ದಿನವೂ ೯.೧೫ ರ ಸಮಯ…. ಶಾಲೆಯ ಹಾದಿಯಲ್ಲಿನ ಎಲ್ಲ ಮನೆಗಳ ಹೂಗಿಡ ಮರಗಳಿಗೆ ಕಣ್ಣು ಹಾಯಿಸುವ ಗುಣ ನನ್ನದು.ಕೊಡಗಿನ ತಂಪಾದ ವಾತಾವರಣದಲ್ಲಿ ಕಣ್ಣಿಗೆ ಹಬ್ಬವೆನಿಸುವ ಹೂಗಳ ಚೆಲುವನ್ನು ಕಂಡು ಉಲ್ಲಾಸದಿಂದ ೧೦೩.೧ FM ನ ಹಾಡುಗಳನ್ನು ಗುನುಗುತ್ತಾ ನನ್ನ nano ವನ್ನು ಕಡಿದಾದ ರಸ್ತೆಗಳಲ್ಲೂ ಆನಂದದಿಂದ ಚಲಾಯಿಸುತ್ತಿದ್ದೆ . ಅದೊಂದು ದಿನ ಒಣಗಿದ ಗಿಡದಲ್ಲಿ ತೆಳುಗುಲಾಬಿ ಬಣ್ಣದ ಬೆಟ್ಟ ತಾವರೆ ಹೂಗಳನ್ನು ಕಂಡು ಖುಷಿಯಾಯಿತು.ಅದೇ ದಿನ ಸಂಜೆ ಕೆಂಪು ಬಣ್ಣದ ಗುಲಾಬಿ ಹೂಗಳು ..!!!! ಅರರೆ ..ಇದೇನು?? ಎಂದು ಮರುದಿನ ಗಮನಿಸಿದಾಗ ಆ ರೆಂಬೆಗಳಲ್ಲಿ ನೇರಳೆ ಬಣ್ಣದ ದೆಲಿಯ ! ಪುನಃ ಸಂಜೆ ಅದೇ ಜಾಗದಲ್ಲಿ ಉಮ್ಮತ್ತಿ ಹೂಗಳು !!!!ಇದು ವಿಚಿತ್ರವಾದರೂ ಸತ್ಯವೇ ಎಂದು ಕೊಂಡಾಗ ಎದುರಿಗೆ ಸಿಕ್ಕವಳೇ ಕೊಡವ ಸೀರೆಯುಟ್ಟ ಮೈಯೆಲ್ಲಾ ಮುಖವೆಲ್ಲಾ ಸುಕ್ಕುಗಟ್ಟಿದ ೮೦ ರ ಹರೆಯದ ಅಜ್ಜಿ.. ಇದೇನು ಹೊತ್ತೊಂದರಲ್ಲಿ ಈ ಗಿಡದಲ್ಲಿ ಬೇರೆ ಬೇರೆ ಹೂಗಳು ??? ಎಂದು ಕೇಳಲು ಬಾಯಿ ತೆರೆದಾಗ ಚಾಯಿತೆ ಉಳ್ಳಿಯ ??ಎಂಬ ಅಕ್ಕರೆಯ ಮಾತು ಎಲೆ ಅಡಿಕೆ ತಿಂದು ಕೆಂಪಾದ ಹಲ್ಲುಗಳ ನಗುವಿನೊಂದಿಗೆ ಚಳಿಯಿಂದ ಒಡೆದ ತುಟಿ ಗಳ ಎಡೆಯಿಂದ ಕೇಳಿ ಬಂತು.. ನನ್ನ ಹರುಕು ಮುರುಕು ಭಾಷೆಯಲ್ಲಿ “ಚಾಯಿತೆ ಉಳ್ಳ ” ಎಂದು ನಂತರ ಕನ್ನಡದಲ್ಲೇ ನನ್ನ ಪರಿಚಯಿಸಿ ಶಾಲೆಯ ದಾರಿ ಹಿಡಿದೆ . ಹೀಗೆ ಪ್ರಾರಂಭವಾಯಿತು ನನ್ನ- ಅಜ್ಜಿಯ ಸ್ನೇಹ.ಈ ಒಂದೂವರೆ ವರ್ಷದಲ್ಲಿ ದಿನವೂ ಬೇಲಿಯಲ್ಲಿ ಇಟ್ಟ ಹೂವನ್ನು ಗಮನಿಸಿ ಹಾರ್ನ್ ಮಾಡುವ ಅಭ್ಯಾಸ ನನ್ನದಾದರೆ ಆಕೆಯ ಪುಟ್ಟ ಮನೆಯಿಂದಲೇ ಕೈ ಬೀಸಿ “ತಿಂಡಿ ಆಯ್ತಾ ಟೀಚರ್..ಬನ್ನಿ ಎರಡು ರೊಟ್ಟಿ ತಿಂದು ಹೋಗಿ”ಎನ್ನುವ ಸರದಿ ಅಜ್ಜಿಯದು. ಸಂಜೆ ಶಾಲೆಯಿಂದ ಬರುವಾಗ ಕೆಲವೊಮ್ಮೆ ಪೇಟೆಯವರೆಗೆ ನನ್ನೊಡನೆ ಬರುತ್ತಿದ್ದ ಅಜ್ಜಿ ಮೂರು ಕಿಲೋಮೀಟರು ದಾರಿ ಸವೆಯುವುದೇ ತಿಳಿಯದಂತೆ ಉಭಯಕುಶಲೋಪರಿ ಸಂಭಾಷಣೆಗಳು…ಸಾಲದ್ದಕ್ಕೆ ಶಾಲೆಯ ವ್ಯವಸ್ಥೆಗಳ ಬಗ್ಗೆ ಶಾಲಾಮಕ್ಕಳು ಚೆನ್ನಾಗಿ ಕಲಿಯುತ್ತಾರಾ ಎಂದೂ ವಿಚಾರಿಸುತ್ತಿದ್ದಳು. ಕಳೆದ ವಾರ ತನ್ನ ತೋಟದಲ್ಲಿ ಬೆಳೆದಿದ್ದ ಸಪೋಟ ಹಣ್ಣುಗಳನ್ನು ಕೈತುಂಬಾ ಬೇಡವೆಂದರೂ ಒತ್ತಾಯ ಮಾಡಿ ಕೊಟ್ಟಿದ್ದಳು..ಆ ಹಣ್ಣುಗಳು ಒಂದಕ್ಕಿಂತಾ ಇನ್ನೊಂದು ರುಚಿಯಾಗಿದ್ದು ಅದರಲ್ಲಿ ಅಜ್ಜಿಯ ನಿಷ್ಕಲ್ಮಶ ಪ್ರೀತಿ ಸಿಹಿಯನ್ನು ಹೆಚ್ಚಿಸಿತ್ತು ! ವಾರಾಂತ್ಯದ ರಜೆಗೆ ಊರಿಗೆ ಹೋಗಿ ಬಂದ ನಾನು ಎಂದಿನಂತೆ ಬೆಳಗ್ಗೆ ಶಾಲೆಗೆ ಬರುವಾಗ ರುಚಿಕರ ಸಪೋಟ ಗಳಿಗಾಗಿ ಕೃತಜ್ಞತೆ ತಿಳಿಸಲು ಏರುದನಿಯಲ್ಲಿಯೇ ಹಾರ್ನ್ ಮಾಡಿದರೂ ಆಚೆಯಿಂದ ಇಂದು ಉತ್ತರವಿಲ್ಲ…. ಗೇಟಿನ ಬಳಿಯ ಒಣಗಿದ ರೆಂಬೆ ಗಳಲ್ಲಿ ಹೂಗಳ ಸೊಬಗಿಲ್ಲ… ಆ ಮುಗ್ಧ ನಗುವಿಲ್ಲ.. ಖುಷಿಯಿಂದ ಬೀಸುವ ಕೈಗಳಿಲ್ಲ … ಎರಡು ದಿನಗಳ ಹಿಂದೆ ಆದ ಹೃದಯಾಘಾತ ದಿಂದ ಅಜ್ಜಿ ಮರೆಯಾದಳು.. ಇಂದು ಸಂಜೆ ಶಾಲೆಯಿಂದ ಮರಳುವಾಗ ಕುತೂಹಲದಿಂದ ಬೇಲಿಯ ಹೂಗಳನ್ನು ನೋಡುವ ಮನಸಿಲ್ಲ … ಆ ಸುಕ್ಕುಗಟ್ಟಿದ ಮೊಗದಲ್ಲಿ ನಗುವನ್ನು ಕಾಣುವ ಹಂಬಲವಿಲ್ಲ… ಆ ನನ್ನ ಪ್ರೀತಿಯ ಅಜ್ಜಿಗೆ ಸಿಹಿತಿಂಡಿ ಯನ್ನಾದರೂ ನೀಡುವ ಸೌಭಾಗ್ಯ ದೊರೆಯಲಿಲ್ಲವಲ್ಲಾ ಎಂಬ ಕೊರಗಲ್ಲೇ ಆಕೆಯ ಮನೆಯ ಬಳಿ ಕೈ ತನ್ನಿಂತಾನೆ ಹಾರ್ನ್ ಮಾಡಿತು!!.
PC by Pratheek Punjathody
Facebook ಕಾಮೆಂಟ್ಸ್