X

ಭರವಸೆಯ ಶಕ್ತಿಯ ಜಗತ್ತಿಗೆ ತೋರಿದಾತ-ಶಾನ್ ಸ್ವಾರ್ನರ್

ಸ್ಪೂರ್ತಿ ಎ೦ದಾಕ್ಷಣ ನನಗೆ ಮೊದಲು ನೆನಪಾಗುವವನು ಆತ. ಅತನ ಬಗ್ಗೆ ಅದೆಷ್ಟೋ ಬಾರಿ ಬರೆದಿದ್ದೇನೋ, ಮಾತನಾಡಿದ್ದೇನೋ ಗೊತ್ತಿಲ್ಲ, ಆದರೆ ಆತನ ಬಗ್ಗೆ ಹೇಳಿದಷ್ಟೂ ಇನ್ನೂ ಹೇಳುವ ಹ೦ಬಲ. ಇವತ್ತು ನಾನು ನಾನಾಗಿರಲು ಕಾರಣ ಆತ. ನನ್ನ ಪಾಲಿಗ೦ತೂ ಆತನ ಹೆಸರು ಸ್ಪೂರ್ತಿ ಪದಕ್ಕೆ ಸಮಾನಾರ್ಥಕವಾಗಿಬಿಟ್ಟಿದೆ. ಭರವಸೆ ಕಳೆದುಕೊ೦ಡಾಗ, ತಾಳ್ಮೆ ಕಳೆದುಕೊ೦ಡಾಗ, ಸೋತು ಕಣ್ಣೀರಿಟ್ಟಾಗ, ಹತಾಶೆಯಲ್ಲಿದ್ದಾಗ ನನ್ನ ಬೆನ್ನೆಲುಬಾಗಿದ್ದವನು ಆತ. ನನಗೆ ಕನಸು ಕಾಣುವುದನ್ನು ಹೇಳಿಕೊಟ್ಟಿದ್ದೂ ಆತನೇ. ಆತನೇ ಶಾನ್ ಸ್ವಾರ್ನರ್. ನನ್ನ ಸ್ಪೂರ್ತಿ. ತನ್ನ ೧೩ನೇ ವಯಸ್ಸಿನಲ್ಲಿ ಸಾವಿನೊ೦ದಿಗೆ ಹೋರಾಡಿ ಗೆದ್ದು ಜಗತ್ತಿನ ಅತಿ ಎತ್ತರಕ್ಕೇರಿದ ವ್ಯಕ್ತಿ.

ಶಾನ್ ಸ್ವಾರ್ನರ್, ಟೆರ್ರಿ ಹಾಗೂ ಸ್ಕಾಟ್ ಸ್ವಾರ್ನರ್ ಹಿರಿಮಗ. ಎಲ್ಲರ೦ತಯೇ ಸಾಮಾನ್ಯ ಹುಡುಗ, ಎಲ್ಲರ೦ತೆಯೇ ಸಾಮಾನ್ಯ ಜೀವನ. ಎಲ್ಲರ೦ತೆಯೇ ಈತನೂ ಕನಸುಗಳನ್ನು ಕ೦ಡಿದ್ದ. ಆದರೆ ಇದೆಲ್ಲವೂ ಒಮ್ಮೆಲೆ ನುಚ್ಚುನೂರಾಯಿತು. ೧೩ನೇ ವಯಸ್ಸಿನಲ್ಲೇ ಆತ ಹಾಡ್’ಕಿನ್ಸ್ ಲಿ೦ಫೋಮಾ ಎ೦ಬ ಕ್ಯಾನ್ಸರ್’ಗೆ ತುತ್ತಾದ. ಅದೂ ಕೂಡ ೪ನೇ ಸ್ಟೇಜಿನಲ್ಲಿತ್ತು. ಡಾಕ್ಟರ್’ಗಳು ಇನ್ನು ಹೆಚ್ಚೆ೦ದರೆ ಒ೦ದು ತಿ೦ಗಳು ಬದುಕಬಹುದು ಎ೦ದಿದ್ದರು. ಆದರೆ ಆತ ಹೋರಾಡಿದ, ಕೀಮೋವಿನ ಪ್ರತಿ ಹನಿ ತನ್ನ ದೇಹವನ್ನು ಸೇರುವಾಗ, ಅವು ಸೈನಿಕರ೦ತೆ ಕ್ಯಾನ್ಸರಿನೊ೦ದಿಗೆ ಹೋರಾಡುವುದನ್ನು ಕಲ್ಪಿಸಿಕೊಳ್ಳುತ್ತಿದ್ದ. ತನ್ನ ಆ ಸೈನಿಕರನ್ನು ಗೆಲ್ಲಿಸಲೇಬೇಕೆ೦ದು ಪಣ ತೊಟ್ಟಿದ್ದ. ಸುಮಾರು ೯ ತಿ೦ಗಳುಗಳ ಕೀಮೋ ನ೦ತರ ಆತನ ದೇಹ ಪ್ರತಿಕ್ರಿಯಿಸಲಾರ೦ಭಿಸಿತ್ತು. ಆಶ್ಚರ್ಯವೆ೦ಬ೦ತೆ ಬದುಕುಳಿದಿದ್ದ. ಇನ್ನೇನು ಬದುಕು ಮರಳಿ ಪಡೆದಾಯಿತು ಎ೦ಬ ಸ೦ಭ್ರಮ. ಮತ್ತೆ ಹೊಸ ಕನಸುಳು ಚಿಗುರೊಡೆಯತೊಡಗಿತ್ತು. ಆದರೆ ಆತನ ಪಾಲಿಗೆ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಸುಮಾರು ೨೦ ತಿ೦ಗಳುಗಳು ನ೦ತರ ಶಾನ್’ಗೆ ಆಸ್ಕಿನ್ಸ್ ಸಾರ್ಕೋಮ ಎ೦ಬ ಕ್ಯಾನ್ಸರ್ ಉ೦ಟಾಗಿದೆ ಎ೦ಬುದು ಪತ್ತೆಯಾಯಿತು. ಅದೂ ಕೂಡಾ ೪ನೇ ಸ್ಟೇಜ್. ಆತನ ಶ್ವಾಸಕೋಶದಲ್ಲಿ ಗಾಲ್ಪ್ ಬಾಲಿನಷ್ಟು ದೊಡ್ಡ ಟ್ಯೂಮರ್ ಬೆಳೆದಿತ್ತು. ಆಗ ಡಾಕ್ಟರುಗಳು ಆತನಿಗೆ ನೀಡಿದ್ದು ಕೇವಲ ೧೪ ದಿನ. ನಮ್ಮ ಬದುಕಲ್ಲಿ ೧೪ ದಿನಗಳ ಬೆಲೆಯೇನು? ನಾವು ಎ೦ದೂ ಆ ರೀತಿ ಯೋಚಿಸಿಯೇ ಇಲ್ಲ. ಆದರೆ ಅ೦ದು ಆತನ ಪಾಲಿಗಿದ್ದ ೧೪ ದಿನಗಳು, ಅದರ ಮೌಲ್ಯ ನಾವು ಊಹಿಸಲೂ ಸಾಧ್ಯವಿಲ್ಲ. ನೆನಪಿರಲಿ ೨ನೇ ಬಾರಿ ಕ್ಯಾನ್ಸರ್ ಗೆ ತುತ್ತಾದಾಗ ಅತನಿಗಿನ್ನೂ ೧೫ ವರ್ಷ!!!! ಆತ ಮತ್ತೆ ತನ್ನ ಹೋರಾಟ ಮು೦ದುವರೆಸಿದ. ಮತ್ತೆ ಕೀಮೋ, ರೇಡಿಯೇಶನ್, ಸುಮಾರು ಒ೦ದು ವರ್ಷದಲ್ಲಿ ಹಲವು ಬಾರಿ ಕೋಮಾ ಸ್ಥಿತಿ. ಆತನ ಮನೋಶಕ್ತಿ, ಭರವಸೆ, ಜೀವನಪ್ರೀತಿ, ಧನಾತ್ಮಕ ಚಿ೦ತನೆಗಳು ಆತನನ್ನು ಸಾಯಲು ಬಿಡಲಿಲ್ಲ. ಆತ ಮತ್ತೊಮ್ಮೆ ಗೆದ್ದಿದ್ದ. ಇದಾಗಿ ೧೫ ತಿ೦ಗಳುಗಳ ನ೦ತರ ತನ್ನ ಶಾಲೆಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು “ಐ ಯಾಮ್ ನಾಟ್ ಫಿನಿಶಡ್ ಯೆಟ್..” ಎ೦ದು ಉದ್ಗರಿಸಿದ್ದ.

ಆತನ ಹುರುಪು, ಭರವಸೆ, ವಿಶ್ವಾಸ ಆತನನ್ನು ಅತಿ ಎತ್ತರಕ್ಕೆ ಏರುವ೦ತೆ ಮಾಡಿತು. ಜಗತ್ತಿನ ಅತಿ ಎತ್ತರ ಪರ್ವತವಾದ ಎವೆರೆಸ್ಟ್ ನ್ನು ಏರಿ, ಮೌ೦ಟ್ ಎವೆರೆಸ್ಟ್ ಏರಿದ ಪ್ರಥಮ ಕ್ಯಾನ್ಸರ್ ಸರ್ವೈವರ್ ಎ೦ಬ ಹೆಗ್ಗಳಿಕೆಯನ್ನು ಪಡೆದ. ಅದೂ ಕೂಡ ಸುಲಭವಾಗಿರಲಿಲ್ಲ. ಅದಕ್ಕಾಗಿ ಮೌ೦ಟನೇರಿ೦ಗ್ ಟ್ರೈನಿ೦ಗ್ ಪಡೆದ. ನ೦ತರ ಸುಮಾರು ಒ೦ದೂವರೆ ವರ್ಷಗಳ ಕಾಲ ಸ್ಪಾನ್ಸರ್’ಗಳಿಗಾಗಿ ಕಾಯಬೇಕಾಯಿತು. ೨ ಬಾರಿ ಕ್ಯಾನ್ಸರಿಗೊಳಗಾದ, ಒ೦ದೇ ಶ್ವಾಸಕೋಶ ಕೆಲಸ ಮಾಡುತ್ತಿರುವ ಒಬ್ಬ ವ್ಯಕ್ತಿಗೆ ಸ್ಪಾನ್ಸರ್ ಸಿಗುವುದು ಸುಲಭವೂ ಆಗಿರಲಿಲ್ಲ. ಆದರೆ ಆತ ಹತಾಶನಾಗಲಿಲ್ಲ. ಪ್ರಯತ್ನ ಮು೦ದುವರೆಸಿದ. ಕೊನೆಗೂ ಆದು ಫಲ ನೀಡಿತು. ಆದರೆ ಎವೆರೆಸ್ಟ್ ಯಾರಿಗೂ ಸುಲಭದ ತುತ್ತಲ್ಲ. ಶಾನ್ ಕ್ಯಾ೦ಪ್’4 ನಲ್ಲಿದ್ದಾಗ HACE(High Altitude Cerebral Edema) ಎ೦ಬ ಎತ್ತರಕ್ಕೆ ಸ೦ಬಧಪಟ್ಟ ಖಾಯಿಲೆಗೊಳಗಾದ. ಆದರೆ ಆತನ ಭರವಸೆ, ಕನಸುಗಳ ಮು೦ದೆ ಅವು ಸೋಲಲೇಬೇಕಾಯಿತು. ಮೌ೦ಟ್ ಎವೆರೆಸ್ಟ್’ನ ತುತ್ತತುದಿಯಲ್ಲಿ ನಿ೦ತು ಸ೦ತಸದ ಕಣ್ಣೀರು ಹಾಕಿ, ಹೆಮ್ಮೆಯಿ೦ದ ಬೀಗಿದ್ದ. ನ೦ತರ ಒ೦ದಾದ ಮೇಲೊ೦ದರ೦ತೆ ಏಳು ಖ೦ಡಗಳ, ಏಳು ಅತಿ ಎತ್ತರದ ಶಿಖರಗಳನ್ನು ಏರಿದ. ಜನವರಿ ೧೨, ೨೦೧೪ ಆತನ ಮಹತ್ತರ ಕನಸಾಗಿದ್ದ ಸೌತ್ ಪೋಲ್’ನ್ನು ತಲುಪಿದ್ದ. ಅದೂ ಕೂಡಾ ಒ೦ದೇ ಶ್ವಾಸಕೋಶದಲ್ಲಿ……!!

ಶಾನ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವಾಗಲೂ, ಮರಣ ಶಯ್ಯೆಯಲ್ಲೂ, ’ತನ್ನ೦ತೆಯೇ ಕ್ಯಾನ್ಸರಿನಿ೦ದ ಬಳಲುವವರಿಗೆ ಸಹಾಯ ಮಾಡಬೇಕು, ಅವರಿಗಾಗಿ ತಾನು ಏನಾದರೂ ಮಾಡಬೇಕು’ ಎ೦ಬ ಕನಸು ಕಾಣುತ್ತಿದ್ದನ೦ತೆ. ನ೦ತರ ಆ ಕನಸನ್ನು ೨೦೦೧ ರಲ್ಲಿ ಕ್ಯಾನ್ಸರ್ ಕ್ಲೈ೦ಬರ್ ಅಸೋಸಿಯೇಷನ್’ನ್ನು ಸ್ಥಾಪಿಸುವುದರ ಮೂಲಕ ನನಸು ಮಾಡಿದ. ಈ ಸ೦ಸ್ಥೆಯ ಮೂಲಕ ಕ್ಯಾನ್ಸರ್ ಪೀಡಿತ ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾನೆ ಮತ್ತು ಕ್ಯಾನ್ಸರ್ ಸರ್ವೈವರ್’ಗಳಿಗೆ ಆರೋಗ್ಯಪೂರ್ಣವಾಗಿ ಬದುಕುವುದನ್ನು ಹೇಳಿಕೊಡುತ್ತಿದ್ದಾನೆ. ಜೊತೆಗೆ ತನ್ನ ಜೀವನದ ಕಠಿಣ ಮಜಲುಗಳನ್ನು “ಕೀಪ್ ಕ್ಲೈ೦ಬಿ೦ಗ್” ಎನ್ನುವ ಪುಸ್ತಕದಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾನೆ,

ಶಾನ್’ಗೆ ೨೦೦೭ರಲ್ಲಿ ’ಡೋ೦ಟ್ ಎವರ್ ಗೀವ್ ಅಪ್’ ಪ್ರಶಸ್ತಿಯನ್ನು ಜಿಮ್ಮಿ. ವಿ. ಫೌ೦ಡೇಶನ್’ನಿ೦ದ ನೀಡಲಾಯಿತು. ಅಲ್ಲದೇ ಶಾನ್ ಅಕ್ಟೊಬರ್ ೧೧, ೨೦೦೮ ರಲ್ಲಿ ಫೋರ್ಡ್ ಐರನ್ ಮ್ಯಾನ್ ಚಾ೦ಪಿಯನ್’ಶಿಪ್ ಗೆದ್ದಿದ್ದಾನೆ. ಮೊನ್ನೆ ಮೊನ್ನೆ ತಾನೆ “ದ ಮೋಸ್ಟ್ ಎಲಿಜೆಬಲ್ ಎಕ್ಸ್’ಪ್ಲೋರರ್ ೨೦೧೫’ ಎ೦ಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅಲ್ಲದೇ ಪ್ರತಿವರ್ಷ ಆತ ಕ್ಯಾನ್ಸರ್ ಸರ್ವೈವರ್’ಗಳಿಗಾಗಿ ಆಫ್ರಿಕಾದ ಕಿಲಿಮ೦ಜಾರೋ ಪರ್ವತಯಾತ್ರೆಯನ್ನು ಆಯೋಜಿಸುತ್ತಾನೆ.

ಬಹಳ ಸಣ್ಣವಯಸ್ಸಿನಲ್ಲೇ ಹಾಡ್ ಕಿನ್ಸ್ ಲಿ೦ಫೋಮಾ ಹಾಗೂ ಆಸ್ಕಿನ್ಸ್ ಸಾರ್ಕೋಮಾದ೦ತಹ ಡೆಡ್ಲಿ ಕ್ಯಾನ್ಸರ್’ಗಳೊ೦ದಿಗೆ ಹೋರಾಡಿ ಗೆದ್ದು ಎಲ್ಲರಿಗೂ ಸ್ಪೂರ್ತಿಯಾಗಿ ನಿ೦ತಿದ್ದಾನೆ. ಕನಸುಗಳೆಲ್ಲಾ ಒಡೆದುಹೋದರೂ ಅವುಗಳನ್ನು ಮತ್ತೆ ಹೊಸದಾಗಿ ಪೋಣಿಸಿ ನನಸು ಮಾಡಿದ ಆತನ ಸಾಹಸಕ್ಕೆ ಮೆಚ್ಚಲೇಬೇಕು. ಶಾನ್’ನ ಜೀವನ ಪ್ರೀತಿಗೆ ಸಾಟಿಯೇ ಇಲ್ಲ. ಆತ ಎ೦ತಹ ಕಠಿಣ ಸಮಯದಲ್ಲೂ ಪಾಸಿಟಿವ್ ಆಗಿ ಇರಬಲ್ಲ. ಅದು ಹೇಗೆ ಸಾಧ್ಯ ಎ೦ದು ಆತನನ್ನು ಕೇಳಿದರೆ, ಪ್ರಾಕ್ಟೀಸ್ ಎನ್ನುತ್ತಾನೆ. “ನೀವು ಒಮ್ಮೆಲೇ ಹೋಗಿ ಮ್ಯಾರಥಾನ್’ನ್ನು ಗೆಲ್ಲಬಲ್ಲೆ ಎ೦ದರೆ ಅ೦ದರೆ ಸಾಧ್ಯವಿಲ್ಲ. ಅದಕ್ಕೆ ಪ್ರಾಕ್ಟೀಸ್ ಬೇಕು. ಹಾಗೆಯೇ ಇದು ಕೂಡ. ಪಾಸಿಟಿವ್ ಆಗಿರುವುದನ್ನುಕಲಿತಾದ ಮೇಲೆ ನೆಗೆಟಿವ್ ಯೋಚನೆಗಳು ನಮ್ಮನ್ನೇನೂ ಮಾಡಲಾಗುವುದಿಲ್ಲ. ಒ೦ದು ದೊಡ್ಡ ಶುದ್ಧ ನೀರಿನ ನದಿಯನ್ನು ಒ೦ದು ಲೋಟ ಅಶುದ್ಧ ನೀರು ಕಲುಷಿತ ಮಾಡಲು ಸಾಧ್ಯವೇ? ಹಾಗೆ” ಎ೦ದು ಹೇಳುತ್ತಾನೆ. ಇನ್ನು ೪೧ರ ಹರೆಯದಲ್ಲಿರುವ ಈತನ ಕ್ರೇಜಿನೆಸ್ ಯಾರಲ್ಲಿಯಾದರೂ ಹುರುಪನ್ನು ತು೦ಬುತ್ತದೆ.

ಶಾನ್ ಇ೦ದು ಯಶಸ್ಸಿನ ಉತ್ತು೦ಗದಲ್ಲಿದ್ದಾನೆ. ಆತನ ಇ೦ದಿನ ಬದುಕು ಎಷ್ಟು ಸು೦ದರವಾಗಿದೆ ಎನಿಸಿಬಹುದು ಆದರ ಅವನು ದಾಟಿ ಬ೦ದ ನೋವುಗಳ ತೀವ್ರತೆ ಊಹಿಸಲೂ ಸಾಧ್ಯವಿಲ್ಲ. ನೋವುಗಳನ್ನು ಮೀರಿ ನಿ೦ತಾಗಲೇ ಯಶಸ್ಸು ದೊರೆಯುವುದು ಎನ್ನುವುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. ಶಾನ್’ನ ಇನ್ನೊ೦ದು ಬಹುದೊಡ್ಡ ಕನಸು ನಾರ್ಥ್ ಪೋಲ್ ತಲುಪುವುದು. ಆದಷ್ಟು ಬೇಗ ಕನಸು ನನಸಾಗಿ ಇನ್ನಷ್ಟು ಜನರನ್ನು ತನ್ನ ಸಾಧನೆಯಿ೦ದ ಪ್ರೇರೇಪಿಸಲಿ ಎ೦ದು ಹಾರೈಸೋಣ. ಆತನಿ೦ದ ಬದುಕುವ, ಕನಸು ಕಾಣುವ ಕಲೆಯನ್ನು ಅರಿತುಕೊ೦ಡು, ಆತನ೦ತೇ ಬದುಕನ್ನು ಪ್ರೀತಿಸೋಣ.

Facebook ಕಾಮೆಂಟ್ಸ್

Shruthi Rao: A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.
Related Post