X

ದೇಶಕ್ಕಾಗಿ ಮಡಿದ ವೀರಯೋಧರ ಈ ದಿನ ದೇಶಪ್ರೇಮಿಗಳದು..

ಕೆಲವೊಂದು ದಿನಗಳನ್ನ ನಮ್ಮ ಹತ್ತಿರ ಮರೆಯೋಕೆ ಆಗೋಲ್ಲ. ಅದರಲ್ಲೂ ನಾವು ತುಂಬಾ ಖುಷಿಪಟ್ಟ ಮತ್ತು ತುಂಬಾ ದುಃಖಪಟ್ಟ ದಿನಗಳನ್ನು ಮಾತ್ರ ಮರೆಯೊದೇ ಇಲ್ಲ.. ಹೀಗಿದ್ದಾಗ ದೇಶವೇ ಕಣ್ಣೀರು ಹಾಕಿದ ಈ ದಿನವನ್ನು ಮರೆಯುವುದಾದರೂ ಹೇಗೆ.. ನಿಜ ಇಂದು ಸಾವಿನ ಸೂತಕಕ್ಕೆ ಏಳು ತುಂಬಿತು… ದಿನಗಳಲ್ಲ, ಏಳು ವರ್ಷಗಳು ತುಂಬಿತು… ನವೆಂಬರ್ ೨೬ ಬಂದರೆ ೨೦೦೮ ರ ಮುಂಬೈ ದಾಳಿ.. ಸತ್ತ ಜೀವಗಳು, ಆ ಕಣ್ಣೀರು.. ಎಲ್ಲವೂ ಕಣ್ಣ ಮುಂದೆ ಬರುತ್ತೆ… ಏಳು ವರ್ಷಗಳಾದರೂ ಇನ್ನೂ ಆ ನೋವು ಹೋಗಿಲ್ಲ.. ವಾಹ್ ತಾಜ್ ಎಂದು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದ ಆ ಹೋಟೆಲ್ ಇಂದು ಆ ಕರಾಳ ದಿನವನ್ನು ನೆನಪಿಸುತ್ತೆ… ದಾಳಿಯ ನಂತರ ಮೊದಲಿನಂತೆ ರಿಪೇರಿ ಮಾಡಲಾಗಿದ್ದರೂ ಸಹ ಎಲ್ಲೋ ಮೂಲೆಯಲ್ಲಿ ಅಂಟಿಕೊಂಡ ಮಸಿ ೨೦೦೮ ರ ಮಾರಣ ಹೋಮಕ್ಕೆ ಸಾಕ್ಷಿ ಹೇಳುತ್ತದೆ.. ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪಾಗುತ್ತಾನೆ.. ನಮ್ಮೆಲ್ಲರಂತೆ ನಗುತ್ತಿದ್ದ ಜೀವ, ತಾಯ್ನಾಡಿಗಾಗಿ ಬಲಿಯಾದ ಜೀವ.. ಇದರ ಜೊತೆ ಬಲಿಯಾದ ಎನ್‌ಕೌಂಟರ‍್ ಸ್ಪೆಷಲಿಸ್ಟ್‌ ವಿಜಯ್‌ ಸಲಾಸ್ಕರ್‌, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ತುಕಾರಾಂ ಒಂಬಳೆ, ಗಜೇಂದರ್ ಸಿಂಗ್ ಎಲ್ಲರೂ ಬಲಿಯಾದವರೆ… ೨೦೦೮ ರ ನಂತರ ಇದೆಲ್ಲವೂ ನೆನಪಾಗದ ನವೆಂಬರ್ ೨೬ ಇಲ್ಲ…

ದೇಶದ ಭದ್ರತೆಯನ್ನೇ  ಪ್ರಶ್ನೆ ಮಾಡುವಂತೆ ಮಾಡಿದ ದಾಳಿ ಇದು.. ೨೦೦೧ ರಲ್ಲಿ ಪಾರ್ಲಿಮೆಂಟ್ ದಾಳಿ ಮೊದಲ ಬಾರಿಗೆ ದೇಶದ ಭದ್ರತೆಯನ್ನು ತೀವ್ರವಾಗಿ ಪ್ರಶ್ನೆ ಮಾಡಿತ್ತು.. ಅದರ ನಂತರ ಮುಂಬೈ ದಾಳಿ ಮತ್ತೆ ಭದ್ರತೆಯ ಆತ್ಮಾವಲೋಕನಕ್ಕೆ ಉದಾಹರಣೆಯಾಗಿ ಬಂದಿತ್ತು… ಇದರಲ್ಲಿ ಪಾಕಿಸ್ತಾನದ ಕುಮ್ಮಕ್ಕು ಎಲ್ಲರಿಗೂ ತಿಳಿದ ವಿಷಯವೇ.. ದಾಳಿ ಮಾಡಿದ ಉಗ್ರರನ್ನು ಸದೆಬಡಿದು ಆಯಿತು… ಸೆರೆ ಸಿಕ್ಕ ಕಸಬ್ ರಾಜಮರ್ಯಾದೆ ನಂತರ ಗಲ್ಲಿಗೆ ಗುರಿಯಾದ… ಇದರ ಹಿಂದಿನ ಮಾಸ್ಟರ್ ಮೈಂಡ್, ಅಮೇರಿಕಾ ಮೂಲದ ಉಗ್ರ ಡೆವಿಡ್ ಹೆಡ್ಲಿ ೩೫ ವರ್ಷಗಳ ಶಿಕ್ಷೆಗೆ ಗುರಿಯಾದ… ಎಲ್ಲವೂ ಮುಗಿದು ಹೋದವು… ಆದರೆ ಮುಗಿದು ಹೋದವುಗಳ ಮಧ್ಯ ಉಳಿದು ಹೋದವುಗಳು ತುಂಬಾ ಇದೆ… ಆ ಕರಾಳ ನೆನಪುಗಳು ಇನ್ನು ಕಂಬನಿ ತರಿಸುತ್ತವೆ… ಉನ್ನಿಕೃಷ್ಣನ್ ತಂದೆ ದೇಶಕ್ಕಾಗಿ ಪ್ರಾಣ ಬಿಟ್ಟ ವೀರ ಪುತ್ರನ ಬಗ್ಗೆ ಹೆಮ್ಮೆಯಿಂದ ಕಂಬನಿ ಮಿಡಿಯುತ್ತಿದ್ದರೆ, ಮನಸ್ಸಿನ ಒಳಗಡೆ ತಪ್ಪಿತಸ್ಥ ಭಾವನೆ ಸಹ ಕಾಣದ ಮಾಧ್ಯಮಗಳ ಮೇಲೆ ಉಕ್ಕುವ ಕೊಪವಿದೆಯಲ್ಲ ಅದು ಹೇಳಿಕೊಳ್ಳಲಾರದ್ದು.. ನೀವಿಲ್ಲೇ ಇರಿ.. ನಾನಿದ್ದೇನೆ ಎಂದು ಒಳಗಡೆ ಹೋದ ವೀರ ಚಿರನಿದ್ರೆಯಲ್ಲಿ ಕಾಣುವ ಮುಖ ಪ್ರತಿ ಬಾರಿ ನೆನಪಾಗುತ್ತೆ.. ಮನಸಲ್ಲೊಂದು ಸೂತಕ ಮನೆ ಮಾಡುತ್ತೆ…

ನಿಜ ಅಂದು ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡುವದಕ್ಕಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ.. ಒಂದು ಕಡೆ ತಾಜ್ ಹೋಟೆಲ್ ನಲ್ಲಿ ಗುಂಡುಗಳು ಅಬ್ಬರಿಸುತ್ತಿದ್ದರೆ ಮಾಧ್ಯಮ ವರದಿಗಾರರು ಎಲ್ಲೆಲ್ಲೊ ಅಡಗಿ ಕುಳಿತು, ಜೀವದ ಹಂಗು ತೊರೆದು ದೇಶದ ಜನರಿಗೆ ಸುದ್ದಿ ತಲುಪಿಸಿದರು… ಇದು ಅಷ್ಟು ಸುಲಭದ ಕೆಲಸ ಅಲ್ಲವೇ ಅಲ್ಲ.. ಮಾಧ್ಯಮ ವರದಿಗಾರರೆ ನಿಮಗೊಂದು ಸಲಾಂ.. ಆದರೆ ಒಂದು ವಿಷಯ ಏನೆಂದರೆ, ಒಳಗಡೆ ಇದ್ದ ಭಯೋತ್ಪಾದಕರಿಗೆ ಹೊರಗಡೆಯ ಸ್ಥಿತಿ ಗತಿಯ ಸಂಪೂರ್ಣ ಮಾಹಿತಿ ಸಿಕ್ಕಿದ್ದು ಇದೇ ಮಾಧ್ಯಮದವರಿಂದ.. ಒಂದು ಕಡೆ ಪೋಲಿಸ್ ಮತ್ತು ಕಮಾಂಡೋಗಳು ಒಳಗಡೆಗೆ ಹೋಗುವ ದಾರಿಯನ್ನು ಹುಡುಕುತ್ತಿದ್ದರೆ, ತಾಜ್ ಎದುರುಗಡೆ ಇದ್ದ ಸುಮಾರು ೫೦ ಮಾಧ್ಯಮಗಳು ತಮ್ಮ ಕ್ಯಾಮೆರಾ ಪರೀಕ್ಷಿಸುವಂತೆ ಎಲ್ಲ ಕಡೆ ಜೂಮ್ ಮಾಡಿ ತೋರಿಸುತ್ತ ವರದಿ ನೀಡುತ್ತಿದ್ದರು… ಒಂದು ಹಂತದಲ್ಲಿ ಮಾಧ್ಯಮಗಳ ಸುದ್ದಿ ನೀಡುವ ಆತುರವೇ ಒಳಗಿದ್ದ ಭಯೋತ್ಪಾದಕರನ್ನು ಹಿಡಿಯಲು ಪರದಾಡುವಂತಾಗಿದ್ದು.. ಇದನ್ನು ಮಾಧ್ಯಮಗಳು ಒಪ್ಪಲು ಸಿದ್ಧವೆ ಇಲ್ಲ… ಆದರೆ ಸತ್ತ ಯೋಧರ ಮುಖ ಕಂಡಾಗಲೆಲ್ಲ ಮಾಧ್ಯಮಗಳ ಮೇಲೆ ಕೋಪ ಉಕ್ಕುವುದಂತೂ ಹೌದು… ಕ್ಷಮೆ ಇರಲಿ.. ಇದು ಮಾಧ್ಯಮ ವರದಿಗಾರರ ಮೇಲಿನ ಅಥವಾ ಅವರ ಕಷ್ಟದ ಮೇಲಾಗಲಿ ಉಕ್ಕುವ ಕೊಪವಲ್ಲ.. ಆದರೆ ದೇಶವೇ ತಲ್ಲಣಗೊಳ್ಳುವ ಪರಿಸ್ಥಿತಿ ಇದ್ದಾಗಲೂ ನಮ್ಮ ಚಾನೆಲ್ ನಲ್ಲಿ ಮೊದಲು ಸುದ್ದಿ ನೀಡಬೇಕೆಂಬ ಆತುರ ಹೊತ್ತು ಇದುವ ಹೆಜ್ಜೆಯ ಮೇಲಿನ ಕೋಪ…

ಅಂದು ಉಳಿದ ಮಾಧ್ಯಮಗಳಿಗೆ ಹೋಲಿಸಿದರೆ ಕನ್ನಡ ಮಾಧ್ಯಮಗಳು ಸ್ವಲ್ಪ ಮಟ್ಟಿಗೆ ಕಡಿಮೆ ಪ್ರಮಾಣದಲ್ಲಿ ಪ್ರಸಾರ ಮಾಡಿತ್ತು.. ಆದರೆ ಇಂದಿನ ದಿನಗಳಲ್ಲಿ ಅವುಗಳೂ ಕಡಿಮೆಯಿಲ್ಲ ಎಂಬುದನ್ನು ನಿರೂಪಿಸುತ್ತಿವೆ.. ಇಂದು ಕೆಲವು ಪ್ರಶ್ನೆಗಳು ಮಾಧ್ಯಮದ ಮುಂದಿವೆ.. ಪ್ರಶ್ನೆಗಳಿಗಿಂತ ಹೆಚ್ಚಾಗಿ ಆರೋಪಗಳು ಎಂದರೆ ತಪ್ಪಾಗಲಾರದೇನೊ… ಒಂದು ದೇಶದಲ್ಲಿ ನಡೆಯುವ ಘಟನೆಗಳನ್ನು, ಒಂದು ಸ್ಥಳದಲ್ಲಿನ ಪರಿಸ್ಥಿತಿಯನ್ನು, ಒಂದು ವಿಚಾರಗಳನ್ನು ಹೀಗೆ ಎಲ್ಲ ವಿಷಯಗಳನ್ನು ತಿಳಿಯುವ ಏಕೈಕ ದಾರಿ ಮಾಧ್ಯಮಗಳು.. ಒಂದು ದೊಡ್ಡ ಜವಾಬ್ದಾರಿಯಿದೆ.. ಇಂದು ಫೇಸ್ ಬುಕ್ ನಲ್ಲಿ ಹೊಸತಾಗಿ ಪ್ರಾರಂಭವಾಗುವ ಪತ್ರಿಕೆಯ ಜಾಹಿರಾತೊಂದನ್ನು ನೋಡಿದೆ.. ಅದರಲ್ಲಿ ಪತ್ರಿಕೆಗಳೆಂದರೆ ಕೇವಲ ಸುದ್ದಿಗಳಲ್ಲ ಎಂಬ ಮಾತಿತ್ತು… ನೂರಕ್ಕೆ ನೂರು ಸತ್ಯ.. ಪತ್ರಿಕೆಗಳಾಗಲಿ, ಚಾನಲ್ ಗಳಾಗಲಿ ಕೇವಲ ಸುದ್ದಿ ನೀಡುವುದೊಂದನ್ನೇ ಮಾಡಬಾರದು.. ಸುದ್ದಿಗಳನ್ನು ಪರಿಷ್ಕಕರಿಸಬೇಕು.. ನಂತರ ಅದನ್ನು ವಿಮರ್ಶಿಸಿ ಒಂದಷ್ಟು ಅಭಿಪ್ರಾಯಗಳೊಂದಿಗೆ ಸುತ್ತ ಮುತ್ತಲಿನ ಮತ್ತು ಸಮಾಜದ ಶಾಂತಿಗೆ ಭಂಗ ತರದಂತೆ ಅದನ್ನು ಜನರ ಮುಂದಿಡಬೇಕು.. ಒಂದು ಸುಂದರ ಸಮಾಜದ ಸೃಷ್ಟಿಗೆ ಮಾಧ್ಯಮಗಳು ಸಾಕ್ಷಿಯಾಗಬೇಕು.. ಆದರೆ ಇಂದಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ, ಮಾಧ್ಯಮಗಳೇ ನೀವು ಸುದ್ದಿಯನ್ನು ಮಾತ್ರ ಕೊಡಿ ಉಳಿದದ್ದನ್ನು ನಮಗೇ ಬಿಡಿ ಎಂದು ಕಾಲಿಗೆ ಬೀಳಬೇಕು ಅನ್ನಿಸುತ್ತದೆ…

ಟಿ.ಆರ್.ಪಿ ಗಾಗಿ ಮಾತ್ರ ಯಾಕೆ ಮಾಧ್ಯಮಗಳು ಹೀಗೆ ಮಾಡುತ್ತವೆ ಎಂಬ ಹಳೇಯ ಪ್ರಶ್ನೆಯನ್ನು ಕೇಳಲು ನನಗೂ ಬೇಸರವೇ… ಅದನ್ನು ಕೇಳಲಾರೆ.. ಒಂದು ಮಾಧ್ಯಮಕ್ಕೆ ಟಿ.ಆರ್.ಪಿ ಎಷ್ಟು ಮುಖ್ಯ ಎಂಬುದು ಗೊತ್ತಿಲ್ಲದ ವಿಷಯವಲ್ಲ.. ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ವರದಿಗಾರ, ಟೆಕ್ನಿಷಿಯನ್ಸ್, ಎಡಿಟರ್ಸ್ ಹೀಗೆ ಹತ್ತು ಹಲವು ವಿಭಾಗದಲ್ಲಿರುವ ನೂರಾರು ಕೆಲಸಗಾರರ ಹೊಟ್ಟೆ ಹೊರೆಯಬೇಕೆಂದರೆ ಮತ್ತು ಮಾಧ್ಯಮ ಪ್ರಾರಂಭಿಸಲು ಹೂಡಿದ ಕೋಟಿಗಟ್ಟಲೆ ಹಣ ತಿರುಗಿ ಬರಬೇಕೆಂದರೆ ಮಾಧ್ಯಮದ ಟಿ.ಆರ್.ಪಿ ಚನ್ನಾಗಿರಬೇಕು.. ಮಾಧ್ಯಮಗಳ ಜೊತೆ ನಂಟು ಕಟ್ಟಿಕೊಂಡ ಎಲ್ಲರಿಗೂ ಇದು ತಿಳಿದ ವಿಷಯವೇ.. ನೀವು ಟಿ.ಆರ್.ಪಿ ಗಾಗಿಯೇ ಮಾಡಿ ಆದರೆ ಆ ಟಿ.ಆರ್.ಪಿ ಒಳ್ಳೆಯ ಸುದ್ದಿಗಳನ್ನು ನೀಡಿ ಮಾಡಲು ಸಾಧ್ಯವಾಗದೆ..?? ಮನೆಯ ಎದುರು ರೈತ, ಹಿತ್ತಲಲ್ಲಿ ಬೆಕ್ಕು ಒಮ್ಮೆಲೇ ಸತ್ತಾಗ ನಿಮ್ಮ ಕ್ಯಾಮೆರಾ ಸತ್ತ ಬೆಕ್ಕನ್ನು ಸುತ್ತುವರಿಯುತ್ತಲ್ಲ ಯಾಕೆ..?? ಅದರ ಜೊತೆ ಬೆಕ್ಕು ಹಿತ್ತಲಿಗೇಕೆ ಬಂತು, ಹೇಗೆ ಸತ್ತಿತು..? ಈ ಬೆಕ್ಕು ಸತ್ತದ್ದರಿಂದ ಭಾರತದಲ್ಲಿ ಬೆಕ್ಕುಗಳ ಸಂಖ್ಯೆ ಇನ್ನೆಷ್ಟು ಉಳಿದಿದೆ..?? ಎಂಬ ಹತ್ತು ಹಲವು ಪ್ರಶ್ನೆಗಳನ್ನು ಹೊತ್ತು ದಿನಗಟ್ಟಲೇ ನೇರ ಪ್ರಸಾರವನ್ನು ಮಾಡುವುದು ಎಷ್ಟು ಸರಿ..?? ಸತ್ತ ರೈತ ಟಿವಿ ಪರದೆಯ ಬುಡದಲ್ಲಿ ಒಂದು ಸಾಲಿನ ಸುದ್ದಿಯಾಗಿ ಹೋಗುತ್ತಾನಲ್ಲ ಇದು ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಬಗೆಯೇ..?? ಇದನ್ನು ಜನರು ಪ್ರಶ್ನಿಸಿದಾಗಲೂ ಮೌನವಾಗಿದ್ದರೆ ಹೇಗೆ ಗೆಳೆಯರೆ..??

ಅಂದು ಮುಂಬೈ ದಾಳಿಯ ಸಂದರ್ಭದಲ್ಲೂ ನಿಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಬೇಕಿತ್ತೆ..? ಈ ಆರೋಪವನ್ನು ಹಲವರು ಒಪ್ಪಲಾರರೇನೊ.. ಆದರೆ ಮುಗಿದು ಹೋದ ಸತ್ಯಗಳಲ್ಲಿ ಅದೂ ಒಂದು.. ಅಂದು ಮಾಧ್ಯಮಗಳು ಆ ಪಾಟಿ ಸುದ್ದಿ ನೀಡುವ ಅವಸರಕ್ಕೆ ಬೀಳದಿದ್ದರೆ ಮೇಜರ್ ಸಂದೀಪ್ ಭಯೋತ್ಪಾದಕರಿಗೆ ತಿಳಿಯದಂತೆ ಒಳನುಸುಳಿ ಎಲ್ಲರನ್ನು ಸದೆಬಡಿಯುತ್ತಿದ್ದನೊ ಏನೊ.. ಯಾಕೋ ಹಾಗೆಲ್ಲ ಅನ್ನಿಸುತ್ತೆ… ಆದರೆ ಕಳೆದುಕೊಂಡಾಗಿದೆ.. ಇದಕ್ಕೆ ಮಾಧ್ಯಮಗಳೇ ನೇರ ಹೊಣೆ ಎಂದು ಹೇಳುತ್ತಿಲ್ಲ.. ಆದರೆ ಮಾಧ್ಯಮಗಳದೂ ಪಾಲಿದೆ.. ಅದು ಮಾತ್ರ ಎಂದಿಗೂ ಸತ್ಯ.. ಸುಂದರ ಸಮಾಜ ಸೃಷ್ಟಿ ಮಾಡುತ್ತೇವೆ ಎಂದು ಹೇಳುತ್ತ ಪ್ರಾರಂಭವಾಗುವ ಮಾಧ್ಯಮಗಳು ಕೊನೆಗೆ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲೊ, ಉಳಿಸಿಕೊಳ್ಳುವ ಉದ್ದೇಶದಿಂದಲೋ ಸಾಗಿದರೆ ಹೇಗೆ..?? ಸಾಗಿದರೂ ತೊಂದರೆಯಿಲ್ಲ, ಸಾಗುವ ಭರದಲ್ಲಿ ನೀಡುವ ವರದಿಗಳು ಮಾಡುವ ಪ್ರಸಾರಗಳು ಸಮಾಜದ ಶಾಂತಿಯನ್ನು ಕದಡುತ್ತಿವೆಯೇ ಹೊರತು ಕಾಪಾಡುತ್ತಿಲ್ಲ.. ಒಳ್ಳೆಯ ಸುದ್ದಿಗಳಿಗೂ ಟಿ.ಆರ್.ಪಿ ಇದೆಯೆಂದು ಅರ್ಥವಾಗುವ ಕಾಲ ಎಂದು ಬರುತ್ತದೊ..?? ಅದನ್ನು ಯಾವಾಗ ಅಳವಡಿಸಿಕೊಳ್ಳುತ್ತಾರೊ..? ಎಲ್ಲಕ್ಕೂ ಕಾಲವೇ ಉತ್ತರಿಸಬೇಕು…

ಅದೇನೆ ಇರಲಿ.. ಇಂದು ನವೆಂಬರ್ 26.. ಮಡಿದವರಿಗೆ ಮೌನದೊಂದಿಗೆ ಸಂತಾಪ ನೀಡುವ ಕ್ಷಣವಿದು.. ಕರಾಳ ದಿನದ ಕಹಿ ನೆನಪನ್ನು ಒಮ್ಮೆ ನೆನೆದು ಶಾಂತಿ ಸಿಕ್ಕ ಆತ್ಮಗಳನ್ನು ಸ್ಮರಿಸಿ ನಮಸ್ಕರಿಸೋಣ.. ಮಾಧ್ಯಮಗಳು ಇನ್ನಾದರೂ ಬದಲಾಗಲಿ ಎಂಬ ಆಶಯವಿರಲಿ.. ಭಾರತ ಬದಲಾಗುತ್ತಿದೆ.. ನಾವೂ ಬದಲಾಗುತ್ತಿದ್ದೇವೆ.. ಆದರೆ ಆ ನೋವು ಮರೆಯಾಗದು.. ಮರೆಯಾಗಬಾರದು ಕೂಡ.. ದೇಶಕ್ಕಾಗಿ ಮಡಿದ ವೀರಯೋಧರ ಈ ದಿನ ದೇಶಪ್ರೇಮಿಗಳದು..

ಚಿರಾಗ್ ಚಂದ್ರ

chiragchandra2020@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post