ಮೇ ಹದಿನಾರು 2014.. ದಿನದ ಬಗೆಗೆ ಹೇಳುವುದಾದರೆ ಅದ್ಯಾರದ್ದೂ ಜಯಂತಿಯಲ್ಲ. ಯಾವ ಹಬ್ಬ ಹರಿದಿನವೂ ಅಲ್ಲ. ಆದರೂ ನಮ್ಮೆಲ್ಲರ ಚರಿತ್ರೆಯಲ್ಲಿ ಎಂದೂ ಮಾಸದ ದಿನವದು. ನಮ್ಮೆಲ್ಲರ ಭವಿಷ್ಯದ ದಿಕ್ಕನ್ನೇ ಬದಲಾಯಿಸಿದ, ಅಕ್ರಮಗಳಿಂದ ಅಭಿವೃಧ್ಧಿಯೆಡೆಗೆ, ಜಡತ್ವದಿಂದ ಕ್ರೀಯಾಶೀಲತೆಯೆಡೆಗೆ ದೇಶ ಮುಖ ಮಾಡಿದ ದಿನವದು. ಅಂತರಾಷ್ಟ್ರೀಯ ಒಕ್ಕೂಟಗಳ ಮುಂದೆ ಭಾರತಕ್ಕೆ ನರೇಂದ್ರ ಮೋದಿಯೆಂಬ ದಿಕ್ಸೂಚಿ ನಾಯಕನ ಪ್ರತಿಷ್ಟಾಪನೆಯಾದ ದಿನವೂ ಅದೇ. ಮೋದಿಯ ಭಾವಚಿತ್ರ ಹಿಡಿದು ಬೀದಿ ಬೀದಿಯಲ್ಲಿ ಸಂಭ್ರಮಿಸಿದ್ದೆವು ನಾವೆಲ್ಲ ಆ ದಿನ. ಸೀದಾ ಹೇಳಬೇಕಾದರೆ ಭಾರತ ವಿಶ್ವಗುರು ಆಗುವತ್ತ ಮೊದಲ ಮತ್ತು ಮಹತ್ವದ ಹೆಜ್ಜೆ ಇಟ್ಟ ದಿನ ಮೇ ಹದಿನಾರು. ಹದಿನಾರಕ್ಕೆ ಬಹುಮತ ಪಡೆದು ಇಪ್ಪತ್ತಾರಕ್ಕೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರಕ್ಕೀಗ ಭರ್ತಿ ಒಂದು ವರ್ಷ!
ಹೊಸ ಸರ್ಕಾರಗಳು ಬರುವುದೇ ಜನರ ಕೋಟಿ ಕೋಟಿ ನಿರೀಕ್ಷೆಗಳ ಮೇಲೆ. ಮೋದಿ ಸರ್ಕಾರವೂ ಇದಕ್ಕೆ ಹೊರತೇನಲ್ಲ. ಆದರೆ ಇಲ್ಲಿ ಮೋದಿ ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. ಮೋದಿ ಘೋಷಿಸಿದ ಒಂದೊಂದು ಯೋಜನೆಗಳೂ ಸಹ ಸಂಪೂರ್ಣ ಪ್ರೀಪ್ಲಾನ್ಡ್ ಆಗಿ ಜಾರಿಗೆ ಬಂದಿದೆ. ಅದೆಂತಹಾ ಪ್ಲಾನ್ ಎಂದರೆ ಜನಧನ್, ಸ್ವಚ್ಛ ಭಾರತದಂತಹ ಬೃಹತ್ ಯೋಜನೆಗಳು ದೇಶಾದ್ಯಂತ ಏಕಕಾಲದಲ್ಲಿ ಜಾರಿಗೆ ಬಂದಿದೆ. ಜನಧನ್, ಪ್ರಧಾನಮಂತ್ರಿ ವಿಮಾಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಬ್ಯಾಂಕುಗಳು ಪೈಪೋಟಿಗೆ ಬಿದ್ದಿವೆ. ಸ್ವಚ್ಛಭಾರತ ಯೋಜನೆ ಅನುಷ್ಟಾನಕ್ಕಾಗಿ ಸ್ವತಃ ಮೋದಿಯೇ ಪೊರಕೆ ಹಿಡಿದು ಗುಡಿಸಿದ್ದನ್ನು ನಾವು ಮರೆಯುವಂತಿಲ್ಲ. ಈ ಸರ್ಕಾರ ಖಂಡಿತಾ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿ ಅಭಿವೃದ್ಧಿಯ ಹರಿಕಾರ, ಆತ ಪ್ರಧಾನಿಯಾದರೆ ದಿನ ಬೆಳಗಾಗುವುದರೊಳಗೆ ದೇಶ ಬದಲಾಯಿಸಿಬಿಡುತ್ತಾನೆ ಎನ್ನಲು ಮೊದಿಯೇನು ದೇವರಲ್ಲ, ಮ್ಯಾಜಿಷಿಯನ್ನೂ ಅಲ್ಲ. ಅಂತಹಾ ನಿರೀಕ್ಷೆಗಳನ್ನು ನಾವಿಟ್ಟುಕೊಂಡರೆ ಅದು ನಮ್ಮ ತಪ್ಪೇ ವಿನಹ ಮೋದಿಯದ್ದಲ್ಲ. ಆದರೆ ಮೋದಿಯಂತೂ ಅಭಿವೃಧ್ಧಿಯ ಜೊತೆ ಜೊತೆಗೇ ತನ್ನ ಸ್ವಂತ ವ್ಯಕ್ತಿತ್ವದಿಂದಾಗಿ ಇವತ್ತು ಜಗತ್ತಿನ ಮನ ಗೆದ್ದಿದ್ದಾರೆ ಎಂಬುದನ್ನು ಅಲ್ಲಗೆಳೆಯಲೂ ಯಾರಿಂದಲೂ ಸಾಧ್ಯವಿಲ್ಲ.
ಈ ಅಭಿವೃಧ್ಧಿ ಕಾರ್ಯಗಳು, ರಾಜಕೀಯ ಕರ್ಮಕಾಂಡಗಳೆಲ್ಲ ಆಚೆಗಿರಲಿ, ಮೋದಿ ನಮಗೆ ಯಾಕೆ ಇನ್ನಿಲ್ಲದಂತೆ ಇಷ್ಟವಾಗಿದ್ದಾರೆ ಎಂಬುದನ್ನು ಹೇಳುತ್ತೇನೆ ಕೇಳಿ. ಮೋದಿಯಲ್ಲಿ ಮೊದಲು ಇಷ್ಟವಾಗುವುದೇ ಅವರ ನಾಯಕತ್ವ ಗುಣ. ದೇಶಕ್ಕೆ ಎಂತಹಾ ನಾಯಕನ ಅವಶ್ಯಕತೆಯಿತ್ತೋ ಅಂತಹಾ ನಾಯಕನೊಬ್ಬ ಮೋದಿಯೊಳಗಿದ್ದಾನೆ. ಮೊದಲಿನವರಂತೆ ‘ರಿಮೋಟ್ ಕಂಟ್ರೋಲ್ಡ್’ ಅವರಲ್ಲ. ಅವರ ಮಾತಿನಲ್ಲಿ ಪ್ರಚಂಡ ಸಾಮರ್ಥ್ಯವಿದೆ. ಆಡಿದ್ದನ್ನು ಮಾಡಿ ತೋರಿಸುವ ಹಟವಿದೆ. ಎಲ್ಲವನ್ನೂ ಜಾಣ್ಮೆಯಿಂದ ನಿಭಾಯಿಸುವ ಕಲೆ ಮೋದಿಗಿದೆ.
ಬಹುಶಃ ಮೋದಿಯ ನಾಯಕತ್ವಕ್ಕೆ ತಲೆಬಾಗದವರು ಯಾರೂ ಇಲ್ಲ. ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಜಗತ್ತಿನ ಹಲವು ದೇಶಗಳ ಗಣ್ಯಾತಿಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ, ಅವರ ಉಪಸ್ಥಿತಿಯಲ್ಲಿಯೇ ಅಧಿಕಾರ ಸ್ವೀಕರಿಸಿದ ಮೋದಿ ಮೊದಲ ಹಂತದಲ್ಲಿಯೇ ತಾನು ಸಾಮಾನ್ಯ ನಾಯಕನಲ್ಲ ಎಂಬುದನ್ನು ತೋರಿಸಿಕೊಟ್ಟರು. ಜಗತ್ತಿನ ಯಾವುದೇ ಭಾಗಕ್ಕೆ ಮೋದಿ ಹೊದರೂ ಅಲ್ಲಿ ‘ಮೋದಿ ಮೋದಿ’ ಎಂಬ ಹರ್ಷೋದ್ಗಾರ ಕೇಳಿ ಬಂತು. ಒಂದು ಕಾಲದಲ್ಲಿ ನಮ್ಮನ್ನು ಹಾವಾಡಿಗರ ದೇಶದವರೆಂದು ಹೀಯಾಳಿಸುತ್ತಿದ್ದ ಅಮೇರಿಕಾ ಮೋದಿಗೆ ರೆಡ್ ಕಾರ್ಪೆಟ್ ಹಾಕಿದೆ. ಹಿಂದಿನ ಪ್ರಧಾನಮಂತ್ರಿಗಳೆಲ್ಲಾ ಅಮೇರಿಕಾ ಪ್ರವಾಸ ಕೈಗೊಂಡಿದ್ದರೂ ಸಹ ಅವರಾರಿಗೂ ಮೋದಿಗೆ ಸಿಕ್ಕಿದಷ್ಟು ಪ್ರಾಶಸ್ತ್ಯ ಸಿಕ್ಕಿರಲಿಲ್ಲ. ಅಮೇರಿಕಾ ಪ್ರವಾಸದ ಸಂದರ್ಭದಲ್ಲಿ ಕಿಕ್ಕಿರಿದು ತುಂಬಿದ್ದ ಮ್ಯಾಡಿಸನ್ ಸ್ಕ್ವಾರಿನಲ್ಲಿ ಭಾಷಣ ಮಾಡಿದ ಮೋದಿ ಭವ್ಯ ಭಾರತದ ಕುರಿತಾದ ತನ್ನ ಕನಸನ್ನು ವ್ಯಕ್ತಪಡಿಸಿದರು. ಮುಖ್ಯವಾಗಿ ಸ್ವಚ್ಛಭಾರತ ಯೋಜನೆಗೆ ಅನಿವಾಸಿ ಭಾರತೀಯರ ಸಹಕಾರ ಯಾಚಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ಆಸ್ಟ್ರೇಲಿಯಾದಲ್ಲಿಯೂ ಭಾರತದ ಅಭ್ಯುದಯಕ್ಕೆ ತಾನೇನು ಮಾಡುತ್ತಿದ್ದೇನೆ ಎಂಬುದನ್ನು ಅಲ್ಲಿರುವ ಭಾರತೀಯರ ಮುಂದೆ ತೆರೆದಿಟ್ಟರು. ಎಪ್ರೀಲಿನಲ್ಲಿ ಜರ್ಮನಿಗೆ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಕೊಂಡೊಯ್ದು ಪೂರ್ತಿ ಯೋಜನೆಗೆ ಭರ್ಜರಿ ಭೇಟೆಯನ್ನೇ ಒದಗಿಸಿದರು. ನಿತ್ಯವೂ ಕತ್ತಿ ಮಸೆಯುತ್ತಿದ್ದ ಚೀನಾಕ್ಕೆ ತೆರಳಿದಾಗ ಅಲ್ಲಿನ ಅಧ್ಯಕ್ಷ ಕ್ಸಿ ಜಿಂಪಿಂಗ್ ಸ್ವತಃ ತಾವೇ ಶಿಷ್ಟಾಚಾರವನ್ನೆಲ್ಲಾ ಬದಿಗೊತ್ತಿ ಮೋದಿಯನ್ನು ಸ್ವಾಗತಿಸಿದರು. ಈ ಒಂದು ವರ್ಷದಲ್ಲಿ ಮೋದಿ ಅಮೆರಿಕಾ, ಆಸ್ಟ್ರೇಲಿಯ, ಫ್ರಾನ್ಸ್, ಚೀನಾ, ಜಪಾನ್, ಜರ್ಮೆನಿಯಂತಹಾ ಮುಂದುವರಿದ ರಾಷ್ಟ್ರಗಳನ್ನೂ ಸೇರಿ ನೇಪಾಳ, ಮ್ಯಾನ್ಮಾರ್, ಮಂಗೋಲಿಯಾದಂತಹ ಸಣ್ಣ ರಾಷ್ಟ್ರಗಳಿಗೂ ಭೇಟಿಯಿತ್ತಿದ್ದಾರೆ. ಈ ಪ್ರವಾಸಗಳು ಬರೀ ಕಡತಗಳಿಗೆ ಸಹಿ ಹಾಕುವ ಕಾರ್ಯಕ್ರಮಗಳಿಗೆ ಸೀಮಿತವಾಗಿರದೆ ಪ್ರತೀ ದೇಶದ ನಾಯಕರುಗಳೊಳಗೆ ಹೊಸ ಬಾಂಧವ್ಯವನ್ನು ಬೆಸೆದಿದೆ. ಹಿಂದೆ ಇವೆಲ್ಲಾ ಬರೀ ಅಧಿಕೃತ ಭೇಟಿಯಾಗಿರುತ್ತಿದ್ದರೆ ಈಗ ಅದು ಮೋದಿಯಿಂದಾಗಿ ಭಾವನಾತ್ಮಕವಾಗಿ ನಮ್ಮನ್ನು ಬೆಸೆದಿದೆ. ಭಾರತವೆಂದರೆ ಅಸಹ್ಯವೆಂದು ತಿಳಿದಿದ್ದ ಕೆಲ ನಮ್ಮವರೇ ‘ಆಹ್.. ಎಂತಹಾ ದೇಶದಲ್ಲಿ ಜನಿಸಿದೆನಪ್ಪಾ.. ‘ ಎಂದು ಹೆಮ್ಮೆ ಪಟ್ಟುಕೊಳ್ಳುವಂತಹಾ ಪರಿಸ್ಥಿತಿಯನ್ನು ಮೋದಿ ಸೃಷ್ಟಿಸಿದ್ದಾರೆ.
ಅಯ್ಯೋ ಇದೇನು ಮಹಾ ಎಂದು ಕೇಳಬೇಡಿ. ಮೋದಿ ಬಗ್ಗೆ ಹೇಳಿಕೊಳ್ಳುವಂತಾದ್ದೂ ಇನ್ನೂ ಬಹಳಷ್ಟಿದೆ. ಒಬ್ಬ ನಾಯಕನಾದವನು ಇತರರಿಗೆ ಹೇಗೆ ಮಾದರಿಯಾಗಿರಬೇಕೆಂದು ಸ್ವತಃ ಮೋದಿಯೇ ನಿರೂಪಿಸಿದ್ದಾರೆ. ಎಲ್ಲ ಮಂತ್ರಿಗಳು ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಬೇಕೆಂದು ನೋಟೀಸು ಕೊಟ್ಟಿಲ್ಲ. ಆದರೆ ಸ್ವತಃ ತಾನೇ ದಿನವೂ ಹಗಲೂ ರಾತ್ರಿ ಕೆಲಸ ಮಾಡಿ ಇತರ ಮಂತ್ರಿಗಳೂ ಕೆಲಸ ಮಾಡುವಂತೆ ಪ್ರೇರೇಪಿಸಿದ್ದಾರೆ. ಬಡವರಿಗೆ ಮಾತ್ರ ಸಬ್ಸಿಡಿ ಸಿಲಿಂಡರ್, ಶ್ರೀಮಂತರಿಗಿಲ್ಲ ಎಂಬ ಧೋರಣೆ ತಾಳದೆ ‘ಶ್ರೀಮಂತರು, ಶಕ್ತರಾದವರು ದಯವಿಟ್ಟು ಸಬ್ಸಿಡಿ ಸಿಲಿಂಡರನ್ನು ವಾಪಾಸು ಮಾಡಿ’ ಎಂದು ಬಹಿರಂಗವಾಗಿ ಮನವಿ ಮಾಡಿ ಲಕ್ಷಾಂತರ ಜನರು ಸಬ್ಸಿಡಿ ಸಿಲಿಂಡರನ್ನು ತ್ಯಜಿಸುವಂತೆ ಮಾಡಿದ್ದಾರೆ. ಹಿಂದೊಮ್ಮೆ ಪಾಕಿಸ್ತಾನದೊಂದಿಗೆ ಯುಧ್ಧದ ಸಂದರ್ಭದಲ್ಲಿ ಯುಧ್ಧ ಪೀಡಿತ ಪ್ರದೇಶಗಳಲ್ಲಿ ಆಹಾರದ ಕೊರತೆಯುಂಟಾದಾಗ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶವಾಸಿಗಳಲ್ಲಿ ಒಂದು ಹೊತ್ತಿನ ಊಟ ತ್ಯಜಿಸುವಂತೆ ಮನವಿ ಮಾಡಿದ್ದರಂತೆ. ಅದನ್ನು ಮೊದಲು ತಮ್ಮ ಮನೆಯಲ್ಲಿಯೇ ಕಾರ್ಯರೂಪಕ್ಕೆ ತಂದು ದೇಶಾದ್ಯಂತ ಅಭೂತಪೂರ್ವ ಬೆಂಬಲ ಸಿಗುವಂತೆ ಮಾಡಿದ್ದರಂತೆ. ಇವತ್ತು ಮೋದಿಯೂ ಕೂಡಾ ಅದೇ ಹಾದಿಯಲ್ಲಿ ಸಾಗಿ ಉಳಿದೆಲ್ಲರಿಗೂ ಮಾದರಿಯಾಗುತ್ತಿದ್ದಾರೆ. ನಿಜವಾದ ನಾಯಕ ಯಾವತ್ತೂ ಕೆಲಸವನ್ನು ತನ್ನ ಕೈಕೆಳಗಿನವರ ತಲೆ ಮೇಲೆ ಹೇರುವುದಿಲ್ಲ. ತಾನೂ ಮಾಡಿಕೊಂಡು ಇತರರೂ ಮಾಡುವಂತೆ ಪ್ರೇರೇಪಿಸುತ್ತಾನೆ. ಮೋದಿ ಇದನ್ನು ಮಾಡಿ ತೋರಿಸುತ್ತಿದ್ದಾರೆ.
ತನ್ನ ಕೆಲಸವನ್ನು ಮೋದಿ ಎಷ್ಟು ಚಾಣಾಕ್ಷತನದಿಂದ ಮಾಡುತ್ತಿದ್ದಾರೆಂದರೆ ಅಧಿಕಾರಕ್ಕೆ ಬಂದಂದಿನಿಂದಲೂ ಎಲ್ಲಾ ರಾಜಕೀಯ ಮುಖಂಡರನ್ನು, ಕಾರ್ಪೋರೇಟ್ ಕಂಪೆನಿಗಳ ಮುಖ್ಯಸ್ಥರನ್ನು, ಉಧ್ಯಮಿಗಳನ್ನು, ಕ್ರೀಡಾ ತಾರೆಗಳನ್ನು , ಸಿನಿಮಾ ರಂಗದವರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮಾತುಕತೆಗೆ ಕರೆದು ಎಲ್ಲಾ ಕ್ಶೇತ್ರದಲ್ಲೂ ದೇಶದ ಸರ್ವಾಂಗೀಣ ಅಭಿವೃಧ್ಧಿಗೆ ಎಲ್ಲರ ನೆರವನ್ನು ಯಾಚಿಸುತ್ತಿದ್ದಾರೆ. ಹಿಂದಿನವರೆಲ್ಲಾ ಉದ್ಯಮಿಗಳನ್ನು ಹಿಂದಿನಿಂದ ಭೇಟಿಯಾಗುತ್ತಿದ್ದರೇ ವಿನಹ ಹೀಗೆ ಅಧಿಕೃತವಾಗಿ ಭೇಟಿಯಾಗುತ್ತಿದ್ದುದು ಬಹು ವಿರಳ. ಅಭಿವೃಧ್ಧಿಯ ವಿಷಯ ಬಂದಾಗ ಮೋದಿ ಹೇಗೆ ಎಲ್ಲರನ್ನು ಜೊತೆಗೆ ಕರೆದೊಯ್ಯುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಿದೆ. ಈ ಮೊದಲು ಮಾರ್ಕ್ ಝುಕರ್ ಬರ್ಗ್ ಯಾರೆಂದು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ಮೋದಿ ಝುಕರ್ ಬರ್ಗ್ ನ್ನು ಭೇಟಿಯಾದಾಗ. ಆ ಭೇಟಿಯಿಂದಾಗಿ ಮೋದಿಯ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಗೆ ತಾನು ಸಹಕಾರ ನೀಡುವುದಾಗಿ ಝುಕರ್ ಬರ್ಗ್ ಘೋಷಿಸಿದರು. ಹೀಗೆ ಬರೀಯ ಮಂತ್ರಕ್ಕೆ ಮಾವಿನಕಾಯಿ ಉದುರಿಸಿದರು ಮೋದಿ. ಹಿಂದಿನ ಸರ್ಕಾರಗಳೆಲ್ಲಾ ‘ತೇರಾ ಸಾಥ್ ಮೇರಾ ವಿಕಾಸ್’ ಎಂದು ಒಳಗೊಳಗೆ ಒಪ್ಪಂದ ಮಾಡಿಕೊಂಡು ದೇಶವನ್ನೇ ಲೂಟಿ ಮಾಡಿದ್ದರೆ, ಮೋದಿ ಅವರೇ ಹೇಳಿದಂತೆ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ಮಂತ್ರದೊಂದಿಗೆ ಹೆಜ್ಜೆಯಿಟ್ಟಿದ್ದಾರೆ.
ಮೋದಿಯ ಮಾತಿನ ವಿಷಯಕ್ಕೆ ಬರುವುದಾದರೆ, ಅದರಲ್ಲಿ ಮತ್ತೊಂದು ಮಾತೇ ಇಲ್ಲ. ‘ಸಿಂಪ್ಲಿ ಆಸ್ಸಮ್’ ಎನ್ನುತ್ತಾರಲ್ಲಾ ಹಾಗೆ. ಗುಜರಾತಿನಲ್ಲಿ ಮಾಡಿದ ಅಭಿವೃಧ್ಧಿ ಕಾರ್ಯಗಳಿಂದಲೇ ಮೋದಿ ಪ್ರವರ್ಧಮಾನಕ್ಕೆ ಬಂದಿದ್ದಾದರೂ ಒಂದರ್ಥದಲ್ಲಿ ಮೋದಿ ನಿಜವಾಗಿಯೂ ಗೆದ್ದಿದ್ದು ಮಾತಿನಿಂದ. ಆದರೆ ಅದನ್ನು ಬರೀಯ ಮಾತಿಗೆ ಸೀಮಿತಗೊಳಿಸದೆ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ ಎನ್ನುವುದು ಮೋದಿಯ ಹೆಗ್ಗಳಿಕೆ. ಅಮೇರಿಕಾ, ಆಸ್ಟ್ರೇಲಿಯಾದಲ್ಲಿ ಮಾಡಿದ ಭಾಷಣವಂತೂ ಸಾರ್ವಕಾಲಿಕ ಎಂಬಂತಹ ಹಿರಿಮೆಯನ್ನು ಗಳಿಸಿದೆ. ಹಿಂದಿನ ಪ್ರಧಾನಿಗಳು ಬಾಯಿಬಿಡುವುದನ್ನು ಹೆಚ್ಚಾಗಿ ಕಂಡಿರದ ನಮಗೆ ಈಗ ವಾರಕ್ಕೊಮ್ಮೆ ಪ್ರಧಾನಿಯ ಮಾತನ್ನು ‘ಮನ್ ಕೀ ಬಾತ್ ‘ ನಲ್ಲಿ ಕೇಳಬಹುದಾಗಿದೆ. ಮೋದಿ ಹಿಂದಿನ ಪ್ರಧಾನಿಯಂತೆ ರೋಬೋಟ್ ಭಾಷಣ ಮಾಡುವುದಿಲ್ಲ. ಕೆಲವರಂತೆ ತಪ್ಪಿಯೂ ಬೇರೆ ದೇಶದ ಭಾಷಣ ಓದುವುದಿಲ್ಲ. ಅಷ್ಟಕ್ಕೂ ಅವರು ಭಾಷಣವನ್ನು ಓದುವುದೇ ಇಲ್ಲ.
ಹ.. ಒಂದು ವಿಷಯವನ್ನು ಹೇಳಲೇಬೇಕು.ಕಳೆದ ಒಂದು ವರ್ಷದಲ್ಲಿ ಕೆಲ ದೇಶಗಳಲ್ಲಿ ಅರಾಜಕತೆ, ಯುಧ್ಧ, ನೈಸರ್ಗಿಕ ಅವಘಡಗಳು ಸಂಭವಿಸಿದೆ. ಇಂತಹಾ ಘಟನೆಗಳು ಸಂಭವಿಸಿದಾಗ ನೆರೆ ರಾಷ್ಟ್ರಗಳು ಹೇಗೆ ಸ್ಪಂದಿಸುತ್ತಾರೆ ಎಂಬುದು ಬಹು ಮುಖ್ಯವಾಗಿರುತ್ತದೆ. ಮೋದಿ ಭಾರತದ ಪ್ರಧಾನಿಯಾದ ಮೇಲೆ ಇರಾಕಿನಲ್ಲಿ ಮತ್ತು ಯೆಮೆನಿನಲ್ಲಿ ಅಂತರ್ಯುಧ್ಧವುಂಟಾಗಿ ಅಲ್ಲಿರುವ ಭಾರತೀಯರು ಮತ್ತು ಇತರರು ಸಂಕಷ್ಟಕ್ಕೆ ಸಿಲುಕಿದ್ದರು. ಇರಾಕಿನಲ್ಲಿ ರಕ್ಷಣಾ ಕಾರ್ಯ ತುಸು ನಿಧಾನವಾದರೂ, ಯೆಮಿನಿನಲ್ಲಿ ಮೋದಿ ಮಾರ್ಗದರ್ಶನದಲ್ಲಿ ಸಚಿವ ವಿಕೆ ಸಿಂಗ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ಕೈಗೊಂಡ ಭಾರತ ಸರ್ಕಾರ ಅಲ್ಲಿದ್ದ ಭಾರತೀಯರನ್ನೂ ಸೇರಿ ಉಳಿದ ರಾಷ್ಟ್ರಗಳ ನಾಗರೀಕರನ್ನು ಸುರಕ್ಷಿತವಾಗಿ ಮನೆ ಸೇರಿಸಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ನೇಪಾಳದಲ್ಲಿ ಮೊನ್ನೆ ಭೀಕರ ಭೂಕಂಪ ಸಂಭವಿಸಿದಾಗ ಎಲ್ಲರಿಗಿಂತಲೂ ಮೊದಲು ರಕ್ಷಣೆಗೆ ಧಾವಿಸಿದ್ದು ಮತ್ತದೇ ಮೋದಿ. ಸ್ವತಃ ತಾನೇ ಮೇಲುಸ್ತುವಾರಿ ನೋಡಿಕೊಂಡು ಭೂಕಂಪ ನಡೆದ ಕೆಲವೇ ಘಂಟೆಗಳಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಂಡು ಸರ್ವತ್ರ ಪ್ರಶಂಸೆಗೊಳಗಾಗಿದ್ದಾರೆ ನಮ್ಮ ಪ್ರಧಾನಿ.
ಮೋದಿ ನರಹಂತಕ, ಆತ ಪ್ರಧಾನಿಯಾದ್ರೆ ನರಮೇಧವಾಗುತ್ತೆ, ದೇಶದಲ್ಲಿ ಕೋಮುಗಲಭೆ ಹೆಚ್ಚಾಗುತ್ತೆ, ಮೋದಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಉಳಿಗಾಲವಿಲ್ಲ ಎಂಬಿತ್ಯಾದಿ ಅಪಪ್ರಚಾರವನ್ನು ಕಾಂಗ್ರೆಸ್ಸ್ ಪಕ್ಷ ನಡೆಸಿತ್ತು, ಆದರೀಗ ಒಂದು ವರ್ಷವಾಯಿತು. ಎಲ್ಲಿದೆ ಕೋಮುಗಲಭೆ? ಮುಸ್ಲಿಮರಿಗೇನಾಗಿದೆ ಮೋದಿ ಆಡಳಿತದಲ್ಲಿ? ಬಹುಶಃ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಗಳಿಸುತ್ತಿರುವ ಪ್ರಾಶಸ್ತ್ಯವನ್ನು ನೋಡಿ ಕಾಂಗ್ರೆಸ್ಸಿಗರ ಮನದೊಳಗೆ ಕೋಮುಗಲಭೆಯಾಗುತ್ತಿರಬಹುದೇ ಹೊರತು ದೇಶದಲ್ಲಲ್ಲ!
ಭಾರತದ ರಾಜಕೀಯ ಇತಿಹಾಸದಲ್ಲಿ ಮೋದಿಯವರಷ್ಟು ದಾಳಿಗೊಳಗಾದ ಮತ್ತೊಬ್ಬ ನಾಯಕನಿಲ್ಲ. ಆದರೆ ಮೋದಿಯ ತಾಕತ್ತು ಏನೆಂದರೆ ತನ್ನ ಮೇಲೆಸೆದ ಕಲ್ಲನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ಸಿನ ಶಿಖರವೇರಿದ್ದಾರೆ. ಚುನಾವಣೆಯ ಮೊದಲೂ ಇದ್ದ ‘ಮೋದಿ ಹವಾ’ವನ್ನು ಪ್ರಚಂಡವಾಗಿ ಕಾಯ್ದುಕೊಂಡಿದ್ದಾರೆ. ತನ್ನ ಕಾರ್ಯದಕ್ಷತೆಯಿಂದ, ಕ್ರೀಯಾಶೀಲತೆಯಿಂದಾಗಿ ವಿಶ್ವದ ಜನರ ಮನ ಗೆದ್ದಿದ್ದಾರೆ. ಭಾರತ ವಿಶ್ವಗುರುವಾಗಬೇಕೆನ್ನುವ ನಮ್ಮ ಕನಸನ್ನು ಸಾಕಾರಗೊಳಿಸುವ ರಾಯಭಾರಿಯಾಗಿ ವಿಶ್ವವಂದ್ಯರಾಗಿದ್ದಾರೆ ಮೋದಿ!
Facebook ಕಾಮೆಂಟ್ಸ್