ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಡಿಕೆ ಕೃಷಿಕರು ಮಳೆಗಾಲ ಬಂದ ಕೂಡಲೆ ಟರ್ಪಾಲಿನ್ ಹೊದೆಸಿ ತಯಾರಿಸುವ ಬಿಸಿಲು ಮನೆ ( ಡೂಮ್) ಈಗಂತು ಹತ್ತಾರು ರೀತಿಯಲ್ಲಿ ಬಳಕೆಯಾಗುತ್ತಿದೆ. ಇದು ಅಡಿಕೆ ಕೃಷಿಕರಿಗೆ ಪರಿಚಯವಾದದ್ದು ಇತ್ತೀಚೆಗೆ. ಮಳೆಗಾಲದಲ್ಲಿ ಸಿಗುವ ಹಣ್ಣಡಿಕೆಯನ್ನು ಒಣಗಿಸುವುದು ಇದರ ಮೂಲ ಉದ್ದೇಶ. ಮಳೆಗಾಲದ ಅಡಿಕೆಗಳಿಗೆ ಹಿಂದೆಲ್ಲ ಹೊಗೆಯಾಡುವ ಮನೆಯ ಅಟ್ಟಗಳೊ, ಬಚ್ಚಲು ಮನೆಯ ಅಟ್ಟಗಳೊ ಬಳಕೆಯಾಗುತ್ತಿದ್ದವು. ಆಧುನಿಕ ಕಾಲಘಟ್ಟದಲ್ಲಿ ಹೊಸವಿನ್ಯಾಸದ ಮನೆಗಳ ಪರಿಕಲ್ಪನೆ ಮತ್ತು ಅಡುಗೆಗೆ ಗ್ಯಾಸ್ ಬಳಕೆ, ಸ್ನಾನಕ್ಕೆ ಸೋಲಾರ್ ಕ್ರಾಂತಿ ಪಸರಿಸಿದ ಮೇಲೆ ಹಳ್ಳಿಗಳ ಜನ ಬಹಳಷ್ಟು ಬದಲಾದರು. ತಮ್ಮ ವ್ಯವಸ್ಥೆಗಳಲ್ಲಿಯೂ ಕ್ರಾಂತಿಕಾರಕ ಬದಲಾವಣೆಗಳನ್ನು ತಂದುಕೊಂಡರು. ಬದಲಾವಣೆಯ ಗಾಳಿಯ ತೀವ್ರತೆಗೆ ಮಳೆಗಾಲದಲ್ಲಿ ಹಣ್ಣಡಿಕೆ ಒಣಗಿಸುವ ಹೊಗೆ ಅಟ್ಟಗಳು ಮಾಯವಾದವು. ಹೊಸ ಹೊಸ ಆವಿಷ್ಕಾರಗಳು, ಕೃಷಿಪರ ಸಂಶೋಧನೆಗಳು ಹೆಚ್ಚಿದಂತೆ ವೈಜ್ಞಾನಿಕ ಕ್ರಮಗಳತ್ತ ಕೃಷಿಪದ್ಧತಿಗಳು ತೆರೆದುಕೊಂಡವು. ಈ ಪರಿವರ್ತನೆಯ ಒಂದು ಭಾಗ ಪ್ರತಿ ಅಡಿಕೆ ಕೃಷಿಕರ ಮನೆಯಂಗಳದಲ್ಲಿ ಎದ್ದುನಿಂತಿರುವ ಬಿಸಿಲು ಮನೆಗಳು. ಬೆಚ್ಚಗಿನ ವಾತಾವರಣ, ಹತ್ತು ಘಂಟೆಯ ನಂತರ ಒಳ ಹೊಕ್ಕರೆ ಬೆವರಿಳಿಸುವ ಹವೆ, ಹೊರಗೆ ಬಿಸಿಲು ಬಂದಿರುವಾಗ ಬಿಸಿಲು ಮನೆಯನ್ನು ಪ್ರವೇಶಿಸಿದವರು ತಲೆತಿರುಗಿ ಬೀಳುವಷ್ಟು ಒಳಗೆ ಬಿಸಿಯೇರುವುದು ಬಿಸಿಲು ಮನೆಯ ಪವರ್.
ಹಣ್ಣಡಿಕೆಗೆಗಾಗಿ
ಮಳೆಗಾಲದಲ್ಲಿ ತೋಟದಿಂದ ಸಂಗ್ರಹಿಸಲು ಸಾಧ್ಯವಾಗುವ ಹಣ್ಣಡಿಕೆಯನ್ನು ಬಿಸಿಲು ಮನೆಯ ಒಳಗೆ ನೆಲದಲ್ಲಿಯೊ, ಅಟ್ಟಳಿಕೆಯಲ್ಲಿಯೊ ಹರಡಿದರೆ ಸುಮಾರು ಒಂದು ವಾರದಲ್ಲಿ ಹವಾಮಾನಕ್ಕೆ ಹೊಂದಿಕೊಂಡು ಹಣ್ಣಡಿಕೆಯ ಸಿಪ್ಪೆಯನ್ನು ಒಣಗಿಸಿಬಿಡುವ ತಾಕತ್ತು ಬಿಸಿಲು ಮನೆಗಳಿಗಿವೆ. ಮೊದಲೆಲ್ಲ ಮನೆಯ ಮಹಡಿಯ ಮೇಲೆ ಹರಡಿದರೆ ಮಳೆ ಜೋರಿದ್ದ ದಿನಗಳಲ್ಲಿ ಅಲ್ಲಿಯೆ ಕೊಳೆತು ಗಬ್ಬು ವಾಸನೆ ಮನೆಯೊಳಗೆಲ್ಲ ತುಂಬುವುದು, ಹಣ್ಣಡಿಕೆಯಲ್ಲಾದ ಹುಳಗಳು ಮನೆಯ ಅಟ್ಟದಿಂದ ಕೆಳಗೆ ಬೀಳುವುದು ಮುಂತಾದ ಸಮಸ್ಯೆಗಳು ಹೆಚ್ಚಿದ್ದವು. ಈಗ ಜೋರು ಮಳೆ ಸುರಿಯುವ ದಿನಗಳನ್ನು ಹೊರತುಪಡಿಸಿದರೆ ಬಿಸಿಲು ಮನೆಯೊಳಗೆ ಹಣ್ಣಡಿಕೆಗಳು ಕೊಳೆತದ ಸಮಸ್ಯೆಯಿಲ್ಲದೆ ಸೇಫ್. ಮಳೆಗಾಲದಲ್ಲಿ ಗಾಳಿಗೆ ಅಡಿಕೆ ಮರಗಳು ಮುರಿದು ಬಿದ್ದರೆ ಅದರಲ್ಲಿ ಸಿಗುವ ಎಳೆ ಅಡಿಕೆಗಳನ್ನು ಕೂಡ ಬಿಸಿಲು ಮನೆಯೊಳಗೆ ಹಾಕಿಬಿಡುತ್ತಾರೆ. ಹಣ್ಣಡಿಕೆಯಷ್ಟು ಬೇಗ ಅಲ್ಲದಿದ್ದರೂ ಒಂದಷ್ಟು ದಿನಗಳಲ್ಲಿ ಈ ಹಸಿ ಅಡಿಕೆಗಳು ಒಣಗಿ ಸಿಗುತ್ತವೆ. ಒಂದು ವಾರಗಳ ಕಾಲ ಬಿಸಿಲು ಜೋರಿದ್ದರೆ ಬಿಸಿಲು ಮನೆಯೊಳಗೆ ಹಾಕಿದ ಅಡಿಕೆ ಬಹಳ ಬೇಗನೆ ಸುಲಿದು ಬಿಡುವಷ್ಟು ಒಣಗುತ್ತವೆ.
ಜಾಯಿಕಾಯಿಗಂತು ಸೂಪರ್
ಜಾಯಿಕಾಯಿ ಬೆಳೆದವರಿಗೆ ಯಾವತ್ತೂ ಕಷ್ಟಗಳೆ. ಯಾಕೆಂದರೆ ಜಾಯಿಕಾಯಿ ಬಲಿತು ಹಣ್ಣಾಗುವುದು ಸರಿಯಾದ ಮಳೆಗಾಲದಲ್ಲಿಯೆ. ಮರದಲ್ಲಿ ಒಡೆದು ನಿಂತ ಕಾಯಿಗಳನ್ನು ಕಿತ್ತು ಸಂಗ್ರಹಿಸುವ ಅಭ್ಯಾಸ ಇದ್ದವರಿಗಾದರೆ ತೊಂದರೆಯಿಲ್ಲ. ಇಲ್ಲದೆ ಹೋದರೆ ಜಾಪತ್ರೆಗಳು ಮಳೆಗೆ ಕೊಳೆತು ಬಹಳಷ್ಟು ನಷ್ಟ ಕೃಷಿಕರಿಗೆ ತಂದುಕೊಡುತ್ತವೆ. ಈ ರೀತಿ ಮಳೆಗಾಲದಲ್ಲಿ ಸಿಗುವ ಜಾಯಿಕಾಯಿಗಳನ್ನು ಜಾಪತ್ರೆಯಿಂದ ಬೇರ್ಪಡಿಸಿ ಸರಿಗೆ ಬಲೆಗಳಲ್ಲಿ, ಅಲ್ಯೂಮಿನಿಯಂ ಟ್ರೇಗಳಲ್ಲಿ, ಬಟ್ಟಿಗಳಲ್ಲಿ ಹರಡಿದರೆ ಬಹಳ ಬೇಗನೆ ಒಣಗುತ್ತವೆ. ನೆಲದಲ್ಲಿ ಹರಡಿದರೂ ಒಣಗಿ ಸಿಗುತ್ತವೆ. ಬಿಸಿಲು ಮನೆಯೊಳಗೆ ಹರಡುವಾಗ ಮಾತ್ರ ಎರಡೆರಡು ದಿವಸ ಸಂಗ್ರಹಿಸಿ ತಂದ ಕಾಯಿಗಳನ್ನು ಪ್ರತ್ಯೇಕ ರಾಶಿಗಳಲ್ಲಿ ಹರಡುವುದು ಅಗತ್ಯ. ಒಂದು ವಾರದ ಜಾಯಿಕಾಯಿಗಳನ್ನು ಒಟ್ಟಿಗೆ ಹಾಕಿದರೆ ಅವುಗಳಲ್ಲಿ ಮೊದಲು ಹೆಕ್ಕಿ ತಂದವುಗಳ ಸಿಪ್ಪೆ ಬಿಸಿಲು ಹೆಚ್ಚಾಗಿ ಒಡೆದು ಹೋಗುತ್ತವೆ. ಸಿಪ್ಪೆ ಒಡೆದು ಹೋದ ಜಾಯಿಕಾಯಿಗೆ ಹುಳದ ಕಾಟ ಹೆಚ್ಚು. ಸಿಪ್ಪೆ ಒಡೆದು ಹೋದರೆ ಜಾಯಿಕಾಯಿ ಗುಣಮಟ್ಟ ಕಳೆದುಕೊಂಡಂತೆ ಕೂಡ. ಬೇರೆ ಬೇರೆ ರಾಶಿ ಹಾಕಿ ಒಣಗಿಸಿದರೆ ಮೊದಲು ಹೆಕ್ಕಿ ತಂದವುಗಳನ್ನು ಬಿಸಿಲು ಮನೆಯಿಂದ ತೆಗೆದು ದಾಸ್ತಾನು ಮಾಡಬಹುದು. ಜಾಯಿಕಾಯಿಗೆ ಬಿಸಿಲು ಮನೆ ಸೂಪರ್ ಆದಂತೆ ಜಾಪತ್ರೆಗೆ ಅಲ್ಲ. ಜಾಪತ್ರೆಯನ್ನು ಬಿಸಿಲು ಮನೆಯೊಳಗೆ ಹಾಕಿದರೆ ಅದು ಬಣ್ಣಕಳೆದುಕೊಳ್ಳುತ್ತದೆ. ಬಣ್ಣ ಕಳೆದುಕೊಂಡ ಪತ್ರೆಗೆ ಬೆಲೆ ಬಹಳಷ್ಟು ಕಡಿಮೆ.
ರಬ್ಬರ್ ಹಾಳೆಗಳಿಗೆ
ಮಳೆಗಾಲದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವುದಾದರೆ ಹಾಳೆಗಳನ್ನು ಹೊಗೆಮನೆಯೊಳಗೆ ಹಾಕುವ ಮೊದಲು ಬಿಸಿಲು ಮನೆಗಳಲ್ಲಿ ಎರಡು ಮೂರು ದಿವಸ ಹಾಕುತ್ತಾರೆ. ಕೆಲವು ಕೃಷಿಕರು ಅಡಿಕೆಗಿಂತ ಹೆಚ್ಚು ರಬ್ಬರ್ ಹಾಳೆಗಳನ್ನು ಒಣಗಿಸುವ ಉಪಯೋಗಕ್ಕೆಂದು ಬಿಸಿಲು ಮನೆಗಳನ್ನು ಬಳಕೆ ಮಾಡುವುದುಂಟು. ಬಿಸಿಲು ಮನೆಯೊಳಗೆ ಒಣಗಿದ ರಬ್ಬರ್ ಹಾಳೆಗಳನ್ನು ನಂತರ ಹೊಗೆ ಮನೆಗಳಿಗೆ ವರ್ಗಾಯಿಸಿದರೆ ಅಂತಹ ಹಾಳೆಗಳು ಉತ್ತಮ ದರ್ಜೆಯ ಹಾಳೆಗಳಾಗುತ್ತವೆ. ಕೇವಲ ರಬ್ಬರ್ ಹಾಳೆಗಳೆಂದಲ್ಲ. ಸ್ಕ್ರಾಫ್ ಒಣಗಿಸಲು ಕೂಡ ಬಳಕೆ ಮಾಡಬಹುದು.
ಬಟ್ಟೆ ಒಣಗಿಸಲು
ಅಡಿಕೆ ಒಣಗಲಿ ಬಿಡಲಿ ಮನೆಮಂದಿಯ ಬಟ್ಟೆ ಬರೆಗಳನ್ನು ಒಣಗಿಸಲು ಬಿಸಿಲು ಮನೆ ನೆರವಾಗುವುದು ಗರಿಷ್ಠ ಮಟ್ಟದಲ್ಲಿ. ಎಷ್ಟು ದಪ್ಪದ ಬಟ್ಟೆಯಾದರೂ ಬಹಳ ಬೇಗನೆ ಇದರೊಳಗೆ ಒಣಗಿ ಸಿಗುತ್ತದೆ. ಕೆಲವು ಕೃಷಿಕರು ಹಪ್ಪಳ , ಸೆಂಡಿಗೆಯಂತವುಗಳನ್ನು ಒಣಗಿಸಲು ಬಿಸಿಲು ಮನೆಯ ಮೊರೆಹೋಗುವುದಿದೆ.
ಕೇವಲ ಅಡಿಕೆ ಕೃಷಿಕರೆಂದಲ್ಲ. ಇದರ ಬಹೂಪಯೋಗಿ ಗುಣಗಳನ್ನು ಗಮನಿಸಿದರೆ ಯಾರೂ ಇಂತವುಗಳನ್ನು ಮನೆಯಂಗಳದಲ್ಲಿ ರಚಿಸಿಕೊಂಡು ಪ್ರಯೋಜನ ಪಡೆಯಬಹುದು.
Facebook ಕಾಮೆಂಟ್ಸ್