ಮೊದಲ ಭಾಗವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಭಾಗ-೧
ಮುಂದುವರಿದ ಭಾಗ…
ಮರುದಿನ ಬಸ್ಸ್ಟಾಂಡ್ ನಲ್ಲಿ ಆಪರೇಶನ್ನಿಗೆ ಎಷ್ಟು ದಿನ ಐತೆ ಎಂದು ಕೇಳಿದ ಪರಿಚಯದ ಪ್ರಯಾಣಿಕನಿಗೆ ನಾಡಿದ್ದು ಹೋಗಿ ಅಡ್ಮಿಟ್ ಮಾಡ್ಬೇಕು ಎಂದು ಸಾವಕಾಶವಾಗಿ ಮುರುಳಿ ಉತ್ತರಿಸಿದ. ನಾನು ಊರ್ಗೋಗಿ ಅಪ್ಪ-ಅವ್ವುಗ ಹೇಳ್ತೀನಿ, ನೋಡಾನಾ ಅವರೇನಾರ ಸಹಾಯ ಮಾಡ್ತಾರೇನೋ ಅಂತ. ಎಂದ ಪ್ರಯಾಣಿಕನ ಮಾತು ಇನ್ನು ಮುಂದುವರಿತಿದ್ದಂಗೆ ಬಸ್ ಚಾಲೂ ಆಯ್ತು. ರಾತ್ರಿ ರಾಮ ಮಂದಿರದ ಪ್ರಸಾದ ತೊಗೊಂಡು ಮಗುವಿನ ಹಣೆಗೆ ಕುಂಕುಮ ಇಟ್ಟು ಗುಡಿಸಲ ಕಡೆಗೆ ನಡೆದರು. ದಾರಿಯಲ್ಲಿ ನೆಲದಿಂದ ತಲೆಎತ್ತಿ ಅಣಗಿಸಿ ಕೊಂಕು ನಗುತ್ತಾ ನಿಂತಿದ್ದ ಕಲ್ಲಿಗೆ ಎಡವಿದ ಗಂಗಮ್ಮನ ಕಾಲಿನ ಹೆಬ್ಬೆರಳು ಉಗುರು ಮುರಿದು ರಕ್ತ ವಸರಿತ್ತು. ಅಮ್ಮಾ ಎಂದುಗೊಣಗಿ ಹಾಗೇ ನಡೆದ ಗಂಗಮ್ಮಳ ನೋವು ಮಗುವಿಗೆ ತಾಕಿತೆಂಬಂತೆ ಮಗು ಅಳಲಾರಂಭಿಸಿತು. ಮುರಳಿ ಎತ್ತಿ ಮುದ್ದಾಡುತ್ತಾ ಅಲ್ಲಿನೋಡು ಚಂದಪ್ಪ, ಚಂದಪ್ಪ ನೋಡು ಚಂದಪ್ಪ ಎಂದು ಸಮಾಧಾನ ಮಾಡುತ್ತಾ ಮನೆಬಂತು, ಮನೆಬಂತು ಎನ್ನುತ್ತಾ ಮನೆಗೆ ಸಮೀಪವಾದರು. ಗುಡಿಸಲು ಹತ್ತಿರವಾಗುತ್ತಿದ್ದಂತೆ ಗಂಗಮ್ಮಳಿಗೆ ಏನೋ ಮರೆತಂತೆ ಅನ್ನಿಸಿತು. “ಮುರಳಿ ಏನೋ ಮರ್ತಿದೀವಿ ಅನ್ಸತದೆ” ಎಂದ ಗಂಗೆಗೆ ಉತ್ತರವಾಗಿ “ಮನೆ ಹತ್ರ ಬಂತು ಏನು ಮರ್ತಿಲ್ಲಾ ಇವನ್ನ ಎತ್ಗೋ ಬಾಗ್ಲು ತೆಗೀತೀನಿ” ಎಂದು ನೆರಿಕೆ ಬಾಗಿಲು ತೆಗಿಯಲು ಎತ್ತಿಗೊಂಡಿದ್ದ ಮಗುವನ್ನು ಗಂಗೆಗೆ ಕೊಡುತ್ತಿದ್ದ೦ತೆ ಮಗುವಿನ ಗೋಣು ಬಿದ್ದುಹೋಗಿತ್ತು. ಮೂಗಿನಿಂದ ತುಸು ರಕ್ತ ವಸರಿ ಹೆಪ್ಪುಗಟ್ಟಿತ್ತು. ನೋಡುನೋಡುತ್ತಿದ್ದಂತೆ ಇಬ್ಬರೂ ನೆಲಕ್ಕೆ ಕುಸಿದರು ಮಗುವನ್ನು ಗುಡಿಸಲ ಮುಂದೆ ಮಲಗಿಸಿ, ಪಾಪು, ಪಾಪೂ ಎಂದು ಕರೆಯಲಾರಂಭಿಸಿದರು. ಕಣ್ಣಾಮುಚ್ಚಾಲೆಯಲ್ಲಿ ಬಾರದ ಊರಿಗೆ ಹೋಗಿ ಅಡಗಿದ್ದ ಮಗುವಿಗೆ ತಂದೆ-ತಾಯಿಯ ಕೂಗು ಕೇಳಿಸಲಿಲ್ಲ, ಮಗು ಅಳಲಿಲ್ಲ, ನಗಲಿಲ್ಲ. ಗಂಗಮ್ಮ ಕಣ್ಣುಗಳಿಂದ ಬತ್ತಿದ ನದಿಯೊಂದು ಪ್ರಯಾಸದಿಂದ ಹರಿದು ಗದ್ದದ ತುದಿಯಿಂದ ತೊಟ್ಟಿಕ್ಕುತ್ತಿತ್ತು. ಜಗತ್ತೇ ಈ ರಾತ್ರಿಯ ಕತ್ತಲಲ್ಲಿ ಮೂಕವಾಗಿತ್ತು. ಬೀಸುವ ಗಾಳಿ, ಗಾಳಿಗೆ ಸದ್ದು ಮಾಡುತ್ತಿದ್ದ ತಿಪ್ಪೆಯ ಕಸ, ಎಲ್ಲವೂ ಮೌನ ತಾಳಿದ್ದವು. ಆಕಾಶದ ನಕ್ಷತ್ರಗಳು, ಬೀಸುವ ಗಾಳಿಗೆ ಕಸದತಿಪ್ಪೆಯಲ್ಲಿ ಸಿಕ್ಕಿಕೊಂಡು ಬೆಳಕಿನ ಎಂಜಲನ್ನು ಉಗುಳುವ ಪ್ಲಾಸ್ಟಿಕ್ ಹಾಳೆಗಳ ತುಣುಕುಗಳಂತೆ ಕಂಡವು. ಅಲ್ಲಿ ಎಲ್ಲವೂ ಮುಗಿದು ಹೋಗಿದ್ದವು, ಎಲ್ಲವೂ ನಿಂತುಹೋಗಿದ್ದವು, ಎಲ್ಲವೂ ಮೌನತಾಳಿ ಕಲ್ಲುಗಳಂತೆ ಕೂತಿದ್ದವು.
ಇವರ ಅಳುವನ್ನು ಕೇಳಿ ತಿಪ್ಪೆಯ ಆಜೂ ಬಾಜೂ ಇದ್ದ ಹಂದಿ ಸಾಕುವವರು ಬಂದು ಕಷ್ಟ ಕೇಳದೇ ಅವರ ಅಳುವಿನಿಂದಲೇ ಅರಿತು ನಿಂತು ಶೋಕ ವ್ಯಕ್ತಪಡಿಸಿದರು. ಬೆಳಿಗ್ಗೆ ವರಿಗೆ ಕಾಯಾಕಾಗಲ್ಲ, ವಾಸ್ನೆ ಜಾಸ್ತಿ ಆಗ್ತತೆ ಎಂದು ಮುರಳಿ ಗಂಗೆಯರನ್ನು ಒಪ್ಪಿಸಿ ಸ್ಮಶಾನಕ್ಕೆ ಹೋಗಲು ಸಿದ್ದಪಡಿಸಿದರು. ಮುರಳಿ ಮಗುವಿನ ದೇಹವನ್ನು ಹೂವಿನಂತೆ ಸೂಕ್ಷ್ಮವಾಗಿ ಎತ್ತಿಕೊಂಡು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿ ಗುಡಿಸಲಿಗೆ ಹಿಂತಿರುಗಿದರು. ಗುಡಿಸಲ ನೆರಿಕೆ ಬಾಗಿಲು ಮುಚ್ಚದೇ ಸಗಣಿ ಸಾರಿದ ಮಣ್ಣಿನ ಗೋಡೆಗೆ ಆನಿಕೊಂಡ ಮುರಳಿ ಎದೆಗೆ ಗಂಗೆಯು ತಲೆಕೊಟ್ಟು ಕೂತು ಅತ್ತಳು. ಬಿಸಿ ಕಣ್ಣೀರು ಮುರಳಿಯ ಹೃದಯವನ್ನು ಸುಡುತ್ತಿತ್ತು. ಎದ್ದು ಮೂಲೆಯಲ್ಲಿನ ವಿಶದ ಬಾಟಲಿಯನ್ನೂ ತೆಗೆದು ಕುಡಿಯಲೂ ಆಗದಂತೆ ವಿಧಿಯಾಟ ವಿಷವನ್ನು ಮೈಮನಸ್ಸಿನಲ್ಲಿ ಬೆರೆಸಿ ನೊರೆಯುಗುಳುತ್ತಾ ಗಹಗಹಿಸಿ ನಗುತ್ತಿತ್ತು. ನೊಂದ ಮನಗಳೆರಡಕ್ಕೂ ಯಾವುದೋ ಮಾಯೆ ನಿದ್ರೆಯನ್ನೂ ಕರುಣಿಸಿತು. ಸುಮಾರು ಮೂರುತಾಸುಗಳ ನಿದ್ದೆ ಇರಬಹುದು, ಸೂರ್ಯ ದೇವನು ತನ್ನ ಪಯಣಕ್ಕೆ ರಥವನ್ನು ಸಿದ್ದಗೊಳಿಸುತ್ತಿದ್ದ ಸಮಯವಿರಬಹುದು. ಯಾವುದೋ ಮಗುವಿನ ಅಳುವ ಕೂಗು ಅವರಿಗೆ ಸುಪ್ರಭಾತ ಹಾಡಿತ್ತು. ಆ ಮಗುವಿನ ಅಳು ಕಿವಿಗೆ ಇಂಪು ಮತ್ತು ಉತ್ಸಾಹವನ್ನು ತಂದುಕೊಟ್ಟಿತ್ತು. ಇಬ್ಬರೂ ಗುಡಿಸಲಿಂದ ಹೊರಬಂದರು. ಭ್ರಮೆ ಎಂದು ತಿಳಿದು ಮತ್ತೆ ಗುಡಿಸಲೊಳಗೆ ಹೋಗಿ ವಿಷದ ಬಾಟಲಿಯ ಮುಚ್ಚುಳ ತೆಗೆಯುತ್ತಿದ್ದಂತೆ ಮಗು ಅಳುವ ಶಬ್ದ ಸ್ಪಷ್ಟವಾಗಿ ಕೇಳಿಸಿತು.
ಬಾಟಲಿಯನ್ನು ಕೈಲಿ ಹಿಡಿದು ಹೊರಬಂದ ಮುರಳಿಗೆ ಮತ್ತೆ ಮತ್ತೆ ಆ ಅಳು ಕೇಳಿಸಿತು. ಇಬ್ಬರಿಗೂ ಕೇಳಿಸಿತು. ಇಬ್ಬರೂ ಅಳುವನ್ನು ಹುಡುಕಿಕೊಂಡು ಹೊರಟರು. ತಿಪ್ಪೆಯ ಮೂಲೆ ಮೂಲೆ ಹುಡುಕಿದರು. ಒಮ್ಮೆ ಹತ್ತಿರವಾಗಿ ಒಮ್ಮೆ ದೂರವಾಗಿ ಮಾಯಾಯುದ್ಧದಂತೆ ಆ ಮಗುವಿನ ಅಳು ಇಬ್ಬರನ್ನೂ ಸತಾಯಿಸಿತು. ಕೊನೆಗೆ ತಿಪ್ಪೆಯ ಮೂಲೆಯೊಂದರಲ್ಲಿ ಯಾರೋ ಹೆತ್ತು ಸಮಾಜದಿಂದ ಮರೆಮಾಚಲು ತಿಪ್ಪೆಗೆ ಎಸೆದ ಕುರೂಪಿ ಮಗು ತನ್ನ ಮುಷ್ಟಿಯನ್ನು ಬಿಗಿ ಹಿಡಿದು ಕಾಲುಗಗಳನ್ನು ಬಡಿಯುತ್ತಾ ಅಳುತ್ತಿತ್ತು. ಮಗುವನ್ನು ಕಂಡೊಡನೇ ಹೊಸ ಚೈತನ್ಯ ಇಬ್ಬರ ಮುಖದಲ್ಲಿ ಉಕ್ಕಿತು. ಎಳೆ ಬಿಸಿಲಿಗೆ ಊಟ ನಿದ್ರೆಗಳು ಸರಿಯಾಗಿ ಅನುಭವಿಸದ ಮುರಳಿಯ ಕಣ್ಣುಗಳ ವರೆಗೆ ಸಂತೋಷ ಹರಿಯದೇತುಟಿಗೆ ಬಂದು ನಿಂತಿತ್ತು. ಇಬ್ಬರೂ ಮಗುವನ್ನು ಎತ್ತಿಕೊಂಡು ಅಪ್ಪಿ ಮುದ್ದಿಸಿದರು. ನಿತ್ರಾಣ ದೇಹಗಳಲ್ಲಿ ಶಕ್ತಿಯ ಚಿಲುಮೆಯೊಂದು ಸಂಚರಿಸಿದಂತೆ ಇಬ್ಬರೂ ಗುಡಿಸಲಿಗೆ ಬಂದು ಮಗುವಿಗೆ ಸ್ನಾನಾದಿಗಳನ್ನು ಮಾಡಿಸಿ ಕಾಡಿಗೆಯಿಂದ ದೃಷ್ಟಿಬೊಟ್ಟಿಟ್ಟು ಮುಗುಳ್ನಕ್ಕರು. ಮಗುವನ್ನೆತ್ತಿಕೊಂಡು ಹೊರಬಂದ ಮುರಳಿ ಒಮ್ಮೆ ಮೇಲೆ ತೂರಿ ಹಿಡಿದು ಮುದ್ದಿಸಿದ. ಮಗು ನಗುತ್ತಿದ್ದಂತೆ ಗಂಗೆಯೂ ನಕ್ಕಳು. ಮಗುವನ್ನು ಮತ್ತೊಮ್ಮೆ ಆಕಾಶಕ್ಕೆ ತೂರಿದ ಸೂರ್ಯನ ಬಿಸಿಲಿಗೆ ಅಡ್ಡವಾಗಿ ಮಗು ತನ್ನ ನೆರಳನ್ನು ಮುರಳಿಯ ಮುಖಕ್ಕೆ ಚೆಲ್ಲಿ ಮುರಳಿ ಕಣ್ಣರಳಿಸಿ ನಗುವಂತೆ ಮಾಡಿತು. ದಂಪತಿಗಳ ಜೀವನದಲ್ಲಿ ಮತ್ತೊಮ್ಮೆ ಸಂತೊಷ ಉಕ್ಕಿತು. ದಿನವೆಲ್ಲಾ ಆನಂದದಿಂದ ಕಳೆದರು. ರಾತ್ರಿ ಹೊಟ್ಟೆತುಂಬಾ ಹಾಲುಕುಡಿದು ನಗುತ್ತಾ ಆಟವಾಡುತ್ತಿದ್ದ ಮಗುವನ್ನು ನೋಡಿ ಗಂಗೆಯ ಮನ ಸಂತೋಷದಿಂದ ನೆನೆಯಿತು. ಆಕಾಶ ನೋಡುತ್ತಿದ್ದ ಮುರಳಿ “ಗಂಗಾ, ಆಕಾಶದಾಗೆ ಅಷ್ಟೊಂದ್ ಚುಕ್ಕಿ ಅದಾವಲಾ, ಒಂದೋದ್ರೆ ಏನೂ ಕಡಿಮೆ ಅನ್ಸಲ್ಲಾ” ಅಂದ.
ಮುಗಿಯಿತು.
Facebook ಕಾಮೆಂಟ್ಸ್