ಇಡೀ ಸಮಾಜ ಇಂದು ನಗರೀಕರಣವೆಂಬ ಹೊಸ ಅವತಾರ ತಾಳುವ ಸಿದ್ಧತೆಯಲ್ಲಿದೆ. ಅದಕ್ಕೆ ಬೇಕಾದ ಅಲಂಕಾರಗಳನ್ನೆಲ್ಲ ಭರದಿಂದ ನಡೆಸಿದೆ. ಡಾಂಬರಿನ ಲಿಪ್ ಸ್ಟಿಕ್ ಬಳಿದುಕೊಂಡು, ಎಲೆಗಳೆಂಬ ಕೂದಲನ್ನು ಬಾಬ್ ಕಟ್ ಮಾಡಿಸಿಕೊಂಡು ನಮ್ಮ ಹಳ್ಳಿಗಳು ಪಕ್ಕಾ ಪ್ಯಾಟೆ ಹುಡುಗಿಯಂತೆ ತಯಾರಾಗುತ್ತಿವೆ. Development ಎಂಬ ಇಂಗ್ಲೀಷ್ ಪದ ಉಪಯೋಗಿಸುತ್ತ ಉಸಿರು ನೀಡುವ ಮರಗಳನ್ನು ಕಡಿದು ಉಸಿರುಗಟ್ಟಿಸುವ ಅಪಾರ್ಟ್’ಮೆಂಟ್’ಗಳನ್ನು ಕಟ್ಟುತ್ತಿರುವ ಇಂದಿನ so called highly educated people (ನನ್ನನ್ನೂ ಸೇರಿಸಿಕೊಂಡು)ಗಳನ್ನು ನೋಡುವಾಗ ಅಯ್ಯೋ ಅನಿಸುತ್ತದೆ. ಇದು ಇಡೀ ಸಮಾಜಕ್ಕೆ ಸಮಾಜವೇ ಮಾಡಿಕೊಳ್ಳುವ ಸಾಮೂಹಿಕ ಆತ್ಮಹತ್ಯೆಯಂತೆ ಕಾಣಿಸುತ್ತದೆ ನನಗೆ.
ಸಾವಿರಾರು ವರ್ಷಗಳಿಂದ ನೆರಳು ಕೊಡುತ್ತ ಬಂದ ಒಂದು ಆಲದ ಮರ ಆಧುನಿಕ ಯಂತ್ರರಾಕ್ಷಸನಿಗೆ ಕ್ಷಣದ ತುತ್ತಾಗುವ ದೃಶ್ಯ ಕಂಡಾಗ ಆ ಮರದ ನೆರಳಿನಲ್ಲಿ ಇಲ್ಲಿಯವರೆಗೆ ನಿಂತು ಆಶ್ರಯ ಪಡೆದ ಯಾರಿಗೇ ಆದರೂ ಒಂದು ಕ್ಷಣಕ್ಕಾದರೂ ‘ಅಯ್ಯೋ’ ಎನಿಸದಿರದು. ಅಲ್ಲಿ ಕೇವಲ ಮರ ಮಾತ್ರ ನೆಲಕ್ಕುರುಳಿರುವುದಿಲ್ಲ. ಆ ಮರದ ನೆರಳಿನಲ್ಲಿ ಅದೃಶ್ಯವಾಗಿ ಹಬ್ಬಿದ ಭಾವನಾತ್ಮಕ ಸಂಬಂಧಗಳು ಕೂಡ ನೆಲಕ್ಕುರುಳಿರುತ್ತವೆ. ಆ ನೆರಳಿನ ಹಂದರದಲ್ಲಿ ಪುಟ್ಟ ಮಕ್ಕಳು ಅಡಿಗೆ ಆಟ ಆಡಿದ್ದವು. ಪ್ರವಾಸಕ್ಕೆಂದು ಬಂದ ವಿದ್ಯಾರ್ಥಿಗಳ ಗುಂಪು ಮರದ ನೆರಳಿನಲ್ಲಿ ಮಾಡಿದ ಭೋಜನದ ಮೆಲುಕು, ಅವರು ಎಬ್ಬಿಸಿದ ಗದ್ದಲದ ಶಬ್ದ ಅಲ್ಲಿ ಹೆಪ್ಪುಗಟ್ಟಿತ್ತು. ಅವರಾಡಿದ ಅಂತ್ಯಾಕ್ಷರಿಯ ಆಟದ ಹಾಡುಗಳ ಇಂಪಿಗೆ ಎಲೆಗಳೂ ತಲೆದೂಗಿದ್ದವು. ಪ್ರೇಮಿಗಳು ಆಡಿದ ಪಿಸುಮಾತು ಗುಟ್ಟಾಗಿ ಆ ನೆರಳಿನ ತಂಪಿನಾಳದಲ್ಲಿ ಹುದುಗಿದ್ದವು. ಮಗಳ ಮನೆಗೆಂದು ನಡೆದುಕೊಂಡೆ ಹೊರಟ ೬೦ರ ಹರೆಯದ ಅಪ್ಪ ಆ ಮರದ ಕೆಳಗೆ ದಣಿವಾರಿಸಲು ಕುಳಿತಿದ್ದ, ಅವನ ನಿಟ್ಟುಸಿರಿನ ಬಿಸಿಯನ್ನು ಅಲ್ಲಿನ ತಂಗಾಳಿ ತಂಪು ಮಾಡಿತ್ತು. ಹೀಗೆ ಆ ವೃಕ್ಷ ನಮ್ಮನ್ನು ಆಶ್ರಯಿಸಿದ್ದು ಒಂದೆರಡು ವರ್ಷಗಳಲ್ಲ, ನೂರಾರು ವರ್ಷಗಳು;
ಅಷ್ಟೊಂದು ವರ್ಷ ನಮಗೆ ಅರಿವಿಲ್ಲದಂತೆ ನಮ್ಮ ದೈನಂದಿನ ಬದುಕಿನಲ್ಲಿ ಸಹವರ್ತಿಯಂತೆ ಸಹಕರಿಸಿದ ಅದು ಈಗ ಒಂದೇ ಕ್ಷಣದಲ್ಲಿ, ತನ್ನ ಇಡೀ ಅಸ್ತಿತ್ವವನ್ನೇ ಕಳೆದುಕೊಂಡು ನೆಲಕ್ಕುರುಳಿದಾಗ ನನಗನಿಸುವುದೇನೆಂದರೆ, ಆ ದೈತ್ಯ ವೃಕ್ಷಕ್ಕೇ ಸಿಗದ ಅಸ್ತಿತ್ವ ನಮಗೆ ಅಂದರೆ ಈ ಹುಲುಮಾನವರಿಗೆ ಇನ್ನೆಷ್ಟು ವರ್ಷ ಸಿಕ್ಕೀತು? ಅದರ ಅಂತ್ಯ ಮಾನವನ ಭೀಕರ ಅಂತ್ಯಕ್ಕೆ ನಾಂದಿಯಂತೆ ನನಗೆ ಕಾಣಿಸುತ್ತದೆ. ನಾವೇ ಸೃಷ್ಟಿ ಮಾಡಿರುವ ಯಂತ್ರಗಳು ಒಂದಲ್ಲ ಒಂದು ದಿನ ನಮ್ಮ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ಕೊಟ್ಟರೂ ಆಶ್ಚರ್ಯವಿಲ್ಲ. ಹಾಗೊಂದು ದಿನ ಬರದೇ ಇರಲಿ ಎಂದು ಆಶಿಸೋಣ.
ಕಳೆದ ವಾರವಷ್ಟೇ ಪುಟ್ಟ ಮಕ್ಕಳು ಕ್ರಿಕೆಟ್ ಆಡುತ್ತಿದ್ದ ಮೈದಾನ ಇಂದು ನೋಡುವಾಗ ಯಾವುದೋ ಒಂದು ಕಾಂಪ್ಲೆಕ್ಸ್ ನ ಕಬ್ಬಿಣದ ಸರಳುಗಳಿಗೆ ತನ್ನ ಮೈ’ದಾನ’ ಮಾಡಿರುತ್ತದೆ. ಕಳೆದ ವರ್ಷ ಮಳೆಗಾಲದಲ್ಲಿ, ಹಸಿರು ತೆನೆಯಿಂದ ತುಂಬಿ ಕಂಗೊಳಿಸುತ್ತಿದ್ದ ಒಂದು ಸುಂದರ ಪರಿಸರಕ್ಕೆ ಮನಸೋತು ಸೆಲ್ಫಿ ತೆಗೆದುಕೊಂಡಿದ್ದ ಜಾಗವನ್ನು ಈ ವರ್ಷ ಹುಡುಕುತ್ತ ಹೋದರೆ, ದಾರಿ ತಪ್ಪಿ ಹೋಗುತ್ತೇವೆ. ಕಾರಣ, ಆ ಸೌಂದರ್ಯದ ಕಿಂಚಿತ್ ಕುರುಹು ಸಹ ಅಲ್ಲಿರುವುದಿಲ್ಲ. ಹೀಗೆ, ಶರವೇಗದಲ್ಲಿ ಬೆಳೆಯುತ್ತಿರುವ ಈ ಕಾಂಕ್ರೀಟ್ ಕಾಡು ನಮ್ಮ ಬದುಕಿನ ದಾರಿಯನ್ನೇ ತಪ್ಪಿಸುತ್ತಿದೆಯೆನೋ ಅನಿಸುತ್ತದೆ ನನಗೆ. ಒಂದಲ್ಲ ಒಂದು ದಿನ, ನಾವೇ ಸೃಷ್ಟಿಸಿದ ಈ ಕಾಡಲ್ಲಿ ನಮ್ಮ ಅಸ್ತಿತ್ವದ ಕುರುಹು ಕೂಡ ಇಲ್ಲದಂತೆ ಕಳೆದುಹೋದರೂ ಹೋಗಬಹುದು. “ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ” ನಿತ್ಯೋತ್ಸವ ಆಚರಿಸುತ್ತಿದ್ದ ನಾಡಿಂದು “ನಿತ್ಯ ಕರಿ ವರ್ಣ ಬಳಿವ ಬೈಕು, ಬಸ್ಸು, ಕಾರುಗಳಲ್ಲಿ” ತುಂಬಿ ಹೋಗಿದೆ. ಆದರೂ ಮಾನವನ ಆಸೆಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಮನುಷ್ಯ ಉಸಿರಾಡಲು ಆಮ್ಲಜನಕ ಬೇಕು, ಸಸ್ಯಗಳು ವಾತಾವರಣದ ಇಂಗಾಲದ ಡೈ ಆಕ್ಸೈಡ್ ನ್ನು ಹೀರಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ ಎಂದೆಲ್ಲ ಕಂಠಪಾಠ ಮಾಡಿದ ವಿಷಯಗಳು ಬರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದಕ್ಕೆ ಸೀಮಿತವಾದುವೇ? ಹೌದು ಎಂದಾದರೆ, ಅಂತಹ ವಿದ್ಯೆಯ ಉಪಯೋಗವಾದರೂ ಏನು? ಜಗತ್ತಿನ ಒಳಿತು ಬಿಡಿ, ನಾವು ಸ್ವಾರ್ಥಿಗಳಾಗಿ ಯೋಚಿಸುವುದಾದರೂ ಕೂಡ ಉಸಿರಾಡಲು ಆಮ್ಲಜನಕವಂತೂ ಎಂತಹ ಸ್ವಾರ್ಥಿಗೂ ಬೇಕೇ ಬೇಕು ಅಲ್ಲವೇ?
ತಮ್ಮ ಮುಂದಿನ ಪೀಳಿಗೆಗಾಗಿ ಆಸ್ತಿ, ಮನೆ, ಹಣ ಎಲ್ಲವನ್ನೂ ಮಾನವ ಸಂಪಾದಿಸುತ್ತಿದ್ದಾನೆ. ತಾನು ಬದುಕಲು ಪಟ್ಟ ಕಷ್ಟವನ್ನು ತನ್ನ ಮುಂದಿನ ಪೀಳಿಗೆ ಪಡದೇ ಇರಲಿ ಎಂದು ಹರಸಾಹಸ ಪಡುತ್ತಿದ್ದಾನೆ. ಆದರೆ, ಈ ಸುಭದ್ರ ಭವಿಷ್ಯದತ್ತ ಸಾಗುತ್ತ ಮೂಲಭೂತ ಅವಶ್ಯಕತೆಗಳನ್ನೇ ಕಡೆಗಣಿಸತೊಡಗಿದ್ದಾನೆ. ಯಾಂತ್ರಿಕತೆಯೇ ಕೇಂದ್ರೀಕೃತವಾಗಿರುವ ಐಶಾರಾಮಿ ಜೀವನವನ್ನ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ಕೊಡುವ ತವಕದಲ್ಲಿ, ಈ ಐಶಾರಾಮದ ಸೌಲಭ್ಯಗಳ ಜೊತೆ ಶುದ್ಧ ಗಾಳಿಯೂ ಸಿಗದ ವಾತಾವರಣ, ಬೆಳೆ ಬೆಳೆಯಲು ಯೋಗ್ಯತೆಯಿಲ್ಲದ ಕಾಂಕ್ರೀಟ್ ನೆಲ, ಜಾಗತಿಕ ತಾಪಮಾನದ ಹೆಚ್ಚಳ, ಬರಗಾಲ, ಅಂತರ್ಜಲ ಕುಸಿತ, ಸಾಗರದ ಜಲಮಟ್ಟ ಏರಿಕೆಗಳಂತಹ ಪರಿಹಾರವೇ ಇಲ್ಲದ ನೂರು ಭಯಂಕರ ಸಮಸ್ಯೆಗಳನ್ನು ಸಹ ಮುಂದಿನ ಪೀಳಿಗೆಯ ತಲೆಗೆ ಕಟ್ಟುತ್ತಿದ್ದಾನೆ. ಈ ಭೂಮಿಯ ಅದ್ಭುತ ಸೃಷ್ಟಿಯ ಸೊಬಗನ್ನೆಲ್ಲ ಬರಿದು ಮಾಡಿ ಮಂಗಳ ಗ್ರಹದಲ್ಲಿ ನೀರು ಹುಡುಕಲು ಮುಂದಾಗಿರುವ ಮಾನವನ ಬುದ್ಧಿವಂತಿಕೆಗೆ ನಗುವುದೋ ಅಳುವುದೋ ತಿಳಿಯದಾಗಿದೆ.
ಹಾಗೆಂದು ಅಭಿವ್ರದ್ಧಿ, ಅನ್ವೇಷಣೆಗಳು ತಪ್ಪೆಂಬುದು ನನ್ನ ಅಭಿಪ್ರಾಯವಲ್ಲ. ನಾನು ಹೇಳ ಹೊರಟಿರುವುದು ಇಷ್ಟೇ: ಹೊಸದನ್ನೇನೋ ಅನ್ವೇಷಿಸುವಲ್ಲಿ ತೋರುವ ಕಾತರ, ಕಾಳಜಿಗಳನ್ನು ಈಗಾಗಲೇ ಲಭ್ಯವಿರುವ ನೈಸರ್ಗಿಕ ಸಂಪತ್ತನ್ನು ಉಳಿಸುವತ್ತ ಸಹ ತೋರಿಸಬೇಕಾಗಿದೆ. ಸುಲಭದಲ್ಲಿ ಸಿಗುವುದನ್ನೆಲ್ಲ taken for granted ಅಂದುಕೊಳ್ಳುವುದು ಮಾನವನ ಸ್ವಭಾವ. ಅದೇ ಈಗಿನ ಅತಂತ್ರ ಸ್ಥಿತಿಗೆ ಕಾರಣ. ಈ ಜಗತ್ತಿನಲ್ಲಿ ಎಲ್ಲದಕ್ಕೂ ಅದರದ್ದೇ ಆದ ಮೌಲ್ಯಗಳಿವೆ. ಯಾವುದನ್ನೂ ಕಡೆಗಣಿಸುವಂತಿಲ್ಲ. ಸೃಷ್ಟಿಯ ಪ್ರತಿ ಅಣುವೂ ಕೂಡ ಪ್ರಾಕೃತಿಕ ಸಮತೋಲನವನ್ನು ಕಾಪಾಡುವಲ್ಲಿ ತಮ್ಮದೇ ಆದ ಪಾಲನ್ನು ಹೊಂದಿವೆ. ಆದರೆ ‘ನಾನು’ ಎಂಬ ಅಹಂ ನೊಂದಿಗೆ ಬದುಕಿರುವ ನಾವು ಅಂದರೆ ಮನುಷ್ಯರು. ನಮಗೇ ಅರಿಯದೆ ನಮ್ಮ ಬದುಕಿಗೆ ಆಸರೆ ಆಗಿರುವ ಈ ಸೃಷ್ಟಿಯ ಇತರ ಅಂಶಗಳೆಡೆಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಇದೇ ನಿರ್ಲಕ್ಷ್ಯದಲ್ಲಿ ಹಲವಾರು ಪ್ರಾಣಿ-ಪಕ್ಷಿಗಳ ಸಂತತಿಯ ಅವಸಾನವೇ ಆಗಿಹೋಗಿದೆ. ಮಾನವ ಮಾತ್ರ ಅವ್ಯಾವುದರ ಗೋಜಿಗೆ ಹೋಗದೇ ತನ್ನದೇ ಬೇರೆ ಲೋಕವೆಂಬಂತೆ ಬದುಕುತ್ತಿದ್ದಾನೆ. ಈ ಲೋಕ ದೀಪ ಹಚ್ಚುವುದೇ ಅಜ್ಜಿಯ ಬೆಂಕಿಯಿಂದ ಎಂಬ ಭ್ರಮೆಯ ಪರಮಾವಧಿಯಲ್ಲಿ ತೇಲಾಡುತ್ತಿದ್ದಾನೆ. ಆದರೆ ಈ ಭ್ರಮೆಯಿಂದ ಹೊರಬರದೇ ಇದ್ದರೆ ಸತ್ಯದ ಕಹಿ ಉಣ್ಣುವ ಕಾಲ ಬಹಳ ದೂರವಿಲ್ಲ.
ಬಹುಷಃ ಇಂದಿನ ಪರಿಸ್ಥಿತಿಯಲ್ಲಿ ಈ ಆಧುನಿಕತೆಯ ಮಾಯೆಯಿಂದ ಹೊರಬರುವುದು ಅಷ್ಟು ಸುಲಭವಲ್ಲ. ಕಾರಣ, ನಾವು ಹಿಂದಿರುಗಲಾರದಷ್ಟು ಮುಂದೆ ಬಂದಿದ್ದೇವೆ. ಬದುಕು ಯಾಂತ್ರಿಕತೆಯೊಂದಿಗೆ ಹಾಸುಹೊಕ್ಕಾಗಿದೆ. ಈ ಸೃಷ್ಟಿಯ ಸೌಂದರ್ಯದ ಸುಂದರ ಭಾಗವಾಗಿದ್ದ ‘ಗುಬ್ಬಿ’ ಎಂಬ ಪಕ್ಷಿಸಂಕುಲ ನಮ್ಮ ಮೊಬೈಲ್ಗಳ ಅತಿಯಾದ ಬಳಕೆಯಿಂದ ನಶಿಸಿಹೋಯಿತು. ಆದರೇನು? ಮೊಬೈಲ್ ಇಲ್ಲದೇ ನಾವು ಇರಬಲ್ಲೆವೇ? ಬಹುಷಃ ನೂರರಲ್ಲಿ ತೊಂಬತ್ತು ಶೇಕಡಾ ಜನರ ಉತ್ತರ “ಇಲ್ಲ” ಎಂದಾಗಿರುತ್ತದೆ. ಒಟ್ಟಾರೆ ಹೇಳುವುದಾದರೆ ನಮ್ಮ ಅಸ್ತಿತ್ವದ ಗೋರಿಯ ಸುತ್ತಲಿನ ನಾಲ್ಕು ಬದಿ ಗೋಡೆಗಳನ್ನು ನಾವೇ ಕಟ್ಟಿಕೊಂಡಿದ್ದೇವೆ. ಮೇಲಿನ ಐದನೇ ಹಾಗೂ ಕೊನೆಯ ಗೋಡೆಯ ನಿರ್ಮಾಣದತ್ತ ದಾಪುಗಾಲಿಡುತ್ತಿದ್ದೇವೆ. ಅದು ಪೂರ್ಣಗೊಂಡು ಉಸಿರುಗಟ್ಟಿಸುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಿದೆ. ಆದ್ದರಿಂದ ಇನ್ನು ಮುಂದಾದರೂ ಬದಲಾವಣೆ, ಅಭಿವೃದ್ಧಿಗಳ ಜೊತೆ ಜೊತೆಗೆ ಅಳಿದುಳಿದ ಈ ಪ್ರಕೃತಿಯ ಸಹಜ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಕಾಳಜಿ ವಹಿಸಿದರೆ ಮಾನವನ ಅಸ್ತಿತ್ವದ ಆಯಸ್ಸನ್ನು ಇನ್ನೊಂದಷ್ಟು ದಿನ ವಿಸ್ತರಿಸಬಹುದು. ಇಲ್ಲವಾದಲ್ಲಿ, ಸೃಷ್ಟಿಕರ್ತ ಬ್ರಹ್ಮನಿಗೂ ಅವನ ಒರಿಜಿನಲ್ ಸೃಷ್ಟಿ ಹೇಗಿತ್ತು ಎಂಬುದನ್ನು ಮರೆಸುವಷ್ಟು ಬದಲಾವಣೆ ಮಾಡಿರುವ ಮಾನವನ ಉಳಿವಿಗೆ ಬ್ರಹ್ಮ ಪುನರ್ ಸೃಷ್ಟಿ ಮಾಡಿಕೊಡುವುದು ಕೂಡ ದುಸ್ತರವಾದೀತು.
Facebook ಕಾಮೆಂಟ್ಸ್