ರಂಗಿತರಂಗ.. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೄಷ್ಟಿಸಿರುವ ಚಿತ್ರ. ಟ್ರೈಲರ್ ಮತ್ತು ಚಿತ್ರ ಎರಡರಲ್ಲೂ ಸಖತ್ ಥ್ರಿಲ್ಲಿಂಗ್ ಅನುಭವ ನೀಡುವ, ‘ಒನ್ ಒಫ್ ದ ಬೆಸ್ಟ್’ ಎನ್ನಬಹುದಾದ, ಹೊಸಬರೇ ನಿರ್ಮಿಸಿರುವ ಚಿತ್ರ ರಂಗಿತರಂಗ. ಮೂಲತಃ ಪುತ್ತೂರಿನವರಾದ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಅವರ ತಮ್ಮ ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ ತಾರಾಗಣದಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ಸಾಯಿಕುಮಾರ್ ಅವರ ಪಾತ್ರವೂ ಬಹಳ ಮುಖ್ಯವಾದದ್ದೇ. ಬಾಹುಬಲಿ ಬಂದ ಬಳಿಕ ನಮ್ಮ ಥಿಯೇಟರ್ ಮಾಲಕರ ಮನಸ್ಥಿತಿ ಬಹಿರಂಗವಾಗಿ ರಂಗಿತರಂಗದ ನಾಗಾಲೋಟಕ್ಕೆ ಸ್ವಲ್ಪ ಭಂಗ ಬಂದಿದ್ದರೂ ಅದು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳದೆ ಕನ್ನಡದ ಉತ್ತಮ ಚಿತ್ರಗಳ ಸಂಗವನ್ನು ಸೇರಿದೆ. ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ರಂಗಿತರಂಗದ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ Readoo.in ಗೆ ದೂರವಾಣಿ ಮೂಲಕ ನೀಡಿದ ಸಂದರ್ಶನ ಇಲ್ಲಿದೆ.
ನಮಸ್ತೆ ಅನೂಪ್, ನಮಸ್ತೆ ನಿರೂಪ್
ನಮಸ್ತೆ
ಅನೂಪ್, ರಂಗಿತರಂಗಕ್ಕೆ ಇದುವರೆಗಿನ ಪ್ರತಿಕ್ರಿಯೆ ಹೇಗಿದೆ?
ಅನೂಪ್: ಪ್ರತಿಕ್ರೀಯೆ ತುಂಬಾನೇ ಚೆನ್ನಾಗಿದೆ. ಎಲ್ಲಾ ಕಡೆ ಪಾಸಿಟಿವ್ ಪ್ರತಿಕ್ರಿಯೆ ಬರ್ತಾ ಇದೆ. ಎಲ್ಲೆಲ್ಲಾ ಚಿತ್ರ ಬಿಡುಗಡೆಯಾಗಿದೆ ಅಲ್ಲೆಲ್ಲಾ ಹೌಸ್ ಫುಲ್ ಆಗಿ ಚಿತ್ರ ಓಡ್ತಾ ಇದೆ. ಇನ್ನೂ ಹಲವು ಕಡೆ ಚಿತ್ರಕ್ಕೆ ಬೇಡಿಕೆ ಬರ್ತಾ ಇದೆ.
ನಿರೂಪ್, ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ನಿಜ ಹೇಳ್ಬೇಕಾದ್ರೆ ನಮ್ಮ ತಂದೆಯವರು ಧಾರಾವಾಹಿಗಳನ್ನೆಲ್ಲಾ ಮಾಡ್ತಾ ಇದ್ರು. ಸಣ್ಣ ಇರೋವಾಗ್ಲೆ ಅವರ ಜೊತೆ ಸೆಟ್ ಗೆ ಹೋಗಿ ಅಲ್ಲಿನ ಶೂಟಿಂಗ್ ಎಲ್ಲಾ ನೋಡಿ ಮುಂದೆ ಮಾಡಿದ್ರೆ ಸಿನೆಮಾನೇ ಮಾಡೋದು ಅಂತ ನಿರ್ಧರಿಸಿದ್ದೆ. ಆದ್ರೆ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಆ ಅವಕಾಶ ಈಗ ಬಂದಿದೆ ಅಷ್ಟೆ.
ಅನೂಪ್, ನೀವೂ ಚಿತ್ರರಂಗಕ್ಕೆ ಪರಿಚಯವಾಗಿದ್ದು ಹೀಗೇನಾ?
ಹ.. ನಿಜವಾಗ್ಲೂ ಅಲ್ಲ. ನಾನು ಕೆಲಸಕ್ಕೆ ಸೇರಿದಾಗಿಂದ್ಲೇ ಕಿರುಚಿತ್ರಗಳನ್ನು ಮಾಡ್ತಾ ಇದ್ದೆ. ಮತ್ತೆ US ಲಿ ಕೆಲಸದಲ್ಲಿರೋವಾಗ ಹಾಲಿವುಡ್ ನಟ ರಸೆಲ್ ಹಾರ್ವರ್ಡ್ ಅನ್ನೋವರ ಜತೆ ಸೇರಿ WORDS ಅನ್ನೋ ಕಿರುಚಿತ್ರ ಮಾಡಿದ್ದೆ. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳು ಬಂತು. ಇದನ್ನು ತಿಳಿದು ನಮ್ಮ ನಿರ್ಮಾಪಕರಾದ ಪ್ರಕಾಶ ಅವರು ನಮ್ಗೆ ಚಿತ್ರ ಮಾಡೋಕೆ ಓಫರ್ ಕೊಟ್ರು. ಅದೇ ರಂಗಿತರಂಗವಾಗಿ ಹೊರಬಂದಿದೆ.
ಹೀರೋ ಆಗಿ ನೀವು ಆಯ್ಕೆಯಾಗಿದ್ದು ಹೇಗೆ ನಿರೂಪ್?
ಮೋದಲಿಗೆ ನಾನು ಹೀರೋ ಅಂತ ಇರ್ಲಿಲ್ಲ. ರಂಗಿತರಂಗಕ್ಕೆ ಮೊದಲು ಹೀರೋ ಆಗಿ ಆಯ್ಕೆಯಾಗಿದ್ದು ರಕ್ಷಿತ್ ಶೆಟ್ಟಿ. ರಕ್ಷಿತ್ ಶೆಟ್ಟಿ ಚಿತ್ರದ ಕಥೆ ಇಷ್ಟ ಪಟ್ರೂ ಅವರ ಸಮಯ ಸಿಗಲಿಲ್ಲ. ಚಿತ್ರವನ್ನು ಮುಂದೂಡುವ ಪರಿಸ್ಥಿತಿಯಲ್ಲೂ ನಾವಿರಲಿಲ್ಲ. ಅಂತಹಾ ಸಂದರ್ಭದಲ್ಲಿ ಚಿತ್ರದ ಸಹ ನಿರ್ದೇಶಕನಾಗಿದ್ದ ನಾನು ಅಭಿನಯಿಸಿದ್ದ ಧಾರವಾಹಿ ‘ಅಡ್ವೋಕೇಟ್ ಅರ್ಜುನ್’ ನೋಡಿದ್ದ ನಮ್ಮ ನಿರ್ಮಾಪಕರು ನನ್ನನ್ನು ಅನೂಪ್ ಅವರಿಗೆ ಸಲಹೆ ಮಾಡಿದರು. ಅಮೇಲೆ ಆಡಿಷನ್ ಎಲ್ಲಾ ಆಗಿ ಕಡೆಗೆ ನಾನೇ ಹೀರೋ ಆಗಿ ಆಯ್ಕೆಯಾದೆ.
ಅನೂಪ್, ಎಲ್ಲಾ ಹೊಸಬರನ್ನೇ ಇಟ್ಕೊಂಡು ನಿರ್ದೇಶನ ಮಾಡೋಕೆ ಕಷ್ಟ ಆಗ್ಲಿಲ್ವಾ?
ಇಲ್ಲ ಇಲ್ಲ, ಕಷ್ಟ ಆಗಿದ್ದು ನಿರ್ಧಿಷ್ಟ ಪಾತ್ರಕ್ಕೆ ನಿರ್ಧಿಷ್ಟ ವ್ಯಕ್ತಿಗಳನ್ನೇ ಹುಡುಕೋದಷ್ಟೇ ಕಷ್ಟವಾಯ್ತು. ಅದು ಬಿಟ್ರೆ, ಎಲ್ಲರಿಗೂ ಅವರವರ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣ ಇದ್ದ ಕಾರಣ ಏನೂ ಕಷ್ಟ ಆಗ್ಲಿಲ್ಲ.
ನಿರೂಪ್, ನಿಮ್ಗೆ ಪ್ರತಿಕ್ರಿಯೆ ಹೇಗೆ ಬರ್ತಾ ಇದೆ?
ತುಂಬಾನೇ ಒಳ್ಳೇ ರಿವ್ಯೂ ಬರ್ತಾ ಇದೆ. ತುಂಬಾ ಕಡೆಯಿಂದ ‘ನಮ್ಮ ಊರಿಗೆ ರಂಗಿತರಂಗ ಬರ್ಲಿಲ್ಲ, ಟಿಕೆಟ್ ಸಿಗ್ತಾ ಇಲ್ಲಾ’ ಅನ್ನೋವಂತಹ ಮೆಸ್ಸೇಜುಗಳು, ಕರೆಗಳು ಬರ್ತಾ ಇದೆ. ಅವ್ರು ಮಾತ್ರ ಅಲ್ಲದೆ ರಕ್ಷಿತ್ ಶೆಟ್ಟಿ, ಪವನ್ ಕುಮಾರ್, ಸಿಂಪಲ್ ಸುನಿ ಎಲ್ಲಾರು ತುಂಬಾ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದೂ ನಮ್ಮ ಪ್ಲಸ್ ಪಾಯಿಂಟ್.
ಕಮರ್ಷಿಯಲ್ ಸಿನೆಮಾಗಳೇ ಓಡ್ತಾ ಇರೋ ಜಗತ್ತಿನಲ್ಲಿ ಒಂದು ಹಳ್ಳಿ ಸಂಸ್ಕೃತಿಯಂತಹ ಟಿಪಿಕಲ್ ಚಿತ್ರ ಮಾಡೋಕೆ ಮನಸ್ಸು ಮಾಡಿದ್ದು ಹೇಗೆ ಅನೂಪ್?
ಕಮರ್ಷಿಯಲ್, ಟಿಪಿಕಲ್ ಅಂತಲ್ಲ. ಒಳ್ಳೆಯ ಎಂಟರ್ಟೈನಿಂಗ್ ಚಿತ್ರ ಮಾಡಿದ್ರೆ ಜನ ಕೈ ಹಿಡಿತಾರೆ ಅನ್ನೋ ವಿಶ್ವಾಸ ಇತ್ತು. ನಮ್ಮ ವಿಶ್ವಾಸ ಸುಳ್ಳಾಗಲಿಲ್ಲ.
ಸಾಯಿಕುಮಾರ್ ಅವರಂತಹಾ ಹಿರಿಯ ನಟರ ಜೊತೆಗೆ ಅಭಿನಯಿಸುವ ಅನುಭವ ಹೇಗಿತ್ತು ನಿರೂಪ್?
ಸಾಯಿಕುಮಾರ್ ನಮ್ಮ ತಂಡವನ್ನು ಸೇರುವ ಮುನ್ನವೇ ನಾವು ಶೂಟಿಂಗ್ ಆರಂಭಿಸಿದ್ದೆವು. ಯಾವಾಗ ಸಾಯಿಕುಮಾರ್ ನಮ್ಮ ತಂಡವನ್ನು ಸೇರಿಕೊಂಡರೋ ಆವಾಗ ನಮ್ಮ ತಂಡಕ್ಕೆ ಒಬ್ಬ ಸ್ಟಾರ್ ನಟನ ಎಂಟ್ರಿಯಾಯ್ತು. ವೈಯಕ್ತಿಕವಾಗಿ ತುಂಬಾ ಸರಳ, ವಿನಯವಂತರಾಗಿರೋ ಸಾಯಿಕುಮಾರ್ ಅವರು ತಮ್ಮ ಹಳೆಯ ಅನುಭವಗಳನ್ನೆಲ್ಲಾ ನಮ್ಮ ಬಳಿ ಹಂಚಿಕೊಳ್ಳುತ್ತಾ ಇದ್ದರು. ಇದರಿಂದ ನಮಗೂ ಹಲವು ವಿಷಯಗಳನ್ನು ಕಲಿಯಲು ಅನುಕೂಲ ಆಯ್ತು. ಅದೂ ಅಲ್ಲದೆ ಸಾಯಿಕುಮಾರ್ ಅವರು ನಮ್ಮದು ಹೊಸಬರ ತಂಡವಾಗಿದ್ದರಿಂದ ನಮ್ಮೆಲ್ಲರನ್ನು ಬಹುವಾಗಿ ಇಷ್ಟ ಪಟ್ಟಿದ್ದರು.
ಬಾಹುಬಲಿ-ರಂಗಿತರಂಗ… ಏನು ಹೇಳ್ತೀರಿ ಅನೂಪ್??
ಬಾಹುಬಲಿ ಅಂತಲ್ಲ, ಅದಕ್ಕೂ ಮೊದಲೇ ನಮ್ಮ ಚಿತ್ರಕ್ಕಿಂತಲೂ ಹೆಚ್ಚು ಬೇರೆ ಭಾಷೆಯ ಚಿತ್ರಕ್ಕೆ ಆದ್ಯತೆ ನೀಡ್ತಾ ಇದ್ರು. ವಿಶೇಷವಾಗಿ ರಾತ್ರಿಯ ಶೋಗಳನ್ನೆಲ್ಲಾ ನಮಗೆ ಕೊಡ್ತಾ ಇರಲಿಲ್ಲ. ಏನಿದ್ರೂ ಆರು ಘಂಟೆ ಒಳಗೆ ಮಾತ್ರ. ಬಾಹುಬಲಿ ಬಂದ ಮೇಲಂತೂ ಇದು ಜಾಸ್ತಿ ಆಯ್ತು. ರಂಗಿತರಂಗ ಪ್ರದರ್ಷನ ಇನ್ನೂ ಕಡಿತ ಆಯ್ತು. ಆದ್ರೆ ನಮ್ಮ ಅದೃಷ್ಟಕ್ಕೆ ಜನ ನಮ್ಮ ಕೈ ಹಿಡಿದ್ರು. ಚಿತ್ರ ಚೆನ್ನಾಗಿದೆ ಅಂತ ಅವರೇ ಪಬ್ಲಿಸಿಟಿ ಕೊಟ್ರು. ಈಗ ಜನರ ಬೆಂಬಲದಿಂದಾಗಿ ಸ್ವಲ್ಪ ಸ್ಕ್ರೀನ್ ಗಳು ಜಾಸ್ತಿ ಸಿಕ್ಕಿವೆ.
ಬಾಹುಬಲಿ-ರಂಗಿತರಂಗ… ನೀವು ಏನ್ ಹೇಳ್ತೀರಿ ನಿರೂಪ್?
ಬಾಹುಬಲಿ… ಬೇರೆ ಭಾಷೆ ಚಿತ್ರ ಅಂತ ನಾವೇನು ಅದನ್ನು ವಿರೋಧಿಸುವುದಿಲ್ಲ. ಬಾಹುಬಲಿ 10ಕ್ಕೆ ಬರ್ತಾ ಇದೆ ಅಂತಾ ನಮಗೆ ಗೊತ್ತಿತ್ತು ಕೂಡಾ. ಆದ್ರೆ ಒಬ್ಬ ಡಿಸ್ಟ್ರಿಬ್ಯೂಟರ್ ಗೆ ಸಿನೆಮಾ ಬಿಡುಗಡೆ ದಿನಾಂಕವನ್ನು ಬದಲಿಸುವುದು ಅಷ್ಟು ಸುಲಭ ಅಲ್ಲ ಯಾಕಂದ್ರೆ ಬೇರೆ ಎಷ್ಟೊ ಸಿನೆಮಾಗಳು ಕ್ಯೂನಲ್ಲಿ ಇರುತ್ತೆ. ಆದ್ರೆ ನಮ್ಮ ಸಿನೆಮಾ ಗುಣಮಟ್ಟದ ಬಗ್ಗೆ ನಮಗೆ ಪೂರ್ತಿ ನಂಬಿಕೆ ಇತ್ತು. ಒಳ್ಳೆ ಸಿನೆಮಾ ಆದ್ರಿಂದ ಖಂಡಿತಾ ನಮ್ಮನ್ನ ಬೆಂಬಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ ನಮ್ಮ ನಿರೀಕ್ಷೆ ಹುಸಿಯಾಯ್ತು. ಯಶಸ್ವಿಯಾಗಿ ಓಡ್ತಾ ಇದ್ದ ರಂಗಿತರಂಗವನ್ನು ತೆಗೆದು ಬಾಹುಬಲಿ, ಜುರಾಸಿಕ್ ವರ್ಲ್ಡ್, ಪಾಪನಾಶಂ ಗೆ ಶೋ ಏರ್ಪಡಿಸಲಾಯ್ತು. ನಮ್ಮ ರಾಜ್ಯದಲ್ಲೇ ನಮ್ಮ ಭಾಷೆಯ ಚಿತ್ರಕ್ಕೆ ಇಂತಹಾ ಸ್ಥಿತಿಯಾ ಅಂಥಾ ಬೇಸರ ಆಯ್ತು. ತುಂಬಾನೇ ಹರ್ಟ್ ಆಯ್ತು.
ನಿಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಐಡಿಯಾ ಇದೆಯಾ ಅನೂಪ್ ಅವರೇ?
ಸದ್ಯದ ಮಟ್ಟಿಗೆ ರಂಗಿತರಂಗವನ್ನು ರಾಜ್ಯಾದ್ಯಂತ ಕೊಂಡೊಯ್ಯುವುದು ನಮ್ಮ ಮೊದಲ ಗುರಿ. ಎಲ್ಲೆಲ್ಲಾ ಚಿತ್ರ ಬರ್ಲಿಲ್ಲ ಅಲ್ಲೆಲ್ಲಾ ಚಿತ್ರ ತಲುಪಿಸುವುದು, ಎಲ್ಲೆಲ್ಲಾ ಚಿತ್ರಗಳನ್ನು ಥಿಯೇಟರುಗಳಿಂದ ತೆಗೆಯಲಾಗಿದೆ ಅಲ್ಲಿ ರೀ ರಿಲೀಸ್ ಮಾಡುವುದು ನಮ್ಮ ಮೊದಲ ಆದ್ಯತೆ ಈಗ. ಇದಾದ ಮೇಲೆ ಮುಂದಿನ ಪ್ರಾಜೆಕ್ಟ್ ಮೇಲೆ ಗಮನ ಕೊಡುತ್ತೇವೆ.
ಸರಿ ಅನೂಪ್, ನಿರೂಪ್.. ರಂಗಿತರಂಗ ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ, ನೂರು ದಿನ ಓಡಲಿ ಮತ್ತು ನಿಮ್ಮ ಮುಂದಿನ ಎಲ್ಲಾ ಪ್ರಾಜೆಕ್ಟ್ ಗಳಿಗೂ Readoo ಯಿಂದ Best Wishes!
Thanks to Saritha Anvesh and Sumana Mullunja fo co-ordinating this interview.
Facebook ಕಾಮೆಂಟ್ಸ್