X

ಬದುಕು ನಿಷ್ಕಾರಣವಲ್ಲ…

ಇತ್ತೀಚೆಗಷ್ಟೆ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ನೋಡಿದೆ. “You are not born to just work, pay bills and die” ಎನ್ನುವ ಸಾಲುಗಳು ಅದರಲ್ಲಿತ್ತು. ಏಕೋ ಗೊತ್ತಿಲ್ಲ, ಓದಿದ ತಕ್ಷಣ ನಿಜ ಅನಿಸಿತು ನನಗೆ. “Yes. Definitely I am not” ಅಂತ ಶೇರ್ ಕೂಡ ಮಾಡಿದೆ. ಹಾಗೆಯೇ ಯಾಕೆ ಆ ಸಾಲು ತಕ್ಷಣ ನನ್ನನ್ನು ಸೆಳೆಯಿತು ಎಂಬ ಕುರಿತು ನನ್ನನ್ನು ನಾನೇ ವಿಮರ್ಷಿಸಿಕೊಳ್ಳುವತ್ತ ಒಂದಷ್ಟು ಆಲೋಚನೆಗಳು ಕೂಡ ಸುಳಿದಾಡತೊಡಗಿದವು. ಎಂದಿನಂತೆ ಆ ಆಲೋಚನೆಗಳನ್ನು ಬರಹ ರೂಪಕ್ಕೆ ಇಳಿಸಿದ್ದೇನೆ.

ಭೂರಮೆ, ಭೂಮಿ, ಧರಿತ್ರಿ ಹೀಗೆ ನಾನಾ ಹೆಸರುಗಳಿಂದ ಅಲಂಕೃತವಾದ ಈ ಸೃಷ್ಟಿಯಲ್ಲಿ ನಮ್ಮದೇ ಆದ ಒಂದು ರೂಪ ಹೊತ್ತು ಕಾಲಿಡುತ್ತೇವೆ. ಅದೆಲ್ಲಿದ್ದೆವೋ ಇಷ್ಟು ದಿನ? ಗೊತ್ತಿಲ್ಲ. ಮುಂದೆ ಎಲ್ಲಿ ಹೋಗುವೆವೋ? ಅದೂ ಗೊತ್ತಿಲ್ಲ. ಈ ಎರಡು ಕಾಣದ ತೀರಗಳ ನಡುವೆ ಒಂದಷ್ಟು ವರ್ಷಗಳ ಭಾವ-ತೀರ-ಯಾನ ಈ ಬದುಕು. ಈ ಹುಟ್ಟಿನ ಕಾರಣ ನಮಗೆ ಅರಿಯದು. ಆದರೆ ಈ ಅಮೂಲ್ಯವಾದ ಜನ್ಮ ಹಾಗೂ ಹುಟ್ಟು ನಿಷ್ಕಾರಣವಾದದ್ದಂತೂ ಖಂಡಿತ ಅಲ್ಲ ಎಂಬುದು ನನ್ನ ಅಭಿಪ್ರಾಯ. ಒಂದು ಜೀವಕ್ಕೆ ದೈಹಿಕವಾಗಿ ಆಗುವ ಎಲ್ಲ ಬಗೆಯ ನೋವುಗಳನ್ನು ಗಣನೆಗೆ ತೆಗೆದುಕೊಂಡಾಗ ಅತ್ಯಂತ ಹೆಚ್ಚು ನೋವು ಹೆಣ್ಣೊಬ್ಬಳು ಅನುಭವಿಸುವ ಪ್ರಸವ ವೇದನೆಯದ್ದಂತೆ. ಆ ಪ್ರಸವ ವೇದನೆಯಂತಹ ಅತೀವವಾದ ನೋವಿನ ನಂತರ ಜೀವವೊಂದು ಸೃಷ್ಟಿಯಲ್ಲಿ ಜನ್ಮ ತಾಳುತ್ತದೆ. ಅಂತಹ ಜನ್ಮ ಕೇವಲ ಇಲ್ಲಿ ಬಂದು ಒಂದಿಷ್ಟು ವರ್ಷ ಹಾಗೇ ಸುಮ್ಮನೆ ಇದ್ದು ಹೊರಡುವಷ್ಟು ಸರಳವಾಗಿರಬಹುದೇ? ಖಂಡಿತ ಇಲ್ಲ ಅನಿಸುತ್ತದೆ ನನಗೆ. ತನ್ನ ಜೀವದ ಹಂಗು ತೊರೆದು ಇನ್ನೊಂದು ಜೀವಕ್ಕೆ ಈ ಸುಂದರ ಸೃಷ್ಟಿಯ ದರ್ಶನ ಮಾಡಿಸುವ ತಾಯಿಯೊಬ್ಬಳು ಅನುಭವಿಸಿದ ಆ ನೋವಿಗಾದರೂ ಒಂದು ಬೆಲೆ ಬೇಕಲ್ಲವೇ?

‘ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೇ?’ ಎಂಬಂತೆ, ನಾವು ಈ ಸೃಷ್ಟಿಯ ಭಾಗವಾಗುವ ಮುಂಚೆಯೇ ನಮ್ಮ ಅಗತ್ಯತೆಗಳಿಗೆ ಅನುಕೂಲವಾಗುವಂತಹ ಅನೇಕ ಅಂಶಗಳು ಈ ಸೃಷ್ಟಿಯಲ್ಲಿ ಅಸ್ತಿತ್ವದಲ್ಲಿವೆ. ನಮ್ಮ ಬೆಳವಣಿಗೆಗೆ ನಮ್ಮ ಪರಿವಾರದವಾರಂತೆಯೇ ಈ ಸಮಾಜ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಹಕರಿಸುತ್ತದೆ. ಅಂತಹ ಸೃಷ್ಟಿಗೆ ಅಥವಾ ಸಮಾಜಕ್ಕೆ ನಮ್ಮಿಂದಾಗುವ ಕಿಂಚಿತ್ತನ್ನು ಹಿಂದಿರುಗಿಸುವುದು ನಮ್ಮ ಕರ್ತವ್ಯ ಎಂಬುದು ನನ್ನ ಅನಿಸಿಕೆ. ಅದು ಸಾಧ್ಯವಿಲ್ಲವಾದರೆ ಅದರ ಒಂದು ಭಾಗವಾಗಿಯಾದರೂ ಕಾಣಿಸಿಕೊಳ್ಳುವುದು ಅಗತ್ಯವಲ್ಲವೇ? ಆದರೆ ಇತ್ತೀಚೆಗೆ ಪ್ರತಿಯೊಬ್ಬರದೂ ಒಂದೊಂದು ಪ್ರಪಂಚವೋ ಎನಿಸುವಂತೆ ಬದುಕುತ್ತಿದ್ದೇವೆ. ನಮ್ಮ ಇಂದಿನ ಬದುಕನ್ನು ನೋಡುವಾಗ ಅಲ್ಲಿ ಹಣ ಗಳಿಸುವುದನ್ನು ಬಿಟ್ಟರೆ ಬೇರೆ ಕರ್ತವ್ಯವಗಳೇ ಇದ್ದಂತೆ ಕಾಣಿಸುತ್ತಿಲ್ಲ. ಸುಭದ್ರ ನಾಳೆಗಳಿಗಾಗಿ ದುಡಿಯುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ಆ ಸುಭದ್ರ ನಾಳೆ ಮಾತ್ರ ಎಂದಿಗೂ ನಾಳೆಯಾಗಿಯೆ ಉಳಿದುಹೋಗುತ್ತಿದೆ. ನಮ್ಮನ್ನು ಪ್ರೀತಿಸುವವರ ಸಂತೋಷಕ್ಕಾಗಿ ದುಡಿದು ಹಣ ಗಳಿಸುವ ಓಟದಲ್ಲಿದ್ದೇವೆ ಎನ್ನುತ್ತೇವೆ. ಆದರೆ ಪ್ರೀತಿ ಪಾತ್ರರೊಂದಿಗಿನ ಇನ್ನೆಂದೂ ಸಿಗದ ಎಷ್ಟೋ ಅಮೂಲ್ಯ ಕ್ಷಣಗಳನ್ನು ಕಣ್ಮುಂದೆಯೇ ಕಳೆದುಕೊಂಡಿರುತ್ತೇವೆ. ಸಮಯ ಎಂಬ ಬೆಲೆ ಕಟ್ಟಲಾಗದ ಒಂದು ಸಂಪತ್ತನ್ನು ಎಗ್ಗಿಲ್ಲದೆ ಮನಸಿಗೆ ಬಂದಂತೆ ವ್ಯಯಿಸುತ್ತದ್ದೇವೇನೋ ಅನಿಸುತ್ತದೆ ನನಗೆ. ಒಟ್ಟಾರೆ ನೋಡುವಾಗ ಕೊನೆಗೂ ನಮ್ಮ ಜೀವನ ತಿಂಗಳ ಸಂಬಳಕ್ಕೆ ದುಡಿದು ವಿಧವಿಧವಾದ ಬಿಲ್ ಕಟ್ಟವುದರಲ್ಲೇ ಮುಗಿದುಹೋಗಿರುತ್ತದೆ. ಹಾಗೆಂದು ದುಡಿಯದೆ ಇರಲಾಗುವುದಿಲ್ಲ. ಸಂಬಳಕ್ಕೆ ಪ್ರಾಮುಖ್ಯತೆ ಕೊಡದೆ ಕೂಡ ಇರಲಾಗುವುದಿಲ್ಲ. ಆದರೆ ಅವೆರಡೇ ಜೀವನವಾಗಬಾರದು ಎಂಬುದು ನನ್ನ ವಿಚಾರ. “ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ” ಎಂಬ ಗಾದೆ ಮಾತೊಂದು ಪ್ರಚಲಿತದಲ್ಲಿದೆ. ಆದರೆ ಕೆಲವೊಮ್ಮೆ ಹಲ್ಲು, ಕಡಲೆ ಎರಡೂ ಇದ್ದು ಕೂಡ ನಾಳೆ ತಿನ್ನುವ ಎಂದು ಕಾಯ್ದಿರಿಸಿ ಕಡಲೆ ಹಾಳಾದ ಮೇಲೆ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ತಂದುಕೊಳ್ಳುತ್ತಿದ್ದೇವೇನೋ ಅನಿಸುವುದಿಲ್ಲವೇ?

“I am very busy” ಎಂದು ಹೇಳಿಕೊಳ್ಳುವುದೇ ಒಂದು ಪ್ರೆಸ್ಟೀಜ್ ಎಂದು ಭಾವಿಸುವ ಒಂದಷ್ಟು ಜನರ ವರ್ಗವನ್ನು ಸಹ ನಾನು ನೋಡಿದ್ದೇನೆ. ಅವರು ಸುಳ್ಳು ಹೇಳುತ್ತಾರೆ ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಇಂದು ಅವರು ಪ್ರೆಸ್ಟೀಜ್ ಎಂದು ಭಾವಿಸುವ ಭಾವ, ಮುಂದೊಂದು ದಿನ ಪಶ್ಚಾತ್ತಾಪವಾಗಿ ಬದಲಾಗುವಾಗ ಬಹುಷಃ ಉಳಿದವರೆಲ್ಲ ಬ್ಯುಸಿ ಆಗಬಹುದು. ಹೀಗೆ ಬದುಕಿನ ಒಂದು ಹಂತದಲ್ಲಿ ಕೆಲವೊಂದು ಕ್ಷಣಗಳು ತುಂಬ ಬೆಲೆಬಾಳುತ್ತವೆ. ಬೆಲೆ ಗೊತ್ತಾಗುವಾಗ ಆ ಸಮಯದ ಗಡಿಯನ್ನು ನಾವು ದಾಟಿ ಬಂದಿರುತ್ತೇವೆ. ಅದಕ್ಕೇ ಗೆಳೆಯರೇ ಬದುಕಿನ ಪ್ರತಿ ಭಾಗವನ್ನು, ಪ್ರತಿ ಘಟ್ಟವನ್ನೂ, ಪ್ರತಿ ಆಗು-ಹೋಗುಗಳನ್ನೂ ಪ್ರೀತಿಯಿಂದ ಆಸ್ವಾದಿಸಿ. ಇನ್ನೂ ನಮ್ಮದಾಗದ ನಾಳೆಗಳಿಗೆ ನಾವು ಎಷ್ಟೊಂದು ಕಾಳಜಿ ವಹಿಸುತ್ತೇವಾದರೆ, ನಮ್ಮ ಸನಿಹ ಬಯಸಿ ಬಂದಿರುವ, ನಮ್ಮ ಸ್ವಂತದ್ದಾಗಿರುವ ಈ ಕ್ಷಣದ ಕುರಿತು ಇನ್ನೆಷ್ಟು ಕಾಳಜಿ ವಹಿಸಬೇಕಲ್ಲವೇ? ಜಯಂತ್ ಕಾಯ್ಕಿಣಿ ಅವರ ಸಾಲೊಂದು ನೆನಪಾಗುತ್ತದೆ “ಹರಕು ನೋಟಿನಂತೆ ಜೀವ ಕದ್ದು ದಾಟುತ್ತಿದೆ, ಇನ್ನೊಂದು ದಿನದ ಕೈಗೆ…” ಅದೆಷ್ಟು ಸರಳ ಹಾಗೂ ಸುಂದರವಾಗಿ ನಮ್ಮ ಜೀವನ ಪಯಣವನ್ನ ವರ್ಣಿಸುತ್ತದೆ ಈ ಸಾಲು ಅಲ್ಲವೇ? ಓದಿದಾಗ ನನಗನಿಸಿದ್ದು; ಹರಕು ನೋಟನ್ನು ಇನ್ನೊಬ್ಬರ ಕೈ ಸೇರುವವರೆಗೆ ಎಷ್ಟು ಕಾಳಜಿಯಿಂದ ಕಾಪಾಡಿಕೊಳ್ಳುತ್ತೇವೊ ಅಂತೆಯೇ ನಮ್ಮ ಈ ಕ್ಷಣದ ಅಥವಾ ಈ ದಿನದ ಬದುಕು. ಅದನ್ನು ಕಳೆಯುವ ಮುನ್ನ ಜಾಗ್ರತೆ ವಹಿಸಬೇಕು. ಇಲ್ಲವಾದರೆ ಯಾರಿಗೂ ಉಪಯೋಗವಿಲ್ಲದೇ ಹೋಗಬಹುದು.

ಗೆಳೆಯರೇ, ಯಾರಿಗೂ ಉಪಯೋಗಕ್ಕೆ ಬಾರದ ಹರಕು ನೋಟಿನಂತೆ ನಮ್ಮ ಬದುಕಾಗದಿರಲಿ ಎಂಬುದೇ ನನ್ನ ಈ ಲೇಖನದ ಆಶಯ. ನಾವು ಇಲ್ಲಿ ಹುಟ್ಟಿದ್ದೇವೆ; ಎನ್ನುವ ಒಂದೇ ಕಾರಣಕ್ಕೆ ಬದುಕು ಸಾಗಿಸುವ ಬದಲು, ಆ ಹುಟ್ಟಿಗೊಂದು ಅರ್ಥ ಕಂಡುಕೊಳ್ಳಲು ಪ್ರಯತ್ನಿಸೋಣ. ಆ ಮೂಲಕ ಇಲ್ಲಿ ಕಳೆವ ಕ್ಷಣಗಳಿಗೊಂದು ಸಾರ್ಥಕತೆ ಕೊಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡೋಣ. ಆ ಸಾರ್ಥಕತೆ ಮೊಟ್ಟಮೊದಲಾಗಿ ನಮಗೆ ನಾವೇ ಕೊಟ್ಟುಕೊಳ್ಳುವ ಆತ್ಮತೃಪ್ತಿಯಾಗಿರಲಿ. ಕಾರಣವೇನೆಂದರೆ, ಎಂದು ನಾವು ಮಾಡುವ ಯಾವುದೇ ಕಾರ್ಯವನ್ನು ನಾವು ಪ್ರೀತಿಸುತ್ತೇವೋ; ಎಂದು ನಮ್ಮ ಆತ್ಮ ಸ್ವಕಾರ್ಯದ ಕುರಿತು ತೃಪ್ತವಾಗುತ್ತದೋ, ಅಂದು ಆ ಕಾರ್ಯದಲ್ಲಿ ಯಶಸ್ಸು ಶತಃಸಿದ್ಧ. ಆದ್ದರಿಂದ ನಮ್ಮನ್ನು ನಾವು ಮೊದಲು ಪ್ರೀತಿಸೋಣ, ಈ ಹುಟ್ಟಿಗೊಂದು ಕೃತಜ್ಞತೆ ಸಲ್ಲಿಸೋಣ, ನಮ್ಮನ್ನು ಪ್ರೀತಿಸುವವರನ್ನು ಚೂರು ಜಾಸ್ತಿ ಪ್ರೀತಿಸೋಣ. ನಗು ಬಂದಾಗ ನಕ್ಕು, ಅಳು ಬಂದಾಗ ಅತ್ತು, ಅವೆರಡೂ ಒಂದಾಗುವ ಸುಸಂದರ್ಭಕ್ಕಾಗಿ ನಿರೀಕ್ಷಿಸೋಣ. ಕೊನೆಗೊಂದು ದಿನ ನಮ್ಮ ಅನುಭವಗಳ ಹೊತ್ತಿಗೆಯ ಪುಟಗಳನ್ನು ಓದುತ್ತಾ ‘ನನ್ನ ಬದುಕು’ ಎಂದು ಹೆಮ್ಮೆಯಿಂದ ಅಂತರಾತ್ಮ ಬೀಗುವಾಗ ಮನಸಿನ ಒಂದು ಮೂಲೆಯಲ್ಲಾಗುವ ಸಿಹಿಯಾದ ಕೋಲಾಹಲವನ್ನು ತುಟಿಯಂಚಿನ ಸಣ್ಣ ಮುಗುಳ್ನಗುವಿನ ಮೂಲಕ ಅನುಭವಿಸೋಣ ಅಲ್ಲವೇ? ನೀವೇನಂತೀರಿ?

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post