X

ಇವರಿಗೆ ಪವರು ಕೊಟ್ಟ ತಪ್ಪಿಗೆ ನಮಗೆ ಪವರು ಕಟ್..!

ಹೌದು. ಈ ಭಾರಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆಯಾಗಿದೆ. ಕಡಿಮೆ ಅಂದರೆ ಬಹಳ ಕಡಿಮೆ. ಉತ್ತರ ಕರ್ನಾಟಕದ ಗದಗ, ಹಾವೇರಿ, ಬೀದರ್, ರಾಯಚೂರನ್ನೆಲ್ಲಾ ಬಿಡಿ, ಪಕ್ಕಾ ಮಲೆನಾಡಾದ ಶಿವಮೊಗ್ಗ, ಉತ್ತರ ಕನ್ನಡ,  ಉಡುಪಿ, ದಕ್ಷಿಣ ಕನ್ನಡದಲ್ಲಿಯೇ ನಿರೀಕ್ಷಿತ ಮಟ್ಟದ ಅರ್ಧದಷ್ಟೂ ಮಳೆಯಾಗಿಲ್ಲ ಎಂದರೆ ಅದು ಬರಗಾಲದ ಭೀಕರತೆಯನ್ನು ಸಾರುತ್ತದೆ. ಆಗಸ್ಟ್ ಮುಗಿಯುತ್ತಿದೆ, ಬೆಳೆನಾಶದಿಂದ ತತ್ತರಿಸಿರುವ ರೈತ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ಗುಳೆ ಹೋಗುತ್ತಿದ್ದಾನೆ. ಕುಡಿಯುವ ನೀರಿಗೂ ಹಾಹಾಕಾರ ಏಳುತ್ತಿದೆ. ಈ ಎಲ್ಲಾ ಸಮಸ್ಯೆಗಳ ಜೊತೆಗೆ ಲೋಡ್’ಶೆಡ್ಡಿಂಗ್ ಜಾರಿಯಾಗಿ ಬಿಟ್ಟಿದೆ.

ದಿನಾಲೂ ರಾತ್ರಿ ಒಂದೆರಡು ಗಂಟೆ ಕರೆಂಟಿಲ್ಲ. ಹಗಲು ಹೊತ್ತಿನಲ್ಲಿ ಲೆಕ್ಕಕ್ಕೇ ಸಿಗುವುದಿಲ್ಲ. ಇರುವ ನೀರನ್ನಾದರೂ ಪಂಪ್ ಮಾಡೋಣವೆಂದರೆ ಅದಕ್ಕೂ ಕರೆಂಟಿಲ್ಲ. ವಿದ್ಯಾರ್ಥಿಗಳಿಗೆ ಓದುವುದಕ್ಕಾಗುವುದಿಲ್ಲ. ಇದೇನು ಎಪ್ರಿಲೋ ಮೇ’ಯೋ ಅಂದುಕೊಳ್ಳಬೇಕು. ಅಲ್ಲ. ಇದಿನ್ನೂ ಆಗಸ್ಟ್ ಅಷ್ಟೇ. ಈಗಲೇ ಲೋಡ್’ಶೆಡ್ಡಿಂಗ್ ಬಂದಿದೆ.

ಗೊತ್ತಿದೆ ತಾನೆ? ಏಷ್ಯಾದಲ್ಲೇ ಮೊದಲ ಜಲ ವಿದ್ಯುತ್ತ್ ಪಡೆದಿದ್ದು ನಾವು. ವಿಶ್ವದಲ್ಲಿಯೇ ಖ್ಯಾತಿಯನ್ನು ಪಡೆದಿರುವ ಎತ್ತರದಿಂದ ದುಮುಕುವ ಜೋಗವಿರುವುದು ನಮ್ಮಲ್ಲಿಯೇ.ನಮ್ಮ ನಂತರ ವಿದ್ಯುತ್ ಉತ್ಪಾದಿಸಿದ ಚೀನಾ, ಜಪಾನುಗಳು ಈಗಾಗಲೇ ವಿದ್ಯುತ್ ಸ್ವಾವಲಂಭಿಗಳಾಗಿವೆ. ಬಿಡಿ ನಮ್ಮ ಮೋದಿಯ ಗುಜರಾತ್ ಕೂಡಾ ಕಳೆದ ಕೆಲವು ವರ್ಷಗಳಿಂದ ಇಪ್ಪತ್ನಾಲ್ಕು ಘಂಟೆ ಕರೆಂಟು ಕೊಡುತ್ತಿದೆ. ಏಷ್ಯಾದಲ್ಲಿಯೇ ದೊಡ್ಡದಾದ ಸೋಲಾರ್ ಪವರ್ ಸಿಸ್ಟಮ್ ಸ್ಥಾಪಿಸಿ 800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ.    ನನಗನಿಸುತ್ತಿದೆ, ನಾವ್ಯಾಕೆ ಇನ್ನೂ ಹೀಗೆಯೇ ಇದ್ದೇವೆ? ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ನಮಗೇಕೆ ಇನ್ನೂ ಕೂಡಾ ವಿದ್ಯುತ್ತಿನ ವಿಷಯದಲ್ಲಿ ಸ್ವಾವಲಂಭಿಗಳಾಗಿಲ್ಲ? ಭರಪೂರ ನೀರಿನ ಮೂಲಗಳಿದ್ದರೂ ಸಹ ಏಕೆ ಇದು ಸಾಧ್ಯವಾಗುತ್ತಿಲ್ಲ? ಜಲವಿದ್ಯುತ್ ಬಿಟ್ಟು ಬೇರೆ ಮೂಲದಿಂದ ವಿದ್ಯುತ್ತಿನ ಉತ್ಪಾದನೆಯ ಕುರಿತು ಇನ್ವೆಷನ್’ಗಳು ಏಕೆ ನಡೆಯುತ್ತಿಲ್ಲಾ?

ನಾನಂದುಕೊಂಡಂತೆ ಏಕೆ ಸಾಧ್ಯವಾಗುತ್ತಿಲ್ಲವೆಂದರೆ, ಅದೆಲ್ಲಾ ಸುಖಾ ಸುಮ್ಮನೆ ಸಾಧ್ಯವಾಗುವಂತವಲ್ಲ. ಅವೆಲ್ಲಾ ಪುಕ್ಕಟೆ ಪ್ರಚಾರಕ್ಕಾಗಿ ಭಾಗ್ಯಗಳನ್ನು ಘೋಷಿಸಿದಂತಲ್ಲ. ಅದಕ್ಕೆ ತನ್ನ ಪ್ರಜೆಗಳ ಭವಿಷ್ಯವನ್ನು ಕನಸು ಕಾಣುವಂತಹ ಯುಕ್ತಿ ಬೇಕು. ತನ್ನನ್ನು ಆರಿಸಿದ ಜನರ ಬಾಳನ್ನು ಹಸನಾಗಿಸುವ ಇಚ್ಛಾಶಕ್ತಿ ಬೇಕು. ಎಕ್ಸಲೆಂಟ್ ಐಡಿಯಾಗಳು ಬೇಕು. ಭವಿಷ್ಯ ಇದೇ ಥರ ಇರಬೇಕೆಂಬ ಮುಂದಾಲೋಚನೆ ಬೇಕು ಮತ್ತು ಅದಕ್ಕೆ ತಕ್ಕುದಾದ ಕಾರ್ಯಯೋಜನೆ, ಪರಿಶ್ರಮ ಬೇಕು. ನೀವೇ ಹೇಳಿ, ಇವು ಯಾವುದಾದರೂ ನಮ್ಮ ಮಂತ್ರಿಗಳಲ್ಲಿ ಇದೆಯಾ?

ಅನ್ನ ಭಾಗ್ಯ, ಶಾದಿ ಭಾಗ್ಯ ಕೊಡುವುದು ಬೇಡ ಎಂದು ಹೇಳುತ್ತಿಲ್ಲ. ಆದರೆ ಅಂತಹ ನಿಸ್ಸತ್ವ ಯೋಜನೆಗಳಿಗೆ ಕೊಡುವ ಮಹತ್ವದ ಅರ್ಧದಷ್ಟನ್ನಾದರೂ ವಿದ್ಯುತ್ ಉತ್ಪಾದನೆಗೆ, ಸಂಶೋಧನೆಗೆ ಏಕೆ ಕೊಡಬಾರದು? ಎನ್ನುವುದು ನನ್ನ ಪ್ರಶ್ನೆ. ಒಂದಂತೂ ಸತ್ಯ. ಈ ಭಾಗ್ಯಗಳು ಒಂದು ಸರಕಾರ ಇರುವವರೆಗೆ ಮಾತ್ರ. ಮುಂದೆ ಆ ಸರಕಾರ ಹೋಗಿ ಹೊಸ ಸರಕಾರ ಬರುವಾಗ ಈ ಭಾಗ್ಯಗಳ ಮೇಲೆ ಹೊಸ ಸರಕಾರದ, ಹೊಸ ಮಂತ್ರಿಗಳ ಹೆಸರು ಬಂದಿರುತ್ತದೆ. ಅಲ್ಲಿಗೆ ಜನರೂ ಮೂಲ ಪುರುಷರನ್ನು ಮರೆತು ಬಿಡುತ್ತಾರೆ. ಇವುಗಳ್ಯಾವುದೂ ಶಾಶ್ವತವಲ್ಲ. ಅದೇ ಜನರ ಭವಿಷ್ಯದಲ್ಲಿ ಉಪಯೋಗವಾಗುವಂತಹ ಒಂದು ಯೊಜನೆ ರೂಪಿಸಿ ನೋಡಿ. ಅವರ ಬಾಳಿಗೆ ಬೆಳಕಾಗುವ, ಸ್ವಾವಲಂಬಿ ಜೀವನ ನಡೆಸುವಂತಹಾ ಪರಿಸ್ಥಿತಿ ನಿರ್ಮಿಸಿ ಕೊಡಿ. ನಿಮ್ಮ ಸರಕಾರ  ಹೋಗಿ ಮತ್ತದಷ್ಟೇ ಸರಕಾರಗಳು ಬಂದರೂ ನಿಮ್ಮ ಹೆಸರು ಸೂರ್ಯ ಚಂದ್ರರಷ್ಟೇ ಶಾಶ್ವತವಾಗಿರುತ್ತದೆ. ಜನಮನದಲ್ಲುಳಿಯುತ್ತದೆ. ಕೆ.ಆರ್.ಎಸ್ ನಿರ್ಮಿಸಿದ ಅಂದಿನ ಮೈಸೂರು ಸರಕಾರ ಮತ್ತು ವಿಶ್ವೇಶ್ವರಯ್ಯನವರೇ ಇದಕ್ಕೆ ಸಿಂಪಲ್ ಉದಾಹರಣೆ. ನಮಗೆ ಬೇಕಿರುವುದು ಅಂತಹಾ ‘ವೆಲ್ ಪ್ಲಾನ್ಡ್’ ಯೋಜನೆಗಳೇ ಹೊರತು ಅಂತ್ಯವೇನೆಂದೇ ಅರಿಯದ, ಪೂರ್ಣಗೊಳ್ಳುವ ಕುರಿತು ಗುಮಾನಿಗಳಿರುವ ಎತ್ತಿನಹೊಳೆಯಂತಹ ಯೋಜನೆಯಲ್ಲ.

ಮಳೆಗಾಗಿ ಪ್ರಾರ್ಥಿಸಿ ನಮ್ಮ ಇಂಧನ ಸಚಿವರು ದೇವರ ಮೊರೆ ಹೋಗಿದ್ದಾರಂತೆ. ಒಂದು ಲೆಕ್ಕದಲ್ಲಿ ಇದು ಒಳ್ಳೆಯದೇ ಬಿಡಿ. ಆದರೆ ಹೇಗೆ ನಾಡಿನ ಅಭಿವೃಧ್ಧಿ ಸರಕಾರದಿಂದ ಮಾತ್ರ   ಸಾಧ್ಯವಿಲ್ಲವೋ ಹಾಗೆಯೇ ಕೆಲವೊಂದು ವಿಚಾರಗಳು ಬರೀ ದೇವರಿಂದಲೂ ಸಾಧ್ಯವಿಲ್ಲ. ನಮ್ಮ ಪರಿಶ್ರಮ, ಇಚ್ಚಾಶಕ್ತಿಗಳೂ ಬೇಕಾಗುತ್ತದೆ. ಮಳೆ ಬರಲಿಲ್ಲವೆಂದು ಸರಕಾರ ವಿದ್ಯುತ್ತಿನ ಉತ್ಪಾದನೆಗೆ ಬೇರೆ ದಾರಿ ಹಿಡಿಯದೆ ನಿದ್ರಿಸುತ್ತಲೇ ಇದ್ದರೆ ಏನು ಮಾಡುವುದು? ಯಾವಾಗಲೂ ಮಳೆಯ ಕಾರಣಗಳನ್ನೇ ನೀಡುತ್ತಾ ದೇವರ ಮೊರೆ ಹೋದರೆ ಪ್ರಯೋಜನ? ಸದ್ಯದ ಮಟ್ಟಿಗೆ ಶಾಶ್ವತ ಯೋಜನೆಗಳನ್ನು ಬಿಡಿ, ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಹೊಂದಿರುವ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಲೂ ಬೇಕಾದ ಮಟ್ಟಿಗೆ ನಮ್ಮ ಸರಕಾರ ಕಾರ್ಯಪ್ರವೃತ್ತವಾಗಿಲ್ಲ. ಇದರಲ್ಲಿಯೇ ಗೊತ್ತಾಗುತ್ತದೆ ನಮ್ಮ ಇಂಧನ ಸಚಿವರದೆಷ್ಟು ಕ್ರೀಯಾಶೀಲರಾಗಿದ್ದರೆ ಎಂದು.

ಹಳ್ಳಿಯ ಪಂಪ್ ಸೆಟ್ಟುಗಳಿಂದ ಹಿಡಿದು ದಿಲ್ಲಿಯ ಕಂಪ್ಯೂಟರ್ ಸೆಟ್’ಗಳವರೆಗೂ ಕರೆಂಟಿಲ್ಲದೆ ಯಾವುದೂ ನಡೆಯುವುದಿಲ್ಲ. ಬೀದಿ ಬದಿಯ ಹೋಲ್’ಸೇಲ್ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್’ಗಳಿಗೂ ಕರೆಂಟೇ ಸರ್ವಸ್ವ. ಒಂದು ಗಂಟೆ ಕರೆಂಟಿಲ್ಲದಿದ್ದರೂ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ. ನೇರವಾಗಿ ಹೇಳುವುದಾದರೆ ಕರೆಂಟಿಲ್ಲದೆ ಬರ್ಕತ್ತಿನಲ್ಲಿ ಜೀವಿಸಲು ಸಾಧ್ಯವಿಲ್ಲ ಈಗಿನ ಕಾಲದಲ್ಲಿ. ಅಂತಹಾ ಜಗತ್ತಿನಲ್ಲಿ ಒಂದು ವರ್ಷ ಮಳೆಯಾಗದಿದ್ದದ್ದಕ್ಕೇ ಈ ಪರಿಯಾದರೆ ಇನ್ನೇನಾದರೂ ಇನ್ನೊಂದು ವರ್ಷವೂ ಇದೇ ಥರಾ ಆದರೆ ಏನು ಮಾಡುವುದು? ಆಗಸ್ಟಿನಲ್ಲಿಯೇ ಇಂಥಾ ಅವಸ್ಥೆಯಾದರೆ  ಧಗಧಗನೆ ಹೊತ್ತಿ ಉರಿಯುವ ಮುಂದಿನ ಏಪ್ರೀಲಿನಲ್ಲಿ ಪರಿಸ್ಥಿತಿ ಎಲ್ಲಿಗೆ ಮುಟ್ಟೀತು?

ಡಿ.ಕೆ.ಶಿ ಮಾತ್ರವಲ್ಲ. ಹಿಂದಿನ ಎಲ್ಲಾ ಇಂಧನ ಸಚಿವರ ಸಾಧನೆಯೂ ಹೇಳುವ ಮಟ್ಟದಲ್ಲಿಲ್ಲ. ಯಾರಿಂದಲೂ ಕ್ರೀಯಾತ್ಮಕ ಕೆಲಸಗಳು ಆಗಿಲ್ಲ. ಇದ್ದಿದ್ದರಲ್ಲಿ ಶೋಭಾ ಕರಂದ್ಲಾಜೆಯವರೇ ಬೆಸ್ಟ್. ಆದರೆ ಏನೋ ಒಳ್ಳೆಯದನ್ನು ಮಾಡ ಹೊರಟ ಆಕೆಯನ್ನು ಸರಿ ಕೆಲಸ ಮಾಡಲೂ ಬಿಡಲಿಲ್ಲ ದುರುಳರು. ಒಟ್ಟಿನಲ್ಲಿ ಇವರ ಕೈಗೆ ಪವರು ಕೊಟ್ಟ ತಪ್ಪಿಗೆ ನಮಗೆ ಪವರು ಕಟ್’ನ ಶಿಕ್ಷೆ. ಕೊಟ್ಟು ಕೆಟ್ಟ ಅಂದರೆ ಇದೇ ನೋಡಿ!

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post