ಒಂದು ಕಡೆ ಪ್ಯಾರಿಸ್’ನಲ್ಲಿ ಬಾಂಬ್ ದಾಳಿ, ಮತ್ತೊಂದು ಕಡೆ ಲಂಡನಿನಲ್ಲೂ ಮುಂದುವರಿದ ಮೋದಿ ಮೋಡಿ., ಇದರ ನಡುವೆ ಭಾರತದಲ್ಲಿ ಪ್ರಶಸ್ತಿ ವಾಪಸಾತಿಗೆ ದೇವನೂರರಿಂದ ಮರುಚಾಲನೆ..ಈ ಸುದ್ದಿಗಳೇ ಎಲ್ಲಾ ಚಾನಲುಗಳಲ್ಲಿ ಮೇಳೈಸುತ್ತಿದ್ದಾಗ ಮತ್ತೊಂದು ನ್ಯೂಸು ಮೇಲಿನವೆಲ್ಲವನ್ನೂ ಮೀರಿ ಬ್ರೇಕಿಂಗ್ ನ್ಯೂಸಿನಲ್ಲಿ ಜಾಗ ಪಡೆದುಕೊಂಡಿತ್ತು. ಈ ಟೀವಿ ನ್ಯೂಸ್, ಸುವರ್ಣ, ಟಿವಿ೯ ಗಳಲ್ಲಿ ಅದೇ ಸುದ್ದಿ. ಫೇಸ್ಬುಕ್, ಟ್ವಿಟ್ಟರಿನಲ್ಲಿಯೂ ಅದೇ ಸುದ್ದಿ. ಕೆಲವರು ಆ ಸುದ್ದಿಯನ್ನು ಹಂಚಿಕೊಳ್ಳುತ್ತಾ ಎದೆ ಬಡಿದುಕೊಳ್ಳುತ್ತಿದ್ದರು. ಅಂತಹಾ ತಲೆ ಹೋಗುವ ವಿಷಯ ಯಾವುದೆಂದರೆ ಬಿಗ್ ಬಾಸ್ ಮನೆಯಿಂದ ಹುಚ್ಚ ವೆಂಕಟ್ ಔಟ್”
ನ್ಯೂಸ್ ಚಾನಲುಗಳು ಉಳಿದೆಲ್ಲಾ ನ್ಯೂಸುಗಳನ್ನು ಕಡೆಗಣಿಸಿ ,ಜಿದ್ದಿಗೆ ಬಿದ್ದು ಈ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಎಂದು ಬಿತ್ತರಿಸುತ್ತಿದ್ದಾಗ “ಥೋ.. ಏನ್ ಗತಿ ಬಂತಪ್ಪಾ ನಮ್ಮ ನ್ಯೂಸ್ ಚಾನೆಲ’ಗಳಿಗೆ?” ಎನ್ನುವ ಜಿಗುಪ್ಸೆ ಮೂಡತೊಡಗಿತ್ತು. ಆಫ್ಟರ್ ಆಲ್ ಒಂದು ಥರ್ಡ್ ಕ್ಲಾಸ್ ರಿಯಾಲಿಟಿ ಶೋನ ಸ್ಪರ್ಧಿಯೊಬ್ಬ ಹೊರ ಬಿದ್ದಿದ್ದು ನಮ್ಮ ಚಾನಲುಗಳಿಗೆ ಬ್ರೇಕಿಂಗ್ ನ್ಯೂಸ್ ಆಹ್? ಕರ್ಮ ಕಾಂಡ.. ಅಲ್ಲಾ, ಈ ಹುಚ್ಚ ವೆಂಕಟ್ ಬಿಗ್’ಬಾಸಿನಲ್ಲಿ ಇದ್ದರೂ, ಇಲ್ಲದಿದ್ದರೂ ಸಮಾಜಕ್ಕೇನು ಒಳಿತಿದೆ ಹೇಳಿ. ಈ ಥರದ ಹುಚ್ಚಾಟವನ್ನು ವೈಭವೀಕರಿಸುವ ಮೂಲಕ ನೇರ ದಿಟ್ಟ ನಿರಂತರ, ಉತ್ತಮ ಸಮಾಜಕ್ಕಾಗಿ ಎಂದೆಲ್ಲಾ ಟ್ಯಾಗ್ ಲೈನ್ ಇಟುಕೊಂಡಿರುವ ಚಾನಲುಗಳು ಸಮಾಜಕ್ಕೆ ಕೊಡುತ್ತಿರುವ ಕೊಡುಗೆಯಾದರೂ ಏನು?
ಬ್ರೇಕಿಂಗ್ ನ್ಯೂಸ್, ಸಾಲದ್ದಕ್ಕೆ ದಿನ ಇಡೀ ಪ್ಯಾನಲ್ ದಿಸ್ಕಶನ್ ಮಾಡುತ್ತಾ ಕುಳಿತಿವೆ ನಮ್ಮ ಸಮಾಜಮುಖೀ ಚಾನಲುಗಳು. ಹುಚ್ಚ ವೆಂಕಟ್ ಟಿವಿ೯ ಲ್ಲಿ ನೇರವಾಗಿ ಹೇಳುತ್ತಾನೆ “ನನ್ನನ್ನು ಮನೆಗೆ ಹೋಗಕ್ಕೆ ಎಲ್ಲಿ ಬಿಟ್ರಿ, ನೀವೆ ಎತ್ತಾಕ್ಕೊಂಡು ಬಂದು ಬಿಟ್ರಲ್ಲ ಸ್ಟುಡಿಯೋಕ್ಕೇ?” ರಾಮ ರಾಮ! ಇವಕ್ಕೆ ಪ್ರಸಾರ ಮಾಡುವುದಕ್ಕೆ ಬೇರಾವುದೇ ವಿಷಯವಿಲ್ಲವೇ? ಮಾಡುವುದಾದರೆ ಮೋದಿಯ ಲಂಡನ್ ಭೇಟಿಯ ಕುರಿತಾಗಿ, ಭಯೋತ್ಪಾದನೆಯ ಕುರಿತಾಗಿ, ಹೊಸತಾಗಿ ಬಿಡುಗಡೆಯಾದ ಚಿತ್ರಗಳ ಕುರಿತಾಗಿ ಡಿಸ್ಕಶನ್ ಮಾಡಬಹುದು. ಸಾಮಾಜಿಕ ಜವಾಬ್ದಾರಿ ಎನ್ನುವುದು ಕಿಂಚಿತ್ತಾದರೂ ಇದ್ದಿದ್ದರೆ, ಮೋದಿ ಸೇರಿದಂತೆ ವಿಶ್ವದ ಹಲವು ನಾಯಕರು ಸೇರಿ ಜಾಗತಿಕ ಭಯೋತ್ಪಾದನೆಯನ್ನು ಮಟ್ಟ ಹಾಕುವುದು ಹೇಗೆ, ಆರ್ಥಿಕ ಸುಧಾರಣೆ ಮಾಡುವುದು ಹೇಗೆ ಎನ್ನುವುದನ್ನು ಟರ್ಕಿಯಲ್ಲಿ ನಡೆಯುತ್ತಿರುವ ಜಿ-೨೦ ಶೃಂಗ ಸಭೆಯಲ್ಲಿ ಚರ್ಚಚಿಸುತ್ತಿದ್ದಾರೆ, ಅದರ ಬಗ್ಗೆ ಒಂದರ್ಧ ಗಂಟೆ ಚರ್ಚೆ ಮಾಡಬಹುದಿತ್ತು. ಅದು ಬಿಟ್ಟು ಬಿಗ್’ಬಾಸ್’ನಂತಹ ಕಚ್ಡಾ ಪ್ರೋಗ್ರಾಮೇ ಬೇಕಾ? ಅಲ್ಲಿಂದ ಕಿಕ್ ಔಟಾಗಿರುವ ಹುಚ್ಚ ವೆಂಕಟೇ ಬೇಕಾ? ಲಬೊ ಲಬೋ ಅಂತ ಬಡಿದಿಕೊಳ್ಳಬೇಕು ನಾವು. ಇಡೀಯ ಬೆಳವಣಿಗೆಗಳು ನಮ್ಮ ಚಾನಲುಗಳ ಬೌಧ್ಧಿಕ ದಿವಾಳಿತನವನ್ನು, ಅಧಃಪತನವನ್ನು, ಕುರುಡು ಅಭಿಮಾನಿಗಳ ಅಂಧಶ್ರಧ್ಧೆಯನ್ನು ಮತ್ತೆ ಜಗಜ್ಜಾಹೀರುಗೊಳಿಸಿದೆ.
ಅಷ್ಟಕ್ಕೂ ಹುಚ್ಚ ವೆಂಕಟ್ ಯಾರು? ಏನು ? ಎಂಬುದೆಲ್ಲ ನಮಗೆ ಬೇಡ. ಆದರೆ ಆತನಿಗೆ ಈ ಮಟ್ಟಕ್ಕೆ ಪಬ್ಲಿಸಿಟಿ ಕೊಡುವಷ್ಟು ಏನಿದೆ ಆತನಲ್ಲಿ? ಮಾತೆತ್ತಿದರೆ ಎಕ್ಡ, ಬ್ಯಾನ್ ಆಗ್ಬೇಕು ಅದು ಇದು ಎಂದು ಬಾಯಲ್ಲಿ ಸಹಸ್ರನಾಮವನ್ನೇ ಹೇಳುವುದನ್ನು ಬಿಟ್ಟರೆ ಬೇರೇನಿದೆ ಆತನಲ್ಲಿ? ಆತನ ಬಗ್ಗೆ ಮಾತನಾಡಿದರೆ “ಅಣ್ಣ, ನಮ್ಮಣ್ಣ” ಎಂದೆಲ್ಲಾ ಏರಿ ಬರುವ ಅಭಿಮಾನಿಗಳು “ಅಣ್ಣ ಒಳ್ಳೆಯವರು. ಹುಡುಗಿಯರಿಗೆ ಒಳ್ಳೆ ರೆಸ್ಪೆಕ್ಟ್ ಕೊಡ್ತಾರೆ” ಹಾಗೆ ಹೀಗೆ ಎಂದೆಲ್ಲಾ ಹೇಳುತ್ತಾರೆ. ರೀ, ಸಾಧ್ಯ ಆದರೆ ನೀವು ಕುಡಾ ಆ ಥರ ರೆಸ್ಪೆಕ್ಟ್ ಕೊಡಕ್ಕೆ ಕಲೀರಿ. ಅದು ಬಿಟ್ಟು ಸುಮ್ನೆ ಅಣ್ಣ ಮತ್ತೊಂದು ಮಗದೊಂದು ಅಂತ ಲೆಕ್ಕಕ್ಕಿಂತ ಹೆಚ್ಚಿಗೆ ಮಾಡಿದ್ರೆ ಯಾವುದಕ್ಕೂ ಅರ್ಥವಿರುವುದಿಲ್ಲ. ಅಭಿಮಾನ ಒಳ್ಳೆಯದಕ್ಕಾಗಿ ಇರಬೇಕೇ ಹೊರತು ಸುಮ್ಮನೇ ಹುಚ್ಚಾಟವಾಡುವವರ ಮೇಲೆಲ್ಲ ಅಭಿಮಾನವಿರಬಾರದು, ಹಾಗೇನಾದರೂ ಇದ್ದರೆ ಅದು ಕೂಡಾ ಹುಚ್ಚಿದ್ದಂತೆಯೇ.
ಅಭಿಮಾನಿಗಳು ಹುಚ್ಚ ವೆಂಕಟ್’ನನ್ನು ಮತ್ತೆ ಬಿಗ್’ಬಾಸ್ ಮನೆಯೊಳಗೆ ಮತ್ತೆ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿ ಅಭಿಮಾನಿಗಳು ಪ್ರತಿಭಟನೆಯನ್ನೂ ಮಾಡುತ್ತಿದ್ದಾರಂತೆ.. ಹುಚ್ಚ ವೆಂಕಟ್’ಗೆ ಒಳ್ಳೆಯದಾಗಲೆಂದು ಹೋಮವನ್ನೂ ಮಾಡುತ್ತಾರಂತೆ. ಒಟ್ಟಿನಲ್ಲಿ ಹೋಮದ ಪಾವಿತ್ಯತೆಯನ್ನು, ಮರ್ಯಾದಿಯನ್ನೂ ತೆಗುಯುತ್ತಿದ್ದಾರೆ. ಅಯ್ಯೋ ಶಿವನೇ.. ಅತಿರೇಕದ ಪರಮಾವಧಿ ಅಂದ್ರೆ ಇದು.. ಪ್ರತಿಭಟನೆ ಮಾಡಲು ಆತನೇನು ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವವನೇ? ಆತನಿಗೇನಾದರೂ ಅನ್ಯಾಯ ಮಾಡಲಾಗಿದೆಯೇ? ಅಷ್ಟಕ್ಕೂ ನನಗೆ ತಿಳಿದ ಮಟ್ಟಿಗೆ ಬಿಗ್’ಬಾಸ್ ಎಂಬುದು ಸಂಪೂರ್ಣ ಸ್ಕ್ರಿಪ್ಟೆಡ್ ಕಾರ್ಯಕ್ರಮ. ಅಲ್ಲಿ ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆ. ಮತ್ತೆ ಪುನಃ ವೈಲ್ಡ್ ಕಾರ್ಡ್ ಮೂಲಕ ವೆಂಕಟ್ ಬಿಗ್’ಬಾಸಿನಲ್ಲಿ ಮುಂದುವರಿಯಲೂಬಹುದು. ಅಭಿಮಾನಿಗಳ ಒತ್ತಾಯದ ಮೇರೆಗೆ ಆತನನ್ನು ಮತ್ತೆ ಸೇರಿಸಿಕೊಳ್ಳುವ ಸೀನೂ ಇರಬಹುದು, ಯಾರಿಗ್ಗೊತ್ತು. ಆತ ಒಳ್ಳೆಯವನೇ ಇರಬಹುದು. ಆದರೆ ಆತನನ್ನು, ಆ ಕಾರ್ಯಕ್ರಮವನ್ನು ಒಂದು ಎಂಟರ್’ಟೈನಿಂಗ್ ಕಾರ್ಯಕ್ರಮವನ್ನಾಗಿ ಮಾತ್ರ ನೋಡಿ. ಅದಕ್ಕಿಂತ ಹೆಚ್ಚಾಗಿ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡು ಹೇಸಿಗೆ ಹುಟ್ಟಿಸುವುದು ಯಾರಿಗಾದರೂ ಖುಷಿ ಕೊಡುತ್ತದಾ? ಈ ಚಾನಲುಗಳೂ ಅಷ್ಟೇ.. ಆತನನ್ನು ಚೆನ್ನಾಗಿ ಫೋಕಸ್ ಮಾಡಿಕೊಂಡು ತನ್ನ ಟಿ.ಅರ್.ಪಿ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ. ಇವತ್ತು ಆತನನ್ನು ಅತಿಯಾಗಿ ವೈಭವೀಕರಿಸುವ ಈ ಮಾಧ್ಯಮಗಳ್ಯಾವುದೂ ಕೂಡಾ ನಾಳೆಯೇನಾದರೂ ಆತನ ಬಾಳಿನಲ್ಲಿ ಹೆಚ್ಚುಕಮ್ಮಿಯಾದರೆ ಸಹಾಯಕ್ಕಂತೂ ಖಂಡಿತಾ ಬರುವುದಿಲ್ಲ. ಹಳ್ಳಿ ಹುಡುಗ ಪ್ಯಾಟೆಗೆ ಬಂದ ಎಂಬ ಚಾನಲುಗಳ ಟಿ.ಅರ್.ಪಿ ತೀಟೆಗೆ ರಾಜೇಶ್ ಎಂಬೊಬ್ಬ ಅಮಾಯಕ ಬಲಿಯಾಗಿದ್ದು ನೆನಪಿರಲಿ ನಿಮಗೆ.
ಮೋದಿ ಲಂಡನಿನಲ್ಲಿ ಹೇಳಿದ್ದು ಸರಿಯಾಗಿಯೇ ಇದೆ. “ಭಾರತ, ನಾವು ಟಿವಿಯಲ್ಲೇನು ನೋಡುತ್ತೇವೆ, ಅಷ್ಟು ಮಾತ್ರವಲ್ಲ. ಅದಕ್ಕಿಂತಲೂ ವಿಶಾಲವಾಗಿದೆ, ಸುಂದರವಾಗಿದೆ.” ನಮ್ಮ Prestituteಗಳು ತೋರಿಸುತ್ತಿರುವುದು, ವೈಭವೀಕರಿಸುತ್ತಿರುವುದು ಬಿಗ್’ಬಾಸ್’ನಂತಹ ಅಪದ್ಧಗಳನ್ನೇ. ನಿಜ ಹೇಳಬೇಕಾದರೆ, ಟಿ.ಆರ್.ಪಿ ಗಾಗಿ ಯಾರ ಮುಂದಾದರೂ ನಗ್ನವಾಗಿ ನಿಲ್ಲುವ ಈ ಮಾಧ್ಯಮಗಳನ್ನು ವಿಕೆ ಸಿಂಗ್ prestitute ಅನ್ನುವ ಬದಲು ನಿಜವಾದ ಪದವನ್ನೇ ಬಳಸಿದಿದ್ದರೆ ಸೂಕ್ತವಾಗಿರುತ್ತಿತ್ತು.
(ಓದುಗರ ಗಮನಕ್ಕೆ: ಇದುವರೆಗೂ ಬಿಗ್’ಬಾಸ್’ನ ಒಂದೇ ಒಂದು ಎಪಿಸೋಡನ್ನೂ ನಾನು ನೋಡಿಲ್ಲ, ನಿನ್ನೆಯಿಂದ ಬರುತ್ತಿರುವ ಬ್ರೇಕಿಂಗ್ ನ್ಯೂಸುಗಳನ್ನು ತಾಳಲಾರದೆ, ನನ್ನಲ್ಲಿ Intolerence ಮೂಡಿ ಇಷ್ಟೆಲ್ಲಾ ಬರೆದಿದ್ದೇನೆ)
Facebook ಕಾಮೆಂಟ್ಸ್