ಯಾವಾಗಲೂ ಸಂಜೆ ಆರಾದರೂ ಮನೆ ಸೇರದಿರುತ್ತಿದ್ದ ಮಗರಾಯ ಇಂದು ಐದೂವರೆಗೇ ಸಪ್ಪೆ ಮುಖ ಮಾಡಿ ಕಾಲೆಳೆಯುತ್ತಾ ಬಾಗಿಲ ಬಳಿ ಬಂದು ನಿಂತುದನ್ನು ನೋಡಿ ಏನೋ ಎಡವಟ್ಟಾಗಿದೆ ಅಂದುಕೊಂಡೆ. “ಯಾಕೋ ಪುಟ್ಟಾ, ಫ್ರೆಂಡ್ಸ್ ಬಂದಿಲ್ವಾ ಆಡಕ್ಕೆ ಇವತ್ತು?” ಎಂದು ಕೇಳಿದ್ದೇ ತಡ, ಅಳುತ್ತಾ “ಅಪ್ಪಾ, ಇವತ್ತು ಪಾರ್ಕಿಂಗ್ ಲಾಟ್ನಲ್ಲಿ ಒಂದು ಜಾಗ ಖಾಲಿ ಇತ್ತು ಅಂತ ಅಲ್ಲೇ ಆಡ್ತಿದ್ವಿ, ಸುರೇಶ್ ಅಂಕಲ್ ಬಂದು ‘ನನ್ ಜಾಗ ಇದು, ಇಲ್ಲಿ ಆಡಕ್ಕೆ ಪರ್ಮಿಷನ್ ಕೊಟ್ಟೋರ್ ಯಾರು ನಿಮ್ಗೆ?’ ಅಂತ ಜೋರು ಮಾಡಿದ್ರು”, ಮಗ ಅಂಶು ಹೇಳಿದ. ದಿಗ್ಭ್ರಾಂತಿಯಾಯಿತು ನನಗೆ. ಪಾರ್ಕಿಂಗ್ ಮಾಡಲು ತನಗೆ ಕೊಟ್ಟ ಜಾಗದಲ್ಲಿ ಮಕ್ಕಳು ಆಡುವುದನ್ನೂ ಸಹಿಸದಷ್ಟು ಸ್ವಾರ್ಥಿಯಾದನೇ ಮನುಷ್ಯ? ಮಾನವೀಯ ಮೌಲ್ಯಗಳ ಅಧಃಪತನವೆಂದರೆ ಇದೇ ಇರಬೇಕೆಂದನ್ನಿಸಿತು ನನಗೆ. ಅವನಿಗೆ ಸಮಾಧಾನ ಮಾಡುವಷ್ಟರಲ್ಲಿ ಸಾಕುಬೇಕಾಯಿತು. ಕೆಲಸದಿಂದ ಆಗಷ್ಟೇ ಬಂದ ಲಲಿತೆಗೆ ವರದಿಯನ್ನೊಪ್ಪಿಸಿದಾಗ ಅವಳೂ ಸಿಡಿಮಿಡಿಗೊಂಡು, “ಮಕ್ಕಳೇನು ಅವನ ಜಾಗ ನುಂಗ್ತಾವೆಯೇ? ಅವ್ನೂ ಅವ್ನ ಹೆಂಡ್ತೀನೂ ಸಿಗ್ಲಿ,ಇದೆ ಅವ್ರಿಗೆ” ಎಂದು ಕೂಗಾಡತೊಡಗಿದಳು. ಐದು ವರ್ಷವಾಯಿತು ಈ ಅಪಾರ್ಟಮೆಂಟಿನಲ್ಲಿ ನೆಲೆಸಿ. ಈಗಲೂ ಸುರೇಶನಿಗೂ ನನಗೂ ಕೇವಲ ‘ಹಾಯ್’ ಪರಿಚಯವಷ್ಟೇ. ಒಂದೇ ಅಪಾರ್ಟಮೆಂಟಿನಲ್ಲಿದ್ದುಕೊಂಡು ಅಪರಿಚಿತರಂತೆ ಬದುಕುವ ಗತಿಯೇಕೆ ಬಂತೋ ನಮಗೆ! ನಾವು ಹಳ್ಳಿಯಲ್ಲಿ ಕಳೆದ ಬಾಲ್ಯಕ್ಕೂ, ಈಗಿನ ಪಟ್ಟಣದ ಪಡಿಪಾಟಲಿನ ‘ಲೈಫ್’ಗೂ ಅದೆಷ್ಟು ವ್ಯತ್ಯಾಸ! ಯೋಚಿಸುತ್ತಾ ತಲೆ ಗಿರ್ರೆನ್ನತೊಡಗಿತು. ಎಲ್ಲರನ್ನೂ ಪ್ರೀತ್ಯಾದರಗಳಿಂದ ಕಾಣುವ ಹಳ್ಳಿಯ ಒಳ್ಳೆ ಬದುಕನ್ನು ನಾವಪ್ಪಿಕೊಂಡಿದ್ದರೆ ಅಂಶುವಿಗೆ ಇಂಥ ಮಾತುಗಳನ್ನು ಕೇಳುವ ಪ್ರಮೇಯವೇ ಬರುತ್ತಿರಲಿಲ್ಲವೇನೋ. ಯಾಕೋ ಹುಟ್ಟೂರು ಬಹಳವಾಗಿ ಕಾಡತೊಡಗಿತು. ಹೊಟ್ಟೆ ಪಾಡಿಗಾಗಿ ಕೆಲಸ ಕೊಟ್ಟೂರನ್ನು ಆಶ್ರಯಿಸಿ ಹುಟ್ಟೂರನ್ನು ಮರೆತೇಬಿಟ್ಟಿದ್ದೆ. ಲಲಿತೆ,ಅಂಶುವಿಗೆ ಗಾಳಿ ಹಾಕಿ,ಗಾಡಿ ಹೊರತೆಗೆದೆ,ಊರ ಪಯಣಕ್ಕೆ.
ಗಾಡಿ ನಿಧಾನಕ್ಕೆ ಮಣ್ಣಿನ ದಾರಿ ಕ್ರಮಿಸಿ ಮನೆ ಸೇರಿದಾಗ ರಾತ್ರಿ ಹತ್ತೂವರೆ. ಅಪ್ಪ “ಹೇಗಿದ್ದೀಯಾ?” ಅಂದಾಗ “ನೋಡಿ ಹೀಗಿದ್ದೀನಿ” ಎಂದು ನನ್ನ ಸಣಕಲು ದೇಹವನ್ನು ತೋರಿಸಿ ನಗುತ್ತಾ ಹೇಳಿದೆ. “ನಿಂಗೆ ಪೇಟೆ ಹಿಡಿಸುವುದಿಲ್ಲ ಕಣೋ, ನನ್ ಮಾತು ಎಲ್ಲಿ ಕೇಳ್ತೀಯಾ?”, ಅಮ್ಮ ಬೇಜಾರು ಮಾಡಿಕೊಂಡಳು. ಅಮ್ಮನ ಮಾತಿಗೆ ಅಂಶು ಆಕ್ಷೇಪಿಸುತ್ತಾ, “ಇಲ್ಲಜ್ಜಿ, ಪೇಟೆ ಮನೆ ತುಂಬಾ ಚೆನ್ನಾಗಿದೆ, ಹೊಸಾ ಅಕ್ವೇರಿಯಮ್ ಇದೆ ಗೊತ್ತಾ?” ಎಂದು ಮನೆಯೊಳಕ್ಕೆ ಓಡಿದ. ಅವನಿಗೆ ಕೊಡುವುದಕ್ಕೇನೂ ಆಟದ ಸಾಮಾನು ಇಲ್ಲವಲ್ಲ ಎಂದು ಅಪ್ಪ ಹೇಳುವಷ್ಟರಲ್ಲಿ “ಲಾಪ್ಟಾಪ್ ಇದ್ರೆ ಕೊಡಿ, ನಾನೇ ಗೇಮ್ಸ್ ಆಡ್ಕೋತೀನಿ” ಅಂದ ನಮ್ಮ ಕುಮಾರ ಕಂಠೀರವ. ಅಮ್ಮನಿಗೆ ನಗುವೂ ಸಿಟ್ಟೂ ಒಮ್ಮೆಲೇ ಬಂದು, “ಏನಿದು ಮಗುವಿಗೆ ಹೊರಗೆ ಹೋಗಿ ಆಡೋದು ಗೊತ್ತೇ ಇಲ್ಲವೇ?” ಎಂದಳು. ಹೊರಗೆ ಆಡಲು ಹೋಗಿ ಆದ ಅವಸ್ಥೆಯನ್ನು ಅವರಿಗೆ ಹೇಳಿದೆ. ಅವರಿಗೆ ನಂಬಲಸಾಧ್ಯವೆನಿಸುವಷ್ಟು ಆಶ್ಚರ್ಯವುಂಟಾಯಿತು. “ಪೇಟೆ ಮಂದಿ ಇಷ್ಟೇನೇ” ಎಂದು ಸಿಡುಕಿದಳಮ್ಮ.
ಮಾರನೇ ದಿನ ಬೆಳ್ಳಂಬೆಳಗ್ಗೆ ಮಗನನ್ನೆಬ್ಬಿಸಿ ಅವನಿಗೆ ಹಳ್ಳಿ ದರ್ಶನ ಮಾಡಿಸ ಹೊರಟೆ. ಮೊದಲಿಗೆ ಸಿಕ್ಕಿದ್ದು ಮನೆ ಹತ್ತಿರದ ಹಳ್ಳ. ಚಿಕ್ಕ ಚಿಕ್ಕ ಮೀನುಗಳು ಅದರಲ್ಲಿ ಈಜಾಡುತ್ತಿರುವುದನ್ನು ಅವನಿಗೆ ತೋರಿಸುತ್ತಾ ,”ನೋಡು ನ್ಯಾಚುರಲ್ ಅಕ್ವೇರಿಯಮ್” ಎಂದೆ. ಅವನೇನೂ ಅಷ್ಟು ಸುಪ್ರೀತನಾದಂತೆ ಕಾಣಲಿಲ್ಲ. “ಇಲ್ಲ, ನಮ್ಮ ಮನೆ ಮೀನುಗಳೇ ಇವಕ್ಕಿಂತ ಚೆನ್ನಾಗಿವೆ” ಅಂದ. “ಈ ಮೀನುಗಳು ಈ ಮೂಲೆಯಿಂದ ಆ ಮೂಲೆಗೆ ಹೋಗಬಹುದು, ಎಷ್ಟು ಸ್ವಾತಂತ್ರ್ಯ ಅವಕ್ಕೆ” ಎಂದು ವಿವರಿಸಿದ ಮೇಲೆ ಖುಷಿಯಾದಂತೆ ಕಂಡಿತು. ನನಗೂ ಮಗನಿಗೆ ಹಳ್ಳಿ ಇಷ್ಟ ಆದಲ್ಲಿ ಕರೆದುಕೊಂಡು ಬಂದಿದಕ್ಕೂ ಸಾರ್ಥಕ ಎಂದೆನಿಸತೊಡಗಿತು. ಮತ್ತಷ್ಟು ಹುಮ್ಮಸ್ಸಿನಿಂದ ತೆಂಗಿನ ತೋಟಕ್ಕೆ ಕರೆದೊಯ್ದು ಮಾದಪ್ಪನ ಕೈಲಿ ಎಳೆನೀರು ಕೊಯ್ಯಿಸಿ ಕುಡಿಸಿದೆ. ಸಾಲದ್ದಕ್ಕೆ ಹೇಗೆ ಪಟ್ಟಣದ ತಂಪು ಪಾನೀಯಗಳಿಂದ ಇದು ಒಳ್ಳೆಯದು ಎಂದು ಭಾಷಣ ಬಿಗಿಯಲೂ ಮರೆಯಲಿಲ್ಲ. ಮುಂದೆ ಬಾಲ್ಯದ ಫೇವರಿಟ್ ‘ಅಡ್ಡಾ’ ಆದ ಹುಣಸೆ ಮರ, ಕ್ರಿಕೆಟ್ ಆಟ ಆಡುತ್ತಿದ್ದ ಮೈದಾನ,ರಾಮಣ್ಣನ ಗೋಳಿಬಜೆ ಹೋಟ್ಲು ಇಲ್ಲೆಲ್ಲಾ ಸುತ್ತಾಡಿಸಿ ಸ್ಥಳ ಮಹಾತ್ಮೆ ವಿವರಿಸಿದೆ.ಇದೆಲ್ಲಾ ನೋಡಿ ಮಗನಿಗೆ ಹಳ್ಳಿಯ ಮೇಲೆ ಒಲವುಂಟಾಗಬಹುದೆಂಬ ಸಣ್ಣ ಆಸೆ ನನಗೆ. ಇಂದಿನ ಸರ್ಕೀಟ್ ಸಾಕೆನ್ನಿಸಿ ಮನೆಗೆ ಬಂದು ಮಗನಿಗೆ “ಹೇಗಿದೆ ಹಳ್ಳಿ,ಇನ್ನೂ ಒಂದು ವಾರ ಇರೋಣ್ವಾ?” ಎಂದು ಕೇಳಿದೆ. ಅದಕ್ಕವನು “ಚೆನ್ನಾಗೇನೋ ಇದೆ, ಆದ್ರೆ ಇವತ್ತೇ ವಾಪಸ್ಸು ಹೋಗೋಣ. ಇಲ್ಲಿ ವೈ-ಫೈಯೇ ಇಲ್ಲ” ಎಂದು ಸಪ್ಪೆ ಮುಖ ಮಾಡಿದಾಗ “ಕಾಲಾಯ ತಸ್ಮೈ ನಮಃ” ಎನ್ನುತ್ತಾ ಗೋಡೆಗೊರಗಿದೆ.
Facebook ಕಾಮೆಂಟ್ಸ್