ನಮ್ಮ ಬಾಲ್ಯದ ದಿನಗಳ ಸ್ನೇಹಿತರಾದ ಗುಬ್ಬಚ್ಚಿಗಳು ಈ ದಿನಗಳಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುತ್ತಿವೆ. ಒಂದೊಮ್ಮೆ ನಮ್ಮ ಮನೆಯಲ್ಲಿ 10-15 ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವು. ಇಂದು ಗುಬ್ಬಚ್ಚಿಗಳು ಕಾಣಸಿಗುವುದೇ ತುಂಬಾ ಅಪರೂಪ. ಆದಾಗ್ಯೂ ನಾವಿರುವ ಕೈಗಾ ವಸತಿ ಸಂಕೀರ್ಣದಲ್ಲಿ ಗುಬ್ಬಚ್ಚಿಗಳು ತುಂಬಾ ಇಲ್ಲವಾದರೂ, ಬೇರೆ ಪಟ್ಟಣ-ಪ್ರದೇಶಗಳಿಗೆ ಹೋಲಿಸಿದರೆ ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿವೆ. ಗುಬ್ಬಚ್ಚಿಗಳನ್ನು ಆಕರ್ಷಿಸುವ ದೃಷ್ಟಿಯಲ್ಲಿ ನಮ್ಮ ಎಂಟನೇ ಮಹಡಿಯ ಬಾಲ್ಕನಿಯಲ್ಲಿ ಅಕ್ಕಿಯನ್ನೂ, ನೀರನ್ನೂ ಇಡಲಾರಂಭಿಸಿದೆವು. ಹಾಗೆಯೇ ನೊಡೋಣವೆಂದು ಒಂದು ಚಿಕ್ಕ ರಟ್ಟಿನ ಪೆಟ್ಟಿಗೆಯನ್ನೂ ರಂದ್ರ ಮಾಡಿ ಬಾಲ್ಕನಿಯ ಮೇಲ್ಚಾವಣಿಗೆ ಅಂಟಿಸಿದೆವು. ಅಕ್ಕಿ ತಿನ್ನಲು, ನೀರು ಕುಡಿಯಲು ಗುಬ್ಬಚ್ಚಿಗಳೆನೋ ಬರುತ್ತಿದ್ದವು. ಆದರೆ ಪೆಟ್ಟಿಗೆ ಕಡೆಗೆ ಹೋಗುತ್ತಿರಲಿಲ್ಲ.
ಐದಾರು ತಿಂಗಳ ನಂತರ ಒಂದು ಮುಂಜಾವು “ಚೀಂವ್….ಚೀಂವ್” ಎನ್ನುವ ರಾಗ ತುಂಬಾ ಹತ್ತಿರದಲ್ಲಿ ಕೇಳಿಸಿದಾಗ ಕಿವಿ ನವಿರೇಳಿತು. ಬಾಲ್ಕನಿಗೆ ಹೋಗಿ ನೋಡಿದರೆ ಅಂದುಕೊಂಡಂತೇ ರಟ್ಟಿನ ಪೆಟ್ಟಿಗೆಯಲ್ಲಿ ಹಕ್ಕಿಯೊಂದು ಗೂಡು ಕಟ್ಟುತ್ತಿರುವ ಅಪರೂಪದ, ಆಶ್ಚರ್ಯದ, ಕುತೂಹಲದ ದೃಶ್ಯ ಕಣ್ಣಿಗೆ ಬಿತ್ತು. ಆದರೆ ಆ ಹಕ್ಕಿ ಗುಬ್ಬಚ್ಚಿಯಾಗಿರದೇ, ಅದಕ್ಕಿಂತಲೂ ಚಿಕ್ಕದಾದ ಕಂದು ಬಣ್ಣದ ಹಕ್ಕಿಯಾಗಿತ್ತು. ನಾವಿಟ್ಟ ಪೆಟ್ಟಿಗೆಯು ಗೂಡು ಕಟ್ಟಲು ಅನುಕೂಲಕರ ಹಾಗೂ ಸುರಕ್ಷಿತ ಎಂದು ಗೂಡು ಕಟ್ಟಲು ಶುರು ಮಾಡಿದೆ.
ಕುತೂಹಲದಿಂದ ಇಂಟರ್ ನೆಟ್ ಹುಡುಕಿದಾಗ ಅದು “ಮುನಿಯಾ” ಜಾತಿಗೆ ಸೇರಿದ “ಕಪ್ಪು ಗಂಟಲಿನ ಮುನಿಯಾ”ಎಂದು ತಿಳಿಯಿತು.
ನನ್ನ ಕುತೂಹಲಕ್ಕೆ ಪಾರವೇ ಇಲ್ಲ. ರಾತ್ರಿ ಪಾಳಿ ಕೆಲಸ ಮಾಡಿ ಬಂದರೂ ನಿದ್ರಿಸದೆ ಈ ಕುತೂಹಲದ ದೃಶ್ಯವನ್ನು ವೀಕ್ಷಿಸಲಾರಂಭಿಸಿದೆ. ಗೂಡಿಗಾಗಿ ಕಸ-ಕಡ್ಡಿ, ಹುಲ್ಲು, ಒಣಗಿದ ಎಲೆ ಇತ್ಯಾದಿ ವಸ್ತುಗಳನ್ನು ತರುವುದು ಸಾಮಾನ್ಯವಾಗಿತ್ತು. ಆದರೆ ತೀರಾ ಕುತೂಹಲ ಕೆರಳಿಸಿದ ವಿಷಯವೇನೆಂದರೆ ಹಕ್ಕಿಗಳು ತುಳಸಿ ಎಲೆ, ತುಳಸಿ ಹೂವು ಮತ್ತು ಕರಿಬೇವಿನ ಎಲೆಗಳನ್ನು ಎಲ್ಲಿಂದಲೋ ತಂದು ಗೂಡು ಕಟ್ಟುತ್ತಿತ್ತು. ಸುತ್ತಮುತ್ತ ಬೇಕಾದಷ್ಟು ಗಿಡಗಳಿರುವ ಪ್ರದೇಶದಲ್ಲಿ ಗೂಡುಕಟ್ಟಲು ತುಳಸಿ ಮತ್ತು ಕರಿಬೇವಿನ ಎಲೆಗಳನ್ನು ಬಳಸಿತ್ತಿರುವುದು ಆಶ್ಚರ್ಯವಲ್ಲವೇ? ಈ ಚಿಕ್ಕ ಹಕ್ಕಿಗೆ ತುಳಸಿ ಮತ್ತು ಕರಿಬೇವಿನ ಆಯುರ್ವೇದೀಯ ಗುಣಗಳು ಗೊತ್ತಿದೆಯೇ? ಗೂಡು ಕಟ್ಟುವ ವೈಖರಿಯೂ ಆಶ್ಚರ್ಯ ತರಿಸುವಂತಹದ್ದು. ಹುಲ್ಲು-ಕಡ್ಡಿಗಳನ್ನು ಮೊದಲು ತಂದು ಗೂಡಿಗೆ ಆಕಾರ ಕೊಟ್ಟಿತು. ಆಮೇಲೆ ಮೆತ್ತನೆಯ ಹುಲ್ಲಿನ ತೆನೆಗಳನ್ನು ತಂದು ಗೂಡನ್ನು ಬೆಚ್ಚಗಿರಿಸಿತು. ಅದಲ್ಲದೇ ತನ್ನ ಆಕಾರ-ಗಾತ್ರಕ್ಕೆ ಸರಿಹೊಂದುವ ರಂಧ್ರದ ಬಾಗಿಲಿರಿಸಿ ಬೇರೆಲ್ಲವನ್ನೂ ಅಡಗಿಸಿಟ್ಟತು. ಐದಾರು ದಿನಗಳಲ್ಲಿ ಗೂಡು ಸಂಪೂರ್ಣ! ಆಮೇಲೆ ಅಲ್ಲೇ ವಾಸ್ತವ.
ಸುಮಾರು 20 ದಿನಗಳ ರಜೆಯ ನಂತರ ಮನೆಗೆ ಬಂದಾಗ ಆಶ್ಚರ್ಯ ಕಾದಿತ್ತು. “ಚೀಂವ್…. ಚೀಂವ್…. ಚೀಂವ್…. ಚೀಂವ್….” ಮರಿಗಳ ಕೂಗಾಟ!…ಮರಿಗಳ ಹೊಟ್ಟೆ ತುಂಬಿಸಲು ತಂದೆ-ತಾಯಿಗಳ ಪರದಾಟ! ತಂದೆ-ತಾಯಿಗಳು ಒಟ್ಟಿಗೆ ಹೋಗಿ ಬೇರೆ ಬೇರೆ ಕಾಳುಗಳನ್ನು ತಂದು ಮರಿಗಳಿಗೆ ತಿನ್ನಿಸುತ್ತಿದ್ದವು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತೀ ಅರ್ದ-ಮುಕ್ಕಾಲು ಗಂಟೆಗೊಮ್ಮೆ ಆಹಾರ ತಿನ್ನಿಸುತ್ತಿದ್ದವು. ಮರಿಗಳಿಗೆ ರಾತ್ರಿಯಲ್ಲಿ ಅಮ್ಮನ ಮಡಿಲಿನ ರಕ್ಷಣೆ! ನೋಡು ನೋಡುತ್ತಲೇ ಹಕ್ಕಿಗಳು ದೊಡ್ಡದಾದವು. ಪೋಷಕ ಹಕ್ಕಿಗಳಿಗಾಗಿ ಕಾಯುತ್ತಾ ಗೂಡಿನಿಂದ ಹೊರಗೆ ನೋಡುತ್ತಿದ್ದವು. ಸುಮಾರು 3 ವಾರಗಳ ನಂತರಮರಿಗಳು ಸಂಪೂರ್ಣಬಲಿತು ದೊಡ್ಡದಾದವು. ಈಗ ಮರಿಗಳಿಗೆಹಾರಲು ಕಲಿಸುವ ಪಾಠ. ಇದು ಇನ್ನೂ ಕುತೂಹಲಕಾರಿ! ತಂದೆ-ತಾಯಿಗಳು ಹೊರಕ್ಕೆ-ಒಳಕ್ಕೆ ಹೋಗಿಬರುವುದು…ಬಾಲ್ಕನಿಯ ಗ್ರಿಲ್ ಮೇಲೆ ಕುಳಿತು ಅಹಾರಕ್ಕಾಗಿ ಮರಿಗಳನ್ನು ಕರೆಯುವುದು…ಇತ್ಯಾದಿ. ಹಾರಲು ಕಲಿತ ಯುವ ಹಕ್ಕಿಗಳನ್ನು ಒಂದು ಮುಂಜಾನೆ ಒಂದೊಂದಾಗಿ ಕಾಡಿಗೆ ಕೊಂಡೋಯಿತು! ಅಬ್ಬಾ! ಇಷ್ಟು ಪುಟ್ಟ ಹಕ್ಕಿಯ ಕರ್ತವ್ಯ ನಿಷ್ಟೆಯೇ!…ನಿಭಾಯಿಸುವ ಜವಾಬ್ದಾರಿಯೇ!…
ಎರಡು-ಮೂರು ವಾರ ಕಳೆದಿರಬಹುದು. ಇನ್ನೊಮ್ಮೆ ಜೋಡಿ ಹಕ್ಕಿಗಳು (ಮೊದಲ ಜೋಡಿಯೋ ಏನೋ ಗೊತ್ತಿಲ್ಲ) ಬಂದು ಅದೇ ಗೂಡನ್ನು ವಾಸವ್ಥಾನವಾಗಿ ಆರಿಸಿಕೊಂಡವು. ಈ ಬಾರಿ ಕೆಲಸ ಸುಲಭ…! ಗೂಡನ್ನು ನವೀಕರಿಸುವುದೊಂದೇ ಕೆಲಸ. ಪುನಃ ತುಳಸಿ ಎಲೆ, ಕರಿಬೇವಿನ ಎಲೆಗಳನ್ನು ತಂದು ಜೊಡಿಸಿ, ಹುಲ್ಲಿನ ತೆನೆಗಳನ್ನು ಹಾಸಿ ಗೂಡನ್ನು ನವೀಕರಿಸಿದವು. ಒಂದಂತೂ ಖಾತ್ರಿಯಾಯಿತು….ತುಳಸಿ ಮತ್ತು ಕರಿಬೇವಿನ ಔಷಧೀಯ ಗುಣಗಳು ಈ ಪುಟ್ಟ ಹಕ್ಕಿಗೆ ಖಂಡಿತ ಗೊತ್ತಿದೆ!! ಮತ್ತೊಮ್ಮೆ ಸಂಸಾರ ಮಾಡಿ ಎರಡು ಮರಿಗಳನ್ನು ಬೆಳೆಸಿದವು. ಹಾಗೆಯೇ ಒಟ್ಟು ಮೂರು ಭಾರಿ ಗೂಡು ಕಟ್ಟಿ, ಒಟ್ಟು ಎಂಟು ಮರಿಗಳನ್ನು ಬೆಳೆಸಿದವು. ಕಾಡಿಗಿಂತ ಸುರಕ್ಷಿತ ಜಾಗ ಸಿಕ್ಕಾಗ ಉಪಯೋಗಿಸಬೇಕಲ್ಲವೇ?…
ನಾಲ್ಕನೇ ಭಾರಿ ಮಾತ್ರ ಕೆಲಸ ಸುಲಭವಾಗಿರಲಿಲ್ಲ. ಮೂರು ಬಾರಿ ಮೊಟ್ಟೆ ಇಟ್ಟು, ಮರಿ ಮಾಡಿದ ಗೂಡು ತುಂಬಾ ಗಲೀಜಾಗಿರಬೇಕು. ಗೂಡನ್ನು ಸ್ವಚ್ಛಗೊಳಿಸಲು ಜೋಡಿ ಹಕ್ಕಿಗಳು ಒಂದು ವಾರ ಪ್ರಯತ್ನಿಸಿದವು. ಇಲ್ಲ..ಸಾಧ್ಯವೇ ಇಲ್ಲ…ಎಂದು ಹಕ್ಕಿಗಳು ಗೂಡು ಬಿಟ್ಟು ಹಾರಿ ಹೋದವು. ಎರಡು ತಿಂಗಳ ನಂತರ ನಾವು ಗೂಡನ್ನು ತೆಗೆದು ಬಿಡಿಸಿ ನೋಡಿದಾಗ, ಅದು ನಿಜಕ್ಕೂ ವಾಸಿಸಲಸಾದ್ಯವಾದಸ್ಟು ಗಲೀಜಾಗಿತ್ತು. ಅಬ್ಬಾ ಪುಟ್ಟ ಹಕ್ಕಿಯ ಆರೋಗ್ಯ ಕಾಳಜಿಯೇ! ಕುತೂಹಲದಿಂದ ಆ ಗೂಡಿನ ಪೆಟ್ಟಿಗೆಯನ್ನು ತೆಗೆದು ಇನ್ನೊಂದು ಖಾಲಿ ಪೆಟ್ಟಿಗೆಯನ್ನು ಜೊಡಿಸಿದೆವು. ಮರುದಿನವೇ ಹಕ್ಕಿ ಪ್ರತ್ಯಕ್ಷ! ಗೂಡು ಕಟ್ಟಲು ಶುರು! ಅಂದಿನಿಂದ ಮತೊಮ್ಮೆ ಪುಟ್ಟ ಹಕ್ಕಿಯ ಸಂಸಾರ…!ಈ ಪುಟ್ಟ ಹಕ್ಕಿ ನಮ್ಮ ಕುತೂಹಲವನ್ನು ಕೆರಳಿಸಿದ್ದಲ್ಲದೆ ಪ್ರಕೃತಿಯ ಬಗ್ಗೆ ಸಾಕಷ್ಟು ತಿಳಿಸಿಕೊಟ್ಟಿತು.
ಈ ಮುನಿಯಾದ ವೈಜ್ಞಾನಿಕ ಹೆಸರು “ಲೊಂಚುರಾ ಕೆಲಾರ್ಟಿ”. ದಕ್ಷಿಣ ಭಾರತ ಹಾಗೂ ಶ್ರೀಲಂಕಾದಲ್ಲಿ ಕಂಡುಬರುವ ಈ ಹಕ್ಕಿಯು ಮುಖ್ಯವಾಗಿ ಗುಡ್ಡಪ್ರದೇಶ ಮತ್ತು ಬೇಸಾಯದ ಗದ್ದೆಗಳಲ್ಲಿ ವಾಸಿಸುತ್ತವೆ. ಧಾನ್ಯ-ಕಾಳುಗಳನ್ನು ಸೇವಿಸಿ ಬದುಕುವ ಈ ಪಕ್ಷಿ ಸಾಮಾನ್ಯವಾಗಿ ಮರ, ಮನೆಮಾಡಿನಲ್ಲಿ ಹುಲ್ಲಿನ ಗುಮ್ಮಟಾಕಾರದ ಗೂಡು ಕಟ್ಟಿ ಮರಿ ಮಾಡುತ್ತದೆ. ಒಂದು ಸಲಕ್ಕೆ 3-5 ಮೊಟ್ಟೆಯಿಟ್ಟು ಮರಿ ಮಾಡುವ ಈ ಹಕ್ಕಿಯು ಗುಬ್ಬಚ್ಚಿಯಂತೆ ಮನುಷ್ಯರ ಒಡನಾಟದಲ್ಲಿಯೂ ವಾಸಿಸುತ್ತದೆ.
ನಾಗರಾಜ ಅಡಿಗ.
ವೈಜ್ಞಾನಿಕ ಅಧಿಕಾರಿ, ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರ, ಕೈಗಾ.
Facebook ಕಾಮೆಂಟ್ಸ್