ಮನೆಯಲ್ಲೇ ಉಳಿದು, ಆಪೀಸಿಗೆ ಹೋಗದೆ, ಪೇಟೆ ತಿರುಗದೆ ವಾರವೆರಡಾಯಿತು. ಅಲಮಾರದಲ್ಲಿರುವ ಬಟ್ಟೆಗಳಿಗೆ ಆಶ್ಚರ್ಯವಾಗಿರಬಹುದು. ಯಜಮಾನರಿಗೇನಾಯ್ತಪ್ಪಾ ಎಂಬ ಚಿಂತೆ ಇದ್ದರೂ ಇರಬಹುದು. ಇನ್ನೂ ಸ್ವಲ್ಪ ದಿನ ಬಿಟ್ಟರೆ ನಮ್ಮ ಇರುವಿನ ಶಂಕೆಯೂ ಬರಬಹುದು! ಹೀಗೊಂದು ಹಾಸ್ಯ ಸಂದೇಶ ನಿಮ್ಮ ಜಂಗಮವಾಣಿಗಳಲ್ಲಿ ಬಂದಿರಬಹುದು. ನಾನದನ್ನು ಇನ್ನೂ ಮುಂದುವರಿಸುವೆ.
ಮತ್ತೂ ಸ್ವಲ್ಪ ದಿನ ಬಿಟ್ಟರೆ ನಿಮ್ಮ ಬಟ್ಟೆಗಳ ಮಧ್ಯೆ ಸಿಲ್ವರ್ ಫಿಶ್’ಗಳು {silverfish (Lepisma saccharina) } ಬಂದುಬಿಡಬಹುದು. ಈಗಲೇ ಬಂದಿರಬಹುದೇನೋ. ಒಮ್ಮೆ ಕಪಾಟು ತೆಗೆದು ನೋಡಿಬಿಡಿ.
ಓ ಬೆಳ್ಳಿಯ ಮೀನಾ, ಬಂದರೆ ಬರಲಿ ಅದೃಷೃ ಖುಲಾಯಿಸಿತು ಎಂದುಕೊಳ್ಳಬೇಡಿ. ಮೀನಿನಂತಿದೆ ಆದರೆ ಇದು ಮೀನಲ್ಲ. ಬೆಳ್ಳಿಯ ಹೊಳಪಿದೆ ಆದರೆ ಬೆಳ್ಳಿಯೂ ಅಲ್ಲ. ಮೀನಿನಂತೆ ನೀರಿನಲ್ಲಿರುವ ಜೀವಿಯಲ್ಲ. ಇದು ನಿಮ್ಮ ಬಟ್ಟೆಯ ಎಡೆಯಲ್ಲಿ, ಎಂದೂ ತಿರುವದ ಪುಸ್ತಕದ ಸೆರೆಯಲ್ಲಿ, ಅಟ್ಟಿ ಅಟ್ಟಿ ಜೋಡಿಸಿದ ಗುಜುರಿ ಸಾಮಾನಿನ ನಡುವಲ್ಲಿ ಇರುವ ಕೀಟವಿದು. ಈ ಕೀಟವನ್ನು ನೋಡದವರು ಇರಲಿಕ್ಕಿಲ್ಲ. ಹಳೆಯ ಪುಸ್ತಕವನ್ನು ತಿರುವಿದಾಗ, ಪುಟಗಳೆಡೆಯಿಂದ ಸರ್ರನೆ ಹರಿಯುವ,ಮಿಂಚಿನ ವೇಗದ ಕೀಟವೇ ಈ ಸಿಲ್ವರ್ ಫಿಷ್!
ನಮ್ಮ ಪುಸ್ತಕದ, ಬಟ್ಟೆಯ, ಗೋಡೆಯ ಬಣ್ಣದಲ್ಲಿರುವ ಪಾಲಿಸ್ಯಾಕರೈಡ್, ಪಿಷ್ಟವೇ ಇದರ ಆಹಾರ. ಪರಿಣಾಮ ನಮ್ಮ ಪುಸ್ತಕ ಮತ್ತು ಬಟ್ಟೆಗಳು ಕುಂಬಾಗುತ್ತವೆ. ಹಾಗೆ ನೋಡಿದರೆ ಉಪಯೋಗಕ್ಕಿಲ್ಲದ ವಸ್ತುಗಳು ಕುಂಬಾಗಿ ಗೊಬ್ಬರವಾಗಲೇಬೇಕು.
ಆದರೂ ನಮ್ಮಿಷ್ಟದ ವಸ್ತು, ನಮ್ಮ ಹತ್ತನೇ ತರಗತಿಯ ಪ್ರಗತಿಪತ್ರ, ನಮ್ಮ ಜನ್ಮ ದೃಢೀಕರಣ ಪತ್ರ ಹೀಗೆ ನಮ್ಮ ಜೀವನಕ್ಕೆ ಬೇಕೇಬೇಕಾದ ದಾಖಲೆಗಳು ಹಾಳಾದರೆ ಅದರ ಪಾಡು ನಾನಿಲ್ಲಿ ವಿವರಿಸಬೇಕಿಲ್ಲ. ಇಂಥಾ ಹಾಳುಗೇಡಿ ಸಿಲ್ವರ್ ಫಿಶ್ ಅನ್ನು ನಿಯಂತ್ರಿಸಲು ಕೂಡಾ ನಮ್ಮ ಸಾಲಿಗನಲ್ಲೊಬ್ಬ ಸೇನಾನಿ ಇದ್ದಾನೆ. ಅವನು ಅಂತಿಂತಾ ಸೇನಾನಿಯಲ್ಲ. ತನ್ನ ಬೇಟೆಯನ್ನು ಹಿಡಿಯಲು ಯಾವ ಆಯುಧವನ್ನೂ ಬಳಸುವುದಿಲ್ಲ, ವೈರಿಯ ಮೇಲೆ ಎಗರುವುದೂ ಇಲ್ಲ, ಅದನ್ನು ಹಿಡಿದು ಕಡಿಯುವುದೂ ಇಲ್ಲ. ಬದಲಾಗಿ ತನ್ನ ಬೇಟೆಯನ್ನು ಉಗುಳಿಯೇ ಸಂಪಾದಿಸುತ್ತಾನೆ. ಅವನೇ ಉಗುಳುವ ಜೇಡ!
ಉಗುಳುವುದು ಮನುಷ್ಯನಿಗೇನು ಹೊಸತಲ್ಲ. ಎಷ್ಟೇ ಸಾಕ್ಷರಸ್ತನಾದರೂ ಕಂಡಕಂಡಲ್ಲಿ ಉಗುಳ ಬಾರದು ಎಂದು ಆಗಾಗ್ಗೆ ತಿಳಿಹೇಳುತ್ತಲೇ ಇರಬೇಕು.ಸರಕಾರಗಳು ನಮ್ಮ ಸ್ವಾಸ್ಥ್ಯಕ್ಕೂ, ನಮ್ಮದೇ ದುಡ್ಡನ್ನು ವ್ಯಯ ಮಾಡಬೇಕು. ಉಗುಳಿನಿಂದ ಬರುವ ರೋಗಗಳು ಒಂದೆರಡಲ್ಲ. ಇತ್ತೀಚೆಗಿನ ಕೊರೋನಾ, ಉಗುಳಿಗೆ ಹೊಸತಾಗಿ ಮನ್ನಣೆ ದೊರಕಿಸಿದೆ! ನಮ್ಮುಗುಳೇ ಇತರರಿಗೆ ಮೃತ್ಯುಕೂಪವಾಗಿಬಿಡಬಹುದು! ಅಂತೆಯೇ ಈ ಉಗುಳುವ ಜೇಡಗಳು. ನಮ್ಮ ಉಗುಳು ನಮಗೆ ಮಾರಕ, ಆದರೆ ಈ ಜೇಡಗಳ ಉಗುಳು ನಮಗೆ ಪೂರಕ. ಪ್ರಕೃತಿಯು ದೃಷ್ಟಿಯಲ್ಲಿ ಎಲ್ಲಾ ಉಗುಳುಗಳೂ ಅದರ ಸಮತೋಲನವನ್ನು ಕಾಪಾಡುವಲ್ಲಿ ಪೂರಕವೇ!
ಉಗುಳುವ ಜೇಡಗಳನ್ನು Spitting spiders ಎಂದು ಕರೆಯುತ್ತಾರೆ. ಸೈಟೋಡಿಡೇ (Scytodidae) ಕುಟುಂಬಕ್ಕೆ ಸೇರಿದ ಜೇಡಗಳಿವು. ಭಾರತದಲ್ಲಿ ಇದುವರೆಗೆ ಈ ಕುಟುಂಬದಿಂದ ಹನ್ನೊಂದು ಪ್ರಭೇದಗಳನ್ನು ಗುರುತಿಸಿದ್ದಾರೆ. ಹೆಚ್ಚಿನವು ಸೈಟೊಡೆಸ್ (Scytodes) ಗಣದ ಸದಸ್ಯರು. ಎರಡು ಮಾತ್ರ ಡಿಕ್ಟಿಸ್ ಎಂಬ ಗಣದ ಜೇಡಗಳು.
ನಾವೀಗ ನಮ್ಮನೆಯೊಳಗೆ ಸಿಕ್ಕುವ ಉಗುಳುವ ಜೇಡಗಳನ್ನು ನೋಡೋಣ.
ನಮ್ಮಲ್ಲಿ ಮೂರು ಪ್ರಭೇದದ ಉಗುಳುವ ಜೇಡಗಳು ಕಾಣಸಿಗುತ್ತದೆ.
೧-ಕಪ್ಪು ಬಣ್ಣದ್ದು, ಪಕ್ಕನೆ ಇರುವೆಯ ತರಹ ಕೆಲವರಿಗೆ ಕಾಣಿಸಬಹುದು.
೨- ಕಂದು ಬಣ್ಣದ್ದು
೩- ತುಸು ಅಪರೂಪ, ಬಾಳೆಯ ಎಲೆಯ ಸೆರೆಯಲ್ಲಿ ಸಾಮಾನ್ಯ. ಇದು ನಮ್ಮ ಚರ್ಮದ ಬಣ್ಣವಿದ್ದು, ತುಸು ಪಾರದರ್ಷಕ ವಾಗಿರುತ್ತದೆ. ಮೈ ಮೇಲಿನ ಪಟ್ಟಿಗಳು ಚೆನ್ನಾಗಿ ಕಾಣುತ್ತದೆ. ಇದನ್ನು Scytodes palida ಎಂದು ಕರೆಯುತ್ತಾರೆ.
ಹಗಲಲ್ಲಿ ಇವು ನಮ್ಮ್ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಅವು ನಾವು ನಮ್ಮ ಗೋಡೆಯಲ್ಲಿ ಎಲ್ಲಿ ತೂತು ಮಾಡಿರುತ್ತೇವೋ ಅಂತಾ ತೂತುಗಳನ್ನು ಮುಚ್ಚುತ್ತವೆ. ಅರ್ಥಾತ್ ಆ ತೂತುಗಳೇ ಇವಕ್ಕೆ ಮನೆ. ಒಂದು ಕೋಣೆಯಲ್ಲಿ ಏನಿಲ್ಲವೆಂದರೂ ಇಪ್ಪತ್ತು ಉಗುಳುವ ಜೇಡಗಳು ನಮಗೇ ತಿಳಿಯದಂತೆ ವಾಸವಾಗಿರುತ್ತವೆ. ಇವುಗಳ ವಾಸಕ್ಕೆ ತೂತುಗಳೇ ಬೇಕೆಂದೇನೂ ಇಲ್ಲ. ಮನೆಯ ಕಿಟಕಿಯ ಸೆರೆಯಲ್ಲಿ. ಕಿಟಕಿಗೆ ಅಳವಡಿಸಿದ ಸೊಳ್ಳೆ ಪರದೆಯ ಸೆರೆಗಳಲ್ಲಿ, ಬಾಗಿಲಿನ ಬಿಜಾಗರದಲ್ಲಿ, ವಿದ್ಯುತ್ ಕೇಬಲ್ಲಿನ ಎಡೆಗಳಲ್ಲಿ ಮಾತ್ರವಲ್ಲದೆ ನಮ್ಮ ಕಪಾಟಿನಲ್ಲಿ ಮತ್ತು ಪುಸ್ತಕ ಬಂಡಾರದಲ್ಲೂ ವಾಸವಿರುತ್ತವೆ.
ಆಗಲೇ ತಿಳಿಸಿದಂತೆ ಸಿಲ್ವರ್ ಫಿಶ್ ಇವುಗಳ ಬೇಡಿಕೆಯ ಆಹಾರ. ಆದರೆ ಸಿಲ್ವರ್ ಫಿಶ್ ಎಲ್ಲೆಡೆ ಲಭ್ಯವಿರುವುದಿಲ್ಲ. ಹಾಗಾಗಿ ಇವು ಸಣ್ಣ ನೊಣಗಳನ್ನು, ಸೊಳ್ಳೆ, ಹಾತೆ ಮತ್ತು ಇತರೆ ಜೇಡಗಳನ್ನೂ ತಿನ್ನುತ್ತವೆ. ಆಹಾರ ಏನೇ ಇರಲಿ, ಇವು ಉಗುಳಿಯೇ ಸಂಪಾದಿಸುತ್ತವೆ. ಕೆಲವೊಮ್ಮೆ ಅವುಗಳ ನಡುವೆ ಕಲ ಏರ್ಪಟ್ಟು ಉಗುಳಿಕೊಳ್ಳುತ್ತವೆ. ಮೊದಲು ಉಗುಳಿದವ ಗೆದ್ದಂತೆ!
ಇರುಳಾದ ಕೂಡಲೇ ಅವಿತ ಜಾಗದಿಂದ ಹೊರಬರುತ್ತವೆ. ಈ ಜೇಡಗಳು ಬಲು ಪುಕ್ಕಲು ಸ್ವಭಾವದವು. ಇತರೆ ಜೇಡಗಳಂತೆ ಖುಷಿಕಂಡಂತೆ ತಿರುಗಾಡುವುದಿಲ್ಲ. ತಾವು ಹಗಲಲ್ಲಿ ಅವಿತಿರುವ ಜಾಗದ ಹೊರದ್ವಾರದಲ್ಲಿ ತಮ್ಮ ದೇಹದ ಮುಂಬಾಗವನ್ನು ಮಾತ್ರ ಹೊರಹಾಕಿ ಅಲುಗಾಡದೇ ಬೇಟೆಗಾಗಿ ಕಾಯುತ್ತಿರುತ್ತದೆ. ತಮಗೆ ಏನಾದರು ಅಪಾಯವಿದೆ ಎಂದೆನಿಸಿದರೆ ಹಾಗೆ ಹಿಂದಕ್ಕೆ ಸರಿದು ಮರೆಯಾಗುತ್ತದೆ. ನಾನುಈ ಜೇಡ ಬೇಟೆಯಾಡಿ ಸಿಲ್ವರ್ ಫಿಶ್, ಇರುವೆ ಮತ್ತು ಕ್ಲಬಿಯಾನಿಡೇ ಪ್ರಭೇದದ ಜೇಡವನ್ನು ತಿನ್ನುವುದನ್ನು ದಾಖಲಿಸಿದ್ದೇನೆ ಆದರೆ ಎಂದೂ ಈ ಜೇಡ ಬೇಟೆಯಾಡುವುದನ್ನು ದಾಖಲಿಸಲಾಗಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಬೆಳಕು! ಈ ಜೇಡವು, ಕತ್ತಲಿದ್ದರೆ ಬಹಳಾ ಚಟುವಟಿಕೆಯಿಂದಿರುತ್ತದೆ. ನಮ್ಮ ಕೋಣೆಯಲ್ಲಿನ ಬಲ್ಬಿನ ಬೆಳಕಿಗೆ ಇದು ಸ್ವಲ್ಪ ಒಗ್ಗಿಕೊಂಡಿದೆ. ನಾನೇನಾದರು ವಿಧ್ಯುದ್ಧೀವಟಿಕೆಯ ಮೂಲಕ ಬೆಳಕಿನ ಪ್ರಕಾಶ ಹೆಚ್ಚಿಸಿದರೆ, ತನಗೇನೋ ಅಪಾಯವಿದೆ ಎಂದು ಒಳಗೆ ಹೋಗಿ ಬಿಡುತ್ತದೆ. ಒಮ್ಮೆ ಹೋದರೆ ಮುಗೀತು. ಗಂಟೆ ಗಟ್ಟಲೆ ಕಾದರೂ, ಆಸಮಿ ನಾಪತ್ತೆ.
ಹಾಗೆಂದು ನಾನು ಇದು ಬೇಟೆಯಾಡುವುದನ್ನು ನೋಡಿಲ್ಲವೆಂದು ಅಲ್ಲ. ಇದು ಕೇವಲ ಸೆಕಂಡ್ಡಿನ 1/700th (1/700th of a second) ಸಮಯದಲ್ಲಿ ತನ್ನ ಬೇಟೆಯನ್ನು ಉಗುಳಿ ಹಿಡಿದುಬಿಡುತ್ತದೆ. ಈ ಸಮಯವು ನನ್ನ ಊಹೆಗಂತೂ ನಿಲುಕದ್ದು! ಕ್ಯಾಮೆರಾದಲ್ಲಿ ವೀಡಿಯೋ ಮಾಡಿ ನಿಧಾನ ಮಾಡಿ ನೋಡಿದರಷ್ಟೇ ಅದು ನಮ್ಮ ಅನುಭವಕ್ಕೆ ಸಿಕ್ಕುತ್ತದೆ. ನ್ಯಾಶಿನಲ್ ಜಿಯೋಗ್ರಫಿಕ್ ಮಾರ್ಗದರ್ಷನದ ವೀಡಿಯೋ ತುಣುಕುಗಳೆರಡನ್ನು ಇಲ್ಲಿ ಲಗತ್ತಿಸಿದ್ದೇನೆ. ನೋಡಬಹುದು.
ಉಗುಳಿನ ಮೂಲಕ ತನ್ನ ಬೇಟೆಯನ್ನು ಬಂಧಿಸಬೇಕು ಅಂದರೆ ಆ ಉಗುಳಿಗೆ ಅಂಟಿರಬೇಕು ಮತ್ತು ಬೇಟೆಯು ಸಾಯಬೇಕಾದರೆ ಉಗುಳಿನಲ್ಲಿ ವಿಷವಿರಬೇಕು. ಹೌದು, ಈ ಜೇಡನ ಉಗುಳಲ್ಲಿ ಇವರಡೂ ಇದೆ! ಉಗುಳೆಂದರೆ ನಾವು ತಿಳಿದಂತೆ ಇದು ನಮ್ಮ ಬಾಯಿಯಿಂದ ಹೊರಬರುವ ಜೊಲ್ಲಲ್ಲ! ಈ ಜೇಡವು ಜೊಲ್ಲಿನ ಬದಲು ಬಲೆಯನ್ನು ಉಗುಳುತ್ತದೆ.
ಸಾಮಾನ್ಯವಾಗಿ ಯಾವ ಜೇಡಗಳೂ ತಮ್ಮ ಬಾಯಿಯಿಂದ ಬಲೆಯನ್ನು ಬಿಡುವುದಿಲ್ಲ. ಬಲೆಯನ್ನು ತಮ್ಮ ದೇಹದ ಕೊನೆಯಲ್ಲಿರುವ ವಿಶಿಷ್ಟ ಗ್ರಂಥಿಗಳಲ್ಲಿ (ಆರು ಗ್ರಂಥಿಗಳು) ಉತ್ಪಾದಿಸಿ ತಂತುಕಗಳ (Spinnerets) ಮೂಲಕ ಹೊರಬಿಡುತ್ತವೆ. ಗ್ರಂಥಿಗಳಲ್ಲಿ ಉತ್ಪಾದನೆಯಾಗುವ ಪ್ರೋಟೀನ್ ದ್ರಾವಣವು ತಂತುಕದಿಂದ ಹೊರಬರುತ್ತಿದ್ದಂತೆ ಗಾಳಿಯ ಸಂಪರ್ಕದಲ್ಲಿ ಗಟ್ಟಿಯಾಗಿ,ನಾವು ಕಾಣುವ ಬಲೆಯ ರೂಪವಾಗುತ್ತದೆ.
ಜೇಡಗಳಿಗೆ ಎರಡು ದೇಹಭಾಗವಿರುತ್ತದೆ. ಮೊದಲನೆಯದು ತಲೆ ಮತ್ತು ಎದೆ ಎರಡೂ ಒಟ್ಟಿಗಿರುತ್ತದೆ(cephalothorax or prosoma). ಎರಡನೆಯದು ಹೊಟ್ಟೆಯ ಭಾಗ (Abdomen or ophistosoma). ಎಲ್ಲಾ ಮುಖ್ಯ ಅಂಗಗಳು ಮತ್ತು ಬಲೆಯ ಗ್ರಂಥಿಗಳೂ ಈ ಹೊಟ್ಟೆ ಭಾಗದಲ್ಲಿರುವುದರಿಂದ ಗಾತ್ರದಲ್ಲಿ ಮೊದಲನೆಯ ದೇಹಭಾಗದ ದುಪ್ಪಟ್ಟು ದೊಡ್ಡದಿರುತ್ತದೆ.
ಈ ಉಗುಳುವ ಜೇಡಗಳಲ್ಲಿ ಎಲ್ಲಾ ಜೇಡಗಳಲ್ಲಿರುವ ಗ್ರಂಥಿಗಳು ಮತ್ತು ದೇಹದ ಕೊನೆಯಲ್ಲಿ ಬಲೆ ಹೊರಬರಲು ತಂತುಕಗಳು ಇರುವುದಾದರೂ,ಇವುಗಳಲ್ಲಿ ದೇಹದ ಮೊದಲ ಬಾಗದಲ್ಲಿ ಕೂಡಾ ಬಲೆಯ ಗ್ರಂಥಿಯೊಂದಿರುವುದು. ಈ ಗ್ರಂಥಿಯು ಜೇಡನ ವಿಷದ ಗ್ರಂಥಿಯೊಂದಿಗೆ ಅಂಟಿಕೊಂಡಿರುತ್ತದೆ. ಬೇರೆ ಯಾವ ಜೇಡಕ್ಕೂ ಇರದ ತಲೆಯ ಭಾಗದ ,ಬಲೆಯಗ್ರಂಥಿಯು ಇದಕ್ಕಿರುವುದರಿಂದ ತಲೆಯ ಭಾಗವೂ ದೊಡ್ಡದಾಗಿರುತ್ತದೆ. ಹಾಗಾಗಿ ಈ ಜೇಡದ ಎರಡೂ ದೇಹ ಭಾಗಗಳು ಸಮಾನವಾಗಿ ಕಾಣುತ್ತದೆ.
ಬಲೆಯ ಗ್ರಂಥಿಯ ದ್ರವ ಮತ್ತು ವಿಷದ ಗ್ರಂಥಿಯ ದ್ರವ (ವಿಷ) ಎರಡೂ ಬೆರೆತು ವಿಷದ ಬಲೆ ಸೃಷ್ಟಿಯಾಗುತ್ತದೆ. ಇದನ್ನು ತಾವು ಕಚ್ಚಲು ಬಳಸುವ ಚೆಲಿಸೆರಾ(ಬಾಯಿಯ ಮೇಲಿರುವ) ಎಂಬ ಚೂಪಾದ ಅಂಗಗಳ (ಎರಡು ಚೆಲಿಸೆರಾ ವಿರುತ್ತದೆ) ಮೂಲಕ ಹೊರಹಾಕುತ್ತದೆ. 10 to 20 ಮಿಲ್ಲಿಮೇಟರ್ (0.39 to 0.79 in) ದೂರದಲ್ಲಿರುವ ಬೇಟೆಯ ಮೇಲೆ ಉಗುಳುತ್ತದೆ. ಎರಡು ಚೆಲಿಸೆರಾಗಳಲ್ಲಿ ಒಮ್ಮೆಲೆ ಬಲೆಯನ್ನು ಇವು ಬಿಡುವುದಿಲ್ಲ. ಒಂದರ ನಂತರ ಇನ್ನೊಂದನ್ನು ಬಳಸಿಕೊಳ್ಳುತ್ತದೆ. ಹೀಗೆ ಬಳಸುವಾಗ ಹೊರಬರುವ ಬಲೆಯು ನಮಗೆ ಜೆಡ್(Z) ಆಕಾದಲ್ಲಿ ಕಾಣುತ್ತದೆ (crisscrossed Z pattern) . ಒಮ್ಮೆ ಬೇಟೆಯು ಬಲೆಯ ಕೂಪಕ್ಕೆ ಬಿದ್ದಕೂಡಲೆ ಈ ಜೇಡವು ಸಿಕ್ಕಿಬಿದ್ದ ಬೇಟೆಯ ಹತ್ತಿರ ಹೋಗಿ ತಮ್ಮ ಚೆಲಿಸೆರಾದಿಂದ ಕಚ್ಚಿ ಇನ್ನಷ್ಟು ವಿಷವನ್ನು ಬಿಟ್ಟು ಸಾಯಿಸಿ, ತಮ್ಮ ಹಿಂಬದಿಯ ತಂತುಕದಿಂದ ಹೊರಬರುವ ಬಲೆಯಿಂದ ಬಂಧಿಸುತ್ತದೆ. ಹಸಿವು ಜಾಸ್ತಿ ಇದ್ದರೆ ಆ ಕೂಡಲೇ ತಿನ್ನುವುದು,ಇಲ್ಲದಿದ್ದರೆ ಬಲೆಯಲ್ಲಿ ಬಂದಿಯಾದ ಬೇಟೆ, ಬಲೆಯ ಸೋಕು ನಿವಾರಿಕ ಗುಣದಿಂದಾಗಿ ಪಕ್ಕನೆ ಕೆಡದು. ಜೇಡಕ್ಕೆ ಹಸಿವಾದಾಗ ಅಥವಾ ಬೇರೇನೂ ಬೇಟೆ ಸಿಕ್ಕದಿದ್ದಾಗ ಉಣ್ಣುತ್ತದೆ.
ಈ ಜೇಡನಲ್ಲಿ ಇನ್ನೊಂದು ವಿಶೇಷವಿದೆ. ಹೆಚ್ಚಿನ ಜೇಡಗಳಿಗೆ ಎಂಟು ಕಣ್ಣುಗಳಿರುವುದು ನಿಮಗೆಲ್ಲಾ ಈಗ ತಿಳಿದಿರುವ ವಿಷಯವೇ.ಕೆಲವು ಜೇಡಗಳಿಗೆ ಆರು ಕಣ್ಣುಗಳಿರುವುದನ್ನೂ ನಾನು ನಿಮಗೆ ಕಳೆದ ಅಂಕಣದಲ್ಲಿ ತಿಳಿಸಿರುವೆ. ಅಂತಾ ಆರುಕಣ್ಣಿನ ಜೇಡಗಳಲ್ಲಿ ಈ ಉಗುಳುವ ಜೇಡವೂ ಒಂದು.
ಸಂಸಾರ
ಸದಾ ಅವಿತಿರುವುದರಿಂದ ಗಂಡು ಹೆಣ್ಣಿನ ಮಿಲನವು ಅಷ್ಟೇ ಗೌಪ್ಯವಾಗಿರುತ್ತದೆ. ಹಾಗಾಗಿ ನಾನದನ್ನು ಕಂಡಿಲ್ಲ. ಹೆಣ್ಣು ಜೇಡ ಮೊಟ್ಟೆ ಇಟ್ಟಕೂಡಲೇ, ಚಾವಣಿ ಜೇಡಗಳು ಹೇಗೆ ಉಂಡೆ ಮಾಡಿ ಬಾಯಲ್ಲಿ ಇಟ್ಟುಕೊಂಡು ಸಲಹಿದ್ದವೋ ಅಂತೆಯೇ ಇವೂ ಕೂಡಾ ತಮ್ಮ ಮಾತೃ ಪ್ರೇಮವನ್ನು ಮೆರೆಯುತ್ತವೆ. ಜೇಡನ ಬಾಯಲ್ಲಿ ಭೂಮಂಡಲವಿದ್ದಂತೆ ಕಾಣುತ್ತದೆ. ಮರಿಗಳು ಹೊರಬಂದ ನಂತರ ತುಸು ದಿನ ಅಮ್ಮನ ಆಸರೆಯಲ್ಲಿದ್ದು, ಬೇರೆಡೆಗೆ ಚಲಿಸುತ್ತದೆ.
ನೆನಪಿಡಿ: ನಮ್ಮ ಉಗುಳು ನಮಗೆ ಮಾರಕ. ಆದರೆ ಈ ಜೇಡನ ಉಗುಳು ನಮಗೆ ಪೂರಕ!
ಮುಂದಿನ ಕಂತಿನಲ್ಲಿ ಉಗುಳುವ ಜೇಡನಂತೆ ನಮ್ಮ ಮನೆಯ ಸೆರೆಗಳಲ್ಲಿ ವಾಸಿಸುವ ಇನ್ನಷ್ಟು ಜೇಡಗಳ ಪರಿಚಯ.
Facebook ಕಾಮೆಂಟ್ಸ್