X

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್

ಇವ್ರು ಬರೋವರೆಗೆ ಮಾತ್ರ ಬೇರೆಯವರ ಹವಾ, ಇವ್ರು ಬಂದ್ಮೇಲೆ ಇವ್ರ್ದೇ ಹವಾ…
ಈ ನಟ ಸಿನಿಮಾ ರಂಗಕ್ಕೆ ಬಂದಾಗ ಯಾರೂ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಿಲ್ಲ. ಚಿತ್ರರಂಗಕ್ಕೆ ತನ್ನ ಹೆಸರಿನ ಹಿಂದೆ ಮುಂದೆ ಯಾವುದೇ ಗಾಡ್ ಫಾದರ್ ಹೆಸರು ಮತ್ತು ನೆರವಿಲ್ಲದೇ ಕಾಲಿಟ್ಟವರು. ಆದರೆ ಇವರು ಸ್ಯಾಂಡಲ್ ವುಡ್’ನ ಸದ್ಯದ ಬಾಕ್ಸ್ ಆಫೀಸ್ ಕಿಂಗ್, ಗಾಂಧಿನಗರದ ಗೆಲ್ಲೋ ಕುದುರೆ. ಹೌದು. ಸದ್ಯ ಕನ್ನಡ ಚಿತ್ರರಂಗದಲ್ಲಿ ಎಲ್ಲೆಲ್ಲೂ ಯಶ್ ಹವಾ. ಸಾಲು ಸಾಲು ಕನ್ನಡ ಚಿತ್ರಗಳು ತೋಪೆದ್ದು ಮಕಾಡೆ ಮಲಗುತ್ತಿವೆಯಾದರೂ ಕನ್ನಡದ ಪ್ರೇಕ್ಷಕ ಯಶ್ ಚಿತ್ರವನ್ನು ಮಾತ್ರ ಕೈಬಿಟ್ಟಿಲ್ಲ. ಎಲ್ಲಾ ಚಿತ್ರಗಳೂ ಬಾಕ್ಸ್ ಆಫೀಸ್ ಧೂಳೀಪಟ ಮಾಡುತ್ತಿದೆ.

ಕಿರುತೆರೆಯಿಂದ ಹಿರಿತೆರೆಗೆ ಬಂದ ಕೆಲವೇ ಕೆಲವು ನಾಯಕರುಗಳ ಪಟ್ಟಿಯಲ್ಲಿ ಯಶ್ ಅಗ್ರಗಣ್ಯರಾಗಿ ಕಾಣುತ್ತಾರೆ. ನಂದಗೋಕುಲ, ಪ್ರೀತಿ ಇಲ್ಲದ ಮೇಲೆ, ಮಳೆ ಬಿಲ್ಲು ಮುಂತಾದ ಧಾರವಾಹಿಗಳಲ್ಲಿ ಯಶ್ ನಟನೆಯೇ ಅವರಿಗೆ ಸ್ಯಾಂಡಲ್ ವುಡ್ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಜಂಬದ ಹುಡುಗಿ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ ಯಶ್’ಗೆ ಬ್ರೇಕ್ ಕೊಟ್ಟಿದ್ದು ಮೊಗ್ಗಿನ ಮನಸು. ಈ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ ದೊರಕುತ್ತದೆ ಯಶ್ ಗೆ. ಅಲ್ಲಿಂದ ಶುರುವಾಯ್ತು ನೋಡಿ, ಯಶ್ ಯಶೋಗಾಥೆ! ಆಮೇಲೆ ಒಂದಾದ ಮೇಲೊಂದು ಅವಕಾಶಗಳು ಯಶ್ ಗೆ ದೊರೆಯುತ್ತದೆ. ಮೊದಲಾ ಸಲಾ, ರಾಜಧಾನಿ, ಕಳ್ಳರಸಂತೆ, ಲಕ್ಕಿ, ಡ್ರಾಮಾ, ಗೂಗ್ಲಿ ಯಶ್ ಇಮೇಜನ್ನ ಇನ್ನೂ ಹೆಚ್ಚಿಸಿತು. ಇದರ ಜೊತೆಗೆ ಪಕ್ಕ ಮಂಡ್ಯ ಭಾಷೆಯ ಖದರ್ ಮತ್ತು ಜಲಕ್ ಹೊಂದಿದ್ದ ಕಿರಾತಕ ಮತ್ತು ರಾಜಾಹುಲಿ ಯಶ್ ರನ್ನು ರಾಕಿಂಗ್ ಸ್ಟಾರ್ ರನ್ನಾಗಿಸಿತು.

ಹೀಗೆ ಸತತ ನಾಲ್ಕೈದು ವರ್ಷಗಳಿಂದ ಯಶ್ ಮುಟ್ಟಿದ್ದೆಲ್ಲವೂ ಚಿನ್ನ. ರಾಕಿಂಗ್ ಸ್ಟಾರ್ ಹಿಟ್ ಲಿಸ್ಟ್ ಗೆ ಈಗ ಮತ್ತೊಂದು ಸೇರ್ಪಡೆ ಮಾಸ್ಟರ್ ಪೀಸ್. ಸ್ಯಾಂಡಲ್ ವುಡ್ ಇತಿಹಾಸದಲ್ಲಿಯೇ ಮೊದಲ ದಿನದ ಗಳಿಕೆಯ ದಾಖಲೆ ಮುರಿದಿದೆ ಯಶ್ ಅಭಿನಯದ ಮಾಸ್ಟರ್ ಪೀಸ್. ಕನ್ನಡ ಸಿನಿಪ್ರಿಯರಷ್ಟೇ ಅಲ್ಲದೇ ಪರಭಾಷಾ ಸಿನಿಪ್ರಿಯರನ್ನು ಗಣನೀಯವಾಗಿ ಸೆಳೆದಿದ್ದಾರೆ ಯಶ್! ಯಶ್ ಸಿನಿಮಾಗಳೇ ಹಾಗೇ, ಬಿಡುಗಡೆಯ ಮುನ್ನವೇ ಅಭಿಮಾನಿಗಳನ್ನು ನಿರೀಕ್ಷೆಯ ಬೆಟ್ಟಕ್ಕೇರಿಸಿರುತ್ತದೆ. ಬಿಡುಗಡೇ ನಂತರವೂ ಪಕ್ಕ ಪೈಸಾ ವಸೂಲ್ ಸಿನಿಮಾಗಳೇ ಯಶ್ ಮಾಡೋದು ಮತ್ತು ಮಾಡಿರೋದು. ವಿಮರ್ಶೆಗಳು ಯಶ್ ಚಿತ್ರದ ಪರವಾಗಿರಲಿ, ವಿರುದ್ಧವಾಗಿರಲಿ ಯಶ್ ಗಾಗಿ ಜನ ಚಿತ್ರ ನೋಡೇ ನೋಡ್ತಾರೆ.

ಸ್ಟಾರ್ ನಟನಾದ ಮೇಲೆ ಸ್ಟಾರ್ ವಾರ್ ಎಲ್ಲ ಮಾಮೂಲು ತಾನೆ?? ಯಶ್ ನಾಗಾಲೋಟವನ್ನು ಕಂಡು ಬೇರೊಬ್ಬ ನಾಯಕ ನಟನ ಅಭಿಮಾನಿಗಳು ಮತ್ತು ಯಶ್ ಅಭಿಮಾನಿಗಳು ಕಿತ್ತಾಡಿದ್ದೂ ಆಗಿದೆ. ಆ ಬಳಿಕ ಇಬ್ಬರೂ ನಾಯಕರು ತಂತಮ್ಮ ಅಣ್ತಮ್ಮಂದಿರನ್ನು ಸಮಾಧಾನಿಸಿದ್ದೂ ಆಗಿದೆ. ಚೀಟಿ ದುಡ್ಡು ಕೊಟ್ಟಿಲ್ಲ ಹಾಗೂ ಬಾಡಿಗೆ ಹಣ ಪಾವತಿಸಿಲ್ಲ ಎಂದು ಯಶ್ ವೈಯಕ್ತಿಕ ಜೀವನವನ್ನೂ ನಮ್ಮ ಮಾಧ್ಯಮ ಮಿತ್ರರು ರಾಜ್ಯದ ಮುಂದೆ ಬಿಚ್ಚಿಟ್ಟಿದ್ದು ಹಳೇ ಸಂಗತಿ. ಇದರ ಅಸಲಿ ಸತ್ಯವೇನೇ ಇರಲಿ ಸದ್ಯದ ಮಟ್ಟಿಗೆ ಯಶ್ ಚಿನ್ನದ ಮೊಟ್ಟೆಯಿಡುವ ಕೋಳಿ.

ರಂಗಭೂಮಿ ಹಿನ್ನಲೆಯಿಂದ ಬಂದ ಯಶ್ ಇಂದು ಈ ಪರಿ ಧೂಳೆಬ್ಬಿಸಿರುವುದು ಕೇವಲ ತನ್ನ ಪ್ರತಿಭೆಯಿಂದ, ತನ್ನ ಜಬರ್ ದಸ್ತ್ ನಟನಾ ಕೌಶಲ್ಯ, ಸ್ಟಂಟ್ ಮತ್ತು ಡ್ಯಾನ್ಸ್ ನಿಂದ ಮಾತ್ರ. ರಾತ್ರಿ ಬೆಳಕಾಗುವುದರಲ್ಲಿ ನಾಯಕನಾಗಿ ಮಿಂಚಿದವರಲ್ಲ. ಮೊದಮೊದಲು ಹೊಸ ಹುಡುಗನ ಮೇಲೆ ಬಂಡವಾಳ ಹೂಡಲು ನಿರ್ಮಾಪಕರು ಹಿಂಜರಿದಿದ್ದರು. ಆದರೆ ಆಗ ಅಸಡ್ಡೆಯಿಂದ ನೋಡಿದವರು ಇಂದು ಯಶ್ ಕಾಲ್ ಶೀಟ್ ಪಡೆಯಲು ಕ್ಯೂ ನಿಲ್ಲುತ್ತಾರೆ.
ಯಶ್ ಅವರ ರಾಜಾಹುಲಿ ಸಿನಿಮಾದ ಒಂದು ಡೈಲಾಗ್ ಹೀಗಿದೆ. “ಅಣ್ತಮ್ಮಾ ಇಲ್ಲ್ ಯಾರೂ ಹೀರೋಗಳನ್ನು ಹುಟ್ಟುಹಾಕಲ್ಲ. ನಮಗ್ ನಾವೇ ಹೀರೋ ಆಗ್ಬೇಕು…” ಸಿನಿಮಾದಂತೆ ನಿಜ ಜೀವನದಲ್ಲೂ ಯಾವುದೇ ಗಾಡ್ ಫಾದರ್ ಇಲ್ಲದೇ ಜನರ ನಾಡಿ ಮಿಡಿತಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇವತ್ತು ತಮಿಗೆ ತಾವೇ ಗಾಡ್ ಫಾದರ್ ಆಗಿದ್ದಾರೆ. ಒಂದು ಸಿನಿಮಾಕ್ಕೆ ಬೇಕಾದ ಎಲ್ಲ ಕೆಲಸಗಳನ್ನು ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಯಶ್ ಸ್ಟಾರ್ ಗಿರಿ ಹಿಂದೆ ಕಠಿಣ ಪರಿಶ್ರಮವಿದೆ. ಅದಕ್ಕಾಗಿಯೇ ಇವತ್ತು ಯಶ್ ಯಶಸ್ಸಿನ ಅಲೆಯೇರಿರುವುದು. ಮೊನ್ನೆಯಷ್ಟೇ ತನ್ನ ೩೦ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯಶ್ ಇನ್ನು ಮುಂದೆಯೂ ಕೂಡಾ ಕನ್ನಡ ಚಿತ್ರರಂಗದಲ್ಲಿ ಮಿಂಚಲಿ ಎನ್ನುವುದೇ ನನ್ನ ಹಾರೈಕೆ.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post