X
    Categories: ಕಥೆ

ಇಷ್ಟುಕಾಲ ಒಟ್ಟಿಗಿದ್ದು ಭಾಗ-೧

“ಅಪ್ಪ ನಿಮ್ಮ ಶರ್ಟ್’ನ ಟಿವಿ ಮೇಲೆ ಇಟ್ಟಿದೀನಿ ಸ್ನಾನ ಮಾಡಿ ಬೇಗ ಹಾಕ್ಕೊಳ್ಳಿ,ಅಮ್ಮಾ ರೆಡಿ ಆಗಿದಾಳೆ”

ಎರಡೂವರೆ ಮೂರು ವರ್ಷ ಇರಬಹುದು ಆ ಪುಟ್ಟ ಪಾಪುವಿನ ತೊದಲ ನುಡಿಯಿ೦ದ ಈ ಮಾತು ಕೇಳಿದ್ರೆ ಅದೇ ಸ್ವರ್ಗ ಅನ್ನೋ ಖುಷಿ. ಅವಳ ಹೆಸರು ಪೂರ್ವಿ. ಪೂರ್ವಿ ನನ್ನ ಕೊನೆ ಮಗಳು.ಅವಳು ಮಾತಾಡ್ತಾ ಇದ್ದರೆ ನಮ್ಮ ಅಮ್ಮನ ಜೊತೆನೆ ಇದ್ದ ಹಾಗೆ ಅನ್ಸತ್ತೆ.

ಅವತ್ತಿಗೆ ನಾನು ಮತ್ತು ಅವರು ಮದುವೆ ಆಗಿ ೨೫ ವರ್ಷ. ನನಗೆ ಇಗ ಆರು ಜನ ಮಕ್ಕಳು. ಎಲ್ಲಾ ಮಕ್ಕಳು ಸೇರಿ ಆ ಕಾರ್ಯಕ್ರಮ ಮಾಡ್ತಾ ಇದ್ದರು. ಅದೇನೋ ಗೊತ್ತಿಲ್ಲ ಫಂಕ್ಷನ್ ಅಂದ್ರೇನೆ ನಂಗೆ ಅಲರ್ಜಿ.ಒಂಥರಾ ತುರಿಕೆ. ಆದರೆ ಇದೆ ನನ್ನ ಕೊನೆ ಕಾರ್ಯಕ್ರಮ ಆಗಬಹುದು ಅಂಥ ಒಪ್ಪಿಕೊಂಡಿದ್ದೆ.

ಪೂರ್ವಿ ಕೊಟ್ಟ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಉಟ್ಟು ಹಾಲ್’ಗೆ ಬಂದೆ ಆಗಲೇ ಅವರು ರೆಡಿ ಆಗಿ ಕೂತಿದ್ರು.ಪಕ್ಕಾ ನಮ್ಮ ಕಡೆ ಸ್ಟೈಲ್ ನಲ್ಲಿ ರೆಡಿ ಆಗಿದ್ರು,ಇಳಕಲ್ಲ ಸೀರೆ ಕುಪ್ಪಸ ತಲೇಲಿ ಮಲ್ಲಿಗೆ ಹೂವು. ಒ೦ದ್ಸರಿ ನನ್ನ ಮುಖ ನೋಡಿ ಕಣ್ಣಲ್ಲೇ ಮಾತಾಡಿದ್ರು.ಅವರು ಮಾತು ಕಾಣಸ್ತಾ ಇತ್ತು ಆದರೆ ಅವರ ಏನ್ ಹೇಳ್ಬೇಕು ಅನ್ಕೋತಾ ಇದ್ದರೊ ತಿಳಿಲಿಲ್ಲ.ಅವರ ಪಕ್ಕಾ ಇರೋ ಕುರ್ಚಿಯಲ್ಲಿ ಹೋಗಿ ಕೂತೆ. ಮಕ್ಕಳು ಎಲ್ಲಾ ಸಂಭ್ರಮ ಮಾಡಿ ಖುಷಿ ಪಡ್ತಾ ಇದ್ರೂ.ನನ್ನ ಕೈಗೆ ಒಂದು ಉಂಗುರ ಕೊಟ್ಟು ಅಮ್ಮನಿಗೆ ಹಾಕಿ ಅಂತ ಹೇಳಿದ್ರು.ಉಂಗುರ ಹಾಕೋಣ ಅಂಥ ಎದ್ದು ನಿಂತೆ ಅವರು ನನ್ನ ಜೊತೇನೆ ಎದ್ದು ಕೈಯ್ಯನ್ನ ಮುಂದೆ ಮಾಡಿದ್ರು. ಮೊದಲನೇ ಸಾರಿ ನಾನು ಆವರನ್ನ ಮುಟ್ಟಬೇಕಾದ ಪರಿಸ್ಥಿತಿ ಬಂದಿತ್ತು,ಪಾವನಿ (ನನ್ನ ದೊಡ್ಡ ಮಗಳು) ಕಣ್ಣು ನನ್ನೇ ನೋಡ್ತಾ ಇತ್ತು.೨೫ ವರ್ಷ ಆದರು ಅ೦ತಹ ಪರಿಸ್ಥಿತಿ ಬಂದಿರಲಿಲ್ಲ. ಪಾವನಿ ಕಣ್ಣ ಮುಚ್ಚಿ ಸನ್ನೆ ಮಾಡಿದ್ಲು. ಚಪ್ಪಾಳೆ ಶಬ್ದ ಕೇಳ್ತಾ ಇತ್ತು. ಆವರನ್ನ ನೋಡೋ ಧೈರ್ಯ ನನ್ನಲ್ಲಿ ಇರ್ಲಿಲ್ಲ. ಆದರೆ ಕೈ ಹಿಡಿದು ಉ೦ಗುರ ಹಾಕಿದ್ದೆ. ಅವರ ಕಣ್ಣಲ್ಲಿ ನೀರಿತ್ತು. ನನ್ನ ಮನಸು ಭಾರ ಆಗಿತ್ತು. ಪಾವನಿ ಮುಖದಲ್ಲೇ ಒಂಥರಾ ಕಳೆ ಇತ್ತು.

ಮನಸಲ್ಲಿ ಅಮ್ಮಾ ಕಾಣ್ತಾ ಇದ್ರೂ ಅವರಿಗೆ ಇದನ್ನೆಲ್ಲ ಹೇಳಬೇಕು ಅನ್ನೋ ಹಂಬಲ ಇತ್ತು. ಪಾವನಿ ಹತ್ತಿರ ಬಂದು ಕಣ್ಣೀರನ್ನ ಒರೆಸಿದ್ಲು. ಪಾವನಿನೆ ನಮ್ ಅಮ್ಮಾ ಅನ್ಕೊಳೋ ನಂಗೆ ಕಣ್ಣಿರು ಉಕ್ಕಿ ಹರಿತು. ಪಕ್ಕಕ್ಕೆ ಅವರು ಸಮಾಧಾನ ಹೇಳಿದ್ರು. ಕಣ್ಣ ಒರೆಸಿ ಮತ್ತೆ ನನ್ನ ಸ್ಮೈಲ್’ನ ಹೊರಗೆ ಹಾಕಿದೆ. ಒಳಗೆ ಇರೋದು ಒಳಗೆ ಇತ್ತು. ಕಣ್ಣು ಮಾತ್ರ ನಗ್ತಾ ಇತ್ತು. ಎಲ್ಲಾ ಮಕ್ಕಳ ಮೂಡ್ ಅಪ್ಸೆಟ್ ಮಾಡೋದು ಬೇಡ ಅಂತ ನಾನೇ ಎಲ್ಲರನ್ನ ಕರೆದು ವಿಶ್ ಮಾಡಲ್ವೇನ್ರೋ ಅಂದೇ. ಎಲ್ಲಾ ವಿಶ್ ಮಾಡ್ತಾ ಇದ್ರೂ ಪಾವನಿ ಮಾತ್ರ ವಿಶ್ ಮಾಡಲೇ ಇಲ್ಲ. ಯಾಕಂದ್ರೆ ಅವಳಿಗೆ ಮಾತ್ರ ಗೊತ್ತಿತ್ತು ಇಲ್ಲಿ ನಡಿತಿರೋದು ಬರೀ ಒಂದು ಆಚರಣೆ ಮಾತ್ರ ಅಂತ.

ಎಲ್ಲಾ ಊಟ ಮಾಡಿ ಮಲಗೋಕೆ ಅ೦ತ ಹೋದರು. ನಾನು ಅವರು ನಮ್ಮ ಮನೆ ಮೇಲೆ ಇರೋ ಖಾಲಿ ಜಾಗಕ್ಕೆ ಹೋಗಿ ನಮ್ಮ ಇಷ್ಟ ವಾದ ಹಾಡು ಕೇಳ್ತಾ ಇದ್ವು.ಇದ್ದಕ್ಕಿದ್ದಂತೆ ಹಾಡು ನಿಂತು ಅಮ್ಮಾ ಅಪ್ಪ ಇಲ್ಲೇ ಏನ್ ಮಾಡ್ತಾ ಇದೀರಿ ಅ೦ತ ಪಾವನಿ ದ್ವನಿ. ಇವತ್ತು ಭೂಮಿಗೆ ಚಂದ್ರ ಹತ್ತಿರ ಬರ್ತಾನೆ ಅದನ್ನೇ ನೋಡೋಣ ಅಂಥ ಬಂದಿದ್ದೆ ಅಂಥ ಅವರು ಹೇಳಿದ್ರು. ನಾನು ತಲೆ ಆಡಿಸಿದೆ. ಅದಕ್ಕೆ ಪಾವನಿ “ನೀವು ಇಬ್ಬರು ಯಾವಾಗ ಹತ್ತಿರ ಆಗೋದು ಅಂಥ ಕೇಳಿದಳು”.

ಆ ಪ್ರಶ್ನೆಗೆ ಉತ್ತರ ನನ್ನ ಹತ್ರ ಇರ್ಲಿಲ್ಲ. ಅವರಿಗೆ ಗೊತ್ತಿರ್ಲಿಲ್ಲ. ಮೌನ ಮಾತ್ರ ಉತ್ತರ ಆಗಿತ್ತು.ಪಾವನಿಗೆ ಉತ್ತರ ಬೇಕಿತ್ತು. ಮತ್ತೆ ಅದೇ ಪ್ರಶ್ನೆ ಕೇಳಿದಳು. ಪಾವನಿ ನನ್ನ ಹತ್ತಿರ ಉತ್ತರ ಇಲ್ಲ ಆದರೆ ಕಥೆ ಇದೆ. ಆ ಕಥೇನ ಹೇಳ್ತೀನಿ, ಅದರಲ್ಲಿ ನಿನ್ ಉತ್ತರ ಇದ್ರೆ ಹುಡುಕು ಅಂದೇ.

******************************************************************************

ಅದೇ ಸ್ಕೂಲ್ ಪ್ಯಾಂಟ್ ಶರ್ಟ್ ಹಾಕಿ ಹಾಕಿ ಬೋರ್ ಆಗಿದ್ದ ನಮಗೆ ಮೊದಲನೇ ಸಾರಿ ಕಲರ್ ಬಟ್ಟೆ ಹಾಕ್ಕೊ೦ಡ್ ಕಾಲೇಜ್ ಮೆಟಿಲಿ ಹತ್ತೋ ಟೈಮ್ ಅದು. ಆದ್ರೆ ನಮ್ಮ ಕಾಲೇಜ್’ಗೆ ಮೆಟ್ಟಿಲು ಇರ್ಲಿಲ್ಲ. ದೊಡ್ಡ ಗೇಟ್ ಇತ್ತು. ಒಳಗೆ ಹೋದ್ರೆ ತೆಳ್ಳಗೆ ಹುಲ್ಲು ಹಾಸು ನಡುವೆ ಕಾಲು ದಾರಿ. ಸ್ವಲ್ಪ ಗೇಟ್’ನಿಂದ ಸ್ವಲ್ಪ ದೂರ ಹೋದ್ರೆ ಕಾಲೇಜ್ ಬಿಲ್ಡಿಂಗ್ ಇತ್ತು. ಮೊದಲನೇ ಸಾರಿ ನಾವೆಲ್ಲಾ ಗೆಳೆಯರು ಅಡ್ಮಿಷನ್’ಗೆ ಅಂಥ ಕಾಲೇಜ್ ಗೆ ಬಂದಿದ್ದು… ನಮ್ ಹಿಂದೆನೆ ಒಂದು ಹುಡ್ಗಿರ ಗುಂಪು. ಆ ಗುಂಪು ನೋಡಿದ ನಮ್ಮ ರಾಘು “ಲೇ…ಸ್ವಲ್ಪ ನಿಲ್ರಿ ಪಾಸ್ಪೋರ್ಟ್ ಸೈಜ್ ಫೋಟೋನ ಸೈಕಲ್ ಬಾಸ್ಕೆಟ್’ನಲ್ಲೆ ಬಿಟ್ಟ ಬಂದೀನಿ,ನಾ ಬರೋವರೆಗೂ ಹೋಗಬೇಡಿ ಅಂದ”..ಅಷ್ಟರಲ್ಲೇ ಆ ಹುಡ್ಗೀರ್ ಗುಂಪು ನಮ್ಮನ್ನ ನೋಡಿ ನಗ್ತಾ ಮುಂದೆ ಹೋದರು. ಅದ ಆದ ಎರಡೇ ಸೆಕೆಂಡ್’ಗೆ ರಾಘು ಬಂದು “ನಡಿರೋ ಹೋಗೋಣ” ಅಂದ. ಯಾಕೋ ಫೋಟೋ ????? ಅಂಥ ಕೇಳ್ದೆ… ಲೇ ಆ ಹುಡ್ಗಿರು ಮುಂದೆ ಹೋಗ್ಲಿ ಅಂಥ ಕಣ್ಣ ಹೊಡೆದ…..ಲೋಫರ್ ಅಂತ ಗೊಣಗಿ ಮುಂದೆ ಹೋದ್ವಿ….

ಬಿಲ್ಡಿ೦ಗ್’ನ ಫಸ್ಟ್ ರೂಮಿನಲ್ಲೆ ಒಬ್ಬ ಚೈರ್ ಮೇಲೆ ಕೂತಿದ್ದ. ಎಲ್ಲರ್ಗೂ ಒಂದು ಹಾಳೆ ಕೊಡ್ತಿದ್ದ. ಆ ಹುಡ್ಗೀರ ಗುಂಪು ಅಲ್ಲೇ ಇತ್ತು. ನಮ್ಮ ರಾಘು “ಸರ್…ಇಲ್ಲೊಂದು ಐದು ಫಾರಂ ಕೊಡಿ ಅಂದ”….ಆ ಯಪ್ಪಾ ಸ್ವಲ್ಪ ಸ್ಪೆಕ್ಟ್’ನ ಮೂಗಿನಿಂದ್ ಮೇಲೆ ಸರಿಸಿ ಬಾಯಲ್ಲಿದ್ದ ಕೆಂಪು ರಸ ಒಳಗೆ ತಗೊಂಡು…”ಲೇ ಹುಸ್ಸೇನಿ ….ಉಪ್ಪಿಟ್ಟ ಚುಮ್ಮಾರಿ ಕೊಡಕತ್ತಿಲ್ಲ ಇಲ್ಲೇ….೨೦ ರೂಪಾಯಿ ಕೊಡು ಫಾರಂ ತಗೋ” ಅಂದ. ಇಷ್ಟ ಸಾಕು ಹುಡ್ಗೀರ್ ಗುಂಪಿಂದ ಗೊಳ್ಳ ಅಂತ ನಗು ಬಂತು. ರೊಕ್ಕ ಕೊಟ್ಟು ಫಾರಂ ತಗೊಂಡು ಹೊರಗ ಬಂದ್ವಿ. ಹುಡ್ಗೀರ್ ಗುಂಪಿಂದ್ ಒಂದು ಹುಡುಗಿ ಬಂದು “ನಾವೆಲ್ಲಾ ಹಿಂದಿ ಭಾಷೆ ತಗೋಬೇಕು ಅದಕೆ ಎಲ್ಲಿ ಮಾರ್ಕ ಮಾಡಬೇಕು” ಅಂಥ ಕೇಳಿದ್ಲು. ನನಗೆ ಮೊದಲೇ ಹುಡುಗಿ ಅಂದ್ರೆ ಭಯ. ಅದಕ್ಕೆ ಸುಮ್ನೆ ನಿಂತೆ ನಮ್ಮ ರಾಘು ಇಂಗ್ಲಿಷ್’ನಲ್ಲಿ ಮಾರ್ಕ ದೇರ್ ಅಂಥ ಹತ್ತಿರಕ್ಕೆ ಹೋದ, “ನೀವು ಕನ್ನಡ ತಗೊಂಡಿದ್ದು,ಅವರನ್ನ ಕೇಳಿ ಅವರು ಹಿಂದಿ ಭಾಷಣ ಮಾಡಿದ್ರು,ಅವರು ಹಿಂದಿನೆ ತಗೊಂಡಿರ್ಬೇಕು” ಅಂಥ ನನ್ನ ತೋರಸ್ತ ಕೈ ತೋರಿಸಿದಳು. ಮನಸಲ್ಲಿ ಒಳ್ಳೆ ಒಳ್ಳೆ ಬೈಗಳ ಬರ್ತಿತ್ತು ಆದರೆ ಬಾಯಿಗೆ ಬಂದದ್ದು ಎರಡೇ “ನಾನು ಕನ್ನಡ”..ಅಷ್ಟರಲ್ಲೇ ರಾಘು ಅವಳಿಗೆ ಡೈರೆಕ್ಟ್ ಮಾಡೋಕೆ ಶುರು ಮಾಡಿದ್ದ. ಯಪ್ಪಾ ಪ್ರಾಣ ಉಳೀತು ಅಂಥ ಕ್ಯಾಂಟೀನ್ ಕಡೆ ಕಾಲು ಹಾಕಿದ್ದೆ.

ಅವತ್ತಿಂದ ಅದು ಏನೋ ಗೊತ್ತಿಲ್ಲ ಅವಳು ಅಂದ್ರೆ ಒಂಥರಾ ….ಅದು ದ್ವೇಷ ಅಲ್ಲಾ,ಪ್ರೀತಿ ಅಲ್ಲಾ,ಸ್ನೇಹ ಅಲ್ಲಾ ಹೆದರಿಕೆನೂ ಅಲ್ಲಾ ….ಬೇರೆ ಹುಡುಗಿರಿಂದ ಸ್ವಲ್ಪ ದೂರ ಹೋದ್ರೆ ಇವಳಿಂದ ಸ್ವಲ್ಪ ಜಾಸ್ತಿ ದೂರ. ಅದೇನೋ ಗೊತ್ತಿಲ್ಲ ಅವಳಿಗೆ ಎಲ್ಲಾ ಹುಡ್ಗುರು ಸೇರಿ “ನೋಕಿಯಾ”ಅಂಥ ಕರಿತ ಇದ್ರೂ. ಅವರ ಗುಂಪಿನಲ್ಲಿ ಯಾರ ಜಗಳ ಮಾಡಿದ್ರು ಇವರೇ ಸಾಲ್ವ್ ಮಾಡ್ತಾರೆ ಅಂಥ ಕೇಳಿದ್ದೆ. ಅದಕ್ಕೆ ಈ ನಾಮಕರಣ ಇರ್ಬೇಕು ಅನ್ಸಿತ್ತು…..ಅವರು ಹಿಂದಿ ಕ್ಲಾಸ್ ನಾವು ಕನ್ನಡ ಕ್ಲಾಸ್ ಆದ್ರು ಕ್ಯಾಂಟೀನ್,ಫ್ರೀ ಟೈಮ್’ನಲ್ಲಿ ಸಿಗೋರು,ಅವಳ ಪಕ್ಕಾ ಯಾವಾಗಲು ಒಂದು ಹುಡುಗಿ ಇರ್ತಿತ್ತು. ನಮ್ಮ ರಾಘುಗೂ ಅವಳಗೂ ಅದೇನೋ ಲಿಂಕ್ ,,,ಸ್ಮೈಲ್,ಮೆಸೇಜ್,ಕಾಲ್,ರಿಚಾರ್ಜ್,ಕಾರ್ಡ,ರೋಜ್ ವರೆಗೂ ಲಿಂಕ್ ಬಂದಿತ್ತು.

ಒಂದ್ಸಾರಿ ಒಂದು ಕಾರ್ಯಕ್ರಮದಲ್ಲಿ ನಾವು ಎಲ್ಲಾ ಗೆಳೆಯರು ಕೂತಿದ್ವಿ.ಅದೇ ಜಾಗ ನೋಡಿ ಆ ನೋಕಿಯಾ ಗ್ರೂಪ್ ಬಂದು ಕೂತಿದ್ರು.ಅದು ಒಂದು ಪಿಕ್ ಅಂಡ್ ಸ್ಪೀಚ್ ಕಾರ್ಯಕ್ರಮ.ಒಬ್ಬ ಒಬ್ಬರೇ ಮಾತಾಡ್ತಾ ಇದ್ರೂ.ಕೊನೆಗೆ ನೋಕಿಯಾ ಅವರು ಎದ್ದು ಹೋದರು ಪಿಕ್ ಮಾಡಿದ್ರೆ “ನನ್ನ ಭಾವಿ ಪತಿ ಮತ್ತು ಸಂಸಾರ” ಅವರಿಗೆ ಬಂದ ಟಾಪಿಕ್. ಆ ಯಮ್ಮ ಅರ್ಧ ಗಂಟೆ ಕೊರದ್ರು.ಹೊರಗಡೆ ಬಂದು ನಾವೆಲ್ಲಾ ಮಾತಾಡಿದ್ದ ಪ್ರಕಾರ ಅವರಗೆ ಸಿಕ್ಕಾಪಟ್ಟೇನೆ ಆಸೆ ಇದೆ ಮುಂದಿನ ಫ್ಯೂಚರ್ ಬಗ್ಗೆ ಅನ್ನಿಸಿತ್ತು. ಏನೇ ಅದ್ರು ನಾನ್ ಮಾತ್ರ ಆ ಹುಡ್ಗಿಗೆ ಅಂದ್ರೆ ಅಷ್ಟಕ್ಕೆ ಅಷ್ಟೆ.

ಫಸ್ಟ್ ಇಯರ್’ನ ರಿಸಲ್ಟ್ ಬಂತು ಎಲ್ಲರದು ಚೆನ್ನಾಗಿ ಆಗಿತ್ತು. ಮುಂದೆ ರಜೆಯಲ್ಲಿ ಸೆಕೆಂಡ್ ಇಯರ್ ಕ್ಲಾಸಸ್ ಮತ್ತೆ ಕಾಲೇಜ್ ಪ್ರಾರಂಭ. ಮುಂದೆ ಪ್ರಾಕ್ಟಿಕಲ್ಸ್ ಎಕ್ಸಾಮ್ಸ್ ಅಂಥ ಸೆಕೆಂಡ್ ಇಯರ್ ಮುಗೀತು. ಇದೆಲ್ಲದರ ನಡುವೆ ನೋಕಿಯಾ ಗ್ರೂಪ್ ಅಲ್ಲೇ ಅಲ್ಲೇ ಕಾಣಿಸ್ದಾಗ ಸ್ಮೈಲ್ ಕೊಡ್ತಾ ಇದ್ರೂ ನಾನ್ ಮಾತ್ರ ಅವರನ್ನ ನೋಡಿದ ತಕ್ಷಣ ಬೇರೆ ಕಡೆ ತಿರಗ್ತಾ ಇದ್ದೆ. ಅವರ ಹೆಸರು ನನ್ನ ಹೆಸರು ಒಂದೇ ಅಕ್ಷರದಲ್ಲಿ ಇತ್ತು ಅದಕ್ಕೆ ಒಂದೇ ರೂಮಿನಲ್ಲಿ ಎಕ್ಸಾಮ್ ಬರ್ತಿತ್ತು. ನಾನು ಮಾತ್ರ ಯಾರನ್ನು ನೋಡದೆ ನಮ್ ಹುಡುಗರ್ ಗುಂಪಿನಲ್ಲೇ ಮಜಾ ಮಾಡ್ತಾ ಎಕ್ಸಾಮ್ ಮುಗಸಿದ್ವಿ. ರಿಸಲ್ಟ್ ಬಂತು ಎಲ್ಲಾ ಒಳ್ಳೆ ಮಾರ್ಕ್ಸ್ ಬಂದಿತ್ತು. ಸ್ವಲ್ಪ ಜನ ಬೇರೆ ಉರಿಗೆ ಹೋದರು. ಅದರಲ್ಲಿ ನಮ್ಮ ರಾಘುನ ರಿಚಾರ್ಜ್ ಕೂಡ ಇದ್ದರು. ಸ್ವಲ್ಪ ದಿನಾ ಮಿಸ್ ಮಾಡ್ಕೊಂಡ್ ಅವನು ಸ್ವಲ್ಪ ದಿನಕ್ಕೆ ಛೋಟಾ ರಿಚಾರ್ಜ್’ನ ಹಿಡಿದಿದ್ದ.

ಅವಳಿಗೆ ಅಂಥ ಅಲ್ಲಾ ಬೇರೆ ಎಲ್ಲಾ ಹುಡ್ಗೀರ್ ಜೊತೆ ನಾನ್ ಹಾಗೆ ಇದ್ದೆ. ಮುಂದೆ ನಾನು ರಾಘು ನಮ್ಮೂರಲ್ಲೇ ಡಿಗ್ರಿ ಸೇರ್ಕೊಂಡ್ವಿ. ನೋಕಿಯಾ ಮತ್ತೆ ಗುಂಪು ಬೇರೆ ಕಾಲೇಜ್’ಗೆ ಹೋಗ್ತಿದ್ರು. ಸಿಕ್ಕಾಗ ರಾಘು ಅವರ ಜೊತೆ ಮಾತಾಡ್ತಾ ಇದ್ದ. ನಾನು ಸ್ವಲ್ಪ ಸ್ಮೈಲ್ ಕೊಟ್ಟು ಮುಂದೆ ಹೋಗಿಬಿಡ್ತಾ ಇದ್ದೆ, ಏನೋ ಕೆಲಸ ಇರೋ ಸ್ಟೈಲ್’ನಲ್ಲಿ….ಡಿಗ್ರಿಲಿ ಸ್ವಲ್ಪ ಜನ ಒಳ್ಳೆ ಹುಡ್ಗೀರು ಮಾತಾಡ್ತಾ ಇದ್ರೂ. ಅಷ್ಟಕ್ಕೆ ಅಸ್ಟೆ ಮಾತು ನಂದು. ಆದರೆ ಹುಡಗರ ಅಷ್ಟೇ ಇದ್ರೆ ಸಿಕ್ಕಾಪಟ್ಟೆ ಮಾತಾಡ್ತಾ ಇದ್ದೆ…ಬೇರೆ ಬೇರೆ ಉರಿಗೆ ಹೋಗ್ತಾ ಇದ್ವಿ…ಎಲ್ಲರು ಸೇರಿ ರೂಂನಲ್ಲೆ ಓದೋದು…ಕಾಲೇಜ್ ಬಗ್ಗೆ ಕಾಮೆಂಟ್ ಮಾಡೋದು. ಒಳ್ಳೆ ಮಜಾ ಲೈಫ್ ಇತ್ತು. ಹಿಂಗೆ ಮಾಡ್ತಾ ಮೂರು ವರ್ಷ ಕಳೆದವು.

ಅವತ್ತು ನಮ್ಮ ಫೈನಲ್ ಎಕ್ಸಾಮ್ ಮುಗಿದ ತಕ್ಷಣ ಒಂದು ಕಂಪನಿ ಅವರು ಕ್ಯಾಂಪಸ್ ಸೆಲೆಕ್ಷನ್’ಗೆ ಬಂದಿದ್ರು. ಎಲ್ಲಾ ರೆಡಿ ಆಗಿ ಬಂದು ಎಕ್ಸಾಮ್ ಬರೆದು ಹೊರಗೆ ಬಂದ್ವಿ. ನೋಕಿಯಾ ಅವರ ಕಾಲೇಜ್ ನಮ್ಮ ಕಾಲೇಜ್’ಗೆ ಕ್ಯಾಂಪಸ್’ಗೆ ಬಂದಿದ್ರು. ಅವಳು ಇಂಟರ್ವ್ಯೂ ರೂಂನಿಂದ ಹೊರಗೆ ಬರ್ತಾ ಇದ್ದಂಗೆ ನನ್ನ ಹೆಸರು ಕರದ್ರು. ಒಳಗೆ ಹೋಗೋ ದಾರಿಯಲ್ಲಿ ಆಲ್ ದಿ ಬೆಸ್ಟ್ ಅಂದಳು. ಮೂರು ವರ್ಷ ಅದ್ಮೇಲೆ ಅವಳ ನನಗೆ ವಿಶ್ ಮಾಡಿದಳಲ್ಲ ಅನ್ಕೊಂಡು ಸುಮ್ನೆ ಒಳಗೆ ಹೊದೆ, ರಾತ್ರಿ ಎಲ್ಲಾ ರೂಂನಲ್ಲಿ ಪ್ರಿಪೇರ್ ಆಗಿದ್ದು ಬಾಯಿಗೆ ಬರ್ತಾ ಇರ್ಲಿಲ್ಲ. ಸಮಾಧಾನವಾಗಿ ಉತ್ತರ ಹೇಳಿದೆ. ಎರಡನೇ ಉತ್ತರಕ್ಕೆ ಆಯ್ತು ಹೋಗಿ ನಾಳೆ ತಿಳಿಸ್ತೀವಿ ಅಂದ್ರು. ಒಳಗೆ ಹೋದಾಗಿನಿಂದ ಮನಸಲ್ಲಿ ಏನೋ ಕಳೆದುಕೊಂಡ ಭಾವನೆ ಇತ್ತು. ಹೊರಗೆ ಬಂದ್ರು ಅದು ಇನ್ನು ಹೋಗಿರಲಿಲ್ಲ.ಕಣ್ಣು ಮಾತ್ರ ಯಾರನ್ನೋ ಹುಡುಕ್ತಾ ಇತ್ತು. ರಾಘು ಬಂದ “ಲೋಫರ್ ನೋಕಿಯಾ ವಿಶ್ ಮಾಡಿದ್ರೆ ಥ್ಯಾಂಕ್ಸ್ ಹೇಳೋಕು ಅಗಲ್ವಾ?”ಅಂದ. ಅವಾಗ ಅನ್ನಿಸ್ತು ನಾನ್ ಮಿಸ್ ಮಾಡ್ಕೊಂಡಿದ್ದು ಅದನ್ನೇ ಅಂತ.

ನಾನು ರಾಘು ಅವನ ಇಂಟರ್ವ್ಯೂ ಅದ್ಮೇಲೆ ಮನೆಗೆ ಹೋದ್ವಿ. ಅದೇನೋ ಕಳಕೊಂಡ ಭಾವನೆ ಎಷ್ಟು ಇತ್ತು ಅಂದ್ರೆ ಮೈ ಬಿಸಿ ಆಗಿತ್ತು. ಅಕ್ಕಾ ಅದಕ್ಕೆ ಸೈಕೊ ಸೋಮಾಟಿಕ್ ಅಂತಾಳೆ. ಅದೇ ಇರ್ಬೇಕು. ಕಂಪ್ಯೂಟರ್ ಆನ್ ಮಾಡಿ ಎರಡು ನಿಮಿಷ ಗೇಮ್ ಆಡಿದೆ ಸಮಾಧಾನ ಇರ್ಲಿಲ್ಲ, ಟಿ ವಿ ನೋಡಿದೆ ಸಮಾಧಾನ ಇರ್ಲಿಲ್ಲ.ಅವತ್ತು ಅದೇನೋ ಆಗ್ತಾ ಇತ್ತು. ಇದೇ ಥರಾ ನಂಗೆ ನಮ್ಮ ಅಜ್ಜಿ ತೀರಿಕೊಂಡಾಗ ಆಗಿತ್ತು. ಅವತ್ತು ನಾನು ಬೇರೆ ಊರಲ್ಲಿ ಇದ್ದೆ. ಅದನ್ನೇ ನೆನಪು ಮಾಡಿಕೊಂಡು ಎಲ್ಲರ್ಗೂ ಫೋನ್ ಮಾಡಿ ಕನ್’ಫರ್ಮ್ ಮಾಡಿಕೊಂಡೆ. ಎಲ್ಲಾ ಸರಿಯಾಗಿದೆ. ಆ ಆರು ಗಂಟೆ ಇಂದ ಹತ್ತು ಗಂಟೆ ಸಿಕ್ಕಾಪಟ್ಟೆ ಗೊಂದಲ,ಹಿಂಸೆ ಅನ್ಸಿತ್ತು. ಹತ್ತು ಗಂಟೆಗೆ ಅಮ್ಮಾ ಅಪ್ಪ ಬಂದ್ರು. ಊಟ ಮಾಡೋಣ ಅಂದ್ರೆ ಇಷ್ಟ ಇರ್ಲಿಲ್ಲ. ಸ್ವಲ್ಪ ಹಾಲು ಬ್ರೆಡ್ ತಿಂದು ಮಲಗಿದೆ.

ಮುಂದುವರಿಯುವುದು….

Anand R C, aanu.rc@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post