X

ಸನ್ಯಾಸಿ ಮತ್ತು ಸಂಸಾರಿ

ಒಂದಾನೊಂದು ಕಾಲದಲ್ಲಿ ರಾಜನೋರ್ವ ಬಹು ಪ್ರಖ್ಯಾತನಾಗಿದ್ದ. ಐಶ್ವರ್ಯ, ಆರೋಗ್ಯ, ಧನಬಲ ಎಲ್ಲವೂ ಆತನ ಬಳಿ ಇದ್ದವು. ಪ್ರಜೆಗಳು ನಿಷ್ಠರಾಗಿದ್ದರು, ಶತ್ರುಗಳು ಹೆದರುತ್ತಿದ್ದರು. ಕಾಲ ಕಾಲಕ್ಕೆ ಮಳೆ – ಬೆಳೆ ಎಲ್ಲವೂ ಆಗುತ್ತಿದ್ದವು. ಆದರೆ, ಇಷ್ಟಾದರೂ ರಾಜನಿಗೆ ನೆಮ್ಮದಿ ಇರಲಿಲ್ಲ. ಸದಾ ದುಃಖಿತನಾಗಿಯೇ ಇರುತ್ತಿದ್ದ. ಕಾರಣವೇನೆಂಬುದೂ ತಿಳಿದಿರಲಿಲ್ಲ. ಕೊನೆಗೆ ಸಂತೋಷ​ ಗಳಿಸಿಕೊಳ್ಳಲು ನಾನಾ ಸಾಧು – ಸಂತರನ್ನು ಭೇಟಿ ಮಾಡಿದರೂ ಪ್ರಯೋಜನವಾಗಲಿಲ್ಲ. ಮಹಾನ್ ಸಾಧುವೊಬ್ಬರು ಅವನ ನಗರಕ್ಕೆ ಬಂದರು. ಕೊನೆಯ ಪ್ರಯತ್ನವೆಂದು ರಾಜ ಆ ಸಾಧುವಿನ ಬಳಿ ಹೋಗಿ ತನ್ನ ದುಃಖ ತೋಡಿಕೊಂಡ. ಸಾಧು ಅವನ ದುಃಖ ನಿವಾರಣೆಯ ಮಾರ್ಗೋಪಾಯ ತನ್ನ ಬಳಿ ಇದೆ ಎಂದು ಘೋಷಿಸಿದರು.

ರಾಜ ಮಾರ್ಗೋಪಾಯ ಕೇಳಲು ಕಾತುರದಿಂದಿದ್ದ. ಸಾಧು ಹೇಳಿದರು, ನಿನ್ನ ರಾಜ್ಯದಲ್ಲಿ ಅತ್ಯಂತ ಸಂತೋಷಿಯಾಗಿರುವ, ದುಃಖದ ಸೊಲ್ಲೇ ಇರದ ವ್ಯಕ್ತಿಯ ಅಂಗಿಯನ್ನು ನೀನು ಹಾಕಿಕೊಂಡರೆ ನಿನಗೆ ನೆಮ್ಮದಿ ದೊರೆಯುತ್ತದೆ!

ತಕ್ಷಣವೇ ರಾಜ ತನ್ನ ಆಸ್ಥಾನದಲ್ಲಿದ್ದ ಮಂತ್ರಿಗಳು, ಶ್ರೀಮಂತರೆಲ್ಲರನ್ನೂ ಕರೆಸಿದ. ಸಾಧು ಹೇಳಿದ ವಿವರಗಳನ್ನು ತಿಳಿಸಿ, ನಿಮ್ಮಲ್ಲಿ ನಿಷ್ಕಲ್ಮಶ ಸಂತೋಷ ಹೊಂದಿದವರು ಅಂಗಿಯನ್ನು ಕೊಡಿ ಎಂದು ಕೇಳಿದ. ಆದರೆ, ಯಾರೊಬ್ಬರೂ ಮುಂದೆ ಬರಲಿಲ್ಲ. ಎಲ್ಲರೂ ತಮಗೆ ಒಂದಲ್ಲಾ ಒಂದು ನೋವಿದೆ – ದುಃಖವಿದೆ ಎಂದು ಹೇಳಿ ಹಿಂದೆ ಸರಿದರು. ಇಡೀ ನಗರ ಶೋಧಿಸಿದರೂ ಸಂತೃಪ್ತರಾಗಿರುವ ವ್ಯಕ್ತಿ ದೊರೆಯಲಿಲ್ಲ. ಡಂಗೂರ ಸಾರಿ, ದೂರ ದೂರದ ಊರುಗಳಲ್ಲಿ ಹುಡುಕಿದರೂ ಅಂತಹ ವ್ಯಕ್ತಿ ದೊರೆಯಲೇ ಇಲ್ಲ. ಕೊನೆಗೂ ಒಂದು ದಿನ ಸಂತೃಪ್ತ ವ್ಯಕ್ತಿ ರಾಜನಿಗೆ ದೊರೆಕಿಯೇ ಬಿಟ್ಟ. ಅವನು ನಗರದ ಪಕ್ಕದಲ್ಲಿ ಹರಿಯುತ್ತಿದ್ದ ನದಿಯ ತಟದಲ್ಲಿ ನೆಲೆಸಿದ್ದ. ಬರಿಗಾಲಲ್ಲೇ ರಾಜ ಆತನ ಬಳಿ ಓಡಿದ. ಸಂತೃಪ್ತ ವ್ಯಕ್ತಿ ಗುಡಿಸಲಲ್ಲಿ ನೆಲೆಸಿದ್ದ. ಮನೆಯಲ್ಲಿ ಹೆಚ್ಚು ವಸ್ತುಗಳು ಇರಲಿಲ್ಲ. ಇದ್ಯಾವುದನ್ನೂ ಗಮನಿಸಿದ ರಾಜ, ಆತನನ್ನು ತಬ್ಬಿಕೊಂಡು, ಮಿತ್ರಾ ನಿನ್ನ ಅಂಗಿಯನ್ನು ಕೊಟ್ಟು ನನ್ನ ನೋವನ್ನು ನಿವಾರಿಸಿ ಎಂದು ಮೊರೆಯಿಟ್ಟ.

ಆದರೆ, ಆ ವ್ಯಕ್ತಿ ಅಸಹಾಯಕನಾಗಿದ್ದ,ಏಕೆಂದರೆ ಸಂತೃಪ್ತ ವ್ಯಕ್ತಿಯ ಬಳಿ ಅಂಗಿಯೇ ಇರಲಿಲ್ಲ! ಅಂಗಿ ತೊಡುವಷ್ಟು ದುಡ್ಡು ಅವನ ಬಳಿ ಇರಲಿಲ್ಲ. ರಾಜನ ದುಃಖ ಕೊನೆಗೂ ನಿವಾರಣೆ ಆಗಲೇ ಇಲ್ಲ.

ಈ ಕಥೆ ಹಳೆಯದೇ. ಆದರೆ ಇಂತಹ ಕಥೆಯನ್ನು ಸುಮ್ಮನೇ ಬರೆದಿರಲಾರರು ಎಂದೇ ನನ್ನ ಅಭಿಪ್ರಾಯ. ಇಷ್ಟಕ್ಕೂ ಕಥೆ ಸುಮ್ಮನೇ ಬರೆದಿದ್ದರೂ, ಅದರಲ್ಲಿ ಇಲ್ಲದೇ ಇರುವ ಅರ್ಥ ಹುಡುಕುವುದು ತಾನೇ ವಿತಂಡವಾದಿಗಳ​ ಕೆಲಸ? ಹೀಗಾಗಿ ನನ್ನ ಅರ್ಥವನ್ನೂ ಹೇಳಿಯೇ ಬಿಡುತ್ತೇನೆ, ಓದುವವರಾಗಿ.

ವ್ಯಕ್ತಿಗಳ ಜೀವನದಲ್ಲಿ ಒಳ್ಳೆಯ ದಿನಗಳು ಬಂದವು ಎಂದರೆ, ಬಂತಪ್ಪಾ ರಾಜಯೋಗ ಎಂದು ಹೇಳುತ್ತಾರೆ. ರಾಜಯೋಗ ಎಂದರೆ ಶುಭಕಾರಕ ಎಂದೇ ಎಲ್ಲರ ಅಭಿಪ್ರಾಯ. ಆದರೆ, ನನಗೇಕೋ ರಾಜಯೋಗ ಎಂದರೆ ಬಲು ಭೀತಿ. ರಾಜಕಾರಣ ಎಂಬ ಪದ ಬಂದಿರುವುದೂ `ರಾಜ’ನಿಂದಲೇ ಅಲ್ಲವೇ? ಆಡಳಿತ ಎಂದರೆ ಸುಮ್ಮನೆಯೇ? ಒಂದು ಸಂಸಾರ ತೂಗಿಸಿಕೊಂಡು ಹೋಗುವುದೇ ಕಡು ಕಷ್ಟವಾಗಿರುವಾಗ, ಇಡೀ ರಾಜ್ಯವನ್ನು ತಲೆಯ ಮೇಲೆ ಹೊತ್ತುಕೊಳ್ಳುವುದು ಸುಮ್ಮನೆ ಆಗುವ ಮಾತಲ್ಲ. ಇಷ್ಟಕ್ಕೂ ಮೀರಿ ಶತ್ರುಗಳ ತಂಟೆ. ಒಳ ಶತ್ರುಗಳ ಕಾಟ. ರಾಜನಿಗೆ ಬಹು ಹೆಂಡಿರಂತೆ, ಅವರನ್ನೆಲ್ಲಾ ನಿಭಾಯಿಸುವ ವೇಳೆಗೆ, ರಾಜ ನೆಮ್ಮದಿಯಾಗಿರಲು ಹೇಗೆ ಸಾಧ್ಯ? ಹೀಗೆಲ್ಲಾ ರಾಜರುಗಳು ಕಷ್ಟಪಡುತ್ತಿರುವಾಗ ರಾಜಯೋಗ ಎಂಬ ಪದಕ್ಕೆ ನಿಜವಾಗಿಯೂ ಬೇರೆ ಅರ್ಥ ಹುಡುಕುವುದು ಸೂಕ್ತ.

ಹೀಗಾಗಿಯೇ ಕಥೆಯಲ್ಲಿನ ರಾಜ ನೆಮ್ಮದಿ ಕಳೆದುಕೊಂಡಿದ್ದು ಸಹಜವಾಗಿಯೇ ಇದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುತ್ತಾರೆ. ಹೀಗಾಗಿ ನಾವೆಲ್ಲಾ ಪ್ರಜೆಗಳೂ ಸಹ ರಾಜರೇ. ತನ್ನಿಮಿತ್ತ, ಈ ರಾಜನ ಕಥೆಯೂ ನಮ್ಮದೇ ಕಥೆ ಆಗಿದೆ. ನಾವೂ ಸಹ ನಮ್ಮ ನಮ್ಮ ಮನೆಗಳಲ್ಲಿ ರಾಜರೋ – ರಾಣಿಯರೋ ಆಗಿರುತ್ತೇವೆ. ನೂರೆಂಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿರುತ್ತೇವೆ. ಈ ಜವಾಬ್ದಾರಿಗಳು, ಹೊಣೆಗಾರಿಕೆಗಳು, ಕೆಲಸಗಳು, ನೋವುಗಳು, ಆತಂಕಗಳು, ಪಡಿಪಾಟಲುಗಳ ನಡುವೆ ನೆಮ್ಮದಿ ಎಲ್ಲರಲು ಸಾಧ್ಯ?​ನಾವೂ ಸಹ ರಾಜನಂತೆ ನೆಮ್ಮದಿ ಎಲ್ಲಿದೆ ಎಂದು ಹುಡುಕುತ್ತಲೇ ಇರುತ್ತೇವೆ. ಆಗಲೇ ಯಾರಾದರೂ ಸಾಧುಗಳು ಸಿಕ್ಕಿ, ಹೋಗು ಸಂತೃಪ್ತಿಯಾಗಿರುವ ವ್ಯಕ್ತಿಯ ಅಂಗಿ ಇಸ್ಕೊಂಡು ಬಾ ಎಂದು ಆದೇಶಿಸುತ್ತಾರೆ.

ಆ ಸಂತೃಪ್ತ ವ್ಯಕ್ತಿಯೂ ಸಹ ನಾವಲ್ಲದೇ ಬೇರಾರು ಆಗಿರಲು ಸಾಧ್ಯ? ಆ ಸಂತೃಪ್ತ ವ್ಯಕ್ತಿ ನಮ್ಮಲ್ಲೇ ಇದ್ದಾನೆ. ಆದರೆ, ಅಂಗಿ ಹಾಕಿಕೊಳ್ಳುವುದು ಮಾತ್ರ ಆತನ ಜಾಯಮಾನಕ್ಕೆ ಒಗ್ಗದು. ದೇವರು ಮಕ್ಕಳನ್ನು ಕಳಿಸುವಾಗ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲವನ್ನೂ ಕೊಟ್ಟಿರುತ್ತಾನೆ. ಆದರೆ, ಅಂಗಿ ಮಾತ್ರ ಹಾಕಿರುವುದಿಲ್ಲ! ಅದು ಬೇಡ ಎಂದು ದೇವರೇ ನಿರ್ಧರಿಸಿರುವಾಗ, ಪಾಪ ನಮ್ಮ ಒಳಗಿನ ಸಂತೃಪ್ತ ವ್ಯಕ್ತಿಗೆ ಅಂಗಿ ಹಾಕಿಕೊಳ್ಳುವ ಕರ್ಮ ಏಕೆ ಬೇಕು?

ವಿಶ್ವದಲ್ಲಿ ಬಾತ್ ರೂಂ ಸಿಂಗರ್ ಆಗಿಲ್ಲದೇ ಇರುವ ವ್ಯಕ್ತಿಗಳು ಬಲು ಅಪರೂಪ. ಬಾತ್ ರೂಂ ಎಂಬುದು ಅದ್ಭುವಾದ ತಾಣ. ಅಲ್ಲಿ ಮನುಷ್ಯ ಸರ್ವ ಸ್ವತಂತ್ರನಾಗಿರಬಹುದು. ಬಟ್ಟೆಗಳಿಂದಲೂ ಸಹ. ಹೀಗಾಗಿಯೇ ಬಾತ್ ರೂಂನಲ್ಲಿ ಹಾಡು ತಾನೇ ತಾನಾಗಿ ಹೊರ ಹೊಮ್ಮುತ್ತದೆ. ನಮ್ಮೊಳಗಿನ ಈ ಸಂತೃಪ್ತ ವ್ಯಕ್ತಿ ಬಾತ್ ರೂಂನಲ್ಲಿ ಅನಾವರಣಗೊಳ್ಳುತ್ತಾನೆಂಬುದೇ ನನ್ನ ಅನುಮಾನ. ನೀವೂ ಸಂತೃಪ್ತ ವ್ಯಕ್ತಿಯ ಹುಡುಕಾಟವನ್ನು ಅಲ್ಲೇ ಆರಂಭಿಸಿದರೆ ತಪ್ಪೇನೂ ಇಲ್ಲ. ಜವಾಬ್ದಾರಿ, ಹೊಣೆಗಾರಿಕೆಗಳೊಂದೂ ಇಲ್ಲದೇ ಬಾತ್ ರೂಮಿನಲ್ಲಿ ಒಂದರ್ಧ ಗಂಟೆ ಸೇರಿಕೊಂಡು ನಿತ್ಯ ಮಹಾಮಜ್ಜನ ಮಾಡಿದರೆ ಧ್ಯಾನಕ್ಕಿಂತಲೂ ಹೆಚ್ಚಿನ ಫಲ ದೊರೆಯುವ ಸಾಧ್ಯತೆಗಳಿವೆ. ಟ್ರೈ ಮಾಡಿ ನೋಡಿ, ನಿಮ್ಮ ನಂತರ ಸ್ನಾನ ಮಾಡಬೇಕಾಗಿರುವವರು ತಾಳ್ಮೆಯಿಂದ ಅನುಮತಿ ಕೊಟ್ಟರೆ.

ಅಂದ ಹಾಗೆ, ಭಗವಂತನ ಬಳಿ ಅಂಗಿ ಬೇಕೆಂದು ಗಲಾಟೆ ಮಾಡದೇ ಬೆತ್ತಲಾಗಿಯೇ ಭೂಮಿಗೆ ಬಂದ ನಾವೆಲ್ಲಾ ಭೂಮಿಗೆ ಬಂದ ತಕ್ಷಣ ಪೂರಾ ಬದಲಾಗಿ ಬಿಡುತ್ತೇವೆ. ದಾಸರು ಹೇಳಿದ ಹಾಗೆ, ಹೊಟ್ಟೆ -ಬಟ್ಟೆಯ ಪರದಾಟದಲ್ಲಿ ತೊಡಗುತ್ತೇವೆ. ಹೊಟ್ಟೆಯ ಪರದಾಟ ಅರ್ಧವಾದರೆ, ಬಟ್ಟೆಯ ಪರದಾಟ ಇನ್ನರ್ಧ. ಹೀಗಾಗಿಯೇ ಬಟ್ಟೆ ಮತ್ತು ನೆಮ್ಮದಿಯ ನಡುವೆ ಬದ್ಧ ದ್ವೇಷವಿರಬೇಕು. ಏನೇ ಇರಲಿ, ಬಟ್ಟೆ ರಹಿತವಾಗಿ ಬದುಕುವುದು ಸನ್ಯಾಸಿಗಳಿಗೆ ಇಲ್ಲವೇ ಚಿತ್ರ ನಟ – ನಟಿಯರಿಗೆ ಮಾತ್ರ ಸಾಧ್ಯ. ನಮ್ಮಂತಹ ಪಾಮರರು ತುಸು ನೆಮ್ಮದಿ ಹಾಳು ಮಾಡಿಕೊಂಡರೂ ಸಹ ವಸ್ತ್ರಧಾರಿಗಳಾಗಿರಲೇ ಬೇಕು. ಕಿರೀಟವಿಲ್ಲದ ಆಧುನಿಗೆ ಪ್ರಜಾ- ಪ್ರಭುಗಳಾದ ನಾವುಗಳು ಹೊಣೆಗಾರಿಕೆ ಹೊತ್ತುಕೊಂಡು ನೆಮ್ಮದಿ ಕಳೆದುಕೊಳ್ಳುವ ಶಿಕ್ಷೆಗೆ ಒಳಗಾಗಿಯಾಗಿದೆ.

ನಮ್ಮಲ್ಲಿ ಒಬ್ಬ ರಾಜನಿರುವಂತೆ, ನೆಮ್ಮದಿಯ ವಸ್ತ್ರ ರಹಿತ ವ್ಯಕ್ತಿಯೂ ಇದ್ದಾನೆ. ಹೊರಗಿನ ಧಾವಂತವನ್ನು ಸ್ವಲ್ಪ ಮರೆತು ಒಳ ಹೊಕ್ಕು ನೋಡಿ ಎಂದು ಸಾಧುಗಳು ಸಾರುತ್ತಲೇ ಇದ್ದಾರೆ. ಪಾಪ, ಆ ನೆಮ್ಮದಿಯ ವ್ಯಕ್ತಿ ಬಾತ್ ರೂಂ ಹಾಡುವಾಗ, ಮಕ್ಕಳ ಜೊತೆ ನಲಿಯುವಾಗ, ಅಹಂಕಾರವನ್ನು ಬದಿಗೊತ್ತಿ ನಗುವಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾನೆ. ನಾವು ಮಾತ್ರ ಆವನಿಗೆ ಗೌರವ ಕೊಡದೇ ಮರೆತೇ ಬಿಡುತ್ತೇವೆ. ಸಂಸಾರ ಕೋಟಲೆಯ ರಾಜ ಕಿರೀಟವನ್ನು ಸ್ವಲ್ಪ ಬದಿಗೊತ್ತಿ, ಬೆತ್ತಲೆ ಸನ್ಯಾಸಿಯ ಜೊತೆಗಿಷ್ಟು ಹೊತ್ತು ಕಾಲ ಕಳೆದರೆ ನಾವು ಕಳೆದುಕೊಳ್ಳಬೇಕಾದ್ದು ಏನೂ ಇಲ್ಲ, ನಮ್ಮ ನೋವನ್ನು ಹೊರತು ಪಡಿಸಿ.

  • ಶ್ರೀನಿವಾಸ್ ಎಸ್ . ಎ , ದಾವಣಗೆರೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post