X

ಆತ್ಮ ಸಂವೇಧನಾ- 27

ಆತ್ಮ ಸಂವೇಧನಾ- 26

ಇತಿಹಾಸವಾಗುವ ಜನಗಳು ಮಾತನಾಡತೊಡಗಿದರು. ಪರಸ್ಪರರಲ್ಲಿ ಮಾತುಕತೆ, ಸ್ನೇಹ, ಸಲುಗೆ ಬೆಳೆಯಿತು. ಇಷ್ಟು ಕಾಲವೂ ಎಲ್ಲರೂ ಬದುಕಿದ್ದರು. ಇದೊಂದು ಹೊಸ ಪ್ರಪಂಚ. ಭಾವಯಾನ, ಯಾರೂ ಒಂಟಿ ನಾವಿಕರಲ್ಲ. ಎಲ್ಲರೂ ಮೂರೇ ಮೂರು ದಿನಗಳಲ್ಲಿ ಸಾಯುವವರೆ. ಉಳಿದ ಮೂರು ದಿನಗಳಲ್ಲಿ ಏನೆಲ್ಲಾ ಕಳೆದುಕೊಂಡಿದ್ದೇವೋ ಎಲ್ಲವನ್ನೂ ಪಡೆದುಕೊಳ್ಳುವ ಹಂಬಲ.
ಕಳೆದುಕೊಳ್ಳಲು ಮೊದಲೇನು ಇರಲೇ ಇಲ್ಲ.
ಎಲ್ಲ ಹೊಸ ಪರಿ… ಹೊಸ ಪರಿಚಯ…
ಏನನ್ನು ಕಳೆದುಕೊಂಡಿದ್ದೇವೆ? ಎಂಬ ಪ್ರಶ್ನೆ ಎದುರಾದಾಗ ಎಲ್ಲರೂ ಯೋಚನೆಗೊಳಗಾದರು.
ಎಲ್ಲವನ್ನೂ ಪಡೆದಿದ್ದೇವೆ. ಮನೆ, ವಾಹನಗಳು. ಹೊಟ್ಟೆಗೆ ಬೇಡವೇ ಬೇಡ. ದೇಹ ಸುಖ ಬೇಕೆನ್ನಿಸಿದಾಗ ಸುಖವೇ. ಇನ್ನೇನು ಪಡೆಯಬೇಕು? ಇನ್ನೇನು ಬೇಕೆ? ಯಾರೂ ಇಲ್ಲದೇ ಎಲ್ಲವೂ ಇದ್ದವಲ್ಲ.
ಕಲ್ಲು ದೇವರಾಗಲು ಎದುರು ಭಕ್ತನಿರಬೇಕು.
ಸುಖ ತೃಪ್ತಿಯನ್ನು ನೀಡಲು ಜೊತೆಯಿರಬೇಕು.
ಮಾನಸಿಕ ತೃಪ್ತಿ… ಹಿಗ್ಗು..?? ಜೀವನದಲ್ಲಿ ಎಲ್ಲವನ್ನೂ ಖರೀದಿಸಬಹುದು. ಏನೆಲ್ಲವೂ ಮಾರಾಟಕ್ಕಿರುತ್ತದೆ. ಆದರೆ ತೃಪ್ತಿ?? ಬದುಕಿನೆಡೆಗೆ ಸಂತೃಪ್ತಿ? ಎಲ್ಲಿಯೂ ಖರೀದಿಸಲಾಗದು; ಯಾರೂ ಮಾರಾಟಕ್ಕಿಡುವುದಿಲ್ಲ.
ಭೌತಿಕ ಮತ್ತು ಭೌತಿಕವಲ್ಲದ ಸ್ಥಿತಿಗಿರುವ ವ್ಯತ್ಯಾಸ ಇದೇ. ದೇಹದ ಸುಖಗಳೂ, ಆಸೆಗಳೂ ಕ್ಷಣಿಕ. ದೇಹವನ್ನು ಸ್ವಲ್ಪ ಸಮಯದಲ್ಲಿಯೇ ತೃಪ್ತಿ ಪಡಿಸಬಹುದು. ಮನಸ್ಸು!? ಹುಡುಕಿ ಹೋದರೆ ಸಿಗುವುದಿಲ್ಲ; ಕಂಡುಕೊಳ್ಳಬೇಕು.
ಆರಂಭ-ಅಂತ್ಯ, ಮಾನುಷ-ನಿರ್ಮಾನುಷ, ಭೌತಿಕ-ಅಭೌತಿಕ, ಸೋಲು-ಗೆಲುವು ಎಲ್ಲವೂ ಕೊನೆಗೆ ಬಂದು ನಿಲ್ಲುವುದು ಕತ್ತಲು-ಬೆಳಕಿನಲ್ಲಿ. ಇದೇ ಕತ್ತಲು-ಬೆಳಕಿನ ಯುದ್ಧ. ಮೂರೂ ಹಗಲು, ಎರಡು ರಾತ್ರಿಗಳು ಮಾತ್ರ ಉಳಿದಿವೆ.
ನಿರಂತರ ಕತ್ತಲು ಅಧಿಪತ್ಯ ನಡೆಸುವುದೇ?
ಬೆಳಕೇ ಶಾಶ್ವತವಾಗುತ್ತದೆಯೇ?
ಪ್ರಶ್ನೆಗಳ ಸರಪಳಿ ಮಾತ್ರ ನಿರಂತರತೆಯ ಅಧ್ಯಾಯ. ಮನುಷ್ಯನಲ್ಲಿ ಸಂಬಂಧಗಳು ಸೃಷ್ಟಿಯಾದವು. ಮುಖದಲ್ಲಿ ನಗು ಮೂಡಿತ್ತು. ಅದು ಶಾಶ್ವತವಲ್ಲವೆಂದು ತಿಳಿದಿತ್ತು ಕೂಡ.
ಯಾವುದು ಶಾಶ್ವತ??
ವಿಶ್ವವೂ, ವಿಶ್ವಾತ್ಮನೂ ಅನಿಶ್ಚಿತವೆ.
ಎಲ್ಲದಕ್ಕೂ ಅಂತ್ಯವಿದೆ. ನಾವು ಪ್ರಕೃತಿಗೆ ವಿರುದ್ಧವಾಗಿ ಇಷ್ಟು ಕಾಲ ಬದುಕಿರುವುದೇ ತಪ್ಪು ಎಂಬ ಭಾವ. ಇತರರನ್ನೂ, ಪ್ರಕೃತಿಯನ್ನೂ ನೋಡುವ ರೀತಿ ಬದಲಾಯಿತು, ಬದಲಾಯಿಸಿಕೊಂಡ ಮನುಷ್ಯ.
ಸುತ್ತಲಿನ ಎಲ್ಲ ವಸ್ತುಗಳೂ ಜೀವವಿದ್ದಂತೆ ಕಂಡುಬಂದವು. ಸಾವಿನ ಭಯ ನಿಧಾನವಾಗಿ ದೂರವಾಗತೊಡಗಿತು. ವಿಶ್ವಾತ್ಮ ಬಯಸುತ್ತಿರುವುದೂ ಅದನ್ನೇ.
ವಿಶ್ವಾತ್ಮ ಎಲ್ಲವನ್ನೂ ಮಾಡಿರುವುದರ ಹಿಂದಿನ ಉದ್ಧೇಶವೂ ಇದೇ. ಅಕಸ್ಮಾತ್…..?? ಅಂತ್ಯ ವಿಶ್ವಾತ್ಮನ ಹಿಡಿತದಿಂದ ಜಾರಿತ್ತು.
ಭೂಮಿಯ ಸರ್ವನಾಶವಾ? ಭೂಮಿಯನ್ನು ಉಳಿಸಿಕೊಳ್ಳಬೇಕು. ಮನುಷ್ಯನೆಂಬ ಜೀವಿ ಉಳಿಯಬೇಕು. ಒಂದು ಹೊಸ ಯುಗ ಸೃಷ್ಟಿಯಾಗಬೇಕು. ಮನುಷ್ಯನ ಪೀಳಿಗೆ ಬದುಕುವ ನೀತಿಗೆ ಮಾದರಿಯಾಗಬೇಕು. ಆದರೆ ಹೇಗೆ? ಮನಸ್ಸು ವಿಶಾಲವಾಯಿತು ಮನುಷ್ಯನದು.
ಆತ್ಮನ ಜೊತೆಯಾಗಿ ಕಪ್ಪು ಜೀವಿಗಳೊಡನೆ ಹೋರಾಟಕ್ಕೆ ನಿಲ್ಲಲು ಮನುಷ್ಯರಲ್ಲಿ ಉತ್ಸಾಹ ಮೂಡುತ್ತಿತ್ತು.
ಕಪ್ಪು ಜೀವಿಗಳೆದುರು ತೃಣ ಸಮಾನ ಎಂದೂ ತಿಳಿಯದೇ ಇಲ್ಲ.
ಸಮಯವು ರಕ್ತದ ವಾಸನೆ ಹಿಡಿಯಿತು;
ಗಡಿಯಾರ ಸೂತಕದ ಸದ್ದು ಮಾಡಿತು.
ಆತ್ಮ ಸಂವೇದನಾಳ ಮಡಿಲಲ್ಲಿ ಮುಖವಿಟ್ಟು ಮಲಗಿದ್ದ. ಬೊಗಸೆ ಕಂಗಳು ಸಂವೇದನಾಳನ್ನೇ ಕುಡಿಯುತ್ತಿದ್ದವು. ಸನಾ ಅವಳ ಕೂದಲುಗಳಲ್ಲಿ ಬೆರಳಾಡಿಸುತ್ತಿದ್ದಳು. ಪುಟ್ಟ ಮಗು ತಾಯಿಯ ಮಡಿಲಲ್ಲಿ ಮಲಗಿದಂತಿತ್ತು ಮುಗ್ಧವಾಗಿ.
ವರ್ಷಿಯ ನೆನಪು ಆತನನ್ನು ಕಾಡುತ್ತಿತ್ತು. ಕಣ್ಣಾಲಿಗಳು ತುಂಬಿ ಸಂವೇದನಾಳ ಮಡಿಲು ತೋಯ್ದಿತ್ತು. ಸಂವೇದನಾ ಕೂಡ ವರ್ಷಿಯ ಸಾವಿನಿಂದ ಬೇಸರಗೊಂಡಿದ್ದಳು. ಅದಕ್ಕೂ ಮಿಗಿಲಾಗಿ ಕಂಡ ಕ್ರೌರ್ಯತೆ ಕೆಟ್ಟ ಕನಸಂತೆ ಕಾಣುತ್ತಿತ್ತು; ಪದೇ ಪದೇ ಕಾಡುತ್ತಿತ್ತು.
ಆತ್ಮ ಆ ಕಪ್ಪು ಜೀವಿಗಳೆದುರು ನಿಂತು ಅಷ್ಟು ಧೈರ್ಯವಾಗಿ ಮಾತನಾಡಿರುವುದು ಅವಳಿಗೆ ಆತ್ಮನ ಬಗೆಗಿನ ಪ್ರೀತಿ ಮಿಗಿಲಾಗಿತ್ತು, ಮೆಚ್ಚುಗೆ ಮೇರೆ ಮೀರಿತ್ತು.
ಕಂಗಳಲ್ಲಿ ಅಭಿಮಾನದ ಮಿಂಚು,
ಮನಸಲ್ಲಿ ಮಮತೆಯ ಮಳೆಗಾಲ.
ವರ್ಷಿಯನ್ನು ಪಂಚಭೂತಗಳಲ್ಲಿ ಲೀನವಾಗಲು ಅವಕಾಶವಿತ್ತು ಮನೆಗೆ ಮರಳಿದ ಆತ್ಮ ಮೊದಲಿನಂತಿರಲಿಲ್ಲ. ಚಿಕ್ಕ ಮಗುವಿನಂತೆ ಅಳುತ್ತಿದ್ದ. ಸಹನೆಯ ಕಟ್ಟೆ ಒಡೆದಿತ್ತು. ಬದುಕಿನಧ್ಯಾಯದ ಬಣ್ಣದ ಬಟ್ಟೆ ಮಾಸಿದ ಭಾವ. ಸಂವೇದನಾ ಆತ್ಮನನ್ನು ಸಾಂತ್ವನಿಸಲು ಸೋತಿದ್ದಳು.
ಆತ್ಮ ಅರ್ಥವೇ ಆಗುತ್ತಿಲ್ಲ ಅವಳಿಗೆ.
ಯಾರಿಗೆ ಯಾರೂ ಪೂರ್ತಿಯಾಗಿ ಅರ್ಥವಾಗುವುದಿಲ್ಲ ಬದುಕಿನಲ್ಲಿ.
ಅಷ್ಟು ಧೈರ್ಯದಿಂದ ಮಾತನಾಡಿದ ಆತ್ಮನಿಗೂ, ಬಿಕ್ಕುವ ಭಾವನಾತ್ಮನಿಗೂ ಎಲ್ಲಿ ಸಂಬಂಧ?? ಇಬ್ಬರೂ ಒಂದೇ.. ಆಶ್ಚರ್ಯಗೊಂಡಿದ್ದಳು.
“ಆತ್ಮ, ಓ ನನ್ನ ಪುಟ್ಟ ಮಗುವೇ, ಎನ್ನ ಮಡಿಲಿಗೆ ಬಾ, ಮಗುವಾಗು ಮಡಿಲಲ್ಲಿ, ಮುಗ್ಧವಾಗು ಮನಸಲ್ಲಿ. ನನ್ನ ಕಂದನಲ್ಲವೇ ನೀನು? ಅಳಬೇಡವೋ, ಇಲ್ಲಿ ನೋಡು, ಕಂಗಳ ಒಳಗೆ ಬಾ ಮಮತೆಯ ಮಡಿಲಿಗೆ”. ಪ್ರೀತಿಯಿಂದ ಅವನನ್ನು ತನ್ನ ಮಡಿಲಿಗೆಳೆದುಕೊಂಡು ಹಣೆಗೆ ಸಿಹಿ ಮುತ್ತನಿಟ್ಟಿದ್ದಳು ಸನಾ.
ಆತ್ಮ ಅವಳ ಕಂಗಳಲ್ಲಿ ಕಣ್ಣು ಸೇರಿಸಿದ. ಜೋಡಿ ಕಣ್ಣುಗಳಲ್ಲಿ ಒಂದೇ ಭಾವ… ಕೆನ್ನೆಗಳ ಮೇಲೆ ಕಂಬನಿಯ ತೇವ.. ಆತ್ಮ ಸ್ವಲ್ಪ ನಿರಾಳವಾಗಿದ್ದ. ಸನಾ ಕೊನೆ ಮೊದಲಿಲ್ಲದೇ ಮುದ್ದಿಸುತ್ತಲೇ ಇದ್ದಳು.
“ನೀನೆನ್ನ ಮುದ್ದು ಗೆಳೆಯ, ಪ್ರಿಯತಮನಲ್ಲವೇ ನೀನು? ನೀನೆಲ್ಲವೂ ಆಗಿರುವೆ ನನಗೆ. ನಾನೂ ಹಾಗೆಯೇ. ನೀನು ಚೆಲುವಿನ ಸಿಹಿಬುತ್ತಿ ಇನಿಯ, ಬಂಧು ಕಣೋ. ನೀನು ತಂದೆಯಾದರೆ ಕೈ, ಹೆಗಲ ಮೇಲಿನ ಮಗು ನಾನು; ನೀ ಮಡಿಲಲಿ ಮುಖವಿಟ್ಟರೆ ಮಮತೆಯ ತಾಯಿ ನಾನು.” ಅವನ ಮುಖದ ತುಂಬೆಲ್ಲ ಮುತ್ತಿನ ಮಳೆಗರೆಯುತ್ತಿದ್ದಳು.
ಆತ್ಮ ಆ ಹಿತವನ್ನು ಅನುಭವಿಸುತ್ತಿದ್ದ. ಮನುಷ್ಯ ಏನನ್ನು ಕಳೆದುಕೊಳ್ಳುತ್ತಿದ್ದಾನೆ? ಎಂಬುದರ ಕುರುಹಿನಂತೆ ಆ ಕ್ಷಣ ಶಾಶ್ವತವಾಗಬೇಕಿತ್ತು. ಗೆಳತಿ, ಹೆಂಡತಿ, ಪ್ರೇಯಸಿ ಹೇಳಿಕೊಳ್ಳಲು ಸಂಬಂಧ ಯಾವುದಾದರೂ ಸರಿ, ಗಂಡು ಹೆಣ್ಣಿನಿಂದ ಬಯಸುವುದು ಇದನ್ನೇ ಎಂದುಕೊಂಡ ಆತ್ಮ.
ತೃಪ್ತಿ.. ಮಾನಸಿಕ ತೃಪ್ತಿ ಬೇಕು ಮನುಷ್ಯನಿಗೆ.
ಆಗಲೇ ದೇಹಗಳು ಸಂತೃಪ್ತಿಯ ದಾರಿಯಲ್ಲಿ.
ಗಂಡು ಸದೃಢ; ಹೆಣ್ಣು ಸುಕೋಮಲ.
ಗಂಡು ಒರಟು; ಹೆಣ್ಣು ಮಧುರ.
ಗಂಡು ಉನ್ಮಾದ; ಹೆಣ್ಣು ಉತ್ಸಾಹ.
ಹೆಣ್ಣಿನಿಂದ ಗಂಡು, ಗಂಡಿನಿಂದ ಹೆಣ್ಣು ಏನನ್ನು ಬಯಸುತ್ತಾರೆ? ನಿಜವಾಗಿಯೂ ಗಂಡು ಹೆಣ್ಣಿಗಿಂತ ಸದೃಢನಾ? ಹೆಣ್ಣು ಗಂಡಿನೆದುರು ಸೋಲುವಳಾ??
ಒಂದು ಗಂಡು ಮತ್ತು ಹೆಣ್ಣಿನ ಸಂಬಂಧ ಎಂಥದ್ದು?ದೈಹಿಕ ಸಂಬಂಧ ಗಂಡಿನ ಮತ್ತು ಹೆಣ್ಣಿನ ಮಧ್ಯೆ ಮಾತ್ರ ಸಾಧ್ಯವಾ? ಇಷ್ಟು ದಿನ ಮನುಷ್ಯ ಮಷಿನರಿಗಳಿಂದ ಸುಖ ಹೊಂದಿದ. ಅವನಿಗೂ ದೇಹ ಸುಖ ಸಿಗುತ್ತಿತ್ತು. ಆದರೂ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಏಕೆ ಬೇಕು?
ಆತ್ಮ ಯೋಚಿಸುತ್ತಿದ್ದ, ಉತ್ತರವಿಲ್ಲದ ಪ್ರಶ್ನೆಗಳು ಮನವ ಬಾಚುತ್ತಿತ್ತು. ಅವಳ ಮಡಿಲು ಅವನಿಗೆ ಎಂದೂ ಕಾಣದ ಹಿತಾನುಭೂತಿ ನೀಡುತ್ತಿತ್ತು. ಹೊಸ ಅನುಭವ ಒಲಿದಿತ್ತು. ಆತ್ಮ ತಾಯಿಯ ಮಡಿಲ ಸುಖ ಕಂಡಿಲ್ಲದವ. ಎದೆಹಾಲಿನ ಸವಿಯ ಉಂಡಿಲ್ಲದವ. ತಾಯಿಯೆಂಬುವವಳು ಅವನ ಕಲ್ಪನೆಗಳಲ್ಲಿ, ಕನಸುಗಳಲ್ಲಿ ಮಾತ್ರ ಮೀಸಲು. ತಾಯಿ ಆತ ಪಡೆದುಕೊಳ್ಳದ, ಕಂಡರಿಯದ ಮಹಾಸತ್ಯ. ತಾಯಿ ಮಮತೆಯ ಸುಖ ಅನುಭವಿಸದ ಅನಾಥ ಆತ್ಮ.
ಆದರೀಗ ಸನಾ ಅವನಿಗೆ ಮಗನೇ ಎನ್ನುತ್ತಿದ್ದಾಳೆ. ನನ್ನ ತಂದೆಯೂ ನೀನೇ ಎನ್ನುತ್ತಿದ್ದಾಳೆ. ಆತ ತಾಯಿಯ ಮಡಿಲ ಮಮತೆಯಲ್ಲಿ ಮಿಂದೆದ್ದನಾ? ಮಗಳ ಮೇಲಿನ ಕಕ್ಕುಲತೆ ಅವನ ತಂದೆ ಮನದಲ್ಲಿತ್ತೇ? ಹೆಂಡತಿ ತಾಯಿಯಾಗಬಲ್ಲಳಾ?ಗಂಡ ತಂದೆಯಾಗಲು ಹೇಗೆ ಸಾಧ್ಯ ಹೆಂಡತಿಗೆ? ಗಂಡ ಹೆಂಡತಿಯ ಸಂಬಂಧವೇ ಬೇರೆಯಲ್ಲವೆ? ಅವರಿಬ್ಬರ ದೃಷ್ಟಿಕೋನವೇ ಬೇರೆಯಲ್ಲವೆ?
ಮನಸ್ಸಿನಲ್ಲೇ ಪ್ರಶ್ನೆಗಳ ಮನೆ ಕಟ್ಟಿದ ಆತ್ಮ. ಉತ್ತರ ಯಾರು ಹೇಳಬೇಕು? ಎಷ್ಟೊಂದು ಉತ್ತರವಿಲ್ಲದ ಪ್ರಶ್ನೆಗಳು? ಉತ್ತರವಿದೆ; ಹುಡುಕಿ ಹೊರಡುವ ತಾಳ್ಮೆ ಯಾರಿಗಿದೆ?
ಉತ್ತರ ಹೇಳಲು ವಿಶ್ವಾತ್ಮನೂ ಇಲ್ಲ. ಯಾರು ಹೇಳುತ್ತಾರೆ ಇದಕ್ಕೆಲ್ಲ ಉತ್ತರವನ್ನು?ಮತ್ತೆ ಪ್ರಶ್ನೆಯೇ ಆತ್ಮನಿಗೆ.
ಸನಾ ತನ್ನದೇ ಭಾವನಾ ಪ್ರಪಂಚದಲ್ಲಿ ಮುಳುಗಿಹೋಗಿದ್ದಳು, ಇಲ್ಲ ತೇಲುತ್ತಿದ್ದಳು. ಹೆಣ್ಣೆಂದರೆ ಹಾಗೆ ಕಳೆದುಕೊಳ್ಳುವುದು ಗೊತ್ತು, ಹುಡುಕಿ ಹೊರಡುವುದೂ ಇದೆ. ಪ್ರತಿಯೊಬ್ಬ ಹೆಣ್ಣಿನಲ್ಲೂ ಒಬ್ಬ ತಾಯಿಯಿರುತ್ತಾಳೆ. ಅವಳ ಬದುಕಿನ ಪ್ರತೀ ಕ್ಷಣಗಳು ಚಂದದ ಕನಸುಗಳ ಸಂಕಲನ. ಪೂರ್ತಿಯಾಗಿ ಓದಿ ಅರ್ಥಮಾಡಿಕೊಳ್ಳುವವರು ಕಡಿಮೆ. ಹೆಣ್ಣು ಬದುಕಿರುವಾಗಲೇ ಮತ್ತೊಂದು ಜೀವಕ್ಕೆ ಬದುಕು ಕೊಡುತ್ತಾಳೆ. ಬಸಿರಾಗಿ ಉಸಿರು ನೀಡುತ್ತಾಳೆ. ಅದೆಷ್ಟೇ ಕಷ್ಟವಾದರೂ ಮಗು ಅವಳ ಕನಸಿನ ಕೂಸು. ಅದು ಹೇಗೆ ಸಾಧ್ಯ?
ನಾನೇಕೆ ಇಂಥವೆಲ್ಲ ಯೋಚಿಸುತ್ತಿದ್ದೇನೆ? ಎಂದುಕೊಂಡ ಆತ್ಮ. ಸಾವಿರಾರು ಪ್ರಶ್ನೆಗಳು ಆತನ ಮನದಂಗಳದಲ್ಲಿ ಚುಕ್ಕಿ ಇಟ್ಟಿದ್ದವು. ರಂಗೋಲಿ ಮಾಡುವವರು ಯಾರಿಲ್ಲ. ವರ್ಷಿ ಆತ್ಮನ ನೆನಪುಗಳಿಂದ ಜಾರಿಹೋಗಿದ್ದ.
ಎಷ್ಟಾದರೂ ಮನಸ್ಸು ಚಂಚಲ. ಅವನ ಯೋಚನೆಗಳ ಲಹರಿ ಸುಂದರ ಕುಟುಂಬದ, ತಾಯಿ ಮಗುವಿನ, ಗಂಡ ಹೆಂಡತಿಯ ಸಂಬಂಧಗಳ ಜೊತೆ ತೇಲುತ್ತಿತ್ತು.
ಸಂವೇದನಾಳನ್ನು ಈ ಬಗ್ಗೆ ಕೇಳಿದರೆ? ಯೋಚನೆಯೊಂದು ಮಿಂಚಾಯಿತು. ಎಷ್ಟೆಂದರೂ ಅವಳು ನನ್ನದೇ ಸೃಷ್ಟಿ. ನನಗೂ ಮೀರಿದ ಜ್ಞಾನ-ವಿಜ್ಞಾನಗಳು ಅವಳಿಗೆಲ್ಲಿಂದ ಬರುವುದು? ಗಂಡಸಿನ Ego ಎದ್ದು ನಿಂತಿತ್ತು. ಅವಳಿಗಿವೆಲ್ಲ ಅರ್ಥವಾಗದ ವಿಷಯಗಳು ಎಂಬ ಅಸಡ್ಡೆಯ ಭಾವ ಹಾದುಹೋಯಿತು.
ಆತ ಸಂವೇದನಾಳ ಮುಖ ನೋಡಿದ. ಅವಳದು ಬೇರೆಯದೇ ಪ್ರಪಂಚ. ಅಲ್ಲಿ ಪ್ರಶ್ನೆಗಳಿರಲಿಲ್ಲ; ಉತ್ತರವೂ ಅನಿವಾರ್ಯವಲ್ಲ. ಆತ್ಮನನ್ನು ಮುದ್ದಿಸುತ್ತಲೇ ಇದ್ದಳು. ಸಿಹಿ ಮುತ್ತುಗಳು ಮುಖದ ಮೇಲೆಲ್ಲ ಕಚಗುಳಿಯಿಟ್ಟಿದ್ದವು ಆತ್ಮನಿಗೆ. ಕೆನ್ನೆ ಹಿಂಡಿ “ನೋವಾಯಿತೇ ಮಗು?” ಎಂದು ಬೆನ್ನು ಸವರುವಳು. ತನಗೂ ನೋವಾದಂತೆ ಮುಖ ಕಿವುಚುವಳು.
ಆತ್ಮನ ಒಂದು ಪ್ರಶ್ನೆಗೆ ಉತ್ತರ ಸಿಕ್ಕಂತಾಯಿತು. ಅದಕ್ಕೆ ಕಾರಣವೂ ಇತ್ತು. ಅವಳು ಆತನನ್ನು ಅಷ್ಟೊಂದು ಮುದ್ದಿಸುತ್ತಿದ್ದರೂ ಕಾಮನೆಗಳು ಕೆರಳುತ್ತಿರಲಿಲ್ಲ. ಕಾಮದ ಪ್ರಚೋದನೆಯಾಗುತ್ತಿಲ್ಲ. ಅವಳ ಮುತ್ತುಗಳು ಅವನನ್ನು ಉನ್ಮಾದಿಸುತ್ತಿಲ್ಲ. ಅವಳ ನಾಚಿಕೆಯ ಅಂಗಗಳ ಸ್ಪರ್ಶ ಅವನನ್ನು ದೇಹದ ಹಸಿವೆನೆಡೆಗೆ ಸೆಳೆಯುತ್ತಿಲ್ಲ. ನಿಷ್ಕಾಮವೆಂದರೆ ಇದೇ ಇರಬಹುದು.
“ಸನಾ…..” ಮತ್ತೆ ಬಿಕ್ಕಿದ ಆತ್ಮ.
“ಏನು ನನ್ನ ಮುದ್ದು ಮರಿ?” ಮುದ್ದು ಭಾಷೆ ಅವಳದು. ಆತ್ಮ ಅವಳೆದೆಯಲ್ಲಿ ಮುಖವಿಟ್ಟು ಒರಗಿಕೊಂಡ. “ನಾನು ಏನು ಹೇಳಲಿ? ಏನನ್ನೂ ಹೇಳಲಾರೆ ಈ ಸ್ಥಿತಿಯಲ್ಲಿ. ಆದರೆ ನೀನು ನಾನೆಂದು ಕಂಡಿರದ ತಾಯಿ ಮಡಿಲನಿತ್ತೆ. ಅವಳ ಮಮತೆ ಕೊಟ್ಟಿರುವೆ. ಹೆಂಡತಿ, ಪ್ರೇಯಸಿ ತಾಯಿ ಎರಡೂ ಆಗಬಲ್ಲಳು ಸನಾ.
ನೀನು ಮೊದಲ ಬಾರಿಗೆ ಮಗುವೇ ಎಂದಿದ್ದು ಯಾವಾಗ ನೆನಪಿದೆಯೇ? ನನಗಿನ್ನೂ ನೆನಪಿದೆ. ನಾನು ನಿನ್ನ ಮಡಿಲಲ್ಲಿ ಅಂದು ಹೀಗೆಯೇ ಮಲಗಿದ್ದೆ, ಮಗುವಾಗಿದ್ದೆ. ಎದೆಯ ಕಣಿವೆಯಲ್ಲಿ ಮುಖವಿಟ್ಟಿದ್ದೆ ಗೆಳತಿ. ಅಂದು ನನ್ನದೇನು ಅನಿಸಿಕೆಗಳು ಕೇಳು ಸನಾ…!!” ಅವಳ ಮುಖ ನೋಡಿದ
ಆತ್ಮನ ಮಾತುಗಳಿಂದ ನಿಧಾನವಾಗಿ ವಾಸ್ತವಕ್ಕೆ ಬರುತ್ತಿದ್ದಳು ಸನಾ. ಹೆಣ್ಣೆಂದರೆ’ ಕಲ್ಪನಾ’. ಅವಳಿಗೆ ಖುಷಿಯಾಯಿತು. ಇಷ್ಟು ಚಿಕ್ಕ ವಿಷಯಗಳು ನೆನಪಿರುತ್ತದಲ್ಲವೇ ಇವನಿಗೆ. ಅದೆಷ್ಟು ಮೋಹ ನನ್ನ ಬಗ್ಗೆ. ಹೆಣ್ಣಿಗೆ ಇನ್ನೇನು ಬೇಕು? ಚಿಕ್ಕ ಪುಟ್ಟ ಸಂತೋಷಗಳೇ ಅವಳ ಅತಿ ದೊಡ್ಡ ಆಸ್ತಿ. ನೆನಪಿನ ತಿಜೋರಿಯಲ್ಲಿ ಬಹುಪಾಲು ಅವೇ ತುಂಬಿರುವುದು. ‘ಕಣ್ಣೀರಾಗದ ದುಃಖದ ನಡುವಿನ ಸಂತೋಷ’ ತಿಳಿದುಕೊಂಡಿದ್ದಾಳೆ ಅವಳು. ಸನಾ ಕಣ್ಣುಗಳು ನೀರಾದವು.
ಕಂಬನಿಯೊಂದು ಕಂಗಳ ಕೊಳದಿಂದ ಬೇರಾಯಿತು. “ಗೆಳೆಯಾ, Thanks ಕಣೋ ” ಎಂದುಕೊಂಡಳು ಮನಸ್ಸಿನಲ್ಲಿ. ಅದನ್ನೇನು ತೋರಿಸಿಕೊಳ್ಳದೆ “ಏನನ್ನಿಸಿತು?” ಗಂಭೀರತೆ ತುಂಬಿಕೊಂಡಿತು.
ಆತ್ಮ ಹೇಳುತ್ತಲೇ ಇದ್ದ -“ಇವಳು ನನಗೆ ಮಗನೇ ಎನ್ನುತ್ತಿದ್ದಾಳೆ. ನನಗೆ ಹೇಗೆ ತಾಯಿಯಾಗಬಳ್ಳಲು? ಗಂಡ-ಹೆಂಡತಿಯೆಂಬುದು ದೈಹಿಕ ಸಂಬಂಧಗಳ ಬಂಧ. ನನ್ನನ್ನು ಮಗನೆಂದು ತಿಳಿದವಳು ಹೆಂಡತಿಯಾಗಿ ಕೂಡಬಲ್ಲಳೇ? ಪಕ್ಕ ಮಲಗಿ ಕಾಡಬಲ್ಲಳೇ? ನಾನು ಹೇಗೆ ಇವಳನ್ನು ಹೆಂಡತಿಯ ರೂಪದಲ್ಲಿಯೂ, ತಾಯಿಯ ಸ್ಥಾನದಲ್ಲಿಯೂ ನೋಡಬಲ್ಲೆ ಎಂದುಕೊಂಡಿದ್ದೆ ಸನಾ. ಆದರೀಗ ಅರ್ಥವಾಯಿತು ಸನಾ, ಹೆಂಡತಿ ತಾಯಿಯೂ ಆಗಬಲ್ಲಳು. ಬಹುಶಃ ಅವಳ ಮೊದಲ ಮಗುವೇ ಗಂಡನಿರಬೇಕು. ದೈಹಿಕ ವಾಂಛೆಗಳಿಗೂ, ಸ್ಪರ್ಶಗಳಿಗೂ ವ್ಯತ್ಯಾಸವಿದೆ ಬೆಟ್ಟದಷ್ಟು. ನಿನ್ನ ಸ್ಪರ್ಶ ನನ್ನಲ್ಲಿ ಕಾಮವನ್ನು ಮೂಡಿಸುತ್ತಿಲ್ಲ. ಕಾಮನೆಗಳನ್ನು ಉದ್ರೇಕಿಸುತ್ತಿಲ್ಲ. ನೀನು ನನಗೆ ತಾಯಿಯ ಮಡಿಲು ನೀಡಿದೆ, ತಾಯಿಯಾದೆ ನೀನು. ಈಗ ನನಗೆ ತಿಳಿಯಿತು. ಹೆಣ್ಣಿನಲ್ಲಿ ತಾಯಿ ಯಾವಾಗಲೂ ಇರುತ್ತಾಳೆ. ಹೆಣ್ಣೆಂದರೆ ತಾಯಿ. ಸೃಷ್ಟಿದೇವತೆ ಅವಳು. ಹೊಸ ಜೀವಿಗೆ ಉಸಿರನಿತ್ತು ಹೆಸರು ಕೊಡುವ ಮುನ್ನವೇ ಅವಳು ತಾಯಿಯಾಗಿರುತ್ತಾಳೆ. ಅದರಿಂದಲೇ ಜೀವ ಸೃಷ್ಟಿಸುವ ಕ್ರಿಯೆಯ ನೋವನ್ನು ಅನುಭವಿಸುತ್ತಾಳೆ. ಅದರಲ್ಲೂ ಸಾರ್ಥಕತೆ ಇದೆ ಸನಾ ಅವಳಿಗೆ”. ಹೊಸ ವಿಷಯ ಹೇಳುವ ಭಾವ ಅವನದು;
ಸನಾ ಹೆಣ್ಣು, ಸಾಮಾನ್ಯ ಸಂಗತಿ ಇದು.
ಎದ್ದು ಕುಳಿತು ಅವಳ ಕಾಲುಗಳನ್ನು ಸ್ಪರ್ಶಿಸಿದ ಆತ್ಮ. ಅದು ಸೋಲುವ ಭಾವವಲ್ಲ. ನಿನಗಿಂತ ನಾನು ಕಡಿಮೆ ಎಂಬ ಕೀಳರಿಮೆಯಲ್ಲ. ಅದೊಂದು ಉತ್ಕೃಷ್ಟತೆ. ಮಗ ತಾಯಿಗೆ ನೀಡುವ ಮಹೋನ್ನತ ಗೌರವ. ತಾಯಿಯಾದರೂ ಮಗನಿಂದ ಹೆಚ್ಚೇನು ಬಯಸುತ್ತಾಳೆ??
ಜೀವನದ ಕೊನೆಯವರೆಗೂ ತಾಯಿಯಾಗಿ ಜೊತೆ ನಿಲ್ಲುತ್ತಾಳೆ. ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಕೊನೆಗೆ ಎಲ್ಲವೂ ಅವಳೇ ಆಗಿ…..
ಸೃಷ್ಟಿಯನ್ನು ಅರ್ಥಮಾಡಿಕೊಳ್ಳದೆ ಕೇವಲ ದೇಹ ಸುಖಕ್ಕಾಗಿ ಒಬ್ಬರಿಗೊಬ್ಬರು ಎಂದು ಅಪಾರ್ಥ ಮಾಡಿಕೊಂಡೆನಲ್ಲ. ಮಷಿನರಿಗಳಿಂದ ಸಿಗುವ ದೇಹ ಸುಖ ಈ ತಾಯಿ ಪ್ರೀತಿಯೆದುರು ಪುಡಿಗಾಸಿಗೂ ಸಮವಿಲ್ಲ.ತಾಯಿಯ ಪ್ರೀತಿಗೆ ಬೆಲೆಯೇ ಕಟ್ಟಲಾಗುವುದಿಲ್ಲ.
ಹೆಂಡತಿಯಂತೆ ಮಡಿಲಿಗೆ ಕರೆದುಕೊಳ್ಳುವುದೇ ಮಷಿನ್ ಗಳು?? ಮನುಷ್ಯ ಏನೇನು ಕಳೆದುಕೊಂಡ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಂತಿತ್ತು ದೃಶ್ಯ. ಇಂಥವೇ ಆಕಸ್ಮಿಕಗಳು ಮನಸ್ಸುಗಳನ್ನು ಹತ್ತಿರವಾಗಿಸುವುದು; ಸಂಬಂಧಗಳನ್ನು ಎತ್ತರಕ್ಕೆರಿಸುವುದು.
ಮೌನದೊಳಗಿನ ಮಾತು ಸದ್ದೆಬ್ಬಿಸಿತು. ಕೇವಲ ಉಸಿರುಗಳ ಪಿಸುಮಾತು, ಭಾವಗಳ ಮೆಲುನುಡಿ.
ಆತ್ಮನೇ ಮೌನ ಮುರಿದು ಮಾತನಾಡಿದ. ಅವಳು ಅವನ ಮಾತಿಗೆ ಗೀತೆಯಾದಳು ಸ್ವರಕೆ ಶೃತಿಯಂತೆ, ತಾಳಕೆ ಮೇಳದಂತೆ, ಕೋಗಿಲೆಯ ಗಾನಕೆ ನವಿಲಿನ ನಾಟ್ಯದಂತೆ.
ಮುಂದುವರೆಯಿತು ಮಾತು… ಮುಗಿಯಲೂ ಇಲ್ಲ…
ಆತ್ಮ: ನಾ ಪುಟ್ಟ ಮಗು..
ಸಂವೇದನಾ: ನಾ ಅದರಂತರಂಗ ನಲಿಸುವ ಮುಗ್ಧ.
ನಾ ಅಸ್ಪಷ್ಟ..
ನಾ ನಿನ್ನೊಳಗೆ ನಿಚ್ಚಳ.
ನಾ ಆಗಸ..
ನಾ ನಿನ್ನನಾವರಿಸುವ ಅಚ್ಚ ನೀಲ.
ನಾ ಜಗದೆದುರು ಅತಿಥಿ..
ನಾ ನಿನ್ನದೇ ಸ್ವಂತ.
ನಾ ಕ್ಷಣಿಕ..
ನಾ ಆತ್ಮನೊಳಗೆ ಶಾಶ್ವತ.
ಅವರ ಮಾತಿನ ಬಂಡಿ ಸಾಗುತ್ತಲೇ ಇತ್ತು. ಎರಿಳಿತಗಳಿದ್ದರೂ ಯಾವ ಯೋಚನೆಯಿಲ್ಲ. ಬದುಕಿದ್ದು ಸಮಾಧಿ. ತೃಪ್ತಿಯ ಕೊನೆಯ ಪರ್ವ, ಭಾವ ಸಮಾಧಿ.
ಒಬ್ಬರ ತೋಳಿನಲ್ಲಿ ಒಬ್ಬರು ಹಾಗೆಯೇ ಎಷ್ಟೋ ಹೊತ್ತು ಕುಳಿತೇ ಇದ್ದರು. ಕುಳಿತಲ್ಲೇ ಕಲ್ಲಾಗಿತ್ತು ದೇಹ, ಕಲ್ಲಿನ ಕಲಾವೇದಿಕೆಯಾಗಿತ್ತು ದೇಹದೊಳಗಿನ ಭಾವ. ಅವರ ಪಾಲಿಗೆ ಸಮಯ ಮುಂದೆ ಚಲಿಸಲೇ ಇಲ್ಲ.
ಯಾವತ್ತೂ ಸಮಯ ಕಾಲು ಸೋತು ಕುಳಿತದ್ದೇ ಇಲ್ಲ, ಜಗತ್ತಿನ ಕಾಲ ಓಡುತ್ತಲೇ ಇತ್ತು.
ತಾಯಿಯಾಗಿ ಸಂವೇದನಾ ಇಂದು ಆತ್ಮನ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಿದ್ದಳು ಅವಳಿಗೂ ಅರಿವಿಲ್ಲದೆಯೇ.
ಇನ್ನೂ ಉತ್ತರ ಸಿಗದ ಪ್ರಶ್ನೆಗಳು??
ಅದೊಂದು ಯೋಚನೆಯೇ ಬರಲಿಲ್ಲ ಆತ್ಮನಿಗೆ. ಆತ ಇನ್ನೂ ಭಾವ ಸಮಾಧಿಯ ಸ್ಥಿತಿಯಲ್ಲಿಯೇ ಇದ್ದ. ಸನಾಳ ಹೃದಯಬಡಿತ ಮಾತ್ರ ಕೇಳಿಸುತ್ತಿತ್ತು. ಅವನು ಆಲಿಸುತ್ತಿದ್ದದ್ದು ಅದೊಂದನ್ನೆ. ಸಂವೇದನಾಳಿಗೆ ಆಗಸದಲ್ಲಿ ನಿಂತ ಓಡುವ ಗಡಿಯಾರದ ಕ್ಷಣಗಳೇ ಕಾಣುತ್ತಿದ್ದವು.
ಸಮಯ ಓಡುತಲೇ ಇರುತ್ತದೆ;
ಯುದ್ಧ ಸಮೀಪಿಸುತ್ತಿತ್ತು.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post