X
    Categories: ಕಥೆ

ಕಥೆ: ಭಾವ

” ಹೊರಟಿರುವುದು ಎಲ್ಲಿಗೆ …. ? “, ಜೀನ್ಸ್ ಏರಿಸಿಕೊಳ್ಳುತಿದ್ದ  ಭಟ್ಟನನ್ನು ಕೇಳಿದೆ. ” ಗೊತ್ತಿಲ್ಲ ಕಣೋ … ನೇಹಾ ಏನೋ ಹೇಳ್ತಾ ಇದ್ಲು … ನಂಗ್ ಮರ್ತೋಯ್ತು ” ಅಂದ.  ಅಂದು ಶನಿವಾರ. ಸುಮಾರು ಏಳು ಘಂಟೆಯ ಸಮಯ. ಆಗ ತಾನೇ ಪಡುವಣದ ಕೆಂಪು ಕರಗಿ ಎಲ್ಲೆಡೆ ನಿಷೆ ಆವರಿಸುತ್ತಿದ್ದಳು. ಹೊರಗೆ ಕೊರೆಯುವ ಚಳಿ. ಬೆಚ್ಚಗಿನ ರುಮಾಲು ಕುತ್ತಿಗೆಗೆ ಸುತ್ತಿ, ಸ್ವೆಟ್ ಶರ್ಟ್ ಒಂದನ್ನು ನೇತುಹಾಕಿಕೊಂಡು ಭಟ್ಟ, ತನ್ನ ಎರಡು ದಿನಗಳಿಂದ ತೊಳೆಯದ ಮೈಗೆ ಡಿಯೋಡರೆಂಟ್ ಸಿಂಪಡಿಸಿಕೊಳ್ಳುತಿದ್ದ. ಅಡ್ಡಾದಿಡ್ಡಿಯಾಗಿ ಹರಡಿಕೊಂಡಿದ್ದ ಹಾಸ್ಟೆಲ್ ರೂಮಿನ ಕಿಟಕಿಯ ಬಳಿ ನಿಂತಿದ್ದ ನಾನು ಆ ‘ ಪುಸ್ .. ಪುಸ್ .. ‘ ಶಬ್ದಕ್ಕೆ ತಿರುಗಿ ನೋಡಿದೆ. ಅಸಾಧ್ಯ ಘಮ, ಘಾಟು …. .  ” ಇದ್ಯಾಕೋ … ಎರಡು ದಿನ ಸ್ನಾನ ಆಗಿಲ್ಲಾಂತಾನಾ… ” ಎಂದು ಕಾಲೆಳೆಯಲು ಪ್ರಯತ್ನಿಸಿದೆ. ನನ್ನ ಮಾತು ಕಿವಿಗೆ ಹಾಕಿಕೊಳ್ಳದೇ ತಿರುಗಿ ಬಾಗಿಲೆಳೆದುಕೊಂಡು ಹೊರನೆಡೆದ ಭಟ್ಟ. ನಾನು ಕಿಟಕಿಯಿಂದ ಹೊರ ಜಗತ್ತನ್ನು ದಿಟ್ಟಿಸತೊಡಗಿದೆ. ಆರನೆಯ ಮಹಡಿಯಲ್ಲಿದ್ದ ನನ್ನ ರೂಮಿನ ಕಿಟಕಿಯಿಂದ ಹೆಚ್ಚು ಕಡಿಮೆ ಪೂರಾ ಔಂದ್ ಕಾಣುತ್ತೆ. ಇಲ್ಲಿಂದ ಕೆಲವೇ ನಿಮಿಷಗಳ ಹಾದಿ, ನನ್ನ ಇನ್ಸ್ಟಿಟ್ಯೂಟ್, ಪಾಷಾನ್ ಗೆ. ಥಂಡಿಯಿಂದ ಕೊರೆಯುತ್ತಿದ್ದ ಕಿಟಕಿಯ ಸರಳುಗಳ ಮೇಲೆ ಕೈಯಿಟ್ಟು, ಅದರ ಮೇಲೆ ಮುಖವನ್ನೊರಗಿಸಿ ನೇರ ನೋಡತೊಡಗಿದೆ. ನನ್ನ ಕೈಯ ನೇರಕ್ಕೆ ಕಾಣುವಷ್ಟೂ ದೂರ ರಸ್ತೆ ಮಲಗಿತ್ತು. ಅದರ ಇಕ್ಕೆಲಗಳಲ್ಲೂ ಒತ್ತೊತ್ತಾಗಿ ಹುಗಿದ ದೀಪದ ಕಂಬಗಳು ಬೆಳಕನ್ನು ಕಕ್ಕುತ್ತಾ ನಿಂತಿದ್ದವು. ” ಎಷ್ಟು lively ಅಲ್ವಾ ಈ ರೋಡು … ” ಪಕ್ಕದಲ್ಲೇ ನಿಂತಿದ್ದ ಭಟ್ಟ ಅಂದ. ಅವನು ಯಾವಾಗ ಬಂದನೋ, ನನ್ನ ಪಕ್ಕ ಯಾವಾಗ ನಿಂತನೋ ಒಂದೂ ಗೊತ್ತಾಗಿರಲಿಲ್ಲ.  ‘ ಹೌದು ‘ ಎನ್ನುವಂತೆ ತಲೆಯಾಡಿಸಿದೆ. ‘ ಎಷ್ಟು ಜನಸಂದಣಿ … ಕಾರುಗಳು .. ಬಸ್ಸುಗಳು … ಎಲ್ಲವೂ ಮೂಡಣದಲ್ಲಿ ನೇಸರ ಮೂಡುವ ಮುಂಚೆಯಿಂದ ನಿಷೆ ಆವರಿಸಿಕೊಳ್ಳುವವರೆಗೂ ಓಡಾಡಿ, ಹಾರಾಡಿ ಹೋಗುವ ದಾರಿ … ಅದರೊಟ್ಟಿಗೆ ಸ್ಥಬ್ಧ ಕಂಬಗಳು … ಸ್ಥಾಯಿತ್ವ ಮತ್ತು ಜಂಗಮಗಳ ಸಂಗಮ ನೋಟ … ಓಡಾಡುವ ಕಾರುಗಳಿಗೆ , ಜನರಿಗೆ ಹೇಗೆ ರಸ್ತೆ ಮಾರ್ಗದರ್ಶಕವೋ , ಹಾಗೇ ಜಂಗಮತ್ವಕ್ಕೆ ಸ್ಥಾಯಿತ್ವ ಮಾರ್ಗದರ್ಶಕ… ಸ್ಥಾವರಿಯೂ ಆಗಬೇಕು .. ಮುಂದೂ ಹೋಗಬೇಕು … ‘  ಮೇಷ್ಟ್ರು ಹೇಳಿದ್ದು ನೆನಪಾಯಿತು. ” ಹೀಗೇ ಬರ್ತೀಯಾ … ??? ಡ್ರೆಸ್ ಚೇಂಜ್ ಮಾಡ್ಕೊಳೋ …  ” ಎಂದ ಭಟ್ಟ. ” ಇಲ್ಲಾ … ನಾನ್ಯಾವಾಗ ಹೊರಗೆ ಹೋಗೋದಕ್ಕೆ ಅಂತ ಬೇರೆ ಬಟ್ಟೆ ಹಾಕೊಂಡಿದೀನಿ ಹೇಳು … ನೋಡು, ನಮ್ಮನ್ನು ನಾವು ಪ್ರದರ್ಶನದ ವಸ್ತು ಮಾಡ್ಕೊಬಾರದು ಕಣೋ . ಯಾರೋ ನೋಡ್ತಾರೆ ,ಇಷ್ಟ ಪಡ್ತಾರೆ ಅಂತ ಅಂತೆಲ್ಲಾ ನಿನ್ನತನನಾ ಯಾಕ್ ಬಿಟ್ಕೊಡ್ತಿಯ !!! … ” ಎನ್ನುವಷ್ಟರಲ್ಲೇ “ಸಾಕು ಮಾಡು ಮಾರಾಯಾ … ನಿನ್ನ ಪುರಾಣ ಕೇಳೋದಕ್ಕೆ ಟೈಮ್ ಇಲ್ಲ … ನೀನೊಂದು idealism ನ specimen … ಡ್ರೆಸ್ ಚೇಂಜ್ ಮಾಡ್ಕೊಳೋ ಅಂದ್ರೆ ಐಡಿಯಾಲಜಿ ಅದು ಇದು ಅಂತ ಪುರಾಣ ಕೆತ್ತಾನೆ .. ಅವಳು ಅದೇನು ಅಂದ್ಲೋ … ಮುಖ ನೋಡು ಹೇಗ್ ಆಗಿದೆ … ನಾನ್ ಮಾತಾಡಲಾ ಒಮ್ಮೆ … ” ಅಂದ. ತಕ್ಷಣವೇ ಕ್ಷಮಾಳ ನೆನಪು ಬಂದು ಮುಖ ಅತ್ತ ತಿರುಗಿಸಿ ನಿಂತೆ. ” ಕಾಲಕ್ಕೆ ತಕ್ಕಂತೆ ಚೇಂಜ್ ಆಗ್ಬೇಕು ಕಣೋ … ನೀನ್ ಹೀಗ್ ಇದ್ರೆ ಯಾವ್ ಹುಡುಗಿಗೂ ಸಹ್ಯ ಆಗಲ್ಲ ಕಣೋ … ” ಭಟ್ಟ ಹತ್ತಿರ ಬಂದು ಹೆಗಲ ಮೇಲೆ ಕೈ ಹಾಕಿ ಅಂದ. ಮತ್ತೆ ಕಿಟಕಿಯ ಕಡೆ ಮುಖಮಾಡಿ ನಿರ್ವಿಕಾರವಾಗಿ ನಿಂತುಬಿಟ್ಟೆ . ಆಗಸದಲ್ಲಿ ಕತ್ತಲು ಮೆತ್ತಿಕೊಂಡಿತ್ತು . ರೊಯ್ಯನೆ ಬೀಸುವ ಗಾಳಿ, ಎಲ್ಲಿಂದಲೋ ತೂರಿ ಬರುವ ಹೊಗೆಯ ವಾಸನೆ, ರೂಮಿನಲ್ಲಿನ ಕೊಳೆತ ಹಣ್ಣಿನ ಘಾಟು, ಕ್ಷಮಾಳ ನೆನಪು, ಭಟ್ಟನ ಮಾತುಗಳು ಎಲ್ಲವೂ ಪಂಚೇದ್ರಿಯಗಳನ್ನೂ ತುಂಬಿಕೊಂಡಿತ್ತು . ಅವನ ಮಾತಿಗೆ ತಿರುಗಿಸಿ ಹೇಳಬೇಕೆಂಬ ಆಸೆಯಿದ್ದರೂ, ಯಾಕೋ ಎದೆಯಲ್ಲೇ ಮಾತು ಉಳಿದುಹೋಯಿತು.

“Come.. come.. Neha is waiting… ” ಎಂದು ಕೂಗುತ್ತಲೇ ದಾಸ್ ರೂಮಿನ ಒಳನುಗ್ಗಿದ. ಭಟ್ಟ, ” ya .. ya .. ನೀ ಹೋಗು .. ನಾವ್ ಬರ್ತೀವಿ  ” ಎಂದು ಹೇಳಿಕಳುಹಿಸಿದ. ಇವೆಲ್ಲಕ್ಕೂ ಸಂಬಂಧವೇ ಇಲ್ಲದಂತೆ ಕಿಟಕಿಗೆ ಒರಗಿ ನಿಂತಿದ್ದ ನನ್ನನ್ನು ಭಟ್ಟ ತಳ್ಳಿ ಎಬ್ಬಿಸಿದ. ಅವನೊಟ್ಟಿಗೆ ಹೆಜ್ಜೆ ಹಾಕಿದೆ. ಕ್ಷಮಾಳ ಮುಖ, ಅವಳ ಮಾತು ಮನ ತುಂಬಿತ್ತು…  ” You need to change dear… ಹೀಗೆ ಇದ್ದರೆ ಆಗಲ್ಲ … ಐ ಡೋಂಟ್ ಸೂಟ್ ಯು … ನಿನ್ನ ಥರ ನನಗೆ ಬದುಕೋಕ್ಕೆ ಆಗಲ್ಲ . ಸುಮ್ಮನೆ ಜಗಳ, ಗಲಾಟೆ ಯಾಕೆ ಹೇಳು … ” . ‘ಹೌದಾ ?? ನಾನು ಬದುಕುವ ರೀತಿ ಅಸಹ್ಯವೇ ? ‘ ಸಿಟಿಯಲ್ಲಿನ ಜೀವನಕ್ಕೆ ನಾ ಹೊರೆಯಾದಂತೆ ಮನಸು ಭಾರವಾಗತೊಡಗಿತು. ಎಲ್ಲಿಂದಲೋ ಬಂದು ಎರಗುವ ಸಮುದ್ರದ ಅಲೆಗಳಂತೆ ಅವಳ ಮಾತು ನನ್ನ ಮನಸ್ಸಿನ ಮೂಲೆಗಳಲ್ಲಿ ಮಾರ್ದನಿಸಿತು. ‘ ಬದುಕುವ ರೀತಿಯ ಬದಲಾಯಿಸಬೇಕೆ ?? ಅಂದರೆ ಹೇಗೆ ? ಅವಳೊಟ್ಟಿಗೆ ‘ವೀಕೆಂಡ್ ಮಸ್ತಿ’ ಗೆ ಹೋಗಬೇಕೆ ? ಅವಳಾಡುವ ಎಲ್ಲ ಮಾತಿಗೆ ಕಿವಿಯಾಗಬೇಕೇ ? ..  ತನ್ನ ಭಾವಪ್ರಪಂಚದಲ್ಲಿ ಅವಳು ಸುಖಿ. ತಾನು ಮಾಡುವ ಎಲ್ಲಾ ಕೆಲಸ ಅವಳಿಗೆಂದೂ ತೋರುಗಾಣಿಕೆಯ ಅಥವಾ ಅಸ್ವಾಭಾವಿಕ ಎಂದೆನಿಸಿಲ್ಲ … ನನ್ನದೋ ಎಂದಿಗೂ ಪ್ರಶ್ನೆ ಹಾಕಿ ದ್ವಂದ್ವದಲ್ಲೇ ಜೀವನ. ನಾ ಮಾಡುವ, ಓದುವ ಎಲ್ಲ ಹವ್ಯಾಸಗಳಿಗೂ ಇಡಿಯಾಗಿ ನನ್ನ ಸಮರ್ಪಿಸಿಕೊಂಡಿಲ್ಲ. ಎಲ್ಲವೂ ಸ್ವಾಭಾವಿಕವಾಗಿದೆ ಎಂದೇ ತೊರ್ಪಡಿಸಿಕೊಳ್ಳುತ್ತೇನೆ ಅಷ್ಟೇ … ‘ ಎಂದೆನಿಸಿ ತೊಟ್ಟಿದ್ದ ಜುಬ್ಬಾ ಮುಳ್ಳಿನ ಸಂಕೊಲೆಯಾಗಿ, ಹಾರಾಡಲು ಬಿಡದ ಮನಕ್ಕೆ ಪಂಜರವಾಗಿ ಕಾಣತೊಡಗಿತು. ಮತ್ತೆ ಇಹಕ್ಕೆ ಇಳಿದಾಗ ಒಂದು restaurant ನಲ್ಲಿದ್ದೆವು. ಸುತ್ತಲೂ ಮಬ್ಬು .. ಮಬ್ಬು .. ಮಂದ ಬೆಳಕು. ಹಿಂದಿನಿಂದ ಸಾವಕಾಶವಾಗಿ ಕಿವಿಗೆ ಬಡಿಯುತ್ತಿರುವ ಸಣ್ಣ ಸಂಗೀತ. ಎಲ್ಲರ ಖುಷಿಯ ನಗುವಿನ ಲಲ್ಲೆಯ ನಡುವೆ ದಿಗಂಬರನಂತೆ ನಿರ್ಲಿಪ್ತತೆಯನ್ನು ಘನೀಕರಿಸಿಕೊಂಡಿದ್ದೆ. ” 4 smirnoff… ” ಎಂದು ಕೋಟು,ಟೈ ಹಾಕಿಕೊಂಡು ಮುಖದ ಮೇಲೊಂದು ಪ್ಲಾಸ್ಟಿಕ್ ನಗುವನ್ನು ನೇತುಹಾಕಿಕೊಂಡ ವೈಟರ್ ಗೆ ದಾಸ್ ಹೇಳಿದ. ಮತ್ತೆ ನನ್ನ ಕಡೆ ತಿರುಗಿ, ” Get a mocktail… ” ಅಂದ. ‘ಹೂ .. ‘ ಎನ್ನುವಂತೆ ಬೇಡದ, ಕೇವಲ ಸಾಂದರ್ಭಿಕವಾದ ಒಂದು ನಗುವನ್ನು ಮುಖದಲ್ಲಿ ಮಿಂಚಿಸಿದೆ. ಕೈಲಿದ್ದ ಫೋನೊಮ್ಮೆ ರಿಂಗಣಿಸಿತು. ಎತ್ತಿ … ” ಅಮ್ಮ … ಮತ್ತೆ ಮಾಡ್ತೀನಿ … ಹೊರಗಿದ್ದೀನಿ … ” ಎಂದು ಉತ್ತರಕ್ಕೂ ಕಾಯದೆ ಫೋನಿಟ್ಟೆ.

ನನ್ನ ಮುಂದೆ ನೇಹಾ ಕುಳಿತಿದ್ದಳು. ಅವಳ ಪಕ್ಕ ಭರತ್, ಎಡಕ್ಕೆ ದಾಸ್ . ಭಟ್ಟ ನನ್ನ ಪಕ್ಕ ಕುಳಿತು ಮೆನು ಕಾರ್ಡ್ ತಿರುವುತ್ತಿದ್ದ. ಕುಳಿತದ್ದ ಆಸನ ಮೆತ್ತಗಿತ್ತು. ಬಿಳಿ ಬಣ್ಣದ ಶರ್ಟಿನೊಂದಿಗೆ ಕಂಗೊಳಿಸುತಿದ್ದ ನೇಹಾ ತನ್ನ ಮುಂದೆ ಆಗತಾನೆ ತಂದಿಟ್ಟಿದ್ದ ಬಾಟಲೊಂದನ್ನು ತನ್ನ ಮೃದುವಾದ , ಕೆಂಪಾದ ಕೈಗಳಿಂದ ಎತ್ತಿಕೊಂಡು ತನ್ನ ಕೆಂಪು ಕೆಂಪು ತುಟಿಗಳತ್ತ ನಿಧಾನವಾಗಿ ತಂದು ಒತ್ತಿಕೊಂಡಳು. ದಾಸ್ ಮಾಡುತಿದ್ದ ಜೋಕಿಗೆ ನಗುನಗುತ್ತಲೇ ಬಾಟಲಿನಿಂದ ವರ್ಣರಹಿತ ದ್ರವವನ್ನು ತುಟಿಯ ಸವರಿ ಒಳಗಿಳಿಸಿದಳು. ನಾನೂ ಹೀಗೆಯೇ ನಗು ನಗುತ್ತಲೇ, ಸಹಜವಾಗಿ ಇವರೊಟ್ಟಿಗೆ ಬೆರೆತುಬಿಡಲು ಸಾಧ್ಯವೇ ಎಂದು ಯೋಚಿಸತೊಡಗಿದೆ. ನನ್ನ ಬೆಳವಣಿಗೆಯೇ ನನ್ನ ಜೀವನರೀತಿಗೆ ಕಾರಣವೆಂದೆನಿಸಿತು. ಮನೆಯಲ್ಲಿನ ಬಡತನ, ಸದಾ ಕುಡಿಯುವ, ಕುಡಿದು ಬಂದು ನನ್ನ ಪೂರ್ವಜರನ್ನೆಲ್ಲಾ ನಾಲಿಗೆಯಿಂದ ಹೊರಗೆಳೆದು ಅಮ್ಮನ್ನ ಬೈಯುವ ಅಪ್ಪ, ಹುಟ್ಟುತ್ತಲೇ ಹೆಳವೆಯಾದ ತಂಗಿ, ಈ ಎಲ್ಲರನ್ನೂ ತನ್ನ ಮಡಿಲಲ್ಲಿಟ್ಟು ಸಾಕುವ ಮಾಸಿದ ಸೀರೆಯ ಅಮ್ಮ … ಇವೆಲ್ಲಾ ಮನದಲ್ಲಿ ಒಂದು ರೀತಿಯ ಭಾವಸ್ಥಿತಿ ಹುಟ್ಟುಹಾಕಿದ್ದುಂಟು.

ಅಪ್ಪನ ಕಂಡರೆ ಭಯ. ಎಲ್ಲಿ ಅಮ್ಮನನ್ನು ಹೊಡೆದು ಕೊಂದುಬಿಡುತ್ತಾನೋ ಎಂದು. ಆ ದಿನ ಮನೆಯಲ್ಲಾದ ಘಟನೆ .. ಮರೆಯುವುದುಂಟೆ .. !!! . ಅಮ್ಮ ಆಗ ತಾನೇ ಇಟ್ಟಿಗೆ ಮಂಡಿಯಿಂದ ಮನೆಗೆ ಬಂದಿದ್ದಳು. ನಾನೂ ಕೂಡ ಶಾಲೆಯಿಂದ ಬಂದವನೇ ಮಾದ, ಕರಿಯನೊಡನೆ ಆಡಲು ಹೋಗಿದ್ದೆ. ಅಮ್ಮನ ಬರುವಿಕೆ ನೋಡಿ  ‘ ಸಂಜೆ ಆರಾಯಿತು… ಇನ್ನೂ ಓದಲು ಕೂರದಿದ್ದರೆ ಅಮ್ಮ ಹೊಡೆಯುತ್ತಾಳೆ ‘ ಎಂದುಕೊಂಡು ಮಾದನಿಗೂ, ಕರಿಯನಿಗೂ ಹೇಳದೆ ಕೇಳದೆ ಓಡಿ ಬಂದು ಮನೆಯ ಹೊಕ್ಕು, ಪುಸ್ತಕ ಹಿಡಿದು ಕೂತೆ. ಅವಳಿಗೆ ನನ್ನ ಓದಿನ ಮೇಲೆ ಬಹಳ ಕಾಳಜಿಯಿತ್ತು. ತನಗೆ ಸಾಧ್ಯವಾಗದ್ದು ತನ್ನ ಮಕ್ಕಳಿಗೆ ಆಗಬೇಕೆಂಬ ಹಂಬಲವಿತ್ತು. ಈಗಲೂ ಇದೆ. ಇಷ್ಟೆಲ್ಲಾ ಓಡಾಟದಲ್ಲಿ ಭಾರತಿಗೆ ಔಷಧ ಕುಡಿಸುವುದು ಮರೆತುಹೋಗಿತ್ತು. ಬೆಳಗ್ಗೆ ಕೊಟ್ಟಿದ್ದೆ ಅಷ್ಟೇ… ಎರಡು ದಿನಗಳಿಂದ ಅಪ್ಪನ ಸುಳಿವಿರಲಿಲ್ಲ. ಪುಸ್ತಕ ಹಿಡಿದು ಕೂತಿದ್ದರೂ, ಕಣ್ಣು ಮನೆಯ ಬಾಗಿಲ ಕಡೆ ಓರೆಯಾಗಿತ್ತು. ಅಮ್ಮ ಇಟ್ಟಿಗೆ ಮಂಡಿಯಿಂದ ಬಂದವಳೇ ಭಾರತಿ ಇದ್ದ ಹಾಸಿಗೆಯ ಬಳಿ ಹೋದಳು. ಒಳಗೆ ಏನಾಗಿರಬಹುದು  ಎಂದು ಕಾಯುತ್ತಾ ಕೂತೆ. ಸ್ವಲ್ಪ ಹೊತ್ತಿನ ನಂತರ, ” ದೀಪೂ … ದೀಪೂ … ” ಎಂದು ಸಿಟ್ಟು ಮಿಶ್ರಿತ ಗಾಬರಿಯಿಂದ ಕರೆದಳು. ಹೆದರುತ್ತಲೇ ಒಳ ಹೋದವನ ಕೆನ್ನೆಗೆ, ಚೆನ್ನಾಗಿ ಕಾದ ಕಾವಲಿಯ ಮೇಲೆ ನೀರು ಎರಚಿದಂತೆ, ಚಟಾರ್ ಎಂದು ಬಿದ್ದಿತ್ತು ಏಟು. ” ಮಧ್ಯಾಹ್ನ ಔಷಧಿ ಕೊಟ್ಯಾ .. ” ಎಂದು ಕೇಳಿದಳು. ‘ ಇಲ್ಲಾ … ‘ ಎನ್ನುವಂತೆ ತಲೆಯಾಡಿಸಿದೆ. ” ಹೋಗು … ಡಾಕ್ಟರ್ ಕರ್ಕೊಂಡ್ ಬಾ … ” ಅಂತ ಕಳುಹಿಸಿದಳು ಅಮ್ಮ.  ನಾನು ಓಡಿ ಓಡಿ ಡಾಕ್ಟರ್ ನ ಮನೆ ತಲುಪಿದೆ. ಅವರ ಮನೆ ಪೇಟೆಯಲ್ಲಿತ್ತು. ನಮ್ಮ ಮನೆಗೂ, ಅವರ ಮನೆಗೂ ಸುಮಾರು ಅರ್ಧ ಕಿಲೋಮೀಟರು ಆದಾತು. ಡಾಕ್ಟರ್ ಗೆ, ” ಅಮ್ಮ ಹೇಳಿದಾಳೆ… ಭಾರತಿಗೆ ಹುಷಾರಿಲ್ಲ .. ಜ್ವರ ಜಾಸ್ತಿಯಾಗಿದೆ .. ಬೇಗ ಬನ್ನಿ … “ಎಂದು ಏದುಸಿರು ಬಿಡುತ್ತಾ ಹೇಳಿ ಅವರನ್ನು ಕರಕೊಂಡು ಬಂದೆ. ಬರುವಾಗಲೂ ನನಗೆ ಅನ್ನಿಸಿದ್ದು, ‘ ಅಮ್ಮ ಹೊಡೆಯುತ್ತಾಳೆ  ಎಂದು … ನಾನೇನು ತಪ್ಪು ಮಾಡಿದೆ ಎಂದು … ಹೊರತು ಭಾರತಿಗೆ ಹೀಗೆ  ಆಗಿದೆಯಲ್ಲಾ’ ಎಂದು ಅನಿಸಿದ್ದಿಲ್ಲ . ಅದೇನು ಮುಗ್ದತೆಯ ಮೂರ್ಖತನವೋ… ಇಂದಿಗೂ ಗಂಟಾಗಿದೆ.

ಡಾಕ್ಟರ್ ಭಾರತಿಯ ಕಣ್ಣು, ಮೂಗು, ಬಾಯಿ, ಎಲ್ಲಕ್ಕೂ ಟಾರ್ಚ್ ಹಾಕಿ ನೋಡುತಿದ್ದರು. ದೂರದಲ್ಲಿ ಬಾಗಿಲ ಬಳಿ ನಾ ನಿಂತಿದ್ದೆ. ಅಮ್ಮನ ಮುಖ ಆತಂಕದಿಂದ ಬೆವರುತಿತ್ತು. ಕೈಗಳನ್ನು ಎದೆಗೆ ಅವುಚಿಕೊಂಡು ಡಾಕ್ಟರ್ ನ ಮುಖ ನೋಡುತಿದ್ದಳು. ಗಂಭೀರವದನರಾದ ಡಾಕ್ಟರ್ ಸ್ವಲ್ಪ ಹೊತ್ತು, ಭಾರತಿಯ ಕೈ ಹಿಡಿದು , ಕಣ್ಣು ಮುಚ್ಚಿ ಧ್ಯಾನಸ್ಥರಾದರು. ನಾನು ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಲೇ ಇದ್ದೆ. ಸ್ವಲ್ಪ ಹೊತ್ತಿನ ನಂತರ, ” ಸೀತಮ್ಮ … ನಿನಗೆ ಹೇಳಿದ್ದೆ ಅಲ್ವ… ಮಗುವಿಗೆ ನ್ಯುಮೋನಿಯಾ ಅಂತ . ಈಗ ಜ್ವರ ತುಂಬಾ ಜಾಸ್ತಿ ಆಗಿದೆ. ಹಾಸನಕ್ಕೆ ಕರ್ಕೊಂಡು ಹೊಗು… ಬೇಗ.. ದೊಡ್ದಾಸ್ಪತ್ರೆಲಿ ತೋರ್ಸು…  ಇಲ್ಲಾಂದ್ರೆ ಉಳಿಯೋದು ಕಷ್ಟ … ” ಎಂದರು. ಅಮ್ಮನ ಸ್ಥಿತಿ ಅದನ್ನು ಕೇಳಿದ ಮೇಲೆ ಹೇಗಿದ್ದಿರಬಹುದು ಎಂದು ಈಗ ನೆನೆಸಿಕೊಂಡರೂ ಕಣ್ಣು ತೇವವಾಗುತ್ತೆ. ಡಾಕ್ಟರ್ ಅಷ್ಟು ಹೇಳಿ, ಒಂದು ಇಂಜೆಕ್ಷನ್ ಚುಚ್ಚಿ , ” ಬೇಗ ಕರ್ಕೊಂಡು ಹೋಗು … ” ಎಂದು ಇನ್ನೊಮ್ಮೆ ಹೇಳಿ ಹೊರಟುಹೋದರು. ಅಮ್ಮನ ಮುಖ ಗಾಬರಿಯಿಂದ ಕೂಡಿತ್ತು. ” ಇವ್ನು ಎಲ್ಲಿ ಕುಡಿಯಕ್ ಹೋದನೋ … ಹಾಳಾದೊನು … ಮಗೂಗೆ ಬೇರೆ ಹುಷಾರಿಲ್ಲ … ” ಎಂದು ಗೊಣಗಿಕೊಳ್ಳುತ್ತಾ ಮನೆಯಿಂದ ಹೊರ ಹೋಗಿ ನಿಂತಳು. ಅವಳ ಮುಖದಲ್ಲಿ ಅಪ್ಪನಿಗಾಗಿ ಕಾಯುವ ಕಾತರವಿತ್ತು. ದೂರ ದೂರದೂರದಲ್ಲೆಲ್ಲೂ ಅವನ ಸುಳಿವಿರಲಿಲ್ಲ. ವಾಪಸ್ಸು ಬಂದವಳೇ, ” ದೀಪು … ಭಾರತಿ ಪಕ್ಕ ಕೂತಿರು .. ಎದ್ದು ಹೋದ್ರೆ ಕಾಲು ಮುರೀತೀನಿ . ನಾನು ಇಟ್ಟಿಗೆ ಮಂಡಿ ಸಾವ್ಕಾರರ ಹತ್ತಿರ ಹೋಗಿ ಬರ್ತೀನಿ ” ಎಂದು ಹೇಳಿ ದಡ ಬಡ ಓಡಿದಳು.

ನಾನು ಭಾರತಿಯ ಎದುರು ಹೋಗಿ ಕೂತೆ. ಅವಳ ಹಣೆ ಮುಟ್ಟಿ ನೋಡಿದೆ. ಸುಡುತಿತ್ತು. ಪ್ರಜ್ಞೆ ಇರಲಿಲ್ಲ. ಅವಳ ಮುಖವನ್ನೇ ನೋಡುತ್ತಾ ಕೂತೆ. ನಿರುಮ್ಮಳಳಾಗಿ ಹೇಳಲು ಏನೂ ಇಲ್ಲದವಳಂತೆ ಭಾವನಾಶೂನ್ಯವಾಗಿ ನಿದ್ರಿಸುತ್ತಿರುವಳೋ ಎಂಬಂತೆ ಮಲಗಿದ್ದಳು. ಬಾಗಿಲ ಬಳಿ ಏನೋ ಸದ್ದಾಯಿತು. ಎದ್ದು ನೋಡಲು ಹೋದೆ. ತೂರಾಡಿಕೊಂಡು ಬಂದಿದ್ದ ಅಪ್ಪ ಮನೆಯ ಬಾಗಿಲ ನಡುವೆ ಕುಸಿದು ಬಿದ್ದಿದ್ದ. ಅಸ್ಪಷ್ಟವಾಗಿ ಏನೇನೋ ಒದರಲಾರಂಭಿಸಿದ.  ” ಆ ಮಂಡಿ ಸಾವ್ಕಾರನ ತಾವ್ ಹೋಗ್ತಾಳೆ … ಕಳ್ಲೌಡಿ.. ಮಾಡ್ತೀನಿ .. ಬರಲಿ ಇವತ್ತು … ” ಎಂದು ಅಮ್ಮನ್ನ ಬಯ್ಯತೊಡಗಿದ. ಅಮ್ಮ ಕತ್ತಲಿನಲ್ಲಿ ಕೈಯನ್ನು ಎದೆಯ ಮೇಲೆ ಒತ್ತಿಟ್ಟುಕೊಂಡು ಓಡೋಡುತ್ತ ಮನೆಗೆ ಬಂದಳು. ಅಪ್ಪ ಏನೇನೋ ಒದರಿ ಪ್ರಜ್ಞಾಶೂನ್ಯನಾದ. ಅವನನ್ನು ಎಬ್ಬಿಸುವ ಎಲ್ಲಾ ಪ್ರಯತ್ನ ಮಾಡಿ ಸೋತ ಅಮ್ಮ ಒಳಹೋಗಿ ಭಾರತಿಯನ್ನು ಎತ್ತಿಕೊಂಡು , ” ನಾನು ಸಾವ್ಕಾರರ ಗಾಡಿಲಿ ದೊಡ್ದಾಸ್ಪತ್ರೆಗೆ ಕರ್ಕೊಂಡು ಹೋಗ್ತೀನಿ… ಬೆಳಗ್ಗೆ ಬಂದ್ಬಿಡ್ತೀನಿ … ಮನೆ ಜೊಪಾನ… ” ಎಂದು ಹೇಳಿ ಏದುಸಿರು ಬಿಡುತ್ತಾ ಕತ್ತಲಿನಲ್ಲಿ ಕರಗಿಹೋದಳು . ನಾನು ಅವಳು ಹೋದ ದಾರಿಯನ್ನೇ ನೋಡುತ್ತಾ ನಿಂತೆ.  ಅದಾದ ಮೇಲೆ ಭಾರತಿಯ ಮುಖ ನೋಡುವ ಭಾಗ್ಯವೂ ನನ್ನದಾಗಲಿಲ್ಲ. ಅಪ್ಪ ಸಣ್ಣಗೆ ಗೊಣಗುತ್ತಲೇ ಇದ್ದ.

‘ ನೇಹಾಳಿಗೂ ಅಂದು ಅಮ್ಮನಿಗಾದಷ್ಟೇ ವಯಸ್ಸಾಗಿರಬೇಕು … ಅಲ್ವಾ … ‘ ಎಂದುಕೊಳ್ಳುತ್ತಲೇ ಫಿಂಗರ್ ಬೌಲ್ ನಲ್ಲಿ ಕೈಯಾಡಿಸಿದೆ.  ಚಳಿಗೆ ಬಿಸಿ ಬಿಸಿ ನೀರು ಆಪ್ಯಾಯಮಾನವಾಗಿತ್ತು. ಅಮ್ಮನ ಆ ಸ್ಥಿತಿಗೆ ಅಪ್ಪನ ಚಪಲ, ಚಟವೇ ಕಾರಣವೆಂದು ಗಟ್ಟಿಯಾಗಿ ನಂಬಿದ್ದ ನನಗೆ ನೇಹಾಳ ನಗು, ಇಚ್ಛೆಯಿಂದ ಅವಳು ಇದರೊಂದಿಗೆ ಪಳಗುವ ರೀತಿ ಒಂದು ರೀತಿಯ ವಿಚಿತ್ರ ಭಯ ಮತ್ತು ಆಶ್ಚರ್ಯ ಎರಡನ್ನೂ ಉಂಟುಮಾಡಿತ್ತು. ಸಿರಿವಂತಿಕೆಯ ಕುಡಿತಕ್ಕೂ ಬಡತನದಕ್ಕೂ ವ್ಯತ್ಯಾಸವಿದೆಯೇ ?? … ಚಟಕ್ಕೂ ಆಸೆಗೂ ಇದ್ದಷ್ಟು ಇರಬಹುದೇನೋ … ಎಂದುಕೊಂಡು ಸುಮ್ಮನಾದೆ. Prestige ಗೆ, trend ಗೆ ಹೊಂದಿಕೊಳ್ಳುವ ಸಲುವಾಗಿ ಕುಡಿದ ಭಟ್ಟ ನಿರರ್ಗಳವಾಗಿ ಏನೇನೋ ಒದರುತಿದ್ದ. ಅವನನ್ನು ಒಂದು ಕೈಲಿ ಹಿಡಿದು ಎದ್ದು ನಿಂತೆ. ನೇಹಾ ದಾಸ್ ನ ಹೆಗಲ ಮೇಲೆ ಕೈಹಾಕಿ ನಡೆಯತೊಡಗಿದಳು. ಅವಳ ಕಣ್ಣಿನ ಮಾದಕತೆ ಕಮ್ಮಿಯಾದಂತೆ ಇರಲಿಲ್ಲ. ಮತ್ತೆ ಫೋನು ರಿಂಗಣಿಸಿತು … ” ಹಾ !!! ಹೇಳು ಅಮ್ಮ … ಈಗ ಹೊರಟೆ … ” ಎನ್ನುತ್ತಾ ಮುಂದುವರೆದೆ.

Adarsh B Vasista

Facebook ಕಾಮೆಂಟ್ಸ್

Adarsh B Vasista: I am an engineer by training, a researcher by profession and a writer by passion. Hailing from Hassan, I, presently is a PhD student at Indian Institute of Science Education ad Research (IISER) Pune.
Related Post