ಯಜ್ಞಾ ಆಚಾರ್ಯರು ನಗರದ ಹೆಸರುವಾಸಿ ಪೂಜಾರಿ. ನೋಡಿದರೆ ಕೈಮುಗಿದು ಬಿಡಬೇಕೆಂಬ ವ್ಯಕ್ತಿತ್ವ. ಎತ್ತರದ ಮೈಕಟ್ಟು, ದೀರ್ಘ ಪ್ರಾಣಾಯಾಮದ ಗತ್ತಿನ ಮುಖ ಮುದ್ರೆ. ಹಣೆಯ ಮೇಲೊಂದು ಗಂಧ ಚಂದನ ಮಿಶ್ರಿತಬೊಟ್ಟು. ದೇವಸ್ಥಾನದ ಪೂಜೆಗೆಂದು
ಯಜ್ಞಾ ಆಚಾರ್ಯರು ತುಂಬ ತಡವಾಗಿ ಅಲ್ಲಿಂದ ಹೊರಟಿದ್ದರಿಂದ ಮನೆಗೆ ಬರಲು ಎರಡು ಘಂಟೆಯ ತಡ ರಾತ್ರಿ.
ಚಿಕ್ಕ ಓಣಿಯಲ್ಲಿ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದರು ಅವರು. ಅರವತ್ತರ ಆಸುಪಾಸು. ಬದುಕಿನ ಬಹಳ ಸಮಯ ದೇವರ ಪೂಜೆ ಜಪ-ತಪಗಳಲ್ಲೇ ಕಳೆದಿದ್ದರು. ದೇವರು ಭಕ್ತನ ಕೈ ಬಿಡುವುದಿಲ್ಲವೆಂದರೂ ಬಡತನ ಜೊತೆಯಾಗಿಯೇನಿಂತಿತ್ತು. ಜೊತೆನಿಂತು ಸಂಭಾಳಿಸಬೇಕಾದ ಅರ್ಧಾಂಗಿ ಅರ್ಧದಲ್ಲಿಯೇ ಶಿವನಪಾದ ಸೇರಿದ್ದಳು ಅದೇನೋ ವಿಪರೀತ ಜ್ವರದ ನೆಪದಿಂದ. ಇದ್ದ ಒಬ್ಬನೇ ಮಗ ಬೈಕ್ ಅಪಘಾತದಲ್ಲಿ ತೀರಿಕೊಂಡಿದ್ದ. ಅಂದಿನಿಂದ ಒಂಟಿತನವೇಜೊತೆಯಾಗಿತ್ತು.
ಬದುಕು ಪೂರ್ತಿ ಅಪಘಾತಗಳನ್ನೇ ಹೊಟ್ಟೆ ತುಂಬಿಸಿಕೊಂಡ ಯಜ್ಞಾ ಭಟ್ಟರಿಗೆ ದೇವರ ಸೇವೆಯಲ್ಲಿನ ಹಸಿವು ಮಾತ್ರ ಇಂಗಿರಲಿಲ್ಲ. ಬುದ್ಧಿ ಬಂದಾಗಿನಿಂದ ಓದಿದ ನೆನಪು ” ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ” “ಕೊಡುವುದು ಕಸಿದುಕೊಳ್ಳುವುದು ಎಲ್ಲವೂ ನೀನೆ, ಎಲ್ಲವೂ ನಿನ್ನದೇ ಎಂದಾದ ಮೇಲೆ ನಾನೇನನ್ನು ಪಡೆದುಕೊಂಡಿಲ್ಲ, ನಾನು ಕಳೆದು ಕೊಳ್ಳುವುದಕ್ಕೆ ಯಾವುದೂ ನನ್ನದಲ್ಲ, ಕರ್ಮ ನನ್ನದು ಫಲ ನಿನ್ನದು.” ಎನ್ನುವ ಚಿತ್ತದಿಂದಬದುಕುತ್ತಿದ್ದರು ನಿರ್ಲಿಪ್ತವಾಗಿ.
ಶಿವ ಶಿವಾ ಎನ್ನುತ್ತಾ ಹೆಗಲ ಮೇಲಿನ ಬಟ್ಟೆಯಿಂದ ಮುಖದಲ್ಲಿ ಸಾಲುಗಟ್ಟಿದ್ದ ಬೆವರು ಸಾಲನ್ನು ಒರೆಸಿಕೊಳ್ಳುತ್ತಾ ನಡಿಗೆಯ ವೇಗವನ್ನು ಹೆಚ್ಚಿಸಿದರು. ರಕ್ತದ ವಾಸನೆ ಹಿಡಿದು ಬೀದಿ ನಾಯಿ ಕಸದ ತೊಟ್ಟಿಗೆ ನೆಗೆದು ತನ್ನ ಎದುರಿಗೆಬಿದ್ದಿದ್ದ ಹಸಿ ರಕ್ತದ ಮುದ್ದೆಯನ್ನು ಕಂಡು ತನ್ನ ಕೋರೆ ಹಲ್ಲುಗಳನ್ನು ಹೊರಚಾಚಿ ಕ್ರೂರವಾಗಿ ಸದ್ದು ಮಾಡತೊಡಗಿತು. ಇನ್ನೂ ಕಣ್ಣು ಸಹ ತೆರೆಯದ ಹಸುಳೆ ತನ್ನ ಕೈ ಕಾಲುಗಳನ್ನು ಬಡಿದು ವಿರೋಧ ವ್ಯಕ್ತಪಡಿಸಿತು. ವಿಶ್ವಾತ್ಮತಾನು ಹುಟ್ಟಿಸುವ ಪ್ರತಿ ಜೀವಿಗೂ ಬದುಕುವುದನ್ನು ಕಲಿಸುತ್ತಾನೆ. ತನ್ನ ಆಲೋಚನೆಗಳನ್ನು ಎದುರಿನವರಿಗೆ ವ್ಯಕ್ತಪಡಿಸುವುದನ್ನು ಹೇಳಿರುತ್ತಾನೆ.
ಆಗಷ್ಟೇ ಹುಟ್ಟಿದ ಮಗು, ನಾಯಿ ಒಳ್ಳೆಯದೋ ಕೆಟ್ಟದ್ದೋ, ತನ್ನನ್ನು ತಿನ್ನುತ್ತದೆಯೋ ಅಥವಾ ತನಗೆ ಎದೆ ಹಾಲನ್ನು ನೀಡುತ್ತದೆಯೋ ಅರ್ಥವಾಗುವುದಿಲ್ಲ. ಆದರೂ ಸುತ್ತಲಿನ ವಾತಾವರಣದ ಅಭೂತ ಚೇತನಗಳು ಆ ಜೀವಕ್ಕೆನಿನ್ನ ಮೇಲೆ ಆಕ್ರಮಣ ನಡೆಯುತ್ತಿದೆ ಹೋರಾಡು ಎಂದು ಪ್ರೇರೆಪಿಸಿದವು. ತನ್ನ ಮೇಲೆ ಅನ್ಯಾಯ ಜರುಗುತ್ತಿದೆ ಎಂದರೆ ಪ್ರತಿಯೊಂದೂ ಜೀವಿಯೂ ಪ್ರತಿಭಟಿಸುತ್ತದೆ. ಆದರೆ ಅದು ಅವರವರ ಸ್ಥಿತಿ ಸಂದರ್ಭ ಮತ್ತುಶಕ್ತಿಗನುಸಾರವಾಗುತ್ತದೆ. ದುರ್ಬಲ ಮತ್ತು ಬುದ್ಧಿ ರಹಿತ ಜೀವಿಗಳು ಪ್ರಬಲರ ವಿರುದ್ಧ ಸೋಲುತ್ತವೆ, ಸಾಯುತ್ತವೆ. ಆದರೂ ಅವು ಪ್ರತಿಭಟಿಸುತ್ತವೆ. ಕೆಲವೊಮ್ಮೆ ಪ್ರಬಲ ಜೀವಿಗಳು ತಮ್ಮ ಅಸ್ತಿತ್ವವನ್ನೇಕಳೆದುಕೊಂಡಿರುವುದುಂಟು. ಅನಾದಿಯಲ್ಲಿ ಭೂಮಿಯ ಬಹಳಷ್ಟು ಭಾಗ ಆವರಿಸಿಕೊಂಡಿದ್ದ ಡೈನೋಸಾರ್ ಗಳು ಈಗ ಮಣ್ಣೊಳಗಿನ ಪಳೆಯುಳಿಕೆಗಳು ಮಾತ್ರ.
ವಿಶ್ವದಲ್ಲಿ ದುರ್ಬಲ ಜೀವಿಗಳು ಮಾತ್ರವಲ್ಲ ಪ್ರಬಲ ಜೀವಿಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆಯೆಂದಾಯಿತು. ಆದರೂ ದುರ್ಬಲ ಜೀವಿಗಳು ಹೇಗೆ ಇನ್ನೂ ಜೀವ ಹಿಡಿದಿಟ್ಟುಕೊಂಡಿವೆ? ? ಅದೇ ವಿಶ್ವಾತ್ಮನ ” ಬದುಕುವ ನೀತಿ”.ವಿಶ್ವಾತ್ಮನಿಗೆ ಅತ್ಯಂತ ಪ್ರಬಲರು ಬೇಡ, ದುರ್ಬಲರು ಬೇಡ.
ಯಾವನು ತನ್ನ ಯೋಚನೆಗಳನ್ನು ಪರಿಪೂರ್ಣ ಕ್ರಿಯೆಗಳಾಗಿ ಬದಲಾಯಿಸುತ್ತಾನೋ ಅವನು, ಯಾವನು ಎಲ್ಲರ ಮಾತುಗಳನ್ನೂ ಕೇಳಿ ತನ್ನ ಮನಸಿನ ಮಾತುಗಳಂತೆ ನಡೆಯುತ್ತಾನೋ ಅವನು.. ಅವನು ಮಾತ್ರವೇ ಪ್ರಬಲ.
ಆತನಿಗೆ ವಿಶ್ವಾತ್ಮ ಬದುಕಲು ಪ್ರೇರೇಪಿಸುತ್ತಾನೆ. ಇನ್ನುಳಿದ ಕೆಲವು ಜೀವಿಗಳು ತಮ್ಮ ಪ್ರಬಲತೆಯನ್ನು ಇನ್ನೊಬ್ಬರ ಮೇಲೆ ಸವಾರಿ ನಡೆಸಲು ಬಳಸುತ್ತವೆಯೋ, ಇಂಥ ದಬ್ಬಾಳಿಕೆಯನ್ನು ತಡೆಯಲು ಮನಸ್ಸುಮಾದದವುಗಳೆಲ್ಲವೂ ದುರ್ಬಲರೆ ವಿಶ್ವಾತ್ಮನಿಗೆ.
ಕಸದ ತೊಟ್ಟಿಯಲ್ಲಿದ್ದ ಮಗು ತನಗೆ “ಬದುಕುವ ನೀತಿ” ತಿಳಿದಿದೆ, ತಾನು ಪ್ರಬಲ ಎನ್ನುವಂತೆ ಕೈ ಕಾಲು ಬಡಿದು ಗಟ್ಟಿಯಾಗಿ ಅತ್ತಿತು. ನಾಯಿ ತನ್ನ ಆಹಾರವೇ ಸದ್ದು ಮಾಡುವುದು ಕೇಳಿ ಸ್ವಲ್ಪ ಭಯದಿಂದಲೇ ಹೆಜ್ಜೆಯನ್ನುಮುಂದಿಡತೊಡಗಿತು. ಆ ಕೂಗು ಕೇಳಿಸಿದ್ದು ಅಲ್ಲೇ ಹತ್ತಿರದಲ್ಲಿ ಬಿರುನಡಿಗೆಯಲ್ಲಿದ್ದ ಯಜ್ಞಾ ಭಟ್ಟರ ಕಿವಿಗೆ.
ಭ್ರಮೆಯೆಂದು ಭಾವಿಸಿ ಮುಂದೆ ಸಾಗಬೇಕೆಂದಿದ್ದ ಭಟ್ಟರ ಹೆಜ್ಜೆಗಳು ಮುಂದಿಡಲಾಗಲಿಲ್ಲ. ಅದು ಮಗುವಿನ ಅಳುವೇ ಎಂದು ನಿರ್ಧರಿಸಿ ಸದ್ದು ಬರುತ್ತಿರುವ ಕಡೆ ಲಗುಬಗೆಯಿಂದ ಹೆಜ್ಜೆಯಿಕ್ಕಿದರು. ಏನಾದರೂ ಸರಿ ಸೇವಿಸಿಯೇ ಸಿದ್ಧಎಂಬಂತೆ ನಾಯಿ ತನ್ನ ಕೋರೆಯನ್ನು ಮಗುವಿನ ಆಳಕ್ಕೆ ಇಳಿಸಲು ಸಿದ್ಧವಾಗುತ್ತಿದ್ದರೆ ಪಕ್ಕದಲ್ಲೇ ಮನುಷ್ಯನ ಏದುಸಿರು ಕೇಳಿ ಆಹಾರ ತನಗೆ ಸಿಗದೆಂದು ತಿಳಿದು ಅದರ ಹೊಟ್ಟೆಯ ಹಸಿವು ಅಲ್ಲಿಯೇ ಇಂಗಿ ಹೋಯಿತು.ಪರಿಸ್ಥಿತಿಯ ಅರಿವಾದ ಯಜ್ಞಾ ಭಟ್ಟರು ಅಸಹ್ಯ ಧ್ವನಿಯಲ್ಲಿ ನಾಯಿಯನ್ನು ದೂರ ಓಡಿಸಿದರು.
ವಾಸನೆಯಿಂದ ತುಂಬಿ ಹೋಗಿದ್ದ ತೊಟ್ಟಿಯ ಬಳಿ ಧಾವಿಸಿದರು. ಓಡಿಹೋದ ನಾಯಿ ತನ್ನವರ ಜೊತೆ ಸೇರಿ ಕೂಗತೊಡಗಿತು. ಪಾಲಿನ ಭಿಕ್ಷೆ ಯಾರದೋ ಪಾಲಾಗುತ್ತಿದ್ದರೆ ಯಾವ ಜೀವಿ ಮೌನವಾಗಿರಲು ಸಾಧ್ಯ?? ಯಜ್ಞಾಭಟ್ಟರು ಮುನ್ಸಿಪಾಲಟಿಯವರಿಗೂ ನಾಲ್ಕು ಮಾತು ಹೇಳಿ ತೊಟ್ಟಿಯಲ್ಲಿ ಇಣುಕಿ ಮಗುವಿನ ಮೇಲೆ ಬಿದ್ದಿದ್ದ ಕಸ ಸರಿಸಿ ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡರು. ಶಿವ ಶಿವಾ ಇದೇನು ಕಾಲ ಬಂದಿದೆ, ಕಲಿಯುಗವೆಂದರೆ ಇದೇಇರಬೇಕು ಎಂದುಕೊಂಡು ತೊಟ್ಟಿಯಿಂದ ಈಚೆ ಸರಿದರು.
ದೂರದಲ್ಲಿ ನಿಂತ ನಾಯಿಗಳು ಈತನನ್ನು ಓಡಿಸುವುದು ಹೇಗೆ ಎಂದು ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದವು.
ಮುಂದೇನು ಮಾಡಬೇಕು, ಯಾರ ಮಗುವಿರಬಹುದು ಎಂಬ ಯೋಚನೆಗಳಿಂದ ಭರಿತರಾಗಿ ಒಂದೆರಡು ಕ್ಷಣ ಅಲ್ಲಿಯೇ ನಿಂತರು. ಅವರ ಹೃದಯ ಬಡಿತ ಜೋರಾಗುತ್ತಿತ್ತು. ಆಲಿಸಿದರೆ ಆ ರೌರವ ಮೌನದಲ್ಲಿ ಅವರ ಹೃದಯಬಡಿತ ಕೇಳುತ್ತಿತ್ತೇನೋ?? ಆಲಿಸುವವರಾರು..??
ಹೆಗಲ ಮೇಲಿನ ಅಂಗವಸ್ತ್ರದಿಂದ ಮಗುವಿನ ಮೈ ಒರೆಸಿದರು. ಮಗು ಉಸಿರು ಬಂದ ಕ್ಷಣದಿಂದಲೇ ಬದುಕಿನ ಜೊತೆ ಹೋರಾಟ ನಡೆಸುತ್ತಿತ್ತು. ಇದೇ ವಿಶ್ವಾತ್ಮನ ಬದುಕುವ ನೀತಿ. ಮಗು ಕೈ ಕಾಲು ಬಡಿಯುವುದನ್ನುಅಳುವುದನ್ನು ನಿಲ್ಲಿಸಿ ಬೆಚ್ಚನೆಯ ಅಂಗೈ ಮೇಲೆ ಮುಗ್ಧವಾಗಿ ಮಲಗಿತ್ತು. ಭರವಸೆಯ ಹಿಡಿತದಲ್ಲಿ ತನ್ನನ್ನು ಕಳೆದುಕೊಂಡ ಭಾವ ಮಗುವಿಗೆ.
ಯಜ್ಞಾ ಭಟ್ಟರದು ಏಕಾಂಗಿ ಪಯಣ.ಮಗುವಿನ್ನದು ಒಂಟಿ ಹೋರಾಟ.ಒಂದು ಒಂಟಿ ಜೀವಕ್ಕೆ ಇನ್ನೊಂದು ಒಂಟಿ ಜೀವ ಜೊತೆಯಾಯಿತು. ವಿಶ್ವಾತ್ಮ ಒಂಟಿತನವನ್ನು ಸಹಿಸುವುದಿಲ್ಲ, ಕೂಡಿ ಬಾಳುವುದನ್ನು ಬಯಸುತ್ತದೆ.ಏನಾದರಾಗಲಿ ಭಗವಂತನಿರುವವರೆಗೆ ಭಯವೇಕೆ ಎಂದು ಮಗುವನ್ನು ಎದೆಗವಚಿಕೊಂಡು ಮನೆಯ ಕಡೆ ಹೆಜ್ಜೆ ಹಾಕಿದ ಭಟ್ಟರ ಮನಸ್ಸಿನಲ್ಲೂ ಆನಂದದ ಹಣತೆ ಹಚ್ಚಿಕೊಂಡಂತೆ. ಹೆಜ್ಜೆ ಬಿರುಸಾಗಿದ್ದರೂ ನಿರಾಳವಾಗಿತ್ತುಉಸಿರು.
ಮತ್ತೆಲ್ಲೋ ನಾಯಿಯ ರೋದನ ಕೇಳಿದ ಕಸದ ತೊಟ್ಟಿಯೆದುರಿನ ಗುಂಪು ಸಹಾಯಕ್ಕೆಂದು ಅತ್ತ ಕಡೆ ಓಡಿದವು. ” ಕೊಟ್ಟು ಕಸಿಯುವುದಲ್ಲ ವಿಶ್ವಾತ್ಮನ ನೀತಿ, ಒಂದು ಕಡೆ ಕಸಿದುಕೊಂಡರೆ ಇನ್ನೊಂದೆಡೆ ನೀಡಿರುತ್ತಾನೆ”ಪ್ರಬಲವಾಗಿದ್ದ ಮಗುವಿಗೆ ಬದುಕಿನ ದಾರಿ ತೋರಿಸಿದ ವಿಶ್ವಾತ್ಮ ಅಸಹಾಯಕ ಹೆಣ್ಣು ದೇಹವನ್ನು ನಾಯಿಗಳಿಗೆ ಆಹಾರ ಮಾಡಿದ.
ಎರಡು ದಾರಿಗಳು ಕೂಡುವಲ್ಲಿ ನಿಂತು ನೋಡುತ್ತಲೇ ಇದ್ದ ವಿಶ್ವಾತ್ಮ ಅವನದೇ ಸೃಷ್ಟಿಯ ವೈಚಿತ್ರ್ಯಗಳನ್ನು. ನಾಯಿಗಳು ಆಹಾರಕ್ಕೆ ಮುಗಿಬಿದ್ದು ತಮ್ಮ ಹೊಟ್ಟೆ ತುಂಬುವ ಪ್ರಯತ್ನ ನಡೆಸುತ್ತಿದ್ದರೆ ಒಂಟಿ ಜೀವ ಜೊತೆ ಬಯಸಿಜಂಟಿಯಾಗುವ ದೊಡ್ಡತನ ಮನುಷ್ಯನದು. ಇದಕ್ಕೆ ಕಾರಣ ಅವನ ಯೋಚನಾಲಹರಿ, ಕನಸುಗಳ ಮೇಲಿನ ಸವಾರಿ. ಸುತ್ತಲಿನ ಚರಾಚರಗಳು ಎರಡೂ ವೈಪರಿತ್ಯವನ್ನೂ ನೋಡುತ್ತಲೇ ಇದ್ದವು.
ಭಟ್ಟರು ಅದೇ ದಾರಿಯಲ್ಲಿ ಮುಂದೆ ಸಾಗಿ ಶೂನ್ಯವಾದರು. ನಾಯಿಗಳು ಮತ್ತೆ ಹಸಿಯುವ ತನಕ ಹುಡುಕುವ ಕೆಲಸವಿಲ್ಲವೆಂದು ಅಲೆಯತೊಡಗಿದವು. ರಾತ್ರಿಯ ಲೋಡ್ ಶೆಡ್ಡಿಂಗ್ ನೆಪದಲ್ಲಿ ಬೀದಿ ಬೀದಿಗಳಲ್ಲಿ ಕತ್ತಲು ತನ್ನಛಾಯೆಯನ್ನು ಹರಡಿತು. ವಿಶ್ವಾತ್ಮ ತನ್ನ ಕೆಲಸವಾದಂತೆ ಅಲ್ಲಿಂದ ಜಾರಿಕೊಂಡ. ಪೂರ್ತಿ ಕತ್ತಲು ಆವರಿಸಿಕೊಂಡಿತ್ತು. ಇಂಥದೇ ಕತ್ತಲಿಗೆ ಹೆದರಿದ ಮಗು ಸಾವಿರ ವರ್ಷಗಳ ನಂತರ ಕತ್ತಲೆಯೇ ಇಲ್ಲದಂತೆ ಮಾಡುತ್ತದೆ ಎಂದುಯೋಚಿಸಿರಲಿಲ್ಲ ಒಬ್ಬನ ಹೊರತಾಗಿ.
ವಿಶ್ವಾತ್ಮನ ಕನಸು ಗರಿಗೆದರಿತು.
Facebook ಕಾಮೆಂಟ್ಸ್