X
    Categories: ಅಂಕಣ

ಅಮ್ಮಂದಿರೇ ದಯವಿಟ್ಟು ಕನ್ನಡ ಕಲಿಯಿರಿ..!

ಘ:1. ಎರಡು ತಿಂಗಳ ಹಿಂದಿನ ಘಟನೆ. ಬೆಂಗಳೂರಿನ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್  ಶಾಖೆಯೊಂದರಲ್ಲಿ ಯಾರು ಏನೇ ಪ್ರಶ್ನಿಸಿದರೂ ಇಂಗ್ಲೀಷು (ಹೆಚ್ಚಿನ ಉದ್ಯೋಗಿಗಳು ಮಹಿಳೆಯರು) ಮೊಬೈಲ್ ಉಪಯೋಗಿಸುವಂತಿಲ್ಲ ಎಂದು ಫಲಕ ತೂಗಿಸಿ ಕೌಂಟರ್ಗಳ ಹಿಂದೆ ಕಿವಿಗಿಟ್ಟುಕೊಂಡು ಎಲ್ಲರೂ ಅವರ ಪಾಡಿಗೆ ಪಿಸಿಪಿಸಿ ಅಂತಿದಾರೆ. ಪಾಪದ ಕೆಲವೊಬ್ಬರು ಅರ್ಥೈಸಿಕೊಳ್ಳದೆ ಅರ್ಜಿಗಳಲ್ಲಿ ತಪ್ಪಾಗಿ ಬರೆದರೆ ಅದಕ್ಕೂ ಆಂಗ್ಲದಲ್ಲೇ ಗದರುತ್ತಿದ್ದಾರೆ. ಆಗಲೇ ಅರ್ಧ ತಾಳ್ಮೆ ಕಳೆದುಕೊಂಡಿದ್ದ ನಾನು “ಯಾಕಮ್ಮ ಕನ್ನಡ ಬರಲ್ವಾ…” ಇತ್ಯಾದಿ ಧ್ವನಿ ಏರಿಸಿದೆ. ಕೆಲವು ಸಹೋದ್ಯೋಗಿಗಳು ಎದ್ದು ಬಂದರು. ಆದರೆ ಐದು ನಿಮಿಷದಲ್ಲಿ ಪರಿಸ್ಥಿತಿ ಹತೋಟಿಗೆ ಬಂತು. ಮೇಲಾಧಿಕಾರಿಗೆ ದೂರಿನ ಭಯಕ್ಕೆ ಇವತ್ತು ಗ್ರಾಹಕರ ಪರಿಸ್ಥಿತಿ ಸುಧಾರಿಸಿದೆ.

ಘ: 2. ಕಳೆದ ವರ್ಷ ನಾನು ಆಲೆಮನೆ ಮುಗಿಸಿ ಬೆಂಗಳೂರಿಗೆ ಬಂದಿದ್ದಾಗ.. ಸ್ನೇಹಿತೆ ಐ.ಟಿ ಉದ್ಯೋಗಿ.. ” ಓ..ದ್ಯಾಟ್ ಸ್ವೀಟ್ ಡಿಶ್.. ಬ್ಲಾಕ್.. ಬ್ಲಾಕ್..ಲಿಕ್ವೀಡ್ ಜ್ಯಾಗ್ರಿ” ಇತ್ಯಾದಿ ಉಲಿಯುತ್ತಿದ್ದರೆ ಆಕೆ ಇಂಗ್ಲೀಷು ಮರೆತು ಹೋಗುವಂತೆ ಗದರಿಸಿದೆ. “ಓಹೋ..ಕಾಕಂಬಿ ಬೆಲ್ಲಾನಾ..?” ಎಂದು ರಾಗ ಎಳೆದಳು. ಕಾರಣ ಅವಳೇನು ಇಂಗ್ಲೀಷರಿಗೆ ಹುಟ್ಟಿ ಬೆಳೆದವಳಲ್ಲ. ಇದೇ ಉ.ಕ ಜಿಲ್ಲೆಯ ಪಕ್ಕದ ಸಾಗರದ ಕಡೆಯ ಸಾಲೆಮನೆಯಿಂದ ಬಂದವಳು. ಆದರೆ ಅದ್ಯಾವ ಪರಿಯಲ್ಲಿ ಎರಡು ದಶಕ ಜೀವನಾನುಭ? ನಾಡಿಯಾಗಿದ್ದ ಊರು-ಮನೆಯನ್ನು ಮರೆತಂತೆ ಆಡುತ್ತಾಳೆಂದರೆ ಎದುರಿನ ಪರ ಭಾಷಿಕರೂ ಇವರನ್ನು ಕನ್ನಡೇತರರೆಂದೇ ಗುರುತಿಸುವಂತಾಗಿ ಬಿಡುತ್ತದೆ. ಇನ್ನು ಅವಳೊಂದಿಗೆ ಬೆಳೆಯುವ ಮಗು ಅದ್ಯಾವ ಭಾಷೆ ಕಲಿಯುತ್ತೋ..?

ಘ.3. ನನಗೆ ತೀರ ಪರಿಚಯವಿದ್ದ ಕುಟುಂಬವೊಂದರ ಮಗು ಮನೆಯಲ್ಲಿ ಮಾತನ್ನೇ ಆಡುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಸೂರು ಕಿತ್ತು ಹೋಗುವಂತೆ ಅದು ನನ್ನ ಮಗಳೊಂದಿಗೆ ಕಿರುಚಿಕೊಂಡು ಆಡುತ್ತಿದ್ದರೆ ಇತರರು ಹುಬ್ಬೇರಿಸುತ್ತಿದ್ದರು. ಕಾರಣ ಆ ಮಗುವಿಗೆ ಅದ್ಯಾವ ಪರಿಯಲ್ಲಿ ಇಂಗ್ಲೀಷ್ ಮಾತಾಡುವಂತೆ ಪೋಷಕರು ಒತ್ತಡ ತಂದಿದ್ದರೆಂದರೆ ನಾಲ್ಕೈದು ವರ್ಷಕ್ಕೆ ಅದು ಮೌನವನ್ನು ರೂಢಿಸಿಕೊಂಡು ಬಿಟ್ಟಿತ್ತು. ತಪ್ಪಿ ಅದು ಬಾಯ್ಬಿಟ್ಟು ಕನ್ನಡ ಆಡಿಬಿಟ್ಟರೆ ಅವರಮ್ಮ ಅದ್ಯಾವ ಪರಿಯಲ್ಲಿ ಕಣ್ಣಲ್ಲೇ ಗದರಿಸುತ್ತಿದ್ದರೆಂದರೆ ಮಗು ನಿಂತಲ್ಲೆ ಮೂಕವಾಗಿ ಬಿಡುತ್ತಿತ್ತು. ಅದಕ್ಕೆ ನಮ್ಮ ಮನೆಗೆ ಬಂದಾಗ ಸೆಕೆಂಡು ಕೂಡಾ ಸುಮ್ಮನಿರದೆ ಕಿರುಚುತ್ತಲೇ ಇರುತ್ತಿತ್ತು.

ಇವೆಲ್ಲಾ ತುಂಬ ಚಿಕ್ಕ ಚಿಕ್ಕ ಘಟನೆಗಳು. ಆದರೆ ಮೂಲ ಹಂತದಲ್ಲಿ ಮತ್ತು ಕನ್ನಡವನ್ನು ಹುಲುಸಾಗಿ ಬೆಳೆಸಬಲ್ಲ  ಅವಕಾಶಗಳಲ್ಲಿ ನಾವು ಸ್ವತ: ಕನ್ನಡಕ್ಕೆ ನ್ಯಾಯ ಒದಗಿಸದಿದ್ದರೆ ಅದಿನ್ನು ಹೇಗೆ ಬೆಳೆದೀತು..? ಅದರಲ್ಲೂ ಈಗಿನ ಜನರೇಶನ್ ಹುಡುಗಿಯರು ಅಪ್ಪಟ ಕನ್ನಡದಲ್ಲೇ ಬೆಳೆದವರೂ ಐ.ಟಿ ಮತ್ತು ಇತರ ಉದ್ಯಮದಲ್ಲಿ ಅದ್ಯಾವ ಪರಿಯಲ್ಲಿ ಇಂಗ್ಲೀಷನ್ನು ಅಮರಿಕೊಳ್ಳುತ್ತಾರೆಂದರೆ ಬೆಂಗಳೂರಿಗೆ ಬಂದ ಇತರ ಭಾಷಿಕರು ಅವರೊಂದಿಗೆ ಸೇರಿ ಅವರ ಭಾಷೆಯನ್ನು ಮರೆತು ಇಂಗ್ಲೀಷ್ ಕಲಿತುಬಿಡುತ್ತಾರೆ. (ಹೀಗೆ ಮಹಿಳೆಯರನ್ನು ನಾನು ನೇರವಾಗಿ ಪ್ರಶ್ನಿಸುತ್ತಿರುವುದು ಕೆಲವರ ಆಕ್ಷೇಪಕ್ಕೆ ಕಾರಣವಾಗಬಹುದು. ಆದರೆ ಮೌನವಾಗಿ ಅವರು ತಮ್ಮಲ್ಲೇ ಮನನ ಮಾಡಿಕೊಂಡು ವಿವರಿಸಿಲಿ. ನಾನು ಈ ವಿಶ್ಲೇಷಣೆಯನ್ನು ಹಿಂಪಡೆಯುತ್ತೇನೆ) ಆದರೆ ಹೆಚ್ಚಿನಂಶ ಕನ್ನಡದ ಮಹಿಳೆಯರು ಇತರ ಭಾಷೆಗೆ ಒಲಿಯದಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ. ಹೇಗಂತಿರಾ..?

ತೀರ ಕಾಯಿ ಪಲ್ಲೆ ಮಾರುವವನ ಹತ್ತಿರ, (ಮಾಲ್ಗಳಿರಬಹುದು ಚಿಕ್ಕ ಅಂಗಡಿಗಳೂ ಇರಬಹುದು) ಇಸ್ತ್ರೀ ಮಾಡುವವರು, ರಸ್ತೆ ಬದಿ ಮಾರುವವರು, ಕಿರಾಣಿ ಅಂಗಡಿ (ಇವ್ರೆಲ್ಲಾ ಹೆಚ್ಚಿನಂಶ ಮಹಿಳೆಯರಿಗೆ ” ಹೌ ಮಚ್ ಮ್ಯಾಡಮ್..” ಎಂದೆ ಶುರುಮಾಡಿದರೆ, ಪುರುಷರಿಗೆ “..ಎಷ್ಟು ಕೊಡ್ಲಿ ಸಾರ್..?” ಎಂದೇಕೆ ಆಗುತ್ತದೆ.) ಆಟೊ ರಿಕ್ಷಾ, ಟ್ಯಾಕ್ಸಿಗಳವರು, (” ಎಸ್ ಮ್ಯಾಮ್.. ” ಎಂದಾದರೆ, ನಮಗೆ ” ಬನ್ನಿ ಸಾರ್ ಎಲ್ಗೆ..? ಬನ್ನಿ ಗುರು ಯಾವ ಕಡೆ..” ಎಂದಿರುತ್ತದೆ) ಪಾರ್ಕಿ೦ಗ್ ( ದ್ಯಾಟ್ ಸೈಡ್.. ಎನ್ನುತ್ತಿದ್ದರೆ ನಮ್ಮ ಗಾಡಿಗೆ “..ಒಯ್ ಆ ಕಡಿಗೆ..” ) ಹೋಟೆಲ್.. ( ..ಆರ್ಡರ್ ಪ್ಲೀಸ್.. ಆದ್ರೆ.. ಪುರುಷರಿಗೆ “..ಎನ್ ಕೊಡ್ಲಿ ಸಾರ್..”) ಹೀಗೆ ಬರೆಯುತ್ತಾ ಹೋದರೆ ಮುಗಿಯಲಾರದು.

ಇಲ್ಲಿ ಇನ್ನೊಂದು ತಾಂತ್ರಿಕ ಅಂಶವೂ ಇದೆ. (ಇದನ್ನು ಹೇಗಾದರೂ ವ್ಯಾಖ್ಯಾನಿಸಿ) ಮಹಿಳೆಯ ಅಥವಾ ಹುಡುಗಿಯರು ಇಂಗ್ಲೀಷನ್ನು ಉಪಯೋಗಿಸಲಾರಂಭಿಸಿದೊಡನೆ ಅದೆಂಥಾ ಪಡ್ಡೆಯಾದರೂ ಸರಿ .. ಹ್ಹೀ.. ಹ್ಹೀ.. ಎಂದು ಬಾರದ ಭಾಷೆಯೊಡನೆ ಸಾಂಗತ್ಯಕ್ಕೆ ಬೀಳುತ್ತಾನೆ. ಯಾವುದೇ ಸೇವೆಗಳಿರಲಿ, ಅಂಗಡಿ, ಬಸ್ಸು, ಹೋಟೇಲು, ರೈಲು, ತರಕಾರಿ ಅಂಗಡಿ, ಟೆಲಿಫೋನ್ ಬೂತ್, ಸ್ಕೂಲು, ಮಾಲ್, ಫೋರ್ಂ.., ಪಿ.ವಿ.ಆರ್.. ಹೀಗೆ ಎಲ್ಲಿಯೇ ಗಮನಿಸಿ ಅವಳು ಇಂಗ್ಲೀಷಿನಲ್ಲೇ ಮಾತು ಆರಂಭಿಸಿದರೆ ಅಷ್ಟೆ. ಎದುರಿಗಿನ ಪುರುಷ ಪ್ರಾಣಿ ಬಾರದ ಭಾಷೆಯಾದರೂ, ಯಾವ ಹಂತದ ವ್ಯಕ್ತಿತ್ವವಾದರೂ ಸಂಧಾನಕ್ಕಿಳಿಯುತ್ತದೆ. ಹೀಗೆ ಆಡು ಭಾಷೆಯೊಂದಿಗೆ ಆರಂಭವಾಗುವ ಪತನ ಸರ್ವ ಸಂಸ್ಕೃತಿಯತ್ತ ಸಾಗುತ್ತದೆ ಎನ್ನುವ ಘೋರ ಅಂಶ ನಮ್ಮ ಈ ಪ್ರಾಯೋಗಿಕ ಹಂತದಲ್ಲಿ ಯೋಚಿಸಿ. ಕಾರಣ ನಾವೇ ಮೂಲ ಹಂತದಲ್ಲಿ (ಗ್ರಾಸ್ ರೂಟ್ ಲೆವೆಲ್) ಭಾಷೆಯನ್ನು ಚಾಲ್ತಿಗೆ ತರದಿದ್ದರೆ ಪರ ಭಾಷಿಕರಾದರೂ ಯಾಕೆ ಕನ್ನಡ ಕಲಿವ ಹುಕಿಗೆ ಬಿದ್ದಾರು..? ಕಛೇರಿಯೊಂದರಲ್ಲಿ ನನ್ನ ಪರಿಚಯದ ಅಪ್ಪಟ ಅನ್ಯ ಭಾಷಿಕ ಕನ್ನಡ ಮಾತಾಡಲು ಇಚ್ಛಿಸುತ್ತಾನಾದರೂ ಅವನು ಬರುತ್ತಿದ್ದಂತೆ ಅವನೊಂದಿಗೆ ಇಂಗ್ಲೀಷಿನಲ್ಲಿ ಮಾತು ಶುರುವಿಟ್ಟುಕೊಂಡು ಬಿಡುತ್ತಾರೆ. ಅದಿನ್ನ್ಹೇಗೆ ಆತ ಕನ್ನಡಕ್ಕೆ ಒಲವು ತೋರಿಯಾನು..? ನಮ್ಮ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನುಡಿಯಲ್ಲಿ ಅದೆಷ್ಟು ವ್ಯವಸ್ಥಿತ ಅರ್ಥವಿದೆಯೆಂದರೆ ಆಕೆ ಮಾತಾಡುತ್ತಲೆ ಭಾಷೆ ಮತ್ತು ಸಂಹವನದ ಮೂಲಕ ಒಂದು ಪೂರ್ಣ ಸಂಸ್ಕೃತಿಯನ್ನು ಬೆಳೆಸಬಲ್ಲ ವಾಹಿನಿಯಾಗಿಬಿಡಬಹುದು. ಜೊತೆಗೆ ಮಹಿಳೆಯರು ಆರಂಭಿಸುವ ಯಾವುದೇ ಇಂತಹ ಅಭಿಯಾನ ವಿಫಲವಾದ ಉದಾ. ಗಳಿಲ್ಲ. ಆದರೆ ನಮ್ಮ ಉಗ್ರಾಣದಲ್ಲೇ ಖೋತಾ ಬೀಳುತ್ತಿದೆ ಕಿರಾಣಿಯಲ್ಲಿ ಹೇಗೆ ದಕ್ಕೀತು..?

ನಮ್ಮಲ್ಲಿ ಮಹಿಳೆಯರಿಗೆ ಅದರಲ್ಲೂ ಐ.ಟಿ ಮತ್ತು ಕಾರ್ಪೋರೇಟ್ ಉದ್ಯಮದವರಿಗೆ ಮಾತಿನ ಆರಂಭವೇ ಇಂಗ್ಲೀಷಿನಲ್ಲಿ. ಈಗಿನ ಅಮ್ಮಂದಿರು ಅಮ್ಮನಾಗಿ ಉಳಿದಿಲ್ಲ. ಆಂಟಿ ಅಥವಾ ಇಂಗ್ಲೀಷ್ ಟೀಚರ್ ಆಗಿಬಿಟ್ಟಿದ್ದಾರೆ. ಮನೆಯಲ್ಲಿ ಕೊಂಚ ಗಮನಿಸಿ, ಅಪ್ಪನಾದವ ಎಲ್ಲಿದ್ದರೂ ಕೊಂಚ ಒರಟನಾದರೂ ” ಚೂರು ಸೌಂಡ್ ಕಮ್ಮಿ ಮಾಡಮ್ಮ” ಎಂದು ಕೂಗಿದರೆ, ಮಮ್ಮಿಯದು ” ಮ್ಯೂಟ್ ದಿ ಟಿ.ವಿ.” ಎಂದೋ ” ರೆಡ್ಯೂಸ್ ದಿ ಸೌಂಡ್ ಐ ಸೆ..” ಎಂದರಚುತ್ತಿದ್ದಾಳೆ. ಇಂತದ್ದೇ ಹಲವು ಉದಾ. ಗಮನಿಸಿ. ಸತತ ಎರಡು ದಶಕಕ್ಕೂ ಹೆಚ್ಚಿನ ಕಾಲ ಕನ್ನಡದಲ್ಲೇ ಹೊರಳಿದ ಹೆಂಗಸರಿಗೆ ಈ ವ್ಯಾಮೋಹ ಯಾಕೆ..? ಕೀಳರಿಮೆಯೇ..? ನಿಮಗೆ ಗೊತ್ತಿರಲಿ. ಇವತ್ತಿಗೂ ನನ್ನ ಇಂಗ್ಲೀಷು ಚೆನ್ನಾಗಿಲ್ಲ. ಆದರೆ ದೇಶದ ಯಾವ ಹಂತದ, ಯಾವುದೇ ಕಛೇರಿಯಲ್ಲೂ ನನಗೆ ಇಂಗ್ಲೀಷು ಸಂವಹನಕ್ಕೆ ತೊಂದರೆಯಾಗಿಲ್ಲ. ನಾನೆಂದೂ ಯಾವ ಹಂತದ ಅಧಿಕಾರ ವರ್ಗದಲ್ಲೂ ವಿಷಯ ಸ್ಪಷ್ಟಪಡಿಸುವಲ್ಲಿ ತೊಂದರೆ ಎದುರಿಸಿಲ್ಲ. ಭಾಷೆಯಿಂದಾಗಿ ನನ್ನ ಕೆಲಸಗಳಾವುವೂ ಅರ್ಧಕ್ಕೆ ನಿಂತಿಲ್ಲ. ಹಾಗಂತ ಅದ್ಭುತ ಇಂಗ್ಲೀಷು ಕಲಿಯಲೇ ಬೇಕೆಂದು ತೆವಲಿಗೂ ಬಿದ್ದಿಲ್ಲ. ಕಾರಣ ವಿಷಯದ ಅರಿವು ಮತ್ತು ಜ್ಞಾನ ಸ್ಪಷ್ಟವಾಗಿದ್ದರೆ ಮಾತು ಯಾವ ಲೆಕ್ಕ. ಆದರೆ ಈ ಅರಿವು ಮತ್ತು ಜ್ಞಾನದ ಖಜಾನೆ ತುಂಬಿಕೊಳ್ಳುವುದೇ ಹುಟ್ಟಿನಿಂದ ಜೊತೆಗೆ ಬೆಳೆಯುವ ಭಾಷೆಯಿಂದಲೆ ವಿನ: ಸ್ಟೈಲಿನ ಪರಭಾಷೆಯಿಂದಲ್ಲ. ಇದನ್ನು ತಿಳಿಸೋರು ಯಾರು.. ?

ಕಾರಣ ನಮ್ಮ ಬೆಳವಣಿಗೆ ಮಾತೃ ಭಾಷೆಯ ಸಂಪರ್ಕದಿಂದ ಆಗುವ ಅನುಭವ ಮತ್ತು ಪ್ರಯೋಜನ ಇದೆಯಲ್ಲ. ಅದು ಅದೆಷ್ಟೆ ರೀತಿಯಲ್ಲಿ ನೀವು ಪರ ಭಾಷೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿದರೂ ಸಾಧ್ಯವಿಲ್ಲ. ಕೇವಲ ನೌಕರಿ, ಅಂತಸ್ತು, ಅಧಿಕಾರ, ಹಣ ಇತ್ಯಾದಿ ವೃತ್ತಿಪರ ವ್ಯವಸ್ಥೆಗೆ ಅನುಕೂಲವೇ ಹೊರತಾಗಿ ವೈಯಕ್ತಿಕ ಬದುಕಿನಲ್ಲಿ/ಸಾಮಾಜಿಕವಾಗಿ, ಬಾ೦ಧವ್ಯದಲ್ಲಿ ಸರಿಕ ಮತ್ತು ಅಪರಿಚಿತರಿಂದ ನಮ್ಮವರೆಲ್ಲರ ಒಂದಿಗಿನ ಬೆಸುಗೆಗೆ ನಮ್ಮದೇ ಭಾಷೆ ಮಾತ್ರವೇ ದೇದಿಪ್ಯಮಾನ. ಬದಲಿಗೆ ತೋರಿಕೆಗಾಗಿ ನಮ್ಮ ಮಕ್ಕಳಿಗೂ ಹೇರುವ ಭಾಷಾ ಮೋಹದಿಂದ ಮಕ್ಕಳು ಬಾಲ್ಯ ಸಹಜ ಅನುಭವದಿಂದ ವಂಚಿತರಾಗುತ್ತಾರೆಯೇ ವಿನ: ಇನ್ನೇನಲ್ಲ. ಇದೇ ರೀತಿಯಲ್ಲಿ ಮನೆಗಳಲ್ಲೂ ಇಂಗ್ಲೀಷಿನ ವ್ಯಾಮೋಹಕ್ಕೆ ಬಿದ್ದ ಗಂಡಸರು ಕಡಿಮೆಯೇ. ತುಂಬ ಉತ್ತಮ ಭಾಷೆ ಬಲ್ಲ ಪುರುಷರೂ ಕೂಡಾ ಎಲ್ಲೆಂದರಲ್ಲಿ ಇಂಗ್ಲೀಷು ಬಳಸಲಾರರು.

ಆದರೆ ಎಲ್ಲೆಂದರಲ್ಲಿ ಕನ್ನಡದವರಾದರೂ “ಪುಕು ಪುಕು” ಎಂದು ನುಲಿಯುವ ಹುಕಿ ನಮ್ಮ ಸ್ತ್ರೀಯರಿಗೆ ಯಾಕೆ..? ಬಹುಶ: ಹೀಗೆ ಬರೆದಿರುವುದು ಕೆಲವರ ಮನಸ್ಸಿಗೆ ಸುಲಭಕ್ಕೆ ಜೀರ್ಣವಾಗಲಾರದು. ಆದರೆ ತುಂಬು ಕುಟುಂಬದ ಅನುಭವದಲ್ಲಿ, ಸತತ ಸ್ನಾತಕೋತ್ತರ ಪದವಿಧರರ, ಆಂಗ್ಲ ಭಾಷಿಕ ನೈಪುಣ್ಯದ ವೃತ್ತಿಪರರ ವೃತ್ತದಲ್ಲಿದ್ದೂ ಯಾವ ರೀತಿಯಲ್ಲೂ ನನ್ನ ಕ್ಷಮತೆ ಕ್ಷೀಣಿಸಿಕೊಳ್ಳದೆ ಉಳಿದು, ಬರೆದ ನನ್ನ ಈ ಮಾತಿಗೆ ಒಮ್ಮೆ ಮಹಿಳೆಯರು ತಮ್ಮಲ್ಲೇ ಮನನ ಮಾಡಿಕೊಂಡು ನಂತರ ಶಾಂತವಾಗಿ ಪ್ರತಿಕ್ರಿಯಿಸಲಿ. ಕಾರಣ ಜಗತ್ತಿನ ನಂ.1 ಎಂದು ಕರೆಸಿಕೊಳ್ಳುವ ಹೆಚ್ಚಿನ ಯಾವ ರಾಷ್ಟ್ರವೂ ಇವತ್ತು ಇಂಗ್ಲೀಷಿನ ಮೋಹಕ್ಕೆ ಬಿದ್ದು ಮುಂದುವರೆದಿಲ್ಲ. ಬದಲಿಗೆ ಅವಿವತ್ತಿಗೂ ತಮ್ಮದೇ ಭಾಷೆಯಲ್ಲೇ ವ್ಯವಹರಿಸುತ್ತಿವೆ. ನಮ್ಮ ಅಮ್ಮಂದಿರುಗಳು ಯಾಕೆ ಹಿಂಗಾಡುತ್ತಿದ್ದಾರೆ..?

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post