X

ಆತ್ಮ ಸಂವೇದನಾ ಅಧ್ಯಾಯ 15

ಆತ್ಮ ಸಂವೇದನಾ ಅಧ್ಯಾಯ 14

ವರ್ಷಿಯು ಬಹಳ ವ್ಯಾಕುಲಗೊಂಡಿದ್ದ. ಬದುಕ ದಾರಿ ಬೇಸರವೆನಿಸುತ್ತಿತ್ತು ಒಮ್ಮೊಮ್ಮೆ. ಅವಿಶ್ರಾಂತ ಸಾವಿರ ವರ್ಷಗಳು. ಯಾರಿಗೆ ತಾನೇ ಹುಚ್ಚು? ಒಂದೇ ಕ್ಷಣಕ್ಕೆ ಎಲ್ಲವೂ ಬೇಸರವೆನ್ನಿಸುವಾಗ…

ನಿರಂತರತೆಯ ಅಧ್ಯಾಯ. ಅಂತ್ಯವೇ ಇಲ್ಲದ ಕ್ಷಣಗಳ ಸಂಕಲನ. ಜೀವನದಲ್ಲಿ ಅವನ ನಿರೀಕ್ಷೆಗೂ ಮೀರಿ ಖುಷಿಯ ಕ್ಷಣಗಳನ್ನು ಹೊಂದಿದ್ದ. ಜಗತ್ತೇ ಅವನೆದುರು ಬತ್ತಲಾದ ಹುಂಬ ಸುಖದ ಆಸೆ ಪೂರೈಸಿಕೊಂಡಿದ್ದ. ಆದರೂ ಸಂಬಂಧಗಳ ಬಂಧನಕ್ಕೆ ಸಿಲುಕಿಲ್ಲ ವರ್ಷಿ.

ಅದೆಷ್ಟೋ ಏಕತಾನತೆಯ ಗಳಿಗೆಗಳು ಅವನಿಗೆ ಅರಿವಿಲ್ಲದೆ ಮನಸ್ಸಿನಲ್ಲಿ ತಾನು ತನ್ನವರು ಎಂಬ ಭಾವಕ್ಕೆ ನೀರೆರೆಯುತ್ತಿತ್ತು. ಆತ್ಮ ಕಾಳಜಿ ತೋರಿದಾಗಲೆಲ್ಲ ಮನ ಮಗುವಾಗುತ್ತಿತ್ತು. ವರ್ಷಿಯಲ್ಲೂ ವಿಚಿತ್ರ ಅನುಭೂತಿಗಳು. ಮನದಲ್ಲೇ ಹಿಗ್ಗುತ್ತಿದ್ದ. ಆದರೂ ಆವಿಷ್ಕಾರದ ಜಿಜ್ಞಾಸೆ, ಸಂಶೋಧನೆಯ ಚಟ. ಹುಚ್ಚು ಯೋಚನೆಗಳಿಗೆ ಅಂಥವೇ ಪ್ರತಿಕ್ರಿಯೆಗಳು.

ಆತನಿಗೆ ಜೊತೆಯೇ ಬೇಕಿರಲಿಲ್ಲ. ಯೋಚನೆಗಳೇ ಸಂಗಾತಿಯಾಗಿದ್ದರೆ, ಸಂಶೋಧನೆಗಳ ಸಹವಾಸವೇ ಹಿತವೆನಿಸುತ್ತಿತ್ತು. ಎಲ್ಲದಕ್ಕೂ ಮಿಗಿಲಾಗಿ ವಿಶ್ವಾತ್ಮನೆಂಬ ಅದೃಶ್ಯರೂಪಿ ವರ್ಷಿಯ ಜೊತೆಗಿದ್ದ; ಬಹುಶಃ ಜೊತೆಗಿರುವನೆಂದು ನಂಬಿದ್ದ. ಬುದ್ಧಿ ವಿಶ್ವಾತ್ಮನ ಅಸಿತ್ವ ಹುಡುಕಿತು. ವಿಶ್ವಾತ್ಮ ಇರುವುದು ಸುಳ್ಳು..!? ಪೂರ್ತಿ ಏಕಾಂಗಿತನಕ್ಕೆ ಬೇಸತ್ತು ತನ್ನ ತಾನೇ ಸಂತೈಸಿಕೊಳ್ಳುತ್ತಿರುವ ವಿಧಾನವಿರಬಹುದೇ? ಅಸ್ತಿತ್ವವೇ ಇಲ್ಲದ ಸ್ಥಿತಿಯೊಂದು ಜೊತೆ ನಿಂತು ನೆರಳಾದ ಅಚ್ಚರಿಯ ಪರಿಸ್ಥಿತಿ.

ಆತ್ಮ ಹೇಳುತ್ತಿರುವುದು ನಿಜವಿರಬಹುದು. ನಾನು ಪೂರ್ತಿಯಾಗಿ ಒಂಟಿಯೇ ಇರಬಹುದು ಎಂದು ದಿಗಿಲುಗೊಳ್ಳುವ ಮುನ್ನವೇ “ಇಲ್ಲ ವರ್ಷಿ ನೀನು ಏಕಾಂಗಿಯಲ್ಲ. ಕನ್ನಡಿಯಲ್ಲಿ ನಿನ್ನ ಪ್ರತಿಬಿಂಬ ಎಷ್ಟು ಸತ್ಯವೋ ವಿಶ್ವಾತ್ಮನ ಜೊತೆಯೂ ಅಷ್ಟೆ ಸತ್ಯ. ನೀನು ನೋಡುವುದು ವಿಶ್ವಾತ್ಮನ ಕಂಗಳನ್ನು, ಮಾತನಾಡುವುದು ಸ್ವತಃ ನಿನ್ನ ತಂದೆ ವಿಶ್ವಾತ್ಮನ ಜೊತೆ. ವಿಶ್ವಾತ್ಮ ಬೇರೆಯೇ ಇರುವ, ನಿನ್ನ ಮನಸ್ಸು ನಾನು” ಎಂದು ವರ್ಷಿಯೊಳಗಿನ ವರ್ಷಿ ಚೀರಿಕೊಂಡ.

ವರ್ಷಿಯ ನಿರಾಳ.

ಆತ್ಮ ಎದುರು ನಿಂತು ನೇರ ಮಾತನಾಡಿ ಮುಖ ತಿರುಗಿಸಿ ಹೋದದ್ದು ವರ್ಷಿಗೆ ಸರಿ ಕಾಣಲಿಲ್ಲ. ಆತನನ್ನು ಮಗನೆಂದೇ ಭಾವಿಸಿದ್ದ, ಆದರೆ ಹೇಳಿಕೊಂಡಿರಲಿಲ್ಲ. ಅನೇಕ ಮನಸಿನ ಭಾವಗಳು ಕ್ರಿಯೆಗಳಾಗಿ ಬದಲಾಗದೆ ಉಳಿದುಬಿಡುತ್ತವೆ ನಿಗೂಢವಾಗಿ ಕೊನೆಯವರೆಗೆ.

ಎರಡನೇ ಸೂರ್ಯನ ಬಗ್ಗೆ ವರ್ಷಿ ತಲೆಕೆಡಿಸಿಕೊಂಡಿರಲಿಲ್ಲ, ತನ್ನ ಆವಿಷ್ಕಾರದ ಮೇಲೆ ಅಷ್ಟು ನಂಬಿಕೆ ಆತನಿಗೆ.

ಇಂದಲ್ಲದಿದ್ದರೆ ನಾಳೆ, ನಾಳೆ ಎಂಬುದು ನಿರಂತರ; ನಿನ್ನೆಯೆಂಬುದೂ ಅಷ್ಟೆ ಶಾಶ್ವತ. ಈ ದಿನವೆಂಬುದು ಸತ್ಯ, ಕ್ಷಣದಲ್ಲಿ ಅದೂ ಕಳೆದುಹೋಗುತ್ತದೆ.

ಕಾಯಬೇಕು, ಎರಡನೇ ಸೂರ್ಯನ ಬೆಳಕಿನ ಭವ್ಯತೆಯ ದರ್ಬಾರಿಗೆ ಕಾಯಬೇಕು. ಸ್ವಲ್ಪವಾದರೂ ಕಣ್ಮುಚ್ಚಿ ನಿದ್ರೆಗೆ ಶರಣಾಗುವುದು ಒಳಿತು ಎಂದುಕೊಂಡ. ಅನೇಕ ದಿನಗಳ ಅವಿಶ್ರಾಂತ ಕೆಲಸದ ಕ್ಷಣಗಳಲ್ಲಿ ದೇಹ ದಣಿದದ್ದು ಅರಿವಿರಲಿಲ್ಲ.

ನಿದ್ರೆ ಎಂಬುದು ಪ್ರಶಾಂತತೆ, ನಿದ್ರೆ ಆ ಹೊತ್ತಿನ ಸಾವು. ದಣಿದ ದೇಹ, ಮಬಾದ ಮನಸ್ಸು ಎಲ್ಲವೂ ಹೇಗೆ ಮತ್ತೆ ಜೀವ ಪಡೆದುಬಿಡುತ್ತವೆ ಹೊಸ ಉಸಿರುಪಡೆದ ಜೀವಿಯಂತೆ. ಇದೆಂಥ ಸೃಷ್ಟಿ ಎಂದುಕೊಂಡ. ನಮ್ಮ ಅಸ್ತಿತ್ವವೇ ಶೂನ್ಯವೆಂಬಂತೆ ನಿದ್ರೆಗೆ ಜಾರುವುದು, ಜಾರಿದ ನಿದ್ರೆಯಲ್ಲೂ ನಮ್ಮೊಳಗಿನ ಸ್ಥಿತಿ ಕ್ರಿಯಿಸುತ್ತಲೇ ಇರುವುದು. ರಕ್ತದ ಕಣಗಳು ಸದ್ದಿಲ್ಲದೇ ಹರಿಯುತ್ತಲೇ ಇರುತ್ತವೆ ಜಾರಿದ ನಿದ್ರೆಗಳಲ್ಲೂ.. ಏರುವ ಉತ್ಸಾಹಗಳಲ್ಲೂ..

ಮೆದುಳಿನ ಯಾವ ಭಾಗ ಸುಪ್ತವಾಗಿ ಕೆಲಸ ಮಾಡುತ್ತದೆ? ನಿದ್ರೆಯಲ್ಲೂ ಉಸಿರಾಟ, ಹೃದಯ ರಕ್ತದ ಕೇಂದ್ರಗಳಲ್ಲಿ ಸಂಚರಿಸಿ ಶಕ್ತಿ ನೀಡುವ ಶಕ್ತಿ ಯಾವುದು? ವರ್ಷಿಯ ಕಣ್ಣುಗಳು ಪ್ರಶ್ನೆಗಳ ಜೊತೆಯೇ ನಿದ್ದೆಯೆಡೆಗೆ ಸಾಗಿದವು. ಸ್ವಲ್ಪ ಸಮಯ ನಿದ್ರೆ ಹೋದರೆ ತೊಂದರೆಯಿಲ್ಲವೆಂಬಂತೆ ಕಣ್ಣುಗಳು ಪೂರ್ತಿಯಾಗಿ ಸೇರಿಕೊಂಡವು. ಮಿಲನದ ಸಂಭ್ರಮ ಅವುಗಳಿಗೆ. ಗಾಢ ನಿದ್ರೆ ವರ್ಶಿಯನ್ನು ಬರಸೆಳೆದು ತಬ್ಬಿಕೊಂಡಿತು. ಅದೆಷ್ಟೋ ದಿನ ವಾರ ತಿಂಗಳುಗಳ ನಂತರ ಮೈಮರೆತು ಕನವರಿಸಿದ ವರ್ಷಿ ನಿದ್ರೆಯ ಗುಂಗಿನಲ್ಲಿ.

ರಾತ್ರಿಯ ಮಧುರ ಚುಂಬಕತೆ ತನ್ನ ಅಂತ್ಯವಾಗುತ್ತದೆ, ಇವನಿಂದಲೇ ತನ್ನ ಅಂತ್ಯವಾಗುತ್ತದೆ ಎಂಬುದರ ಅರಿವಿಲ್ಲದೆ ವರ್ಷಿಯನ್ನು ತನ್ನ ಬೆಚ್ಚನೆಯ ಮಡಿಲಿಗೆ ಎಳೆದುಕೊಂಡಿತು.

ಎಷ್ಟು ನಿಷ್ಠುರವಾದರೂ ನಿದ್ರಾದೇವಿಯೊಂದೇ ಎಲ್ಲರನ್ನೂ ಮೊದಲ ಪ್ರೀತಿಯಂತೆ ಪ್ರೀತಿಸಿಕೊಳ್ಳುವುದು.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post