X

ಬಹುಶಃ ದೇವರಿಗೂ ನಿಮ್ಮ ಪಾಠ ಕೇಳುವ ಮನಸ್ಸಾಗಿತ್ತು!

In love of Dr. Abdul Kalam

ಯಾವತ್ತಿನಂತೆ ಕಬಡ್ಡಿ ನೋಡುತ್ತಿದ್ದೆ. ಘಂಟೆ ಒಂಬತ್ತಾಗಿದ್ದರಿಂದ ವಾರ್ತೆ ನೋಡಣವೆಂದು ಟಿವಿ9ನತ್ತ ಚಾನಲ್ ತಿರುಗಿಸಿದೆ. ತಿರುಗಿಸಿದ್ದೇ ತಡ, ಟಿವಿ ಪಕ್ಕದಲ್ಲೇ ಕುಳಿತಿದ್ದ ತಂಗಿ ‘ಅಣ್ಣಾ.. ಅಬ್ದುಲ್ ಕಲಾಂ..’ ಎಂದು ಚೀರಿದಳು. ಏನಾಗುತ್ತಿದೆ ಎಂದು ಗೊತ್ತಾಗುವ ಮುನ್ನವೇ ‘ಅಬ್ದುಲ್ ಕಲಾಂ ಇನ್ನಿಲ್ಲ’ ಎಂಬ ಶಾಕಿಂಗ್ ಸುದ್ದಿ ಬರುತ್ತಿತ್ತು. ಅಯ್ಯೋ ದೇವರೇ… ಎಂದು ನಾನೂ ಚೀರಿದೆ. ಮೊದಲ ಬಾರಿಗೆ ಜೀವನದಲ್ಲಿ ಶಾಕ್ ಬಡಿದ ಅನುಭವ ನನಗೆ!

ನಂಬಲೇ ಆಗಲಿಲ್ಲ. ಈಗಲೂ ಆಗುತ್ತಿಲ್ಲ. ಸುದ್ದಿ ನೋಡಿದ ತಕ್ಷಣ ಒಮ್ಮೆ ನೀರವತೆ ಅವರಿಸಿತು. ನಂಬಿ ಒಮ್ಮೆಗೆ ನನ್ನ ಹೃದಯ ಬಡಿತವೇ ನಿಂತಂತಾಯ್ತು. ಕ್ಷಣ ಮಾತ್ರದಲ್ಲಿ ಕಣ್ಣೀರು ಜಿನುಗಿತು. ‘ಇಲ್ಲ.. ಖಂಡಿತಾ ಇಲ್ಲ.. ಇದು ಹಿಂದೊಮ್ಮೆ ಬಂದಂತಹ ರೂಮರ್ ಅಷ್ಟೇ’ ಎಂದುಕೊಂಡೆ. ಏಕೆಂದರೆ ಅದನ್ನು ಯಾವ ಧೈರ್ಯದಲ್ಲೂ ನಂಬುವ ಶಕ್ತಿ ನನಗಿರಲಿಲ್ಲ. ‘ಅದು ರೂಮರ್ ಆಗಿರಲಪ್ಪಾ ದೇವರೇ’ ಎಂದು ಮನಸಾ ಬೇಡಿಕೊಂಡೆ.  ಉಹೂ.. ಮತ್ತೊಂದು ಚಾನಲ್ ಹಾಕಿದಾಗ ನನ್ನ ಬೇಡಿಕೆ ತಿರಸ್ಕೃತವಾದುದರ ಅರಿವಾಯ್ತು. ಆದರೂ ನಂಬಿಕೆ ಬರಲಿಲ್ಲ. ಫ಼ೇಸ್ ಬುಕ್, ವಾಟ್ಸಾಪ್ ನೋಡಿದರೇ ಸತ್ಯಾಸತ್ಯತೆ ತಿಳಿದೀತು ಎಂದು ಅದನ್ನು ನೋಡಿದರೆ ಅಲ್ಲಿಯೂ ಅದೇ..  ಅಷ್ಟರಲ್ಲೇ ಕರೆಯೊಂದು ಬಂತು. ‘ಅಬ್ದುಲ್ ಕಲಾಂ ಹೋದರಂತೆ’ ಎಂಬ ಒಂದೇ ವಾಕ್ಯ ಕೇಳಿಸಿತು. ಮಾತೇ ಹೊರಡಲಿಲ್ಲ.  ಛೇ!

ನನ್ನನ್ನೂ, ನಮ್ಮೆಲ್ಲರನ್ನೂ, ನೂರ ಇಪ್ಪತ್ತಾರು ಕೋಟಿ ಭಾರತೀಯರನ್ನು ಬಹುವಾಗಿ  ಕಾಡುತ್ತಿರುವ ಸಾವು ಇದು. ನಾವ್ಯಾರೂ ಕನಸು ಮನಸಿನಲ್ಲಿಯೂ ಈ ಸಾವನ್ನು ಗ್ರಹಿಸಿದವರಲ್ಲ. ಅಷ್ಟು ಸುಲಭಕ್ಕೆ ಮತ್ತೊಬ್ಬರ ಸಾವಿಗೆ ಮಮ್ಮಲ ಮರುಗುವವರಲ್ಲ ನಾವು. ಆದರೆ ಕಲಾಂ ಸಾವಿಗೆ ನಾವೆಲ್ಲ ಇಷ್ಟೆಲ್ಲಾ ಎದೆ ಬಡಿದುಕೊಳ್ಳುತ್ತಿದ್ದೇವೆಂದರೆ ಅವರೆಂತಹಾ ವ್ಯಕ್ತಿ ಆಗಿರಬಹುದು… ಸಿಂಪ್ಲಿ ಗ್ರೇಟ್!!

ಬಹುಶಃ ನನಗೆ ತಿಳಿದ ಮಟ್ಟಿಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ರಾಷ್ಟ್ರ ರಾಜ್ಯ ಬಣ್ಣ ಭಾಷೆ ಜನಾಂಗ ವಯಸ್ಸು ಗಡಿಗಳ ಎಲ್ಲೆ ಮೀರಿ ನಮ್ಮೆಲ್ಲರ ಪ್ರೀತಿ ಸಂಪಾದಿಸಿದ ಏಕೈಕ ವ್ಯಕ್ತಿ  ಕಲಾಂಜೀ. ಅವರು ಬರೀ ವ್ಯಕ್ತಿ ಅಲ್ಲ ಅವರೊಬ್ಬ ಮಹಾನ್ ಚೈತನ್ಯ ಶಕ್ತಿ. ಒಬ್ಬ ಏರೋನಾಟಿಕಲ್ ಎಂಜಿನಿಯರ್ ಮುಂದೆ ವಿಜ್ಞಾನಿಯಾಗಿ, ವಿದ್ಯಾರ್ಥಿಗಳ-ಮಕ್ಕಳ  ಪರಮ ಪ್ರೀತಿಯ ಉಪನ್ಯಾಸಕನಾಗಿ, ಅಪ್ಪಟ ದೇಶಪ್ರೇಮಿಯಾಗಿ ,  ರಾಷ್ಟ್ರಪತಿಯಾಗಿ ಅವರು ನಮಗಾಗಿ ಮಾಡಿದ್ದು ಸರ್ವತ್ರ ಪೂಜನೀಯ. ವಿಜ್ಞಾನಿಯಾಗಿ, ಅಣುಬಾಂಬ್ ಹಿಂದಿನ ರೂವಾರಿಯಾಗಿ, ಹಲವಾರು ಕ್ಷಿಪಣಿಗಳ ಉಡಾವಣೆಯ ಯಶಸ್ವೀ ಸಾಧಕನಾಗಿ ಮೆರೆದ ಅಬ್ದುಲ್ ಕಲಾಂ ಹೆಸರು ಭಾರತದ ಚರಿತ್ರೆಯಲ್ಲೇ ಅಜರಾಮರ. ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವಿವತ್ತು ಚಂದ್ರಯಾನದವರೆಗೆ ಮುಂದುವರಿದಿದ್ದೇವೆ, ಮಾರ್ಸ್ ನ ಯಶಸ್ವೀ ಉಡ್ಡಯನದ ತನಕ ಸಾಗಿದ್ದೇವೆಂದರೆ  ಅದರ ಹಿಂದೆ ಕಲಾಂ ದೂರದೃಷ್ಟಿಯ ಕೆಲಸಗಳು ಬಹಳಷ್ಟಿವೆ. ಬಾಹ್ಯಾಕಾಶ ಕ್ಷೇತ್ರ ಮಾತ್ರವಲ್ಲ, ಕಲಾಂ ನಮ್ಮ ಭವಿಷ್ಯದ ದಾರಿ ತೋರಿಸುವುದಕ್ಕಾಗಿ ಮಿಷನ್ 20-20 ಹಾಕಿಕೊಟ್ಟರು.  ಅವರು ಕನಸು ಕಂಡಿದ್ದು ಮಾತ್ರವಲ್ಲದೆ ಅದನ್ನು ನಮ್ಮೊಳಗೂ ಬಿತ್ತಿದರು. ರಾಷ್ಟ್ರಪತಿಯಾಗಿ ತನ್ನ ಕೆಲಸವನ್ನು ಸಹಿ ಹಾಕುವುದಕ್ಕೆ, ಧ್ವಜಾರೋಹಣ  ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸದೆ ರಾಷ್ಟ್ರಪತಿ ಸ್ಥಾನವನ್ನು ಮನೆ ಮನೆಗೆ, ಜನ ಮನಕ್ಕೆ ತಲುಪಿಸಿದ ಫ್ರೆಂಡ್ಲಿ ಪ್ರೆಸಿಡೆಂಟ್ ಕಲಾಂಜೀ. ನಿವೃತ್ತಿಯ ನಂತರ ಎಂಬತ್ತರ ನಂತರದ ವಯಸ್ಸಿನಲ್ಲಿಯೂ ಕಳೆದ ವರ್ಷ ದೇಶಾದ್ಯಂತ ಸಂಚರಿಸಿ ತಪ್ಪದೆ ಚುನಾವಣೆ ಮಾಡಿ ಎಂದು ಎಂದು ನಮ್ಮನ್ನೆಲ್ಲಾ ಹುರಿದುಂಬಿಸಿದ ಕಲಾಂ ಜೀವನೋತ್ಸಾಹ ನಮಗೆಲ್ಲಿಂದ ಬಂತು? ಅದೆಲ್ಲಾ ಆ ಮಹಾನ್ ಪುರುಷನಿಗೆ ಮಾತ್ರ ಸಾಧ್ಯ.

ಕಲಾಂ ದೊಡ್ಡವರಾಗಿದ್ದು ಇಷ್ಟಕ್ಕೆ ಮಾತ್ರವಲ್ಲ. ಸ್ವಾಮೀಜಿಗಳೊಂದಿಗೆ, ಧಾರ್ಮಿಕ ಸಾಮಾಜಿಕ ಮುಖಂಡರೊಂದಿಗೆ, ಶಿಕ್ಷಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಸರಳತೆಯಿಂದ, ನಮ್ರತೆ-ವಿನಯದಿಂದ ಮಾತನಾಡಿಸುತ್ತಿದ್ದರಲ್ಲ ಅದಕ್ಕೆ. ಸ್ವಾಮೀಜಿಗಳೊಂದಿಗಂತೂ ಅವರ ಖಾಸಾ  ಶಿಷ್ಯನಂತೆ ಬೆರೆತು ಅವರಿಂದ ಹಲವಾರು ಆಧ್ಯಾತ್ಮ ವಿಚಾರಗಳನ್ನು ತಿಳಿದುಕೊಂಡು ಅದನ್ನು ಶಿರಸಾ ಪಾಲಿಸಿ ಮತ್ತು ನಮಗೂ ಭೋಧಿಸುತ್ತಿದ್ದ ಕಲಾಂ ಕಂಡರೆ ಅದೆಷ್ಟೋ ಸ್ವಾಮೀಜಿಗಳಿಗೂ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿ ಕಲಾಂ ಒಳಗೆ ಮತ್ತೊಬ್ಬ ಸ್ಪಿರಿಚುವಲ್, ಮೋಟಿವೇಟಿಂಗ್ ವ್ಯಕ್ತಿ ಇದ್ದಾನೆ, ಎಲ್ಲರಿಗೆ ಪಾಠ ಮಾಡಿ ಗುರುವಾಗಿದ್ದ ಕಲಾಂ ಒಳಗೆ ಒಬ್ಬ ವಿನಯವಂತ ಶಿಷ್ಯನೂ ಇದ್ದಾನೆ  ಎಂಬುದನ್ನು ತೋರಿಸುತ್ತದೆ. ಸಿಧ್ಧಗಂಗಾ, ಸುತ್ತೂರು ಶ್ರೀಗಳ ಕಾಲ ಬುಡದಲ್ಲಿ ಮಗುವಿನಂತೆ ಕುಳಿತಿರುತ್ತಿದ್ದ ಅವರು ಬರೀ ವಿಜ್ನಾನಿಯಲ್ಲ, ಬರೀ ರಾಜನೂ ಅಲ್ಲ, ಅವರು ತನ್ನೊಳಗೆ ಎಲ್ಲವನ್ನೂ ಅಳವಡಿಸಿಕೊಂಡಿದ್ದ ಪರಿಪೂರ್ಣ ಸಂತ.  ‘ನಾನು ಸತ್ತರೆ ನೀವ್ಯಾರೂ ರಜೆ ಮಾಡಬೇಡಿ, ಬದಲಾಗಿ ಒಂದು ದಿನ ಹೆಚ್ಚೇ ಕೆಲಸ ಮಾಡಿ’ ಎಂದಿದ್ದ ಕಲಾಂ ಮಾತು ಎಂತಹವರನ್ನೂ ಪ್ರೇರೇಪಿಸುವಂತಾದ್ದು. ‘ಕನಸೆಂದರೆ ಅದು ಮಲಗಿರುವಾಗ ಕಾಣುವುದಲ್ಲ, ಯಾವುದು ನಿಮ್ಮನ್ನು ಮಲಗಲು ಬಿಡುವುದಿಲ್ಲವೋ ಅದು ಕನಸು’ ಎನ್ನುತ್ತಿದ್ದ ಕಲಾಂ ಮಾತು ಎಂತಹಾ ಸೋಮಾರಿಯಲ್ಲಿಯೂ ಕಿಡಿ ಹೊತ್ತಿಸುವಂತಾದ್ದು.  ಉದ್ದುದ್ದ ಕೂದಲುಗಳನ್ನು ಮಧ್ಯದಿಂದ ತೆಗೆದು ಕೆಳಬಿಡುತ್ತಿದ್ದ ಹೇರ್ ಸ್ಟೈಲಿನಿಂದ ಹಿಡಿದು ಅವರ ಜೀವನದ ಪ್ರತಿಯೊಂದು  ನಡೆಯೂ ಸಹ ಅನುಕರಿಸುವಂತಾದ್ದೇ!

“ಕಲಾಂಜೀ.. ದೇಶ ಸೂರ್ಯೋದಯದತ್ತ ಮುಖ ಮಾಡಿರುವ  ಹೊತ್ತಿನಲ್ಲಿ, ನಿಮ್ಮ ನೆಚ್ಚಿನ ಯುವಕರೆಲ್ಲ ಸಿಡಿದು ನಿಂತಿರುವ ಸಮಯದಲ್ಲಿ ನಿಮ್ಮಂತಹ  ಮುತ್ಸದ್ದಿ, ಸ್ಪೂರ್ತಿದಾಯಕ , ಮಾದರಿ ವ್ಯಕ್ತಿಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ನಾವಿರಲಿಲ್ಲ. ನೀವು ದೇಶದ ವಿಜ್ಞಾನಕ್ಕೆ, ನಮ್ಮೆಲ್ಲರ ಭವಿಷ್ಯಕ್ಕೆ  ಹಾಕಿಕೊಟ್ಟಿರುವ ಯೋಜನೆಗಳೆಲ್ಲಾ ಕಾರ್ಯಗತಗೊಳ್ಳುವ ಸಂಕ್ರಮಣದ ಗಳಿಗೆಯಲ್ಲಿ ನೀವು ನಮ್ಮನ್ನು ಅಗಲಿರುವುದು ನಿಸ್ಸಂಶಯವಾಗಿಯೂ ತುಂಬಲಾರದ ನಷ್ಟ ನಮಗೆ.  ನೀವು ನಮಗೆ ಅದೆಷ್ಟೇ ಪ್ರೇರಣೆ, ಸ್ಪೂರ್ತಿ ನೀಡಿದರೂ ಸಹ ನಮ್ಮಲ್ಲಿ ಯಾರೂ ಸಹ ನಿಮ್ಮಂತೆ ಆಗಲಾರ. ಯಾಕೆಂದರೆ ನಿಮಗೆ ನೀವು ಮಾತ್ರ ಸಾಟಿ.  ನ ಭೂತೋ ನ ಭವಿಷ್ಯತಿ ಎನ್ನುವಂತೆ  ಮತ್ತೊಬ್ಬ ಕಲಾಂ ಖಂಡಿತಾ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಹುಟ್ಟುವುದಾದರೆ ಮತ್ತೆ ನೀವೇ ಜನ್ಮವೆತ್ತಬೇಕಷ್ಟೆ. ನೀವು ನಿತ್ಯವೂ ಓಡಾಡದೇ ಸುಮ್ಮನೇ ಇರುತ್ತಿದ್ದರೂ ಸಾಕಿತ್ತು. ನಿಮ್ಮ ಇರುವಿಕೆಯೇ ನಮಗೆಲ್ಲಾ ಚೈತನ್ಯ ಶಕ್ತಿಯಾಗಿರುತ್ತಿತ್ತು.  ಕಡೇ ಪಕ್ಷ ಭಾರತ ನಿಮ್ಮ ಕನಸಿನ ಭಾರತವಾಗುವುದನ್ನು ನೋಡುವುದಕ್ಕಾದರೂ ನೀವಿರಬೇಕಿತ್ತು.  ನಮಗೆ ಇನ್ನೂ ನಿಮ್ಮ ಮಾರ್ಗದರ್ಶನದ ಅವಷ್ಯಕತೆಯಿತ್ತು.  ನಮಗಲ್ಲದಿದ್ದರೂ ಜೀವನದ ಪ್ರತೀ ಕ್ಷಣ ಕ್ಷಣವೂ ಭಾರತ ಮಾತೆಯನ್ನು ಪೂಜಿಸಿ ಬದುಕಿದ ನಿಮ್ಮ ಅಗತ್ಯತೆ ಸ್ವತಃ ಭಾರತ ಮಾತೆಗೂ ಇತ್ತು. ಆದರೆ ಎಲ್ಲಾ ದುರ್ವಿಧಿ.. ಪಾಠ ಮಾಡುವುದನ್ನೇ ಉಸಿರಾಗಿಸಿಕೊಂಡು ಬಂದಿದ್ದ ನಿಮಗೆ ಪಾಠ ಮಾಡುತ್ತಿರುವಾಗಲೇ ದೇವರ ಕರೆ ಬಂದಿತ್ತೆಂದರೆ ದೇವರಿಗೂ ನಿಮ್ಮ ಪಾಠ ಕೇಳುವ ಮನಸ್ಸಾಗಿರಬೇಕು. ಬಹುಶಃ ದೇವರಿಗೂ ನಿಮ್ಮ ಸಾಂಗತ್ಯದ ಅವಶ್ಯಕತೆಯಿತ್ತೆಂದು ಕಾಣುತ್ತದೆ”

“ಕಲಾಂಜೀ.. ನೀವು ನಡೆದ ಹಾದಿ ನಮಗೆಂದೆಂದಿಗೂ ಸ್ಪೂರ್ತಿದಾಯಕ.. ಪ್ರೇರಣಾದಾಯಕ.. Rest in Peace ಎನ್ನುವ ಬದಲಾಗಿ Return If Possible ಎಂದು ಮನಃಪೂರ್ವಕವಾಗಿ ನಿಮ್ಮನ್ನು ವಿನಂತಿಸುವೆ. ಸಾಧ್ಯವಾದರೆ ಮತ್ತೆ ಹುಟ್ಟಿ ಬನ್ನಿ ಕಲಾಂ ತಾತ.  ನೀವಿವತ್ತು ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಸುತಾರಾಂ ಸಾಧ್ಯವಾಗುತ್ತಿಲ್ಲವಾದರೂ ಶ್ರಧ್ಧೆಯಿಂದ ಬೇಡಿಕೊಳ್ಳುವೆ.. ದೇವರೇ.. ಕಲಾಂಜೀ ಆತ್ಮಕ್ಕೆ ಚಿರಶಾಂತಿಯನ್ನು ನೀಡು.. ನಮಗಾಗಿ ಬಾಳಿದ ಆ ಪವಿತ್ರ ಆತ್ಮಕ್ಕೆ ಪರಮ ಸ್ವರ್ಗವನ್ನು ನೀಡು.. ಓಂ ಶಾಂತಿ”

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post