X
    Categories: ಅಂಕಣ

ಯೂ ಡೋಂಟ್ ನೋ ಇಂಗ್ಲೀಷಾ? ಛೇ ಪಾಪ!

ಬಸ್‍ಸ್ಟಾಪಿನಲ್ಲಿ ಮೆಜೆಸ್ಟಿಕ್ ಬಸ್ ಹಿಡಿಯಲು ನಿಂತಿರುತ್ತೀರಿ. ಹತ್ತಿರ ಬಂದ ಒಬ್ಬ “ಯೂ ಗೆಟ್ ಮೆಜೆಸ್ಟಿಕ್ ಬಸ್ ಹಿಯರ್?” ಎಂದು ಬಟ್ಲರ್ ಇಂಗ್ಲೀಷಿನಲ್ಲಿ ಕೇಳುತ್ತಾನೆ. “ಹೌದು, ಹನ್ನೆರಡನೇ ನಂಬರ್ ಬಸ್ ಬರುತ್ತಲ್ಲ, ಅದು ಮೆಜೆಸ್ಟಿಕ್ಕಿಗೇ ಹೋಗೋದು” ಅಂತ ನೀವೇನಾದರೂ ಶುದ್ಧ ಕನ್ನಡದಲ್ಲಿ ಉತ್ತರ ಹೇಳಲು ಹೋದರೆ “ಅಯ್ಯೋ ಪಾಪ, ಇವನಿಗೆ ಇಂಗ್ಲೀಷ್‍ನಲ್ಲಿ ಉತ್ತರ ಹೇಳಕ್ಕೆ ಬರಲ್ಲ. ಇವನನ್ನ ಕೇಳಿ ತಪ್ ಮಾಡ್‍ಬುಟ್ನಲ್ಲ!” ಎಂದು ಬೆಂಗ್ಳೂರ್ ಕನ್ನಡದಲ್ಲಿ ಮನಸ್ಸಲ್ಲೇ ಅಂದುಕೊಂಡು ನಿಮ್ಮತ್ತ ಕರುಣಾಜನಕ ನೋಟ ಬೀರಿ ಸ್ವಲ್ಪ ದೂರದಲ್ಲಿ ನಿಲ್ಲುತ್ತಾನೆ. ಬೆಂಗಳೂರಿನ ಕೆಲವು ಶಾಲೆಗಳು ಮಕ್ಕಳನ್ನು ಸೇರಿಸಿಕೊಳ್ಳುವ ಮೊದಲು ಅವರ ಅಪ್ಪಮ್ಮನ ಸಂದರ್ಶನ ಮಾಡುತ್ತವೆ! ಹುಟ್ಟಿಸಿದವರಿಗೆ ಇಂಗ್ಲೀಷ್ ಬರುತ್ತೋ ಇಲ್ಲವೋ, ಮಕ್ಕಳಿಗೆ ಹೋಮ್‍ವರ್ಕ್ ಮಾಡಿಸುವಷ್ಟಾದರೂ ಇಂಗ್ಲೀಷ್ ಕಲಿತಿದ್ದಾರೋ ಎಂದು ‘ಪರೀಕ್ಷೆ’ ಮಾಡಲಾಗುತ್ತದೆ. ಕೆಲವು ಸೂಪರ್ ಮಾರ್ಕೆಟ್‍ಗಳಲ್ಲಿ ಬೇಕಾದರೆ ಸೂಕ್ಷ್ಮವಾಗಿ ಪರೀಕ್ಷೆ ಮಾಡಿ: ಇಂಗ್ಲೀಷ್‍ನಲ್ಲಿ “ಡೂ ಯೂ ಹಾವ್ ಗ್ರೌಂಡ್‍ನಟ್ ಆಯಿಲ್?” ಅಂದರೆ, ಅಲ್ಲಿನ ಕೆಲಸದಾಳುಗಳು ಚಕಚಕನೆ ಹುಡುಕಾಡಿ ನಿಮಗೆ ಬೇಕಾದ ಡಬ್ಬ ತಂದುಕೊಡುತ್ತಾರೆ. ಅದೇ ಸ್ವಚ್ಛ ಕನ್ನಡದಲ್ಲಿ “ಶೇಂಗಾ ಎಣ್ಣೆ ಇದೆಯಾ” ಅಂತ ಕೇಳಿದರೆ, “ಇಲ್ಲಾ ಸಾರ್. ಬೇಕಾದರೆ ಆಯಲ್ ಸೆಕ್ಷನ್‍ನಲ್ಲಿ ಇದೆಯಾ ನೋಡಿ” ಎಂದು ನಿಮಗೇ ಆ ಜವಾಬ್ದಾರಿ ವಹಿಸಿಬಿಡುತ್ತಾರೆ!

ಇತ್ತೀಚೆಗೆ ಕನ್ನಡ ಮಾಧ್ಯಮದ ವಿರುದ್ಧವಾಗಿ ಕೋರ್ಟ್ ತೀರ್ಪು ಬಂದಾಗ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಬಂದ ವರದಿಯ ಧಾಟಿ ಹೀಗಿತ್ತು: “ನಮಗ್ಯಾವ ಮಾಧ್ಯಮ ಬೇಕು ಅಂತ ಯೋಚಿಸುವ ಸ್ವಾತಂತ್ರ್ಯ ನಮಗಿರಬೇಕು. ಇಂಗ್ಲೀಷ್‍ನಲ್ಲಿ ಕಲಿತರೆ ಇವತ್ತು ಒಳ್ಳೆಯ ಉದ್ಯೋಗಾವಕಾಶಗಳು ಸಿಗುತ್ತವೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಬೇಕಾದ ಎಲ್ಲ ಗುಣಗಳನ್ನು ನಮ್ಮ ಮಕ್ಕಳಲ್ಲಿ ಬೆಳೆಸಬಹುದು ಎಂದು ಐಟಿ ಉದ್ಯೋಗಿಗಳು, ಡಾಕ್ಟರುಗಳು, ಇಂಜಿನಿಯರ್’ಗಳು ಅಭಿಪ್ರಾಯಪಟ್ಟರು. ಆದರೆ, ಇದು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ನಮ್ಮ ಮಕ್ಕಳಿಗೆ ದೊಡ್ಡ ತೊಂದರೆಯನ್ನು ತಂದೊಡ್ಡಲಿದೆ ಎಂದು ಆಟೋರಿಕ್ಷಾ ಚಾಲಕರು, ದಿನಸಿ ಅಂಗಡಿ ಇಟ್ಟವರು, ಹೋಟೇಲ್ ಮ್ಯಾನೇಜರ್‍ಗಳು, ಪೋಸ್ಟ್‍ಮ್ಯಾನ್‍ಗಳು ಹೇಳಿದರು” ಅಂದರೆ, ಇಂಗ್ಲೀಷ್ ಬೇಕು ಎನ್ನುವವರೆಲ್ಲ ಸಮಾಜದಲ್ಲಿ ಉನ್ನತ ವರ್ಗದಲ್ಲಿರುವವರು; ಕನ್ನಡ ಮಾಧ್ಯಮ ಬೇಕೆಂದು ಒತ್ತಾಯ ಮಾಡುವವರೆಲ್ಲ ಸಮಾಜದ ಕೆಳಸ್ತರದಲ್ಲಿ ಬದುಕುತ್ತಿರುವ ಮಂದಿ ಎಂಬ ರೀತಿಯಲ್ಲಿ ವರದಿಯನ್ನು ಬರೆಯಲಾಗಿತ್ತು. ಆಟೋಚಾಲಕರನ್ನು, ಅಂಗಡಿ ಇಟ್ಟವರನ್ನು ಎರಡನೇ ದರ್ಜೆಯ ನಾಗರಿಕರು ಎಂದು ಪತ್ರಿಕೆ ಹೇಳುತ್ತಿತ್ತು! “ನೋಡಿದಿರಾ? ಇಂಗ್ಲೀಷ್‍ನಲ್ಲಿ ಕಲಿಯದೇ ಹೋದರೆ ನಾಳೆ ನಿಮಗೂ ಇದೇ ಗತಿ! ಬಿಳಿ ಅಥವಾ ನೀಲಿ ಕಾಲರ್’ನ ಕೆಲಸ ಸಿಗುವುದು ಕನಸಿನ ಮಾತು!” ಎನ್ನುವುದನ್ನು ಈ ವರದಿ ಸಾರಿಸಾರಿ ಹೇಳುತ್ತಿತ್ತು! ಕನ್ನಡ ಮಾಧ್ಯಮದ ಹೋರಾಟಕ್ಕೂ ಮೊದಲು, ಕನ್ನಡಿಗರನ್ನು ಕಡೆಗಣ್ಣಿನಿಂದ ನೊಡುತ್ತಿರುವ, ಪರಿಹಾಸ್ಯ ಮಾಡುತ್ತಿರುವ ಈ ಭಾಷಾ ದೌರ್ಜನ್ಯದ ಬಗ್ಗೆ ಬಹುಶಃ ಮೊದಲು ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ.

ಆಳಕ್ಕಿಳಿದು ಯೋಚಿಸಿದರೆ ಇದು ಹಲವು ಆಯಾಮ, ಮಗ್ಗುಲುಗಳಿರುವ ಒಂದು ಸಂಕೀರ್ಣ ಸಮಸ್ಯೆ. ಕನ್ನಡ ನಾಡಲ್ಲಿ ಕನ್ನಡಿಗನಿಗೆ ಮರ್ಯಾದೆ ಕೊಡಬೇಕು ಎಂದು ಯಾವುದೇ ಕಾನೂನು ಮಾಡಲು ಸಾಧ್ಯವಿಲ್ಲ. ಅಥವಾ ಕೋರ್ಟಿಂದ ಆದೇಶ ತರಿಸಲಿಕ್ಕೂ ಬರುವುದಿಲ್ಲ. ಎಂಟು ಹತ್ತು ಮನೆಗಳಿರುವ ಅಪಾರ್ಟ್‍ಮೆಂಟುಗಳಲ್ಲಿ ಇಂದು ವಾಸಿಸುತ್ತಿರುವ ಬಹಳಷ್ಟು ಜನ ತಮ್ಮತಮ್ಮಲ್ಲಿ ಮಾತಾಡುವಾಗ ಇಂಗ್ಲೀಷನ್ನೇ ಬಳಸುತ್ತಾರೆ. ಅವರಿಬ್ಬರೂ ಕನ್ನಡಿಗರೇ ಆಗಿದ್ದರೂ! “ಕನ್ನಡದಲ್ಲಿ ಮಾತಾಡುವುದಕ್ಕೆ ಇಳಿದರೆ ನೀನು ಹೇಳಬೇಕೋ ನೀವು ಅಂತ ಗೌರವ ಕೊಡಬೇಕೋ – ಇದೆಲ್ಲ ಗೊಂದಲ ಬರುತ್ತೆ. ಅದಕ್ಕೇ ಯೂ ಅಂತ ಈ ಏಕ-ಬಹುವಚನಗಳ ಗೊಂದಲ ಅಳಿಸಿ ಹಾಕುವ ಇಂಗ್ಲೀಷಿನಲ್ಲಿ ವ್ಯವಹರಿಸುವುದು ಸುಲಭ” ಎಂಬ ಅನುಕೂಲಸೂತ್ರ ಇವರ ಬಳಿ ಸದಾ ಸಿದ್ಧ. ಈ ಅಪಾರ್ಟ್‍ಮೆಂಟ್‍ಗಳಲ್ಲಿ ಮಕ್ಕಳು ಎಂದಿಗೂ ಕನ್ನಡದಲ್ಲಿ ವ್ಯವಹರಿಸುವುದೇ ಇಲ್ಲ! ಕನ್ನಡ ಮಾತಾಡುವ, ಇಂಗ್ಲೀಷ್ ಬರದ ಮಕ್ಕಳನ್ನು ಅವರು ಅಪ್ಪಿತಪ್ಪಿಯೂ ತಮ್ಮ ಗುಂಪಿಗೆ ಸೇರಿಸುವುದಿಲ್ಲ. “ನೋಡು, ಆ ಹುಡುಗನ ಜೊತೆ ಆಡೋದಕ್ಕೆ ಹೋಗಬೇಡ. ಅಂಥವನ ಜೊತೆ ಆಡಾಡ್ತ ನಿನಗೆ ಇಂಗ್ಲೀಷೇ ಮರೆತುಹೋದ್ರೆ ಕಷ್ಟ!” ಎಂದು ತಂದೆತಾಯಿಯರು ಹೆದರಿಸುತ್ತಾರೆ. ಇನ್ನು ಈ ಸಂಕೀರ್ಣಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಪೇಪರ್-ಹಾಲು ಮಾರುವವರು, ತೋಟದ ಆಳುಗಳು, ಸೆಕ್ಯುರಿಟಿ, ಹಮಾಲಿ, ಜಾಡಮಾಲಿಗಳೆಲ್ಲ ಅನಿವಾರ್ಯವಾಗಿ ಇಂಗ್ಲೀಷಿನ ನಾಲ್ಕು ಟಸ್‍ಪುಸ್‍ಗಳನ್ನು ಕಲಿಯಲೇಬೇಕು! ತಮ್ಮ ಆಡುಮಾತಿನಲ್ಲಿ ಸರಾಗವಾಗಿ ಮಾತಾಡುವ ಅವಕಾಶವಿದ್ದರೂ ಅದಕ್ಕೆಲ್ಲ ಈ ಸಂಕೀರ್ಣಗಳೊಳಗೆ ಅವಕಾಶವಿಲ್ಲ. “ಹೇಳಿದ್ದನ್ನು ಅರ್ಥಮಾಡಿಕೊಂಡು ಉತ್ತರ ಕೊಡುವಷ್ಟಾದರೂ ಇಂಗ್ಲೀಷ್ ಬರುತ್ತೋ?” ಎಂದು ಇವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗಲೇ ಕೇಳುತ್ತಾರೆ. “ಇಲ್ಲಾ ಸಾರ್! ಕನ್ನಡ ಮಾತ್ರ ಬರೋದು!” ಅಂದರೆ ಗೇಟ್‍ಪಾಸ್! ಇನ್ನು ಕಂಪೆನಿಗಳಲ್ಲಿ ಕೆಲಸ ಮಾಡುವಾಗಂತೂ ಇಂಗ್ಲೀಷ್ ಅಥವಾ ಹಿಂದಿ ಬರಲೇಬೇಕು, ಅವೆರಡೂ ಭಾಷೆ ಬರದವರು ನಮ್ಮಲ್ಲಿ ಯಾವ ಕೆಲಸಕ್ಕೂ ಅರ್ಜಿ ಹಾಕಬೇಕಾಗಿಲ್ಲ – ಎಂದು ಕಂಪೆನಿಗಳು ದೊಡ್ಡದಾಗಿ ಬೋರ್ಡು ಬರೆಸಿಡುತ್ತವೆ!

ಒಂದು ನಗರವನ್ನು ಮೆಟ್ರೋ ಆಗಿ ಬೆಳೆಸುವಾಗ ಈ ಎಲ್ಲ ಅವಮಾನಗಳನ್ನು ನುಂಗಿಕೊಂಡು ಸುಮ್ಮನಿರಬೇಕು ಎಂದು ಕೆಲವರು ಹೇಳಿಯಾರು. “ಬೆಂಗಳೂರು ಒಂದು ಮಹಾನಗರ. ಇಂತಹ ಸಿಟಿಯಲ್ಲಿ ಅದೇ ಭಾಷೆ ಮಾತಾಡಬೇಕು, ಈ ಭಾಷೆಯಲ್ಲೇ ವ್ಯವಹರಿಸಬೇಕು ಅಂತೆಲ್ಲ ಕಟ್ಟುಪಾಡು ಹಾಕುವುದು ಹಾಸ್ಯಾಸ್ಪದ. ಹಾಗೆ ಮಾಡುವುದರಿಂದ, ಈ ಸಿಟಿ ತನಗೆ ತಾನೇ ಉರುಳು ಹಾಕ್ಕೊಂಡಹಾಗೆ ಆಗುತ್ತೆ.” ಎಂದು ಕೆಲವರು ವಾದ ಮಂಡಿಸಬಹುದು. ಹಾಗಾದರೆ, ಎಲ್ಲರೂ ಇಂಗ್ಲೀಷನ್ನೇ ಬಳಸಬೇಕೆಂಬ ದರ್ದು ಯಾಕಿರಬೇಕು? ಎಲ್ಲರಿಗೂ ಅರ್ಥವಾಗುವ ಏಕಭಾಷೆಯಲ್ಲಿ ವ್ಯವಹರಿಸಬೇಕೆಂದರೆ ಎಲ್ಲರೂ ಕನ್ನಡವನ್ನೇ ಏಕೆ ಬಳಸಬಾರದು? ಈ ನೆಲದಲ್ಲಿ ಸಾರ್ವಭೌಮನಾದ ಕನ್ನಡಿಗ ತನ್ನ ಆತ್ಮಾಭಿಮಾನವನ್ನು ಬದಿಗಿಟ್ಟು ಇಂಗ್ಲೀಷಿನ ಕೃತಕ ಉಸಿರಾಟ ಯಾಕೆ ಮಾಡಬೇಕು ಎನ್ನುವ ಪ್ರಶ್ನೆ ಬರುತ್ತದೆ. ಬೆಂಗಳೂರಂತಹ ನಗರದಲ್ಲಿ ತನ್ನ ಮಾತೃಭಾಷೆಯನ್ನು ಬದಿಗಿಟ್ಟು ಕಷ್ಟಪಟ್ಟು ಇಂಗ್ಲೀಷ್, ಹಿಂದಿ ಕಲಿತು ಬೇರೆಯವರ ಜೊತೆ ವ್ಯವಹರಿಸಬೇಕಾದ ಅನಿವಾರ್ಯತೆಯನ್ನು ದಿನನಿತ್ಯ ಎದುರಿಸುವ ಕಾರ್ಮಿಕ ವರ್ಗದ ಮನದಾಳದ ಅಳಲು ನಮಗೆಂದು ಅರ್ಥವಾಗುವುದು?

ಇಂದಿಗೂ ಭಾಷಾಭಿಮಾನದ ವಿಷಯ ಬಂದಾಗ, ಫ್ರೆಂಚರನ್ನು ನೋಡಬೇಕು. ಪ್ಯಾರಿಸ್‍ನಲ್ಲಿ ನಾವಿಳಿದ ಕೂಡಲೆ ಮೊದಲು ಮಾಡಬೇಕಾದ ಕೆಲಸ ಎಂದರೆ ಪುಸ್ತಕದಂಗಡಿಗೆ ಹೋಗಿ ಫ್ರೆಂಚ್ ಭಾಷೆಯ ನಿಘಂಟನ್ನು ಖರೀದಿಸುವುದು! ಮಾರ್ಕೆಟ್ಟಿನಲ್ಲಿ ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು ಬೇಕಾದರೂ ಅದರ ಸಮಾನಾರ್ಥಕ ಫ್ರೆಂಚ್ ಪದವನ್ನು ಪುಸ್ತಕದಲ್ಲಿ ಹುಡುಕಿ ತೆಗೆಯುವ ಕೆಲಸವನ್ನು ಮಾಡಬೇಕಾಗುತ್ತದೆ. ನೀವು ಅದಕ್ಕಾಗಿ ತಿಪ್ಪರಲಾಗ ಹಾಕಿದರೂ ಸರಿ, ಅಂಗಡಿಯವಳೇನೂ ಕೊರಿಯೆಂಡರ್ ಎಂಬ ಹೊಸ ಶಬ್ದ ಕಲಿತು ನಿಮ್ಮ ಸಹಾಯಕ್ಕೆ ಬರುವವಳಲ್ಲ! ಜರ್ಮನಿಯಲ್ಲಿ ಉದ್ಯೋಗವೋ ಶಿಕ್ಷಣವೋ ಮಾಡಬೇಕಾದರೂ ಮೊದಲು ನೀವು ಜರ್ಮನ್ ಭಾಷೆಯಲ್ಲಿ ಪ್ರಾವೀಣ್ಯತಾ ಪರೀಕ್ಷೆ ಪಾಸು ಮಾಡಬೇಕಾಗುತ್ತದೆ. ಇನ್ನು ನೆದರ್’ಲ್ಯಾಂಡ್, ಪೋರ್ಚ್ಗಲ್‍ನಂತಹ ಪುಟ್ಟದೇಶಗಳಿಗೆ ಹೋದರೂ ಅಷ್ಟೆ. ಡಚ್, ಪೋರ್ಚುಗೀಸ್ ಭಾಷೆಗಳಲ್ಲೇ ಅವರ ವ್ಯವಹಾರ. ಪ್ರವಾಸಿಯಾಗಿ, ಅವರ ನೆಲದ ಭಾಷೆಯ ಪ್ರಥಮ ಪಾಠಗಳನ್ನೂ ಕಲಿಯದೆ ಹೋದದ್ದು ನಿಮ್ಮದೇ ತಪ್ಪು ಅನ್ನಿಸುವ ಭಾವನೆ ಬರುವವರೆಗೆ ಅವರು ನಿಮ್ಮನ್ನು ಕಾಡುತ್ತಾರೆ. “ನಮ್ಮ ಭಾಷೆ ಕಲಿಯದವರು ಇಲ್ಲಿ ಹೊರಗಿನವರು, ಗುಂಪಿಗೆ ಸೇರದವರು” ಎಂಬುದನ್ನು ಯಾವ ಮುಲಾಜಿಲ್ಲದೆ ಹೇಳುತ್ತಾರೆ. ಭಾಷೆ ಗೊತ್ತಿಲ್ಲದೆ ಈ ಜಗತ್ತಿನ ಯಾವುದೇ ದೇಶದಲ್ಲಿ ಸುತ್ತಾಡಿದರೂ ನಮಗೆ ಕ್ಷಣಕ್ಷಣಕ್ಕೂ ಪರಕೀಯತೆಯ ಭಾವ ಚುಚ್ಚುತ್ತಿರುತ್ತದೆ.

ಆದರೆ, ನಮ್ಮಲ್ಲಿ? ನಮ್ಮಲ್ಲಿ ನಾವು ಮನೆಯಜಮಾನರೇ ಪರಕೀಯರು! ಹೊರಗಿನಿಂದ ಬಂದವರೆದುರು ನಾವೇ ಅವರ ಭಾಷೆ ಕಲಿತು ಮಾತಾಡಿ ಸಂಪ್ರೀತಗೊಳಿಸಬೇಕು! ಇದರಲ್ಲಿ ಆತ್ಮಾಭಿಮಾನದ ಪ್ರಶ್ನೆ ಬರಬಾರದು. ಯಾಕೆಂದರೆ ನಾವು ಬದುಕುತ್ತಿರುವುದು ಮೆಟ್ರೋ ಸಿಟಿಯಲ್ಲಿ! ಎಲ್ಲರನ್ನು ಕೈಮುಗಿದು ಸ್ವಾಗತಿಸುವುದೇ ನಮ್ಮ ಸಂಸ್ಕøತಿ. ಅವರು ಹೇಳಿದ್ದಕ್ಕೆ ಹುಜೂರ್ ಎನ್ನುತ್ತಾ ಗುಲಾಮಗಿರಿಗೆ ಕೊರಳೊಡ್ಡಿ ಶರಣಾಗತರಾಗುವುದೇ ನಮ್ಮ ಕರ್ತವ್ಯ. ಯಾವುದೇ ಕಾರಣಕ್ಕೂ ಹಿಂದಿ-ಇಂಗ್ಲೀಷ್ ಭಾಷಿಕರನ್ನು “ಕನ್ನಡ ಕಲಿಯಿರಿ” ಎಂದು ಕೇಳಿಕೊಳ್ಳಬಾರದು. ಒತ್ತಾಯವಂತೂ ಕೂಡದೇ ಕೂಡದು! ಇದು ನಮ್ಮ ನೀತಿ! ಕನ್ನಡ ಮಾಧ್ಯಮ ಅನಿವಾರ್ಯವಲ್ಲ ಎಂದು ಕೋರ್ಟ್ ಹೇಳಿದ ಕೂಡಲೇ ಅದಕ್ಕೆ ಉಪಾಯದಿಂದ ತಿರುಮಂತ್ರ ಹಾಕುವ ಕೆಲಸವನ್ನು ನಮ್ಮ ಸರಕಾರ ಮಾಡಬಹುದಿತ್ತು. ಸರಕಾರದ ನೌಕರಿಯಲ್ಲಿ ಕನ್ನಡಿಗರಿಗೆ ಮಾತ್ರ ಆದ್ಯತೆ, ಕನ್ನಡ ಮಾತಾಡುವ ನೌಕರರಿಗೆ ಹೆಚ್ಚುವರಿ ಭತ್ಯೆ, ಹೊರಗಿನಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ಸರಕಾರೀ ಅಧಿಕಾರಿಗಳು ಕನ್ನಡ ಕಲಿಯಲೇಬೇಕು ಎಂಬ ಕಾನೂನು ತಂದು, ಸರಕಾರಕ್ಕೆ ಕೋರ್ಟಿನ ಜೊತೆ ಸಾತ್ವಿಕವಾದ ಜಗಳವಾಡುವ ಮತ್ತು ತನ್ನ ಅಸಮಾಧಾನವನ್ನು ತೋರಿಸಿಕೊಳ್ಳುವ ಅವಕಾಶ ಇತ್ತು. ಈಗ ಇರುವ ಕನ್ನಡ ಶಾಲೆಗಳನ್ನು ಅತ್ಯಂತ ಶೀಘ್ರವಾಗಿ ಆಧುನಿಕಗೊಳಿಸಿ, ಅಲ್ಲಿ ಸುಸಜ್ಜಿತ ಸೌಕರ್ಯಗಳನ್ನು ಒದಗಿಸಿ, ಎಲ್ಲರೂ “ಇದ್ದರೆ ಹೀಗಿರಬೇಕು ಶಾಲೆ” ಎಂದು ಹೊಗಳುವಂತೆ ಮಾಡಲು ಒಳ್ಳೆಯ ಚಾನ್ಸ್ ಇತ್ತು. ಆದರೆ ಎಷ್ಟೋ ಸಲ, ನಮಗೆ ನಮ್ಮಲ್ಲೂ ರಾಜ್ಯ ಸರ್ಕಾರ ಅನ್ನುವುದು ಇದೆಯೇ ಎಂದು ಕೇಳಿಕೊಳ್ಳುವಷ್ಟು ಅದರ ಧ್ವನಿ ದುರ್ಬಲವಾಗಿದೆ. ಸರ್ಕಾರಕ್ಕೇ ಕನ್ನಡ ಬೇಡ ಅನ್ನಿಸಿದ ಹಾಗಿದೆ! ಕನ್ನಡದ ಉಳಿವು ಎಂದರೆ ವರ್ಷಕ್ಕೊಂದು ಸಾಹಿತ್ಯಸಮ್ಮೇಳನ ನಡೆಸುವುದು ಮತ್ತು ವರ್ಷಪೂರ್ತಿ ದಂಡಿಯಾಗಿ ಪ್ರಶಸ್ತಿಗಳನ್ನು ವಿತರಿಸುತ್ತಾ ಇರುವುದು ಎಂದು ಅದು ಭಾವಿಸಿದಂತಿದೆ.

ಸರಕಾರದ ಮರ್ಜಿಗೆ ಕಾಯುವುದು ಬಿಟ್ಟು ನಾವೇ ಕನಿಷ್ಠಪಕ್ಷ ಬೆಂಗಳೂರಲ್ಲಿ ಕನ್ನಡವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಬೇಕಾಗಿದೆ. ಹೋಟೇಲ್, ಬುಕಿಂಗ್ ಕೌಂಟರ್, ಬ್ಯಾಂಕ್‍ಗಳಲ್ಲಿ ಕನ್ನಡ ಮಾತಾಡುವ ಗ್ರಾಹಕರಿಗೆ ಮೊದಲ ಆದ್ಯತೆ ನೀಡಬೇಕು. ಎಲ್ಲಾ ಕಛೇರಿ, ಕಂಪೆನಿ, ಆಫೀಸುಗಳಲ್ಲಿ ಒಂದಾದರೂ ಕನ್ನಡ ಪತ್ರಿಕೆ ಹಾಕಲೇಬೇಕು ಎನ್ನುವುದನ್ನು ಸರಕಾರ ಕಡ್ಡಾಯ ಮಾಡಿಸಬೇಕು. ಸಾರ್ವಜನಿಕವಾಗಿ ಕನ್ನಡದಲ್ಲಿ ವ್ಯವಹರಿಸುವವರ ಜೊತೆ ಮಾತ್ರ ನಮ್ಮ ವ್ಯವಹಾರ ಎಂದು ಜನ ಕಟ್ಟುನಿಟ್ಟಾದ ನಿಯಮ ಹಾಕಿಕೊಳ್ಳಬೇಕು. ಕನ್ನಡ ಬರದ, ಬಂದರೂ ಅದನ್ನು ಕಾಟಾಚಾರಕ್ಕೆ ಬಳಸುವ, ಇಡೀ ವಾಕ್ಯದಲ್ಲಿ ಒಂದೆರಡು ಕನ್ನಡ ಪದ ಹಾಕಿ ಕಂಗ್ಲಿಷ್ ಮಾತಾಡುವ ಆರ್.ಜೆ, ನಿರೂಪಕರನ್ನು ರೇಡಿಯೋ ಮತ್ತು ಟಿವಿ ಚಾನೆಲ್‍ಗಳು ಮನೆಗೆ ಕಳಿಸಬೇಕು. ಕರ್ನಾಟಕದ ಎಲ್ಲಾ ಕಂಪೆನಿ-ಕಛೇರಿಗಳಲ್ಲಿ ಅಭ್ಯರ್ಥಿಗಳ ಸಂದರ್ಶನ, ನೇಮಕಾತಿ ಪ್ರಕ್ರಿಯೆ ಕನ್ನಡದಲ್ಲೇ ಆಗಬೇಕು. ಕರ್ನಾಟಕದಲ್ಲಿ ಮಾರುವ ಎಲ್ಲಾ ವಸ್ತುಗಳ ಪ್ಯಾಕ್‍ಗಳ ಮೇಲೂ ಕನ್ನಡ ಇರಲೇಬೇಕು, ಮ್ಯಾನುಯೆಲ್ ಕನ್ನಡದಲ್ಲಿ ಬರಲೇಬೇಕು, ಪತ್ರಿಕೆಗಳಲ್ಲಿ ಕೊಡುವ ಜಾಹೀರಾತುಗಳಲ್ಲೂ ಕನ್ನಡ ಕಾಣಿಸಲೇಬೇಕು, ಕರ್ನಾಟಕದಲ್ಲಿ ಕೇಂದ್ರ ಕಛೇರಿ ಇರುವ ಎಲ್ಲಾ ಐಟಿ-ಬಿಟಿ ಕಂಪೆನಿಗಳ ವೆಬ್‍ಸೈಟ್‍ಗಳಲ್ಲೂ ಕನ್ನಡದ ಪುಟಗಳನ್ನು ಸೇರಿಸಲೇಬೇಕು ಎನ್ನುವ ಕಠಿಣ ಕಾನೂನು ಬರಬೇಕು. ಕನ್ನಡ ಕಲಿಯದೆ ನಮಗೆ ಉಳಿಗಾಲವಿಲ್ಲ ಎನ್ನುವ ಸಂದೇಶ ಕನ್ನಡ ಬರದ ಮತ್ತು ಅದನ್ನು ಉಡಾಫೆಯಿಂದ ನೋಡುವ ಇತರ ಭಾಷಿಕರಿಗೆ ಹೋಗಬೇಕು. ಮಾತ್ರವಲ್ಲ, ಕನ್ನಡ ಬಲ್ಲವರು ಇಲ್ಲೆಲ್ಲ ಆರಾಮಾಗಿ ವ್ಯವಹರಿಸಬಹುದು ಎನ್ನುವ ನೆಮ್ಮದಿ, ನಿಟ್ಟುಸಿರು, ಸಮಾಧಾನ ಕನ್ನಡಿಗನಿಗೆ ಸಿಗಬೇಕು. ಅದು ಬಿಟ್ಟು, ಏತಕ್ಕೂ ಬೇಡವಾಗಿರುವ ಸ್ಥಿತಿಗೆ ಕನ್ನಡವನ್ನು ತಂದಿಟ್ಟು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕೆಂದು ಬಡಿದಾಡುವುದು ಹಾಸ್ಯಾಸ್ಪದ.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post