X
    Categories: ಕಥೆ

ಕದಂಬ ,ನಂದಿಗಳ ನಡುವೆ ಲಕ್ಷ್ಮಿ ನರಹರಿ ಸಿಂಹರು …..

ಕರ್ನಾಟವೆಂಬ ಮಹಾದೇಶದ ದಕ್ಷಿಣದ ತುದಿಯಲ್ಲಿ ಶ್ರೀಕರಿ ಎಂಬ ಮಹಾ ಅರಣ್ಯ .ಸೂರ್ಯನು ಧರಿತ್ರಿಯ ಪಾದ ಸ್ಪರ್ಶಮಾಡಲು ಹಗಲೆಲ್ಲ  ಪ್ರಯತ್ನಿಸಿ, ಸೋತು ಸುಣ್ಣವಾಗಿ, ಚಂದ್ರಮನಿಗೊಂದು ಅವಕಾಶ ಕೊಡುತ್ತಾನೆ. ಮಾರನೆಯ ದಿನವೂ ಆದಿತ್ಯನ ವಿಫಲ  ಯತ್ನ. ವಿಸ್ತಾರವಾಗಿ ಹರಡಿಕೊಂಡಿರುವ ಶ್ರೀಗಂಧ, ನಂದಿ, ಕದಂಬ, ಬೀಟೆ, ಸಾಗುವಾನಿ ಮುಂತಾದ ಬೃಹದಾಕಾರದ ಮರಗಳ ಸಾಲಿನ ಮದ್ಯೆ ಮನಸ್ವಿನಿ ಎಂಬ ನದಿ ಕಾಡನ್ನು ಎರಡು ಭಾಗವಾಗಿ ವಿಂಗಡಿಸಿದೆ. ಸದಾ ಹರಿಯುವ ಗಂಗೆಯ ಫಲದಿಂದಾಗಿ ಹುಲಿಗಳು, ಚಿರತೆಗಳು, ಆನೆಗಳು, ಸಾರಂಗಗಳು, ಗಿಣಿಗಳು, ಕಾಡುಕೋಳಿಗಳು, ಚಿಟ್ಟೆಗಳು , ಮೊಸಳೆಗಳು ಯಾವ ಯೋಚನೆಯೂ ಇಲ್ಲದೇ ಹಾಗೂ  ಯಾರಿಗೂ ಭಯಪಡದೆ ಸ್ವತಂತ್ರವಾಗಿ ಬದುಕುತಿದ್ದವು. ಈ ಕಾಡು ಪ್ರಾಣಿಗಳು ಯಾವುದೇ ಕಷ್ಟ ಒದಗಿ ಬಂದರೂ ಕಾಡಿನ ದೇವತೆ “ವಿಶ್ವಾಸಿನಿ”ಯ  ಮೊರೆ ಹೋಗುತಿದ್ದರು .  ವಿಶ್ವಾಸಿನಿ   ಈ ಕಾಡು ಪ್ರಾಣಿಗಳಿಗೆ ಮಾತ್ರವಲ್ಲದೆ,ಅಲ್ಲಿ ವಾಸಿಸುವ ಋಷಿ ಮುನಿಗಳು,  ಹಾಡಿಗಳ    ಆದಿವಾಸಿ ಜನರು, ಕಾಡಿನ ಅಂಚಿನಲ್ಲಿ  ವಾಸಿಸುವ ಗ್ರಾಮಗಳಿಗೂ, ಕರ್ತ್ಯವನಿರತ ಫಾರೆಸ್ಟ್ ಆಫೀಸರ್ ಗೂ ಅಭಯ ಹಸ್ತ ನೀಡಿದ್ದಳು ತಾಯಿ .

ಹೀಗೆ ಒಂದು ದಿನ ಶ್ರೀಕರಿಯ ಆಡಳಿತಾಧಿಕಾರಿಯಾಗಿದ್ದ  ” ಭೃಂಗರಾಜ ಮಹಾನರಿ “ಯವರು ಒಂದಿಷ್ಟು ಅಹ್ವಾನ ಪತ್ರಗಳನ್ನು ಹಿಡಿದು ಇಡೀ ಕಾಡನ್ನೇ ಸುತ್ತುತಿದ್ದರು . ಎದುರಿಗೆ ಬಂದ ಕರಡಿಯೊಂದನ್ನು ಕರೆದು “ಜಾಂಬವಂತರವರೆ ,ಜಾಂಬವಂತರವರೆ… ನಿಂತ್ಕೊಳ್ರಿ ,ಈ  ಭಾನುವಾರನೇ ವಾರ್ಷಿಕ  ಸಮಾವೇಶ , ಸೌರಾಷ್ಟ್ರದಿಂದ ನಮ್ಮ ರಾಷ್ಟ್ರೀಯ  ಅಧ್ಯಕ್ಷ “ಶ್ರೀ ನರಹರಿ ಸಿಂಹ ” ಮತ್ತು ಅವರ ಪತ್ನಿ “ಶ್ರೀಮತಿ ಲಕ್ಷ್ಮಿ  ನರಹರಿ ಸಿಂಹ” ಬರುತ್ತಿದ್ದಾರೆ, ಖ೦ಡಿತ ಬರಬೇಕು ..” ಎಂದು ಹೇಳಿತು . “ಓಹ್   ಖ೦ಡಿತ ಬರ್ತಿನಪ್ಪ … ಕಾರ್ತಿಕ್ ನವಿಲೂರು, ಅಶ್ವಿನಿ ನವಿಲೂರಿಂದ ಭರತನಾಟ್ಯನ … ಅಭಿಷೇಕ್  ಕೋಗಿಲೂರು  ಬೇರೆ ಬರ್ತಾ ಇದಾರ…  “, “ಸರಿ ಸರಿ… ನಾನು ಹೊರಡುತ್ತೇನೆ ..ಇನ್ನು  ಸುಮಾರು ಜನರಿಗೆ ಕೊಡಬೇಕು .. ಮರಿಬೇಡಪ್ಪ ,,,ಇಲ್ಲೇ ಮನಸ್ವಿನಿ ಹಿನ್ನೀರಿನಲ್ಲಿ ” ಎಂದು ಹೇಳಿ ಹೊರಟು ಹೋಯಿತು  .

ಭಾನುವಾರ ಬಂದೇ ಬಿಟ್ಟಿತು, ಹಿನ್ನೀರಿನ್ನಲ್ಲಿ ಸಂಭ್ರಮವೊ ಸಂಭ್ರಮ. ಕೃಷ್ಣಾಪುರದ ಕೃಷ್ಣಮೃಗಗಳು, ರಾಜ ಮತ್ತು ರಾಣಿ ಹುಲಿಗಳು , ಗರುಡನ ಗಿರಿಯ ಗರುಡಗಳು, ಹದ್ದುಗಳು, ಹಂಸ ಪಕ್ಷಿಗಳು, ಗಜಸಮೂಹಗಳು, ಕಪ್ಪೆಗಳು, ಕಾಡಿನ ಎಲ್ಲಾ ಪ್ರಾಣಿ ಪಕ್ಷಿಗಳು ಬಂದು ಸೇರಿದವು . ವೇದಿಕೆಯೆ ಮೇಲೆ ರಾಷ್ಟ್ರೀಯ  ಅಧ್ಯಕ್ಷರು ಮತ್ತು ಅವರ ಸಹ ಧರ್ಮಿಣಿ  ಮತ್ತು ಭ್ರುಂಗರಾಜ ಆಸೀನರಾದರು . ವಿಶ್ವಾಸಿನಿಯ  ಪ್ರಾರ್ಥನೆಯ ನಂತರ  ಶ್ರೀ ನರಹರಿ ಸಿಂಹರವರು ಸಭೆಯನ್ನು ಉದ್ದೇಶಿಸಿ  ಮಾತಾನಾಡಲು ಆರಂಭಿಸಿದರು.

“ನಮ್ಮನೆಲ್ಲರನ್ನೂ ಕಾಪಾಡುತ್ತಿರುವ ಜಗನ್ಮಾತೆ ವಿಶ್ವಾಸಿನಿಯನ್ನು ಸ್ಮರಿಸುತ್ತಾ, ಆತ್ಮೀಯ ಸ್ನೇಹಿತರೇ ಇಡೀ ರಾಷ್ಟ್ರವೇ ಸ್ವಚ್ಛತೆಯ ಅಭಿಯಾನ ನಡೆಸುತ್ತಿದೆ, ಅದ್ದರಿಂದ ನಾವುಗಳು ಈ ಮಹಾರಣ್ಯದಲ್ಲಿ ಈ ಅಭಿಯಾನವನ್ನು ಆರ೦ಭಿಸಬೇಕು ಎಂದು ನನ್ನ ಅಭಿಪ್ರಾಯ .. ಆದ್ದರಿಂದ  ನೀವುಗಳು ಸಹಕರಿಸಬೇಕೆಂದು ಕೇಳಿಕೊಳ್ಳುತಿದ್ದೇನೆ .ಇನ್ನು ಮುಂದೆ ಅಳಿಲುಗಳಾಗಲಿ ,ಹಕ್ಕಿ ಪಕ್ಷಿಗಳೇ ಆಗಲಿ ಯಾರೂ ನೀವು ತಿಂದ ಹಣ್ಣು, ಕಾಯಿಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು … ಎಲ್ಲೆಂದರಲ್ಲಿ ಲದ್ದಿಗಳ್ಳನ್ನು ಹಾಕುವುದನ್ನು ನೀವುಗಳು ನಿಲ್ಲಿಸಬೇಕು ,,ಬೃಹದಾಕಾರದ ಮರಗಳೇ,,ನೀವುಗಳೂ  ಕೂಡ ಇನ್ನು ಮುಂದೆ ಎಲೆಗಳನ್ನು ಉದುರಿಸಬಾರದು ,,ಮಾಂಸ ಪ್ರಿಯ ಮಿತ್ರರೇ, ನೀವು ನಿಮ್ಮ ಬೇಟೆಯನ್ನು ನಿಮ್ಮ ಗುಹೆಗಳಿಗೆ ಒಯ್ದು ತಿನ್ನಬೇಕೆಂದು ಆಜ್ಞಾಪಿಸುತ್ತೇನೆ.. ಇದರಿಂದ ನಿಮ್ಮ ಬೇಟೆ ಕೊಳೆತು , ವಾಸನೆ ಬರುವುದನ್ನು ತಡೆಗಟ್ಟಬಹುದು ,,ಸಾ೦ಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಬಹುದು …. “ಅಷ್ಟರಲ್ಲೇ  ಒಂದು ಕತ್ತೆಕಿರುಬ

“ಸ್ವಾಮಿಗಳು ಮನ್ನಿಸಬೇಕು ,,ಮಧ್ಯದಲ್ಲಿ ತೊಂದರೆಕೊಟಿದಕ್ಕೆ … ನೀವೇನೋ ಶಕ್ತಿಶಾಲಿಗಳು ,ಸ್ವತಂತ್ರ ಬೇಟೆ ಆಡ್ತಿರ..ಆದರೆ ನಮಗೆ ನೀವು ತಿಂದು ಉಳಿಸಿ ಹೋಗಿದ್ದೆ   ಎಷ್ಟೊ  ಭಾರಿ  ಆಹಾರ ,,ನಿಮ್ಮ ಬೇಟೆಗಳ್ಳನು ಗುಹೆಗೆ ತೆಗೆದುಕೊಂಡು ಹೋದರೆ ನಮ್ಮ ಗತಿಯೇನು ” ಎಂದು ಹೇಳಿತು.

“ಪರಾಮರ್ಶಿಸಬೇಕಾದ ವಿಚಾರ … ನಾನು ಮಾತಾನಾಡುವುದುಕ್ಕಿಂತ ನಿಮ್ಮ ನಿಮ್ಮ ತೊಂದರೆಗಳ್ಳನ್ನು ಮೊದಲು ಆಲಿಸುವುದೆ ಒಳಿತು ಎಂದು ನನಗೆ ಅನಿಸುತಿದ್ದೆ .. ಯಾರಿಗೂ  ಹೆದರದೆ ಮುಂದೆ ಬಂದು ನಿಮ್ಮ ಕಷ್ಟಗಳ್ಳನ್ನು   ಹೇಳಿಕೊಳ್ಳಬಹುದು … “

ಒಂದು ಹಂಸ ಪಕ್ಷಿ ಮುಂದೆ ಬಂದು ” ಸಿಂಹರಾಯರೇ ,,ಮೊದಲೇ ನಾವು ಬೇಸಿಗೆಯಲ್ಲಿ ಕುಡಿಯುವುದಕ್ಕೆ ನೀರು  ಇಲ್ಲವೆಂದು ಎಲ್ಲಾ ಜೀವ ಸಂಕುಲಗಳು ಇತಿ ಮಿತಿ ಇಂದ  ಕುಡಿಯುವುದಕ್ಕಾಗಿ ಮಾತ್ರ ನೀರನ್ನು ಬಳಸಿದರೆ ,ಗಜಪಡೆ ದಿನನಿತ್ಯವೂ ಜಲಕ್ರೀಡೆ ಆಡುತ್ತಿದ್ದಾರೆ … ಈ  ವಿಷಯವನ್ನು ನಾವು ಆಡಳಿತಕಾರಿಗಳ ಗಮನ ತಂದರೂ ಏನೂ ಪ್ರಯೋಜನವಾಗಲಿಲ್ಲ  ಸ್ವಾಮಿ ..”ಎಂದು ಕಣ್ಣೀರು ಇಟ್ಟಿತು .

“ಸಾಕ್ ಸುಮ್ ಕುತ್ಕಳಮ್ಮ ..ಏನ್ ಇವಳ್ ಒಬ್ಳಿಗೆ ಭವಿಷ್ಯದ ಬಗ್ಗೆ ಚಿಂತೆ ಇರದು.. ಹೋದ ಸತಿ ಬರ ಬಂದಾಗ ನಾವುನು ತಪಸ್ಸಿಗೆ ಕೂತಿದ್ವಿ… ನಾವು ಕುತಿದಕ್ಕೆ ಗಂಗಮ್ಮ  ಈ ನೆಲಕ್ಕೆ ಹರ್ದಿದ್ದು .. ಸೆಕೆ ಸಾಮಿ .. ಏನೋ ಸ್ವಲ್ಪ ಹೊತ್ತು  ಮಧ್ಯಾನದ ಮೇಕೆ ಒಂದಿಷ್ಟು ಹೊತ್ತು ಹೋಗ್ತಿವಿ ಅಷ್ಟೆ  ..ನಮ್ಗೆ ಏನ್ ಬೇರೆ ಕೇಮೇ  ಇರಲ್ವಾ ..” ಎಂದು ಗಜ ಪಡೆಯ ನಾಯಕ ಅರ್ಜುನ  ಹೇಳಿತು.

“ಅರ್ಜುನ.. ಹೆಣ್ ಮಕ್ಳು ಹತ್ರ ಹಂಗ ಮಾತಾಡದು, ವಿನಯ, ನಮ್ರತೆ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ… ಇದೇ ಕೊನೆ, ಮೊದಲು ವಿವೇಕವನ್ನು ಕಲಿತಿಕೊಳ್ಳಿ .. ನಾನು ಅಂದೇ ಕೇಳಬೇಕೆಂದಿದ್ದೆ.. ಆ ಮೇಗಳಹಟ್ಟಿ ಎಸ್ಟೇಟ್ ರೈಟರ್ ನ ಯಾಕೆ ತುಳಿದ್ರಿ .. ಆಹಾರ ಅರಸಿ ಹೋದರೆ ಸುಮ್ನೆ ಬರಬೇಕು ತಾನೇ … ಮುಂದೆ ಬೇಲಿ ಹಾಕ್ಸಿ ,ವಿದ್ಯುತ್   ಹರಿಸ್ತಾರೆ.  ಅವಾಗ   ಎಲ್ಲಾರಿಗೂ ತೊಂದ್ರೆನೆ ….ನೀವು  ಕ್ರೌರ್ಯವನ್ನು   ಮೆರೆಯಬಾರದು  “

“ನಿಮ್ಗೆ ಏನು ಗೊತ್ತು  ಸ್ವಾಮಿ ,,ನೀವು ಹುಲ್ಲುಗಾವಲಿನವರು .. ಆ   ರೈಟರ್  ಜಾಗವೆಲ್ಲ ಶ್ರೀಕರಿಯ  ಸ್ವತ್ತು .. ಆ ರೈಟೆರ್ ಏನ್ ಇಲ್ಲಿ ಒನು ಅಲ್ಲ … ಅವನ  ಬಣ್ಣ ,ವೇಷ ,ಭಾಷೆ ನೋಡಿದ್ರೆನೆ ಗೊತ್ತಾಗಲ್ವಾ … ನಾವು ಸಣ್ಣೊರಿದ್ದಾಗ ಅಡ್ತಿದ ಜಾಗಗಳೆ ಸ್ವಾಮಿ ಅವು ..ಎಲ್ಲಾ ಮೋಸ ..ನಾವು ಅವಗ್ಲೇನೆ ಹಿಂಗೆ ಇದ್ದಿದ್ರೆ ,,ಎಷ್ಟೋ ದಂತಗಳು, ಉಳಿತಿದ್ವು …ನಮ್ಮ ಹಿರಿಕ್ರನೆಲ್ಲ ಕೆಡ್ದ ತೋಡಿ  ಮರ ಸಾಗಕಕ್ಕೆ ಉಪ್ಯೋಗಿಸ್ಕಂತ  ಇದ್ದಾ … ಅವ್ರು ಏನೋ ಗೀಚ್ತಾರೆ, ನೀವು ಅದನೆಲ್ಲ ನಂಬ್ತಿರ್ರ … ಯಾವಾಗ್ಲೋ  ಒಂದ್ ಸತಿ ಬಂದು ಹಿಂಗೆ ಜಡಾಯ್ಸಿ ಹೋಗ್ತೀರಾ. ನಮ್ಮ ಕಷ್ಟ ನಮ್ಗೆ. ನೀವು ಎಲಾದ್ರು ಓದಿದಿರಾ ಸ್ವಾಮಿ ,,ನಾವುಗಳು ಯಾವಾಗ್ಲಾದ್ರು ಹಾಡಿಗಳಿಗೆ  ನುಗ್ಗಿದೀವ … ಆ ಕಡೆ ತಲೆನೂ  ಹಾಕಲ್ಲ  “

“ಅರ್ಜುನಪ್ಪ   ಹೇಳ್ತಿರದು ಸರಿಯಾಗೆ ಐತೆ ಸಾಮಿ .. ಆ ಯಪ್ಪ ಏನ್ ಈ ಉರಿನೋನ್ ಏನ್ ಅಲ್ಲಾ ,,ಅ ಯಪ್ಪಾ ಸಾಕಿರೋ ದನಗಳಿಗೆ ನಮ್ ಕಾಡಲ್ಲಿ ನಡ್ಯಕ್ಕೆ ಆಗೋಲ್ಲ ಗೊತ್ತ.. ಯಾವ್ದೋ ದೇಶದ ದನಗಳು .. ಮತ್ತೆ ಇನೊಂದು ವಿಷ್ಯ ಸ್ವಾಮಿ ,,ಈ ಕಾಡಿನ ಅಂಚಿನಲ್ಲೇ ಇರೋ ಹಳ್ಳಿ ದನಗಳು ದಿನಾಗ್ಲು  ಇಲ್ಲೇ ಬರಕ್ಕೆ ಅಭ್ಯಾಸ ಮಾಡ್ಕಂಡು ಬಿಟ್ಟಿದವೆ, ಇದನ್ನ ನೀವು ಸ್ವಲ್ಪ ಗಮನಿಸಬೇಕು ..ಇಲ್ಲ ಅಂದ್ರೆ ನಮ್ಗುನೂ ಮುಂದೆ ಕಷ್ಟ ಆಗದ್ರಲ್ಲಿ ಅನುಮಾನವೇ ಬೇಡ ” ಎಂದು ಕಾಡೆಮ್ಮೆಯೊಂದು ಅರ್ಜುನನ್ನು   ಸಮರ್ಥಿಸಿಕೊಂಡಿತು.

ಅಧ್ಯಕ್ಷರು  ಗಾಢವಾದ ಯೋಚನೆ ಮಾಡುವಂತೆ ಕಂಡರು  ಮತ್ತು ಸ್ವಲ್ಪ ಹೊತ್ತು ಕಳೆದು” ರಾಷ್ಟ್ರೀಯ ಅಭಯಾರಣ್ಯ ಎಂದು ಗುರುತಿಸಿದಮೇಲೆ  ರಾಜ  ಮತ್ತು ರಾಣಿ ಹುಲಿಗಳಿಗೆ ಏನೂ ತೊಂದರೆ ಬಂದಿಲ್ಲ ಎಂದು ನನ್ನ ಭಾವನೆ “

“ಇರದೇ ಮೂರೂ ಮತ್ತೊಂದು ಜನ … ಇನ್ ಏನ್ ಮಾತಾಡ್ ತವೆ ಬಿಡಿ .ಅವ್ರಿಗೆ ರೇಡಿಯೋ ಕಾಲ್ಲರ್ ನಿಂದ ತಪ್ಪಿಸ್ಕಂಡ್ರೆ ಸಾಕಾಗಿದೆ” ಎಂದು ಹೇಳಿ ಮಂಗವೊಂದು ಕಿಸಿಕ್ಕನೆ ನಕ್ಕಿತು .

“ಸಲ್ಲದು ,ಸಲ್ಲದು …. ಯಾರನ್ನು ಹೀಯಾಳಿಸುವುದು ಕೂಡದು ” ಎಂದು ಸಹನೆಯಿಂದಲೇ ಮಂಗಗಳಿಗೆ ಬುದ್ದಿವಾದ ಹೇಳಿತು ಸಿಂಹ .

ಅಷ್ಟರಲ್ಲೇ ಸಂಜೆ ಮೂರು ಗಂಟೆಯಾಯಿತು, ಕತ್ತಲು  ಆವರಿಸಲು ಶುರುವಾಯಿತು, ಮಳೆ ಬರುವ ಮುನ್ಸೂಚನೆಯು ಇತ್ತು. ಆಡಳಿತಾಧಿಕಾರಿಯವರು ಎದ್ದು ನಿಂತು, “ಇಂದಿನ ಕಾರ್ಯಕ್ರಮ ಇಲ್ಲಿಗೆ ಮುಕ್ತಾಯ ಮಾಡುವುದು ಸೂಕ್ತವೆನಿಸುತಿದೆ. ದೂರ ಹೋಗುವವರಿಗೆ ತೊಂದರೆಯಾಗುತ್ತದೆ ಎಂದು ನಾನು ಭಾವಿಸುತಿದ್ದೇನೆ.. ಸಭೆಯ ನಿರ್ಧಾರಗಳನ್ನು ನಾವುಗಳ ಖುದ್ದಾಗಿ ಬಂದು ತಿಳಿಸುತ್ತೇವೆ, ಎಲ್ಲರೂ ವಿಶ್ವಾಸಿನಿಯ  ಭಜನೆಗೆ ಕೊರಳು ಗೂಡಿಸಬೇಕೆಂದು ಕೇಳಿಕೊಳ್ಳುತ್ತೇನೆ:”

“ಭಜರೇ ಲೋಕನಾಯಕಿ, ಮಹಾಕರ್ನಾಟ ದೇಶನಿವಾಸಿನಿ,

ಶ್ರೀಕರಿ ಮಣ್ಣಲ್ಲಿ ಬೇರೂರಿರುವ  ವಿಶ್ವಾಸಿನಿ ,

ಪಾಹಿಮಾಂ ,ಪಾಹಿಮಾಂ ,”

Abhilash Kashyap T B

Facebook ಕಾಮೆಂಟ್ಸ್

Abhilash T B: Software engineer by profession. He is from Tipatoor . Writing story is his hobby.
Related Post