ನಿಜ ಹೇಳ್ಳಾ? ಈಗ ಹೇಳಿಕೊಳ್ಳಲು ಒಂಥರಾ ಆಗುತ್ತಿದೆಯಾದರೂ, ಒಂದು ರೇಂಜಿಗೆ ನಾನು ಆಮಿರ್ ಖಾನ್ ಫ್ಯಾನ್.. ಆತ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೇಯನ್ನಂತೂ ತಪ್ಪದೆ ನೋಡುತ್ತಿದ್ದ ಹಲವರಲ್ಲಿ ನಾನೂ ಒಬ್ಬ. ಮೊದ ಮೊದಲು ಸತ್ಯಮೇವ ಜಯತೇಯಲ್ಲಿ ಅಮೀರ್ ಖಾನ್ ಅಳೋದು , ಜನರಿಗೆ ಸಾಂತ್ವಾನ ಹೇಳೋದು ನೋಡಿ “ಛೇ ಎಂಥಾ ಜನಾನುರಾಗಿ ನಟನಪ್ಪಾ ಇವ” ಅಂಥ ಅನಿಸ್ತಿತ್ತು. ಆ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಆತ ಮೂರು ಕೋಟಿ ಪಡೆದುಕೊಳ್ಳುತ್ತಿದ್ದ ಅನ್ನುವುದು ಗೊತ್ತಾದ ಬಳಿಕವೂ ಆತನ ಮೇಲಿನ ಗೌರವ, ಪ್ರೀತಿ ಒಂಚೂರು ಕಡಿಮೆಯಾಗಿರಲಿಲ್ಲ. ಆತ ಮಿ.ಪರ್ಫೆಕ್ಷನಿಸ್ಟ್, ಉಳಿದಿಬ್ಬರು ಖಾನ್’ಗಳಂತಲ್ಲ ಎನ್ನುವ ಕಾರಣದಿಂದಾಗಿ ನಮ್ಮೆಲ್ಲರ ಮನದೊಳಗೆ ಉನ್ನತ ಸ್ಥಾನ ಸಂಪಾದಿಸಿದ್ದ ಅಮೀರ್ ಖಾನ್. ಸ್ವಚ್ಚ ಭಾರತದ ರಾಯಭಾರಿಯಾಗಿ ಆತ ಮಾತನಾಡಿದಾಗಲಂತೂ ಆತನ ಬಗ್ಗೆ ಬಹಳಷ್ಟು ಹೆಮ್ಮೆ ಎನಿಸಿತ್ತು. ಅಂತವರೆಲ್ಲ ಕಸ ಎತ್ತಲು ಬಂದರೆ ಯುವಜನರೂ ಕಸ ಎತ್ತಿಕೊಂಡು ಬಹುಬೇಗನೆ ದೇಶವನ್ನು ಕ್ಲೀನ್ ಮಾಡಬಹುದೆಂಬ ಆಶಾಭಾವನೆ ಮೂಡಿತ್ತು.
ಆದರಿವತ್ತು?? ಅಮೀರ್ ಯಾವ ದೇಶವನ್ನು ಕ್ಲೀನ್ ಮಾಡುವ ಅಭಿಯಾನದ ರಾಯಭಾರಿಯಾಗಿದ್ದರೋ ಅದೇ ದೇಶದಲ್ಲಿ ಅಸಹಿಷ್ಣುತೆಯಿದೆ ಎನ್ನುತ್ತಾ ದೇಶವನ್ನೇ ತೊರೆಯುವ ಮಾತನ್ನಾಡುತ್ತಿದ್ದಾರೆ. ಅದರೊಂದಿಗೆ ಎರಡು ತಿಂಗಳುಗಳಿಂದ ನಡೆಯುತ್ತಿರುವ ಅಸಹಿಷ್ಣುತೆ ಚಳುವಳಿಗೆ ದೇಶದ ಮಹಾನ್ ನಟನೊಬ್ಬನ ಸೇರ್ಪಡೆಯಾದಂತಾಗಿದೆ.
“ನನ್ನ ಮಗನ ಭವಿಷ್ಯದ ಚಿಂತೆಯಿಂದಾಗಿ ದೇಶವನ್ನು ತೊರೆಯೋಣ ಎಂದು ನನ್ನ ಹೆಂಡತಿ ಹೇಳುತ್ತಿದ್ದಾಳೆ” ಎಂದಿದ್ದಾರೆ ಅಮೀರ್. ಸರಿ… ಆದರೆ ಯಾವ ದೇಶಕ್ಕೆ ಹೋಗುತ್ತೀರಿ ಅಮೀರ್? ವಿದ್ಯಾರ್ಥಿಗಳು ತರಗತಿಯಲ್ಲೇ ಅಧ್ಯಾಪಕರನ್ನು, ಸಹಪಾಠಿಗಳನ್ನು ಗುಂಡಿಕ್ಕಿ ಕೊಲ್ಲುತಿರುವಂತಹಾ ಅಮೆರಿಕಾಕ್ಕೆ ಹೋಗುತ್ತೀರೇನು? ಅಲ್ಲಾ ಮೂಲಭೂತವಾದಿಗಳ ಕಟ್ಟುಪಾಡುಗಳಿಂದ ಸೊರಗಿರುವ ಪಾಕಿಸ್ತಾನಕ್ಕೋ? ಕ್ಷುಲ್ಲಕ ಕಾರಣಕ್ಕಾಗಿ ದೇಶ ತೊರೆಯುವ ಮಾತನ್ನಾಡುತ್ತೀರಲ್ಲಾ, ಪಾಕಿಸ್ತಾನಕ್ಕೆ ಹೋಗಿ ಎನ್ನುವುದಿಲ್ಲ ನಾನು. ಪ್ರಪಂಚಚದ ಬೇರಾವುದೇ ದೇಶಕ್ಕೆ ಹೋಗಿ ಅಲ್ಲಿನ ಧರ್ಮವನ್ನು ದೇವರನ್ನು ತೆಗಳಿ ಒಂದೇ ಒಂದು ಸಿನೆಮಾ ಮಾಡಿ. ಆವಾಗ ಅರ್ಥವಾದೀತು ಅಸಹಿಷ್ಣು ರಾಷ್ಟ್ರ ಯಾವುದೆಂದು. ಅಮೀರ್, ಒಮ್ಮೆ ಸತ್ಯಮೇವ ಜಯತೇ ಮೂಡಿನಲ್ಲಿ ಯೋಚನೆ ಮಾಡಿ ನೋಡಿ.. ನಿಮ್ಮ ಮಗನನ್ನು ಅಸಹಿಷ್ಣುತೆಯ ನೆಪವೊಡ್ಡಿ ನೀವು ದೇಶ ಬಿಡುವ ಆಲೋಚನೆ ಮಾಡುತ್ತೀರಲ್ಲಾ, ಪಾಪ.. ನಮ್ಮ ದೇಶದಲ್ಲಿ ಸೂರಿಲ್ಲದೇ ಬೀದಿ ಬದಿ ಮಲಗುವ ಅದೆಷ್ಟೋ ಮಕ್ಕಳಿದ್ದಾರೆ, ಸ್ಲಮ್ಮುಗಳಲ್ಲೇ ಜೀವನ ನಡೆಸುವ ಲಕ್ಷಾಂತರ ಮಕ್ಕಳಿದ್ದಾರೆ. ಏನು ಇಲ್ಲದ ಅಂತವರು ಎಂದಾದರೂ ನಮ್ಮ ವ್ಯವಸ್ಥೆಯನ್ನು ಬೈದು ದೇಶ ಬಿಡುವ ಮಾತನ್ನಾಡಿದ್ದಾರೋ? ಎಲ್ಲವೂ ಇದ್ದು ನೀವೇಕೆ ಇಷ್ಟು ಕೀಳು ಮಟ್ಟಕ್ಕಿಳಿದಿದ್ದೀರೀ?
ನನ್ನ ಹೆಂಡತಿ ದಿನಪತ್ರಿಕೆ ಓದಲೂ ಹೆದರುತ್ತಾಳೆ ಅಂದರೆ ದೇಶದಲ್ಲಿ ಭಯದ ವಾತಾವರಣವಿದೆ ಎಂದಿರಲ್ಲಾ ಅಮೀರ್ ಖಾನ್, ನಿಮ್ಮ ಗೆಳೆಯ ಸಲ್ಮಾನ್ ಖಾನ್ ಕುಡಿದು ಕಾರು ಚಲಾಯಿಸಿ ಬಂಧನಕ್ಕೊಳಗಾದಾಗ ನೀವು ಜೈಲಿಗೆ ಹೋಗಿ ಆತನ ಸುಖ ದುಃಖ ವಿಚಾರಿಸಿದ್ದು ನೆನಪಿದೆ ತಾನೆ? ಸಲ್ಮಾನ್ ಖಾನ್’ನ ಕುಡಿತದ ಚಟಕ್ಕೆ ನಾಲ್ಕು ಜನ ಅಮಾಯಕರು ನಿದ್ದೆಯಲ್ಲೇ ಹೆಣವಾದರು. ಆ ಬಡ ಅಮಾಯಕರನ್ನು ಕಳೆದುಕೊಂಡವರು ಎಂದಾದರೂ “ನಮ್ಮ ನ್ಯಾಯ ವ್ಯವಸ್ಥೆ ಸರಿಯಿಲ್ಲ, ಬಡವರು ನ್ಯಾಯಯುತವಾಗಿ ಬದುಕುವ ಅವಕಾಶವಿಲ್ಲ ಈ ದೇಶದಲ್ಲಿ, ನಾವು ದೇಶ ತೊರೆಯುತ್ತೇವೆ” ಎಂದಿದ್ದಾರೆಯೇ? ಏನೂ ಆಗದೆ ನಿಮ್ಮ ಹೆಂಡತಿ ಮಗನ ವಿಷಯದಲ್ಲಿ ಚಿಂತಿತರಾದಂತೆ ಆವತ್ತು ಸತ್ತವನ ಹೆಂಡತಿ ಅದೆಷ್ಟು ಚಿಂತಿತರಾಗಿರಬೇಡ ಅಮೀರ್? ನಿಮ್ಮ ಹಾಗೆಯೇ ಆ ಅಮಾಯಕರ ತಂದೆ ತಾಯಿಗೂ ಕಾಳಜಿಯಿರುತ್ತದಲ್ಲವೇ? ಇದರ ಬಗ್ಗೆಯೂ ಸತ್ಯಮೇವ ಜಯತೇ ಮಾಡಿ ಎರಡು ಹನಿ ನೈಜ ಕಣ್ಣೀರು ಹಾಕಿ ಅಮೀರ್ ಖಾನ್. ಅದು ಬಿಟ್ಟು ಶಿಕ್ಷೆಗೊಳಗಾದವನನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರೆ ಸಂತ್ರಸ್ತರ ಮನಸಿನಲ್ಲಿ ಅಸಹಿಷ್ಣದತೆ ಭುಗಿಲೇಳದೆ ಇದ್ದೀತೇ? ಮುಂಬೈ ಬಾಂಬ್ ಸ್ಪೋಟದ ಆರೋಪಿ ಯಾಕೂಬ್ ಮೆನನ್’ನನ್ನು ಗಲ್ಲಿಗೇರಿಸಿದಾಗ ಅದನ್ನು ನಿಮ್ಮ ಗೆಳೆಯ ಸಲ್ಮಾನ್ ವಿರೋಧಿಸಿದರು. ಅದನ್ನು ನೋಡಿ ಆ ಬಾಂಬ್ ಸ್ಪೋಟದ ಸಂತ್ರಸ್ತರಲ್ಲಿ ಅಸಹಿಷ್ಣತೆ ಹೆಚ್ಚಾಗದೇ ಇದ್ದೀತೇ? ತಮ್ಮ ಕಣ್ಣ ಮುಂದೆಯೇ ದುಷ್ಕೃತ್ಯಗಳು ನಡೆದು, ಅಮಾಯಕರು ಬಲಿಯಾಗಿ, ಆರೋಪಿಗಳು ಆರಾಮವಾಗಿವಾಗ ಭುಗಿಲೇಳುವ ಇಂಟಾಲರೆನ್ಸಿಗಾದರೂ ಒಂದು ಅರ್ಥವಿರುತ್ತದೆ. ನಿಮ್ಮದೆಂತಹಾ ಇಂಟಾಲರೆನ್ಸ್ ಅಮೀರ್ ಖಾನ್? ಮೊನ್ನೆ ಮೊನ್ನೆ ಹುತಾತ್ಮರಾದ ಸಂತೋಷ್ ಮೆಹದಿಕ್ ಪತ್ನಿ ಹೇಳುತ್ತಾರೆ, “ದೇಶಕ್ಕಾಗಿ ಹೋರಾಡುವುದಕ್ಕಾಗಿ ನನ್ನ ಮಗನನ್ನೂ ಆರ್ಮಿಗೆ ಸೇರಿಸುತ್ತೇನೆ” ಎಂದು. ಮನುಷ್ಯತ್ವವೇ ಇಲ್ಲದ ಉಗ್ರರೊಂದಿಗಿನ ಹೋರಾಟದಲ್ಲಿ ಮರಣ ಹೊಂದುವ ವೀರನೊಬ್ಬನ ಪತ್ನಿಗ ತನ್ನ ಮಗನನ್ನು ಅದೇ ಬೆಂಕಿ ಕೂಪಕ್ಕೆ ಕಳಿಸುತ್ತೇನೆ ಎಂದಾಗ ಕಾಣದ ಅಸಹಿಷ್ಣುತೆ, ಏನೇನೂ ಅಗದೆ ನಿಮ್ಮ ಮಗನ ವಿಚಾರದಲ್ಲಿ ಕಂಡದ್ದೆಲ್ಲಿ ಅಮೀರ್ ಖಾನ್?
ಅಮೀರ್ ಖಾನ್ ಪಿಕೆ ಮಾಡಿದಾಗ ಅದು ಬಿಡುಗಡೆಗೂ ಮೊದಲೇ ವಿವಾದ ಹುಟ್ಟು ಹಾಕಿತ್ತು. ಅದರಲ್ಲಿ ದೇವರುಗಳನ್ನು ಹೀಯಾಳಿಸಿದ್ದರು ಎಂಬುದು ಗೊತ್ತಿದ್ದೂ, ಅದನ್ನು ನೋಡಬೇಡಿ ಎನ್ನುವಂತಹ ಹತ್ತಾರು ವಾಟ್ಸಾಪ್ ಮೆಸ್ಸೇಜುಗಳು ಬಂದಿದ್ದರೂ ಕೂಡ ನನ್ನಂಥ ಕೋಟ್ಯಾಂತರ ಹಿಂದೂ ಪ್ರೇಮಿಗಳು ಪಿಕೆಯನ್ನು ನೋಡಿ ಅದು ದಾಖಲೆಯ ಆರುನೂರು ಕೋಟಿ ಬಾಚಿಕೊಳ್ಳುವಂತೆ ಮಾಡಿದ್ದರು. ದೇಶದಲ್ಲಿ ಧರ್ಮ ಆಧಾರಿತ ಅಸಹಿಷ್ಣುತೆ ಇರುವುದು ನಿಜವೇ ಆಗಿದ್ದರೆ, ಬಹು ಸಂಖ್ಯಾತರ ಭಾವನೆಗಳಿಗೆ ಧಕ್ಕೆಯುಂಟುಮಾಡಿಯೂ ಪಿಕೆ ಚಿತ್ರ ರಿಲೀಸ್ ಆಗ್ತಿತ್ತಾ? ಬಾಲಿವುಡ್ಡಿನಲ್ಲಿ ಹಿಂದೆಂದೂ ಮಾಡದ ದಾಖಲೆಗಳನ್ನು ಮಾಡುತ್ತಿತ್ತಾ? ಅಮೀರ್ ಇಷ್ಟೆಲ್ಲಾ ಮಾತನಾಡಿದ ಮೇಲೂ, ಆತ ನಾಳೆ ಹೊಸದೊಂದು ಚಿತ್ರ ಮಾಡಲಿ. ಭಾರತೀಯರು ಖಂಡಿತಾ ಅದನ್ನು ನೋಡಿಯೇ ನೋಡ್ತಾರೆ. ಯಾಕಂದ್ರೆ ಭಾರತದಷ್ಟು ಸಹಿಷ್ಣು ರಾಷ್ಟ್ರ ಖಂಡಿತಾ ಮತ್ತೊಂದಿಲ್ಲ.
ಅಮೀರ್ ಖಾನ್, ನೀವು ಸ್ವಚ್ಚ ಭಾರತದ ರಾಯಭಾರಿಯಾಗಿ ನಮ್ಮ ಸರಕಾರದ ಕ್ರಮಗಳನ್ನು ಹೊಗಳಿದಾಗ ಬಹಳಷ್ಟು ಹೆಮ್ಮೆಯಾಗಿತ್ತು. ಮೋದಿಯನ್ನು ಹೊಗಳಿ ಅಟ್ಟಕ್ಕೇರಿಸಿದ್ದೀರಿ ಎಂಬ ಕಾರಣಕ್ಕಲ್ಲ. ಒಂದು ಒಳ್ಳೆಯ ಕೆಲಸ ಮಾಡಲು ಹೊರಟಾಗ ಸೆಲೆಬ್ರಿಟಿಗಳೂ ಕೈಜೋಡಿಸುತ್ತೀರಿ ಎಂಬ ಕಾರಣಕ್ಕಾಗಿ. ಆದ್ದರಿಂದ ದೇಶಕ್ಕೇನಾದರೂ ಸಮಸ್ಯೆ ಬಂದಾಗ ಅಥವಾ ಹೊಸದೇನಾದರೂ ಬದಲಾವಣೆ ಮಾಡ ಹೊರಡುವ ಯುವ ಮನಸ್ಸುಗಳಿಗೆ “ಅರೆ ಬಯ್ಯಾ.. ಆಲ್ ಈಸ್ ವೆಲ್” ಎಂದು ಹುರಿದುಂಬಿಸುತ್ತೀರಿ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೀಗ ಸ್ವತಃ ನೀವೇ, ನಿಮ್ಮಲ್ಲಿ ಆಲ್ ಈಸ್ ನಾಟ್ ವೆಲ್ ಅಂತ ತೋರಿಸಿಕೊಟ್ಟಿರಿ. ವೆಲ್..! ನೀವಲ್ಲದಿದ್ದರೆ ನಮಗೆ ನಾವೇ “ಆಲ್ ಈಸ್ ವೆಲ್” ಎಂದು ಹೇಳಿಕೊಳ್ಳುತ್ತೇವೆ.
ಶಾರುಕ್ ಖಾನ್ ಅಸಹಿಷ್ಣತೆಯ ಬತಗ್ಗೆ ಮಾತನಾಡಿದಾಗ ದೇಶ ಈ ಪರಿಯಲ್ಲಿ ರಿಯಾಕ್ಟ್ ಮಾಡಿರಲಿಲ್ಲ. ಇವತ್ತು ಆಮೀರ್ ಖಾನ್ ಇಂಟಾಲರೆನ್ಸ್ ಇದೆ ಎಂದಾಗ ಎಲ್ಲರೂ ವಿರೋಧಿಸುತ್ತಿದ್ದಾರೆ ಯಾಕೆ ಗೊತ್ತಾ? ಈ ಅಮೀರ್ ಖಾನ್ ನಮ್ಮ ಪ್ರವಾಸೋಧ್ಯಮ ಇಲಾಖೆಯ ರಾಯಭಾರಿಯೂ ಹೌದು. ಅದರ ಜಾಹೀರಾತುಗಳಲ್ಲಿ “ಅತಿಥಿ ದೇವೋ ಭವ” ಎನ್ನುವ ಅಮೀರ್ ದಿಢೀರಾಗಿ ದೇಶ ತೊರೆಯುವ ಮಾತನ್ನಾಡಿದರೆ ಅದು ಹೊರಜಗತ್ತಿಗೆ ಯಾವ ಸಂದೇಶವನ್ನು ಕೊಡುತ್ತದೆ? ದೇಶದ ಮೇಲೆ ಪ್ರಿತಿಯಿಲ್ಲದೆ, ಇಲ್ಲಿರಲು ಮನಸ್ಸಿಲ್ಲದೆ ಬರೀ ಹಣಕ್ಕಾಗಿ “ಅತಿಥಿ ದೇವೋ ಭವ” ಎನ್ನುವವರನ್ನು ಸಹಿಸಿಕೊಳ್ಳುವುದಾದರೂ ಹೇಗೆ?
ಓದುಗ ಮಿತ್ರರೇ, ಸುಮ್ ಸುಮ್ನೇ ಅಸಹಿಷ್ಣುಗಳೆಂದು ಕರೆಸಿಕೊಳ್ಳುವುದೇಕೆ, ಈ ಭಾರಿ ಅಮೀರ್’ನ ಮುಂದಿನ ಎಲ್ಲಾ ಚಿತ್ರಗಳನ್ನು ಬಹಿಷ್ಕರಿಸುವ ಮೂಲಕ, ಆತ ರಾಯಭಾರಿಯಾಗಿರುವ ಎಲ್ಲಾ ಉತ್ಪನ್ನಗಳನ್ನು ತಿರಸ್ಕರಿಸಿ ಆತನ ಬ್ರಾಂಡ್ ವಾಲ್ಯೂ ಕಡಿಮೆಯಾಗುವಂತೆ ಮಾಡುವ ಮೂಲಕ ನಿಜವಾದ ಇಂಟಾಲರೆನ್ಸ್ ಅಂದ್ರೆ ಏನು ಅಂತ ಆತನಿಗೆ ತೋರಿಸಿಕೊಡೋಣ. ಇನ್ನು ಸಹಿಸಿಕೊಳ್ಳುವುದು ಬೇಡ!
Facebook ಕಾಮೆಂಟ್ಸ್