ಚಿತ್ರ : ಕಿಲ್ಲಿಂಗ್ ವೀರಪ್ಪನ್
ನಿರ್ದೇಶನ : ರಾಮ್ ಗೋಪಾಲ್ ವರ್ಮ
ತಾರಾಗಣ : ಶಿವರಾಜ್ ಕುಮಾರ್, ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್, ರಾಜೇಶ್ ನಟರಂಗ, ಪಾರುಲ್ ಯಾದವ್
ರಾಮ್ ಗೋಪಾಲ್ ವರ್ಮ..
ಈ ಒಂದು ಹೆಸರೇ ಸಾಕು. ಆತನ ಚಿತ್ರದ ವಿಮರ್ಶೆಯನ್ನು ಸ್ವತಃ ಆ ಹೆಸರೇ ಹೇಳುತ್ತದೆ. ರಾಮ್ ಗೋಪಾಲ್ ವರ್ಮ ಅನ್ನುವ ಹೆಸರೇ ಒಂದು ಬ್ರಾಂಡ್ ನೇಮ್ .. ವರ್ಮ ನಿರ್ದೇಶನದ ಚಿತ್ರಗಳು ಆ ಮಟ್ಟದಲ್ಲಿರುತ್ತವೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ವರ್ಮಾರಂತೆ ತಾಂತ್ರಿಕವಾಗಿ ಅಪ್-ಡೇಟ್ ಆಗಿರುವ ಮತ್ತೊಬ್ಬ ನಿರ್ದೇಶಕ ಸಿಗಲಾರ. ಅದೊಂದೇ ಕಾರಣ ಸಾಕಿತ್ತು ‘ಕಿಲ್ಲಿಂಗ್ ವೀರಪ್ಪನ್’ ಬಗ್ಗೆ ನಿರೀಕ್ಷೆ ಹುಟ್ಟಲು.
ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕುರಿತಾದ ಕೆಲವೊಂದಿಷ್ಟು ಚಿತ್ರಗಳು ಈಗಾಗಲೇ ಬಂದಿವೆ. ಅವುಗಳಲ್ಲಿ ಕೆಲ ವರ್ಷಗಳ ಹಿಂದೆ ಬಂದ ‘ಅಟ್ಟಹಾಸ’ ಚಿತ್ರ ಮಾತ್ರ ಮೆಚ್ಚುಗೆ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಕೊಂಚ ದುಡ್ಡು ಮಾಡಿತ್ತು. ಆದರೆ ‘ಕಿಲ್ಲಿಂಗ್ ವೀರಪ್ಪನ್’ ಮಾತ್ರ ಅವೆಲ್ಲವುಗಳಿಗಿಂತ ಭಿನ್ನವಾಗಿ ಹಾಗು ಮೇರು ಚಿತ್ರವಾಗಿ ಮೂಡಿ ಬಂದಿದೆ. ಕಾರಣ ಇಲ್ಲಿಯವರೆಗೆ ನೋಡದ ವೀರಪ್ಪನ್ ಅನ್ನು ಇಲ್ಲಿ ನೋಡಬಹುದು. ವೀರಪ್ಪನ್ ಬಗ್ಗೆಇಲ್ಲಿಯವರೆಗೆ ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ತೆರೆ ಮೇಲೆ ತಂದಿಡುವ ಧೈರ್ಯ ತೋರಿದ್ದಾರೆ ನಿರ್ದೇಶಕರು. ವರನಟ ರಾಜಕುಮಾರ್ ಅಪಹರಣದ ಸಂದರ್ಭ ಏನು ನಡೆಯಿತು , ಆ ನಂತರ ವೀರಪ್ಪನ್ ಹೊಂದಿದ್ದ ಯೋಜನೆಗಳ್ಯಾವುವು, ಅದನ್ನು ವಿಫಲಗೊಳಿಸಲು ಎಸ್.ಟಿ.ಎಫ್ ನಡೆಸಿದ ಕಾರ್ಯಾಚರಣೆ ಅವೆಲ್ಲವನ್ನು ತೆರೆಯ ಮೇಲೆ ನೋಡುವುದೇ ಚಂದ. ಅಷ್ಟೇ ಅಲ್ಲದೆ ನೀವು ಇಲ್ಲಿಯವರೆಗೆ ನೋಡಿರದ ಶಿವರಾಜ್ ಕುಮಾರ್ ಅನ್ನು ಕಾಣಬಹುದು. ಶಿವಣ್ಣ ಅವರನ್ನು ಇಷ್ಟಪಡದವರು ಕೂಡ ಚಿತ್ರ ನೋಡಿ ಬಂದ ಮೇಲೆ ಶಿವಣ್ಣನ ಪಾತ್ರವನ್ನು, ಗಂಭೀರ ಅಭಿನಯವನ್ನು ಮೆಚ್ಚದೆ ಇರಲಾರರು. ಶಿವಣ್ಣ ಅವರ ಚಿತ್ರಬದುಕಿನ ಮೇರು ಚಿತ್ರಗಳಲ್ಲಿ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಆದರೆ ಅವೆಲ್ಲ ಕೀರ್ತಿ ನೇರವಾಗಿ ಸಲ್ಲುವುದು ಮಾತ್ರ ರಾಮ್ ಗೋಪಾಲ್ ವರ್ಮ ಅವರಿಗೆ.
‘ಕಿಲ್ಲಿಂಗ್ ವೀರಪ್ಪನ್’ ಎಲ್ಲಿಯೂ ಬೋರ್ ಹುಟ್ಟಿಸುವುದಿಲ್ಲ. ಬಹುಶಃ ಚಿತ್ರದಲ್ಲಿ ವರ್ಮ ಹೇಳಿರುವ ಕತೆ ಜನರಿಗೆ ಇಲ್ಲಿಯವರೆಗೆ ತಿಳಿಯದ ಕಾರಣ ಚಿತ್ರ ಪ್ರತಿ ದೃಶ್ಯದಿಂದ ದೃಶ್ಯಕ್ಕೆ ಥ್ರಿಲ್ಲಿಂಗ್ ಆಗುತ್ತಾ ಸಾಗುತ್ತದೆ. ಚಿತ್ರಕತೆಯ ಹಿಡಿತ ಎಷ್ಟಿದೆ ಅಂದರೆ ಚಿತ್ರದ ಆರಂಭದಲ್ಲಿ ಪರದೆಯತ್ತ ದೃಷ್ಟಿ ನೆಟ್ಟ ಪ್ರೇಕ್ಷಕ ಯಾವುದೇ ಕಾರಣಕ್ಕೂ ಚಿತ್ರದ ಅಂತ್ಯದವರೆಗೂ ಪರದೆಯಿಂದ ದೃಷ್ಟಿ ಬದಲಿಸುವುದಿಲ್ಲ. ಚಿತ್ರದ ಪ್ರತಿ ದೃಶ್ಯಗಳಲ್ಲೂ ಅಂತಹ ಒಂದು ಶಕ್ತಿ ಇದೆ. ಅದಕ್ಕೆ ಪೂರಕವಾಗಿ ಅದ್ಭುತ ರೀ-ರೆಕಾರ್ಡಿಂಗ್ ಹಾಗು ಹಿನ್ನಲೆ ಸಂಗೀತ, ವಾವ್ ಎನಿಸುವ ಛಾಯಾಗ್ರಹಣ, ಉತ್ತಮ ಸಂಕಲನ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಚಿತ್ರದಲ್ಲಿ ಅನವಶ್ಯಕ ಆಡಂಬರಗಳಿಲ್ಲ. ಪ್ರತಿ ಪಾತ್ರಗಳು ಯಾವುದೇ ಇಂಟ್ರಡಕ್ಷನ್ ಇಲ್ಲದೇ ಆರಂಭವಾಗುತ್ತವೆ. ಅದರಲ್ಲೂ ಶಿವರಾಜ್ ಕುಮಾರ್ ಎಂಟ್ರಿ ಎಷ್ಟು ಸರಳವಾಗಿದೆ ಅಂದರೆ ಶಿವಣ್ಣನ ಇಲ್ಲಿಯವರೆಗಿನ ಚಿತ್ರಗಳಲ್ಲಿ ಅಷ್ಟು ಸರಳ ರೀತಿಯ ಎಂಟ್ರಿ ಆಗಿರಲಿಕ್ಕಿಲ್ಲ. ಎಸ್.ಟಿ.ಎಫ್ ಕಚೇರಿಯಲ್ಲಿ ಮೀಟಿಂಗ್ ನಡೆಯುವಾಗ ಅಷ್ಟೇನೂ ಬೆಳಕಿರದ ಒಂದು ಮೂಲೆಯಲ್ಲಿ ನಿದ್ರೆ ಮಾಡುತ್ತಿರುವ ಮೂಲಕ ಚಿತ್ರದ ನಾಯಕನ ಎಂಟ್ರಿ. !! ರಾಮ್ ಗೋಪಾಲ್ ವರ್ಮ ಇಷ್ಟವಾಗುವುದು ಇಂತಹದೇ ಕಾರಣಗಳಿಗಾಗಿ.
ಕಲಾವಿದರ ಆಯ್ಕೆಯಲ್ಲೂ ನಿರ್ದೇಶಕ ಜಾಣ್ಮೆ ಮೆರೆದಿದ್ದಾರೆ. ವೀರಪ್ಪನ್ ಪಾತ್ರಧಾರಿ ಮಹಾರಾಷ್ಟ್ರದ ರಂಗಭೂಮಿ ಕಲಾವಿದ ಸಂದೀಪ್ ಭಾರದ್ವಾಜ್ ಮೇಕಪ್ ಮ್ಯಾನ್ ಕೈಚಳಕದಿಂದ ಥೇಟ್ ವೀರಪ್ಪನ್ ಅಂತೆಯೇ ಕಂಡು ಬರುತ್ತಾರೆ. ಭಾರದ್ವಾಜ್ ಅಭಿನಯ ಅಂತೂ ಮನೋಜ್ಞ.. ಕಣ್ಣಲ್ಲೇ ಮಾತನಾಡುವ ಶೈಲಿ, ಥೇಟ್ ವೀರಪ್ಪನ್ ವಾಕಿಂಗ್ ಸ್ಟೈಲ್, ಒಟ್ಟಿನಲ್ಲಿ ವೀರಪ್ಪನ್ ಅನ್ನು ತನ್ನೊಳಗೆ ಆಹ್ವಾನಿಸಿಕೊಂಡಂತಿದೆ ಅವರ ಅಭಿನಯ. ಉಳಿದಂತೆ ಸಂಚಾರಿ ವಿಜಯ್ , ರಾಜೇಶ್ ನಟರಂಗ, ಪಾರುಲ್ ಯಾದವ್, ಯಜ್ಞಾ ಶೆಟ್ಟಿ ಚಿತ್ರದ ಪ್ಲಸ್ ಪಾತ್ರಗಳು.
ಕಿಲ್ಲಿಂಗ್ ವೀರಪ್ಪನ್ ಚಿತ್ರಕತೆಗಾಗಿ ಹಲವು ವರ್ಷ ಪಟ್ಟ ಶ್ರಮ ಚಿತ್ರವನ್ನು ಶ್ರೀಮಂತವಾಗಿಸಿದೆ. ಚಿತ್ರದಲ್ಲಿ ಋಣಾತ್ಮಕ ಅಂಶಗಳು ಹುಡುಕಲು ಹೋದರೂ ಸಿಗುವುದಿಲ್ಲ. ಚಿತ್ರ ನೋಡಿ ಹೊರ ಬಂದ ಮೇಲೂ ಚಿತ್ರ ಮತ್ತೆ ಮತ್ತೆ ಕಾಡುತ್ತದೆ ಅಂದರೆ ವರ್ಮಾ ಇಂದ್ರಜಾಲದ ಅರಿವಾಗುತ್ತದೆ. ಒಟ್ಟಿನಲ್ಲಿ ವರ್ಮಾ ಕನ್ನಡದಲ್ಲಿ ತನ್ನ ಚೊಚ್ಚಲ ಪ್ರಯತ್ನದಲ್ಲೇ ಸಿಕ್ಸರ್ ಬಾರಿಸಿದ್ದಾರೆ. ನೀವು ಕೂಡ ವರ್ಮಾ ಇಂದ್ರಜಾಲದ ಅನುಭವನ್ನು ಕಳೆದುಕೊಳ್ಳಬೇಡಿ. ಚಿತ್ರ ಮಂದಿರದಿಂದ ಹೊರ ಬಂದ ಮೇಲೂ ಚಿತ್ರ ನಿಮ್ಮನ್ನು ಕಾಡದಿದ್ದರೆ ಹೇಳಿ..
Ashwin Amin Bantwal
ashwins999@gmail.com
Facebook ಕಾಮೆಂಟ್ಸ್