದವು, ಅಸಹಾಯಕತೆ ತಾಂಡವಾಡಿದ್ದು. ತನ್ನವರಲ್ಲೇ ಬಡಿದಾಡಿಕೊಳ್ಳುತ್ತಿದ್ದ ಮನುಷ್ಯ ಒಂದು ನೂರೇ ವರ್ಷಗಳಲ್ಲಿ ಬಡಿದಾಡಿಕೊಳ್ಳಲೂ ತನ್ನವರನ್ನು ಉಳಿಸಿಕೊಳ್ಳಲಿಲ್ಲ.ಒಬ್ಬಂಟಿಯಾದ.
ಬದುಕ ನೌಕೆಯ ಒಂಟಿ ನಾವಿಕ;
ಖಾಲಿ ವೇದಿಕೆಯ ಮೂಕ ಪ್ರೇಕ್ಷಕ.
ಕೇವಲ ವರ್ಷಿಯೆಂಬ ವಿಜ್ಞಾನಿ ಇಷ್ಟೊಂದು ಬದಲಾವಣೆ ತರಲು ಸಾಧ್ಯವೇ? ಇದಕ್ಕೆಲ್ಲ ಯಾರು ಹೊಣೆ?
ವರ್ಷಿಯ ಜೊತೆ ನಿಂತ ವಿಶ್ವಾತ್ಮನೇ ಇದಕ್ಕೆಲ್ಲ ಹೊಣೆಗಾರನೇ? ವಿಶ್ವಾತ್ಮನೆ ಎಲ್ಲರಿಗಿಂತ ದೊಡ್ಡವನೇ? ವಿಶ್ವಾತ್ಮನ ಅಸ್ತಿತ್ವವೇ ಸುಳ್ಳು ಎಂದು ವರ್ಷಿಯೇ ಹೇಳಿದ್ದಾನೆ. ನಾವೆಲ್ಲಾ ಹರಿದು ಹಂಚಿಹೋದ ಸಂಬಂಧಗಳ, ಕಡಿದ ಎಳೆಗಳಿಗೆ ತೂಗಾಡಿಕೊಂಡ ಒಂಟಿ ಹಕ್ಕಿಯಂತೆ ಆಗಿದ್ದೇವೆ. ಇಂಥ ನಿರ್ವೀರ್ಯತೆ ಸೃಷ್ಟಿಸಿದ ಶಕ್ತಿ ಯಾವುದು?
ಪ್ರತಿಯೊಬ್ಬ ಮನುಷ್ಯನು ಇದನ್ನೇ ಯೋಚಿಸುತ್ತಿದ್ದ. ಎಲ್ಲರ ಕಣ್ಣೆದುರು ಸಾವೇ ನರ್ತಿಸುತ್ತಿದೆ; ಬದುಕುವ ಬಯಕೆ ಎಲ್ಲರಿಗೂ. ಅಸಹಾಯಕತೆಯಲ್ಲಿ ಸಹಜ ವರ್ತನೆ.
ಅಷ್ಟರಲ್ಲಿ ಮನುಷ್ಯರ ಗುಂಪುಗಳಿಂದ ಹೊರಬಂದ ಒಬ್ಬ ಪರದೆಯೇದುರು ನಿಂತು “ಎರಡನೇ ಸೂರ್ಯನಿಗೂ ನಮಗೂ ಸಂಬಂಧವಿಲ್ಲ. ಅದು ವರ್ಷಿಯ ಕರ್ಮ. ಏನಾದರೂ ಸರಿ ಕರ್ಮಫಲ ಅವನಿಗೆ. ಉಳಿದವರನ್ನು ಕೊಲ್ಲುವುದೇಕೆ?” ಕೇಳಿದ.
ಕಪ್ಪು ಜೀವಿಗಳ ಮುಖಂಡನಿಗೆ ಮಾತ್ರವಲ್ಲದೆ ವರ್ಷಿಗೂ ಉಳಿದ ಜೀವಿಗಳಿಗೂ ಆತನ ಮಾತು ಕೇಳಿಸಿತು. ಅಷ್ಟು ಒತ್ತಡದಲ್ಲೂ ಇದೆಷ್ಟು ಮುಂದುವರೆದ ವಿಜ್ಞಾನ ಎಂದು ಯೋಚಿಸುತ್ತಿದ್ದ ವರ್ಷಿ. ಪೂರ್ತಿ ಆಕಾಶವನ್ನೇ ಕಮ್ಯುನಿಕೇಶನ್ ಮತ್ತು ವಿಷನ್ ಮಾಡುವುದು ಇದೆಂತಹ ತಂತ್ರಜ್ಞಾನ. ಇಷ್ಟೊಂದು ಬುದ್ಧಿಶಕ್ತಿ ಹೊಂದಿರುವ ಜೀವಿಗಳು ಎಂದಿಗೂ ಇತರರೊಂದಿಗೆ ಹೋರಾಡದೆ ಶಾಂತಿಯಿಂದ ಬದುಕುತ್ತಿರುವರಲ್ಲ, ತನ್ನ ಬುದ್ಧಿ ಎಂಥ ಅನರ್ಥಗಳನ್ನು ನಡೆಸುವಂತೆ ಮಾಡಿದೆ? ಆದರೆ ಅದನ್ನೆಲ್ಲ ಮಾಡಿಸಿದ್ದು ವಿಶ್ವಾತ್ಮನಲ್ಲವೇ ಎಂದುಕೊಂಡ.
“ಹುಚ್ಚು ವರ್ಷಿ ಮತ್ತೆ ವಿಶ್ವಾತ್ಮನನ್ನೇ ದೂರುತ್ತಿರುವೆಯಲ್ಲ!! ವಿಶ್ವಾತ್ಮನಿಲ್ಲ, ಎಲ್ಲವೂ ನೀನೆ ಎಂಬುದು ತಿಳಿದಿಲ್ಲವೇ? ಎಂದಿತು ಮೂಕ ಮನಸ್ಸು. ತಪ್ಪುಗಳಿಂದ ತಪ್ಪಿಸಿಕೊಳ್ಳಲು ಮನುಷ್ಯ ಬಳಸುವ ಸುಲಭ ವಿಧಾನ ತಪ್ಪಾದರೆ ಇತರರೆಡೆಗೆ ತೋರುವುದು ಜಾಣ ಬೆರಳು, ಅರಿವಿಲ್ಲದೆ ಉಳಿದ ನಾಲ್ಕು ನಮ್ಮ ಕಡೆಗೇ.
ಅನಾಮಿಕನೊಬ್ಬ ಎದ್ದು ನಿಂತು ತಪ್ಪೆಲ್ಲವೂ ವರ್ಷಿಯದು ಎನ್ನುತ್ತಿದ್ದಾನೆ. ಎರಡನೇ ಸೂರ್ಯನನ್ನು ಸೃಷ್ಟಿಸಿದ್ದು ಸತ್ಯ. ಅದು ಮನುಷ್ಯನಿಗೆ ಒಳಿತಾಗುವುದೆಂದೇ ಅಲ್ಲವೇ? ಅದರಿಂದ ಎಲ್ಲರೂ ಉಪಯೋಗ ಪಡೆಯುವಾಗ ಮೌನ ಮಾತಾಡಿತ್ತು. ಈಗ ಮಾತುಗಳೇ ಯುದ್ಧ ಸಾರುತ್ತಿವೆ ನನ್ನ ಮೇಲೆ. ಕಂಗಾಲಾದ ವರ್ಷಿ. ಒತ್ತಾಯದ ನಗು ವಿಷಾದದ ಛಾಯೆಯ ಹಿಂದೆ ಆತನ ಮುಖದಲ್ಲಿ. ಮುಖಂಡನೆಂಬ ಕಪ್ಪು ಜೀವಿ ಜೋರಾಗಿ ನಗುತ್ತಿತ್ತು. ಅವನ ಜೊತೆಗೆ ಉಳಿದ ಜೀವಿಗಳೂ..
ಅಳು ಸೂತಕದ ಗುರುತು.
ಉಸಿರು ಪಡೆದ ಮಗುವೂ ಅತ್ತದ್ದೇ ಮೊದಲು;
ಕಳೆದುಕೊಂಡ ಕೊನೆಯುಸಿರ ಗಳಿಗೆಯಲಿ ಜೊತೆ ನಿಂತವರ ರೋದನ.
ಅಳು ಆನಂದ ಛಾಯೆ; ಕಂಬನಿಗಳು ಆನಂದ ಭಾಷ್ಪ.
ನಗು ಉತ್ಸುಕತೆಯ ಉತ್ತರಾಧಿಕಾರಿ;
ಅಂಥದೇ ನಗು ಕೆಲವೊಮ್ಮೆ ಭಯದ ಬಲಗೈ.
ನಗು ಅಳು ಎರಡೂ ಸುಖ ದುಃಖ ಎಲ್ಲದಕ್ಕೂ ಪ್ರತಿಬಿಂಬಗಳೇ.
ಆ ಜೀವಿಗಳ ನಗು ಮನುಷ್ಯನ ಎದೆಯಲ್ಲಿ ಸಾವಿನ ಭಯ ಹುಟ್ಟಿಸುತ್ತಿತ್ತು.
ಆ ಕಪ್ಪು ಜೀವಿ ಹಿಂದೆ ತಿರುಗಿ ವರ್ಷಿಯನ್ನು ನೋಡಿ “ನೋಡು ಮನುಷ್ಯನ ನಶ್ವರತೆಯನ್ನು, ಮನುಷ್ಯ ಬದಲಾಗಿಯೇ ಇಲ್ಲ. ಇಷ್ಟು ವರ್ಷಗಳ ಒಂಟಿತನದ ನಂತರವೂ ಅವನಲ್ಲಿ ನಾನೆಂಬ ಸ್ವಾರ್ಥ ತುಂಬಿದೆ. ಇದೇ ಮುಂದುವರೆದರೆ ಭೂಮಿಯಲ್ಲಿ ಅದೇ ದಬ್ಬಾಳಿಕೆ, ಅದೇ ನಿರ್ವೀರ್ಯತೆ. ನೀವು ಬದಲಾಗುವುದು ಸಾಧ್ಯವಿಲ್ಲದ ಮಾತು. ಮನುಜ ಕುಲವೇ ಮಣ್ಣಲ್ಲಿ ಮಣ್ಣಾದರೆ ಹೊಸ ಪ್ರಪಂಚ ಈ ಭೂಮಿಯಲ್ಲಿ ಮರುಹುಟ್ಟು ಪಡೆಯಬಹುದು. ಅದಕ್ಕೆ ಈ ಯುದ್ಧ
“Virtual Battle”
ವರ್ಷಿ ಯೋಚನೆಗಳಿಗೂ ಅತೀತನಾಗಿದ್ದ. ಏನನ್ನು ಹೇಳಲಿಲ್ಲ, ಏನೂ ಕೇಳುತ್ತಲೂ ಇರಲಿಲ್ಲ. ಕತ್ತಲ ಜೀವಿ ವರ್ಷಿಯ ಕಡೆ ಬೆರಳು ಮಾಡಿದವನೆಡೆಗೆ ಮುಖ ಮಾಡಿ ಮಾತನಾಡತೊಡಗಿತು.
“ನಾವು ಕೇವಲ ವರ್ಷಿಯನ್ನು ಕೊಲ್ಲುತ್ತಿಲ್ಲ, ನಮ್ಮೆದುರೇ ಭಂಡ ಧೈರ್ಯದಿಂದ ಮಾತನಾಡಿದೆಯೆಂದು ನಿನ್ನನ್ನು ಮಾತ್ರ ಕೊಲ್ಲುವುದಿಲ್ಲ, ಬರೀ ಮನುಕುಲದ ಸಂತತಿಯನ್ನು ನಾಶಗೊಳಿಸುತ್ತಿಲ್ಲ.”
ಮುಂದುವರಿಯುವುದು…

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..