ಮನೆಯ ಸೆರೆಯ ಜೇಡಗಳು
ಸೆರೆಯಲ್ಲಿ ಕಾಣಸಿಗುವ ಜೇಡಗಳಲ್ಲಿ ಮೊದಲಿಗ ಉಗುಳುವ ಜೇಡಗಳು. ಒಂದು ಕೋಣೆಯಲ್ಲಿ ಇಪ್ಪತ್ತಕ್ಕೂ ಅಧಿಕ ಜೇಡಗಳು ವಾಸವಾಗಿರುತ್ತವೆ. ಇವುಗಳ ಪೂರ್ಣ ವಿವರವನ್ನು ಹಿಂದಿನ ಅಂಕಣದಲ್ಲಿ ಓದಿರುವಿರಿ. ಇವಲ್ಲದೇ ಇನ್ನೂ ಕೆಲವು ಜೇಡಗಳು ನಿಮ್ಮ ಮನೆಯಲ್ಲಿ ಅಡಗಿಕೊಂಡು, ನಮಗೆ ಅರಿವಿಲ್ಲದೆ ಮನೆಯೊಳಗಣ ಕೀಟಗಳನ್ನು ನಿಯಂತ್ರಿಸುತ್ತಿವೆ. ಅವುಗಳತ್ತ ನಿಮ್ಮ ಗಮನ ಹರಿಸುವ ಪ್ರಯತ್ನ ನನ್ನದು.
ಜೇಡಗಳನ್ನು ಸದಾ ಮನೆಯ ಹೊರಗೆ, ನಮ್ಮ ತೋಟದಲ್ಲಿ ದಾಖಲಿಸುತ್ತಿದ್ದ ನನಗೇ ನಮ್ಮನೆಯೊಳಗೇ ಅನೇಕ ಪ್ರಭೇದಗಳು ಅವಿತಿವೆ ಎಂದು ತಿಳಿದಿರಲಿಲ್ಲ. ಮನೆಯೊಳಗಣ ಜೇಡಗಳೆಲ್ಲಾ ಹೆಚ್ಚಾಗಿ ಮಾಸಲು ಬಣ್ಣದಿಂದ ಇರುತ್ತದೆ. ಅಷ್ಟೊಂದು ಆಕರ್ಷಣೀಯವಲ್ಲದಿರುವುದರಿಂದ ಬಹುಶಃ ಮೊದಮೊದಲು ನನ್ನ ಕಣ್ಣಿಗೆ ಬೀಳಲಿಲ್ಲ. ಜೇಡನಲ್ಲಿ ಆಸಕ್ತಿ ಹೆಚ್ಚುತ್ತಾ ಹೆಚ್ಚುತ್ತಾ, ಅದರ ಇರುವಿಕೆಯ ,ಅಗತ್ಯತೆಯು ಮನವರಿಕೆಯಾಗುತ್ತಾ ಹೋದಂತೆ ನಮ್ಮ ಮನೆಯೊಳಗೆ ಇರುವ ಕೀಟಗಳು ಹೇಗೆ ನಿಯಂತ್ರಣಗೊಳ್ಳುತ್ತಿವೆ ಎಂದು ಗಮನಿಸತೊಡಗಿದೆ. ಮನೆಯೊಳಗಣ ಹಲ್ಲಿಗಳು, ನನ್ನ ಗಮನಕ್ಕೆ ಬಂದ ಮೊದಲಿಗ. ಆದರೆ ಅದೊಂದರಿಂದ ಅಷ್ಟೂ ಕೀಟಗಳು ನಿಯಂತ್ರಣಗೊಳ್ಳಲು ಸಾಧ್ಯವೇ ಇಲ್ಲ. ಚಾವಣಿ ಜೇಡಗಳ ಪಾತ್ರ ಮತ್ತು ಉಗುಳುವ ಜೇಡಗಳ ಸಾಮರ್ಥ್ಯ ನನಗೆ ಕೆಲ ದಿನಗಳಲ್ಲೇ ಪ್ರಕಟವಾಗಿತ್ತು. ಅದನ್ನು ನೀವೂ ಈಗಾಗಲೇ ತಿಳಿದುಕೊಂಡಿದ್ದೀರಿ.
ನೀವೆಷ್ಟೇ ನಿಮ್ಮ ಮನೆಯನ್ನು ಶುಚಿಯಾಗಿಟ್ಟರೂ, ನಿಮ್ಮ ಪೊರಕೆಯಾಡದ ಸಂದುಗಳು ಪ್ರತೀ ಕೋಣೆಗಳಲ್ಲಿದ್ದೇ ಇರುತ್ತದೆ. ನಿಮ್ಮ ಗೋಡೆಗೆ ಬಡಿದ ಶೋಕೇಸಿನ ಎಡೆಯಲ್ಲಿ, ನೇಲುವ ಪಂಖದಲ್ಲಿ, ಬಾಗಿಲಿನ ಬಿಜಾಗರದಲ್ಲಿ ಹೀಗೆ. ಇಂಥಾ ಜಾಗಗಳಲ್ಲಿ ಉಗುಳುವ ಜೇಡ ವಾಸವಿರುವುದನ್ನು ನೀವು ಈಗಾಗಲೇ ಓದಿರುವಿರಿ. ಅಂಥಾ ಜಾಗದಲ್ಲಿ ವಾಸವಿರುವ ಇನ್ನೆರಡು ಜೇಡಗಳಿವೆ. ಅವುಗಳನ್ನು ಇಂದು ಪರಿಚಯಿಸುವೆ.
೧. ಸಂದು ಜೇಡ
ಫಿಲಿಸ್ಟಾಟಿಡೆ (Filistatidae) ಕುಟುಂಬಕ್ಕೆ ಸೇರಿದ ಜೇಡವಿದು. Crevice weaver spiders ಎಂದೇ ಇದನ್ನು ಕರೆಯುತ್ತಾರೆ . Crevice ಎಂದರೆ ಸೆರೆ ಅಥವಾ ಸಂದು ಎಂದರ್ಥ. ಹಾಗಾಗಿ ಇದಕ್ಕೆ ನಮ್ಮ ಕನ್ನಡದಲ್ಲಿ ಸಂದು ಜೇಡವೆಂದು ನಾಮಕರಣ ಮಾಡಿದ್ದೇನೆ.
ವರ್ಷದ ಹಿಂದಿನ ನೆನಪು. ನಮ್ಮ ಮನೆಯ ಪೇಪರ್ ಮತ್ತು ವಾರಪತ್ರಿಕೆಗಳ ರಾಶಿಯನ್ನು ಒತ್ತರೆ ಮಾಡುತ್ತಿದ್ದೆವು. ಒಂದು ವರ್ಷದ ಅವಧಿಯಲ್ಲಿ ನಮ್ಮ ಮನೆಗೆ ಟಪಾಲಿನ ಮುಖಾಂತರ ಬಂದಿದ್ದ ಎಲ್ಲಾ ವಾರಪತ್ರಿಕೆಗಳು ಒಂದೆಡೆ ಸೇರಿ ಗುಡ್ಡೆಯೇ ನಿರ್ಮಾಣವಾಗಿತ್ತು. ಸಹಜವಾಗಿ ಧೂಳು ಕೂತಿತ್ತು. ಆಶ್ಚರ್ಯವೆಂದರೆ, ಪ್ರತಿಯೊಂದು ಪುಸ್ತಕಗಳ ಎಡೆಗಳಲ್ಲಿ ಜೇಡನ ಬಲೆ ಇತ್ತು! ಪುಸ್ತಕಗಳನ್ನು ಒರಸಿ ಎತ್ತುತ್ತಿರಲು ಅಲ್ಲಿಂದ ಪೇಲವ ಬಣ್ಣದ ಜೇಡ ಓಡಲಾರಂಭಿಸಿತು. ಹತ್ತು ವಾರಪತ್ರಿಕೆಗಳಿಗೆ ಒಂದರಂತೆ ಜೇಡಗಳಿದ್ದವು. ಆ ಪತ್ರಿಕೆಗಳ ಸೆರೆಯಲ್ಲಿ ವಾಸವಿದ್ದವು. ಸೆರೆಯಲ್ಲಿದ್ದ ಬಲೆಯ ಪದರದಲ್ಲಿ ಅನೇಕ ಕೀಟಗಳ ಅಸ್ತಿಪಂಜರಗಳು ನೇಲುತ್ತಿದ್ದವು. ನೊಣ, ನುಸಿ, ಹಾತೆ, ಇರುವೆ ಮತ್ತು ನನಗೇ ಹೆಸರು ತಿಳಿಯದ ಕೀಟಗಳ ಹೆಣಗಳು ಅಲ್ಲಿತ್ತು!
ಅಬ್ಬಬ್ಬಾ!
ಜೇಡಗಳ ಯಾವ ನಿರೀಕ್ಷೆಯಲ್ಲೂ ಇರದ ನನಗೆ ಆಶ್ಚರ್ಯವಾಗಿತ್ತು.
ಮೇಲ್ನೋಟಕ್ಕೆ ಪಕ್ಕನೆ ಉಗುಳುವ ಜೇಡಗಂತೆ ಕಂಡಿತು. ಆದರೆ ಇದು ಅದಲ್ಲ.ಇದರ ಹೊಟ್ಟೆಯ ಭಾಗ ತಲೆಯ ಭಾಗಕ್ಕಿಂತ ತುಸು ದೊಡ್ಡದಿತ್ತು. ಎಂಟೂ ಕಾಲುಗಳು ಉದ್ದ ಮತ್ತು ಬಲಿಷ್ಟವಾಗಿತ್ತು. ಎಲ್ಲದಕ್ಕಿಂತ ಮುಖ್ಯ ಅದರ ಪೆಡಿಪಾಲ್ಪ್ ( ಜೇಡಗಳ ಮುಂಬಾಗದಲ್ಲಿರುವ ಅಂಗ. ಕಾಲುಗಳಂತೆ ಕಂಡರೂ ಇದು ಕಾಲಲ್ಲ. ಬೇಟೆಯನ್ನು ಹಿಡಿಯಲು ಇದು ಸಹಾಯಕ, ಗಂಡು ಜೇಡ ತನ್ನ ವೀರ್ಯಾಣುಗಳನ್ನು ಈ ಪೆಡಿಪಾಲ್ಪಿನಲ್ಲಿ ಶೇಖರಿಸುತ್ತದೆ ಮತ್ತು ಮಿಲನಕ್ಕೆ ಬಳಕೆ ಮಾಡುತ್ತದೆ.) ಕಾಲುಗಳಂತೇ ಕಾಣುತ್ತಿತ್ತು. ಪಕ್ಕನೆ ಈ ಜೇಡಕ್ಕೆ ಹತ್ತು ಕಾಲುಗಳಿವೆಯಾ ಎನ್ನುವಂತಿತ್ತು. ಸಾಮಾನ್ಯವಾಗಿ ಎಲ್ಲಾ ಜೇಡಗಳ ಮುಂಬಾಗದಲ್ಲಿ ಕಣ್ಣುಗಳಿರುತ್ತದೆ.ಕಣ್ಣುಗಳ ನಂತರವಿರುವ ಸಣ್ಣ ಪ್ರಮಾಣದ ತಲೆಯ ಭಾಗವನ್ನು clypeus ಎನ್ನುತ್ತಾರೆ. ಹೆಚ್ಚಿನ ಜೆಡಗಳಲ್ಲಿ ಬಲು ತೆಳ್ಳನೆ ಇರುವ ಈ ಜಾಗ ಇದರಲ್ಲಿ ಉದ್ದವಿದ್ದು,ಕೊಂಬಿನಂತೆ (unicorn) ಕಾಣುತ್ತದೆ. ಒಂಟಿ ಕೊಂಬು ಈ ಜೆಡನ ವೈಶಿಷ್ಟ್ಯವೂ ಹೌದು. ಈ ಜೇಡಗಳಿಗೂ ಎಂಟು ಕಣ್ಣುಗಳು. ನಾಲ್ಕು ಕಣ್ಣುಗಳ ಎರಡು ಗುಚ್ಚದಂತೆ ಕಾಣುತ್ತದೆ.
ಈ ಜೇಡನಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಿತು. ನಮ್ಮನೆಯ ಸೆರೆ ಸೆರೆಗಳಲ್ಲಿ, ರಾತ್ರಿಯ ಹೊತ್ತು ಬೆಳಲು ಚೆಲ್ಲಿ ನೋಡಿದೆ. ಅರರೆ ಏನಾಶ್ಚರ್ಯ, ನಮ್ಮ ಮರದ ಪೀಟೋಪಕರಣಗಳನ್ನು ತಿಂದು ಕುಟ್ಟೆ ಉದುರಿಸುವ ಕೀಟಗಳನ್ನು ಇವು ಬಲು ಪ್ರೀತಿಯಿಂದ ತಿನ್ನುತ್ತದೆ. ಅಂತು ತಿನ್ನುವ ಈ ಸಂದು ಜೇಡಗಳು, ನಮ್ಮ ಪ್ರೀತಿಗೂ ಪಾತ್ರವಲ್ಲವೇ?
ನನಗೆ ಈ ಕುಟುಂಬದಲ್ಲಿರುವ ಪ್ರಭೇದಗಳ ಬಗೆಗೆ ಅಷ್ಟೊಂದು ಅರಿವಿಲ್ಲ. ಈ ಜೇಡಗಳನ್ನು ಮನೆಯಲ್ಲಷ್ಟೇ ಅಲ್ಲದೆ ಮರದ ತೊಗಟೆಗಳ ಸೆರೆಯಲ್ಲೂ ಕಂಡಿದ್ದೇನೆ. ಭಾರತದಲ್ಲಿ ಈವರೆಗೆ ಒಟ್ಟು ಹನ್ನೊಂದು ಪ್ರಭೇದಗಳನ್ನು ಗುರುತಿಸಿದ್ದಾರೆ. ನಮ್ಮಲ್ಲಿ ಕಾಣಸಿಗುವುದು ಬಹುಶಃ ಪ್ರಿಥಾ (Pritha) ಎಂಬ ಪ್ರಭೇದವಿರಬಹುದು.
ಈ ಸಂದು ಜೇಡಗಳು, ಜೇಡನ ವಿಕಾಸದಲ್ಲಿ ಮೊದಮೊದಲು ಬಂದವುಗಳಲ್ಲಿ ಒಂದು. ಇವನ್ನು “primitive” ಜೇಡಗಳೆಂದು ಕರೆಯುತ್ತಾರೆ. (ಎಮ್ ಆಕಾರದ ಕರುಳು (M-shaped intestine), ಬಲೆಯನ್ನು ನೇಯುವಲ್ಲಿ ಕೇವಲ ತನ್ನ ನಾಲ್ಕನೇ ಜೊತೆಯ ಕಾಲುಗಳನ್ನು ಬಳಸುವುದು ಮತ್ತು ಸಂದು ಜೇಡಗಳ ಮರಿಗಳಲ್ಲಿ, ಶ್ವಾಸಕೋಶದ (book lung) ಹಿಂಬದಿಯ ಹಾಳೆಗಳು ಇರುವುದು “primitive” ಜೇಡಗಳು ಎಂದು ಹೇಳಲು ಬೇಕಾದ ಗುಣಲಕ್ಷಣಗಳು.) ಗಂಡು ಸಂದು ಜೇಡವನ್ನು ಪಕ್ಕನೆ ವಿಷಕಾರಿ brown recluse spider ಜೇಡವೆಂದು ಕೆಲವರು ಗೊಂದಲಕ್ಕೊಳಗಾಗುತ್ತಾರೆ.
ಯಾವುದೀ brown recluse spider? ಇದು ನಮ್ಮಲ್ಲಿದೆಯೇ?
ಇದೆ!
೨. ಏಕಾಂತ ಜೇಡ
ಸಂದು ಜೇಡಗಳು ಎಲ್ಲಿ ವಾಸಿಸುತ್ತವೆಯೋ ಅಂತಾ ಜಾಗಗಳಲ್ಲೇ ಇವೂ ವಾಸವಾಗಿರುತ್ತವೆ.
ನಾನು ೨೦೧೯, ಏಪ್ರಿಲ್ ತಿಂಗಳಲ್ಲಿ ನನ್ನ ಮಡದಿಯ ತವರು ಮನೆಗೆ ಹೋಗಿದ್ದೆ. ನನ್ನ ಮಾವನ ಮನೆ ಕಣಿಯಾರ ಮಲೆ ಎಂಬ ಸಂರಕ್ಷಿತ ಅರಣ್ಯದ ಬುಡದಲ್ಲಿದೆ. ಮಲೆನಾಡಿನ ಹೆಚ್ಚಿನ ಹಕ್ಕಿಗಳ ಬೀಡು, ನನ್ನ ಜೇಡನ ಸಂಗ್ರಹದಲ್ಲಿ ಆ ಕಾಡಿನ ಪಾತ್ರ ಸ್ಮರಣೀಯ. ಈ brown recluse ಜೇಡ ಕೂಡಾ ನನ್ನ ಜೇಡನ ಪಟ್ಟಿಗೆ ಸೇರ್ಪಡೆಯಾದದ್ದು ಅಲ್ಲಿಯೇ!
ಹಾಂ…
ಆದರೆ ಅದು ಕಾಡಿನಲ್ಲಲ್ಲ. ನನ್ನ ಮಾವನ ಮನೆಯ ಅಡುಗೆ ಕೋಣೆಯ, ತಟ್ಟೆ ತೊಳೆಯುವ ಸಿಂಕಿನ ಹತ್ತಿರ ಹಾದು ಹೋಗುವ ವಿದ್ಯುತ್ ಪೈಪಿನ ಅಡಿಯಲ್ಲಿ. ನನ್ನಾಕೆ ಜೇಡನ ಬಲೆಯನ್ನು ಗುಡಿಸುತ್ತಿದ್ದಳು. ಹಾಗೆ ಪೈಪಿನೆಡೆಗೆ ಪೊರಕೆಯಾಡಿಸಿದಳು. ಅಲ್ಲಿಂದ ಒಂದು ಜೇಡ ಓಡಿ ಬಂತು. ಸರಸರನೆ ಅತ್ತಿತ್ತ ಚಲಿಸಿ, ಅಷ್ಟೇ ವೇಗದಲ್ಲಿ ಮತ್ತೆ ಪೈಪಿನ ಎಡೆಗೆ ಹೋಗಿ ಮರೆಯಾಯಿತು. ಅವಳ ಪಕ್ಕದಲ್ಲೇ ಇದ್ದ ನನಗೆ ಆ ಜೇಡ ಪಕ್ಕನೆ ಸಂದು ಜೇಡನಂತೆ ಕಂಡಿತು. ಆದರೆ ತುಸು ಬಿನ್ನವೆನ್ನಿಸಿತು!
ಆರು ಕಣ್ಣಿನ ಜೇಡವಿದು, ಹಿಂದಿನ ಕಾಲುಗಳು ಉಳಿದವಕ್ಕಿಂತ ತುಸು ದೊಡ್ಡದು. ಎಲ್ಲದಕ್ಕಿಂತ ಮುಖ್ಯವಾಗಿ ತಲೆಯ ಮೇಲೆ ವಯೋಲಿನ್ ಆಕಾರದ ಚಿಹ್ನೆ. ಈ ಚಿಹ್ನೆಯಿಂದಲೇ ಇದನ್ನು ವಯೋಲಿನ್ ಜೇಡವೆಂದೂ ಕರೆಯುತ್ತಾರೆ.
Recluse ಜೇಡ ಪ್ರಪಂಚದ ಅತ್ಯಂತ ವಿಷಕಾರಿ ಜೇಡವೆಂದು ನನಗೆ ತಿಳಿದಿತ್ತು. ಆದರೆ ಇದು ಭಾರತದಲ್ಲಿದೆ ಎಂದು ಗೊತ್ತೇ ಇರಲಿಲ್ಲ.
ಸಿಕಾರಿಡೇ (Sicariidae )ಕುಟುಂಬದ ಲೊಕ್ಸೋಸೆಲೆಸ್ (Loxosceles) ಪ್ರಭೇದದ ಜೇಡವಿದು. ಬಲು ವಿಷಯುಕ್ತ ಜೇಡವಾದರೂ ಇದು ಮನುಷ್ಯನಿಗೆ ಹಾನಿ ಮಾಡಿದ ಉದಾಹರಣೆ ಬಲು ವಿರಳ. ಪಷ್ಚಿಮ ಬಂಗಾಲದಲ್ಲಿ ಕೆಲವು ಪ್ರಕರಣಗಳು ದಾಖಲಾಗಿದೆ. ಅಮೇರಿಕಾದಲ್ಲಿ ತುಸು ಹೆಚ್ಚಿನ ಪ್ರಕರಣಗಳನ್ನು ಕಾಣಬಹುದು.
ಅಧ್ಯಯನದ ದೃಷ್ಟಿಯಿಂದ ನಿಮಗೆ ಇದರ ಕಡಿತದ ಪರಿಣಾಮವನ್ನು ಈ ಕೆಳಗೆ ತಿಳಿಸಿರುವೆ.
ಕಚ್ಚಿದ ಜಾಗವು ಗಾಯವಾಗಿ/ಹುಣ್ಣಾಗಿ ಬೂದು ಬಣ್ಣಕ್ಕೆ ತಿರುಗುತ್ತದೆ. ಆ ಜಾಗವು ಹಳ್ಳ ಬಿದ್ದು, ಕೊಳೆಯುತ್ತದೆ. ಇದನ್ನು Loxoscelism ಎನ್ನುತ್ತಾರೆ. ತೀರಾ ಉಲ್ಬಣವಾದರೆ ಕಿಡ್ನಿ ಸಮಸ್ಯೆಯಾದ ಬಲು ಅಪರೂಪದ ನಿದರ್ಷನಗಳೂ ಇದೆ. (https://www.ncbi.nlm.nih.gov/pmc/articles/PMC4119339/?fbclid=IwAR0fsgTEYvpgiIMvt0eThuJ5BlzlZqzzOrxpCz9RYnrvWzWHx0zOCKlszvw)
ಜೇಡಗಳು ಕಚ್ಚಿ ಆಗುವ ಗಾಯಕ್ಕೆ arachnidism ಎನ್ನುತ್ತಾರೆ. ಈ ಜೇಡವು ಕಚ್ಚಿದರೆ ಆ ಜಾಗವು ಕೊಳೆಯುವುದರಿಂದ ಇದನ್ನು necrotic arachnidism ಎನ್ನುವರು.
ಇಷ್ಟೆಲ್ಲಾ ಓದಿದ ಮೇಲೆ ಗಾಬರಿಯಾದಿರೇ?
ಗಾಬರಿಯಾಗುವ ಅವಶ್ಯಕತೆ ಇಲ್ಲ. ಈ ಜೇಡದ ಹೆಸರನ್ನೇ ಗಮನಿಸಿ. ಹೆಸರಿದಕ್ಕೆ Recluse ಜೇಡ. Recluse ಅಂದರೆ ಏಕಾಂತ. ಈ ಜೇಡವು ಸದಾ ಏಕಾಂತದಲ್ಲಿರುವುದರಿಂದ ಈ ಹೆಸರು.
ಯೋಗಿಗಳು ಹಾಗೇ ಅಲ್ಲವೇ?
ಸದಾ ಏಕಾಂತ. ಎಷ್ಟೇ ತಪಸ್ಸಿನ ಶಕ್ತಿಯಿದ್ದರೂ ಅನವಶ್ಯ ಯಾರಮೇಲೂ ಪ್ರಯೋಗ ಮಾಡುವುದಿಲ್ಲ. ಅನ್ನ ನೀರು ಇಲ್ಲದೆ ದೀರ್ಘಕಾಲ ಇರಬಲ್ಲರು. ಅಂತೆಯೇ ಈ ಏಕಾಂತ ಜೇಡ! ಆಹಾರವಿಲ್ಲದೆ ತಿಂಗಳುಗಟ್ಟಲೆ ಇರಬಲ್ಲುದು. ತನ್ನಲ್ಲಿ ಅಪಾರ ವಿಷವಿದ್ದರೂ ಮನುಷ್ಯನಿಗೆ ಎಂದೂ ಅನಾವಷ್ಯ ಕಚ್ಚದು. ಸದಾ ಅವಿತೇ ಇರುವ ಈ ಜೇಡ ತನ್ನಿರುವಿಕೆಯನ್ನೇ ತೋರದು. ತಪಸ್ವಿಗಳಂತೆ ಒಳಗೇ ಕುಳಿತು,ಅಪಾರ ಪ್ರಮಾಣದ ಕೀಟಗಳನ್ನು ಹತೋಟಿಯಲ್ಲಿಡುವ ಈ ಜೇಡ ಋಷಿ ಸಮಾನವಲ್ಲದೆ ಮತ್ತೇನು.
Facebook ಕಾಮೆಂಟ್ಸ್