X

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು….

“ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ……..” ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಟಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!!

ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಶ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸ ಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಶ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿ ಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ – ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ!!. ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನ ಗೈಯ್ಯುವ ಭಾಗ್ಯ !.

ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಶ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು . ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ ‘ಯಾಕೆ ನಗುತ್ತಿದ್ದೀರಿ?’ ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ “ಸಾರ್ ನೀವು ಅದೃಷ್ಟವಂತರು!”. ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . ‘ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದ್ರುಷ್ಟವನ್ನೇಕೆ ಹೊಗಳ್ತೀರಿ?’ ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. “ತನ್ನ ತಾಯ್ನಾಡಿನ ಮುಕ್ತಿಗಾಗಿ ,ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ , ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ ೩೦ ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!!” .

ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ , ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.

ಅಂದು 23 ಮಾರ್ಚ್ 1931 . ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ , ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. ‘ಈ ದೇಶಕಾಗಿ ಸಾಯಲೂ ಸಿದ್ಧ’ ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ ೨೩ ವರ್ಷ, ಸುಖದೇವ್ ಗೆ ೨೭ ವರ್ಷ ಹಾಗೂ ರಾಜಗುರು ಗೆ ೨೫ ವರ್ಷ!. ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತಿಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.

ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ ‘ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ’ ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು , ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ ‘ನಾನು ಮೊದಲು ನಾನು ಮೊದಲು’ ಎಂದು ಪೈಪೋಟಿ ಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು ……ಎಂತಹ ವೀರ ಪರಂಪರೆಯ ಮಕ್ಕಳು ನಾವು!. ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು?. ನಾವಿಂದು ಬಲಿದಾನಗೈಯಬೇಕಿಲ್ಲ. ,ಮನೆ ಮಟ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ . ಆದರೆ ಕನಿಷ್ಠ ದೇಶವನ್ನು ಪ್ರೀತಿಸಲಾರೆವಾ ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? , ಈ ದೇಶದ ರೈತ, ಗಡಿಕಾಯುವ ಸೈನಿಕ ರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು , ಈ ದೇಶವನ್ನು ಟೀಕಿಸೋದು ಬಿಟ್ಟು , ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ? .

ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ , ತುಡಿಯುವುದೇ , ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.

ಭಗತ್ ಸಿಂಗ್,ರಾಜಗುರು , ಸುಖದೇವ್ ರ ಬಲಿದಾನದ ಈ ದಿನ ಅಂತಹದೊಂದು ಸಂಕಲ್ಪ ಮಾಡೋಣ. ಇಲ್ಲದಿದ್ದರೆ ಮತ್ತೊಂದು ಮಾರ್ಚ್ ೨೩ ಬರುತ್ತದೆ, ಹೋಗುತ್ತದೆ. ಮತ್ತು ನಾವು ಒಂದೊಂದೇ ವರ್ಷ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ . ಅಷ್ಟೇ.

Ramachandra Hegade C.S
csrhegde@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post