ಜೀವನದ ಪಯಣದಲ್ಲಿ ಸಿಗುವ ಕೆಲವು ಸಹ ಪ್ರಯಾಣಿಕರ ನೆನಪುಗಳು ಅಚ್ಚೊತ್ತಿದಂತೆ ಉಳಿದು ಹೋಗುತ್ತವೆ. ಅವುಗಳ ಪ್ರಭಾವ ಕೂಡ ಹಾಗೆ ಅಚ್ಚೊತ್ತಿದಂತೆ ಉಳಿದು ಹೋಗುತ್ತದೆ.
ಬೆಂಗಳೂರಿನಿಂದ ತುಂಬಾ ದೂರವಲ್ಲದ ನನ್ನ ಊರು ಚಿತ್ರದುರ್ಗಕ್ಕೆ ಪ್ರತಿ ಸಲ ಹೋಗುವಾಗಲೂ ಟಿಕೆಟ್ ಬುಕ್ ಮಾಡಿಸಿಕೊಂಡೆ ಹೋಗುತಿದ್ದೆ. ಈ ವರ್ಷ ಹಬ್ಬದಸಡಗರ ಜೋರಿದ್ದುದ್ದರಿಂದ ಮತ್ತು ಎಲ್ಲರೂ ತಮ್ಮ ತಮ್ಮ ಊರುಗಳಿಗೆ ರಜೆ ತೆಗೆದುಕೊಂಡು ಮಂಗಳವಾರ (Sep 15) ಹೋಗಲು ನಿಶ್ಚಯಿಸಿದ್ದರಿಂದಲೊ ಏನೋನನಗೆ ಬುಕ್ ಮಾಡಿಸಲು ಸೀಟ್ ಸಿಗಲಿಲ್ಲ. ಹಬ್ಬದ ಸಂಭ್ರಮ ಹಾಗೂ ಊರಿಗೆ ಹೋಗುವ ಸಡಗರದಲ್ಲಿದ್ದ ನನಗೆ ಇದ್ಯಾವುದೂ ಲೆಕ್ಕಕ್ಕೆ ಬರಲೇ ಇಲ್ಲ.ಮಂಗಳವಾರ ಆಫೀಸ್ ಬೇಗ ಮುಗಿಸಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮಜೆಸ್ಟಿಕ್ ತಲುಪಿದ ನಾನು, ಹೊರಡಲು ಅನುವಾಗಿದ್ದ KSRTC ಬಸ್ ಏರಿದೆ . ಆಲ್‌ಮೋಸ್ಟ್ ಫುಲ್ ಆಗಿದ್ದ ಬಸ್ ಅಲ್ಲಿ ಒಂದು ಸೀಟ್ ಖಾಲಿ ಸಿಕ್ಕಿದ್ದು ಖುಷಿಯಾಗಿ ವಿಂಡೊ ಸೀಟ್ ಅಲ್ಲದಿದ್ದರೂ ಕುಳಿತುಕೊಂಡೆ.
ಎಂದಿನಂತೆ ಆಗುಂತುಕರೊಂದಿಗೆ ಹೆಚ್ಚು ಮಾತನಾಡದ ನಾನು ಒಂದು ನಿದ್ದೆ ತೆಗೆದೆ. ಮಲಗುವ ಮುನ್ನ ಹಾಗೂ ಮಲಗಿ ಎದ್ದ ನಂತರ ನನ್ನ ಪಕ್ಕದ ಸೀಟ್‌ನಲ್ಲಿ ಕುಳಿತ ಹುಡುಗನನ್ನು ಗಮನಿಸಿ ತಿಳಿದ ವಿಷಯವೇನೆಂದರೆ ಆತ ಯಾರಿಗೋ ಪದೇ ಪದೇ ಕಾಲ್ ಮಾಡುತಿದ್ದಾನೆ, ಮತ್ತು ಆ ಕಡೆ ಇರುವ ವ್ಯಕ್ತಿ ಕಾಲ್ ರಿಸೀವ್ ಮಾಡದಿದ್ದ ಕಾರಣ ಇವನು ತುಂಬಾ ಚಿಂತಿತನಾಗಿದ್ದುದು !!
ನೋಡಲು ಹಾಗೂ ಅವನು ಫೋನಿನಲ್ಲಿ ಮಾತನಾಡಿದ ವಿಷಯದಿಂದ ಅವನು ನನಗಿಂತ ವಯಸ್ಸಿನಲ್ಲಿ ಚಿಕ್ಕವನೆಂದು ತಿಳಿಯಿತು. ಈ ಹುಡುಗನ ತೊಂದರೆಏನಿರಬಹುದೋ ಎಂದುಕೊಂಡು , ಸ್ವಲ್ಪ ಸಂದಿಗ್ಧತೆಯೊಂದಿಗೆ ಅವನೊಂದಿಗೆ ಮಾತಿಗಿಳಿದೆ.
ನಾನು : ಕಾಲ್ ಪಿಕ್ ಮಾಡ್ತಿಲ್ವಾ ಅವರು?
ಅವನು : ನೋ. ತುಂಬಾ ಸಲ ಟ್ರೈ ಮಾಡಿದೆ , ಪಿಕ್ ಮಾಡ್ತಿಲ್ಲ.
ನಂತರ ಇಬ್ಬರು ಪರಸ್ಪರ ಪರಿಚಯ ಮಾಡಿಕೊಂಡೆವು.
ಅವನ ಹೆಸರು ಪ್ರದೀಪ್ (ಹೆಸರು ಬದಲಾಯಿಸಲಾಗಿದೆ). ಬೆಂಗಳೂರಿನ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ಓದುತ್ತಿರುವ 2 ನೇ ವರ್ಷದ ವಿದ್ಯಾರ್ಥಿ. ನನ್ನನು ನೋಡಿ ನಂಬಿಕೆ ಬಂದದ್ದರಿಂದಲೋ ಅಥವಾ ತನ್ನ ಕಥೆ ಹೇಳಿಕೊಳ್ಳಬೇಕು ಎಂದು ಮನಸ್ಸು ಬಂದದ್ದರಿಂದಲೋ ಅವನು ತನ್ನ ಕಥೆ ಹೇಳಲುಶುರು ಮಾಡಿದ. ಮಾತಿನ ಮಧ್ಯೆ ಅವನು ನನ್ನನು ಬಾಯ್ತುಂಬ ‘ಅಕ್ಕ’ ಎಂದು ಕರೆಯುತಿದ್ದದ್ದು ನನಗೆ ತುಂಬಾ ಖುಷಿ ಕೊಟ್ಟಿತ್ತು.
ಅಕ್ಕ ಅವಳನ್ನು ನಾನು ತುಂಬಾ ಇಷ್ಟ ಪಡ್ತೀನಿ. ಜೂನ್ 5th ಅವಳ ಬರ್ತ್‌ಡೇ. ಅವಳಿಗೆ ವಿಶ್ ಮಾಡಿದ್ದೆ. ಅವತ್ತೇ ಕೊನೆ ಅವಳು ನನ್ನ ಜೊತೆ ಮಾತಾಡಿದ್ದು.ಆವತ್ತಿನಿಂದ ಇವತ್ತಿನವರೆಗೂ ನನ್ನ ಕಾಲ್ ರಿಸೀವ್ ಮಾಡ್ತಿಲ್ಲ, ನನ್ನ ಮೆಸೇಜ್ಗೆ ರಿಪ್ಲೈ ಮಾಡ್ತಿಲ್ಲ ತುಂಬ ನೋವಾಗುತ್ತೆ ಅಕ್ಕ. ಅವಳು ಒಂದೇ ಒಂದ್ಸಲ ಕಾಲ್ರಿಸೀವ್ ಮಾಡಿ ‘busy ಇದೀನಿ’ ಅಂತ ಹೇಳಿದ್ರು ಸಾಕು, ಅವಳಿಗೆ ಮತ್ತೆ ಡಿಸ್ಟರ್ಬ್ ಮಾಡಲ್ಲ. ಅವಳಾಗೇ ಅವಳು ಕಾಲ್ ಮಾಡುವ ತನಕ ಕಾಯ್ತೀನಿ ಅಂತತುಂಬಾ ಭಾವುಕನಾಗಿ ಹೇಳಿದ ಪ್ರದೀಪ್.
ಇಂಜಿನಿಯರಿಂಗ್ 2nd ಸೆಮ್ ಅಲ್ಲಿದಾಗ ಅವಳನ್ನು ಫರ್ಸ್ಟ್ ನೋಡಿದ್ದೆ. ಅಲ್ಲಿಂದ ಶುರುವಾದ ನಮ್ಮ ಸ್ನೇಹ ಚೆನ್ನಾಗೇ ಸಾಗಿತ್ತು. ಅವಳು ಸಿಗುವ ಮೊದಲು 7೦%ತೆಗೆಯುತ್ತಿದ್ದ ನಾನು ಅವಳು ಬಂದ ನಂತರ 8೦% ತೆಗೆಯುವಲ್ಲಿಗೆ ತಲುಪಿದೆ. ಬದುಕು ತುಂಬಾ ಸುಂದರವಾಗಿದೆ ಅನ್ಸೋಕೆ ಶುರುವಾಗಿತ್ತು.
ಅವಳಿಗೆ ಪ್ರೀತಿ-ಪ್ರೇಮದ ಸುಳಿಯಲ್ಲಿ ಸಿಲುಕುವುದು ಇಷ್ಟವಿಲ್ಲವೆಂದು ತಿಳಿದಿದ್ದರೂ ಹೋಗಿ ಅವಳನ್ನ ಪ್ರಪೋಸ್ ಮಾಡಿದೆ.! ಬಹುಶಃ ಅದೇ ನಾನು ಮಾಡಿದದೊಡ್ಡ ತಪ್ಪು. ಅವಳು ನನ್ನ ಪ್ರಪೋಸಲ್ ರಿಜೆಕ್ಟ್ ಮಾಡಿದಳು. ನನಗೆ ಆದಿನ ತುಂಬಾ ದುಖಃ ಆಯ್ತು. ಆದರೆ ನಾನು ಅವಳ ಮೇಲೆ ಯಾವುದೇ ತರಹದ ಒತ್ತಡಹಾಕಲಿಲ್ಲ. ನಾನು ಅವಳ ಇಚ್ಛೆಯಂತೆ ಅವಳ ಜೊತೆ ಒಬ್ಬ ಒಳ್ಳೆಯ ಗೆಳೆಯ ಆಗಿರೋದಕ್ಕೆ ಸಿದ್ದ ಇದೀನಿ. ಆದರೆ ಅವಳು ಈಗ ಸ್ವಲ್ಪ ದಿನದಿಂದ ನನ್ನ ಜೊತೆಮಾತಾಡ್ತಿಲ್ಲ. ಕಾರಣಾನೂ ಹೇಳ್ತಿಲ್ಲ. ನಾನು ಅವಳನ್ನ ಕಳ್ಕೊಳ್ಳಕ್ಕೆ ಇಷ್ಟ ಪಡಲ್ಲ ಅಕ್ಕ ಎಂದ.’
ಈ ವಿಷಯದಲ್ಲಿ ಅನನುಭವಿ ಆದ ನಾನು ನನಗೆ ತೋಚಿದ ರೀತಿಯಲ್ಲಿ ಅವನಿಗೆ ಸಮಾಧಾನ ತಿಳಿಸಿದೆ.
ಪ್ರೀತಿ-ಪ್ರೇಮ ಇರಲಿ ಬೇಡ ಅನ್ನೋಲ್ಲ,ಆದರೆ ಇವುಗಳಿಂದ ನಿನ್ನ ಓದು,ಕರಿಯರ್ ಗೆ ತೊಂದರೆ ಮಾಡಿಕೋಬೇಡ ಎಂಬ ನನ್ನ ಮಾತಿಗೆ ಅವನ ಉತ್ತರ ರಿಯಲೀಟಚ್ಡ್ ಮೈ ಹಾರ್ಟ್ ಎಂಬುದಾಗಿತ್ತು.
‘ಅವಳನ್ನ ರಾಣಿ ತರ ನೋಡ್ಕೋಬೇಕು. ಅದಕ್ಕೋಸ್ಕರ ಆದ್ರೂ ನಾನು ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರ್ತೀನಿ ‘ ಎನ್ನುತ್ತಾ ಮನೆ ದಾರಿ ಹಿಡಿದ ಆತ.
ಪ್ರದೀಪ್ಗೆ ತಾನು ಇಷ್ಟ ಪಟ್ಟ ಹುಡುಗಿ ಸಿಗಲಿ ಹಾಗೂ ಜೀವನದಲ್ಲಿ ಒಳ್ಳೆ ಯಶಸ್ಸು ಗಳಿಸಲಿ ಎಂದು ಈ ಅಕ್ಕನ ಹಾರೈಕೆ.
ಬಸ್ನಲ್ಲಿ ಸಿಕ್ಕ ಆಗಂತುಕ, ಆಗಂತುಕವಾಗಿಯೇ ಭಾಂಧವ್ಯ ಬೆಳೆದಿತ್ತು ನಮ್ಮಿಬ್ಬರ ಮಧ್ಯೆ. ಈಗ ಅವನು ನನ್ನ ಫೇಸ್ಬುಕ್ ಗೆಳೆಯ ಹಾಗೂ ಯಾವಾಗಲೂಕಾಂಟ್ಯಾಕ್ಟ್ ಅಲ್ಲಿ ಇರುವ ಮುದ್ದಾದ ‘ತಮ್ಮ’.
-
Vinutha V
vinu28earth@gmail.com
Facebook ಕಾಮೆಂಟ್ಸ್