ಲೋಕಸಭಾ ಚುನಾವಣೆ ಹಾಗೂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅಬ್ಬರಿಸಿ ಬೊಬ್ಬಿರಿದು ಗೆದ್ದು ಬೀಗುತ್ತಿದ್ದ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಧಿಡೀರನೇ ಬ್ರೇಕ್ ಹಾಕಿದ್ದು ದಿಲ್ಲಿಯ ಮತದಾರರು. ಮೋದಿ ವರ್ಸಸ್ ಕೇಜ್ರಿ ಹಣಾಹಣೆಯಲ್ಲಿ ಕೇಜ್ರಿ ಗೆಲುವಿನ ನಗೆ ಬೀರಿದ್ದರು. ಈಗ ಅಂತಹದೇ ಮತ್ತೊಂದು ಹೈ ವೋಲ್ಟೇಜ್ ಕದನಕ್ಕೆ ಅಖಾಡ ಸಿದ್ಧವಾಗಿದೆ. ಈ ಬಾರಿ ಮೋದಿ ವರ್ಸಸ್ ನಿತೀಶ್!!!
ಬಿಹಾರವನ್ನು ತಮ್ಮ ಪಿತ್ರಾರ್ಜಿತ ಆಸ್ಥಿಯನ್ನಾಗಿ ಮಾಡಿಕೊಂಡು ಅಧಿಕಾರವನ್ನು ಅನುಭವಿಸಿಕೊಂಡು ಬಂದಿದ್ದ ಲಾಲೂ ಪ್ರಸಾದ್ ಯಾದವ್ ಗೆ ದಶಕಗಳ ಹಿಂದೆ ನಿತೀಶ್ ಕುಮಾರ್ ಮೂಲಕ ಬಿಹಾರ ಜನತೆ ಪಾಠ ಕಲಿಸಿದ್ದರು. ಅಧಿಕಾರದ ಅಮಲಿನಲ್ಲಿ ಹಣದ ಜೊತೆ ಮೇವು ತಿಂದ ಕಾರಣ ಲಾಲೂ ಜೈಲು ಪಾಲಾದರಲ್ಲದೇ ತಮ್ಮ ವರ್ಚಸ್ಸನ್ನು ಗಣನೀಯವಾಗಿ ಕುಗ್ಗಿಸಿಕೊಂಡಿದ್ದರು. ನಿತೀಶ್ ಹಾಗೂ ಸುಶೀಲ್ ಕುಮಾರ್ ಮೋಡಿ ಬಿಹಾರದಲ್ಲಿ ಯಾವುದೇ ಎಗ್ಗಿಲ್ಲದೇ ಮುಂದುವರಿಯುತ್ತದೆ. ಆದರೆ ಯಾವಾಗ ನರೇಂದ್ರ ಮೋದಿಯವರ ಹೆಸರು ಕೇಂದ್ರ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬರುತ್ತದೋ ನಿತೀಶ್ ಕುಮಾರ್ ಅಧಿಕಾರದ ದಾಹ ಹೊರಬರುತ್ತದೆ. ಅದುವರೆಗೂ ಇಲ್ಲದ ಜಾತ್ಯಾತೀತತೆಯ ಭೂತ ನಿತೀಶ್ ಬೆನ್ನೇರುತ್ತದೆ. ದಶಕಗಳಿಂದ ಮಿತ್ರನಾಗಿದ್ದ ಬಿಜೆಪಿ ಒಮ್ಮಿಂದೊಮ್ಮೆಲೆ ಕೋಮುವಾದಿಯಾಗಿ ಕಾಣುತ್ತದೆ ನಿತೀಶ್ ಕಣ್ಣಿಗೆ!! ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ವಿರುದ್ಧ ಸ್ಪರ್ಧಿಸಿ ಮಖಾಡೆ ಮಲಗುತ್ತಾರೆ ನಿತೀಶ್ ಮತ್ತು ಟೀಮ್..
ಬಿಹಾರ ಎಂದರೆ ಮರ್ಯಾದಾ ಹತ್ಯೆಗಳು, ಕಾಪ್ ಪಂಚಾಯತ್ ಗಳ ಅಮಾನವೀಯ ತೀರ್ಪುಗಳು, ಗೂಂಡಾ ರಾಜ್, ಬಡತನ, ಅನಕ್ಷರತೆಯೇ ಎದ್ದು ಕಾಣುತ್ತದೆ. ಅಭಿವೃದ್ಧಿಗಿಂತಲೂ ಮುಖ್ಯವಾಗಿ ಇಲ್ಲಿ ಜಾತಿಯದ್ದೇ ಕಾರುಬಾರು. ಜಾತಿಯ ನೆರವಿಲ್ಲದೇ ಇಲ್ಲಿ ಚುನಾವಣೆ ಎದುರಿಸುವುದು ಬಹಳ ಕಷ್ಟ. ಇನ್ನೆರೆಡು ತಿಂಗಳುಗಳಲ್ಲಿ ಬಿಹಾರ ಚುನಾವಣೆ ಎದುರಾಗಲಿದೆಯಾದರೂ ಈಗಿಂದೀಗಲೇ ಚುನಾವಣೆಯ ಕಾವು ಏರುತ್ತಲಿದೆ. ಲೋಕಸಭಾ ಚುನಾವಣೆಯಲ್ಲಿ ಆದ ಮುಖಭಂಗಕ್ಕೆ ಸೇಡು ತೀರಲು ಹವಣಿಸುತ್ತಿರುವ ನಿತೀಶ್,ಲಾಲೂ,ಕಾಂಗ್ರೆಸ್ ಟೀಮ್ ಒಂದೆಡೆಯಾದರೆ, ಮತ್ತೊಮ್ಮೆ ತಮ್ಮ ವಿರೋಧಿಗಳನ್ನು ಕೆಡ್ಡಾಕ್ಕೆ ಬೀಳಿಸಲು ಸಿದ್ದವಾಗಿರುವ ಅಮಿತ್,ಮೋದಿ ಹಾಗೂ ಪಾಸ್ವಾನ್ ಟೀಮ್ ಇನ್ನೊಂದೆಡೆ.
ಆದರೀಗ ಪರಿಸ್ಥಿತಿ ಬಹಳ ಭಿನ್ನವಾಗಿದೆ. ತಾವು ಜೈಲಿನಲ್ಲಿದ್ದರೂ ತಮ್ಮದೇ ಜಾಗದಲ್ಲಿ ತಮ್ಮ ಪುತ್ರಿ ಮೀಸಾ ಭಾರತಿಯನ್ನು ಪ್ರತಿಷ್ಟಾಪಿಸಿದ್ದರು ಲಾಲೂ. ಈ ಮೂಲಕ ತಮ್ಮ ಪಕ್ಷದ ಅಸ್ತಿತ್ವ ಹಾಗೂ ಪ್ರಭಾವವನ್ನು ತಕ್ಕ ಮಟ್ಟಿಗೆ ಉಳಿಸಿಕೊಳ್ಳಲು ಯಶಸ್ವಿಯಾದುದರಲ್ಲಿ ಸಂಶಯವೇ ಇಲ್ಲ. ಯಾದವರ ಓಟುಗಳ ಜೊತೆಗೆ ಮುಸ್ಲಿಮರ ಓಟುಗಳೂ ಬಂದರೆ ಲಾಲೂ ಲಾಟೀನ್ ಪ್ರಜ್ವಲಿಸಲು ಇಂಧನವಾದಂತೆ. ಅಧಿಕಾರವಿಲ್ಲದೇ ಸೋತು ಸುಣ್ಣವಾಗಿರುವ ಲಾಲೂಗೆ
ಬಿಜೆಪಿಯನ್ನು ಮಣಿಸಲು ಒಂದು ಕಾಲದ ವೈರಿ ನಿತೀಶ್ ಜೊತೆ ಕೈ ಜೋಡಿಸದೇ ಬೇರೆ ದಾರಿಯೇ ಇಲ್ಲ. ಇನ್ನು ಮುಳುಗುತ್ತಿರುವ ಹಡಗಾಗಿರುವ ಕಾಂಗ್ರೆಸ್ ಗಂತೂ ನಿತೀಶ್ ಭರವಸೆಯ ಬೆಳಕಾಗಿದ್ದಾರೆ. ಕೇಜ್ರಿವಾಲರ ಆಪ್ ಪಕ್ಷವೂ ತನ್ನ ಖದರನ್ನು ತಕ್ಕ ಮಟ್ಟಿಗೆ ತೋರಿಸಿದ್ದೇ ಆದಲ್ಲಿ ಎನ್.ಡಿ.ಎ ಹಾದಿ ಬಹಳ ಸುಗಮವೇನಲ್ಲ.
ಒಂದು ವೇಳೆ ದೆಹಲಿಯ ರೀತಿಯಲ್ಲಿ ಬಿಹಾರದಲ್ಲೂ ರಾಜಕೀಯ ಚಾಣಾಕ್ಷ ಅಮಿತ್ ಷಾ ಲೆಕ್ಕಾಚಾರ ತಲೆಕೆಳಗಾದರೆ ಬಿಜೆಪಿಯಲ್ಲಿ ಸಣ್ಣ ಮಟ್ಟಿನಲ್ಲಿರುವ ಮೋದಿ ವಿರೋಧಿಗಳ ಧ್ವನಿ ಸ್ವಲ್ಪ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ಅದಕ್ಕಾಗಿಯೇ ಮೋದಿ ಟೀಮ್ ಎಲ್ಲಾ ಆಯ್ಕೆಗಳನ್ನೂ ಮುಕ್ತವಾಗಿರಿಸಿದೆ. ಸುಶೀಲ್ ಕುಮಾರ್ ಮೋದಿ ಒಬ್ಬರೇ ನಿತೀಶ್ ವಿರುದ್ಧ ತೊಡೆ ತಟ್ಟಬಲ್ಲ ಸಮರ್ಥ ನಾಯಕರಾಗಿದ್ದರೂ ದೆಹಲಿ ಚುನಾವಣೆಯಂತೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿ ಚುನಾವಣೆಗೆ ಹೋಗುವುದು ಅನುಮಾನ. ನರೇಂದ್ರ ಮೋದಿ ಹೆಸರಿನಲ್ಲಿ ಪ್ರವಾಹವನ್ನು ಈಜಿ ನಂತರ ಸುಶೀಲ್ ಮೋದಿಗೆ ಪಟ್ಟ ಕಟ್ಟುವ ಸಾಧ್ಯತೆಗಳೇ ಜಾಸ್ತಿ. ಇನ್ನು ಮಾಜಿ ಮುಖ್ಯಮಂತ್ರಿ ಜಿತೆನ್ ಮಾಂಜಿ ಬಿಜೆಪಿ ತೆಕ್ಕೆಯಲ್ಲಿದ್ದು ಅದೆಷ್ಟು ವರದಾನವಾಗುತ್ತಾರೋ ಕಾಲವೇ ಉತ್ತರಿಸಬೇಕು. ಮೋದಿ ಪ್ರಚಾರದ ಅಸ್ತ್ರಗಳನ್ನು ನಿತೀಶ್ ನಕಲು ಮಾಡುತ್ತಿರುವುದೂ ಬಿಜೆಪಿಗೆ ತಲೆನೋವಾಗಿದೆ. ಅಬ್ಕಿ ಬಾರಿ ಮೋದಿ ಸರಕಾರ್ ಘೋಷಣೆಯಂತೆ ಫಿರ್ ಏಕ್ ಬಾರ್ ನಿತೀಶ್ ಕುಮಾರ್ ಘೋಷಣೆಯೂ ಜೋರಾಗೇ ಮೊಳಗುತ್ತಿದೆ. ಮೋದಿಯವರ ಚಾಯ್ ಪೇ ಚರ್ಚಾಕ್ಕೆ ಪ್ರತಿಯಾಗಿ ನಿತೀಶ್ ನಾಷ್ಟಾ ಪೇ ಚರ್ಚಾಗೆ ಮುಂದಾಗಿದ್ದಾರೆ.
ಬಿಹಾರದ ತುಂಬ ನರೇಂದ್ರ ಮೋದಿ ಹಾಗೂ ನಿತೀಶ್ ಕಟೌಟ್ ಗಳು ರಾರಾಜಿಸುತ್ತಿವೆ. ಬಿಜೆಪಿಯು ಕೇಂದ್ರ ಸಚಿವ, ಕನ್ನಡಿಗ ಅನಂತಕುಮಾರ್ ನೇತೃತ್ವದಲ್ಲಿ ಬಹಳ ಜೋರಾಗಿಯೇ ಪ್ರಚಾರವನ್ನು ಆರಂಭಿಸಿದೆ. ನರೇಂದ್ರ ಮೋದಿ ಈಗಾಗಲೇ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಿತೀಶ್ ಕುಮಾರ್ ಕೂಡಾ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಅಂತಿಮ ತೀರ್ಮಾನ ಜನರದ್ದು. ಗಾಳಿ ಬಂದ ಹಾಗೆ ಬದಲಾಗುವ ಈ ರಾಜಕೀಯದಲ್ಲಿ ನಾಳೆ ಏನಾದೀತೆಂದು ಊಹಿಸುವುದು ಬಲು ಕಷ್ಟ. ಆದರೂ ದೇಶದ ಜನರ ಗಮನ ಹಾಗೂ ಚಿತ್ತ ಬಿಹಾರದತ್ತ ಹರಿದಿರುವುದು, ರಾಜಕೀಯ ಪ್ರಿಯರಿಗೆ ರಸದೌತಣ ಸಿಗುವುದಂತೂ ಸತ್ಯ.
Facebook ಕಾಮೆಂಟ್ಸ್