ನಿನಗೆ ನೆನಪಿರಬಹುದು ಗೆಳತಿ. ಇಲ್ಲ ತಿಳಿದಿರಲಿಕ್ಕಿಲ್ಲ, ನನ್ನ ಪಾಲಿಗೆ ಮಾತ್ರ ಹಬ್ಬದ ದಿನವಿದು. ವರ್ಷಗಳ ಹಿಂದೆ ನಿನ್ನ ಮೊದಲ ಬಾರಿಗೆ ನೋಡಿದ್ದು ಇದೇ ದಿನ. ತಾರೆಗಳ ನಡುವಿನ ಚಂದ್ರಮನಂತೆ ಸಖಿಯರೊಡಗೂಡಿ ಹರಟುತ್ತಾ ಸನಿಹದಲ್ಲೇ ಹಾದು ಹೋದ ನೀನು ನನ್ನ ಮನಕೆ ಬೆಳದಿಂಗಳಿನೂಟವ ಬಡಿಸಿದೆ. ಒಂದು ಕಡೆ ಕಡಲರಾಜನ ಭೋರ್ಗರೆತ, ಇನ್ನೊಂದೆಡೆ ಗಂಟೆಗಳ ನಾದ; ಆದರೆ ನನ್ನ ಕಿವಿಯಲ್ಲಿ ಗುಂಞಿಗುಡುತ್ತಿದ್ದುದು ಮಾತ್ರ ನಿನ್ನ ಗೆಜ್ಜೆಗಳ ನಿನಾದ ಹಾಗೂ ಆ ನಿನ್ನ ಕೋಮಲ ಕಂಠಧ್ವನಿ. ಮಂಜು ಬಿಳುಪಿನ ಮೈಮಾಟದ ಮೇಲೆ ತೊಟ್ಟಿರುವ ಹೊನ್ನಂಚಿನ ಆ ಕಪ್ಪು ಸೀರೆ ನವಿಲಿನಿಂದಲೇ ಗರಿಗಳಿಗೆ ಸೊಬಗೆನ್ನುವಂತಿತ್ತು. ದುಂಡು ಮುಖದಲ್ಲಿನ ಚೂಪು ಕಂಗಳು ಮನಸನಿರಿದು ಎಂದೂ ಮಾಸದ ಗಾಯವನ್ನುಂಟುಮಾಡಿದ್ದವು. ನೀನು ಮುಡಿದ ಕೆಂಡಸಂಪಿಗೆಯ ಪರಿಮಳಕೋ, ನನ್ನೆದೆಗೂಡಿನೊಳಗಿನ ಮನಸನಪಹರಿಸಿದ್ದಕ್ಕೋ ಏನೋ ತಲೆ ತಿರುಗಲಾರಂಭಿಸಿತ್ತು. ಎಂದೂ ಇಲ್ಲಿಗೆ ಬರದಿದ್ದ ನನ್ನ ಪುಣ್ಯವೋ, ಒತ್ತಾಯದಿಂದ ಕಳುಹಿಸಿದ ಅಮ್ಮನ ಋಣವೋ ತಿಳಿಯುತ್ತಿಲ್ಲ ನಿನ್ನ ಕಂಡು ಎದೆಯಾಂತರಂಗದಲಿ ಅಲೆಯೆದ್ದಿತ್ತು. ವಿಧಿ ವಿಲಾಸವೇನೆಂದು ಕಂಡೆ ಅಂದು, ನಿಜವಾಗಲೂ ವಿಧಿಯಾಟವದು.
ಗೊತ್ತಾಯಿತು ನನಗೆ ಚಿರಪರಿಚಿತ ಸ್ಥಳ ನಿನಗದು, ಪುನಃ ಬರುವೆ ನೀನಲ್ಲಿಗೆ. ಬರುತ್ತಿದ್ದೆ ಪ್ರತಿದಿನ ನಿನ್ನ ದರುಶನಕೆ, ಇಂದೂ ಹೊರಟಿರುವುದೀಗ ಅಲ್ಲಿಗೇ. ಒಂದು ದಿನ ನಿನ್ನ ಕೆಂದುಟಿಗಳಂಚಿನಲಿ ಬಂದ ಆ ಕಿರುನಗು ತಂದು ನಿಲಿಸಿತ್ತು ನನ್ನನು ನಾಕದ ಬಾಗಿಲ ಬಳಿ, ಸ್ವಲ್ಪ ಧೈರ್ಯ ಕೊಟ್ಟಿದ್ದವು ಸುಳ್ಳು ಹೇಳದ ಆ ನಿನ್ನ ಕಂಗಳು. ವ್ಯಕ್ತಿತ್ವವದೇ ಹೇಳುತ್ತಿತ್ತು ನಿನ್ನದು, ಅಸಮಾನ್ಯಳು ನೀನೆಂದು. ಜೀವನದಲ್ಲಿ ಸೋತೆ, ನಿನ್ನಿಂದ ದೂರಾಗಯತ್ನಿಸಿದೆ. ನೀನೇ ನನಗಾಗಿ ಚಡಪಸಿದೆ, ಬಳಿ ಬಂದು ಸಾರಿದೆ. ಕಣ್ಣುಗಳ ಬೆಳಕಾದೆ, ಪೌರುಷದ ಶಕ್ತಿಯಾದೆ, ಯಶಸ್ಸಿನ ಹಿಂದಿನ ಕಾಣದ ಕೈಯಾದೆ, ಪುನರುತ್ಥಾನದ ಜನನಿಯಾದೆ, ತೀರ ಸೇರಬಯಸುವೀ ಬಾಳದೋಣಿಯ ಹಾಯಿಯಾದೆನೀ. ಇಲ್ಲಿ ನಾವಿಬ್ಬರು ಹೆಜ್ಜೆಯಿಡದ ಜಾಗವಿಲ್ಲ. ನಾವು ಕಳೆಯದ ದಿನವಿಲ್ಲ. ನಿನ್ನ ಕಂಗಳಂಚಿನ ನಾಚಿಕೆಯಲ್ಲಿ ನನ್ನನ್ನೇ ಮರೆಯುತ್ತಿದ್ದೆ. ನೀನಿಲ್ಲದ ಕ್ಷಣಗಳಲಿ ನಿನ್ನ ನೆನಪಿನಲ್ಲೇ ಕಾದಿದ್ದೇನೆ ನಿನ್ನ ಪ್ರತಿಯೊಂದು ಮಾತಿಗಾಗಿ, ಕುಡಿಕಂಗಳ ನೋಟಕ್ಕಾಗಿ, ಹಾತೊರೆದಿದ್ದೇನೆ ನಿನ್ನ ಬರುವಿಕೆಗಾಗಿ. ಪ್ರತಿ ಬಾರಿಯೂ ನೀನು ಬರುತಲಿದ್ದೆ ತಡವಾಗಿಯಾದರೂ. ಈಗಲೂ ಬರುತಿರುವೆ ನನ್ನ ಕನಸುಗಳಲ್ಲಿ, ನೆಲೆಸಿರುವೆ ಪ್ರತಿಯೊಂದು ಉಸಿರಿನಲ್ಲಿ.
ಮನೆಯಲ್ಲೊಪ್ಪಿದ ಸಂತೋಷವ ಹಂಚಿಕೊಳ್ಳಲು ನನ್ನೊಂದಿಗೆ ಬರುತ್ತಿದ್ದೆ ನೀನಂದು. ಎಂದೂ ಗೆಳೆತಿಯರೊಡಗೂಡಿಯೇ ಇರುತ್ತಿದ್ದ ನೀನು ಏಕಾಂಗಿಯಾಗಿ ನನ್ನ ಕಾಣಲು ಬರುತ್ತಿದ್ದಾಗ ಎರಗಿದ್ದರಾ ದುಷ್ಟ ಕಾಮುಕರು ಗಿಡುಗಗಳಂತೆ. ತಪ್ಪೆಲ್ಲಾ ನನ್ನದೇ, ನೀನೊಂಟಿಯಾಗಿ ಬರುತ್ತಿದ್ದುದು ನನಗಾಗಿ ತಾನೇ. ನೀನೇಕೆ ಅರ್ಥಮಾಡಿಕೊಳ್ಳಲಿಲ್ಲ. ನನಗೆ ಸಮಾಧಾನಪಡಿಸಿ, ನಾನಿಲ್ಲದಿರುವಾಗ ಜವರಾಯನ ಬಳಿಸರಿದೆಯಾ! ನಾನಿಷ್ಟಪಟ್ಟಿದ್ದು ನಿನ್ನ ತೊಗಲನೆಂದು ಭಾವಸಿದೆಯಾ? ನೀನಿಲ್ಲದ ನನ್ನ ಬಾಳನ್ನು ಅರೆಕ್ಷಣವೂ ಯೋಚಿಸಲಾರದಾದೆಯಾ! ಜೀವವಿದೀಗ ಏಕಾಂಗಿಯಾಗಿದೆ, ಕುರುಡಾಗಿದೆ ಕಣ್ಣಿದ್ದೂ. ಜೀವನವಿದು ಮುಡಿಪಾಗಿದೆ ನಿನಗೆ, ಈ ಸಮಾಜ, ಅದರ ವ್ಯವಸ್ಥೆ-ಕಟ್ಟುಪಾಡುಗಳ ಬಗ್ಗೆ ಬೇಸತ್ತಿದೆ. ನಿನ್ನ ನೆನಪುಗಳೇ ಮನದಾಳದಲಿ ನೆಲೆಯಾಗಿದೆ. ನಾನು ಸಾಯಲಾರೆ ಗೆಳತಿ, ಏಕೆಂದರೆ ನನ್ನ ಹೃದಯದಲಿ ನೀನು ಜೀವಂತವಾಗಿರುವೆ. ನನ್ನೆದೆಯ ಪ್ರತಿಯೊಂದು ಬಡಿತದಲೂ ನಿನ್ನ ದನಿ ಕೇಳುತಲಿದೆ. ಬರುತ್ತಿದ್ದೇನೆ ಈಗಲೂ ಇಲ್ಲಿಗೆ ಪ್ರತಿದಿನ ಮತ್ತೆ ನೀ ಸಿಗಬಹುದೆಂದು, ಯಾವುದಾದರೊಂದು ದಿನ, ಯಾವುದಾದರೊಂದು ರೂಪದಲಿ. ಕತ್ತಲೆಯಲಿ ನಮ್ಮ ನೆರಳೇ ನಮ್ಮ ಜೊತೆಯಿಲ್ಲದಿರುವಾಗ, ತಿಳಿಯುತ್ತಿಲ್ಲ ನಾ ಹೇಗೆ ನಂಬಿದೆ ನೀ ನನ್ನ ಜೊತೆಯ ಬಿಡೆ ಎಂದು. ಎಂದೆಂದೂ ನೀ ಮರಳಿ ಬಾರದ ಹಾದಿಯಲಿ ದೀಪ ಹಿಡಿದು, ಸಮುದ್ರದ ಭೋರ್ಗರೆತದ ನಡುವೆಯೂ ಶಾಂತವಾಗಿರುವ ನೀನಂಬಿದ ಈ ಪಶುಪತಿಯ ಎದುರು ಕುಳಿತು ಕಾಯುತಲಿರುವ…..
ವಿಘ್ನೇಶ್ ಭಟ್
sbhatvighnesh@gmail.com
Facebook ಕಾಮೆಂಟ್ಸ್