‘ನಾನು ಅವನಲ್ಲ ಅವಳು’ – ಒಂದು ವಿಭಿನ್ನ ಕಥಾಹಂದರದ, ಒಂದು ಸಮಾಜವಾಗಿ ನಮ್ಮನ್ನು ಆತ್ಮವಿಮರ್ಶೆಗೆ ಹಚ್ಚುವ, ಕಾಡುವ ಚಿತ್ರ. ಕನ್ನಡದ ಮಟ್ಟಿಗೆ ಇದೊಂದು ದಿಟ್ಟ ಹಾಗೂ ಸ್ವಾಗತಾರ್ಹ ಪ್ರಯತ್ನ. ಲಿವಿಂಗ್ ಸ್ಮೈಲ್ ವಿದ್ಯಾ ಎಂಬ ಮಂಗಳಮುಖಿ ಯೊಬ್ಬರು ತಮಿಳಿನಲ್ಲಿ ಬರೆದಿರುವ ಆತ್ಮಕಥನವನ್ನು ಆಧರಿಸಿದ ಚಿತ್ರವಿದು. ಮಂಗಳಮುಖಿಯೊಬ್ಬರ ಬದುಕಿನ ಅನಿವಾರ್ಯತೆಗಳನ್ನು, ಅಸಹಾಯಕತೆಗಳನ್ನು, ಅವಮಾನಗಳನ್ನು ಹಾಗೂ ಅಭಿಲಾಷೆಗಳನ್ನು ವಾಸ್ತವಕ್ಕೆ ಹತ್ತಿರವಾಗಿ ಇಲ್ಲಿಚಿತ್ರಿಸಲಾಗಿದೆ. ಒಂದು ಪುಸ್ತಕವಾಗಿಯಷ್ಟೇ ಉಳಿದುಹೋಗಬಹುದಾಗಿದ್ದ , ಅಥವಾ ಒಂದು ಡಾಕ್ಯುಮೆಂಟರಿ ಯಾಗಿ ಕಳೆದುಹೋಗಬಹುದಾಗಿದ್ದ ಕಥೆಯನ್ನು ೨ ಗಂಟೆಗಳ ಕಾಲ ಎಲ್ಲೂ ಬೋರ್ ಆಗದಂತೆ, ಮನಮುಟ್ಟುವಂತೆ, ನೀವು ಸ್ವಲ್ಪ ಭಾವುಕರಾಗಿದ್ದರೆ ನಿಮ್ಮನ್ನು ತಲ್ಲಣಗೊಳಿಸುವಂತೆ, ಚಿತ್ರ ಮುಗಿದ ಮೇಲೂ ಕಾಡುವಂತೆ ಭಾವಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಲಿಂಗದೇವರು. ಇಂತಹ ಕಥೆಯನ್ನು ಕೈಗೆತ್ತಿಕೊಂಡು ಚಿತ್ರವಾಗಿಸಿದ ಅವರ ಧೈರ್ಯಕ್ಕೆ, ಶ್ರಮಕ್ಕೆ ನಿಜಕ್ಕೂ ದೊಡ್ಡ ನಮಸ್ಕಾರ.
ಇನ್ನು 28 ವರ್ಷಗಳ ನಂತರ ಕನ್ನಡಕ್ಕೆ ಶ್ರೇಷ್ಠ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟSanchari Vijay ಸಂಚಾರಿ ವಿಜಯ್ ಅಭಿನಯಿಸಿಲ್ಲ, ಪಾತ್ರವೇ ತಾವಾಗಿ ಬಿಟ್ಟಿದ್ದಾರೆ. ಮೊದಲಿಂದ ಕೊನೆಯತನಕ ವಿಜಯ್ ಅಭಿನಯ ಹೃದಯ ತುಂಬುತ್ತದೆ. ಹಲವು ಪಾತ್ರಗಳಲ್ಲಿ ನಿಜವಾದ ಮಂಗಳಮುಖಿಯರೇ ಅಭಿನಯಿಸಿದ್ದರೂ ಎಲ್ಲೂ ಗುಣಮಟ್ಟ ಕಡಿಮೆಯಾಗಿದೆ ಅನ್ನಿಸಲ್ಲ, ಪಾತ್ರಪೋಷಣೆ, ದೃಶ್ಯ ಪೇಲವ ಅನ್ನಿಸಲ್ಲ ಹಾಗೂ ಅದೇ ಚಿತ್ರವನ್ನು ಇನ್ನಷ್ಟು ವಾಸ್ತವಕ್ಕೆ ಹತ್ತಿರವಾಗಿಸಿದೆ. ಮತ್ತೂ ಒಂದು ಖುಷಿ ಎಂದರೆ ಇಂತಹ ಕಥೆ ಹೇಳುವಾಗ ಆಗುವ ಡಾಕ್ಯುಮೆಂಟರಿ ಅಪಾಯದಿಂದ ಚಿತ್ರ ಪಾರಾಗಿದೆ. ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಹಾಡುಗಳು ಗಮನ ಸೆಳೆಯುತ್ತವೆ ಮತ್ತು ಚಿತ್ರವನ್ನು ಚೇತೋಹಾರಿಯಾಗಿಸಿದೆ. ಪ್ರಶಸ್ತಿ ವಿಜೇತ ಚಿತ್ರ , ಕಲಾತ್ಮಕ ಚಿತ್ರ ಎಂಬಿತ್ಯಾದಿ ವಿಶೇಷಣ ಗಳೇ ಕೆಲವೊಮ್ಮೆ ಚಿತ್ರಕ್ಕೆ ಕಂಟಕ ವಾಗುತ್ತೆ. ಆದರೆ ಇಲ್ಲಿ ಇದು ಯಾವುದೇ ಒಂದು ರೀತಿಯ ಪ್ರೇಕ್ಷಕರಿಗೆ ಸೀಮಿತ ಅನ್ನಿಸುವಂತಿಲ್ಲ. ಹಾಗೆ ಚಿತ್ರವನ್ನು ಆ ಅಪಾಯದಿಂದ ಪಾರು ಮಾಡಿ ಎಲ್ಲಾ ವರ್ಗದ ಜನರೂ (ಅಂದರೆ ಆರ್ಟ್ ಮತ್ತು ಕಮರ್ಸಿಯಲ್)ನೋಡುವಂತಹ ಚಿತ್ರವನ್ನಾಗಿ ಮಾಡಿದ್ದಾರೆ ಲಿಂಗದೇವರು. ಮತ್ತೊಂದು ಖುಷಿ ತಂದ ಸಂಗತಿಯೆಂದರೆ ಚಿತ್ರದಲ್ಲಿ ಅವರು ಯಾವುದೇ ವಾಚ್ಯ ಸಂದೇಶ ಹೇಳುವುದಿಲ್ಲ, ಹಾಗೆ ಮಾಡಬೇಕು ಹೀಗೆ ಮಾಡಬೇಕು ಎಂಬ ಭಾಷಣ ಇಲ್ಲಿಲ್ಲ. ಆದರೆ ಇಡಿಯ ಚಿತ್ರವೇ ಇಲ್ಲಿ ಒಂದು ಸಂದೇಶವಾಗಿದೆ. ಚಿತ್ರ ಮುಗಿಸಿ ಎದ್ದು ಬರುವಾಗ ಅದು ನಮ್ಮನ್ನುಆತ್ಮವಿಮರ್ಶೆಗೆ ಒಡ್ಡುತ್ತದೆ. ಮಂಗಳಮುಖಿ ಸಮುದಾಯದ ಕುರಿತು ನಮಗಿರುವ ಭಾವನೆಯನ್ನು ಸ್ವಲ್ಪವಾದರೂ ಬದಲಿಸಲು ಈ ಚಿತ್ರ ಖಂಡಿತಾ ಸಫಲವಾಗಿದೆ. ಯಾವುದೇ ಪ್ರಶಸ್ತಿ ಸಮ್ಮಾನ ಗಳಿಗಿಂತ ಅದೇ ಚಿತ್ರದನಿಜವಾದ ಯಶಸ್ಸು. ಇದಕ್ಕಾಗಿ ಚಿತ್ರದ ನಿರ್ದೇಶಕ ಲಿಂಗದೇವರು ಹಾಗೂ ಸಂಚಾರಿ ವಿಜಯ್ ಅವರಿಗೆ ವಿಶೇಷ ಅಭಿನಂದನೆಗಳು. ಹಾಗೆಯೇ ಇಂತಹದೊಂದು ವಿಭಿನ್ನ ಕಥೆಯ ಚಿತ್ರವನ್ನು ನಿರ್ಮಾಣ ಮಾಡಲು ಮುಂದೆ ಬಂದ ರವಿ ಗರಣಿ ಅವರಿಗೂ ಅಭಿನಂದನೆ. ಆದರೆ ಈ ಚಿತ್ರ ಕನ್ನಡಿಗರಿಗೆ ತಲುಪಲು ಚಿತ್ರಮಂದಿರಗಳೇ ಸಿಗದಿರುವುದು ಮಾತ್ರ ನಮ್ಮ ಕಾಲದ ದುರಂತ.
ವಿಜಯ್ ನಿಮಗೊಂದು Hats off. ಎಷ್ಟೋ ಕಡೆಗಳಲ್ಲಿ ನೀವು ಕಣ್ಣು ಒದ್ದೆಯಾಗಿಸಿಬಿಟ್ರಿ. ‘ನಾನು ಮಾದೇಶ ಅಲ್ಲ, ವಿದ್ಯಾ’ ಅಂತ ನೀವು ಮನೆಯಿಂದ ಹೊರಹೋಗುವಾಗಿನ ದೃಶ್ಯ ಆ ನಿಜವಾದ ಮಂಗಳಮುಖಿಯ ಪರಿಸ್ತಿತಿ ಯನ್ನು ನೆನಪಿಸಿ ಆ ನೋವು, ಸಂಕಟ ಎದೆಯನ್ನು ತುಂಬುತ್ತದೆ. ಈ ಪಾತ್ರ ಮಾಡುತ್ತಿರುವ ವ್ಯಕ್ತಿ ಒಬ್ಬಪುರುಷ ಅಂತಲೇ ಮರೆತು ಹೋಗುವಂತೆ ಒಬ್ಬ ಮಂಗಳಮುಖಿಯ ಬದುಕು ಬವಣೆಯನ್ನು ನೀವು ಅಭಿನಯಿಸಿದ್ದೀರಿ, ಅಲ್ಲ ಅನುಭವಿಸಿದ್ದೀರಿ. ಇಡೀ ಚಿತ್ರದ ತುಂಬಾ ನಿಮ್ಮ ಪರಿಶ್ರಮ ಎದ್ದು ಕಾಣುತ್ತದೆ. ನಿಜಕ್ಕೂ ವಿಜಯ್ ನಿಮ್ಮಂತವರು ಕನ್ನಡದ ಹೆಮ್ಮೆ. ಇದಕ್ಕೆ ರಾಷ್ಟ್ರ ಪ್ರಶಸ್ತಿ ಬರದೆ ಹೋಗಿದ್ದರೆ ಅದು ದೊಡ್ಡ ಅನ್ಯಾಯವಾಗುತ್ತಿತ್ತು. ಕನ್ನಡದಲ್ಲಿ ೨೮ ವರ್ಷಗಳ ಬಳಿಕ ಶ್ರೇಷ್ಠ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ ನಿಮಗೆ ಅಭಿನಂದನೆಗಳು. ಹಾಗೆಯೆ ಕನ್ನಡದಲ್ಲೇ ಮೊಟ್ಟ ಮೊದಲಬಾರಿಗೆ ಪ್ರಸಾಧನ ಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ ರಾಜು ಹಾಗೂ ನಾಗರಾಜು ಅವರಿಗೂ ಅಭಿನಂದನೆ.
ಮಂಗಳಮುಖಿಯರ ಜಗತ್ತು ನಾವರಿಯದ ಲೋಕ. ಸಿಗ್ನಲ್ಲುಗಳಲ್ಲಿ, ರೈಲುಗಳಲ್ಲಿ , ಅಂಗಡಿ ಬಾಗಿಲಲ್ಲಿ ಭಿಕ್ಷೆ ಬೇಡುವ ಇವರನ್ನು ಕಂಡರೆ ನಮಗೆ ಒಂಥರಾ ಅಸಹ್ಯ, ಮುಜುಗರ. ಅವರೂ ಕೆಲವರು ಅತಿರೇಕದಿಂದ ವರ್ತಿಸುವುದೂ ಉಂಟು. ದುಡ್ಡು ಕೊಡದಿದ್ದರೆ ಮೈಕೈ ಮುಟ್ಟಿ ಮುಜುಗರ ಉಂಟು ಮಾಡುತ್ತಾರೆ. ನಮಗೆ ಗೊತ್ತಿರುವ ವಿಷಯ ಬಹುಷಃ ಇಷ್ಟೇ. ಆದರೆ ಗಂಡಾಗಿ ಹುಟ್ಟಿ ಹೆಣ್ಣಿನ ಭಾವ ಆಸೆ ಆಕಾಂಕ್ಷೆಗಳನ್ನು ಹೊತ್ತು ಅವರು ಪಡುವ ಅವಮಾನ, ಹಿಂಸೆ, ನೋವು ಸಂಕಟ ಸಮಾಜಕ್ಕೆ ಅರ್ಥವಾಗುವುದೇ ಇಲ್ಲ, ತಮ್ಮದಲ್ಲದ ತಪ್ಪಿನ ಬಲಿಪಶುಗಳು ಅವರು. ‘ಹೆಣ್ಣಾಗಿ ಹುಟ್ಟುವುದು ಸುಲಭ, ಆದರೆ ಹುಟ್ಟಿದ ಮೇಲೆ ಹೆಣ್ಣಾಗುವುದು ಕಷ್ಟ’ ಎಂಬ ಒಂದು ಮಾತೇ ಅವರ ಕಷ್ಟವನ್ನು ತೆರೆದಿಡುತ್ತದೆ. ಸಮಾಜ ಅವರಿಗೆ ಹೆಜ್ಜೆ ಹೆಜ್ಜೆಗೂ ಅವಮಾನ ಮಾಡುತ್ತಲೇ ಹೋಗುತ್ತದೆ. ಅವರಿಗೆ ಎಲ್ಲರಂತೆ ತಮ್ಮದೇ ಆದ ಬದುಕು ಕಟ್ಟಿಕೊಳ್ಳುವ ಅವಕಾಶವೇ ಇರುವುದಿಲ್ಲ. ಹಾಗಾಗಿ ಅನಿವಾರ್ಯವಾಗಿ ಅವರು ಭಿಕ್ಷೆ ಬೇಡಲೋ ಅಥವಾ ವೇಶ್ಯಾವಾಟಿಕೆ ಗೋ ತಮ್ಮನ್ನು ಒಡ್ಡಿಕೊಳ್ಳಲೇಬೇಕಾದದ್ದು ಅನಿವಾರ್ಯ. ಒಂದರ್ಥದಲ್ಲಿ ಸಮಾಜವೇ ಅವರನ್ನು ಇಂತಹ ಪರಿಸ್ತಿತಿಗೆ ತಳ್ಳುತ್ತಿದೆ. ಆದರೆ ಅವರಿಗೆ ಎಲ್ಲರಂತೆ ತಮ್ಮ ಆಸೆಯಂತೆ ಬದುಕಲು ಅವಕಾಶ ಸಿಕ್ಕರೆ ಅವರೂ ಸಹ ನಮ್ಮಂತೆಯೇ ಸಾಧನೆ ಮಾಡಲು ಸಾಧ್ಯ ಎಂಬುದನ್ನು ತೋರಿಸಲು ಇಂದು ನಮ್ಮ ನಡುವೆ ಜೀವಂತ ಸಾಕ್ಷಿಯಾಗಿರುವ ತಮಿಳುನಾಡಿನ ಲಿವಿಂಗ್ ಸ್ಮೈಲ್ ವಿದ್ಯಾ ಇದ್ದಾರೆ. ಹುಟ್ಟುತ್ತ ಹುಡುಗನಾಗಿದ್ದ ತಮಿಳುನಾಡು ಮೂಲದ ಶರವಣನ್ ‘ಲಿವಿಂಗ್ ಸ್ಮೈಲ್ ವಿದ್ಯಾ’ ಆಗಿ ಪರಿವರ್ತನೆ ಗೊಳ್ಳುವ ದಾರಿ ನಿಜಕ್ಕೂ ದೊಡ್ಡ ಹೋರಾಟವೇ. ಆ ತ್ರಿಶಂಕು ಜಗತ್ತಿನ ಕಷ್ಟ ನಷ್ಟ, ಲಿಂಗ ಪರಿವರ್ತನೆಯ ರೀತಿನೀತಿ, ಅವರದ್ದೇ ಆದ ಆಚಾರ ವಿಚಾರ ಸಂಪ್ರದಾಯ ಗಳು, ಕುಟುಂಬ ವ್ಯವಸ್ಥೆ ಎಲ್ಲವನ್ನೂ ಈ ಚಿತ್ರ ಸಮರ್ಥವಾಗಿ ಬಿಚ್ಚಿಡುತ್ತದೆ, ಹೀಗೂ ಉಂಟೆ ಎಂಬ ಅಚ್ಚರಿ ಮೂಡಿಸುತ್ತದೆ. ಮೂಲ ಆತ್ಮಕಥೆಯಲ್ಲಿ ಬರುವ ಪುಣೆಯ ಹಿಜಡಾ ಗಲ್ಲಿ, ಕಡಪಾ ದ ಲಿಂಗ ಪರಿವರ್ತನಾ ಕೇಂದ್ರಗಳ ಚಿತ್ರಣ ನಮ್ಮದಲ್ಲದ ಜಗತ್ತಿನ ಸಂಕಟಗಳನ್ನು ಒಳಸುಳಿಗಳನ್ನು ರೋಚಕವಾಗಿ ತೆರೆದಿಡುತ್ತದೆ. ಚಿತ್ರ ನೋಡಿ ಹೊರಬರುವಾಗ ಕೆಲವರಿಗಾದರೂ ಇದು ಮಂಗಳಮುಖಿಯರ ಬಗೆಗಿನ ಅಭಿಪ್ರಾಯ ಬದಲಿಸುವಲ್ಲಿ ಯಶಸ್ವಿಯಾಗುತ್ತದೆ. ನಾವು ಒಂದು ಸಮಾಜವಾಗಿ ಮಂಗಳಮುಖಿಯರ ಕುರಿತು ಆತ್ಮವಿಮರ್ಶೆಗೆ ತೊಡಗಬೇಕಾದ ಅಗತ್ಯವಿದೆ. ಮಂಗಳಮುಖಿಯರಿಗೂ ತಮ್ಮದೇ ಆದ ಬದುಕು ಕಟ್ಟಿಕೊಳ್ಳಲು ಸಮಾಜ ಅವಕಾಶ ಕೊಡಬೇಕಿದೆ. ದೈವಸೃಷ್ಟಿಯಲ್ಲಿ ಎಲ್ಲರಂತೆ ಅವರೂ ಸಮಾನರು ಎಂಬುದನ್ನು ಸಮಾಜ ಗುರುತಿಸಿ ಮನುಷ್ಯ ಸಹಜ ಗೌರವದಿಂದ ಅವರನ್ನು ಕಾಣಬೇಕಿದೆ. ಅಂತಹ ಎಲ್ಲಾ ಪ್ರಯತ್ನಗಳಿಗೆ ಈ ಚಿತ್ರ ನಾಂದಿಯಾಗಲಿ. ಕನ್ನಡದಲ್ಲಿ ಇಂತಹದೊಂದು ಚಿತ್ರ ಬಂದಿದ್ದು ನಿಜಕ್ಕೂ ಹೆಮ್ಮೆಯ ವಿಚಾರ.
ದಯವಿಟ್ಟು ಎಲ್ಲರೂ ಈ ಒಂದು ವಿಭಿನ್ನ ಚಿತ್ರ ನೋಡಿ, ಈ ಅದ್ಭುತ ಪ್ರಯತ್ನವನ್ನು ಬೆಂಬಲಿಸಿ ಎಂಬುದು ನನ್ನ ಕೋರಿಕೆ. ದುಃಖದ ವಿಚಾರವೆಂದರೆ ಈ ಚಿತ್ರಕ್ಕೆ ಹೆಚ್ಚಿನ ಚಿತ್ರಮಂದಿರಗಳು ಶೋಗಳು ಸಿಕ್ಕಿಲ್ಲ, ಒಂದು ವಾರದಲ್ಲಿ ಈ ಚಿತ್ರ ಎಲ್ಲ ಕಡೆಗಳಲ್ಲೂ ಎತ್ತಂಗಡಿ ಆದರೆ ನಿಜಕ್ಕೂ ಬೇಸರದ ಸಂಗತಿ. ಅದನ್ನು ಜನರಿಗೆ ತಲುಪಿಸಲು ನಾವೆಲ್ಲಾ ಹೇಗಾದರೂ ಪ್ರಯತ್ನಿಸೋಣ.
- Ramachandra Hegde Bengaluru
Facebook ಕಾಮೆಂಟ್ಸ್