ಇತ್ತೊಂದು ದೊಡ್ಡ ಮರ. ಅದರಲ್ಲಿ ಅಳಿವಿಲ್ಲ ಎಂದು ನಂಬಿದ ಅಳಿಲುಗಳ ಪುಟ್ಟ ಸಂಸಾರ. ಯಜಮಾನ ಅಳಿಲಪ್ಪ, ಯಜಮಾನಿ ಅಳಿಲಮ್ಮ. ವಸಂತ ಮಾಸದಲ್ಲಿ ಮರಗಿಡಗಳು ಚಿಗುರೊಡೆಯಲು ಇವರ ಸಂಭ್ರಮ ಹೇಳತೀರದು.ಅಳಿಲಮ್ಮನದಂತೂ ತರಾತುರಿಯ ಓಡಾಟ. ಸಣ್ಣಪುಟ್ಟ ಎಲೆ ಸಹಿತ ಎಳೆ ಕಡ್ಡಿಗಳನ್ನು ಬಾಯಲ್ಲಿ ಮುರಿದು ಮರದ ಟೊಂಗೆಯ ಮಧ್ಯೆ ರಾಶಿ ಹಾಕಿ ಕುಣಿಯುತ್ತಾ,ಚಿಕ್ಕ ಚೊಕ್ಕವಾಗಿ ಗೂಡು ಕಟ್ಟುವಳು. ಕಾಳು,ಬೀಜ,ಪುಟ್ಟ ಹಣ್ಣು ಸಿಕ್ಕರೆ ನೆಲದಲ್ಲಿ ಹೂತಿಡುವಳು. ಇಷ್ಟು ದೊಡ್ಡವಳಾದರೂ ಚಿಕ್ಕ ಮಗುನಂತೆ ನಲಿವ ಅವಳೆಂದರೆ ಅಳಿಲಪ್ಪನಿಗೆ ತುಂಬಾ ಪ್ರೀತಿ. ಇಬ್ಬರೂ ಮನುಷ್ಯ ಪ್ರಾಣಿ ಇರದ ಸಮಯ ನೋಡಿ ಹತ್ತಿರದ ಉದ್ಯಾನವನಕ್ಕೆ ಹೋಗಿ, ತಿಂದಿದ್ದು ಕರಗುವವರೆಗೂ ಓಡಿ ಓಡಿ ಹಿಡಿಯುವ ಆಟವಾಡುವರು. ಅವನು ತಂದ ಹಣ್ಣನ್ನು ಕಚ್ಚಿಕೊಂಡು ಓಡುವ ಅವಳನ್ನು ಬೆನ್ನಟ್ಟಲು ಅವಗೆ ಖುಷಿಯೋ ಖುಷಿ. ಹೀಗಿರಲು ನಮ್ಮೊಡನೆ ಒಂದು ಪುಟ್ಟ ಮರಿಯೂ ಇದ್ದರೆ ಚೆನ್ನ ಎಂದು ಇಬ್ಬರಿಗೂ ಅನ್ನಿಸುತ್ತಿತ್ತು. ಈ ಹಿಂದೆ ಹುಟ್ಟಿದ ಎರಡು ಎಳೆ ಮರಿಗಳೂ ಆಯತಪ್ಪಿ ಕೆಳಗೆ ಬಿದ್ದಾಗ ಕಾರೊಂದಕ್ಕೆ ಸಿಲುಕಿ ಸತ್ತಿದ್ದು ನೆನಪಾದರೆ ಅಳಿಲಮ್ಮನಿಗೆ ದುಃಖ ತಡೆಯಲು ಆಗುವುದಿಲ್ಲ. ಮನುಷ್ಯರೆಂಬ ನಿಷ್ಕರುಣಿಗಳಿಗೆ ಒಳಿತಾಗದಿರಲಿ ಎಂದು ಶಪಿಸುವಳು. ಅಂತಹ ಕಷ್ಟಕ್ಕಿಂತ ಮಕ್ಕಳೇ ಬೇಡವೆಂದು ಅವಳ ಹಠ. ಪ್ರಕೃತಿ ಸುಮ್ಮನಿದ್ದೀತೇ? ಮತ್ತೊಮ್ಮೆ ಅಳಿಲಮ್ಮನ ಗರ್ಭದಲ್ಲಿ ಜೀವವೊಂದು ಉದಯಿಸಿತು. ಈ ಬಾರಿ ಅವಳು ತುಂಬಾ ಜಾಗ್ರತೆಯಿಂದ ಮರಿಯನ್ನು ಕಾದಳು. ಆಹಾರವನ್ನು ಅರಸಲು ಒಬ್ಬರು ಹೋದರೆ,ಇನ್ನೊಬ್ಬರು ಮರಿಯ ಬಳಿಯೇ ಇದ್ದು ಕಾಯುವರು. ಸ್ವಲ್ಪ ಮಿಸುಕಾಡಿದರೂ ಜಾಗರೂಕರಾಗುವರು. ದಿನಗಳು ಕಳೆದಂತೆ ಮರಿಯು ಕಣ್ಣು ಪಿಳಿಕಿಸುವುದನ್ನು ಕಂಡು ಇಬ್ಬರಿಗೂ ಆನಂದ. ಮರಿ ಗೂಡಿನಿಂದ ಜಾರದಂತೆ ಉಗುರನ್ನು ಊರಲು ಕಲಿತ ನಂತರ ಸ್ವಲ್ಪ ನೆಮ್ಮದಿ. ಈಗೀಗ ಇಬ್ಬರೂ ಹೊರಗೆ ಹೋಗುವುದುಂಟು. ಹೀಗೆ ದಂಪತಿಗಳು ಮರಿಯೊಂದಿಗೆ ಆಟದ ಕನಸು ಕಾಣುತ್ತಿದ್ದರೆ ವಿಧಿಯ ಆಟ ಬೇರೆಯೇ ಆಗಿತ್ತು.ಒಮ್ಮೆ ಅಳಿಲಪ್ಪ ಹಣ್ಣು ತರಲು ಪಕ್ಕದ ಸೇಬಿನ ಮರಕ್ಕೆ ಹೋಗಿದ್ದರೆ,ಅಳಿಲಮ್ಮ ಮಗುವಿಗೆ ಇಷ್ಟವಾದ ಚೆರ್ರಿ ತರಲು ಹೋದಳು. ಇದ್ದಕ್ಕಿದ್ದಂತೆ ಒಂದು ದೊಡ್ಡ ಯಂತ್ರ ಗೂಡಿನ ಮರದ ಬಳಿ ನಿಂತಿತು. ಎದೆ ಧಸಕ್ಕೆಂದದ್ದಷ್ಟೇ ಅಳಿಲಪ್ಪನ ಹೃದಯ ನಿಂತಿತು. ಚೆರ್ರಿ ಕಚ್ಚಿಕೊಂಡು ಬರುತ್ತಿದ್ದ ಅಳಿಲಮ್ಮನ ಕಂಗಳಲ್ಲಿ ನೀರಿನ ಧಾರೆ. ನಡುಗುತ್ತಲೇ ಪಕ್ಕದ ಪೈನ್ ಮರವೇರಿ ಅವಿತು ಗೂಡನ್ನು ನೋಡತೊಡಗಿದಳು. ಕ್ಷಣ ಯುಗವಾಯಿತು. ಭಯಂಕರ ಶಬ್ದದೊಡನೆ ಯಂತ್ರವು ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಮರದ ರೆಂಬೆಕೊಂಬೆಗಳನ್ನು ಕತ್ತರಿಸಿ ಎಸೆಯತೊಡಗಿತು.ಅಳಿಲಮ್ಮ ಉಸಿರಾಟವನ್ನೇ ಮರೆತಳು. ಆಗಲೇ ಗೂಡಿದ್ದ ಕೊಂಬೆ ಅಲ್ಲಾಡುತ್ತಾ ಬಿದ್ದು ಹೋಯಿತು.ಶಬ್ದಕ್ಕೆ ಹೆದರಿದರೆ ಮರಿಯ ಹೃದಯ ಬಡಿತ ಹೆಚ್ಚಲು, ಯಂತ್ರದೊಂದಿಗೆ ಆಡುತ್ತಿದ್ದ ಮನುಷ್ಯರು ಏನೇನೋ ಹೇಳುತ್ತಾ ಮರಿಯನ್ನು ಸುತ್ತುವರೆದರು. ಕಪ್ಪಗಿನ ವಸ್ತುವನ್ನು ಕ್ಲಿಕ್ ಕ್ಲಿಕ್ ಎನಿಸಿದ ಧಡಿಯನೊಬ್ಬ ಮರಿಯನ್ನೆತ್ತಿ ಜೇಬಿನೊಳಗೆ ಸೇರಿಸಿದ. ಅಷ್ಟೇ ಅಳಿಲಮ್ಮ ತನ್ನ ಸಂಸಾರದ ಸುಖ ನುಚ್ಚುನೂರಾಯಿತೆಂದು ಕೊರಗುತ್ತಾ ರೆಂಬೆಯನ್ನು ತಬ್ಬಿದಳು. ಕೆಲಸ ಮುಂದುವರೆದು ಮುಗಿಯಲು,ಧಡಿಯನು ತರಗೆಲೆಗಳನ್ನೆಲ್ಲಾ ಒಗ್ಗೂಡಿಸಿ ಗೂಡಿನಂತೆ ಮಾಡಿ ಮರದ ಮೂಲೆಯಲ್ಲಿಟ್ಟು ನಡುಗುವ ಮರಿಯನ್ನೆತ್ತಿ ಮಲಗಿಸಿ ಮೈದಡವುತ್ತಾ ಅದರೊಳಗಿಟ್ಟ. ಬೆರಗಿನಿಂದ ನೋಡಿದ ಅಳಿಲಮ್ಮ ನನಗೇನಾದರೂ ಮಾಡಿಯಾನೆಂದು ಹತ್ತಿರ ಹೋಗುವ ಧೈರ್ಯ ಮಾಡದೇ ಅಲ್ಲೇ ಕುಳಿತಳು.ಯಂತ್ರ ಭರ್ರನೆ ಹೊರಟೊಡನೆ ಮರಿಯನ್ನು ಕಚ್ಚಿ ಇನ್ನೊಂದು ಸುರಕ್ಷಿತ ಮರದೆಡೆಗೆ ಸಾಗಿದಳು.ಅವಳಲ್ಲದ್ದ ಮನುಷ್ಯರೆಲ್ಲ ನಿಷ್ಕರುಣಿಗಳೆಂಬ ಭಾವ ಕರಗಿತು.ಅಲ್ಲೋಲಕಲ್ಲೋಲವಾದ ಸಂಸಾರದಲ್ಲಿ ಮುಂಚಿನ ಸಂತೋಷ ಮಾತ್ರ ಮಾಯವಾಗಿತ್ತು.
-ದಿವ್ಯಶ್ರೀ ಸೋಮಾಯಾಜಿ
divyasrihs@gmail.com
Facebook ಕಾಮೆಂಟ್ಸ್