X

ಇವರು ಕನ್ನಡಿಗ, ಕನ್ನಡದ ಕಾವಲಿಗ!!

ವಿಧಾನ ಸೌಧದ ಮುಂದೆ ನಾಯಿ, ಕತ್ತೆ, ಎಮ್ಮೆ, ಕುರಿ, ಮೇಕೆಗಳ ಮೆರವಣಿಗೆ!! ಸೈಕಲ್ ಏರಿ ವಿಧಾನಸೌಧ ಪ್ರವೇಶ.. ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಮೆಜೆಸ್ಟಿಕ್ ನಡುರಸ್ತೆಯಲ್ಲಿ ಚಹಾ ತಯಾರಿಕೆ ಹಾಗೂ ತೆಂಗಿನ ಕಾಯಿ ಹಂಚಿಕೆ.. ರಾಜ್ಯದೆಲ್ಲೆಡೆ ಶೌಚಾಲಯ ನಿರ್ಮಾಣ ಮಾಡಲು ವಿಧಾನ ಸೌಧದ ಮುಂದೆ ಸಾಂಕೇತಿಕವಾಗಿ  ಮೂತ್ರ ವಿಸರ್ಜನೆ!! ಹಾಸಿಗೆ, ದಿಂಬು ತಂದು ಮಲಗಿ ಪ್ರತಿಭಟನೆ!! ಅಡುಗೆ ಅನಿಲದ ಬೆಲೆ ಜಾಸ್ತಿಯಾದಾಗ ಸಿಲಿಂಡರ್ ತಂದು ಪ್ರತಿಭಟನೆ..!! ತರಕಾರಿಗಳ ಬೆಲೆ ಹೆಚ್ಚಾದಾಗ ತರಕಾರಿ ಗಾಡಿ ತಳ್ಳಿ ಪ್ರತಿಭಟನೆ ಮಾಡೋಕೂ ಸೈ, ಕುಡಿಯುವ ನೀರಿನ ಹಾಹಾಕಾರವೆದ್ದಾಗ ಖಾಲಿ ಕೊಡ ಹಿಡಿದು ಬರಲೂ ಜೈ…

ಈ ವ್ಯಕ್ತಿ ತಮ್ಮದೇ ಆದ ವಿಶಿಷ್ಟ ನಡವಳಿಕೆ ಹಾಗೂ ಪ್ರತಿಭಟನಾ ಶೈಲಿಯಿಂದ ರಾಜ್ಯದಲ್ಲೆಲ್ಲಾ ಚಿರಪರಿಚಿತರು. ಅಪ್ಪಟ ಕನ್ನಡ ಪ್ರೇಮಿ. ನಿಂತರೂ ಕನ್ನಡ,ಕುಂತರೂ ಕನ್ನಡ. ಕನ್ನಡವೇ ಇವರ ಉಸಿರು.!! ಪೀಟಿಕೆಯಿಂದಲೇ ಬಹುಶಃನಿಮಗೆ ಗೊತ್ತಾಗಿರಬಹುದು. ಅವರು ಮತ್ತ್ಯಾರೂ ಅಲ್ಲ. ಕನ್ನಡದ ಹೆಮ್ಮೆಯ ಪುತ್ರ, ಹುಟ್ಟು ಹೋರಾಟಗಾರ ವಾಟಾಳ್ ನಾಗರಾಜ್.!!

ಅದು ಕಾವೇರಿ ವಿವಾದವೇ ಇರಬಹುದು, ಸರೋಜಿನಿ ಮಹಿಷಿ ವರದಿ ಜಾರಿ ಹೋರಾಟ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ವಿಷಯ, ಡಬ್ಬಿಂಗ್ ವಿರೋಧ ಹೋರಾಟವೇ ಇರಬಹುದು, ಕನ್ನಡದ ಬಗ್ಗೆ ಹೋರಾಡಲು ಹಿಂದೂ ಮುಂದೂ ಯೋಚಿಸದೇ ಮೊದಲು ಧುಮುಕುವವರು ವಾಟಾಳ್. ಕಪ್ಪು ಟೋಪಿ, ಕಪ್ಪು ಕನ್ನಡಕ ಧರಿಸಿ ತಮಟೆ, ಬ್ಯಾಂಡ್ ನೊಂದಿಗೆ ವಾಟಾಳ್ ಪ್ರತಿಭಟನೆಗೆ ಹಾಜರಾಗುತ್ತಾರೆ. ತಮ್ಮ ಪುಸ್ತಕಗಳಲ್ಲಿ ಕನ್ನಡದ ಬಗ್ಗೆ ಪುಟಗಟ್ಟಲೇ ಬರೆಯುವ ಸಾಹಿತಿಗಳು ಹಾಗೂ ಬುಜೀಗಳು, ತಮ್ಮ ಚಿತ್ರಗಳಲ್ಲಿ ಕನ್ನಡದ ಬಗ್ಗೆ ಮಾರುದ್ದ ಸಂಭಾಷಣೆ(ಡೈಲಾಗ್) ಹೊಡೆಯುವ ಚಿತ್ರನಟರು ಕನ್ನಡಪರ ಹೋರಾಟಗಳಲ್ಲಿ ಜಾಣಮೌನ ವಹಿಸಿದಾಗ ಕನ್ನಡದ ಮಾನವನ್ನು ಕಾಪಾಡುವುದು ಇದೇ ವಾಟಾಳ್. ಕನ್ನಡಿಗರಲ್ಲಿ ಸ್ವಾಭಿಮಾನ, ಹೋರಾಟದ ಕೆಚ್ಚನ್ನು ಬಡಿದೆಬ್ಬಿಸುವುದು ಇವರೇ. ಇತ್ತೀಚಿಗೆ ಮೇಕೆದಾಟು ಯೋಜನೆ ಬೆಂಬಲಿಸಿ ನಡೆದ ಕರ್ನಾಟಕ ಬಂದ್ ನ ಮುಂಚೂಣಿಯಲ್ಲಿದ್ದವರೂ ವಾಟಾಳ್. ಇವತ್ತು ಕಳಸಾ ಬಂಡೂರಿ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಕರ್ನಾಟಕ ಬಂದ್’ಗೆ ಕರೆಕೊಟ್ಟಿರುವವರೂ ವಾಟಾಳ್.

ವಾಟಾಳ್ ಅವರ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಒಂದು ಆಸಕ್ತಿದಾಯಕ ವಿಷಯವಿದೆ. ೧೯೬೨ ಸಪ್ಟೆಂಬರ್ ೭ ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ದುಃಸ್ಥಿತಿಯ ಬಗ್ಗೆ ಹೋರಾಟಕ್ಕಿಳಿದಿದ್ದರು ವಾಟಾಳ್. ಸಮೀಪದಲ್ಲಿದ್ದ ಚಿತ್ರಮಂದಿರದಲ್ಲಿ ಹಿಂದಿ ಚಿತ್ರವೊಂದು ಪ್ರದರ್ಶನಗೊಳ್ಳುತ್ತಿತ್ತು. ವಾಟಾಳ್ ನೇತೃತ್ವದಲ್ಲಿ ಚಿತ್ರಮಂದಿರಕ್ಕೆ ನುಗ್ಗಿದ ಪ್ರತಿಭಟನಾಕಾರರು ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಮನವಿ ಮಾಡಿದರು.ಚಿತ್ರಮಂದಿರದ ವ್ಯವಸ್ಥಾಪಕರು ತಮ್ಮ ಮಾತನ್ನು ಕೇಳದಿದ್ದಾಗ ಚಿತ್ರ ಮಂದಿರಕ್ಕೆ ಕಲ್ಲು ತೂರಿ, ಬೆಂಕಿ ಇಡುತ್ತಾರೆ. ವಾಟಾಳ್ ಬಂಧನ ಮಾಡಿದ ಪೋಲೀಸರು ಬೂಡ್ಸ್ ನಿಂದ ಒದೆಯುತ್ತಾರೆ. ಬೂಡ್ಸ್ ನ ಏಟೇನು, ಬಂದೂಕದ ಏಟು ಬಿದ್ದರೂ ನನ್ನ ರಕ್ತ ಕನ್ನಡ, ಇನ್ನು ಮುಂದೆ ಇದೇ ದಿನವನ್ನು ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸುತ್ತೇನೆ ಎಂದು ಘೋಷಿಸಿದರು ವಾಟಾಳ್.!!

ವಾಟಾಳ್ ಆಗ ಬೆಂಗಳೂರು ನಗರದ ಕಾರ್ಪೋರೇಟರ್ ಆಗಿದ್ದರು. ಅವರ ವಾರ್ಡಿನಲ್ಲಿ ಎಮ್ಮೆಗಳನ್ನು ಸಾಕುವವರು ಎಮ್ಮೆಗಳಿಗೆ ಮೇವು ಇಲ್ಲ ಅಂತ ಅಳಲು ತೋಡಿಕೊಂಡು ವಾಟಾಳ್ ಬಳಿಗೆ ಬಂದರು. ವಾಟಾಳ್ ತಡಮಾಡಲಿಲ್ಲ. ವಿನೂತನವಾಗಿ, ವಿಶೇಷವಾಗಿ ಎಮ್ಮೆಗಳೊಂದಿಗೆ ವಿಧಾನಸೌಧಕ್ಕೆ ಮೆರವಣಿಗೆ ಹೊರಟು ಬಿಟ್ಟರು. ಅಂದು ಶುರುವಾದ ಆ ವಿನೂತನ ಹೋರಾಟ ಇಂದಿಗೂ ಮುಂದುವರಿದಿದೆ. ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು ವಾಟಾಳ್ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿ ಮಂತ್ರಿಯನ್ನಾಗಿಸುವ ಆಹ್ವಾನ ನೀಡಿದ್ದರು. ಆದರೆ ಬರೇ ಕನ್ನಡ, ಕರ್ನಾಟಕ ಹಾಗೂ ಹೋರಾಟವೇ ತನ್ನ ಗುರಿ ಹಾಗೂ ಕರ್ತವ್ಯ ಎಂದು ನಿಜಲಿಂಗಪ್ಪನವರ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ್ದರು ಈ ಕನ್ನಡ ಪ್ರೇಮಿ.

ಚಳುವಳಿ ಹಿನ್ನಲೆಯವರಾಗಿದ್ದರಿಂದ ಹಾಗೂ ಆಗಲೇ ಕಾರ್ಪೋರೇಟರ್ ಆಗಿದ್ದ ವಾಟಾಳ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ. ೧೯೮೯ರ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಪಕ್ಷೇತರರಾಗಿ ವಿಧಾನಸಭೆ ಪ್ರವೇಶಿಸುತ್ತಾರೆ ವಾಟಾಳ್. ೧೯೯೪ರಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ಪುನರಾಯ್ಕೆಯಾಗುತ್ತಾರೆ. ಆದರೆ ೧೯೯೯ರ ಚುನಾವಣೆಯಲ್ಲಿ ಮುಗ್ಗರಿಸಿದ ವಾಟಾಳ್ ೨೦೦೪ರಲ್ಲಿ ಫೀನಿಕ್ಸ್ ನಂತೆ ಗೆದ್ದು ಮತ್ತೆಶಾಸಕರಾಗುತ್ತಾರೆ. ಶಾಸಕರಾಗಿದ್ದಾಗ ಮಾತಿನ ಲಹರಿ, ಪ್ರತಿಭಟನಾ ವೈಖರಿಯಿಂದ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಆದರೆ ೨೦೦೯ರ ಚುನಾವಣೆಯಲ್ಲಿ ಚಾಮರಾಜನಗರದ ಜನ ವಾಟಾಳ್ ಅವರನ್ನು ಮನೆಗೆ ಕಳುಹಿಸುತ್ತಾರೆ. ತಾವು ಚುನಾವಣೆಯಲ್ಲಿ ಸೋತಿದ್ದನ್ನು “ಸೋಲೋತ್ಸವ”ಹೆಸರಿನಲ್ಲಿ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಮೇಕೆಗೆ ಹಾರ ತುರಾಯಿ ಹಾಕಿ, ಪೇಟ ತೊಡಿಸಿ ಸನ್ಮಾನ ಮಾಡಿದ ರಾಜಕಾರಣಿ ವಾಟಾಳ್.!!

ಎಂತೆಂತವರನ್ನೋ ವಿಧಾನಪರಿಷತ್, ರಾಜ್ಯ ಸಭೆಗೆ ಆರಿಸಿ ಕಳುಹಿಸುತ್ತವೆ ನಮ್ಮ ರಾಜಕೀಯ ಪಕ್ಷಗಳು. ಆದರೆ ವಾಟಾಳ್ ಅವರಂತ ಅಪ್ಪಟ ಕನ್ನಡ ಪ್ರೇಮಿ, ಅದ್ವಿತೀಯ ವಾಗ್ಮಿ, ಉತ್ತಮ ಸಂಸದೀಯ ಪಟು ಮಾತ್ರ ಅವರ ಕಣ್ಣಿಗೆ ಬೀಳುವುದಿಲ್ಲ. ಇಲ್ಲಿಯವರೆಗೆ ಒಮ್ಮೆಯೂ ವಾಟಾಳ್ ಅವರನ್ನು ಕನ್ನಡ ಕಾವಲು ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷಗಿರಿ ಹುಡುಕಿಕೊಂಡು ಬಂದಿಲ್ಲ. ಇದು ನಮ್ಮ ರಾಜ್ಯದ ದುರಂತ. ವಾಟಾಳ್ ಅವರ ಹೋರಾಟಕ್ಕೆ ರಾಜಕಾರಣಿಗಳು ಗಮನ ಕೊಡಲ್ಲ, ಅಧಿಕಾರಿಗಳು ಕಿಂಚಿತ್ತ್ ಬೆಲೆಯೂ ಕೊಡಲ್ಲ, ಅವರ ಹೋರಾಟಕ್ಕೆ ಮೂರು ಮತ್ತೊಂದು ಜನ ಸೇರಲ್ಲ. ಆದರೂ ಒಂಟಿಸಲಗದ ಹಾಗೇ ತಮ್ಮ ಇಳಿ ವಯಸ್ಸಿನಲ್ಲೂ ಕನ್ನಡದ ಬಗ್ಗೆ ಬುಸುಗುಡುತ್ತಾ ಹೋರಾಟ ನಡೆಸುತ್ತಿದ್ದಾರೆ. ವಾಟಾಳ್ ಅವರಿಗೆ ವಾಟಾಳ್ ಅವರೇ ಸಾಟಿ. ವಾಟಾಳ್ ಅವರಂತಹ ಮತ್ತೊಬ್ಬ ಹೋರಾಟಗಾರ ಕರ್ನಾಟಕ ಪಡೆಯಲು ಸಾಧ್ಯವಿಲ್ಲ. ಸೀದಾ ಹೇಳುವುದಾದರೆ ಅವರೊಬ್ಬ ಕನ್ನಡಿಗ, ಕನ್ನಡದ ಕಾವಲಿಗ ಅಂತ ಅಪ್ಪಟ ಬೆಂಗಳೂರಿಗರ ಭಾಷೆಯಲ್ಲಿ ಹೇಳಬಹುದು.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post