ಬೇಸಿಗೆ ರಜೆ ಕಳೆದು ಪುನಃ ಶಾಲೆ ಆರಂಭವಾದಾಗ ಮಗಳನ್ನು ಬಿಡಲು ಹೋಗಿದ್ದೆ, ರಜೆಯ ಮಜವನ್ನು ಅನುಭವಿಸಿ ತಾಯಿಯ ಬೆಚ್ಚನೆ ಮಡಿಲಿನಿಂದ ಶಾಲೆಗೇ ಹೋಗುವ ಸಂಕಟ ಅನುಭವಿಸುವ ಮಕ್ಕಳು ರಂಪಾಟ ಮಾಡುವುದು ಸಹಜ. ಕೈಯನ್ನು ಬಿಟ್ಟು ಒಳಗೆ ಹೋದ ಮಗಳ ಕಣ್ಣಲ್ಲೂ ಮೋಡ ಈಗಲೋ ಆಗಲೋ ಹನಿಯುವ ಸೂಚನೆ ಕೊಡುತ್ತಿತ್ತು. ಅವಳ ಸ್ಥಳದಲ್ಲಿ ಕೂರಿಸುವಾಗ ಆಂಟಿ ಅನ್ನುವ ಸ್ವರ ಕೇಳಿ ಪಕ್ಕಕ್ಕೆ ತಿರುಗಿದರೆ ಇಲ್ನೋಡಿ ಆಂಟಿ ಇವನು ಒಳ್ಳೆ ಹುಡುಗಿ ತರಹ ಆಗಿನಿಂದ ಆಳ್ತಾ ಇದಾನೆ ಹೇಳಿ ಅವನಿಗೆ ಎಂದು ನಗಲು ಶುರುಮಾಡಿದ.
ಸಂಜೆ ಸ್ಕೂಲ್ ನಿಂದ ಮಕ್ಕಳು ಆಟವಾಡುತ್ತಿದ್ದರೆ ಅಮ್ಮಂದಿರು ಅಲ್ಲೇ ಕುಳಿತು ಹರಟುವ ಪ್ರತೀತಿ ನಮ್ಮ ರಸ್ತೆಯಲ್ಲಿ. ಮಧ್ಯದಲ್ಲಿ ಬಿದ್ದು ಅಳುತ್ತಾ ಬಂದ ಮಗನನ್ನು ಯಾಕೋ ಒಳ್ಳೆ ಹುಡುಗಿ ತರಹ ಅಳ್ತಿಯಾ ಹೋಗುತ್ತೆ ಬಿಡು ಎಂದು ಬೈದು ಸಮಾಧಾನ ಮಾಡಿದರು ಅವರಮ್ಮ.
ಗೆಳತಿಯೊಡನೆ ಮಾತಾಡುತ್ತಿದೆ, ಸಹಜವಾಗಿ ಮಾತು ಮಕ್ಕಳ ಕಡೆಗೆ ತಿರುಗಿತು. ಅಯ್ಯೋ ಏನು ಮಾಡೋದೇ ನನ್ನ ಮಗ ಒಳ್ಳೆ ಹುಡುಗಿ ತರಹ ಆಗ್ತಾ ಇದಾನೆ ಶಾಲೆಯಲ್ಲಿ ಮಕ್ಕಳು ಯಾರಾದರೂ ಬೈದರೆ ಅಳ್ತಾ ಮನೆಗೆ ಬರ್ತಾನೆ, ಹೇಳಿ ಹೇಳಿ ಸಾಕಾಯ್ತು ಬೇಜಾರಾಗಿದೆ ಯಾವಾಗ ಸರಿ ಹೋಗ್ತಾನೋ ಎಂದು ಅಲವತ್ತುಕೊಂಡಳು.
ಕಣ್ಣೀರು, ಮೃದು ಸ್ವಭಾವ ಕೇವಲ ಹೆಣ್ಣುಮಕ್ಕಳ ಆಸ್ತಿಯನ್ನಾಗಿಸಿ ಭದ್ರಪಡಿಸಿದ್ದೇವೆ ನಾವು. ಗಂಡು ಮಕ್ಕಳಿಗೆ ಸಿಗದಂತೆ ಅಡಗಿಸಿಟ್ಟಿದ್ದಿವಿ ಕೂಡಾ. ಅಳು, ನಗು, ಕೋಪ, ಅಸೂಯೆ, ನೋವು ಇವೆಲ್ಲಾ ಸಹಜ ಭಾವಗಳು. ಯಾವುದೇ ಅಡೆತಡೆಯಿಲ್ಲದೆ ಸಹಜವಾಗಿ ಹರಿದಾಗಲಷ್ಟೇ ಬದುಕು ಹಗುರ, ಮನಸ್ಸು ನಿರಾಳ. ಅಡಗಿಸಿಕೊಂಡಷ್ಟೂ, ಅದುಮಿದಷ್ಟೂ ಉರಿಯುವ ಜ್ವಾಲಾಮುಖಿ. ಯಾವತ್ತೋ ಒಂದು ದಿನ ಸಿಡಿಯಲೇ ಬೇಕು. ಹೊರಬರುವ ಲಾವಾರಸದ ಪ್ರಭಾವ ಯಾವರೀತಿ ಹೇಳುವುದು ಬಹಳ ಕಷ್ಟ. ಆಳವಾಗಿ ಆಲೋಚಿಸಿದಾಗ ನಾವು ಗಂಡು ಮಕ್ಕಳನ್ನು ಗೊತ್ತೋ ಗೊತ್ತಿಲ್ಲದೆಯೋ ಜ್ವಾಲಾಮುಖಿಯನ್ನಾಗಿ ಪರಿವರ್ತಿಸುತ್ತಿದ್ದೇವೆ.
ಅತಿಯಾದ ಕಟ್ಟುಪಾಡು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಗಂಡು ಮಕ್ಕಳಿಗೂ ಇವೆ. ಹೆಣ್ಣು ಮಕ್ಕಳ ಕಟ್ಟುಪಾಡುಗಳು ಎಲ್ಲರ ಕಣ್ಣಿಗೂ ಕಾಣಿಸಿದರೆ ಗಂಡು ಮಕ್ಕಳಿಗೆ ಬೆಣ್ಣೆಯಿಂದ ಕೂದಲು ತೆಗೆದಂತೆ ನಯವಾಗಿರುತ್ತದೆ. ಕಾಣದಂತಿರುತ್ತದೆ. ಅವರ ಭಾವಾಭಿವ್ಯಕ್ತಿಯ ಮೇಲೆ ನಿಯಂತ್ರಣ ಹೇರಿ ಅವರನ್ನು ಕಲ್ಲಾಗಿಸುತ್ತೇವೆ, ಗಟ್ಟಿತನವೆಂಬ ಸುಂದರ ಹೆಸರು ಕೊಟ್ಟು. ಭಾವನೆಗಳ ಹರಿವಿಗೆ ಎಲ್ಲಾ ಅವಕಾಶವಿದ್ದರೂ ಅಬಲೆಎನ್ನುವ ಭಾವ ತುಂಬಿ ಹೆಣ್ಣನ್ನು ಮಾನಸಿಕವಾಗಿ ನಿರ್ಬಲರನ್ನಾಗಿಸುತ್ತೇವೆ. ಆಲೋಚನಾ ಶಕ್ತಿ ವಿಕಸಿಸುವ ಮೊದಲೇ ಮಕ್ಕಳಲ್ಲಿ ಈ ಭಾವವನ್ನು ಬಿತ್ತಿ ಕಾಲಕಾಲಕ್ಕೆ ನೀರೆರೆದು ಗೊಬ್ಬರ ಹಾಕಿ ಪೋಷಿಸಿ ಹೆಮ್ಮರವಾಗುವಂತೆ ನೋಡಿಕೊಳ್ಳುತ್ತೇವೆ .
ಮಕ್ಕಳನ್ನು ಹೆಣ್ಣು, ಗಂಡು ಎಂದು ನೋಡದೆ ಕೇವಲ ಮಕ್ಕಳನ್ನಾಗಿ ಸಹಜವಾಗಿ ಬೆಳೆಸಿದರೆ ಸಮಾನವಾಗಿ ಕಂಡರೆ ಮಾತ್ರ ಸುಂದರ ವ್ಯಕ್ತಿತ್ವ ಅರಳಲು ಸಾಧ್ಯವಾಗಬಹುದು. ಹಾಗೆ ಬೆಳೆದಾಗ ಗಂಡಿನ ಕ್ರೌರ್ಯ, ಹೆಣ್ಣಿನ ಅಬಲತೆ ಕಡಿಮೆಯಾಗಿ ಪರಸ್ಪರ ಪ್ರೀತಿಯಿಂದ ಸಹಜ ಬದುಕು ಬದುಕಲು ಸಾಧ್ಯವಾಗಬಹುದು. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ ಎನ್ನುವ ಭಾವ ಇದ್ದಾಗ ಬದುಕಿನ ಬಂಡಿ ಸರಾಗವಾಗಿ ನಡೆಯಲು ಸಾದ್ಯ.
ಇಲ್ಲವಾದಲ್ಲಿ ನಮ್ಮದೇ ತಪ್ಪಿಗೆ ಬಲಿಯಾಗುವುದು ಒಂದಿಡಿ ಸಮಾಜ. ಅಸಮಾನತೆ ಇರುವವರೆಗೂ ಸಮಾನತೆಗೆ ಹೋರಾಡುವ ಕಿಚ್ಚು ಉರಿಯುತ್ತಲೇ ಇರುತ್ತದೆ. ಪರಸ್ಪರ ದೋಷಾರೋಪಣೆ ಸಾಗುತ್ತಲೇ ಇರುತ್ತದೆ. ಈ ಕಿಚ್ಚಿನಲ್ಲಿ ದೀಪ ಉರಿಯುವ ಬದಲು ಮಾಡು ಹೊತ್ತಿ ಉರಿಯುತ್ತದೆ. ಬೆಂಕಿ ಒಂದೇ ಪರಿಣಾಮ ಮಾತ್ರ ಹಲವು ಬಗೆ. ಬೆಳಸಬೇಕಾಗಿರುವುದು ಹೊದೋಟವೋ, ಜ್ವಾಲಾಮುಖಿಯೋ ನಿರ್ಧರಿಸುವ ಜವಾಬ್ದಾರಿ ಮಾತ್ರ ನಮ್ಮ ಮೇಲಿದೆ.
Shobha Rao
shobhaskrao@gmail.com
Facebook ಕಾಮೆಂಟ್ಸ್