“ಅಲ್ಪಕಾಲದಲ್ಲಿ ಅತ್ಯಧಿಕ ಧನಸಂಪಾದನೆ ಮಾಡಲು, ವಿದೇಶಕ್ಕೆ ಹೋಗಲು ಸಾಧ್ಯವಿರುವ ವೃತ್ತಿ ಯಾವುದು? ಅದಕ್ಕೆ ಬೇಕಾದ ವಿದ್ಯಾರ್ಹತೆ ಯಾವುದು?” ಎಂದು ಯುದ್ಧರಂಗದಲ್ಲಿ ಅರ್ಜುನನು ಶ್ರೀಕೃಷ್ಣನನ್ನು ಪ್ರಶ್ನಿಸಿದಂತೆ, ಮಹಾಭಾರತದಲ್ಲಿ ಯಕ್ಷನು ಧರ್ಮರಾಜನನ್ನು ಪ್ರಶ್ನಿಸಿದಂತೆ , ಹತ್ತನೇ ತರಗತಿಯ ಆದಿತ್ಯನು ನನ್ನನ್ನು ಪ್ರಶ್ನಿಸಿದನು.ಪರಮ ಜ್ಞಾನಿಗಳಾದ ಶ್ರೀಕೃಷ್ಣ -ಧರ್ಮರಾಜರೆಲ್ಲಿ? ಕಂಠಶೋಷಣೆಯಿಂದ ಹೊಟ್ಟೆಹೊರೆಯವ ಈ ಶಿಕ್ಷಕಿಯೆಲ್ಲಿ? ನನ್ನ ನಾಲಿಗೆ ಬಡಬಡಿಸಿತು- “ಭಾರತವೆಂಬ ಪುಣ್ಯಭೂಮಿಯಲ್ಲಿ ಈ ದಿನಗಳಲ್ಲಿ ಸಾಫ಼ಟ್ ವೇರ್ ಇಂಜನಿಯರ್ ಎಂಬ ವೃತ್ತಿಯಿದೆ.ಅದಕ್ಕಾಗಿ ಕಂಪ್ಯೂಟರ್ ಸೈನ್ಸ್ಇಂಜನಿಯರಿಂಗ್ ಎಂಬ ಡಿಗ್ರಿಯ ಅವಶ್ಯಕತೆಯಿದೆ. ಅದನ್ನು ಕಡಿಮೆ ಖರ್ಚಿನಲ್ಲಿ ಓದಲು ಶಾಲೆ ಮತ್ತು ಕೋಚಿಂಗ್ ಸೆಂಟರ್ ನಲ್ಲಿ ಕಠಿಣ ಪರಿಶ್ರಮದ ಅಗತ್ಯವೂ ಇದೆ .”
ಡಿಸೆಂಬರ್ ಬಂತೆಂದರೆ ಹತ್ತನೇ ತರಗತಿಯ ಮಕ್ಕಳನ್ನು , ಅವರ ಪಾಲಕರನ್ನು ಮುಂದೇನು? ಎಂಬ ಪ್ರಶ್ನೆ ಬಾಧಿಸಲಾರಂಭಿಸುತ್ತದೆ. ಕೆಲ ದಶಕಗಳ ಹಿಂದೆ ಇದೊಂದು ಸಮಸ್ಯೆಯೇ ಆಗಿರಲಿಲ್ಲ. ಮಕ್ಕಳ ಅಂಕಗಳ ಬಗ್ಗೆ ,ಭವಿಷ್ಯದ ಬಗ್ಗೆ ಪಾಲಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಓದುವ ಹಂಬಲವಿರುವವರು-ಆರ್ಥಿಕ ಶಕ್ತಿ ಇರುವವರು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳಿಗೆ ಅನುಸಾರವಾಗಿ ಸೈನ್ಸ್/ಕಾಮರ್ಸ್/ಆರ್ಟ್ಸ್/ಡಿಪ್ಲೊಮಾ ಓದು, ಇತರರು- ಹುಡುಗರಾದರೆ ಪುರೋಹಿತಿಕೆ, ವ್ಯವಸಾಯ,ವ್ಯಾಪಾರ, ಡ್ರೈವಿಂಗ್ ಕಲಿತು ಪೇಟೆಗೆ ಜೀಪು- ದಿನಕ್ಕೆ ೧೦ ಟ್ರಿಪ್…..ಹುಡುಗಿಯರಾದರೆ ಹೊಲಿಗೆ,ಟೈಪಿಂಗ್, …೨ ವರ್ಷದಲ್ಲಿ ಮದುವೆ… ಹೀಗೆ ಜೀವನ ಅತಿ ಸರಳವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ.ಮೌಲ್ಯಗಳು ಬದಲಾಗಿವೆ. ಎಲ್ಲರಿಗೂ ಮಕ್ಕಳು ಪಿ.ಯು.ಸಿಯಲ್ಲಿ ವಿಜ್ಞಾನವನ್ನೇ ಓದಲಿ. ಡಾಕ್ಟರ್/ಇಂಜನಿಯರ್ ಗಳಾಗಿ ಅತಿ ಹೆಚ್ಚು ಸಂಪಾದಿಸಲಿ,ವಿದೇಶಕ್ಕೆ ಹೋಗಲಿ ಎಂಬಾಸೆ. ಇದರಲ್ಲೇನೂ ತಪ್ಪಿಲ್ಲ. ಸುಖವಾಗಿ ಬದುಕಬೇಕೆನ್ನುವ ಆಸೆ ಸಹಜವೇ. ಆದರೆ ಜನರ ಆಸೆಗಳಿಗನುಗುಣವಾಗಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ/ತಾಂತ್ರಿಕಶಿಕ್ಷಣವನ್ನು ಕೊಡುವ ಸಂಸ್ಥೆಗಳನ್ನು ನಮ್ಮ ಸರಕಾರಗಳು ಸ್ಥಾಪಿಸಿಲ್ಲ. ಎಲ್ಲೆಂದರಲ್ಲಿ ಇರುವ ಖಾಸಗಿ ಕಾಲೇಜುಗಳಿಗೆ ಕೋಟಿಗಳನ್ನು ಹೊಂದಿಸುವ ಶಕ್ತಿ ನಮಗಿಲ್ಲ.ಅದಕ್ಕೇ ಮಕ್ಕಳು ೧೦ನೇ ತರಗತಿಗೆ ಬರುತ್ತಿದ್ದಂತೆ ಪಾಲಕರಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನಿಸುತ್ತದೆ.ಮಕ್ಕಳಿಗೆ ಉಸಿರು ಕಟ್ಟಿದಂತಾಗುತ್ತದೆ.
ಪಿ..ಯು.ಸಿ/೧೨ನೇ ತರಗತಿಯ ನಂತರದ ತಾಂತ್ರಿಕ ಶಿಕ್ಷಣಕ್ಕೆ ಇರುವ ಸರಕಾರೀ ವ್ಯವಸ್ಥೆ ದಯನೀಯವಾಗಿದೆ. ಕೇಂದ್ರಸರಕಾರದ ವಿಶೇಷ ಅನುದಾನವನ್ನು ಪಡೆಯುವ, ಉತ್ತಮ ದರ್ಜೆಯ ವ್ಯವಸ್ಥೆಗಳು,ಪರಿಣತ ಅಧ್ಯಾಪಕರಿರುವ ಇಪ್ಪತ್ತು ಎನ್.ಐ.ಟಿಗಳು ರಾಜ್ಯಕ್ಕೊಂದರಂತೆ ಇವೆ[ಕೆಲ ರಾಜ್ಯಗಳಲ್ಲಿ ಇಲ್ಲ].ಇಲ್ಲಿನ ಹತ್ತುಸಾವಿರ ಸೀಟುಗಳಿಗೆ ಹದಿಮೂರು ಲಕ್ಷ ಮಕ್ಕಳು ಪರೀಕ್ಷೆ[ಜೆ.ಇ.ಇ ಮೈನ್] ಬರೆಯುತ್ತಾರೆ.ಇವುಗಳಿಗಿಂತಲೂ ಶ್ರೇಷ್ಠವಾದ, ವಿಶ್ವದರ್ಜೆಯ ವ್ಯವಸ್ಥೆಗಳಿರುವ ಹದಿನೇಳು ಐ.ಐ.ಟಿಗಳು ದೇಶದಲ್ಲಿವೆ[ಹೆಚ್ಚಿನವು ಉತ್ತರಭಾರತದಲ್ಲಿ]. ಇಲ್ಲಿರುವ ಒಂಬತ್ತು ಸಾವಿರ ಸೀಟುಗಳಿಗೆ ಜೆ.ಇ.ಇ ಮೈನ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ[ ಜೆ.ಇ.ಇ ಅಡ್ವಾನ್ಸಡ್] ಬರೆಯುತ್ತಾರೆ. ಮೀಸಲಾತಿಯೆಂಬ ಗೊಂಡಾರಣ್ಯದಿಂದ ಪಾರಾಗಿ ಬಂದು ಇಲ್ಲಿ ಸೀಟು ದಕ್ಕಿಸಿಕೊಳ್ಳುವ ಪುಣ್ಯವಂತ, ಬುದ್ಧಿವಂತ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಐ.ಐ.ಟಿ/ಎನ್.ಐ.ಟಿಯಲ್ಲಿ ತಾಂತ್ರಿಕ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನ ಸಂಬಳದ ನೌಕರಿ ಪಡೆದು ಪಾಲಕರ ಕನಸುಗಳನ್ನು ನನಸಾಗಿಸುತ್ತಾರೆ. ಆದರೆ ಸ್ವಾಮೀ … ಉಳಿದ ೧೨ ಲಕ್ಷದ ೮೦ ಸಾವಿರ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಅವರನ್ನು ಬೀದಿಗೊಂದರಂತೆ ತಲೆ ಎತ್ತುತ್ತಿರುವ ಖಾಸಗಿ ಇಂಜನಿಯರಿಂಗ್ ಕಾಲೇಜುಗಳು ಕೈಬೀಸಿ ಕರೆಯುತ್ತವೆ. ಇವುಗಳಲ್ಲಿ ಕೆಲವು ಸರಕಾರೀ ಸಂಸ್ಥೆಗಳಿಗಿಂತಲೂ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡುತ್ತವೆಂದು ಖ್ಯಾತಿ ಪಡೆದಿವೆ[BITS , PES, RVCE , SRME ಇತ್ಯಾದಿ] ಆದರೆ ಅವುಗಳಿಗೆ ಸರಕಾರೀ ಅನುದಾನ ಇಲ್ಲದಿರುವುದರಿಂದ ಅದಕ್ಕೆ ತಕ್ಕನಾಗಿ ಹಣವನ್ನು ಪಾಲಕರಿಂದ ವಸೂಲಿ ಮಾಡುತ್ತವೆ.ಉಳಿದಂತೆ ಹೆಚ್ಚಿನ ಖಾಸಗೀ ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಮಟ್ಟ ಕಳಪೆಯಾಗಿರುತ್ತದೆ. ಇವುಗಳಲ್ಲಿ ಪ್ರವೇಶ ಪಡೆಯಲು ರಾಜ್ಯಸರಕಾರಗಳು ನಡೆಸುವ ಸಿ.ಇ.ಟಿ/ ಖಾಸಗಿಯವರ ಕಾಮೆಡ್ ಕೆ ಪರೀಕ್ಷೆಯನ್ನು ಬರೆಯಬೇಕು.ಈ ಖಾಸಗಿ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಉತ್ತಮ ಅಂಕಗಳನ್ನು ಪಡೆದವರಿಗೆ ಮೀಸಲಿಟ್ಟಿದ್ದಾರಾದರೂ ಅವು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿವೆ. ನಮ್ಮದೊಡ್ಡಸಂಖ್ಯೆಯ ಆಕಾಂಕ್ಷಿಸಮೂಹಕ್ಕೆ ಇವು ಏನೇನೂ ಸಾಲದು. ಆದ್ದರಿಂದ ಉಳಿದೆಲ್ಲ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳು ನಿಗದಿಪಡಿಸಿದ ದೊಡ್ಡಮೊತ್ತವನ್ನು ಸಲ್ಲಿಸಿ ಇಂಜನಿಯರಿಂಗ್ ಶಿಕ್ಷಣ ಪಡೆಯುವುದು ಅನಿವಾರ್ಯ. ಇನ್ನು ವೈದ್ಯಕೀಯ ಶಿಕ್ಷಣವನ್ನು ನೋಡಿದರೆ ದೇಶದಲ್ಲಿ ಕೇವಲ ೧೫೦ ಸರ್ಕಾರೀ ಕಾಲೇಜುಗಳಿವೆ. ಅವುಗಳ ಇಪ್ಪತ್ತೊಂದು ಸಾವಿರ ಸೀಟುಗಳಿಗೆ ಪ್ರವೇಶ ಪಡೆಯಲು ಆರು ಲಕ್ಷ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿರುತ್ತಾರೆ. ಇನ್ನುಳಿದ ಎಲ್ಲರೂ ಖಾಸಗಿ ಕಾಲೇಜುಗಳಲ್ಲಿ ಲಕ್ಷಗಳನ್ನು ಸಲ್ಲಿಸಿ ವಿದ್ಯಾಭ್ಯಾಸ ಪಡೆಯಬೇಕು.
ಇಂಥ ವ್ಯವಸ್ಥೆಯಲ್ಲಿ ಸಹಜವಾಗಿಯೇ ಹೆಚ್ಚು ಅಂಕ ಗಳಿಸಲು ಮಕ್ಕಳ ಮೇಲೆ ಒತ್ತಡ ಇರುತ್ತದೆ. ಈ ಸರಕಾರೀ ಸೀಟುಗಳಿಗಿರುವ ಸ್ಪರ್ಧೆಯಿಂದಾಗಿ ಪ್ರವೇಶ ಪರೀಕ್ಷೆ ಅತ್ಯಂತ ಕಠಿಣವಾಗಿರುತ್ತದೆ. ಹನ್ನೆರಡನೇ ತರಗತಿಯ/ಪಿ.ಯು.ಸಿ ಯ ನಮ್ಮ ಸರ್ಕಾರೀ ಪಠ್ಯಕ್ರಮ ಈ ಪರೀಕ್ಷೆಯನ್ನು ಭೇದಿಸಲು ಅಸಮರ್ಥವಾಗಿದೆ. ಅದಕ್ಕೆ ಮತ್ತೆ ಖಾಸಗಿ ಟ್ಯೂಶನ್ ಸೆಂಟರ್ ಗಳು ನೆರವಿಗೆ ಬರುತ್ತವೆ. ಇಲ್ಲಿನ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿಗಳು ಬೇಕು. [ ದೀಕ್ಷಾ ಕಾಲೇಜ್, ಎಕ್ಸಲೆಂಟ್,ಆಕಾಶ್,ಫಿಟ್ ಜೀ, ರಾಜಸ್ತಾನದ ಕೋಟಾ ಇತ್ಯಾದಿ]. ಹತ್ತನೇ ತರಗತಿ ಮುಗಿಯುತ್ತಿದ್ದಂತೆಯೇ ಇಲ್ಲಿನ ತರಬೇತಿ ಆರಂಭವಾಗುತ್ತದೆ . ದಿನಕ್ಕೆ ೨೦೦-೪೦೦ [ಫಿಸಿಕ್ಸ್, ಕೆಮಿಸ್ಟ್ರಿ, ಮಾತ್ಸ್] ಲೆಕ್ಕಗಳನ್ನು ಅತಿ ಕಡಿಮೆ ನಿಮಿಷಗಳಲ್ಲಿ ಬಿಡಿಸುವ ಕಲೆಯನ್ನು ಇಲ್ಲಿ ಕಲಿಸುತ್ತಾರೆ.. ಆದರೆ ನೆನಪಿಡಿ …ಇಷ್ಟೊಂದು ಶ್ರಮವಹಿಸಲು ವಿದ್ಯಾರ್ಥಿಗೆ ವಿಜ್ಞಾನದಲ್ಲಿ ಆಸಕ್ತಿ ಇರಬೇಕು. ತರ್ಕಬದ್ಧವಾಗಿ ಯೋಚಿಸುವ ಬುದ್ಧಿವಂತಿಕೆ ಬೇಕು. ಇದಲ್ಲದೇ ಮನೆಗೆ ಬಂದು ಮತ್ತೆ ೫-೬ ಗಂಟೆಗಳ .ಕಾಲ ಅಧ್ಯಯನವನ್ನೂ ಮಾಡಬೇಕು .ಒಟ್ಟಾರೆ ಎರಡು ವರ್ಷ ಅಸಾಮಾನ್ಯ ತಪಸ್ಸನ್ನೇ ಆಚರಿಸಬೇಕು..ಆದರೆ ಮಕ್ಕಳೇ ಯೋಚಿಸಿ ನಿಮಗೆ ಇದನ್ನು ಭರಿಸುವ ಶಕ್ತಿ ಇದೆಯೇ ?ಸಾಮಾನ್ಯ ಬುದ್ಧಿಮತ್ತೆಯ ನಿಮಗೆ – ಕಷ್ಟಪಟ್ಟು ಹಣ ಹೊಂದಿಸಿ ಮಗು ಒಳ್ಳೆಯ ಅಂಕಗಳನ್ನು ಪಡೆಯಲಿ ಎಂದು ನಿರೀಕ್ಷಿಸುವ ಪಾಲಕರಿಂದ, ಒಳ್ಳೆಯ ಅಂಕಗಳನ್ನು ಪಡೆಯುವ ಸಹಪಾಠಿಗಳಿಂದ, ಯಶಸ್ಸನ್ನು ಮಾತ್ರ ಗೌರವಿಸುವ ನಮ್ಮ ಸಮಾಜದಿಂದ ನಿಮ್ಮ ಮೇಲೆ ಹೇರಲ್ಪಡುವ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಬಹುದೇ? ಪಾಲಕರೇ… ನಿಮ್ಮ ಮಗುವನ್ನು ಗಮನಿಸಿ .ಹತ್ತನೇ ತರಗತಿಯವರೆಗೆ ಸರಿಯಾಗಿ ಎರಡು ಗಂಟೆಗಳ ಏಕಾಗ್ರತೆಯಿಲ್ಲದ ಮಗು ಮುಂದಿನ ೨ ವರ್ಷ ೧೨ ಗಂಟೆಗಳ ಕಾಲ ಓದಲು ಸಾಧ್ಯವೇ? ಗಣಿತ- ವಿಜ್ಞಾನವೆಂದರೆ ಚಳಿಜ್ವರ ಬರುವ ನಿಮ್ಮ ಮಗು ಈ ಕಡಲಿನಲ್ಲಿ ಈಜಬಲ್ಲನೇ? ಕಷ್ಟಪಟ್ಟು ಓದಿದರೆ ಎಲ್ಲವೂ ಸಾಧ್ಯ ಎಂಬ ಮಾತಿದೆ .ಆದರೆ ಓದಲು ಆ ವಿಷಯದ ಮೇಲೆ ಆಸಕ್ತಿ ಇರಬೇಕಲ್ಲವೇ?
ಬಡಬಡಿಸುತ್ತಿದ್ದ ನಾಲಿಗೆಯನ್ನೂ, ಓಡುತ್ತಿದ್ದ ಮನಸ್ಸನ್ನೂ ನಿಯಂತ್ರಿಸಿ ನಾನು ಆದಿತ್ಯನಿಗೆ ಹೇಳಿದೆ “ ಮಗೂ ಈ ಪ್ರಪಂಚದಲ್ಲಿ ಭವಿಷ್ಯದಲ್ಲಿ ಯಶಸ್ಸೇ ಸಿಗಬಹುದು ಎಂದು ಖಚಿತವಾಗಿ ಹೇಳುವಂಥ ವೃತ್ತಿ ಯಾವುದೂ ಇಲ್ಲ. ಆದರೆ ಸ್ವಲ್ಪ ಸಹನೆ, ಶ್ರದ್ಧೆ ಗಳಿದ್ದರೆ ಸಾಕಷ್ಟು ಹಣ ಸಂಪಾದಿಸಬಹುದಾದ ಅನೇಕ ವೃತ್ತಿಗಳಿವೆ. ಪ್ರಾಮಾಣಿಕವಾಗಿ ದುಡಿದು ಸಂಪಾದಿಸಲು ಸಾಧ್ಯವಿರುವ ಎಲ್ಲ ವೃತ್ತಿಗಳೂ ಶ್ರೇಷ್ಠವೇ. ಆತುರಪಡಬೇಡ. ಮೋದಿಯೆಂಬ ಮೋಡಿಗಾರನಿಂದಾಗಿ ಮುಂದಿನ ವರ್ಷಗಳಲ್ಲಿ ನಮ್ಮ ದೇಶದಲ್ಲೇ ಉದ್ಯೋಗರಂಗದಲ್ಲಿ ಅಗಾಧ ಬದಲಾವಣೆಗಳಾಗುವ ನಿರೀಕ್ಷೆ ಇದೆ. ನಮ್ಮ ಬದುಕು ನಮಗೆ ಮಾತ್ರ ಸೇರಿದ್ದು. ಅನ್ಯರನ್ನು ಮೆಚ್ಚಿಸಲು ಬದುಕಬೇಡ.ನಿನ್ನ ಬುದ್ಧಿಮತ್ತೆಗೆ ಅನುಗುಣವಾಗಿ ನಿನ್ನಿಷ್ಟದ ವಿಷಯವನ್ನು ಆರಿಸಿ ಓದು.ಅಲ್ಲದೇ ಹಣವನ್ನೂ ಮೀರಿದ ಎಷ್ಟೋ ವಿಷಯಗಳು ಬದುಕಿನಲ್ಲಿವೆ… .ಧನಸಂಪತ್ತು ಖಂಡಿತವಾಗಿಯೂ ಹಿರಿದು ಆದರೆ ನೆಮ್ಮದಿಯೆಂಬ ಸಂಪತ್ತು ಎಲ್ಲಕ್ಕಿಂತ ಮಿಗಿಲು ”
Facebook ಕಾಮೆಂಟ್ಸ್