ಅಂತೂ ಇಂತೂ ಮಧ್ಯಾಹ್ನ ಮೀನು ಸಾರಿನೂಟದಲ್ಲಿ ನಿಷ್ಪನ್ನವಾದ ಜಗಳ ಮನೆ ಪಾಲಾಗುವುದರಲ್ಲಿ ಪರ್ಯಾವಸನಗೊಂಡಿತು. “ಆ ಸೂಳೆ ಮಗ್ನಿಗೆ ಒಂದು ಮೆಟ್ಟು ಜಾಗಾನೂ ಕೊಡುದಿಲ್ಲೆ” ಎಂದು ಯಕ್ಷಗಾನದ ದುರ್ಯೋಧನನೋಪಾದಿಯಲ್ಲಿ ಪಟ್ಟುಹಿಡಿದು ಕುಳಿತಿದ್ದ ಮುದುಕಿ ಹೆಂಗಸನ್ನು ಊರ ಹತ್ತು ಜನರು ಸಮಾಧಾನಿಸಿ, ಮನೆ ಕಟ್ಟಿಕೊಳ್ಳಲೆಂದು ಒಂದು ಗುಂಟೆ ಜಾಗವನ್ನು ಹಾಳು ಬಿದ್ದ ಒಣ ಬ್ಯಾಣದ ತುದಿಯಲ್ಲಿ ತೆಗೆಸಿಕೊಟ್ಟರು. ಮೂಡಣದ ಮತ್ತು ಪಡುವಣದ ಬಿಸಿಲು ಮುಲಾಜಿಲ್ಲದೇ ರಾಚಿ ನೆಲವನ್ನೆಲ್ಲಾ ಕಾಯಿಸಿ ನಿಮಿಷದಲ್ಲೇ ತಡೆಯಲಾರದ ಉರಿಯೆಬ್ಬಿಸಿಬಿಡುತ್ತಿತ್ತು. ಅಲ್ಲದೇ ಬೇಸಿಗೆಗಾಲದಲ್ಲಿ ಒಣಗಿ ನಿಂತಿರುತ್ತಿದ್ದ ಕರಡದ ಹುಲ್ಲುಗಳು ಯಾವ ಕ್ಷಣದಲ್ಲಿ ಬೇಕಾದರೂ ಬಿಡಾರವನ್ನು ಅಗ್ನಿಯ ಕೆನ್ನಾಲಿಗೆಗೆ ನೂಕಿ ಬಿಟ್ಟು ಬೂದಿಯನ್ನು ಕೂಡ ಬೀಸುವ ಕೆನ್ನಾಲಿಗೆಗೆ ತೂರಿಬಿಡಬಲ್ಲ ತಾಕತ್ತು ಹೊಂದಿದ್ದಂಥವು. ಇಂಥಾ ಒಣಜಾಗದಲ್ಲೂ ಕೂಡ ವೈನಾಗಿ ಪುಟ್ಟದೊಂದು ಬಿಡಾರವನ್ನೆಬ್ಬಿಸಿಬಿಟ್ಟಿದ್ದ ಸುಕ್ರ. ಕೈ-ಕಿಸೆಯ ಸಹಕಾರ ದೂರದ ಮಾವನ ಮನೆಯವರದ್ದಾಗಿತ್ತೆನ್ನುವುದು ಸರ್ವವಿದಿತ ವಿಚಾರ. ಪಾಲು ಕೊಡಲು ಬೆನ್ನಿಗೆ ಬಿದ್ದ ವಯಸ್ಸಿಗೆ ಬರದ ತಮ್ಮ-ತಂಗಿಯರ ಸಹಿ ಬೇಕಾದ್ದರಿಂದ ವ್ಯಾಜ್ಯದ ವಿಚಾರಣೆಯ ಪ್ರಮೇಯವೇ ಇರಲಿಲ್ಲ. ಮೂರೇ ಮೂರು ತಿಂಗಳಲ್ಲಿ ಬರೋಬ್ಬರಿ ಕಲ್ಲಿನ ಗೋಡೆಯನ್ನೇ ಹಾಕಿ ಮನೆಕಟ್ಟಿ ಮುಗಿಸಿದವನಿಗೆ ಹೊಟ್ಟೆಗೆ-ಬಟ್ಟೆಗೆ ದುಡಿಯುವುದೊಂದು ಬಾಕಿ ಇತ್ತು. ಇಷ್ಟೆಲ್ಲಾ ಆಗಿ ಆರು ತಿಂಗಳಲ್ಲಿ ಗಂಡ ತೀರಿಹೋಗಿ ಮುದುಕಿಯ ಕುಂಕುಮ ಅಳಿಸಿ ಹೋದ ಜೊತೆಗೆ ವೃದ್ಧಾಪ್ಯದ ಮಿದುತನವೂ ಅಟಕಾಯಿಸಿ ಹಣ್ಣಾಗಿಸಿತ್ತು.
ಸುಭದ್ರೆ ಬಿನ್ ಸುಬ್ಬಿಯೇನೋ ಗಂಡನಿಗೆ ಹೇಳಿಯೇ ಹೇಳಿದಳು; ಪರವೂರಿಗೋ, ಭಟ್ಕಳ ಪ್ಯಾಟೆಗೋ ಹೋಗಿ ಕಲ್ಲು ಕೆಲಸವೋ, ಸೆಂಟ್ರಿಂಗೋ, ಮತ್ತೊಂದು ಮರದೊಂದು ಮಾಡುವ ಬದಲು ಸ್ವಗ್ರಾಮದ ಫ಼ೂಟುದೊರೆ ಮಂಜುನಾಥ ಹೆಬ್ಬಾರರ ಮನೆಯಲ್ಲೇ ಕೆಲಸ ಮಾಡಿ ಎಂದು. ಎಂಟೆಕರೆ ತೋಟದ ಮೇಲೆ ಆರೆಕರೆ ನೀರಾವರಿ ಜಮೀನಿದ್ದು, ವರ್ಷಕ್ಕೊಂದೆ೦ಭತ್ತು ಕ್ವಿಂಟಾಲ್ ಅಡಿಕೆ, ಇಪ್ಪತ್ತು ಕ್ವಿಂಟಾಲ್ ಗೇರುಬೀಜ, ಕತ್ತೆತ್ತಿ ಹಿಂಬದಿಯ ಕೂದಲನ್ನು ಬೆನ್ನಿಗೆ ತಾಗಿಸಿ ನೋಡುವಷ್ಟೆತ್ತರದ ಭತ್ತದ ರಾಶಿ ಹಾಕುವ ಶಕ್ತಿಯಿರುವವರನ್ನು ಫ಼ೂಟು ದೊರೆಯೆನ್ನದೇ ಇನ್ನೇನೆನ್ನಬೇಕು? ಕಜ ಗಟ್ಲೆ ಮಿತಿಮೀರಿ ಮನೆ ಹರಿದು ಪಾಲಾಗಿ, (ಅಸಲಿಗೆ ’ಪಾಲು’ ಕೊಟ್ಟಿರಲೇ ಇಲ್ಲ) ರಾಡಿ ಹಿಡಿದ ಹಾಸಿಗೆ ದಿಂಬುಗಳನ್ನೆತ್ತಿಕೊಂಡು, ಬೆಟ್ಟ ಹತ್ತಿ ಕುಕ್ಕುರುಗಾಲಲ್ಲಿ ಕೂತವರನ್ನು ನೋಡಿದಾಗಲೇ ಮಂಜುನಾಥ ಹೆಬ್ಬಾರರು ಅಲ್ಪ ಸ್ವಲ್ಪ ಸಹಾಯ ಮಾಡಿ ಕೆಲಸಕ್ಕೆ ಕರೆದಿದ್ದರು. ಊರಲ್ಲಿರುವ ಮೀಸೆ ಮೂಡಿದ, ಮೂಡುತ್ತಿರುವ ಗಂಡು ಹೈಕಳೆನಿಸಿಕೊಂಡವರೆಲ್ಲಾ ದಿನಾ ಲಟಾರು ಕೇಸಾರ್ಟೀಸಿ ಬಸ್ಸಿನ ಬಾಗಿಲ ಕೊನೇ ಮೆಟ್ಟಿಲ ಮೇಲೆ ಠಳಾಯಿಸಿ ಹತ್ತಿಳಿಯುವ ಲಲನಾಮಣಿಗಳ ಆಧುನಿಕ ಸಮಾಜದಂಥ ಉಬ್ಬು ತಗ್ಗುಗಳನ್ನು ಸವಿಯುವುದರಲ್ಲಿ ತೊಡಗಿರುವಾಗ ಜಮೀನು-ಮನೆಯ ಕೆಲಸವನ್ನಾರು ಗೇಯುತ್ತಾರೆ? ಕತ್ತಿ-ಗುದ್ದಲಿ ಹಿಡಿದು ಮೈಗೊಂದಿಷ್ಟು ಬಗ್ಗಡ ಬಡಿದುಕೊಂಡು ಎಲ್ಲರೆದುರು ಬಾಗುತ್ತಾ, ಕಿಸಿಯುತ್ತಾ, ಕಂಡಕಂಡವರ ಕಾಲು ಹಿಡಿಯುತ್ತಾ ಬದುಕುವ, ಸಮಾಜದಲ್ಲೊಂದು ಪ್ರತಿಷ್ಠೆ-ಗೌರವ-ಸಮ್ಮಾನಗಳನ್ನು ಕೊಡದ ರೈತಾಪಿ ಕೆಲಸ ಯಾರಿಗೆ ತಾನೇ ಬೇಕು? ಇಂತಿಪ್ಪ ನಿಯಾಮಕ ಪ್ರೇರಿತ ಕಾಲ-ದೇಶ-ಸನ್ನಿವೇಶಗಳಲ್ಲಿ ಕಡಲೆಯಿದ್ದೂ ಹಲ್ಲಿಲ್ಲದ ಮಂಜುನಾಥ ಹೆಬ್ಬಾರರು ಸುಕ್ರನೆಂಬೋ ಬಡಪಾಯಿಯನ್ನು ಕೆಲಸಕ್ಕೆ ಕರೆದುದರಲ್ಲಿ ತಪ್ಪಿನ ಬಾಬತ್ತೇ ಇಲ್ಲ. ಸುಬ್ಬಿಗೂ ಕೂಡ ಗಂಡ ಊರಲ್ಲಿದ್ದು ಅಕ್ಕಪಕ್ಕದ ದೊಡ್ಡವರೆನಿಸಿಕೊಂಡವರ ಮನೆಗೆಲಸ ಮಾಡುತ್ತಾ ಸಂಸಾರದ ಉಪದ್ವ್ಯಾಪಗಳ ನೊಗಕ್ಕೆ ಹೆಗಲುಕೊಟ್ಟರೆ ಸಾಕೆಂಬ ಆಲೋಚನೆಯಿತ್ತು. ಆದರೆ ಸ್ವಭಾವತಃ ಸ್ವೇಚ್ಚಾಚಾರಿಯಾದವ ಯಾರ ಮಾತನ್ನು ಕೇಳುತ್ತಾನೆ? ಅದರಲ್ಲೂ ಹೆಂಡತಿಯ ಮಾತನ್ನು ಅಗ್ರಾಹ್ಯವಾದುದೆಂದು ಎಡಗೈಯ ಕನಿಷ್ಠ ಬೆರಳಿನಿಂದ ತಳ್ಳಿಬಿಟ್ಟ. ಊರಿನಲ್ಲೇ ಕೆಲಸ ಮಾಡಿಕೊಂಡಿದ್ದರೆ ಹೋಗಿ ಬರುವವರೆಲ್ಲರಿಗೂ ಸಸಾರವಾಗುತ್ತೇನೆಂಬ ಭಾವನೆ. ಅಲ್ಲದೇ ಬರೀ ಮುನ್ನೂರು ರೂಪಾಯಿ ಕೊಡುವ ಸುಲಭದ ಊರಕೆಲಸಕ್ಕಿಂತ ಮುನ್ನೂರರ ಮೇಲೊಂದೈವತ್ತು ಸೇರಿಸಿ ಕೊಟ್ಟು ಮೈಮುರಿಯೆ ಗೇಯಿಸಿಕೊಳ್ಳುವ ಕಲ್ಲುಕ್ವಾರಿಯ ಕೆಲಸ ಕೈಬೀಸಿ ಕರೆದಿತ್ತವನನ್ನು. ದಿನದಿನ ಐವತ್ತು ರೂಪಾಯಿ ಹೆಚ್ಚು ಸಂಚಯಿಸಿಡುವುದನ್ನು ಲೆಕ್ಕ ಹಾಕ ಹೊರಟವ , ತಾನು ಕಳೆದುಕೊಂಡ ಜನಬಲ, ಸ್ವಾಸ್ಥ್ಯ, ಪ್ರೀತಿ, ಕರುಣೆಗಳಿಗೆ ರಸೀತಿ ಪುಸ್ತಕವನ್ನೇ ಇಟ್ಟಿರಲಿಲ್ಲ. ಆತ ದುಡಿಯುವಲ್ಲಿ ದೇಸಿ ಮೂಲವಾದ ಯಜಮಾನ-ಸೇವಕ ಭಾವನೆಯಿಲ್ಲದೇ ಕೇವಲ ಕರೆಸಿ ಕೆಲಸ ಕೊಟ್ಟು ಮರೆತು ಬಿಡುವ ಪಾಶ್ಚಿಮಾತ್ಯ ವಿತ್ತ ಸಂಬಂಧೀ ಅಂಕುಶ ಮಾತ್ರವಿತ್ತು. ಆ ಕಡೆ ಹೋದವ ಈ ಕಡೆಯ ಊರವರಿಗೆ ಉಚ್ಛಿಷ್ಠ ಪ್ರಸಾದದಂತಾದ.
ಅರೆಮಲೆನಾಡಿನ ನಿಬಿಡವಾದ ಹಸಿರು ಸಸ್ಯರಾಶಿಯನ್ನೊಳಗೊಂಡು ಭೂದೇವಿಯ ವಕ್ಷೋಜಗಳಂತೆ ಶೋಭಿಸುತ್ತಿದ್ದ ಬೆಟ್ಟ ಪ್ರದೇಶಗಳ ಮಧ್ಯದ ಹಳ್ಳಿಯಲ್ಲಿ ತಲೆಯೆತ್ತಿದ್ದ ಕಲ್ಲುಕ್ವಾರೆ, ತಾಯಿಯ ಉದರ ಪ್ರದೇಶವನ್ನು ಚಕ್ಕೆಚಕ್ಕೆಯಾಗಿ ಬಗೆದು ತೆಗೆಯುತ್ತಿರುವಂತೆ ಭಾಸವಾಗುತ್ತಿತ್ತು. ಹೆಚ್ಚುತ್ತಿರುವ ವಿಲಾಸೀ ಜೀವನ ಶೈಲಿ ಮತ್ತು ಕ್ಷಿಪ್ರವಾಗಿ ಬೆಳೆದು ಸುತ್ತಲೆಲ್ಲಾ ವ್ಯಾಪಿಸುತ್ತಿರುವ ನಗರದ, ಹೊಸಹೊಸ ಅವಶ್ಯಕತೆಗಳನ್ನು ಪೂರೈಸಲು ಹುಟ್ಟಿಕೊಂಡ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಸಮರ್ಥ ಕಚ್ಚಾವಸ್ತುವಾದ ಕೆಂಪುಕಲ್ಲಿಗೆ ನಿರವಧಿಕ ಬೇಡಿಕೆಯಿರುವುದು ಸಹಜವೇ ಸರಿ. ಒಂದಿಷ್ಟು ಸಲಕರಣೆಗಳನ್ನಿಟ್ಟುಕೊಂಡು ಪೂರ್ವೋಕ್ತ ಉದ್ಯಮಕ್ಕೆ ಕೈಹಾಕಿದವರೆಲ್ಲಾ ವರ್ಷಾಂತ್ಯದಲ್ಲಿ ಸಾಹುಕಾರರಾಗಿ ಬಿಟ್ಟಿದ್ದರು. ಪೇಟೆಯ ಹೊರ ವಲಯದಲ್ಲಿ ಶುರುವಾದ ಭೂ ಕೊರೆತದ ಕೆಲಸ ಕ್ರಮೇಣ ಹಳ್ಳಿ ಹಳ್ಳಿಗೂ ವಿಸ್ತರಿಸಿತ್ತು. ಉತ್ತಮ ಕಲ್ಲಿನ ಪದರುಗಳನ್ನು ಹುಡುಕಿ ಬಂದ ಸಾಹುಕಾರ ಮಹಾಶಯರುಗಳು ಫಲವತ್ತಾದ ಜಮೀನುಗಳನ್ನು ಹಣದ ಆಸೆತೋರಿಸಿ ಹೊಂಡ ಕೊರೆದು ದಿವಾಳಿಗೇರಿದ್ದರು. ಕಲ್ಲು ಖಾಲಿಯಾದ ನಂತರ ಬಗೆದ ಹೊಂದ ಮುಚ್ಚಲು ರೈತರಿಂದಲೆ ಹಣ ಕೇಳಿದ ಪರಿಣಾಮವಾಗಿ, ಪ್ರತೀ ಹಳ್ಳಿಯಲ್ಲೂ ಎಲ್ಲೆಂದರಲ್ಲಿ ಕೆಂಪು ಪೊಟರೆಗಳು ಕಣ್ಣಿಗೆ ರಾಚುತ್ತಿದ್ದವು. ಒಂದಿಷ್ಟು ಹಣ ಸಿಕ್ಕಾಕ್ಷಣ ಮಹಾಪ್ರಸಾದವೆಂದು ಜಮೀನು ಬಿಟ್ಟುಕೊಟ್ಟವರು ವರ್ಷವೆರಡು ಮುಳುಗುವುದರಲ್ಲಿ ತಮ್ಮ ಮೂರ್ಖತ್ವವನ್ನು ನೆನೆ-ನೆನೆದು ತಲೆಮಾರು ಸವೆದರೂ ಮುಚ್ಚಲಾಗದ ಬೃಹತ್ ಡೊಗರುಗಳನ್ನು ನೋಡಿ ಕಣ್ಣೀರಿಡುತ್ತಿದ್ದರು. ಕ್ವಾರಿಯ ಕೆಲಸದ ಸಮಯದಲ್ಲೆದ್ದ ಧೂಳು ಸುತ್ತಲೆಲ್ಲಾ ಪಸರಿಸಿ, ಪಟ್ಟು ಬಿಡದೇ ದಪ್ಪಗಾಗಿ ಕೂತು, ಒಂದೆರಡು ಜಿರಾಪತಿ ಮಳೆಬಂದಾಗ, ನೀರೊಂದಿಗೆ ಹರಿದು ಊರಿಗೆ ಊರೇ ರಕ್ತಸ್ರಾವದಿಂದ ಕರಗಿ ಹೋಗುತ್ತಿರುವ ಭ್ರಮೆ ಹುಟ್ಟಿಸುತ್ತಿತ್ತು.
ಇಂಥಾ ಸಣ್ಣಪ್ರಮಾಣದ ಉದ್ಯಮಗಳಿಗೆ ಆಗಾಗ ಒಣ ಭೂಮಿ ಬಯಲುಸೀಮೆ ಪ್ರಾಂತ್ಯದ ಜನರು ಬಂದು ಸೇರುತ್ತಿದ್ದುದುಂಟು. ಸ್ವಾಂಪನೂ ಹಾಗೇ. ಅವನ ನಿಜನಾಮಧೇಯ ಸ್ವಾಮಪ್ಪ ದ್ಯಾಮಪ್ಪ ಬೆಳ್ಳುಳ್ಳಿ ಇರಬಹುದು; ಅಸಲಿಗೆ ಬೆಳ್ಳುಳ್ಳಿಯೋ, ಈರುಳ್ಳಿಯೋ, ಮೆಣಸಿನಕಾಯಿಯೋ ಅಥವಾ ಆಲೂಗಡ್ಡೆಯೋ ಅವನಿಗೂ ಗೊತ್ತಿಲ್ಲ. ಎಲ್ಲರಿಗೂ ಸ್ವಾಮಪ್ಪ, ಸ್ವಾಮಪ್ಪ ಎಂದು ಕರೆಯಲು ಬೇಸರವುಂಟಾಗಿ ಚಿಕ್ಕ-ಚೊಕ್ಕದಾಗಿ ಸ್ವಾಂಪ ಎಂದಿಟ್ಟುಕೊಂಡಿದ್ದರು. ಎರಡ್ಮೂರು ವರ್ಷದ ಹಿಂದೆ ತನ್ನ ಮೂಲ ಒಣ ಬಂಜರು ಭೂಮಿಯನ್ನು ಬಿಟ್ಟೋಡಿ, ಘಟ್ಟವಿಳಿದು, ಕರಾವಳಿ ಸೀಮೆಗೆ ಬಂದವ, ಆಗಷ್ಟೇ ಚಿಗುರುತ್ತಿದ್ದ ಕಲ್ಲು ಗಣಿಗಾರಿಕೆಯ ಉದ್ಯಮದೊಳಗೆ ನುಸುಳಿಕೊಂಡಿದ್ದ. ಪ್ರಾರಂಭದಲ್ಲಿ ಸುಕ್ರನಂತೆಯೇ ಕಲ್ಲು ಹೊರುತ್ತಿದ್ದವ, ನಿಧಾನಕ್ಕೆ ಕೊರೆಯುವ ಯಂತ್ರದ ಚಾಲಕನಾಗಿಬಿಟ್ಟಿದ್ದ. ಆಗಾಗ ತನ್ನೂರನ್ನೂ ನೆನಪಿಸಿಕೊಳ್ಳುತ್ತಾನವ. ಮಳೆಗಾಗಿ ಆಕಾಶ ನೋಡುತ್ತಾ ಕಣ್ಣಿಗೆ ಕಂಡ ಕಟ್ಟೆಯ ಮೇಲೆ ಮಲಗಿ, ಇಸ್ಪೀಟು ಆಡುತ್ತಾ ಕಾಲ ಕಳೆಯುತ್ತಿದ್ದ. ಇನ್ನು ಒಣ ಬೇಸಾಯ ಸಾಧ್ಯವೇ ಇಲ್ಲವೆಂದಾಗ ಇದ್ದ ಹರಕು ಜೋಪಡಿಯೊಂದನ್ನು ಸಮಾಧಿಗೊಳಿಸಿ, ಹೊಸ ಹೆಂಡತಿಯೊಂದಿಗೆ ಮೂಟೆ ಕಟ್ಟಿ ಹೊರಟವ ಭಟ್ಕಳದಲ್ಲಿ ಪ್ರತ್ಯಕ್ಷನಾಗಿದ್ದ. ಕೆಲಸವಿಲ್ಲದೇ ಕಾಲಕಳೆಯುತ್ತಾ, ಮಳೆಗಾಗಿ- ಹಣೆಯ ಮೇಲೆ ಕೈಯಿಟ್ಟು ಕಣ್ಣು ಕಿರಿದುಗೊಳಿಸಿ ನಿರೀಕ್ಷಿಸುತ್ತಾ, ಬೇಸಾಯಕ್ಕೆ ಮತ್ತು ಮಣ್ಣಿನ ಕಂಪಿಗೆ ಹಾತೊರೆಯುತ್ತಿರುವವರು ಒಂದು ಕಡೆಗಾದರೆ ಅದ್ಭುತ ಫಲವತ್ತತೆಯ ಜಮೀನು ಹೊಂದಿ, ಅಗೆದಲ್ಲಿ ನೀರು ಸಿಗುವ ಜಾಗದಲ್ಲಿದ್ದೂ ಕೂಡ ಆಧುನೀಕರಣದ ಮೂಲ’ಭೂತ’ವಾದ ಕಂಪ್ಯೂಟರು, ಸರ್ಕಾರಿ, ಪ್ರೈವೇಟು, ಜಾಬು ಮುಂತಾದ ಒಣಶಬ್ದಗಳಿಗೆ ಮಾರುಹೋಗಿ, ಪ್ರತಿಷ್ಠೆ-ಅಹಮ್ಮು-ನಮಸ್ಕಾರಗಳಿಗೆ ದಾಸರಾಗುತ್ತಿರುವವರು ಇನ್ನೊಂದು ಕಡೆ. ಪ್ರಕೃತಿ-ಪುರುಷ ಮಾಯೆಯ ವೈಶಾಲ್ಯತೆ, ಕಾಲ ಕೊಡುವ ಸಂಪನ್ಮೂಲಗಳ ವ್ಯತಿರಿಕ್ತತೆಯೆಂದರೆ ಇದೇ ಅಲ್ಲವೇ? ಒಬ್ಬರಲ್ಲಿ ಹಲ್ಲಿದ್ದು ಕಡಲೆಯಿಲ್ಲದಿದ್ದರೆ, ಇನ್ನೊಬ್ಬರಲ್ಲಿ ಹಲ್ಲೂ ಇದೆ, ಕಡಲೆಯೂ ಇದೆ; ಆದರೆ ಬಾಯಿಗೆ ಹಾಕಿ ಜಗಿಯಲು ಆಲಸ್ಯ. ಜಗಿಯುವ ಕೆಲಸವನ್ನಾರು ಮಾಡುತ್ತಾರೆಂಬ ಅಸಡ್ಡೆ. ಇಂತಿಪ್ಪ ವಿಪನ್ನ ಮನಸ್ಸಿನ ಆಧುನಿಕತೆಯ ಹರಕು ಮುಖವಾಡ ಹೊತ್ತ ಅರೆಮಲೆನಾಡಿನ ಹೊಸಪೀಳಿಗೆಯ ಯುವಜನತೆಯ ಮಧ್ಯೆ ಬದುಕಿದ್ದ ಸ್ವಾಂಪ. ಆತನಿಗೂ ಆಸೆಗಳಿದ್ದವು; ಒಂದು ವರ್ಷದ ಮಗನಿಗೆ ಶಿಕ್ಷಣ ಕೊಡಿಸಬೇಕು, ಹಳ್ಳಿಯೊಂದರಲ್ಲಿ ಚಿಕ್ಕ ಜಮೀನು ಖರೀದಿಸಿ ನೆಲೆಗೊಳ್ಳಬೇಕು, ಪುಟ್ಟದೊಂದು ಮನೆ ಕಟ್ಟಬೇಕು ಇತ್ಯಾದಿ ಇತ್ಯಾದಿ. ಆದರವೆಲ್ಲವೂ ತಿರುಕನ ಕನಸಿನಷ್ಟು ಸತ್ಯಸಮೀಪವಾಗಿತ್ತು. ಖರೀದಿಸಿ ನೆಲೆಗೊಳ್ಳಲು ಜಮೀನಿರಲಿಲ್ಲವೆಂದೇನಲ್ಲ; ಆಗಲೇ ಹೇಳಿದಂತೆ ಭೂಮಿಗಾಗಿ ಹಪಹಪಿಸುವ ಸ್ವಾಂಪನಂಥ ಒಬ್ಬನ ನಡುವೆ, ಮಾರಾಟ ಮಾಡಿ ಮಹಾನಗರಗಳಿಗೆ ಓಡಿ ಹೋಗಲು ತುದಿಗಾಲಲ್ಲಿ ನಿಂತ ಹಲವರಿದ್ದರು. ಹಣ ಕೊಟ್ಟು ಪಡೆದುಕೊಳ್ಳುವ ತಾಕತ್ತು ಆತನ ಹರಿದ ಕಿಸೆಗಿರಲಿಲ್ಲ. ಕಲ್ಲು ಕೊರೆಯುವ ಕೆಲಸದ ದಿನಗೂಲಿ ಐವತ್ತರ ಜೊತೆಗೆ ಹೆಂಡತಿ ಗುರವ್ವಳ ಮುನ್ನೂರು ಸೇರುತ್ತಿತ್ತೋ ಏನೋ; ಬರೀ ಗಂಡಸರೇ ಕೆಲಸ ಮಾಡುವೆಡೆ ದುಡಿಯುವುದು ಬೇಡ ಅಂದುಬಿಟ್ಟಿದ್ದ. ಕ್ವಾರೆಯಿಂದ ಐವತ್ತು ಮಾರು ದೂರದಲ್ಲಿ, ಸುಕ್ರನ ಕಲ್ಲು ಬಿಡಾರಕ್ಕೊಂದು ಕೂಗಳತೆಯಷ್ಟರಲ್ಲಿ ಇವರು ಟೆಂಟು ಹಾಕಿಕೊಂಡಿದ್ದರು. ಕೂಲಿ ಕೆಲಸದಲ್ಲೇ ಜೀವನ ಕಂಡುಕೊಳ್ಳುತ್ತೇನೆಂದು ಹೊರಟಿದ್ದ ಸುಕ್ರನ ನಿಲುವಿಗೆ ಪರಮ ವಿರೋಧಿ ಮನೋಭಾವವನ್ನು ಸ್ವಾಂಪ ಹೊಂದಿದ್ದರೂ ಅವರೀರ್ವರಲ್ಲಿ ದ್ವೇಷವೇನೂ ಹುಟ್ಟಿರಲಿಲ್ಲ.
ಈ ಲೋಕರಂಗದಲ್ಲಿ ಸುಕ್ರ, ಸ್ವಾಂಪ, ಸಾಹುಕಾರ, ಮಂಜುನಾಯ್ಕ ಹಾಗು ಇನ್ನೂ ಹಲನಾರು ಮುಖ್ಯ-ಅಮುಖ್ಯ ಪಾತ್ರಗಳು ತಾಲೀಮಿನಲ್ಲಿ ತೊಡಗಿಗುವಾಗ ಸೂತ್ರಧಾರಿಯೆನಿಸಿಕೊಂಡವ ನಾಟಕದ ಅಸ್ತಿ ಭಾರವನ್ನೇ ಬದಲಾಯಿಸಿಬಿಟ್ಟ. ಅದೊಂದು ಬಿರುಬಿಸಿಲಿನ ಮಧ್ಯಾಹ್ನ; ಕಿವಿಗಡಚಿಕ್ಕುವ ಶಬ್ದಕ್ಕೂ, ಧೂಳಿನ ರಾಕ್ಷಸದಲೆಗಳಿಗೂ, ಬಿಸಿಲಿನ ಬೇಗೆಗೂ, ಕೆಲಸದ ಆಯಾಸಕ್ಕೂ ಸಿಕ್ಕು ಸುಕ್ರ ಹೈರಾಣಾಗಿ ಹೋಗಿದ್ದ. ಒಂದರ ಹಿಂದೊಂದರಂತೆ ಗೋಣಿಚೀಲ ಹೊದ್ದ ತಲೆಯ ಮೇಲೆ ಬಂದು, ಕುಳಿತು ಹೋಗುತ್ತಿತ್ತು ಮಹಾಭಾರದ ಕಲ್ಲು. ಯಾವತ್ತೂ ಇಲ್ಲದ ಭಾರವನ್ನು ಇವತ್ತೇ ಅನುಭವಿಸುತ್ತಿದ್ದ. ಒಂದೆರಡು ಸಲ ಸುಸ್ತಾಗಿ ನೀರು ಕುಡಿದು ಕುಂಡೆ ಊರಲೆತ್ನಿಸಿದನಾದರೂ ಸಾಹುಕಾರ ಗಂಟಲು ಹರಿಯುವಂತೆ ಕೂಗಿದ್ದರಿಂದ ಎದ್ದು ಓಡಿಹೋಗಿ ಕಲ್ಲು ಹೊರುವ ಕೆಲಸದಲ್ಲಿ ತೊಡಗಿದ್ದ. ಸೂರ್ಯನ ಊಷ್ಮ ಶಕ್ತಿಯ ಹೊಡೆತಕ್ಕೆ ತುತ್ತಾಗಿ ಕ್ವಾರೆಯ ಮೇಲೆ ಸಾಗುತ್ತಿರುವಾಗ ತೇಲುಗಣ್ಣು-ಮೇಲುಗಣ್ಣು ಮಾಡತೊಡಗಿದ್ದ. ನಿಧಾನವಾಗಿ ದಿಬ್ಬ ಹತ್ತಿ ಬರುತ್ತಿದ್ದಾಗ ಕಣ್ಣು ಕತ್ತಲೆಗಿಟ್ಟುಕೊಂಡಿತು. ಪಟಪಟನೆ ಕಣ್ಣು ರೆಪ್ಪೆ ಹೊಡೆದುಕೊಂಡಿತು. ಮಣ್ಣಿನ ರಾಶಿಯ ಮೆಲೆ ಹಿಮ್ಮಡಿ ಹೂತ ಪರಿಣಾಮವಾಗಿ ತೊಡರು ಗಾಲು ಹಾಕಿ ತಲೆಯ ಮೇಲಿದ್ದ ಕಲ್ಲಿನ ಸಮೇತ ಹತ್ತಡಿಯಾಳದ ಕಲ್ಲು ಹೊಂದದೊಳಕ್ಕೆ ರಪ್ಪನೆ ಬಿದ್ದ. ಕಾಲವೊಮ್ಮೆ ಸ್ಥಗಿತವಾಯಿತು. ಬೊಕ್ಕ ಬೊರಲಾಗಿ ಬಿದ್ದ ಹೊಡೆತಕ್ಕೆ ಕಲ್ಲುಪರೆಗೆ ಗುದ್ದಿ ತಲೆ ಜಜ್ಜಿತೋ ಏನೋ ಗೊತ್ತಿಲ್ಲ; ಹೊತ್ತಿದ್ದ ಕಲ್ಲು ಮಾತ್ರ ಎದೆಯ ಮೇಲೆ ಬಿದ್ದು ಅಸ್ಥಿಗೂಡನ್ನು ಒಡೆದಿತ್ತು. ಅದೇ ದಿಕ್ಕಲ್ಲಿ ಕೊರೆಯುತ್ತಿದ್ದ ಸ್ವಾಂಪನ ಮೆದುಳಿಗೆ ಸನ್ನಿವೇಶ ಗ್ರಹಣವಾಗಿ ಕೈ-ಕಾಲುಗಳು ಕೆಲಸ ಮಾಡುವಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ಯಂತ್ರದ ಸುದರ್ಶನ ಚಕ್ರ, ಎದುರಿಗೆ ಸಿಕ್ಕ ಸುಕ್ರನ ಕುತ್ತಿಗೆಯನ್ನು ಸಾಫಾಗಿ ಕತ್ತರಿಸಿ ರುಂಡ-ಮುಂಡಗಳನ್ನು ಬೇರೆಯಾಗಿಸಿಬಿಟ್ಟಿತ್ತು. ಕೆಂಪು ಕಲ್ಲಿಗೆ ಬಣ್ಣ ಕೊಟ್ಟ ರಕ್ತ, ಆಗಸ ಕೆಂಪಾಗುವ ಸಮಯದಲ್ಲಿ ಕಪ್ಪು ಬಣ್ಣಕ್ಕೆ ತಿರುಗಿತ್ತು.
ಎದುರು ಬದುರು ಕುಳಿತ ಪತ್ನಿ-ತಾಯಿಯರ ಲವಣಯುಕ್ತ ಕಣ್ಣೀರಿನಭಿಷೇಕದಲ್ಲಿ ಸುಕ್ರನಾಗಲೇ ಜಲಾಂಜಲದ ಉಪಾಧಿಗಳಿಂದ ಬಿಡುಗಡೆಗೊಂಡು ಸಮಷ್ಠಿಯಲ್ಲಿ ಸೇರಿ ಆರು ತಾಸಾಗಿತ್ತು. ಸರ್ಕಾರದ, ಅಧಿಕಾರಿ ವರ್ಗದ ಮಹಜರು ವಿಚಾರಣೆಗಳು ಮುಗಿಯದೇ ಹೆಣ ತೆಗೆಯುವಂತಿರಲಿಲ್ಲ. ಏಳು ತಿಂಗಳ ಪಿಂಡವನ್ನು ಹೊತ್ತಿದ್ದ ಸುಬ್ಬಿಯೂ ಅತ್ತು ಅತ್ತು ಸುಸ್ತಾಗಿ ಆಗಲೇ ಮೂರುಸಲ ಮೂರ್ಛೆ ತಪ್ಪಿದ್ದಳು. ಸುಕ್ರನೇನೋ ತನ್ನ ಗಂತವ್ಯಗೃಹಕ್ಕೆ ಸೇರಿಬಿಟ್ಟಿದ್ದ; ಭೂಮಿಯಲ್ಲಿ ಉಳಿದವರ ಬಾಳಿನ ಪಾಡೇನು? ಆಶಾಂತದಲ್ಲಿದ್ದು ಮರೆಯಾದ ಆಶಾಕಿರಣವೊಂದು ಆಕೆಯ ಬಾಳಲ್ಲಿ ಮರೆಯಲಾರದ ಅಚ್ಚೊತ್ತಿ ಹೋಗಿತ್ತು. ಊರವರೆಲ್ಲಾ ತಲೆಗೊಂದರಂತೆ ಆಡಿಕೊಳ್ಳುವ ಮಾತುಗಳಲ್ಲಿತನ್ನ ಗಂಡನನ್ನು ನುಂಗಿದ್ದು ಎರಡು ವರ್ಷದ ಹಿಂದೆ ಮದುವೆಯಾದ ತಾನೋ, ಏಳು ತಿಂಗಳ ಹಿಂದೆ ಚಿಗುರಿದ ಇನ್ನೂ ಅಪ್ಪನ ಮುಖಕಾಣದ ಪಿಂಡವೋ ಅಥವಾ ರಕ್ತಸೋಸುವಂತೆ ದುಡಿಸಿಕೊಂಡ ಆಧುನಿಕ ಸಮಾಜದ ವ್ಯಾಪಾರೀ ಮನೋಭಾವದ ಬುದ್ಧಿಯೋ ಎಂದು ತಿಳಿಯದೇ ಕಂಗಾಲಾಗಿ ತಲೆಯ ಮೇಲೆ ಕೈ ಹೊತ್ತು, ದೇಹದಲ್ಲಿದ್ದ ನೀರನ್ನೆಲ್ಲಾ ಒಣಗಿಸಿಕೊಂಡು ಕುಳಿತಿದ್ದಳು. ನಿರ್ವಾತ ಕೃಷ್ಣಕುಹರವೇ ತುಂಬಿರುವ ಭವಿಷ್ಯತ್ತಿನ ಬಗ್ಗೆ ಅವಳೇನು ಯೋಚಿಸಿಯಾಳು?
ಮಹಜರು ವಿಚಾರಣೆಗಳೇನೋ ಮುಗಿದು, ಸಾವು ಅಸಹಜವೆಂದು ಸಾಬೀತಾಗಿ ಪೋಲೀಸು ಖಟ್ಳೆಯನ್ನೇರಿತ್ತು. ಸುಕ್ರನ ದೇಹಾಂತ್ಯ ಪ್ರಕರಣಕ್ಕೆ ಹಲವಾರು ಆಯಾಮ ದೊರಕಿತ್ತು. ಕೊಲೆ ಮಾಡಿದ್ದು ಸ್ವಾಮಪ್ಪನೆಂದೂ, ಸ್ತ್ರೀ ಸಂಬಂಧೀ ದ್ವೇಷದ ಹಿನ್ನೆಲೆಯಲ್ಲಿ ಕುತ್ತಿಗೆಯ ಮೇಲೆ ಕಲ್ಲು ಕೊರೆಯುವ ಯಂತ್ರದ ಚಕ್ರವನ್ನು ಹತ್ತಿಸಿ, ಆ ಮೂಲಕ ದಾರುಣವಾಗಿ ಹತ್ಯೆಗೈದಿದ್ದಾನೆಂದು ಪ್ರಚುರಪಡಿಸಿ, ಹತ್ತು ವರ್ಷ ಜೈಲು ಶಿಕ್ಷೆಯೆಂದು ಫೈಲು ಮುಚ್ಚಿ ಮೂಲೆಗೆಸೆಯಲಾಯಿತು. ಗುರವ್ವಳು ಟೆಂಟಿನೊಳಗಿದ್ದ ಎಪ್ಪತ್ತು ಸಾವಿರ ನಗದನ್ನು ಕಂಡಕಂಡವರ ಬಾಯಿಗೆ ತುರುಕಿದ್ದಲ್ಲದೇ, ತಪ್ಪೇ ಮಾಡದ ಗಂಡ ಹೊರಬರಲೆಂದು ಕಚ್ಚೆಹರುಕ ಅಧಿಕಾರಿ ಮತ್ತು ಮಂತ್ರಿಯೊಬ್ಬರಿಗೆ ಅನಿವಾರ್ಯವಾಗಿ ಸೆರಗು ಹಾಸಿದ್ದು ಅತೀ ವಿಷಾದನೀಯ ಸಂಗತಿ. ಆಕೆ ಮಗುವಿನೊಂದಿಗೆ ಎಲ್ಲಿ ಹೋದಳೋ, ಏನಾದಳೋ ಯಾರಿಗೂ ಗೊತ್ತಿಲ್ಲ. ಅಂದಹಾಗೆ ಪ್ರಕರಣದ ದಿಕ್ಕು ಬದಲಾಯಿಸುದುದು ಕ್ವಾರಿ ಸಾಹುಕಾರನ ಕೆಲಸವೆಂದೇನೂ ಬಾಯಿಬಿಟ್ಟು ಹೇಳಬೇಕಾಗಿಲ್ಲವಲ್ಲ. ಲೈಸೆನ್ಸು, ಸರ್ಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಧಂಧೆ ಮಾಡುತ್ತಿದ್ದಾನೆಂದು ತಿಳಿದರೂ ಹಣ ಬಲದಿಂದ ಮುಚ್ಚಿಹೋಯಿತು. ’ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ’ ಮಂಜುನಾಯ್ಕನೂ ಮಹಾಸಂಕಟದಲ್ಲಿ ಸಿಕ್ಕುಬಿದ್ದ. ಬಗರ್ ಹುಕುಂ ಕಾಯ್ದೆಯಡಿ ಇನ್ನೂ ಮಂಜೂರಾಗದ ಜಮೀನನ್ನು, ನಿಜಾಂಶ ಮುಚ್ಚಿಟ್ಟು ಕ್ವಾರೆ ಕೆಲಸಕ್ಕೆ ವಿನಿಯೋಗಿಸಿ ದುಡ್ಡು ಹೊಡೆದನೆಂದು ಸಾಹುಕಾರ ಆರೋಪಿಸಿದ ಹಿನ್ನೆಲೆಯಲ್ಲಿ ಕೋರ್ಟುಕೇಸು ನಡೆದು, ಐದಾರು ವರ್ಷ ಹಿಂದೆ ಮುಂದೆ ಅಲೆದು, ಸಂಪಾದಿಸಿದ ದುಡ್ಡಿನ ಹತ್ತುಪಟ್ಟು ತೆತ್ತು ಪಾಪರಾಗಿ ಹೋದ. ಅತ್ತ ಹಣವನ್ನೂ ಇತ್ತ ಜಮೀನನ್ನೂ ಕಳೆದುಕೊಂಡು ತಲೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡ. ಆದರೆ ವ್ಯಥೆಯ ಸಂಗತಿಯೇನೆಂದರೆ ಸಾಹುಕಾರನೆನಿಸಿಕೊಂಡವ ಭೂತಾಯಿಯನ್ನು ಕಡಿದು, ಲಾರಿತುಂಬಿ ಲೋಡುಗಟ್ಲೆ ಸಾಗಿಸಿದ ಕಲ್ಲುಗಳ ಲೆಕ್ಕವನ್ನು ಯಾವ ಗಂಡಸೂ ಎದೆಯುಬ್ಬಿಸಿ ಕೇಳದೇ, ತಾವೆಲ್ಲರೂ ನರಸತ್ತವರೆಂಬ ಸತ್ಯಕ್ಕೆ ಸಾರಾಸಗಟಾಗಿ ಸಮ್ಮತಿಸೂಚಕ ಸಹಿ ಹಾಕಿದ್ದರು.
Facebook ಕಾಮೆಂಟ್ಸ್