ಮೊನ್ನೆ ನನಗೊಂದು ಬಿಟ್ಟಿ ಸಲಹೆಯೊಂದು ಬಂದಿತ್ತು. ನೀವು ಯಾವತ್ತೂ ಮೋದಿಯನ್ನು ಹೊಗಳಿ ಬರೆಯುತ್ತೀರಿ, ಬಿಜೆಪಿ ಪರವಾಗಿಯೇ ಬರೆಯುತ್ತೀರಿ, ಉಳಿದವರನ್ನು ತೆಗಳುತ್ತೀರಿ. ಹೀಗೆ ಕೋಮುವಾದಿಯಾಗುವ ಬದಲು ಸ್ವಲ್ಪ ರಾಹುಲ್ ಗಾಂಧಿ ಕುರಿತಾಗಿಯೂ ಒಳ್ಳೆಯದನ್ನು ಬರೆಯಿರಿ ಎಂಬುದಾಗಿತ್ತು ಆ ಸಲಹೆ. ಒಂದು ಕ್ಷಣ ‘ಹೌದಲ್ವಾ, ಈ ಮಹಾಶಯ ಹೇಳುತ್ತಿರುವುದೂ ಸರಿಯೇ’ ಎಂದು ಅನ್ನಿಸಿ ಬಿಡ್ತು. ಒಂದು ಮಾಧ್ಯಮವಾಗಿ ನೋಡುವಾಗ ನಾವು ಪಕ್ಷಪಾತಿಯಾಗಿರಬಾರದು ಎನ್ನುವ ಪಾಲಿಸಿಯೂ ನನ್ನಲ್ಲಿ ಜಾಗೃತಿ ಮೂಡಿಸಿತು.
ಸರಿ, ನನಗೆ ಸಲಹೆ ಕೊಟ್ಟವರು ಹೇಳಿದಂತೆ ರಾಹುಲ್ ಗಾಂಧಿಯವರ ಕುರಿತಾಗಿ ಒಳ್ಳೆಯದನ್ನು ಬರೆಯುವುದೆಂದು ನಿರ್ಧರಿಸಿದೆ. ಆದರೆ ಬರೆಯುವುದೆಂದರೆ ಏನು ಬರೆಯುವುದು? ಒಂದೇ ಒಂದು ಒಳ್ಳೆ ಕೆಲಸ ಮಾಡಿದ್ದರೆ ತಾನೆ ಬರೆಯುವುದು? ಒಂದು ಉತ್ತಮ ಭಾಷಣ ಮಾಡಿ ನಾಯಕತ್ವ ಗುಣ ಪ್ರದರ್ಶಿಸಿದ್ದರೆ ತಾನೆ ಅವರ ಬಗ್ಗೆ ಬರೆಯುವುದು? ಒಬ್ಬ ಸಕಾರಾತ್ಮಕ ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ಕೆಲಸಗಳಲ್ಲಿ ಕೊಡುಗೆ ನೀಡಿದ್ದರೆ ತಾನೆ ರಾಗಾ ಬಗ್ಗೆ ಬರೆಯುವುದು? ಅದು ಬಿಟ್ಟು ಟೈಮ್ಸ್ ನೌ’ನ ಇಂಟರ್’ವ್ಯೂನಲ್ಲಿ ಪೆದ್ದು ಪೆದ್ದಾಗಿ ಮಾತನಾಡಿದ್ದನ್ನೇ ಮಹಾನ್ ಸಾಧನೆಯೆಂದು ಪರಿಗಣಿಸಿ ಅದರ ಬಗ್ಗೆ ಬರೆಯಲಾಗುತ್ತದೆಯೇ? ಅಥವಾ ಮೊಂಡುವಾದ ಮಾಡುತ್ತಾ ಸಂಸತ್ತಿನಲ್ಲಿ ಕಾಲಹರಣ ಮಾಡಿದ್ದರ ಕುರಿತಾಗಿ ಬರೆಯಲಾಗುತ್ತದೆಯೇ? ಏನು ಮಾಡಿದರೂ,ಎಷ್ಟು ಪೇಚಾಡಿದರೂ ಒಂದೇ ಒಂದು ಒಳ್ಳೆಯ ವಿಷಯ ಸಿಗಲಿಲ್ಲ ನನಗೆ. ನಾನು ತೆಗೆದುಕೊಂಡ ನಿರ್ಧಾರ ತುಂಬಾ ಕಠಿಣ ಎಂದೆನಿಸಿತು.
ಇಷ್ಟೆಲ್ಲಾ ಆಗುವ ಹೊತ್ತಿಗೆ ಸ್ವಾತಂತ್ರ ದಿನ ಬಂದೇ ಬಿಡ್ತು. ಸ್ವಾತಂತ್ರ ದಿನದ ಮೋದಿ ವೇಷ ಭೂಷಣ, ನಡೆ-ನುಡಿ, ಅವರ ಭಾಷಣ ಇದೆಲ್ಲದರ ಕುರಿತಾಗಿ ಬರೆಯೋಣ ಅನಿಸಿತ್ತು. ಆದರೆ ಮತ್ತೆ ಮೋದಿಯನ್ನು ಹೊಗಳುವುದು ಬೇಡ ಎಂದು ಸುಮ್ಮನಾದೆ. ಆದರೆ ನನ್ನನ್ನು ‘ಇಲ್ಲಾ, ಯಾರೇನಾದರೂ ಹೇಳಲಿ, ಕೋಮುವಾದಿ – ಪಕ್ಷಪಾತಿ ಎಂದಾದರೂ ಬೈಕೊಳ್ಳಲು, ಈ ಭಾರಿ ಮೋದಿಯನ್ನು ಹೊಗಳಿ ಬರೆಯಲೇ ಬೇಕು’ ಎಂದು ಹುರಿದುಂಬಿಸಿದ್ದು ಮೋದಿಯ ಯುಎಇ ಭೇಟಿ.
ಹೌದು, ಮೋದಿ ಕಳೆದೊಂದು ವರ್ಷದಿಂದ ಹತ್ತಾರು ದೇಶಗಳಿಗೆ ಹೋಗಿದ್ದರೂ ಯುಎಇ ಭೇಟಿ ಸ್ಪೆಷಲ್ ಎನ್ನುವುದು ನನ್ನ ಅಭಿಪ್ರಾಯ ಯಾಕೆಂದರೆ ಇತರೆ ದೇಶಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮವರಿಗೆ ಯುಎಇ ಹೊಟ್ಟೆ ಹೊರೆಯುವುದಕ್ಕೆ ಉಜ್ವಲ ಅವಕಾಶ ನೀಡಿದೆ. ತೈಲ ಸಂಪತ್ತು ಹೇರಳವಾಗಿರುವ ಯುಎಇ ಜೊತೆಗೆ ನಾವು ಸ್ವಾತಂತ್ರ್ಯ ಪೂರ್ವದಿಂದಲೇ ನೇರ ಬಾಂದವ್ಯ ಹೊಂದಿದ್ದೇವೆ. ಅದೊಂದು ಪುಟ್ಟ ರಾಷ್ಟ್ರವಾದರೂ, ಕಟ್ಟಾ ಮುಸ್ಲಿಂ ರಾಷ್ಟ್ರವಾದರೂ ಸಹ ಅದನ್ನು ಸುಮ್ಮನೆ ಕಡೆಗಣಿಸುವ ಹಾಗಿಲ್ಲ.
ಎರಡು ದಿನಗಳ ಭೇಟಿಯಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಯುಎಇಯಲ್ಲಿ ದೇವಸ್ಥಾನ ನಿರ್ಮಿಸುವುದಕ್ಕೆ ಜಾಗ ನೀಡುವಂತೆ ಮೋದಿ ಮಾಡಿದ ಮನವಿಯನ್ನು ಕ್ಷಣ ಮಾತ್ರದಲ್ಲಿ ಪುರಸ್ಕರಿಸಿತು ಯುಎಇ ಸರಕಾರ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸದ ಇವರು ಅಲ್ಲಿ ದೇವಸ್ಥಾನ ನಿರ್ಮಿಸಿ ಏನು ಪ್ರಯೋಜನ? ಎಂದು ಪರ-ವಿರೋಧದ ಚರ್ಚೆ ನಡೆದರೂ ಒಂದು ಅಪ್ಪಟ ಮುಸ್ಲಿಂ ರಾಷ್ಟ್ರದಲ್ಲಿ ಅದರಲ್ಲೂ ಐಸಿಸ್ ಉಗ್ರರಿಗೆ ತುಂಬಾ ಹತ್ತಿರದಲ್ಲಿರುವ , ದಾವೂದ್ ಇಬ್ರಾಹಿಂ, ಬನ್ನಂಜೆ ರಾಜಾನಂತಹ ಪಾತಕಿಗಳ ವ್ಯವಹಾರಗಳಿಗೆ ಆವಾಸ ಸ್ಥಾನವಾಗಿರುವ ರಾಷ್ಟ್ರದಲ್ಲಿ ಅಲ್ಲಿನ ಸರ್ಕಾರವನ್ನೇ ಮನವೊಲಿಸಿ ದೇವಸ್ಥಾನ ಕಟ್ಟಲು ಜಾಗ ಪಡೆದುಕೊಳ್ಳುವುದು ಟೀಕೆ ಮಾಡಿದಷ್ಟು ಸುಲಭದ ಕೆಲಸವಲ್ಲ. ಅದು ಮೋದಿಯ ಚಾಣಕ್ಷತನವಲ್ಲದೆ ಮತ್ತೇನಲ್ಲ.
ವಿಷಯ ಅದಲ್ಲ. ನನ್ನನ್ನು ಮೋಡಿ ಮಾಡಿದ್ದು ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೋದಿ ಮಾಡಿದ ಭಾಷಣ. ಮೋದಿ ಎಲ್ಲಿಯಾದರೂ ಸಾರ್ವಜನಿಕ ಭಾಷಣ ಮಾಡುತ್ತಾರೆಂದರೆ ಅದು ಮೊದಲೇ ಭಾರಿ ಹೈಪ್ ಪಡೆದುಕೊಳ್ಳುತ್ತದೆ. ಹಾಗೆಯೇ ದುಬೈ ಭಾಷಣವೂ ಲೆಕ್ಕಕ್ಕಿಂತ ಜಾಸ್ತಿನೇ ಅನಿಸುವಷ್ಟು ಹೈಪ್ ಪಡೆದುಕೊಂಡಿತ್ತು. ಯುಎಇಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಕ್ಲಾಸ್’ಮೇಟುಗಳು, ಸ್ನೇಹಿತರೆಲ್ಲಾ ಭಾರಿ ಹೆಮ್ಮೆಯಿಂದ ತಾವು ಪಡೆದಿದ್ದ ಟಿಕೇಟುಗಳನ್ನು ಫೇಸ್’ಬುಕ್, ವಾಟ್ಸಾಪ್ ಗ್ರೂಪ್’ಗಳಲ್ಲಿ ಹಾಕಿಕೊಳ್ಳುತ್ತಿದ್ದರು. ಅವರ ನಿರೀಕ್ಷೆಗೆ ಸರಿಯಾಗಿಯೇ ಮೋದಿ ಭಾಷಣ ಮಾಡಿದರು.
ಆ ಪಕ್ಕಾ ಮುಸ್ಲಿಂ ರಾಷ್ಟ್ರದಲ್ಲೂ ಕೇಸರೀಕರಣದ ಸಂಕೇತ ಕಾಣುತ್ತಿತ್ತು. ಭಗವಾಧ್ವಜ ಕಂಡು ಬಂತು. ಕೇರಳದ ಚೆಂಡೆನಾದ, ಕಥಕ್ಕಳಿಯ ರಂಗು ಮತ್ತು ಕೇರಳೀಯ ಸೀರೆ ಇಡೀಯ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಮೆರುಗು ನೀಡಿತು. ಅಲ್ಲಿನ ಮುಸ್ಲಿಮರೆಲ್ಲ ಟೋಪಿ, ಬುರ್ಕಾ ಧರಿಸಿ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಬಂದಿದ್ದರೂ ಸಹ ಅವರ ಬಾಯಲ್ಲೂ ಮೋದಿ ಮಂತ್ರ ಮೊಳಗುತ್ತಿತ್ತು. ಅಲ್ಲಿಗೆ ಮೋದಿ ಹವಾ ಪ್ರಚಂಡವಾಗಿ ಸಾಬೀತಾಯ್ತು.
ಅಲ್ಲಿ ನೆರೆದಿದ್ದ ಭಾರತೀಯರು, ಅಲ್ಲಿನ ಮುಸ್ಲಿಮರೆಲ್ಲಾ ಮೋದಿ ಅಭಿಮಾನಿಗಳೇ ಅಗಿರಲಿಕ್ಕಿಲ್ಲ ಅಥವಾ ಬಿಜೆಪಿ ಬೆಂಬಲಿಗರೇ ಖಂಡಿತಾ ಆಗಿರಲಿಕ್ಕಿಲ್ಲ. ಸತ್ಯ ಮಾತು ಏನೆಂದರೆ ಹಿಂದಿನ ಸರ್ಕಾರಗಳ ದುರಾಡಳಿತದಿಂದ ವಿದೇಶಗಳಲ್ಲಿರುವ ನಮ್ಮವರೂ ಕೂಡಾ ರೋಸಿ ಹೋಗಿದ್ದರು. ತಾವು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ತಲೆಯೆತ್ತಿ ನಡೆಯದಂತಾಗಿತ್ತು ಅವರ ಸ್ಥಿತಿ. ಅದಕ್ಕೆಲ್ಲಾ ಈಗ ಮೋದಿಯ ರೂಪದಲ್ಲಿ ಪರಿಹಾರ ಸಿಕ್ಕಿದೆ. ಮೋದಿಯ ಮಾತು, ಕೆಲಸ ಎಲ್ಲರನ್ನೂ ಗೌರವದಿಂದ ಬಾಳುವಂತೆ ಮಾಡಿದೆ, ನಾವು ಭಾರತೀಯರು ಎಂದು ಗರ್ವದಿಂದ ಹೇಳಿಕೊಳ್ಳುವಂತೆ ಮಾಡಿದೆ. ಕಂಠವುಬ್ಬುವಂತೆ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದಲೇ ಜನ ಮೊನ್ನೆಯ ಕಾರ್ಯಕ್ರಮದ ಫೋಟೋಗಳನ್ನು ಹೆಮ್ಮೆಯಿಂದ ಎಲ್ಲಾ ಕಡೆ ಹಾಕಿಕೊಂಡಿದ್ದು.
ನೀವೇ ಹೇಳಿ, ಇದೇ ಅಲ್ಲವೇ ಮೋದಿ ಹವಾ? ನೀವೇನು ಹೇಳುತ್ತೀರೋ ಬಿಡುತ್ತೀರೋ, ವಿರೋಧಿಗಳು ಮಾತ್ರ ಇದನ್ನೊಪ್ಪುವುದಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಹವಾ ಎಂಬುದು ಇಲ್ಲವೇ ಇಲ್ಲ ಎಂದು ಇದೇ ವಿರೋಧಿಗಳು ಟೀಕಿಸುತ್ತಿದ್ದರು. ಮೋದಿ ಹವಾವೇನಿದ್ದರೂ ಗುಜರಾತಿನಲ್ಲಿ ಮಾತ್ರ ನಮ್ಮಲ್ಲಿ ಅದೆಲ್ಲ ನಡೆಯಲ್ಲಾ ಎಂದು ನಮ್ಮ ಸಿದ್ಧರಾಮಯ್ಯ ನುಡಿದಿದ್ದರು. ಮೋದಿ ಹವಾ ಇದೆಯೆಂದು ತಿಳಿದಿದ್ದವರೂ ಸಹ ಜನರ ದಿಕ್ಕು ತಪ್ಪಿಸಲು ಮೋದಿ ಹವಾ ಎಂಬುದು ಬರೀ ಭ್ರಮೆ ಎಂದು ಹಲುಬಿದ್ದರು. ಆದರೆ ಮೋದಿ ಮೇಲೆ ಭರವಸೆಯಿಟ್ಟಿದ್ದ ನಮಗೆ ಮೋದಿ ಹವಾ ಎಂಬುದು ಇದೆಯೆಂದು ಸ್ಪಷ್ಟವಾಗಿ ಗೊತ್ತಿತ್ತು. ಆದರೂ, ಇವತ್ತು ವಿಶ್ವವ್ಯಾಪಿಯಾಗಿರುವ ಮೋದಿ ಹವಾ ಈ ಪರಿ ಇದ್ದೀತ್ತೆಂದು ದೇವರಾಣೆಗೂ ಊಹಿಸಿರಲಿಲ್ಲ.
ಹ್ಹಾ.. ಇದಿಷ್ಟು ಬರೆಯುವಷ್ಟರಲ್ಲಿ ಮೋದಿಯನ್ನು ತೆಗಳಲು ಕೆಲವೊಂದು ಪಾಯಿಂಟ್ ಸಿಕ್ಕಿತು. ಅದೇನೆಂದರೆ ಮೋದಿ ಅದೆಷ್ಟೂ ಒಳ್ಳೆಯ ಕೆಲಸಗಳನ್ನು ಮಾಡಿ ಭಾರತದ ಗೌರವವನ್ನು ಎತ್ತಿ ಹಿಡಿದರೂ, ಹೋದಲೆಲ್ಲಾ ಹಿಂದಿನ ಸರ್ಕಾರವನ್ನು ತೆಗಳುವುದು ಖಂಡಿತಾ ಒಳ್ಳೆಯ ಸಂಪ್ರದಾಯವಲ್ಲ. ಅದೂ ವಿದೇಶಗಳಲ್ಲಿ. ಯುಪಿಎಯಂತೂ ನಮ್ಮ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿತ್ತು, ಅದನ್ನು ಊರೆಲ್ಲಾ ಡಂಗುರ ಸಾರಿಸಿಕೊಂಡು ಬಂದರೆ ದೇಶದ ಜೊತೆಗೆ ಮೋದಿಯ ಮೇಲಿನ ಗೌರವವೂ ಕಡಿಮೆಯಾಗುವುದೇ ಹೊರತು ಖಂಡಿತವಾಗಿಯೂ ಶೋಭೆ ತರುವುದಿಲ್ಲ. ಮತ್ತು ಯುಎಇಯಲ್ಲಿ ಮಾತನಾಡುವಾಗ ಭಾರತ ಯುಎಯು ನಡುವೆ 700ಕ್ಕೂ ಅಧಿಕ ವಿಮಾನ ಸಂಚರಿಸುತ್ತದೆ, ಆದರೂ ಭಾರತದ ಪ್ರಧಾನಿಯೊಬ್ಬರಿಗೆ ಇಲ್ಲಿಗೆ ಬರಲು 34 ವರ್ಷಗಳೇ ಬೇಕಾದವು ಎನ್ನುವ ಮೂಲಕ ಅಲ್ಲಿಗೆ ಭೇಟಿ ನೀಡದ ಪ್ರಧಾನಿಗಳನ್ನು ಅಪಹಾಸ್ಯ ಮಾಡಿದ್ದು ಸಹ ತರವಲ್ಲ. ಯಾಕೆಂದರೆ ಇಂದಿರಾ ಗಾಂಧಿ ನಂತರ ಬಂದ ಹಲವು ಪ್ರಧಾನಿಗಳಲ್ಲಿ ಹಲವರು ಅಧಿಕಾರ ಪಡೆದು ಮೊದಲನೇ ಬಜೆಟ್ ಮಂಡಿಸುವ ಹೊತ್ತಿಗೆ ಮಾಜಿಗಳಾಗಿದ್ದರು. ಅಧಿಕಾರ ಪೂರ್ಣಗೊಳಿಸಿದ ಪ್ರಧಾನಿಗಳಿಗೆ ಆವಾಗಿನ ಪರಿಸ್ಥಿತಿಗಳು ಪೂರಕವಾಗಿಲ್ಲದೆ ಇದ್ದಿರಬಹುದು. ಎರಡು ದೇಶಗಳ ಆರ್ಥಿಕ ರಾಜಕೀಯ ಸ್ಥಿತಿಗತಿಗಳು ವಿಭಿನ್ನವಾಗಿದ್ದಿರಬಹುದು. ಎರಡು ದೇಶಗಳನ್ನು ಗಮನದಲ್ಲಿಟ್ಟುಕೊಂಡು ನೋಡುವಾಗ ಈ ವಿಷಯ ಪ್ರಸ್ತುತವೂ ಅಲ್ಲ.
ಅದೇನೇ ಇರಲಿ. ಯುಎಯಿಯಲ್ಲಿನ ಮೋದಿಯಬ್ಬರವನ್ನು ನೋಡಿ ನಾನು ಯಾರನ್ನು ಹೊಗಳಿ ಬರೆಯಬೇಕು ಎಂದುಕೊಂಡಿದ್ದೆನೋ, ಅವರಿಗೆ, ಮೋದಿ ವಿರೋಧಿಗಳು, ಡೋಂಗಿ ಜಾತ್ಯಾತೀತವಾದಿಗಳು ಮತ್ತು ಬುದ್ಧಿ ಜೀವಿಗಳಿಗೆಲ್ಲಾ ಹೊಟ್ಟೆಯೊಳಗೆ ಕೊಳ್ಳಿಯಿಟ್ಟಂತಾಗಿರಬಹುದು.. ಒಮ್ಮೊಮ್ಮೆ ಪಾಪ ಎನಿಸುತ್ತದೆ ನನಗೆ॒!
Facebook ಕಾಮೆಂಟ್ಸ್