X

ಆತ್ಮ ಸಂವೇದನಾ ಅಧ್ಯಾಯ 18

ಆತ್ಮ ಸಂವೇದನಾ ಅಧ್ಯಾಯ 17

ಕತ್ತಲು ಕೂಡ ಹಿತ ನೀಡುತ್ತದೆ, ಮನಸು ಅನಾವರಣಗೊಳ್ಳುವುದು ಕತ್ತಲಿನಲ್ಲೇ; ಅನೇಕ ಬಾರಿ ದೇಹವೂ.

ನಕ್ಷತ್ರಗಳ ಚೇತೋಹಾರಿ ದೃಶ್ಯವನ್ನು ನಾನಿನ್ನು ನೋಡಲು ಸಾಧ್ಯವಿಲ್ಲ ಎಂದು ದಂಗಾದ ಆತ್ಮ. ಸಂವೇದನಾ ಅವನ ಆಲಯದಲ್ಲಿಯೇ ಓಡಾಡಿಕೊಂಡದ್ದು ಗೊತ್ತವನಿಗೆ. ತಾನಾಗಿ ಅವಳನ್ನು ಮಾತನಾಡಿಸಬಾರದೆಂದು ದ್ರುಧವೆಂಬಂತೆ ನಿರ್ಧರಿಸಿಕೊಂಡಿದ್ದ. ಅದೇಕೆ ಅಂತಹ ನಿರ್ಧಾರ ಎಂದು ಅವನಲ್ಲೇ ಪ್ರಶ್ನೆಯಾದಾಗ….. ‘ಅಹಂ’ ಅದಕ್ಕೆ ಧಕ್ಕೆಯಾಗುವ ಭಾವ ಬಡಿದಾಡಿತು ಮನಸ ಜೊತೆ.

ಬಹುತೇಕ ಪ್ರೀತಿ ಮುರಿದುಬೀಳುವುದು ಇಲ್ಲಿಯೇ…. ಅದಕ್ಕೆ ಜೊತೆಯಾಗುವುದು ಕೋಪ.

ಪ್ರೀತಿಸುವ ಮನಸ್ಸುಗಳ ಮಧ್ಯೆ ಅಹಂ ಇರಬಾರದು. ನೀನು ನಾನೆಂಬ ಭಾವ ಬೆಳೆದರೆ ಪ್ರೀತಿ ಎರಡಾಗಿ ಬಿಡುತ್ತದೆ. ನಾವೆಂಬ ಭಾವ ಪ್ರೀತಿಯಲ್ಲೂ ದೀಪ ಬೆಳಗುತ್ತದೆ. ಬದುಕಿಗೆ ಬೆಳಕಾಗುತ್ತದೆ. ಸಂವೇದನಾಳಲ್ಲಿ ಭಾವನೆಗಳು ಜಾಗೃತವಾಗಬೇಕೆಂದರೆ ಆತ್ಮನೇ ಬದಲಾಗಬೇಕು, ಅವಳನ್ನು ಬದಲಾಯಿಸಬೇಕು. ಆದರೆ ಆತ್ಮ ಹಾಗೆ ಯೋಚಿಸುತ್ತಲೂ ಇಲ್ಲ.

ಸನಾ ಕೂಡ ಏನು ಮಾಡಬೇಕೆಂದು ತಿಳಿಯದೇ ಓಡಾಡುತ್ತಿದ್ದಳು ಅತ್ತಿಂದಿತ್ತ.. ಇತ್ತಿಂದತ್ತ.. ಏಕಾಂತವೇ ಪ್ರಿಯ, ಜೀವನವನ್ನು ಸಂಭ್ರಮಿಸಿಬಿಡಬೇಕೆಂಬ ಅವಳ ಆಸೆ ಕೆಲವೇ ಘಂಟೆಗಳಲ್ಲಿ ಕಮರಿಹೋಗಿತ್ತು. ಒಬ್ಬಳೇ ಇದ್ದು ಮಾಡುವುದಾದರೂ ಏನನ್ನು? ಬದುಕೆಂದರೆ ಕೂಡಿ ಬಾಳುವುದಾ? ಹಾಗಾದರೆ ಇಲ್ಲಿನ ಜನರೇಕೆ ಹೀಗಾಗಿದ್ದಾರೆ? ಇಂಥವೇ ಯೋಚನೆಗಳು ಅವಳನ್ನು ಕೆಣಕಿದಾಗಲೆಲ್ಲ ಆತ್ಮನ ನೆನಪು ಕಾಡಿಸುತ್ತಿತ್ತು. ಅವನ ಸ್ಪರ್ಶ ಹಿತವೆನ್ನಿಸುತ್ತಿತ್ತು. ಅವನ ಸಾಂಗತ್ಯದಲ್ಲಿ ಸುಖವಿರುತ್ತದೆನೋ ಎಂದು ಹಂಬಲಿಸುತ್ತಿದ್ದಳು. ಸೋಲಲು ಮನಸು ಒಪ್ಪುತ್ತಿಲ್ಲ. ಭಾವನಾತೀತ ಸನಾ ಮನಸ್ಸಲ್ಲೇ ಆತ್ಮನನ್ನು ಕರೆಯಬೇಕು, ಅವನಲ್ಲಿ ಬೆರೆಯಬೇಕು ಎಂದುಕೊಂಡಳು. ಆತ್ಮ ನಾ ನಿನ್ನ ಜೊತೆ ಮಾತನಾಡುವುದಿದೆ ಬೇಗ ಬಾ ಎಂದು ಮನದಲ್ಲೇ ಉದ್ವೇಗಗೊಂಡಳು. ಅವಳ ಕರೆ ಕೇಳಿದ್ದೇ ಆತ್ಮನ ಮನ ಪದವಾಯಿತು. ಕ್ಷಣಗಳು ಮುದಗೊಂಡವು. ಮತ್ತೆ ಕನಸುಗಳ ಹಾವಳಿ.

ಒಲವಾಗಿದೆ… ಒಲಿದ ಹುಡುಗಿಯ ಮೇಲೆ. .
ಹಿತ ತಂದಿದೆ ಮನಸು ತುಂಬ ಅವಳೇ. .
ಕನಸ ಕಾಣುತ ಚಿಗುರ ಬಯಸಿದೆ ಹೃದಯದ ಇಳೆ. .

ಅಷ್ಟೇನು ಅಂದವೆನ್ನಿಸದ ಕೊಠಡಿ. ಪ್ರಯೋಗಶಾಲೆಯ ಹಿಂದಿನ ಬಾಗಿಲ ಪಕ್ಕದ ಪುಟ್ಟ ಆವರಣ. ಸುತ್ತಲೂ ಹಸಿರು ಚೆಲ್ಲಿದೆ. ಹಿತವೆನ್ನಿಸುವಷ್ಟು ಗಾಳಿ ಬೀಸುತ್ತಿದೆ. ಸಂವೇದನಾ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಳು. ಮುಂಗುರುಳು ಅವಳ ನಸುಗೆಂಪು ಕೆನ್ನೆಗೆ ಮುತ್ತಿಡಲು ಹವಣಿಸುತ್ತಿತ್ತು. ಆತ್ಮ ಮೆಲ್ಲನೆ ಹೆಜ್ಜೆ ಹಾಕುತ್ತ ಅವಳ ಪಕ್ಕ ಬಂದು ಕುಳಿತಿದ್ದ.

ತಂಪುಗಾಳಿ ತೀಡುತ್ತಿದ್ದರೆ ಮನಸುಗಳು ಜೊತೆಯಾಗಿ ಹಾಡುತ್ತಿದ್ದವು. ಇಬ್ಬರೂ ಮಾತನಾಡುವುದು ಕಡಿಮೆಯೇ. ಈಗಂತೂ ಮೌನ ಮಾತನಾಡತೊಡಗಿತ್ತು.

ಭಾವನೆಗಳಲ್ಲೇ ಬದುಕುವ ಆತ್ಮ; ತನ್ನತನವನ್ನೇ ಕಂಡಿರದ ಸಂವೇದನಾ. ಎರಡು ದಿಗಂತಗಳು.

ದಿಗಂತವೂ ಸಂಧಿಸುವ ಬಿಂದುವಿರುವಾಗ ಮನಸುಗಳೆಷ್ಟು ದಿನ ದೂರವಿರಲು ಸಾಧ್ಯ?

ಆತ್ಮ ಅವಳ ಸೃಷ್ಟಿಯ ಯೋಚನೆಯಿಂದಲೇ ಪುಳಕಗೊಂಡಿದ್ದ. ಬೆಟ್ಟದೆತ್ತರದ ಪ್ರೀತಿ; ಕಣಿವೆಯಾಳದ ಪ್ರೇಮ. ಸಂವೇದನಾ ಏನೂ ಅರ್ಥವಾಗದೇ ಕುಳಿತಿದ್ದಳು.

ತೆರೆ ಸರಿದಾಗಿತ್ತು;
ಮನ ಬರಿದಾಗಿತ್ತು.

ಆತ್ಮ ಮಗುವಾಗಿರಲು ಬಯಸುತ್ತಿದ್ದರೆ ಸನಾ ಅವನಿಗೆಂಬಂತೆ ಮಡಿಲಾಗಿದ್ದಳು. ದೊರಕಿದ ಪ್ರೀತಿಯೆದುರು ಕಂಬನಿಯಾಗಿದ್ದ ಆತ್ಮ, ಅವಳು ಬೊಗಸೆಯಲ್ಲಿ ಮುಖವೆತ್ತಿ ಮುದ್ದಿಸಿದಳು.

ಬರೀ ಪ್ರೀತಿಯಲ್ಲಿ ಮುಗ್ಧ ಬದುಕಿನ ಮೋಹಕ ಪಯಣ ಅವರದು. ಅವಳು ಅವನಲ್ಲಿ, ಅವನು ಅವಳಿಗೆಂದು. ಅಶ್ಲೀಲವೆನ್ನಿಸುವಂಥದ್ದು ಏನೂ ಇರಲಿಲ್ಲ, ಪ್ರಕೃತಿ ಸಹಜ ಕ್ರಿಯೆಗಳಿಗೆ ಅದ್ಭುತ ಪ್ರತಿಕ್ರಿಯೆಗಳಷ್ಟೆ.

ಎಲ್ಲವೂ ಮುಗಿದ ಮೇಲಿನ ಪ್ರಾರಂಭದಂತೆ. ಕಾಮನೆಗಳು ಮುಗಿದ ಕ್ಷಣದ ಆಚೆಗೂ ಗಾಢ ಪ್ರೀತಿ ಅವರಿಬ್ಬರನ್ನು ಬೆಸೆದಿಟ್ಟಿತ್ತು. ಆತ್ಮ ಎಲ್ಲವೂ ಆಗಿದ್ದ ಅವಳಿಗೆ, ತಂದೆಯಿಂದ ಮಗನವರೆಗೆ. ಅವಳೂ ಹಾಗೆಯೇ, ಹೆಸರೇ ಇಲ್ಲದ ಸಂಬಂಧಗಳು ಎಲ್ಲ ಬಂಧಗಳನ್ನು ಬೆಸೆದಿತ್ತು.

ದಿನವೊಂದೇ ಕಳೆದಿತ್ತು, ಬದುಕು ಬಹಳ ಹತ್ತಿರ ಸೇರಿಸಿತ್ತು ಅವರಿಬ್ಬರನ್ನು. ಅದೇಕೋ ಸಂವೇದನಾಳಿಗೆ ಪ್ರಪಂಚದ ಅರಿವಾಯಿತು. ಯಾವುದೋ ಬಿಳಿ ಹಾಳೆಯ ಮೇಲೆ ನಾಲ್ಕು ಸಾಲು ಗೀಚುವ ಹಂಬಲ. ಅದೇನು ಬರೆದಳೋ ಆತ್ಮನ ಎದೆಯ ಮೇಲೆ ತಲೆಯಿಟ್ಟದ್ದೊಂದೇ ನೆನಪು, ಗಾಢ ನಿದ್ರೆ ಆವರಿಸಿತ್ತು. ಮನಸ್ಸಿನ ಆಳದಲ್ಲಿ ವರ್ಷಿಯ ಎರಡನೇ ಸೂರ್ಯ ಜಗಮಗಿಸುತ್ತಿದ್ದ.

ಆತ್ಮನು ಅದೇಕೋ ವಿಚಲಿತನಾಗಿದ್ದ. ಪದೆ ಪದೇ ಕೆಟ್ಟ ಯೋಚನೆಗಳೇ ಕಾಣತೊಡಗಿದವು. ಅವಳ ಮುಗ್ಧ ಮುಖ ಅವನೆದೆಯ ಮೇಲೆ. ತಲೆಗೂದಲಲ್ಲಿ ಬೆರಳಾಡಿಸಿ ಹಣೆಯ ಮೇಲೊಂದು ಮುತ್ತನಿಡುವಾಗ ಅವಳು ಕಂಡೂ ಕಾಣದೇ ನಗುತ್ತಿದ್ದಳು.

ನಾಚಿಕೆಯ ಹಂದರ;
ಒಲವಿನ ಮಂದಾರ.
ಅವನಿಗೂ ಒಮ್ಮೆ ನಿರಾಳವೆನಿಸಿತು.
ಪಕ್ಕದಲ್ಲಿಯೇ ಅವಳು ಬರೆದಿಟ್ಟ ಕಾಗದ ಕಂಡು ಬಂತು.
ಎಲ್ಲ ಚಿಂತೆಗಳು ಚಿತೆಯ ಎಡೆಗೆ ನನ್ನ ಸೆಳೆದು. .
ಮೌನವಾದಾಗ. .
ನೀ ಮೆಲ್ಲನೆ ನಗು ಒಮ್ಮೆ. .
ಮರಳಿ ಬರುವೆನು ಒಲವೇ. .
ಉಸಿರ ಮಡಿಲಿಗೆ. .
ಎದೆಯ ಕಡಲಿಗೆ. .
ಅವಳಷ್ಟೆ ಮುದ್ದಾದ ಅಕ್ಷರಗಳು.

ದಿನಗಳು ಕಳೆದಂತೆ ಭೂಮಿಯ ಚಿತ್ರಣ ಬದಲಾಗುತ್ತಲೇ ಹೋಯಿತು. ಕತ್ತಲೆಯೇ ಇಲ್ಲದ ಭೂಮಿ, ಬೆಳಕೇ ತುಂಬಿದ ಪ್ರಪಂಚ. ಭೂಮಿಯ ಮೇಲಿನ ಉಷ್ಣತೆ ಹೆಚ್ಚುತ್ತಲೇ ಹೋಯಿತು. ನಿಶಾಚರ ಪ್ರಾಣಿಗಳು ಕತ್ತಲ ಸ್ಪರ್ಶವೇ ಇಲ್ಲದ ಭೂಮಿಯಲ್ಲಿ ಆಹಾರ ಸಿಗದೇ ಅಲೆಯುತ್ತ ಸಾಯತೊಡಗಿದವು. ನೀರಿನಾಳದ ಬಿಸಿ ಹೆಚ್ಚಿದಂತೆ ಅದರೊಳಗಿನ ಜೀವಿಗಳ ಉಸಿರು ಕೊನೆಯಾಗಿ ಮೇಲ್ಗಡೆ ತೇಲತೊಡಗಿದವು. ಎಲ್ಲವನ್ನೂ ಮೀರಿ ಮರಗಿಡಗಳ ಬದುಕು ಬರಡಾಯಿತು. ಆಹಾರ ತಯಾರಿಕೆಯ ಕ್ರಿಯೆಯೇ ನಿಂತು ಹೋಯಿತು. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗತೊಡಗಿತು. ಇದೆಲ್ಲದರಿಂದ ಕಂಗಾಲಾದ ಜೀವಿಗಳು ವಿಶ್ವಾತ್ಮನ ಮೊರೆ ಹೋದವು.

ವಿಶ್ವಾತ್ಮ ಪ್ರತಿಯೊಂದು ಜೀವಿಗಳ ಹಾಗೂ ಎಲ್ಲ ನಿರ್ಜೀವಿಗಳ ಕರ್ಮ ರೂಪಿಸಿದವ. ನಿರ್ಜೀವಿಗಳ ಜೊತೆ ಮಾತನಾಡಬಲ್ಲ, ಅವುಗಳ ಮಾತಿಗೆ ಕಿವಿಯಾಗಬಲ್ಲ. ಮರಗಿಡ-ಪ್ರಾಣಿಪಕ್ಷಿಗಳೆಲ್ಲದರ ಜೊತೆ ಸಂಭಾಷಿಸುತ್ತಾನೆ ವಿಶ್ವಾತ್ಮ. ಅವೆಲ್ಲವೂ ಆತನ ಸೂಚನೆಯನ್ನು ಬಲು ಶೀಘ್ರವಾಗಿ ಗ್ರಹಿಸುತ್ತವೆ. ಅಷ್ಟು ಶೀಘ್ರತೆ ಮನುಷ್ಯನಿಗೆ ಸಾಧ್ಯವಿಲ್ಲ. ಆತ ಬದುಕುವ ನೀತಿಯಿಂದ ದೂರಾಗಿ ಉಳಿದ, ತನಗಿಷ್ಟವೆಂದು ಅಸಹ್ಯ ಬದುಕು ಕಳೆದ.

ವಿಶ್ವಾತ್ಮ ಮರದ ನೆರಳಿನಲ್ಲಿ, ತನ್ನದೇ ಸೃಷ್ಟಿಯ ಮಗುವಿನ ಮಡಿಲಲ್ಲಿ ತಲೆಯಿಟ್ಟು ಮಲಗಿದ್ದ. ಆತನ ನಿದ್ರೆಗೆ ಭಂಗ ಬರದಿರಲೆಂದು ವಾತಾವರಣ ಸಾಕಷ್ಟು ಪ್ರಶಾಂತವಾಗಿತ್ತು. ಮರಗಳು ಸ್ವಂತಕ್ಕೆ ಆಹಾರ ತಯಾರಿಸಿಕೊಳ್ಳಲಾಗದೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದವು. ಆದರೂ ತಂಪು ಗಾಳಿ ತೀಡಲು ಹರಸಾಹಸ ನಡೆಸುತ್ತಿದ್ದವು. ತಮ್ಮ ಅಂತ್ಯದ ಸನಿಹ ಬಂತೆಂದು ಅವುಗಳಿಗೆಲ್ಲ ತಿಳಿದಿತ್ತು. ವಿಶ್ವಾತ್ಮನ ಮುಖ ಪ್ರಶಾಂತವಾಗಿತ್ತು. ಬಿದಿರಿನ ವಯೋಲಿನ್ ಮೆಲ್ಲನೆ ಸಂಗೀತ ನುಡಿಸುತ್ತಿತ್ತು. ವಿಶ್ವಾತ್ಮ ನಿದ್ರೆ ಹೋಗಿರುವುದು ಒಂದು ಮುದಿ ಮರದ ನೆರಳಿನಲ್ಲಿ.

ಬೀಜದಿಂದ ಮೊಳಕೆಯೊಡೆದು ಸಾವಿರಾರು ವರ್ಷ ನಿಂತ ಜಾಗದಲ್ಲಿಯೇ ಬದುಕು ಕಳೆದು ಪರೋಪಕಾರವೇ ಬದುಕೆಂಬಂತೆ ಬೆಳೆದ ಮರ ಅದು. ಹಲವಾರು ಕೊಂಬೆಗಳು ಜೀವ ಕಳೆದುಕೊಂಡು ಒಣ ಕಟ್ಟಿಗೆಯ ರೂಪ ತಳೆದಿದ್ದರೆ ಎಲೆಗಳು ಹಸಿರಾಗುವ ಮುನ್ನವೇ ತರಗೆಲೆಗಳಾಗಿದ್ದವು. ಆ ಮರಕ್ಕೆ ತಿಳಿದಿತ್ತು ತಾನಿನ್ನು ಇತಿಹಾಸವೆಂದು. ತನ್ನ ಸಾವಿನ ಬಗ್ಗೆ ಭಯವಿಲ್ಲ ಆದರೆ ತನ್ನ ಮಡಿಲಿನಲ್ಲಿ ಈಗಷ್ಟೆ ಚಿಗುರುತ್ತಿರುವ ಪುಟ್ಟ ಪುಟ್ಟ ಮನಸುಗಳು ಮುದುಡಿ ಹೋಗುತ್ತಿರುವುದನ್ನು ನೋಡಿ ಮರದ ಮನಸೂ ಮರುಗಿತು. ವಿಶ್ವಾತ್ಮನನ್ನು ಎಚ್ಚರಿಸಿ ಕೇಳಲೇಬೇಕೆಂದು ನಿರ್ಧರಿಸಿತು. ತನ್ನೆದೆಯಲ್ಲಿ ಮನೆ ಮಾಡಿದ್ದ ಅವೆಷ್ಟೋ ಪಕ್ಷಿಗಳು ಅರ್ಧ ಜೀವನದಲ್ಲಿಯೇ ಬದುಕು ಮುಗಿಸಿ ಹೋಗುತ್ತಿರುವುದನ್ನು ಸಹಿಸಲಾಗಲಿಲ್ಲ. ಯಾರದೋ ಮೇಲಿನ ದ್ವೇಷ ಎಲ್ಲವನ್ನೂ ನಾಶ ಮಾಡುವುದು ನ್ಯಾಯವೇ? ಎಂದು ವಿಶ್ವಾತ್ಮನನ್ನು ಕೇಳಬೇಕೆಂದುಕೊಂಡಿತು ಮುದಿ ಜೀವ. ವಿಶ್ವಾತ್ಮನ ಮುಖ ನೋಡಿದರೆ ಅದೇ ಮುಗ್ಧ ಮಗುವಿನ ಮನಸು. ಮುಖದಲ್ಲಿ ಮಂದಸ್ಮಿತ. ವಿಶ್ವಾತ್ಮ ಎಚ್ಚರವಾಗುವವರೆಗೆ ಕಾಯುವುದೇ? ಕರೆದು ಎಚ್ಚರಿಸುವುದೇ? ಅರ್ಥವಾಗದೇ ಹಾಗೆಯೇ ನಿಂತಿತ್ತು.

ವಿಶ್ವಾತ್ಮನ ನಗು, ಮುಗ್ಧ ನಗು ಸುತ್ತೆಲ್ಲ ಪಸರಿಸಿತು. ಮರದ ಮಡಿಲಿನಿಂದ ಎದ್ದು ಕುಳಿತು ಮರದ ಮುಖ ನೋಡಿದ. ತನ್ನ ಮಲಗಿಸಿಕೊಂಡಿದ್ದ ಜಾಗವನ್ನು ಅಪ್ಯಾಯತೆಯಿಂದ ಸವರಿದ ವಿಶ್ವಾತ್ಮ. ಮುದಿ ಜೀವದ ಮಂಜು ಕಂಗಳು ಬೆಳಕಾಯಿತು ಒಮ್ಮೆ. ಅದೇ ಬೆಳಕಲ್ಲಿ ಕಣ್ಣಾಲಿಗಳ ತೇವ ವಿಶ್ವಾತ್ಮನ ಎದೆ ಸೇರಿತು.

ಬೆಚ್ಚನೆಯ ಸ್ಪರ್ಶ, ಪ್ರೀತಿಯ ಭಾವ. .
ಮಗುವಿನೆದುರು ತಾಯಿಯೂ ಮಗುವೇ. .
ಆಗಸದಿಂದ ಮಳೆಹನಿಗಳು ಮೈ ಚುಂಬಿಸಿದಾಗಿನ ಹಿತ. .

ವಿಶ್ವಾತ್ಮ ನವಿರಾಗಿ ಸವರುತ್ತಿದ್ದ. ಅವನ ಸ್ಪರ್ಶದಿಂದ ಮರವೇನು ಕೇಳಲು ಬಯಸಿತ್ತೋ ಅದು ಮರೆತೇ ಹೋಗುವುದೇನೋ ಎಂಬ ಸುಂದರ ಸಂಶಯ ಮೂಡಿತು ಮರದಲ್ಲಿ, ಅದರ ಮನಸಲ್ಲಿ.

“ತನ್ನ ಮನದಾಳವನ್ನು ಹೇಗೆ ಗ್ರಹಿಸಬಲ್ಲ ಈ ವಿಶ್ವಾತ್ಮ? ಆತ್ಮ ಕೇವಲ ತನ್ನ ತನ್ನವರ ಖುಷಿ ಬಯಸುತ್ತದೆ, ವಿಶ್ವಾತ್ಮ ಎಲ್ಲರಿಗೂ, ಎಲ್ಲವುದಕ್ಕೂ ಸ್ಪಂದಿಸಬಲ್ಲ” ಎಂದುಕೊಂಡಿತು ಮರ.

ಆತ್ಮಕ್ಕೂ ವಿಶ್ವಾತ್ಮಕ್ಕೂ ಇರುವ ವ್ಯತ್ಯಾಸ ಇದೆ.

ಸುತ್ತಲಿನ ಮರಗಳೆಲ್ಲವೂ ವಿಶ್ವಾತ್ಮನ ಪ್ರತಿಕ್ರಿಯೆಗೆ ನಿರೀಕ್ಷಿಸುತ್ತಿದ್ದವು. ಅವುಗಳು ಬದುಕಲು ಬಯಸುತ್ತಿವೆ ಸ್ವಂತಕ್ಕಾಗಿಯಲ್ಲ, ಮನುಷ್ಯನ ಸ್ವಾರ್ಥಕ್ಕಾಗಿ.

ತಮ್ಮ ಸಾವು ಈ ಭೂಮಿಯನ್ನೇ ನಾಶಗೊಳಿಸುತ್ತದೆ ಎಂದು ತಿಳಿದಿದೆ ಅದಕ್ಕಾಗಿಯೇ ಬದುಕಲು ಬಯಸುತ್ತಿವೆ.

ಸ್ವಾರ್ಥಕ್ಕಾಗಿ ಬದುಕುವುದು ಮನುಷ್ಯ ಮಾತ್ರ;
ಉಳಿದವೆಲ್ಲವೂ ಬದುಕಿದ್ದು ಮನುಷ್ಯನ ಸ್ವಾರ್ಥಕ್ಕೆ.

ಪಾಪ ಮಾಡಿ ಬದುಕುವುದೋ, ಪುಣ್ಯದ ಫಲವೋ ಯಾರೂ ತಿಳಿದಿಲ್ಲ. ಮನುಷ್ಯ ಮಾತ್ರ ಪುಣ್ಯವಂತ ಪಾಪಿಯೇ. ಎಲ್ಲವುದರ ಉಳಿವಿಗಾಗಿಯಾದರೂ ಮಾತನಾಡಲೇಬೇಕು ಎಂದು ನಿರ್ಧರಿಸಿತು ವಾರ್ಧಕ್ಯದ ವನ.

” ವಿಶ್ವಾತ್ಮ ಏನು ನಡೆಯುತ್ತಿದೆ ಈ ಭೂಮಿಯಲ್ಲಿ? ನೀನೇ ನಿರ್ಮಿಸಿದ ಈ ಸುಂದರ ಪ್ರಪಂಚವನ್ನು ನಿರ್ಮಾನುಷ್ಯನಂತೆ ನಿರ್ವೀರ್ಯಗೊಳಿಸುತ್ತಿರುವೆಯಾ? ಕೇವಲ ಮನುಷ್ಯನ ಮೇಲಿನ ಕೋಪಕ್ಕೆ ಭೂಮಿಯೇ ಬರಿದಾಗುವುದು ಪಾಪವಲ್ಲವೇ? ಎಲ್ಲರೂ ನಿನ್ನ ಮಕ್ಕಳೇ. ನಿನ್ನೊಳಗೂ ಸ್ವಾರ್ಥವೇ?” ಮುಗಿಲು ಮುಟ್ಟಿತು ಆಕ್ರಂದನ.

ವಿಶ್ವಾತ್ಮ ಮರದ ಮುಖ ನೋಡಿದ. ಎಲ್ಲರೂ ಅವನ ಉತ್ತರಕ್ಕೆ ಕಾದು ಕುಳಿತಂತಿತ್ತು. ಸುತ್ತಲಿನ ಪ್ರಾಣಿ ಪಕ್ಷಿಗಳೆಲ್ಲ ಗುಂಪುಗೂಡಿದವು.

ಮನುಷ್ಯನೇ ಅನಾಥ;
ಏಕಾಂಗಿ ಹೋರಾಟ.

ವಿಶ್ವಾತ್ಮ ಸುತ್ತಲೂ ನೋಡಿದ. ವಾತಾವರಣದ ಬಿಸಿ ಏರುತ್ತಿರುವುದು ಅವನಿಗೂ ತಿಳಿಯುತ್ತಿದೆ. ಎಲ್ಲವೂ ಸಾಯುವ ಮುಖಗಳೇ, ನಿರಾಸೆಯ ಮಡುವೇ.

ಹೀಗೇಕೆ ಮಾಡಿದೆ ನಾನು? ಏನೂ ಅರಿಯದ ಮುಗ್ಧ ಜೀವಿಗಳ ಮೇಲೆ ದೌರ್ಜನ್ಯ ನಡೆಸಿದೆನಾ? ತನ್ನೊಳಗೆ ಪ್ರಶ್ನಿಸಿಕೊಂಡ.

ಪ್ರಶ್ನೆಗಳು ಯಾರನ್ನು ಬಿಟ್ಟಿವೆ?
ಪರಿಪೂರ್ಣ ಉತ್ತರ ಯಾರಿಗೆ ದೊರಕಿದೆ?

ಪ್ರತಿಯೊಬ್ಬರಿಗೂ ಬದುಕುವ ನೀತಿ ಕಲಿಸಿದ ನಾನೇ ಸ್ವತಃ ತಪ್ಪು ಮಾಡಿರಬಹುದೇ? ಒಪ್ಪಿಕೊಳ್ಳುವುದು ಕಷ್ಟವಾಯಿತು.

“ನನಗೂ ಎರಡು ಮನಸ್ಸಿದೆ. ವರ್ಷಿಯ ಜೊತೆ ನಿಂತು ಸಲಹಿ, ಸಲಹೆ ಕೊಟ್ಟದ್ದು ತನ್ನ ಇನ್ನೊಂದು ಮುಖ. ನಾನು ಅಶಾಂತಿಯನ್ನು ಬಯಸುವುದಿಲ್ಲ. ಯುದ್ಧಗಳಿಂದ ದೂರ. ಆದರೆ ನನ್ನ ಇನ್ನೊಂದು ಮುಖ? ಮತ್ತೊಂದು ಮನಸ್ಸು? ಅದೇಕೆ ಅಷ್ಟೊಂದು ಉಗ್ರ? ನಾನೇಕೆ ನನ್ನ ಬುದ್ಧಿಯನ್ನು ಅದರ ಯೋಚನೆಗಳಿಗೆ ಅಹಾರವಾಗಿಸಿದೆ? ಸಾಯುತ್ತಿರುವ ಮುಖಗಳಿಗೆ ಏನೆಂದು ಸಾಂತ್ವನಿಸಲಿ ನಾನು” ಎಂದು ಪಶ್ಚಾತ್ತಾಪಗೊಂಡ.

ಮುಖದ ಮೇಲಿನ ಮಾಸದ ನಗು ಕಳೆಗೆಡುತ್ತಿರುವಂತೆ ಅನ್ನಿಸಿತವನಿಗೆ.

ಆತನ ಮಾತು ಕೇಳಲು ಎಲ್ಲ ಜೀವಿಗಳೂ ತವಕಗೊಂಡಿದ್ದವು. ವಿಶ್ವಾತ್ಮ ಮಾತನಾಡಬೇಕು, ಎಲ್ಲರಿಗೂ ಅರ್ಥವಾಗುವಂತೆ ಮಾತನಾಡಬೇಕು. ಅದೂ ವಿಚಿತ್ರವೇ. ವಿಶ್ವಾತ್ಮನ ಭಾಷೆ ಎಲ್ಲರಿಗೂ ಅರ್ಥವಾಗುತ್ತದೆ. Universal Language. ಪೂರ್ತಿ ವಿಶ್ವಕ್ಕೆ ಒಂದೇ ಭಾಷೆ.

ಮನುಷ್ಯ ಒಂದೆಡೆಯಿಂದ ಮತ್ತೊಂದೆಡೆ ಹೋದರೆ ಭಾಷೆ ತಿಳಿಯುವುದಿಲ್ಲ.ವಲಸೆ ಹೋಗುವ ಪ್ರಾಣಿ ಪಕ್ಷಿಗಳ ಭಾಷೆಯೂ ಬದಲಾಗುವುದೇ? ಅವುಗಳಿಗೂ ಅಲ್ಲಿನ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆಯೇ?

ಇಲ್ಲ; ವಿಶ್ವಕ್ಕೆಲ್ಲ ಒಂದೇ ಭಾಷೆ, ಮನುಷ್ಯನ ಹೊರತಾಗಿ.

ಇದಕ್ಕೆ ಮನುಷ್ಯ ಗಡಿಗಳನ್ನು ಸೃಷ್ಟಿಸಿಕೊಂಡ. ಜಾತಿ- ಮತಗಳನ್ನು ಹುಟ್ಟು ಹಾಕಿಕೊಂಡ. ಭೇದಗಳು ದ್ವೇಷವನ್ನು ಅಸೂಯೆಯನ್ನೂ ಹುಟ್ಟಿಸುತ್ತದೆ. ಬಂಧನಗಳು ಪ್ರೀತಿಯ ಜೊತೆ ಸ್ವಾರ್ಥವನ್ನೇ ಹೆಚ್ಚು ಹುಟ್ಟಿಸುತ್ತವೆ.

ಪ್ರೀತಿ ಸ್ನೇಹಗಳನ್ನು ಮಾತ್ರ ಹೆಚ್ಚಿಸಿ ಹಸಿರಾಗಿಸುವ ಬಂಧ ಯಾವುದು?

ಪ್ರೀತಿ ಸ್ನೇಹವಿದೆಯೆಂದರೆ ಸ್ವಾರ್ಥವೂ ಸೇರಿಕೊಂಡಿರುವುದೇ ಸಹಜ. ಸ್ವಾರ್ಥವಿರದ ಪ್ರೀತಿ ಹೇಗೆ ಸಾಧ್ಯ? ವಿಶ್ವಾತ್ಮನೇ ಉತ್ತರಿಸಬೇಕಿದಕ್ಕೆಲ್ಲ.

ವಿಶ್ವಾತ್ಮ ಎದ್ದು ನಿಂತ. ಬಾಡಿಹೋದ ಭಾವಹೀನ ಮುಖಗಳನ್ನು ನೋಡಿದ. ಎಲ್ಲರದೂ ಮುಗ್ಧ ಮನಸೆ. ಮರ ಏನು ಪಾಪ ಮಾಡಿದೆ? ಪ್ರಾಣಿಗಳು ಯಾಕೆ ಶಿಕ್ಷೆ ಅನುಭವಿಸಬೇಕು?

ಪಾಪ ಮತ್ತು ಪುಣ್ಯ ಎಂದರೆ ಏನು ಮೂಲತಃ? ಪಾಪ ಮಾಡಿದವ ನರಕದ ದಾರಿ ಹಿಡಿದರೆ, ಪುಣ್ಯ ಮಾಡಿದವ ಸ್ವರ್ಗದ ದಿಕ್ಕಿಗೆ ಸಾಗಬಹುದು. ಸ್ವರ್ಗ ನರಕ ಇರುವುದು ನಿಜವಾ?

ನನಗೂ ಅರಿವಾಗದ ವಿಷಯಗಳಿವು ಎಂದುಕೊಂಡ ವಿಶ್ವಾತ್ಮ.

ಪಾಪ-ಪುಣ್ಯದ ಆಧಾರದ ಮೇಲೆ ಹುಟ್ಟು ಮತ್ತು ಸಾವಿನ ಕೊಂಡಿ ಬೆಸೆದುಕೊಂಡಿದ್ದರೆ ಭೂಮಿಯ ಮೇಲೆ ಮನುಷ್ಯ ಉಳಿಯುತ್ತಲೇ ಇರಲಿಲ್ಲವೇನೋ..!!?

ಮನುಷ್ಯ ಮಾತ್ರ…;
ಈಗ ಆಗ ಹೊರಟಿರುವುದು ಅದೇ.

ಜಗತ್ತಿನೆಲ್ಲವನ್ನೂ ನಿಯಂತ್ರಿಸುವ ನನಗೇ ಉತ್ತರಿಸುವ ಸಾಮರ್ಥವಿಲ್ಲ, ಏನೆಂದು ಉತ್ತರಿಸಬೇಕು.

ಮಾಡಿರದ ತಪ್ಪಿಗೆ ಕಾಲುಗಳ ಮೇಲಾದ ಬಾಸುಂಡೆಗಳ ಲೆಕ್ಕಿಸುವ ಮುಗ್ಧ ಮಗು; ತಪ್ಪಿನ ಅರಿವಾದ ನೋವಿನಂಗಡಿಯ ಮಾಲೀಕ ಅಪ್ಪ.

ಮನುಷ್ಯ ಸ್ವಾರ್ಥ ಅಸೂಯೆಯನ್ನು ಮರೆತು ಬದುಕಬೇಕು ಎನ್ನುವ ನಾನೇ ಅಹಂಕಾರಿಯಾದೇನಾ? ನನ್ನ ಇನ್ನೊಂದು ಮನಸ್ಸಿನ ಕ್ರೋಧದಿಂದ ಸುಂದರ ಪ್ರಪಂಚವನ್ನೇ, ಮುಗ್ಧ ಪ್ರಾಣಿ ಸಂಕುಲವನ್ನೇ ನಾಶಗೊಳಿಸುತ್ತಿರುವೆನಾ?

ಏನು ಹೇಳಲಿ ನಾನು? ನನ್ನ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು? ವಿಶ್ವಾತ್ಮ ಅತ್ತ ಕಡೆಗೊಮ್ಮೆ ಇತ್ತ ಕಡೆಗೊಮ್ಮೆ ಓಡಾಡುತ್ತಿದ್ದ. ಸುತ್ತ ನಿಂತ ಜೀವಿಗಳು ಎವೆಯಿಕ್ಕದೆ ನೋಡುತ್ತಿದ್ದವು.

“ನಾನು ಉತ್ತರಗಳೊಂದಿಗೆ ಬರುತ್ತೇನೆ, ಎಲ್ಲವನ್ನೂ ನಡೆಸುತ್ತಿರುವ ನನ್ನೆರಡು ಮನಸ್ಸುಗಳ ನಡುವಿನ ಸಮರ ಮುಗಿಯುವ ಸಮಯ. ಆಗ ನಾನು ಎಲ್ಲರನ್ನೂ, ಎಲ್ಲವನ್ನೂ ಉಳಿಸಿಕೊಳ್ಳುತ್ತೇನೆ. ಯಾರೂ ಸಾಯುವುದಿಲ್ಲ. ಮತ್ತೊಂದು ಸುಂದರ ಪ್ರಪಂಚವನ್ನು ಚಂದವಾಗಿಸೋಣ… ಎಲ್ಲರೂ ಬದುಕುತ್ತೀರಿ” ಭಾರವಾದ ಹೆಜ್ಜೆ ಇಡುತ್ತ ಕಳೆದುಹೋದ ವಿಶ್ವಾತ್ಮ ಬೆಳಕಿನ ಪ್ರಖರತೆಯಲ್ಲಿ.

ನಂಬಿಕೆಯ ಮಹಾಘೋಷ ಮುಗ್ಧ ಜೀವಿಗಳ ಕಿವಿಯಲ್ಲಿ.

ಕಾಲವೇ ನಿಂತು ಹೋಗಿದೆಯೆಂಬಂತೆ ವಯೊಲಿನ್ ದುಃಖದಾಯಕ ಪ್ರಲಾಪವೊಂದನ್ನು ನುಡಿಸಿತು. ಮೊತ್ತ ಮೊದಲ ಬಾರಿಗೆ ವಿಶ್ವಾತ್ಮನಿಗೂ ಸಂದಿಗ್ಧತೆ. ಉತ್ತರವಿಲ್ಲದ ಪ್ರಶ್ನೆಗಳ ಹಿಂದೆ ನಡೆಯತೊಡಗಿದ್ದ.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post