ಇದು ಬರೋಬ್ಬರಿ ಹದಿನೇಳು ವರ್ಷಗಳ ಹಿಂದಿನ ಘಟನೆ, ನನಗಿನ್ನೂ ನೆನಪಿದೆ. ನಾನಾಗ ಒಂದನೇ ಕ್ಲಾಸಿನಲ್ಲಿದ್ದೆ. ಆವತ್ತು ಆಗಸ್ಟ್ ಆರು, ಏಳಕ್ಕೆ ತುಳುನಾಡಿನಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುವ ನಾಗರ ಪಂಚಮಿ ಹಬ್ಬ. ಆ ಪ್ರಯುಕ್ತ ವಿಶೇಷವಾಗಿ ಮಾಡುವ ಅರಶಿನ ಎಲೆ ಕೊಟ್ಟಿಗೆ ಮತ್ತು ಹಬ್ಬಕ್ಕೆ ಬೇಕಾದ ತಯಾರಿಗಳು ಜೋರಾಗಿಯೇ ನಡೆದಿತ್ತು ಆ ದಿನ ಸಂಜೆ. ಆವಾಗೆಲ್ಲ ಈಗಿನಂತಲ್ಲ, ಆಟಿ ತಿಂಗಳಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ಈಗ ಅಂತಹ ಮಳೆಯೇ ಬರುವುದಿಲ್ಲ ಬಿಡಿ. ಬಂದರೂ ಒಂದೈದು ನಿಮಿಷ ಅಷ್ಟೇ.
ಆವತ್ತು ಮಳೆಯಲ್ಲಿ ತೊಯ್ದುಕೊಂಡು ಬಂದು ಮನೆ ಸೇರಿದ್ದೆ ನಾನು. ಸುಮಾರು ಆರು ಘಂಟೆಯ ಸಮಯ, ಹೆಚ್ಚಾಗಿ ಅದನ್ನು ‘ಮೂರು ಸಂಧಿ’ಯ ಸಮಯ ಎನ್ನುತ್ತಾರೆ. ಅಷ್ಟೊತ್ತಿಗೆ ಮನೆಗೆ ಯಾರೋ ಬಂದು ನನ್ನ ದೊಡ್ಡಪ್ಪನಲ್ಲಿ “ಅಣ್ಣೆರೆ ಅಣ್ಣೆರೆ, ಆಲದಗುಂಡಿಡ್ ಸೌಮ್ಯನ್ ಕೆರ್ತೆರ್’ಗೆ” (ಅಣ್ಣ, ಆಲದಗುಂಡಿಯಲ್ಲಿ ಸೌಮ್ಯನನ್ನು ಯಾರೋ ಕೊಲೆ ಮಾಡಿದ್ದಾರಂತೆ) ಎಂದು ತುಳುಭಾಷೆಯಲ್ಲಿ ಹೇಳಿ ಅಲ್ಲಿಂದ ಓಡಿದ. ದೊಡ್ಡಪ್ಪನಿಗೆ ಅದೇ ಹೆಸರಿನ ಮಗಳಿರುವುದರಿಂದ ದೊಡ್ಡಪ್ಪನಿಗೂ ಸೇರಿ ನನ್ನ ಮನೆಯವರೆಲ್ಲರಿಗೂ ಬಹಳ ಗಾಬರಿಯಾಗಿತ್ತು, ಅದೇ ಗಾಬರಿಯಲ್ಲಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಎಲ್ಲರೂ ದಡಬಡನೆ ಹೊರಟರು. ಮಳೆಯೆಂದರೆ ಭೀಕರ ಮಳೆಯದು, ಆ ಮಳೆಗೆ ನನ್ನನ್ನು ಕರೆದೊಯ್ಯಲು ಕಷ್ಟವೆಂದು ನನ್ನಮ್ಮ ಮನೆಯಲ್ಲಿಯೇ ನನ್ನನ್ನು ಬಿಟ್ಟು ತೆರಳಲು ಸಿದ್ಧರಾದರು. ಆದರೆ ಹಠಮಾಡಿ, ಕೂಗಿ ನಾನೂ ಅವರ ಜೊತೆ ಹೊರಟೆ. ಧಾರಾಕಾರ ಮಳೆಯಲ್ಲಿ ಓಡುವಾಗ ಒದ್ದೆಯಾಗಿದ್ದರೂ ಸಹ ನಮ್ಮ ಮನೆಯವರನ್ನೇ ಕೊಲೆ ಮಾಡಲಾಗಿದೆ ಎನ್ನುವ ಗಾಬರಿಯಲ್ಲಿ ನಮ್ಮವರ ಮುಖದಲ್ಲಿತ್ತು. ಅಂತೂ ಕೊಲೆಯಾಗಿದೆ ಎನ್ನಲಾದ ಸ್ಥಳಕ್ಕೆ ತಲುಪಿದೆವು.
ನಾವು ತಲುಪುವ ಮೊದಲೇ ಅಲ್ಲಿ ನೂರಾರು ಜನ ಜಮಾಯಿಸಿದ್ದರು. ಎಲ್ಲರೂ ಮಳೆಗೆ ಒದ್ದೆಯಾಗಿಕೊಂಡು ಏನೋ ತಮಗೆ ತೋಚಿದಂತೆ ‘ಹಾಗಂತೆ, ಹೀಗಂತೆ’ ಎಂದು ಗುನುಗುತ್ತಿದ್ದರು. “ಕೊಲೆಯಾದವಳು ನಮ್ಮವಳೇ? ಬೇಡಪ್ಪಾ.. ಹಾಗಾಗಿರುವುದು ಬೇಡ” ಎಂದು ಬೇಡಿಕೊಳ್ಳುತ್ತಲೇ ಧಾವಂತದಲ್ಲಿ ಮುನ್ನುಗ್ಗಿದ್ದರು ನನ್ನ ಮನೆಯವರು. ಸ್ವಲ್ಪ ಹೊತ್ತಿನಲ್ಲೇ ತಿಳಿಯಿತು, ಕೊಲೆಯಾದವಳು ನಮ್ಮವಳಲ್ಲ, ಬೇರೊಬ್ಬಳು ಎಂದು, ಒಂದು ಮಟ್ಟಿಗೆ ಸ್ವಲ್ಪ ನಿಟ್ಟುಸಿರು ಬಿಟ್ಟರೂ ಕೊಲೆಯ ಭೀಕರತೆ ಎಲ್ಲರಲ್ಲೂ ಭಯ ಹುಟ್ಟಿಸಿತ್ತು. ಮತ್ತೊಬ್ಬ ನಮ್ಮಾಕೆಯೇ ಎನ್ನುವ ಬೇಸರವೂ ಮೂಡಿತ್ತು.
ನಾನು ಆ ದೇಹವನ್ನು ಕಣ್ಣಾರೆ ಕಂಡಿಲ್ಲವಾದರೂ, ನಮ್ಮವರು ಹೇಳಿದ್ದನ್ನು ಕೇಳಿ ಸ್ವಲ್ಪ ಸ್ವಲ್ಪ ತಿಳಿದುಕೊಂಡಿದ್ದೆ. ಇಪ್ಪತ್ತು ವರ್ಷದ ಆ ಸೌಮ್ಯ ಸ್ವಭಾವದ ಹುಡುಗಿ ಪುತ್ತೂರು ವಿವೇಕಾನಂದ ಕಾಲೇಜಿನಿಂದ ತನ್ನ ಮನೆಗೆ ಹೋಗುತ್ತಿದ್ದಾಗ ಆಲದಗುಂಡಿ ಎಂಬ ನಿರ್ಜನ ಪ್ರದೇಶದಲ್ಲಿ ಆ ರಾಕ್ಷಸನೊಬ್ಬ ಎದುರಾದ. ಪ್ರೇಮ ನಿವೇದನೆ ಮಾಡಿಕೊಂಡ, ಅನ್ಯಮತೀಯನಾಗಿದ್ದ ಆತನಿಗೆ ಅವಳು ಸುತರಾಂ ಸೊಪ್ಪು ಹಾಕಲಿಲ್ಲ. ಆಗಿನ ಕಾಲದಲ್ಲಿ ನಡೆದ ಮೊದಲ ಲವ್ ಜಿಹಾದ್ ಪ್ರಯತ್ನಕ್ಕೆ ಅವಳು ಒಪ್ಪದಿದ್ದಾಗ ಬಲವಂತ ಮಾಡಿದ. ಅದಕ್ಕೂ ಜಗ್ಗದ ಆಕೆಯನ್ನು ಆತ ಇರಿದು ಕೊಂದು ಬಿಟ್ಟ. ಒಂದಲ್ಲ ಎರಡಲ್ಲ 21 ಬಾರಿ ಇರಿದಿದ್ದನಂತೆ ಆ ದುರುಳ. ದೇಹದ ತುಂಬೆಲ್ಲಾ ಇರಿದ ಗಾಯ. ಹೇಗಿದ್ದಿರಬಹುದು ಯೋಚಿಸಿ. ಅಷ್ಟು ಮಾಡಿ ಪಕ್ಕದ ನೀರಿನ ತೊರೆಯಲ್ಲಿ ಎಸೆದು ಪರಾರಿಯಾಗಿದ್ದ. ಇರಿತಕ್ಕೊಳಗಾದ ಆಕೆಯ ದೇಹದಿಂದ ಬರುತ್ತಿದ್ದ ರಕ್ತ ತೊರೆಯ ನೀರಿನ ಜೊತೆ ಸೇರಿ ರಕ್ತವೇ ಹರಿದು ಹೋದಂತೆ ಕಾಣುತ್ತಿತ್ತಂತೆ!
ಮತ್ತೆ ನಡೆದಿದ್ದೆಲ್ಲವೂ ಇತಿಹಾಸ. .ಅಂತಹಾ ಗಲಾಟೆಯನ್ನು ನನ್ನೂರು ಎಂದೂ ಕಂಡಿರಲಿಕ್ಕಿಲ್ಲ. ಆಕೆಯನ್ನು ಬರ್ಬರವಾಗಿ ಕೊಲೆಗೈದ ಆರೋಪಿ ಪತ್ತೆಗಾಗಿ ಹೋರಾಟ ಶುರುವಾಯಿತು. ಆಕೆ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರಿಂದ ಆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೋರಾಟಕ್ಕಿಳಿದಿದ್ದರು. ಈ ಹೋರಾಟಗಳು ಕೋಮು ಭಾವನೆ ಪಡೆದುಕೊಂಡು ದೊಡ್ಡ ಗಲಾಟೆಗಳೇ ಆರಂಭವಾದವು. ಆವಾಗ ಮಹಿಳಾ ನಾಯಕಿಯಾಗಿದ್ದ ಶಕುಂತಳಾ ಶೆಟ್ಟಿಯವರು “ಪೋಲಿಸ್’ನಕ್ಲೆನ ಜೋಕ್ಲೆಗ್ ಇಂಚ ಆಂಡ ದಾದ ಮಲ್ಪೆರ್?”( ಪೋಲೀಸರ ಮಕ್ಕಳಿಗೆ ಈಥರಾ ಆದರೆ ಏನು ಮಾಡುತ್ತಾರೆ?) ಎನ್ನುತ್ತಾ ಆರೋಪಿಯನ್ನು ಬಂಧಿಸಲು ಸಾಧ್ಯವಾಗದ ಪೋಲಿಸರಿಗೆ ಬಹಿರಂಗ ಸವಾಲು ಹಾಕಿದ್ದರು. ರಾಜಕೀಯ ನಾಯಕರ ಸೇರ್ಪಡೆ, ಸಂಘಟನೆಗಳ ಬೆಂಬಲದೊಂದಿಗೆ ವಿದ್ಯಾರ್ಥಿಗಳ ಹೋರಾಟ ಮತ್ತೊಂಡು ಸ್ವರೂಪ ಪಡೆಯಿತು. ಕೆಲ ಕಿಡಿಗೇಡಿಗಳೂ ತಮ್ಮ ಕರಾಮತ್ತು ತೋರಿಸಿದರು. ಕಂಡ ಕಂಡವರು ಮೇಲೆ ದಾಳಿ ಮಾಡುವುದು, ತಲವಾರಿನಿಂದ ಕಡಿಯುವುದು, ಅಂಗಡಿಗಳಿಗೆ ಬೆಂಕಿಯಿಡುವುದು, ಕಲ್ಲು ತೂರಾಟ ನಡೆಸುವುದು, ವಾಹನಗಳಿಗೆ ಹಾನಿ ಮಾಡುವುದು,ರಸ್ತೆ ತಡೆ ಮಾಡುವುದು, ಒಟ್ಟಿನಲ್ಲಿ ಪುತ್ತೂರಿಗೆ ಪುತ್ತೂರೇ ಈ ಕೋಮು ಗಲಭೆಗೆ ನಲುಗಿ ಹೋಯಿತು.
ಪರಿಸ್ಥಿತಿ ನಿಯಂತ್ರಣಕ್ಕಾಗಿ ಪುತ್ತೂರಿನಲ್ಲಿ ಕರ್ಫ್ಯೂ ಹೇರಲಾಯಿತು ಕಂಡಲ್ಲಿ ಗುಂಡಿಕ್ಕುವ ಆದೇಶ ಬಂತು. ಮನೆಯಿಂದ ಹೊರ ಬರಲೂ ಹೆದರಬೇಕು. ಒಟ್ಟಿನಲ್ಲಿ ಭಯದಲ್ಲಿ ಜೀವಿಸುವ ವಾತಾವರಣ. ಆದರೆ ನನ್ನ ತಂದೆ ಮತ್ತು ಪಕ್ಕದ ಮನೆಯವರೆಲ್ಲಾ ಸೇರಿ ಪೋಲೀಸರ ಕಣ್ಣು ತಪ್ಪಿಸಿ ಆಲದ ಗುಂಡಿ, ವಡ್ಯ ಮುಂತಾದ ಕಡೆ ಹೋಗುತ್ತಿದ್ದರು. ಎಲ್ಲರೂ ಒಂದು ಕಡೆ ಸೇರಿ ‘ಅಲ್ಲಿ ಹಾಗಾಯ್ತಂತೆ, ಇಲ್ಲಿ ಇವನಿಗೆ ಕಡಿದರಂತೆ’ ಎಂದು ಪಟ್ಟಾಂಗ ಹಾಕುತ್ತಿದ್ದರು. ಆ ಭಾರಿಯೂ ನಾನು ಹಠ ಹಿಡಿದು ಅಪ್ಪನೊಂದಿಗೆ ಹೋಗಿದ್ದೆ. ಮತ್ತೊಮ್ಮೆ ಮನೆಯಲ್ಲಿ ಸಕ್ಕರೆ ಖಾಲಿಯಾಗಿತ್ತು. ಸಕ್ಕರೆ ತರಬೇಕೆಂದರೆ ಕನಿಷ್ಟ ಎಂದರೂ ಅರ್ಧ ಕಿಲೋಮೀಟರ್ ನಡೆಯಬೇಕಿತ್ತು. ಅಮ್ಮ ಧೈರ್ಯ ಮಾಡಿ ಸಕ್ಕರೆ ತರಲು ಹೊರಟರು, ನಾನೂ ಹೊರಟೆ. ಅಲ್ಲಿ ವಿದ್ಯಾಪುರದ ಬೇಕರಿಯ ಜಗುಲಿಯಲ್ಲಿ ಉದ್ದದ ಬಂದೂಕ ಹಿಡಿದು ನಿಂತಿದ್ದ ಪೋಲೀಸಿನವನೊಬ್ಬ ಅಮ್ಮನನ್ನು ಗದರಿದರು. ನಾನೂ ಬೆದರಿ ಹೋಗಿದ್ದೆ. ಇದೆಲ್ಲಾ ಆ ಭಯಾನಕ ದಿನಗಳಿಗೆ ಹಿಡಿದ ಕನ್ನಡಿಯಾಗಿತ್ತು.
ಕೆಲ ಸಮಯದ ನಂತರ ಆಕೆಯನ್ನು ಕೊಂದ ರಾಕ್ಷಸನನ್ನು ಬಂಧಿಸಲಾಯ್ತು. ಆದರೆ ಬಂಧನಕ್ಕೊಳಗಾದಷ್ಟೇ ವೇಗದಲ್ಲಿ ಆತ ಜೈಲಿನಿಂದ ಪರಾರಿಯಾದ. ಮತ್ತೆ ಕೆಲ ಸಮಯದ ಬಳಿಕ ಮತ್ತೆ ಪುನಃ ಬಂಧಿಸಲಾಯ್ತು. ಕೋರ್ಟು ತಪ್ಪಿತಸ್ಥನೆಂದು ಪರಿಗಣಿಸಿ ಆತನಿಗೆ ಶಿಕ್ಷೆ ನೀಡಿತು. ಆದರೆ ಆ ಕಟುಕ ಮಿಲಿಟರಿಯಲ್ಲಿದ್ದನಂತೆ ಮೊದಲು. ಬಹುಶಃ ಈ ಸುರಂಗ ಕೊರೆದು ತೂರಿಕೊಳ್ಳುವುದೆಲ್ಲ ಮಾಮೂಲಿಯಾಗಿದ್ದಿರಬೇಕು. ಆಸಾಮಿ ಮತ್ತೆ ಜೈಲೊಳಗೆ ಕನ್ನ ಕೊರೆದು ಪರಾರಿಯಾದವನು ಇವತ್ತಿಗೂ ಪತ್ತೆಯಾಗಿಲ್ಲ. ನಮ್ಮ ಪೋಲೀಸರೂ ನಿಷ್ಕ್ರಿಯರಾಗುವುದರೊಂದಿಗೆ ಆ ಕೇಸೂ ಭಾಗಶಃ ಬಿದ್ದು ಹೋಯಿತು.
‘ಸೌಮ್ಯ ಭಟ್ ಕೊಲೆ ಪ್ರಕರಣ’ ಎಂದೇ ಗುರುತಿಸಲ್ಪಡುವ ಆ ಘಟನೆ ನಮ್ಮೂರಿನವರಿಗೆ ಎಂದಿಗೂ ಮರೆಯಲಾಗದ ಘಟನೆ. ಆಕೆಯ ನೆನಪಿಗೆ ಆಕೆ ಕೊಲೆಯಾದ ಸ್ಥಳದ ಪಕ್ಕದಲ್ಲಿಯೇ ಅಶ್ವಥ ಮರ ನೆಟ್ಟು ಅದಕ್ಕೊಂದು ಕಟ್ಟೆ ಕಟ್ಟಿದ್ದೇವೆ. ಆಕೆಯ ನೆನಪಲ್ಲಿ ನಮ್ಮೂರಲ್ಲಿ ಬಸ್ಸು ತಂಗುದಾಣ ನಿರ್ಮಿಸಿದ್ದೇವೆ. ಆಕೆಯ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆದರೆ ನಮಗೆಲ್ಲರಿಗೂ ಕೆಲವು ವಿಷಯಗಳು ಇಂದಿಗೂ ಕಾಡುತ್ತಿದೆ, ಪ್ರೀತಿ ನಿರಾಕರಿಸಿದಳೆಂಬ ಮಾತ್ರಕ್ಕೆ ಆ ಅಮಾಯಕ ಹುಡುಗಿಗೆ ಇಪ್ಪತ್ತೊಂದು ಭಾರಿ ಇರಿಯಲು ಅವನಿಗೆ ಮನಸ್ಸಾದರೂ ಹೇಗೆ ಬಂತು? ಆ ಸುಂದರ ಸೌಮ್ಯ ಬದುಕಿಗೆ ಕೊಳ್ಳಿಯಿಟ್ಟ ಆ ರಾಕ್ಷಸನೆಲ್ಲಿ??
ಉತ್ತರ ಕೊಡುವವರಾರು??
Facebook ಕಾಮೆಂಟ್ಸ್