X
    Categories: ಕಥೆ

ಅಂತಃಕರಣ ಭಾಗ 1

ಬೆಳಗಿನ ಜಾವದಲ್ಲಿ ಮನೆ ಮುಂದಿನ ಚರಂಡಿಯಲ್ಲಿ ಮಳೆ ನೀರು ರಭಸದಿಂದ ಧುಮುಕುವ ಸದ್ದಿಗೆ ಎಚ್ಚರವಾಯಿತು . ಕಣ್ಣು ಉಜ್ಜಿ ಕಿಟಕಿ ಕಡೆ ನೋಡಿದೆ . ಮಳೆ ಜೋರಾಗಿ ಸುರಿಯುತ್ತಿತ್ತು . ಸಣ್ಣಗೆ ಬೆಳಕು ಬಿಟ್ಟಿತ್ತು . ಬೆಳಗೆದ್ದು ಓದಿಕೊಳ್ಳಲು ಈಗ ಏಳಲೋ ಇನ್ನೂ ಸ್ವಲ್ಪ ಹೊತ್ತು ಬಿಟ್ಟು ಏಳಲೋ ಎಂದು ಲೆಕ್ಕಾಚಾರ ಹಾಕುತ್ತಿದ್ದೆ . ತಂದೆಯವರು ಹಾಸಿಗೆ ಮೇಲೆ ಏನನ್ನೋ ಯೋಚಿಸುತ್ತಾ ಕೂತಿದ್ದರು . ಅಮ್ಮ ಆಗಲೇ ಎದ್ದು ಒಲೆಗೆ ಬೆಂಕಿ ಹಚ್ಚಲು ಬೂದಿ ಕೆರೆಯುವುದು ಕೇಳಿಸುತ್ತಿತ್ತು . ಅದೇ ಹೊತ್ತಿಗೆ ಯಾರೋ ಮುಂದಿನ ಬಾಗಿಲಲ್ಲಿ ” ಹೆಗಡೆರೆ ” ಎಂದು ತಂದೆಯವರನ್ನು ಕರೆದರು . ಇಷ್ಟು ಬೆಳಿಗ್ಗೆ ಯಾರು ಬಂದರಪ್ಪ ಎಂದು ಗೊಣಗಿಕೊಳ್ಳುತ್ತಾ ತಂದೆಯ ಕಡೆ ನೋಡಿದೆ . ತಂದೆಯವರೊಡನೆ ಕಾಡು ಹರಟೆ ಕೊಚ್ಚಲು ಅವರ ಸ್ನೇಹಿತರು ಕೆಲವರು ಹೊತ್ತುಗೊತ್ತು ಇಲ್ಲದೆ ಬರುತ್ತಿದ್ದರು. ಹಾಗೇ ಯಾರೋ ಬಂದಿರಬಹುದು ಎಂದುಕೊಂಡೆ . ತಂದೆಯವರು ” ಯಾರು ..? ” ಎಂದರು .

ಬಂದವರು ” ನಾನು ರಾಮಯ್ಯ ” ಎಂದದ್ದು ಕೇಳಿಸಿತು . ರಾಮಯ್ಯ ಅಜ್ಜಿಮನೆ ಹತ್ತಿರ ಇರುವವನು. ನನ್ನ ದೊಡ್ಡ ಮಾವ ವೈದ್ಯಕೀಯ ಓದಿದನೆಂದು ಇವನೂ ವೈದ್ಯಕೀಯ ಓದಲು ಸೇರಿಕೊಂಡಿದ್ದ . ರಜಾ ದಿನಗಳಲ್ಲಿ ನಮ್ಮ ಮನೆಗೆ ಬರುತ್ತಿದ್ದ . ಆದರೆ , ಇಷ್ಟು ಬೆಳಿಗ್ಗೆ ಎಂದೂ ಬಂದಿರಲಿಲ್ಲ . ತಂದೆ ಸಟ್ಟನೆದ್ದು ಬಾಗಿಲು ತೆಗೆದರು . ” ಓ ! ರಾಮಯ್ಯ ಇಷ್ಟು ಬೆಳಿಗ್ಗೆ ….” ಕೆಟ್ಟ ಸುದ್ದಿ ಹೇಳೋಣ ಅಂತ ಬಂದೆ . ” ” ಏನು ? ” ತಂದೆ ಗಾಬರಿಯಿಂದ ಕೇಳಿದರು . ” ಪಾತತ್ತೆ ತೀರಿಕೊಂಡ್ಲು . ” ” ಹೌದಾ ? ನಿನ್ನೆ ಬೆಳಿಗ್ಗೆ ಇಲ್ಲಿ ಬಂದು ಮಗಳನ್ನು , ಮೊಮ್ಮಕ್ಕಳನ್ನು ಕರ್ಕೊಂಡು ಹೋಗಿದ್ದರಲ್ಲ ಮಾರಾಯ . ಅವರಿಗೇನಾಗಿತ್ತು …?

“ಗಂಡನ ಮನೆಯಲ್ಲಿ ಚಿಕ್ಕಮ್ಮನಿಗೆ ಎರಡನೇ ಹೆರಿಗೆಯಾಗಿ ಎರಡು ತಿಂಗಳ ಮೇಲೆ ತಂದೆಯವರು ಚಿಕ್ಕಮ್ಮನನ್ನು ಅವರ ಇಬ್ಬರು ಮಕ್ಕಳನ್ನು ಒಂದು ತಿಂಗಳ ಮಟ್ಟಿಗೆ ಕರೆಸಿಕೊಂಡಿದ್ದರು . ಅಜ್ಜಿಗೆ ನಾನೇ ಮೊನ್ನೆ ಚಿಕ್ಕಮ್ಮ , ಮಕ್ಕಳು ನಮ್ಮ ಮನೆಗೆ ಬಂದ ಸುದ್ದಿ ಮುಟ್ಟಿಸಿ ಬಂದಿದ್ದೆ. ಅಜ್ಜಿ ನಿನ್ನೆ ಬೆಳಿಗ್ಗೆ ಬಂದು ಎರಡು ದಿನದ ಮಟ್ಟಿಗೆಂದು ಮಗಳು , ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು . ಅಜ್ಜಿಯನ್ನು ನಾನು ಕರೆಯಲು ಹೋದಾಗ ಅವಳು ” ಗೋವಿಂದ ಕಾಗದ ಬರೆದಿದ್ದನೆ ? ಹೇಗಿದ್ದಾನಂತೆ ? ” ಎಂದು ಕೇಳಿದಳು . ಮಾವ ಕಾಗದ ಬರೆದಿದ್ದ .  ಚೆನ್ನಾಗಿದ್ದಾನಂತೆ  ಎಂದು ವರದಿ ಕೊಟ್ಟಿದ್ದೆ . ಅಜ್ಜಿ ಮಗನನ್ನು ನೋಡದೇ ಒಂದು ವರ್ಷವಾಗಿತ್ತು . ಮಕ್ಕಳಿಗೆ ಬೇಡವಾದ ತಾನು ಯಾಕೆ ಬದುಕಿರಬೇಕು . ದೇವರು ತನಗೆ ಯಾಕೆ ಸಾವು ಕೊಡುವುದಿಲ್ಲ ಎಂದು ಅಜ್ಜಿ ಕಣ್ಣೀರು ಹಾಕಿದ್ದಳು .

ಅಜ್ಜಿಗೆ ದೊಡ್ಡ ಮಾವನಲ್ಲದೇ ಇನ್ನೂ ಒಬ್ಬ ಗಂಡು ಮಗನಿದ್ದ . ಅವನು ಓದದೆ , ಕೆಲಸವಿಲ್ಲದೆ ಉಂಡಾಡಿಗುಂಡನಂತೆ ನಮ್ಮ ಮನೆಯಲ್ಲಿ ತಿಂದುಂಡುಕೊಂಡು ಇದ್ದ. ಅಣ್ಣ ,ತಮ್ಮ ,ತಂಗಿ ಮೂರು ಜನರೂ ನಮ್ಮ ತಂದೆಗೆ ನಮ್ಮ ತಾಯಿಯನ್ನು ಕೊಟ್ಟು ಮದುವೆಯಾದಾಗ ಅವರ ಜೊತೆಯಲ್ಲೇ ಬಂದಿದ್ದರು . ಚೂಟಿಯಾದ ದೊಡ್ಡ ಮಾವನನ್ನು ನಮ್ಮ ತಂದೆ ಎಸ್ಸೆಸ್ಸೆಲ್ಸಿ ತನಕ ಓದಿಸಿದ್ದರು . ಹಣಕಾಸಿನ ತೊಂದರೆಯಿಂದ ತಂದೆಯವರು ಮುಂದೆ ಅವನನ್ನು ಓದಿಸಲಿಕ್ಕೆ ಆಗಿರಲಿಲ್ಲ . ಅವನು ಅವರಿವರಿಂದ ದೇಣಿಗೆ ಸಂಗ್ರಹಿಸಿ ಹಾಸ್ಟೆಲ್ ಗಳಲ್ಲಿ ಬಟ್ಟೆ , ಊಟ ,ವಿದ್ಯಾರ್ಥಿವೇತನ ಪಡೆದು ವೈದ್ಯಕೀಯ ಓದಿದ್ದ . ತಂದೆಯವರಿಗೆ ಆಗಾಗ ನೂರು ರೂಪಾಯಿಗಳನ್ನು ಕಳುಹಿಸಿ ಎಂದು ಕಾಗದ ಬರೆದು ಹಣ ತರಿಸಿಕೊಳ್ಳುತ್ತಿದ್ದ .ತಂದೆ ಮಾವನಿಗೆ ಬಸ್ ಚಾರ್ಜ್ ಕೊಟ್ಟಿದ್ದೂ ಇದೆ . ಅಜ್ಜಿಯು ಅವರಿವರ ಮನೆಯಲ್ಲಿ ಕೆಲಸ ಮಾಡಿ ಹತ್ತೋ , ಇಪ್ಪತ್ತೋ ರೂಪಾಯಿ ಮಗನಿಗೆ ಕೊಟ್ಟಿದ್ದೂ ಇದೆ .

ಮಾವನಿಗೆ ತಾಯಿಯ ಹಣ ಬೇಕಿತ್ತೆ ಹೊರತು, ತಾಯಿಯೊಂದಿಗೆ ಪ್ರೀತಿ , ವಿಶ್ವಾಸದಿಂದ ಮಾತನಾಡಿ ಗೊತ್ತಿರಲಿಲ್ಲ . ಅಣ್ಣ ತಮ್ಮ ಇಬ್ಬರೂ ತಾಯಿಯನ್ನು ‘ ಪಿರ್ಕಿ ‘ ಎಂದು ಮೊದಲಿಸುವುದು ಇತ್ತು . ಇದರಿಂದ ಬೇಸತ್ತು ಅಜ್ಜಿ , ನನಗೆ ಗಂಡು ಮಕ್ಕಳು ಇಲ್ಲದೆ ಇದ್ರೆ ಚೆನ್ನಾಗಿತ್ತು ಎನ್ನುತ್ತಿದ್ದಳು . ” ನಿನ್ನೆ ಇಲ್ಲಿಂದ ಬಂದವಳೇ ಸಾಗರಕ್ಕೆ ಯಾರದ್ದೋ ಸಂಬಂಧಿಕರ ಮದುವೆ ಅಂತ ಮಗಳು ಮೊಮ್ಮಕ್ಕಳನ್ನು ಕರ್ಕೊಂಡು ಹೋಗಿದ್ದಳಂತೆ . ಅಲ್ಲಿ ಜ್ವರ ಶುರುವಾಗಿ ಮಧ್ಯಾಹ್ನವೇ ವಾಪಸ್ಸು ಬಂದರಂತೆ. ರಾತ್ರಿ ಬಾಯಾರಿಕೆ ಅಂತ ನೀರು ಕುಡಿದು ಮಲಗಿದವಳು ಏಳಲೇ ಇಲ್ವಂತೆ.” ” ಆ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಯಾಕೆ ಮದುವೆಗೆ ಹೋಗಿದ್ದರು ? ” ತಂದೆಯವರೆಂದರು . ತಾಯಿಯ ಸುದ್ದಿ ಕೇಳಿ ಅಮ್ಮ ಅಡಿಗೆ ಮನೆಯಿಂದ ಬಂದಳು .

” ರಾಮಯ್ಯ , ನಿನಗೆ ಯಾರು ಹೇಳಿದ್ದು ಅಮ್ಮ ಸತ್ತು ಹೋಯಿತು ಅಂತ …? ” ” ರಾತ್ರೇನೇ ಪಕ್ಕದ ಮನೆ ಗೋಪಾಲನಿಗೆ ಸುಶೀಲ ಹೇಳಿದಳಂತೆ . ಅವನು ಬೆಳಿಗ್ಗೆ ಬಂದು ತಿಳಿಸಿದ . ” ತಂದೆಯ ತಾಯಿಯ ಕಡೆ ಅಜ್ಜನ ಪ್ರೀತಿಯನ್ನೇ ನಾವು ಮೊಮ್ಮಕ್ಕಳು ನೋಡಿರಲಿಲ್ಲ . ನಾವು ಹುಟ್ಟುವುದಕ್ಕೆ ಮುಂಚೆಯೇ ಅವರು ಸತ್ತು ಹೋಗಿದ್ದರು ಅಜ್ಜಿಯರ ಪ್ರೀತಿಯನ್ನು ಮಾತ್ರ ನಾವು ನೋಡಿದ್ದೆವು . ಅದರಲ್ಲೂ ಒಬ್ಬಳು ಹೋದಳೇ …? ಸತ್ತು ಹೋದ ಅಜ್ಜಿಗೆ ಆಸ್ತಿಯಾಗಿ ಒಂದು ಗೇರು ಮರ ಮನೆಯ ಮುಂದೆಯೂ , ಒಂದು ನುಗ್ಗೆ ಮರ ಮನೆಯ ಹಿಂದೆಯೂ ಇತ್ತು . ಅವು ಹಣ್ಣು , ಕಾಯಿ ಬಿಡುವಾಗ ಅಜ್ಜಿ , ಗೇರು ಹಣ್ಣನ್ನು , ನುಗ್ಗೆ ಕಾಯನ್ನು ಕಳ್ಳರು ಕದಿಯದಂತೆ ಕಾದುಕೊಂಡು ಇರುತ್ತಿದ್ದಳು .ಗೇರು ಹಣ್ಣಾಗುವಾಗ ಹಣ್ಣುಗಳನ್ನು ಮಡಿಲಲ್ಲಿ ತುಂಬಿಕೊಂಡು ನಮಗೆ , ಮೊಮ್ಮಕ್ಕಳಿಗೆ ತಂದು ಕೊಡುತ್ತಿದ್ದಳು . ಇನ್ನಾರು ನಮಗೆ ಅದನ್ನೆಲ್ಲಾ ತಂದು ಕೊಡುವವರು ? ಅಜ್ಜಿಯ ಗುಡಿಸಲು ಕತೆ ಏನು ? ಪ್ರತಿ ವರ್ಷವೂ ಅಜ್ಜಿ ಅವರಿವರ ಕೈಕಾಲು ಕಟ್ಟಿಕೊಂಡು ಗುಡಿಸಲು ಹೊದ್ದಿಸಿ ಬಂದೋಬಸ್ತ್ ಮಾಡಿಕೊಳ್ಳುತ್ತಿದ್ದಳು .ಗುಡಿಸಲು ಉದ್ದ ಅಗಲ ಇದ್ದುದು ಹತ್ತಡಿಯಷ್ಟೇ. ಅಜ್ಜಿ ಅಲ್ಲೇ ಅಡಿಗೆ ಮಾಡಿಕೊಂಡು ಮಲಗೇಲುತ್ತಿದ್ದಳು .

ಅವರಿವರ ಮನೆಯಲ್ಲಿ ಅಡಿಕೆ ಸುಲಿಯುವ ಕಾಯಕ ಮಾಡಿ ಕೈಯಲ್ಲಿ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದಳು . ಮಾವ ಓದಿ ಕೆಲಸಕ್ಕೆ ಸೇರಿದ ಮೇಲೆ ತಾಯಿ ಅಡಿಕೆ ಸುಲಿಯುವುದಕ್ಕೆ ಹೋಗುವುದು ತನ್ನ ಮರ್ಯಾದೆಗೆ ಕಡಿಮೆ,ಜನ ನಗುತ್ತಾರೆಂದು ಅಕ್ಕ ಭಾವನಿಗೆ ಹೇಳಿಕೊಂಡು ಕಣ್ಣೀರು ಹಾಕಿದ್ದ . ತಂದೆಯವರು ಅಜ್ಜಿಗೆ ಇನ್ನು ಅಡಿಕೆ ಸುಳಿಯಲು ಅವರಿವರ ಮನೆಗೆ ಹೋಗ ಕೂಡದೆಂದು ತಾಕೀತು ಮಾಡಿದ್ದರು . ಅಜ್ಜಿಯ ಸಂಪಾದನೆಗೆ ಕಲ್ಲು ಬಿತ್ತು . ಅಜ್ಜಿಗೆ ದಾಯಾದಿಗಳ ಮನೆಯ ಕೆಲಸಗಳೇ ಗಟ್ಟಿಯಾಯಿತು.

ಮುಂದುವರಿಯುವುದು…

Facebook ಕಾಮೆಂಟ್ಸ್

Prabhakar Tamragouri: ಫ್ರೀಲಾನ್ಸ್ ಬರಹಗಾರರಾಗಿದ್ದು ಗೋಕರ್ಣ ನಿವಾಸಿಯಾಗಿದ್ದಾರೆ. ಈವರೆಗೆ 4 ಕಾದಂಬರಿ , 4 ಕಥಾ ಸಂಕಲನ ,2 ಕವನ ಸಂಕಲನ ಒಟ್ಟು 10 ಪುಸ್ತಕಗಳು ಪ್ರಕಟವಾಗಿವೆ .
Related Post