X

ಅಡಿಕೆ ತೋಟ ವಿಸ್ತರಣೆ : ಮತ್ತೊಮ್ಮೆ ಯೋಚಿಸಬೇಕಿದೆ!

ಅಡಿಕೆಗೆ ಈಗಂತು ಅತ್ಯುತ್ತಮ ಧಾರಣೆ. ಮುನ್ನೂರರಿಂದ ಮುನ್ನೂರ ಮೂವತ್ತೈದರ ಆಸುಪಾಸಿನ ಧಾರಣೆಯೆಂದರೆ ಅದು ಕಡಿಮೆಯೇನಲ್ಲ. ಬೆಳೆಗಾರರಾದ ನಮಗೆ ಮುನ್ನೂರೈವತ್ತು ದಾಟಿ ನಾನ್ನೂರಾದರೂ ತೃಪ್ತಿ ಕಡಿಮೆ. ಬಹಳಷ್ಟು ಬೆಳೆಗಾರರು ಇನ್ನೂ ಅಡಿಕೆಯನ್ನು ಮಾರುಕಟ್ಟೆಗೆ ಬಿಡದೆ ಕಾಯ್ದಿಟ್ಟುಕೊಂಡಿದ್ದಾರೆ. ಮುನ್ನೂರ ಹದಿನೈದು ಆದರೆ ಇಪ್ಪತ್ತಾಗಲಿ ಅಂತ. ಇಪ್ಪತ್ತಾದರೆ ಎರಡು ರೂಪಾಯಿ ಏರಿಕೆಯಾಗೊತ್ತೊ ನೋಡೋಣ ಎರಡು ದಿವಸ ಎಂಬ ತವಕ. ಆಸೆಗೆ ಮಿತಿ ಇಲ್ಲ ಎಂಬುದು ಸಾಮಾನ್ಯ. ಆದರೆ ಈ ಅತಿ ಆಸೆ ನಾಳೆ ತೊಂದರೆಗಳಿಗೆ ಸಿಲುಕಿ ನಲುಗಿಹೋಗಬಾರದಲ್ಲ ಎಂಬುದು ಒಂದಷ್ಟು ಆತಂಕಕ್ಕೆ ಕಾರಣ. ಈ ಧಾರಣೆಯ ಗಟ್ಟಿ ಸ್ಥಿತಿ ಕೃಷಿಕರನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆಯೆಂದರೆ ಇನ್ನೂ ಒಂದಷ್ಟು ಅಡಿಕೆ ತೋಟ ವಿಸ್ತರಣೆಯತ್ತ. ಒಂದೆಡೆಯಲ್ಲಿ ಕಾರ್ಮಿಕರ ಕೊರತೆ, ನೀರಿನ ಕೊರತೆ, ಕೃಷಿ ಕಾರ್ಯಗಳನ್ನು ಮಾಡಲು ಯುವ ಕೃಷಿಕರ ಅಲಭ್ಯತೆಗಳ ಬಗ್ಗೆ ಗೋಳುಹೊಯ್ಯುತ್ತಿರುವವರೆ ಈಗ ತೋಟ ವಿಸ್ತರಣೆಯ ಮುಂಚೂಣಿಯಲ್ಲಿರುವುದಂತು ಸೋಜಿಗ. ಅಂದು ವೆನಿಲ, ನಂತರ ರಬ್ಬರ್ ಕೃಷಿಗೆ ಹುಚ್ಚುಕಟ್ಟಿದಂತೆ ಈಗ ಅಡಿಕೆಯತ್ತ ಕೃಷಿಕರ ಮನ ತುಡಿಯುತ್ತಿದೆ. ತೋಟದ ಬದಿಯಲ್ಲಿರುವ ಖಾಲಿ ಜಾಗ. ಹತ್ತಿರದ ಗುಡ್ಡದಲ್ಲಿರುವ ಅಡಿಕೆ ಬೆಳೆಸಬಹುದಾದ ನೆಲವೆಲ್ಲ ಇನ್ನು ಹೊಸ ಹೊಸ ಅಡಿಕೆ ತೋಟಗಳಾಗುವುದು ಖಂಡಿತ. ಕೊಳವೆ ಬಾವಿಗಳಿಗೆ ಗುರುತು ಮಾಡುವವರಿಗೆ, ಕೊಳವೆ ಬಾವಿ ಕೊರೆಯಿಸುವ ಏಜಂಟರಿಗಂತು ಸುಗ್ಗಿಯೊ ಸುಗ್ಗಿ. ಅಡಿಕೆ ಬೆಳೆಗಾರರಾದ ನಾವು ನಮ್ಮಲ್ಲಿ ಕೇಳಬೇಕಾದ ಪ್ರಶ್ನೆಯೊಂದಿದೆ. ಅದು ಈ ವಿಸ್ತರಣೆ ನ್ಯಾಯವೆ? ಅಗತ್ಯವೆ? ಎಂಬುದು.

ಬಯಲು ಸೀಮೆಗೂ ವಿಸ್ತರಣೆ

ಭತ್ತ, ಕಬ್ಬು ಮುಂತಾದ ಆಹಾರ ಬೆಳೆಗಳು ಬೆಳೆಯುವಲ್ಲಿ ಈಗ ಅಡಿಕೆ ಕೃಷಿ ವಿಸ್ತರಣೆಯಾಗುತ್ತಿದೆ. ನೂರು ಇನ್ನೂರು ಗಿಡಗಳ ಲೆಕ್ಕಾಚಾರದಲ್ಲಿ ಅಲ್ಲ. ಸಾವಿರ ಸಾವಿರ ಲೆಕ್ಕಾಚಾರದಲ್ಲಿ. ಇಲ್ಲಿ ಕೃಷಿ ಕೆಲಸ ನಮ್ಮಲ್ಲಿಯಷ್ಟು ಕಷ್ಟ ಇಲ್ಲ. ಕೊಳೆರೋಗದ ತೊಡಕು ಇಲ್ಲ. ಯಾಂತ್ರೀಕೃತ ಕೃಷಿಗೆ ಹೇಳಿ ಮಾಡಿಸಿದ ನೆಲ. ಮಣ್ಣಂತು ಬಹಳ ಫಲವತ್ತಾದುದು. ಫಸಲಂತು ಬಹಳ ದೊಡ್ದ ಮಟ್ಟಿಗೆ ಕೈಸೇರಬಹುದು. ಅವರು ಕೆಂಪಡಿಕೆ ಮಾಡಲಿ, ಚಾಲಿಯೆ ಮಾಡಲಿ ಒಟ್ಟು ಅಡಿಕೆ ಮಾರುಕಟ್ಟೆಯಲ್ಲಿ ಅಲ್ಲಿಯವರು ಗಟ್ಟಿಕುಳಗಳಾಗಿ ಬಿಂಬಿತರಾಗುವುದಂತು ಖಂಡಿತ. ಈಗ ಇರುವ ಅಡಿಕೆಯ ಉತ್ಪಾದನೆ ಮತ್ತು ಇನ್ನು ಸಧ್ಯೋಭವಿಷ್ಯದಲ್ಲಿ ಬರಲಿರುವ ಮತ್ತಷ್ಟು ಪ್ರಮಾಣದ ಅಡಿಕೆಯ ಉತ್ಪಾದನೆಯನ್ನು ಒಗ್ಗೂಡಿಸಿದರೆ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿ ಬಿಡಬಹುದು.

ಅಡಿಕೆಯ ಭವಿಷ್ಯ?

ಅಡಿಕೆ ಸಧ್ಯಕ್ಕಂತು ಉಪಯೋಗವಾಗುವುದು ಬಹಳ ಮಟ್ಟಿಗೆ ಜಗಿದು ಉಗುಳಲು ಮಾತ್ರ. ಬೇರೆ ಬೇರೆ ಮೌಲ್ಯವರ್ಧನೆಗಳಾಗಿದ್ದರೂ ಅದು ಬಹಳ ಸಣ್ಣ ಪ್ರಮಾಣದಲ್ಲಿ ಅಡಿಕೆಯನ್ನು ಉಪಯೋಗಿಸುತ್ತದೆ ಅಷ್ಟೆ. ಜಗಿದು ಉಗುಳುವ ಜಾಯಮಾನ ಎಷ್ಟು ಸಮಯ ನಮ್ಮ ಜನರಲ್ಲಿ ಉಳಿದೀತು ಎಂಬ ದೊಡ್ಡ ಪ್ರಶ್ನೆಯನ್ನು ಹಲವರು ನಮ್ಮ ಮುಂದಿಡುತ್ತಿದ್ದಾರೆ. ಯುವ ಜನಾಂಗವಂತು ಈ ಜಗಿಯುವ ಅಭ್ಯಾಸದಿಂದ ದೂರ ಉಳಿಯುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬರುತ್ತಿದೆ. ಗುಟ್ಕಾ ನಿಷೇಧ ಮತ್ತು ಯುವ ಜನರಲ್ಲಿ ಮೂಡುತ್ತಿರುವ ಸಾಮಾಜಿಕ ಪ್ರಜ್ಞೆ ಮತ್ತು ಜಾಗೃತಿ ಇಂತಹ ಹವ್ಯಾಸಗಳಿಂದ ಒಂದು ಅಂತರ ಕಾಯ್ದುಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕೆಲವೊಂದು ಅಭಿಪ್ರಾಯಗಳ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ಅಡಿಕೆಯ ಬೇಡಿಕೆ ಗಣನೀಯವಾಗಿ ಇಳಿದು ಬಿಡಬಹುದು. ಇದು ಆಗಿದ್ದೇ ಆದರೆ ಒಟ್ಟು ಅಡಿಕೆ ಕೃಷಿಯ ಮೇಲೆ ಮತ್ತು ಅದನ್ನು ನಂಬಿರುವ ವಲಯಗಳ ಮೇಲೆ ಕಾರ್ಮೋಡದ ಛಾಯೆ ಕವಿಯುವುದು ನಿಶ್ಚಯ. ಸರಿಯಾಗಿ ಯೋಚನೆ ಮಾಡಿದರೆ ನಮಗೆ ಇದು ಆಗಿ ಹೋಗಬಹುದು. ಸಾಧ್ಯತೆ ಇದೆ. ಈ ಭಯ ಪಡುವುದರಲ್ಲಿ ಒಂದು ಆತಂಕದ ಸುಳಿವು ಇದೆ ಎಂಬುದು ಅನಿಸಿಬಿಡುತ್ತಿದೆ.

ಆತಂಕಗಳು ಹಲವು

ಭೂಮಿಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಕೊಳವೆ ಬಾವಿಗಳು ಆಳಕ್ಕಿಳಿದರೂ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಈ ವರ್ಷ ಇದ್ದ ನೀರಿನ ಸೆಲೆ ಮುಂದಿನ ವರ್ಷಕ್ಕೆ ಮಾಯ. ಈಗಾಗಲೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನೀರಾವರಿ ಬೇಕಾದಷ್ಟು ಸಿಗುವ ಅಡಿಕೆ ತೋಟಗಳು ಕಡಿಮೆ. ಪರಿಸ್ಥಿತಿ ಇಷ್ಟು ಶೋಚನೀಯವಾಗಿದ್ದರೂ ಮತ್ತೆ ಅಡಿಕೆ ತೋಟ ವಿಸ್ತರಣೆಯ ಭ್ರಮೆ ನಮ್ಮಲ್ಲಿ ಮೂಡುತ್ತಿರುವುದು ಬೇಸರದ ಸಂಗತಿ. ಅಡಿಕೆ ಕೃಷಿಕರು ಈಗಾಗಲೆ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ತತ್ತರಿಸುತ್ತಿದ್ದರೆ. ಕಾಲ ಕಾಲಕ್ಕೆ ಕೊಳೆರೋಗ ನಿರೋಧಕ ಮದ್ದು ಸಿಂಪಡಣೆ ಆಗುತ್ತಿಲ್ಲ. ಕೊಯ್ಲು ಅಡಿಕೆ ಹಣ್ಣಾದ ಸಮಯಕ್ಕೆ ಒದಗುತ್ತಿಲ್ಲ. ಒಂದೆಡೆಯಲ್ಲಿ ಹಳದಿ ರೋಗದ ಮಾಯೆಯ ಮುಸುಕಲ್ಲಿ ಅನೇಕ ಅಡಿಕೆ ಕೃಷಿಕರು ದಾರಿಕಾಣದ ಸ್ಥಿತಿಯಲ್ಲಿರುವಾಗ ಮತ್ತೆ ಮತ್ತೆ ಸಮಸ್ಯೆಗಳನ್ನೆ ಕಾಲಿಗೆ ಸುತ್ತಿಸಿಕೊಳ್ಳಬೇಕಾದ ಅಗತ್ಯವಿದೆಯೆ ಎಂಬುದು ಪ್ರಶ್ನೆ.

ಆಹಾರ ಬೆಳೆಗಳತ್ತ ಗಮನ

ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಆರ್ಥಿಕ ಬೆಳೆಗಳ ಜೊತೆಗೆ ಆಹಾರ ಬೆಳೆಗಳು ಈ ಹೊತ್ತಿನಲ್ಲಿ ಹೆಚ್ಚಾಗಬೇಕಾದ ಅಗತ್ಯ ಬಹಳಷ್ಟು ಇದೆ. ಅದರತ್ತ ಕೃಷಿಕರ ಗಮನ ಹರಿಯಬೇಕಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆಯಾಗುವ ಆಹಾರ ಬೆಳೆಗತ್ತ ಚಿತ್ತ ನೆಟ್ಟರೆ ಭವಿಷ್ಯದಲ್ಲಿ ಅಡಿಕೆ ಮಾರುಕಟ್ಟೆ ಡೋಲಾಯಮಾನವಾದರೂ ಭಯವಿಲ್ಲ. ಆತಂಕಗಳಿಗೆ ಅವಕಾಶಗಳಿಲ್ಲ.

ಶಂ.ನಾ.ಖಂಡಿಗೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post