ಗೋಪುವಿನ ತಟ್ಟೆಗೆ ಮತ್ತೊಮ್ಮೆ ತುಪ್ಪ ಬೀಳುತ್ತಿದ್ದಂತೆ ಕುಮಾರ ನನ್ನತ್ತ ಓರೆನೋಟ ಬೀರಿದ. “ಯಾಕಪ್ಪಾ,ಅವನ ತಟ್ಟೆಗೆ ತುಪ್ಪ ಹಾಕಿದ್ದು ನಿನ್ನ ಹೊಟ್ಟೆಕಿಚ್ಚಿಗೆ ತುಪ್ಪ ಹಾಕಿದಂತೆ ಆಯ್ತಾ?” ಮನಸ್ಸಿನಲ್ಲೇ ಅಂದುಕೊಂಡೆ. ಮಕ್ಕಳು ಅವರವರ ಅಮ್ಮಂದಿರು ಅವರನ್ನೇ ಜಾಸ್ತಿ ಪ್ರೀತಿಸಬೇಕೆಂದು ಅಪೇಕ್ಷಿಸುವುದು ಸಹಜ. ಹಾಗೆಂದು ಅಮ್ಮನನ್ನು ಕಳೆದುಕೊಂಡ ಗೋಪುವಿನಂಥವರು ಅಮ್ಮನ ಪ್ರೀತಿಯಿಂದ ವಂಚಿತರಾಗಿಯೇ ಇರಬೇಕೇ? ದೊಡ್ಡಮ್ಮನೂ ಅಮ್ಮನೇ ತಾನೆ? ನಾನೇನು ಗೋಪುವಿನತ್ತ ಜಾಸ್ತಿ ಅಕ್ಕರೆ ತೋರುತ್ತಿಲ್ಲ. ಕುಮಾರ ಹೇಗೋ,ಗೋಪುವೂ ಹಾಗೆಯೇ. ಹೀಗೆ ನಡೆದುಕೊಳ್ಳುವುದು ಮನುಜಧರ್ಮವೂ ಹೌದು.ಇತ್ತೀಚೆಗೆ ಗೋಪುವಿನತ್ತ ಕುಮಾರನ ಅಸಹನೆ ಜಾಸ್ತಿಯಾಗುತ್ತಿದೆ. ಮೊನ್ನೆ ಯಾವುದೋ ಆಟಿಕೆಯ ವಿಷಯಕ್ಕೆ ಇಬ್ಬರಿಗೂ ಹೊಯ್-ಕೈ ಆಗುವುದರಲ್ಲಿತ್ತು. ಈಗಲೇ ಹೀಗಾದರೆ ಮುಂದೆಂತೋ! ತಂಗಿ ಸಾಯುವ ಮುನ್ನ ನನ್ನ ಕೈ ಹಿಡಿದು ,”ಅಕ್ಕಾ,ಗೋಪುವನ್ನು ನೋಡಿಕೋ” ಎಂದು ಬೇಡಿದ್ದು ನೆನಪಾದರೆ ಕರುಳು ಚುರ್ರೆನ್ನುತ್ತದೆ. ದಿನಗಳೆದಂತೆ ಅವರಿಬ್ಬರಲ್ಲೇನೂ ತಾರತಮ್ಯ ಮಾಡುತ್ತಿಲ್ಲ ಎಂಬುದನ್ನು ಕುಮಾರ ಅರ್ಥ ಮಾಡಿಕೊಳ್ಳಬಹುದೇನೋ!
“ನಂಗೆ ಬಜ್ಜಿ ಕೊಡು”ಕುಮಾರ ಕಿರುಚಿದ.ಅವನ ಉಗ್ರಾವತಾರ ಕಂಡು ಗೋಪು ಮರುಮಾತಿಲ್ಲದೆ ತಟ್ಟೆ ಮುಂದೆ ಹಿಡಿದ. ನಾನು ಏನು ಹೇಳುವುದಕ್ಕೂ ಮುನ್ನವೇ ಕುಮಾರ ಬಜ್ಜಿ ಗುಳುಂ ಮಾಡಿಬಿಟ್ಟ. ಅಳುಮುಖ ಮಾಡಿದ ಗೋಪುವನ್ನು ನೋಡಿ ನನ್ನ ಸುಪುತ್ರನ ಮೇಲೆ ಎಲ್ಲಿಲ್ಲದ ಸಿಟ್ಟು ಬಂದರೂ ತಡೆದುಕೊಂಡು ನನ್ನ ತಟ್ಟೆಯಲ್ಲಿದ್ದ ಬಜ್ಜಿಯನ್ನು ಗೋಪುವಿಗೆ ಕೊಟ್ಟೆ. ಗೋಪು ಅನುಮಾನಿಸುತ್ತಾ,”ದೊಡ್ಡಮ್ಮ ನಿಮಗೆ ಬಜ್ಜಿ?” ಎಂದ. “ಆ ಪಾತ್ರೆಯಲ್ಲಿ ಇನ್ನೂ ಇದೆ ,ಅದರಿಂದ ತಗೋತೇನೆ” ಅಂದೆ. ಊಟದ ನಂತರ ಗೋಪು ಪಾತ್ರೆಗೆ ಇಣುಕಿ,”ಈ ಪಾತ್ರೆಯಲ್ಲಿ ಏನೂ ಇಲ್ವಲ್ಲಾ ದೊಡ್ಡಮ್ಮಾ?” ಎಂದಾಗ ಸಾವರಿಸಿಕೊಂಡು ನುಡಿದೆ,”ಓಹ್,ಅದಾ?ಈಗ ತಾನೇ ಒಂದು ಕಾಗೆ ಬಂದು ಕಚ್ಚಿಕೊಂಡು ಹಾರಿ ಹೋಯಿತು.”
ಕುಮಾರ ಬೆಳಗಿನಿಂದ ಶತಪಥ ಹಾಕುತ್ತಿದ್ದಾನೆ. ಮನೆ ಸಾಲ ತೀರಿಸಲು ಅದೇನೋ ಸಮಸ್ಯೆಯಂತೆ. ಏನೆಂದು ಕೇಳಲು ಹೋಗಿ ಬೈಸಿಕೊಂಡೆ. ನನ್ನೆರಡು ಚಿನ್ನದ ಬಳೆಗಳನ್ನು ಅಡವಿಟ್ಟಿದ್ದಾನೆ ಸಾಲಕ್ಕೆ. ಮೊನ್ನೆ ಸಾಲ ಕೊಟ್ಟವರು ಬಂದು ಸಾಲ ಮರುಪಾವತಿಯಾಗದಿದ್ದಲ್ಲಿ ಬಳೆಗಳು ಅವರ ವಶಕ್ಕೆ ಹೋಗುತ್ತವೆಂದು ಹೇಳಿದ್ದರು. ನನ್ನ ಮದುವೆಯ ಸಮಯದಲ್ಲಿ ಮಾಡಿಸಿದ್ದ ಬಳೆಗಳವು. ಇರಲಿ,ಮಗನಿಗೊಂದು ನೆಲೆ ಆಯ್ತಲ್ಲ ಎಂದು ಮನಸ್ಸನ್ನು ಹತೋಟಿಗೆ ತರಲು ಯತ್ನಿಸಿದೆ. ಅಷ್ಟರಲ್ಲಿ ಗೋಪು ಒಳ ಬಂದ. ಅವನ ಕೈಯಲ್ಲೆರಡು ಬಳೆಗಳು. “ತಗೊಳ್ಳಿ ದೊಡ್ಡಮ್ಮ” ಎಂದು ಕೈ ಮುಂದೆ ಮಾಡಿದ. ಒಮ್ಮೆಲೆ ಕಣ್ಣು ತೇವವಾಯಿತು. “ಅಲ್ಲಪ್ಪಾ,ಅದು…ಅದೇನೋ ಹಣದ ಸಮಸ್ಯೆ ಆಗಿದೆಯಲ್ಲಾ?..” ಎಂದೆ. “ಓಹ್,ಅದಾ? ಅದನ್ನು ನಿಮ್ಮ ಕಾಗೆ ಬಂದು ಕಚ್ಚಿಕೊಂಡು ಹಾರಿ ಹೋಯಿತು”,ಗೋಪು ನಕ್ಕ.
Facebook ಕಾಮೆಂಟ್ಸ್