ಆತ್ಮನಿಗೂ ತಿಳಿಯದ, ಅರ್ಥವಾಗದ ವಿಷಯವೊಂದಿತ್ತು. ಭಾವನೆಗಳು, ಸಂಬಂಧಗಳ ಚೌಕಟ್ಟಿನಲ್ಲಿ ಬದುಕುತ್ತಿದ್ದ ಮನುಷ್ಯ ಹೇಗೆ ಇಷ್ಟೊಂದು ಬದಲಾದ…? ಒಬ್ಬರು ಇನ್ನೊಬ್ಬರ ಜೊತೆ ಮಾತನಾಡುವುದಿಲ್ಲ. ಎರಡು ಮನಸುಗಳ ನಡುವೆ ಸೂಕ್ಷ್ಮ ಸಂಬಂಧದ ಎಳೆಯೇ ಇಲ್ಲ. ಯಾರೂ ಇನ್ನೊಬ್ಬರಿಗಾಗಿ ಕೆಲಸ ಮಾಡುವುದಿಲ್ಲ. ಎಲ್ಲರೂ ಸ್ವತಂತ್ರರೇ, ಎಲ್ಲರಿಗೂ ಸ್ವೆಚ್ಛೆಯೇ. ರಾಜ್ಯ, ದೇಶ, ಖಂಡ ಎಂಬ ಭೇದವಿಲ್ಲ. ಯಾರೂ ಇನ್ನೊಬ್ಬರನ್ನು ಗಡಿದಾಟಿ ಬಂದೆಯೇಕೆಂದು ಪ್ರಶ್ನಿಸುವುದಿಲ್ಲ. ಜಾತಿ ತಾರತಮ್ಯಗಳಿಲ್ಲ. ಸ್ವಚ್ಛಂದವಾಗಿ ಬದುಕುತ್ತಿದ್ದಾರೆ; ಸ್ವೇಚ್ಛಾಚಾರವೇ ಉಸಿರಾದಂತೆ.
ಮತಗಳು, ಮತಾಂಧರು, ಧರ್ಮನಿಷ್ಠರೂ ಇಲ್ಲ, ಎಲ್ಲರೂ ಒಂಟಿಗಳೇ. ಯಾರೂ ಸಾಯಲಾರರು. ಬಹುಶಃ ಹುಟ್ಟಿಸುವ ಚೈತನ್ಯ ಅವರಲ್ಲಿ ಉಳಿದಿದೆಯೋ ನಶಿಸಿಹೋಗಿದೆಯೋ ಅದು ಕೂಡ ಯಾರಿಗೂ ತಿಳಿದಿಲ್ಲ. ಗಂಡು ಮತ್ತು ಹೆಣ್ಣುಗಳು ಕೂಡ ಒಬ್ಬರಿಗೊಬ್ಬರು ಸೇರುತ್ತಿಲ್ಲ. ದೈಹಿಕ ಸುಖವನ್ನೂ ಮಷಿನ್ ಗಳಿಂದ ಪಡೆದ ಮೇಲೆ ಮನಸ್ಸೆಂಬುದು ಯಾರಿಗೆ ಉಳಿದಿರುತ್ತದೆ?? ಒಬ್ಬರಿಗೊಬ್ಬರು ಬೇಕು ಎಂಬ ಬಂಧಗಳೇ ಬಂಧನವೆಂದು ಕಳಚಿ ನಿಂತಾಗಿತ್ತು ಎಲ್ಲರು.
ಇದರಲ್ಲಿ ಸುಮಾರು ಪಾಲು ವರ್ಷಿಯೇ ಕಾರಣನಾಗಿದ್ದ. ವಿಜ್ಞಾನಿಗಳು ವಿಶ್ವ ಹೇಗೆ ಹುಟ್ಟಿತು? ಬ್ರಹ್ಮಾಂಡದ ಸೃಷ್ಟಿಯ ಮೂಲ ಏನು ಎಂಬುದನ್ನು ಹುಡುಕ ಹೊರಟರೆ ವರ್ಷಿಯ ವಿಜ್ಞಾನ ಸಾಯದೇ ಇರುವುದು ಹೇಗೆ ಎಂಬುದರ ಹಿಂದೆ ಓಡತೊಡಗಿತ್ತು. ಜೀನ್ಸ್ ಗಳ ವಿಕೇಂದ್ರಿಕರಣದಿಂದ ದೇಹದಲ್ಲಿನ ಯೌವನದ ಜೀನ್ಸ್ ಗಳು ಬೆಳವಣಿಗೆ ಹೊಂದದಂತೆ ಸಾಯದಂತೆ ಮಾಡಿ ಯೌವನವೇ ಶಾಶ್ವತವಾಗುವಂತೆ ಮಾಡಿದ. ಪ್ರನಾಳ ಶಿಶುಗಳ ಬದಲಾಗಿ ಪ್ರನಾಳದಲ್ಲಿ ಯೌವನದ ಗಂಡು ಹೆಣ್ಣುಗಳನ್ನೇ ಸೃಷ್ಟಿಸಿದ. ವಿಜ್ಞಾನ ಅವನೆದುರು ತಲೆಬಾಗಿತು. ಜಗತ್ತು ಅವನೆದುರು ಶರಣಾಯಿತು.
ಇಂಥ ಹಲವಾರು ಸಂಶೋಧನೆಗಳು ಅವನ ಹೆಸರಿನಲ್ಲಿದ್ದರೇನು ಆವಿಷ್ಕಾರದ ಫಲ ಎಲ್ಲರಿಗೂ ಸಿಗುವಂತೆ ಮಾಡಿದ. ಭೂಮಿಯ ಮೇಲಿನ ಎಲ್ಲರೂ ಚಿರಂಜೀವಿಗಳಾದರು. ಸಾಯಬೇಕೆಂದವರನ್ನೂ ಯಾರೂ ತಡೆಯಲಿಲ್ಲ. ಅಂಥವರು ಬೆರಳೆಣಿಕೆಯಷ್ಟೆ. ಬಂಧನಗಳು ಕಡಿಮೆ ಆದವು. ಹಸಿವನ್ನು, ನಿದ್ರೆಯನ್ನೂ ಇಂಗಿಸುವ ಪ್ರಯತ್ನ ಯಶಸ್ವಿಯಾಯಿತು. ಅಲ್ಲಿಗೆ..? ಎಲ್ಲವೂ ಮುಗಿದಿತ್ತು. ಹೊಟ್ಟೆಗೆ ಬೇಡವಾದ ಮೇಲೆ ಯಾರು ಕೆಲಸ ಮಾಡುತ್ತಾರೆ..? ಯಾಕೆ ಕೆಲಸ ಮಾಡುತ್ತಾರೆ? ಗಂಡ ಹೆಂಡತಿಯರು ಬೇರೆಯಾದರು. ಅಪ್ಪ,ಅಮ್ಮ, ಮಕ್ಕಳು ಎಂಬ ಸಂಬಂಧ ಇತಿಹಾಸದ ಪುಟಗಳಲ್ಲಿ ಮಾತ್ರ. ಪೆಟ್ರೋಲ್, ಡಿಸೇಲ್ ಗಳ ಬದಲಾಗಿ ಸೂರ್ಯನ ಶಕ್ತಿಯಿಂದಲೇ ವಾಹನಗಳು ಸರಾಗವಾಗಿಯೇ ಚಲಿಸುವಂತೆ ಮಾಡಿದ. ಆವಿಷ್ಕಾರಗಳು ಅನ್ವೇಷಣೆಗಳು ಅವನಿಗೊಂದು ಹುಚ್ಚು. ಅದನ್ನೇ ಸರ್ವಸ್ವವೆಂದು ಅವನನ್ನು ಪೂಜಿಸುವ ಮುಕ್ಕಾಲು ಪಾಲು ಜಗತ್ತಿಗೂ ಹುಚ್ಚೆ.
ಹಣದ ವಹಿವಾಟಿನ ಜೊತೆ ಕೊಡು ಕೊಳ್ಲುಗೆಗಳು ನಿಂತು ಹೋದವು. ಜನರು ಮೋಜಿಗಾಗಿ ಎಲ್ಲವನ್ನೂ ಸೃಷ್ಟಿಸುವುದನ್ನು ಕಲಿತರು. ತಾವು ಮಾಡಿದ್ದನ್ನು ಬೇರೆಯವರೆದುರು ಚಂದಕ್ಕಿಡುವ ಹುಂಬತನ, ಮಾರತೊಡಗಿದರು. ಮಾರುವುದೆಂದರೆ ಸೃಷ್ಟಿಸಿ ಎಸೆಯುವುದೇನೋ. ಯಾರು ಬೇಕೆಂದರೆ ಅವರು ಬಳಸಿ ಬಿಸಾಡಬಹುದಿತ್ತು. ಅದನ್ನು ಯಾರು ಏನೇ ಮಾಡಿದರೂ ಯಾರೂ ಪ್ರಶ್ನಿಸುವುದಿಲ್ಲ. ಪ್ರಶ್ನೆಗಳಿಲ್ಲದ ಮೇಲೆ ಉತ್ತರಕ್ಕೆಲ್ಲಿ ಅವಕಾಶ? ಅವೆಷ್ಟೋ ಭಾವುಕ ಜೀವಿಗಳ ಯೋಚನೆಗೆ ನಿಲುಕದ ಸತ್ಯವಾಗಿತ್ತು ಇದು.
ಆತ್ಮ ವರ್ಷಿಯಲ್ಲಿ ಒಮ್ಮೆ ಪ್ರಶ್ನಿಸಿದ್ದ “ಯಾವುದಕ್ಕಾಗಿ ಇಂಥ ಆವಿಷ್ಕಾರಗಳು? ವಿಶ್ವಾತ್ಮನ ಪ್ರಪಂಚವನ್ನೇ ಹಾಳು ಮಾಡುತ್ತಿರುವೆ.. ” ಎಂದು. ವರ್ಷಿಯನ್ನು ತನ್ನ ದಾರಿಗೆಳೆದರೆ ಜಗತ್ತು ಮತ್ತೆ ಮೊದಲಿನಂತಾಗಿಬಿಡುವುದೇನೋ ಎಂಬ ನಿರೀಕ್ಷೆ ಆತ್ಮನದು.
ವರ್ಷಿಯು ಆತ್ಮನನ್ನೇ ದಿಟ್ಟಿಸಿ ನೋಡಿದ. ಅವನ ತೀಕ್ಷ್ಣವಾದ ಕಣ್ಣುಗಳು ಸೂಕ್ಷ್ಮವಾದ ದೃಷ್ಟಿ ಆತ್ಮನ ಆಳಕ್ಕಿಳಿದು ಮರೆಯಾಯಿತು. ವರ್ಷಿಯ ಹಣೆಯ ಮೇಲೆ ನೆರಿಗೆಗಳು ಮೂಡಿದವು. ಎಂದೂ ನೋಡಿರದ ಮನಸ್ಸಿನಾಳದ ಸುಪ್ತ ವೇದನೆಯ ಗೆರೆಗಳಿರಬೇಕು. ಗಾಢವಾದ ನಿಟ್ಟುಸಿರು ಬಿಟ್ಟು ವರ್ಷಿ ತನ್ನನ್ನು ಹಿಂಬಾಲಿಸುವಂತೆ ಸನ್ನೆ ಮಾಡಿ ಮುಂದೆ ಸಾಗಿದ. ಆತ್ಮ ಕುತೂಹಲ ಕಂಗಳೊಂದಿಗೆ ಹಿಂದೆ ನಡೆದ.
ಗೋಡೆಯ ಮೇಲೆಲ್ಲಾ ಸೂತ್ರಗಳು, ಯಾರಿಗೂ ಏನೆಂದು ಅರ್ಥವಾಗದ ಚಿತ್ರಗಳು, ಅರ್ಧ ಮುರಿದ ಗಾಜಿನ ಬಿರಡೆಗಳು, ಪಂಜರದಲ್ಲಿ ಇಲಿ ಬೆಕ್ಕುಗಳು, ಬೇಲಿಯಿಲ್ಲದಿದ್ದರೂ ಜಾಗದಿಂದ ಕದಲದೆ ಕೂತಿರುವ ಹೆಸರೂ ತಿಳಿಯದ ಜೀವಿಗಳು, ಬುಸುಗುಡುವುದೇ ಬದುಕೆಂಬಂತಿರುವ ಹಾವುಗಳು. ವರ್ಷಿಯ ಲ್ಯಾಬೋರೆಟರಿ ಅದು; ಅವನ ಮನಸ್ಸಿನಂತೆಯೇ ಇತ್ತು. ಪ್ರತಿಯೊಂದೂ ವಸ್ತುವೂ ಅವನ ಆವಿಷ್ಕಾರದ ಕಥೆ ಹೇಳುತ್ತಿದ್ದವು.
ಅದೇನು ಹೊಸ ಜಾಗವಲ್ಲ ಆತ್ಮನಿಗೆ, ಆಟ ಹುಟ್ಟಿರುವುದು ಅಲ್ಲೇ. ವರ್ಷಿ ಆತ್ಮನನ್ನು ದೊಡ್ಡದಾದ ಕಂಪ್ಯೂಟರ್ ಪರದೆಯ ಎದುರು ನಿಲ್ಲಿಸಿದ. ಅದೊಂದು Virtual computer. ಅಲ್ಲಿ ಕಂಪ್ಯೂಟರ್ ಇಲ್ಲ. ಆದರೂ ನೋಡುವವರಿಗೆ ಕಾಣಿಸುತ್ತದೆ. Internet Connection ಗಳು ಇಲ್ಲದೆಯೇ ಪ್ರಪಂಚದಲ್ಲಿ ನಡೆಯುತ್ತಿರುವುದನ್ನೆಲ್ಲ, ಮುಂಚೆ ನಡೆದಿರುವುದನ್ನೆಲ್ಲ ನೋಡಬಹುದಿತ್ತು. ಮತ್ತೆ ಗಾಢವಾದ ನಿಟ್ಟುಸಿರು.
ವರ್ಷಿ ಗಂಭೀರವಾಗಿ ಹೇಳತೊಡಗಿದ. ಅವನು ಹೇಳಿದ ಮಾತುಗಳು ಚಿತ್ರಗಳಾಗಿ ಎದುರಿನ ಪರದೆಯ ಮೇಲೆ ಮೂಡತೊಡಗಿದವು. “ಯಜ್ಞಾ ಭಟ್ಟರು ನನ್ನ ತಂದೆ, ಎಂದರೆ ಸಾವಿನ ಹೊಸ್ತಿಲಿನಿಂದ ಬದುಕಿನ ಬಾಗಿಲಿನಲ್ಲಿ ನಿಲ್ಲಿಸಿದವರು. ಭಗವಂತನನ್ನು ಬಹಳವೇ ನಂಬಿದ ಮನುಷ್ಯ. ಪಾಶ್ಚಿಮಾತ್ಯ ದೇಶಗಳಲ್ಲಿ ಸಂಬಂಧಗಳು ಕೊಲೆಯಾಗಿ, ಒಡೆದು ಬದುಕುವ ನೀತಿ ಜಾರಿಯಲ್ಲಿದ್ದು ದಶಕಗಳೇ ಕಳೆದರೂ ಸ್ವತಂತ್ರ ಭಾರತದ ಜನರು ಬಂಧನಗಳನ್ನೇ ಬಯಸುವವರಾಗಿದ್ದರು. ಧರ್ಮ ಸಂಬಂಧಗಳು ಅವರನ್ನು ಕೂಡಿ ಬಾಳುವಂತೆ ಮಾಡಿತ್ತು. ಒಬ್ಬರಿಗೊಬ್ಬರು ನೆರವಾಗಿ ಎಲ್ಲರನ್ನೂ ಪ್ರೀತಿಸಿಕೊಂಡು ಬದುಕುತ್ತಿದ್ದ ದಿನಗಳವು. ಸ್ವಾರ್ಥ, ಸೇಡು, ನೋವು, ನಲಿವು ಎಲ್ಲವೂ ಇತ್ತು. ಅಂಥ ಸಮಯದಲ್ಲಿ ಹೊಸದೊಂದು ಧರ್ಮ ಅಥವಾ ಗುಂಪು ಸೃಷ್ಟಿಯಾಯಿತು. ದುಡ್ಡಿರುವವರು ಮತ್ತು ದುಡ್ಡಿಲ್ಲದವರು. ದುಡ್ಡು, ಹಣ ಎಂಬುದು….”
ಮಧ್ಯದಲ್ಲಿಯೇ ತಡೆದು “ದುಡ್ಡು? ಹಾಗೆಂದರೇನು?” ಮುಗ್ಧವಾಗಿ ಕೇಳಿದ ಆತ್ಮ. ವರ್ಷಿ ನಕ್ಕ; ಬಹಳ ಹೊತ್ತು ನಗುತ್ತಲೇ ಇದ್ದ. ಅವನ ನಗು ಅಲ್ಲಿನ ಗೋಡೆಗಳಿಗೆ ಬಡಿದು ಅಲೆ, ಅಲೆಯಾಗಿ ಪ್ರತಿಧ್ವನಿಯಾಗುತ್ತಿತ್ತು. ಆತ್ಮ ಅರ್ಥವಾಗದೆ ಸುಮ್ಮನೆ ನಿಂತ.
“ದುಡ್ಡು ಹಣ ಎಂಬುದು ಕೇವಲ ಕಾಗದ ಕಂಪ್ಯೂಟರ್ ಗಳಲ್ಲಿ ಕಾಣುವ ಅಂಕೆ-ಸಂಖ್ಯೆಗಳಷ್ಟೆ. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ದಿನ ಕಳೆದಂತೆ ದುಡ್ಡೇ ಎಲ್ಲವೂ ಆಯಿತು. ಎಲ್ಲವೂ ಎಂದರೆ ದುಡ್ಡಿಲ್ಲದಿದ್ದರೆ ಮನುಷ್ಯನ ಬದುಕೇ ಇಲ್ಲ ಎಂಬಂತಾಯಿತು. ದುಡ್ಡಿಲ್ಲದವರು ನಿರಂತರ ದಬ್ಬಾಳಿಕೆಗೆ ಒಳಗಾದರು. ಅಲ್ಲಿಂದಲೇ ಪ್ರಾರಂಭವಾಯಿತು ವಿಶ್ವಾತ್ಮನ ವಿರುದ್ಧದ ಹೋರಾಟ. ಪ್ರತಿಯೊಬ್ಬ ದುಡ್ಡಿಲ್ಲದವ ಶೋಷಣೆಗೆ ಒಳಗಾದ. ದುಡ್ಡಿಲ್ಲದ ಪ್ರತಿ ದೇಶ, ಪ್ರದೇಶ ದಬ್ಬಾಳಿಕೆಗೆ ಒಳಗಾದವು. ದುಡ್ಡಿರುವವರು ಇಲ್ಲದವರ ಮೇಲೆ ಯುದ್ಧ ಸಾರತೊಡಗಿದರು. ಜಾತಿ ಧರ್ಮಗಳನ್ನು ನಂಬುವವರೂ ದುಡ್ಡಿರುವ, ದುಡ್ಡಿರದ ಪಂಗಡಗಳಾಗಿ ಬೇರಾದವು.”
ವರ್ಷಿ ಹೇಳುತ್ತಲೇ ಇದ್ದ, ಪರದೆಯ ಮೇಲೆ ಚಿತ್ರಗಳು ಮೂಡುತ್ತಲೇ ಇದ್ದವು. ನಡೆದ ಮಹಾಯುದ್ಧಗಳು, ಆಕ್ರಮಣಗಳು, ನಂತರದ ಭೀಕರತೆಗಳು
Facebook ಕಾಮೆಂಟ್ಸ್