ರೈತರ ಸರಣಿ ಆತ್ಮಹತ್ಯೆಗಳು ಮುಂದುವರಿದಿದೆ. ಎಮ್ಮೆ ಚರ್ಮದ ಸರ್ಕಾರಕ್ಕೂ, ಗಡಸು ಸಕ್ಕರೆ ಕಾರ್ಖಾನೆಗಳಿಗೂ ರೈತರ ಬವಣೆ ಇನ್ನೂ ಅರ್ಥವಾಗುತ್ತಿಲ್ಲ. ಪಾದಯಾತ್ರೆ, ರಸ್ತೆತಡೆ, ಪ್ರತಿಭಟನೆಗಳ ತರುವಾಯ ವಿಧಾನಮಂಡಲದ ಅಧಿವೇಶನ ನಡೆಯುತ್ತಲಿದೆ. ಅಧಿವೇಶನದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆಯಾದರೂ ಏನೋ ಒಂದು ಖದರ್ರು ಮಿಸ್ಸಾದಂತೆ ಕಾಣುತ್ತಿದೆ. ಪ್ರತಿಪಕ್ಷ ನಾಯಕನ ಸ್ಥಾನದಲ್ಲಿದ್ದ ಆ ಧ್ವನಿ ಈಗ ಕೇಳದಾಗಿದೆ. ಅವರಿಲ್ಲದೆ ಪ್ರತಿಪಕ್ಷಕ್ಕೂ ಒಂದು ನೆಲೆಯಿಲ್ಲ ಈ ಸರ್ಕಾರಕ್ಕೂ ಬೆಲೆಯಿಲ್ಲ. ಒಂದು ಕಾಲದಲ್ಲಿ ರಾಜಕೀಯದಲ್ಲಿ ರಾಜನಾಗಿ ಮೆರೆದವರು ಈಗ ಏನೂ ಅಲ್ಲದವರು ರಾಜಕೀಯದಲ್ಲಿ ಬಹಳಷ್ಟು ಮಂದಿಯಿದ್ದಾರೆ. ಈ ಪರಿಸ್ಥಿತಿಗೆ ಪ್ರಸ್ತುತ ರಾಜಕಾರಣದಲ್ಲಿ ಉತ್ತಮ ಉದಾಹರಣೆಯೆಂದರೆ ಬಿ.ಎಸ್.ಯಡಿಯೂರಪ್ಪ.
ಈವಾಗ ರೈತರ ಆತ್ಮಹತ್ಯೆಗಳ ಕುರಿತಾಗಿ ಹೋರಾಟಗಳು ನಡೆಯುತ್ತಿವೆಯಲ್ಲಾ, ನನಗೆ ಮೊದಲು ನೆನಪಾಗುವುದು ಬಿಸ್ವೈ. ರಾಜ್ಯಕ್ಕೆ ಸಂಬಂಧಿಸಿದ, ರೈತರ ಸಮಸ್ಯೆಗಳೇನಾದರೂ ಇದ್ದರೆ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದವರು ಯಡಿಯೂರಪ್ಪನವರು. ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಹಠ, ಛಲಕ್ಕೆ ಬಿದ್ದರೆ ಮುಗಿದುಹೋಯಿತು. ವಿರೋಧಿಗಳ ಜನ್ಮ ಜಾಲಾಡದೇ ಬಿಡೋರಲ್ಲ. ಜಾತಿ ಮಾತ್ರವಲ್ಲ, ಪಕ್ಷ ಮಟ್ಟದಲ್ಲೂ ಅವರದ್ದು ಎತ್ತರದ ನಾಯಕತ್ವ. ತಳಮಟ್ಟದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಛಲಗಾರ. ಕಾವೇರಿ ವಿಚಾರ ಬಂದಾಗ ತನ್ನ ಪಕ್ಷಕ್ಕೆ ಸೀಟ್ ಬರುತ್ತೋ ಇಲ್ಲವೋ ಎಂಬುದನ್ನೂ ಲೆಕ್ಕಿಸದೇ ತಲಕಾವೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ ಹುಟ್ಟು ಹೋರಾಟಗಾರ. ತನ್ನ ಹರಿತವಾದ ಮಾತುಗಳಿಂದ ಆಡಳಿತ ಪಕ್ಷಗಳನ್ನು ತಿವಿದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೊಸ ಭಾಷ್ಯ ಬರೆದ ವಾಗ್ಮಿ ಹಾಗೂ ಸಂಸದೀಯ ಪಟು. ಕರ್ನಾಟಕದಲ್ಲಿ ಬಿಜೆಪಿ ಏನೂ ಅಲ್ಲದಿದ್ದಾಗ ಪಕ್ಷವನ್ನು ಅಧಿಕಾರಕ್ಕೇರುವಂತೆ ಮಾಡಿದವರು ಯಡಿಯೂರಪ್ಪ. ಖಂಡಿತವಾಗಿಯೂ ಇದರಲ್ಲಿ ಹಲವರ ಪರಿಶ್ರಮವಿದೆ , ತ್ಯಾಗ ಬಲಿದಾನಗಳಿವೆ. ಆದರೆ ಈ ಹೋರಾಟದಲ್ಲಿ ಬಹಳ ವರ್ಷಗಳಿಂದ ಮುಂಚೂಣಿಯಲ್ಲಿದ್ದವರು ಬಿಎಸ್ವೈ. ಪ್ರಥಮ ದರ್ಜೆ ಕ್ಲಾರ್ಕ್ ಹುದ್ದೆಯಿಂದ ನೇರವಾಗಿ ಆರೆಸ್ಸೆಸ್ ಮುಖಾಂತರ ರಾಜಕೀಯಕ್ಕೆ ಧುಮುಕಿದ ಯಡಿಯೂರಪ್ಪ ಆಮೇಲೆ ಹಿಂದಿರುಗಿ ನೋಡಿದವರಲ್ಲ. ಶಿಕಾರಿಪುರ ಪುರಸಭಾ ಸದಸ್ಯನಾಗಿ ಆಯ್ಕೆಯಾಗಿ ನಂತರ ಅಧ್ಯಕ್ಷಗಿರಿಯನ್ನೇರುತ್ತಾರೆ. ವಿರೋಧ ಪಕ್ಷದ ನಾಯಕನಾಗಿ, ಉಪಮುಖ್ಯಮಂತ್ರಿಯಾಗಿ, ಕೊನೆಗೆ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಮನೆಮಾತಾಗುತ್ತಾರೆ
ಯಡಿಯೂರಪ್ಪ ಇವತ್ತಿಗೂ ರಾಜ್ಯ ಬಿಜೆಪಿಯ ಮುಂಚೂಣಿಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮತದಾರರನ್ನು ತನ್ನ ಮಾತಿನ ವೈಖರಿಯಲ್ಲಿ ಆಕರ್ಷಿಸಬಲ್ಲ ರಾಜ್ಯ ಬಿಜೆಪಿಯ ಏಕೈಕ ನಾಯಕ. ಭ್ರಷ್ಟಾಚಾರದ ಆರೋಪಗಳನ್ನು ಬದಿಗಿಟ್ಟು ನೋಡಿದಾಗ ನರೇಂದ್ರ ಮೋದಿ ಲೆವೆಲ್ ಗೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಬಿಜೆಪಿಯ ನಾಯಕರನ್ನು ಪರಿಗಣಿಸಬಹುದಾದರೆ ಅದು ಯಡಿಯೂರಪ್ಪ ಮಾತ್ರ. ಬ್ರ್ಯಾಂಡ್ ಬಗ್ಗೆ ಯಾವುದೇ ಕಲ್ಪನೆ, ಗಮನಗಳಿಲ್ಲದೇ ತಮ್ಮ ಹೋರಾಟದ ಮೂಲಕವೇ ಬ್ರ್ಯಾಂಡ್ ಆಗಿ ಹೊರಹೊಮ್ಮಿದವರು ಯಡಿಯೂರಪ್ಪ. ಅಧಿಕಾರದಲ್ಲಿದ್ದಾಗ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಭಾಗ್ಯಲಕ್ಷ್ಮಿ ಯೋಜನೆ, ಹೈನುಗಾರರಿಗೆ ಪ್ರತೀ ಲೀಟರ್ ಗೆ ೨ ರೂ ಪ್ರೋತ್ಸಾಹ ಧನ, ಸಂಧ್ಯಾಸುರಕ್ಷಾ ಯೋಜನೆ, ೧೦೮ ಆಂಬ್ಯುಲೆನ್ಸ್ ಯೋಜನೆ, ರೈತರಿಗೆ , ನೇಕಾರರಿಗೆ ಹಲವಾರು ಕಾರ್ಯಕ್ರಮಗಳು ಹೀಗೆ ಹಲವಾರು ಯೋಜನೆಗಳಿಂದ ಜನರಿಗೆ ಬಹಳ ಹತ್ತಿರವಾಗಿದ್ದರು.
ಆದರೆ ಯಾವಾಗ ಅಧಿಕಾರದ ಸವಿಯನ್ನು ಅನುಭವಿಸಲು ಪ್ರಾರಂಭಿಸಿದರೋ ಯಡಿಯೂರಪ್ಪನವರ ಕಾರ್ಯವೈಖರಿಯಲ್ಲಿ ಗಣನೀಯವಾದ ಬದಲಾವಣೆಯಾಯಿತು. ದಶಕಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಮಿಂಚಿ ಧಿಡೀರನೆ ಆಡಳಿತ ಸೂತ್ರಧಾರಿಯಾದಾಗ ದಿಕ್ಕು ತಪ್ಪಿದಂತಾದರು. ರಾಜಕೀಯದ ಎಲ್ಲಾ ಪಟ್ಟುಗಳನ್ನು ಕರಗತ ಮಾಡಿಕೊಡಿದ್ದರೂ ತಮ್ಮ ಕುರ್ಚಿಯ ಕೆಳಗಡೆ ನಡೆಯುವ ಬೆಳವಣಿಗೆಗಳ ಸೂಕ್ಷ್ಮತೆಗಳನ್ನು ಅರಿಯುವಲ್ಲಿ ಯಡಿಯೂರಪ್ಪನವರು ಸಂಪೂರ್ಣವಾಗಿ ಎಡವಿದ್ದರು. ನಂಬಿ ಕೆಟ್ಟವರಿಲ್ಲವೋ ಎಂಬಂತೆ ನಡೆದು ನಂಬಿದವರಿಂದಲೇ ಮೋಸ ಹೋದರು. ರಾಜಕೀಯದಲ್ಲಿದ್ದ ಚಾಣಾಕ್ಷತನ ಹಾಗೂ ನೈಪುಣ್ಯತೆ ಅಧಿಕಾರದಲ್ಲಿ ತೋರಿಸಲು ಯಡಿಯೂರಪ್ಪ ವಿಫಲರಾದರು. ಅಂದಿನ ಆ ಎಡವಟ್ಟುಗಳೇ ಅವರನ್ನು ಇಂದು ಕಟ್ಟಿಹಾಕಿದೆ. ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ಘೋಷಿಸಿ ಜನರಿಗೆ ಹತ್ತಿರಾಗುವ ಸಂದರ್ಭದಲ್ಲಿ ಅನೇಕ ಹಗರಣಗಳು ಯಡಿಯೂರಪ್ಪನವರನ್ನು ಸುತ್ತುವರಿದವು. ಕುಟುಂಬ ಸದಸ್ಯರು ಹಾಗೂ ಸುತ್ತಮುತ್ತಲಿದ್ದ ವಂದಿಮಾಗದರ ಕಾರ್ಯಗಳಿಂದ ಬಿಎಸ್ವೈ ಮೇಲೆ ಹಲವಾರು ಕೇಸ್ ದಾಖಲಾದವು. ದುರಂತವೆಂದರೆ ಗಣಿಗಾರಿಕೆ ನಿಷೇಧ ಮಾಡಲು ಹೊರಟಿದ್ದವರ ಮೇಲೆ ಗಣಿ ಕಿಕ್ ಬ್ಯಾಕ್ ಪ್ರಕರಣ ದಾಖಲಾಯಿತು. ಎಸ್.ಎಂ.ಕೃಷ್ಣ, ಧರಂ ಸಿಂಗ್ ಮತ್ತು ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲೂ ಡಿನೋಟಿಫಿಕೇಶನ್ ಅವ್ಯಾಹತವಾಗಿ ನಡೆದಿತ್ತು. ಆದರೆ ಯಡಿಯೂರಪ್ಪ ಮೇಲೆ ಮಾತ್ರ ಪ್ರಕರಣಗಳು ದಾಖಲಾದವು. ಡಿಕೆಶಿ, ರೋಷನ್ ಬೇಗ್ ಮುಂತಾದವರ ಮೇಲೆ ಚಾರ್ಜ್ ಶೀಟ್ ದಾಖಲಾಗಿದ್ದರೂ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಡಿನೋಟಿಫಿಕೇಷನ್ ಆಪಾದನೆ ಈಗಿನ ಮುಖ್ಯಮಂತ್ರಿಯ ಮೇಲೂ ಇದೆ. ಪಕ್ಕದ ರಾಜ್ಯದ ಜಯಲಲಿತಾ ಆರೋಪಗಳ ಮಾಲೆಯನ್ನೇ ಹೊದ್ದಿದ್ದರೂ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ. ಆದರೆ ಯಡಿಯೂರಪ್ಪ ಎಂಬ ನಾಯಕನ ವಿಷಯದಲ್ಲಿ ಮಾತ್ರ ಹಾಗಾಗಲಿಲ್ಲ.
ಯಡಿಯೂರಪ್ಪ ಬಿಜೆಪಿಯಿಂದ ಸಿಡಿದೆದ್ದು ಕೆಜೆಪಿ ಕಟ್ಟಿ ಪುನಃ ಮಾತೃ ಪಕ್ಷದ ಮಡಿಲಿಗೆ ವಾಪಸಾಗಿದ್ದು ಈಗ ಇತಿಹಾಸ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಜ್ಯದ ಪ್ರಾದೇಶಿಕ ಪಕ್ಷಗಳ ಇತಿಹಾಸದಲ್ಲೇ ಅತಿ ಹೆಚ್ಚು ಮತಪ್ರಮಾಣ ಗಳಿಸಿದ ಯಶಸ್ಸು ಕೆಜೆಪಿ ಹಾಗೂ ಯಡಿಯೂರಪ್ಪನವರ ವರ್ಚಸ್ಸಿಗೆ ಹಿಡಿದ ಕೈಗನ್ನಡಿ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸರ್ವಾಧಿಕಾರಿ ಧೋರಣೆ, ಗುಂಪುಗಾರಿಕೆ, ಅಧಿಕಾರದಿಂದ ಕೆಳಗಿಳಿದ ಮೇಲೆ ಜೈಲುವಾಸ, ರಾಜ್ಯದಲ್ಲಿ ರಾಜಕೀಯ ಅರಾಜಕತೆಗೆ ಕಾರಣವಾಗಿದ್ದು ಇಂತಹ ಹಲವು ಗುರುತರ ಆಪಾದನೆಗಳಿದ್ದರೂ ಜನ ಕೆಜೆಪಿ ಕಡೆ ತಕ್ಕಮಟ್ಟಿಗೆ ಆಕರ್ಷಿತರಾಗಿದ್ದಂತೂ ಸತ್ಯ. ಇದಕ್ಕೆ ಕಾರಣವಾಗಿದ್ದು ಯಡಿಯೂರಪ್ಪನವರ ಹೋರಾಟದ ಮನೋಭಾವನೆ, ಕಾರ್ಯಕ್ರಮಗಳು ಹಾಗೂ ಲಿಂಗಾಯತ ಸಮೂಹದ ಬೆಂಬಲ. ಇದೇ ಕಾರಣದಿಂದ ಯಡಿಯೂರಪ್ಪನವರ ಹೆಸರು ಸದಾ ಚಾಲ್ತಿಯಲ್ಲಿರುವುದು.
“ಯಡಿಯೂರಪ್ಪನಂತಹ ಅಭಿವೃದ್ಧಿಪರ ಹಾಗೂ ದೂರದೃಷ್ಟಿ ಹೊಂದಿರುವ ನಾಯಕ ಮತ್ತೊಮ್ಮೆ ಈ ನಾಡಿನ ಮುಖ್ಯಮಂತ್ರಿಯಾಗಬೇಕು” ಹೀಗೆಂದು ಹೇಳಿದ್ದು ಸಿದ್ದರಾಮಯ್ಯನವರ ಸರ್ಕಾರ ಹಾದಿ ತಪ್ಪಿದಾಗಲೆಲ್ಲ ಚಾಟಿ ಬೀಸುತ್ತಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪನವರು. ಯೋಚಿಸಿ ಯಡಿಯೂರಪ್ಪನವರ ಖದರ್ರು ಎಂತಾದ್ದು ಎಂದು! ಅದು ನಿಜವೂ ಹೌದು. ಯಾವುದೇ ದೂರದೃಷ್ಟಿಯಿಲ್ಲದೆ ಈಗಿನ ಸರ್ಕಾರ ನಿಧಾನವಾಗಿ ಸಾಗುತ್ತಿರುವುದನ್ನು ನೋಡುವಾಗ ಯಡಿಯೂರಪ್ಪನರಂತಹ ಮುಂದಾಲೋಚನೆಯುಳ್ಳ ನಾಯಕನ ಅಗತ್ಯತೆ ನಮಗೆ ಎದ್ದು ಕಾಣುತ್ತದೆ.
ಆದರೇನು ಮಾಡುವುದು, ಅಧಿಕಾರದಲ್ಲಿದ್ದಾಗ ತನ್ನ ಸುತ್ತುಮುತ್ತಲು ಬೆಂಬಲಿಗರಿದ್ದಂತೆ ಈಗ ಅವರ ಸುತ್ತ ಮುತ್ತ ಬರೀ ಕೇಸುಗಳೇ ತುಂಬಿಕೊಂಡಿದೆ.
ಯಡಿಯೂರಪ್ಪ ಸದ್ಯಕ್ಕೆ ಕಳೆಗುಂದಿದಂತೆ ಕಂಡರೂ ಫೀನಿಕ್ಸ್ ನಂತೆ ಮೇಲೆದ್ದು ಬರುವ ಎಲ್ಲಾ ತಾಕತ್ತು ಅವರಲ್ಲಿದೆ. ಪ್ರಬಲ ಲಿಂಗಾಯಿತ ಕೋಮಿನ ಪ್ರಶ್ನಾತೀತ ನಾಯಕ ಅನ್ನುವುದು ಪ್ಲಸ್ ಪಾಯಿಂಟ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ನಂತರ ದೊಡ್ದ ಮಟ್ಟದ ಛಾತಿಯನ್ನು ಪಡೆದ ಏಕೈಕ ನಾಯಕ ಬಿಎಸ್ವೈ. ನರೇಂದ್ರ ಮೋದಿ ಸಂಪುಟದಲ್ಲಿ ಮಂತ್ರಿಯಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರೂ ಸಿಎಂ ಆಗಿದ್ದಾಗ ಮಾಡಿದ ಎಡವಟ್ಟುಗಳು ಅವರನ್ನು ಕಟ್ಟಿಹಾಕಿದ್ದವು. ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ಯಡಿಯೂರಪ್ಪನವರನ್ನು ನೇಮಿಸಬೇಕೆನ್ನುವುದು ಹಲವು ಬಿಜೆಪಿ ನಾಯಕರ ಆಶಯ. ಸಧ್ಯದ ಪರಿಸ್ಥಿತಿಯಲ್ಲಿ ಸಿದ್ಧರಾಮಯ್ಯನವರ ಏಟಿಗೆ ಎದಿರೇಟು ಕೊಟ್ಟು ಬಿಜೆಪಿಯನ್ನು ಮುನ್ನಡೆಸುವ ತಾಕತ್ತಿರುವುದು ಯಡಿಯೂರಪ್ಪನವರಿಗೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಅಧಿಕಾರವಿದ್ದಾಗ ಮಾಡಿದ ಎಡವಟ್ಟುಗಳು ಇದೆಲ್ಲದಕ್ಕೂ ಅಡ್ಡಗಾಲಾಗುತ್ತಿದೆ. ದಕ್ಷಿಣದ ಮೋದಿಯಾಗಿ ಮೆರೆಯಬೇಕಾಗಿದ್ದ ಯಡಿಯೂರಪ್ಪನವರು ತಮ್ಮದೇ ಸ್ವಯಂಕೃತ ಅಪರಾಧಗಳಿಂದಾಗಿ ರಾಜಕೀಯ ವಿರೋಧಿಗಳು
ತೋಡಿದ ಹಳ್ಳಕ್ಕೆ ಬಿದ್ದ ಪರಿಯಂತೂ ವಿಪರ್ಯಾಸ.
Facebook ಕಾಮೆಂಟ್ಸ್