X

ಗಜವದನ …

 ಒಂದೇ ದಿನದಲ್ಲಿ ಎರಡೂ ಅನುಭವಗಳು ಆಗಿದ್ದು ನನ್ನ ಜೀವಮಾನದಲ್ಲೇ ಇದೆ ಮೊದಲನೇ ಭಾರಿ. ಮೊದಲನೆಯದು ಅಗಾಧ ಶಕ್ತಿಯಿಂದ ಕೂಡಿದ್ದು, ಆಹ್ಲಾದಕರ ಅನುಭವ, ಹೊಸ ಜೀವದ ಆಗಮನದ ನಡುಕ ಅದು. ಆ ನಡುಕದಲ್ಲಿ ಅಮೂಲ್ಯ ಮತ್ತು ಅಪಾರ ಶಕ್ತಿಯನ್ನು ಕ್ರೋಢೀಕರಿಸಿದ ಸುವಾಸನೆ ಎಲ್ಲೆಡೆ ಹಬ್ಬಿದೆ. ಮಹಾದೇವಿಯ ಮನದ ಭಯಕೆಯ ಭಾವ ಈಡೇರಿದಾಗ ಈ ಕಂಪನ ಅನುಭವಿಸಿದ್ದೇನೆ.

ಮಹಾದೇವಿಯ ಜೊತೆಗೆ ಸದಾ ಕಾಲ ಇರುತ್ತಿದ್ದ ನನಗೆ ಈ ಅನುಭವದ ರುಚಿ ಇತ್ತು. ಆ ಮಹಾತಾಯಿ ಸದಾಕಾಲ ಒಂದು ಒಳ್ಳೆ  ಕೆಲಸದಲ್ಲಿ ತೊಡಗಿಸಿಕೊಂಡು ತಮ್ಮ ಶಕ್ತಿಯ ಸದುಪಯೋಗ ಮಾಡುವ ಹವ್ಯಾಸಿ. ಕಳೆದ ಮೂರು ದಿನಗಳಿಂದ ಅವರೊಂದಿಗೆ ಇಲ್ಲದಿದ್ದರೂ ಅವರ ಇರುವಿಕೆಯ ಅನುಭವ ಮಾತ್ರ ತೋರದಿಲ್ಲ ನಾನು. ಸ್ವಲ್ಪ ಆರೋಗ್ಯದಲ್ಲಿ ಚೇತರಿಕೆ  ಕಾದು ನೋಡುತ್ತಿದ್ದೇನೆ. ಮತ್ತೆ ಆ ಮಹಾಮಾತೆಯ ಸೇವೆಯಲ್ಲಿ ತೊಡಗಲು. ನಾನೇ ಅರಿಸಿನ ಗಂಧ ಕೊಡದಿದ್ದರೆ ಅವರಿಗೆ ಅದರ ಮೇಲೆ ಉತ್ಸಾಹ ಕಳೆದವರ ರೀತಿ ಉಪಯೋಗಿಸಿದ್ದನ್ನು ನಾನೇ ನೋಡಿದ್ದೇನೆ. ಅದು ಹೇಗೆ ದೈನಂದಿನ ಸೇವೆಗಳು ಸಾಗಿವೆಯೋ ಅಲ್ಲಿ.

ಇದೆ ಚಿಂತೆ ಕಾಡುತ್ತಿರುವಾಗ ಮಹಾದೇವರ ರುದ್ರ ರೂಪ, ಅವರ ಕಾಲುಗಳು ರೌದ್ರ ತಾಳಿ ಧರೆಗೆ ಭಾರವೆಂಬತೆ ಈಗ ನರ್ತನ ಶುರುವಾದೀತಾ ಎನಿಸುವ ಕಂಪನ ಇನ್ನೊಂದು ಕಡೆ. ನಂದಿ ಮಹದೇವರನ್ನು ಆವತ್ತು ಒಳಗಡೆ ಬಿಡುವ ಮೂಲಕ ನಡೆದ ಮುನಿಸು ಎಲ್ಲೋ ತಾರಕಕ್ಕೆ ಏರಿದಂತಿದೆ. ನನ್ನ ಅನುಪಸ್ಥಿತಿಯಲ್ಲಿ ಅಲ್ಲಿ ಅದೇನೇನು ಆಗಿದೆಯೋ ನೋಡಬೇಕು. ಮಹಾದೇವ ಮಹಾದೇವಿ ನಡುವೆ ಯಾವುದೇ ಮನಸ್ತಾಪ ಬಂದರು ಅದು ಶುಭ ಸೂಚಕವಲ್ಲದ್ದು.ಯಾರನ್ನಾದರೂ ಕೇಳುವ ಹಾಗೆ ನನ್ನ ಪರಸ್ಥಿತಿ ಇಲ್ಲ.ಕಣ್ಣು ತೆರೆಯಲಾಗುತ್ತಿಲ್ಲ,ದೇಹಕ್ಕೆ ಸ್ಪಂದನೆ ಇಲ್ಲ. ನಾಲಿಗೆಯಲ್ಲಿ ಬಿಲ್ವಪತ್ರೆಯ ಕಹಿ ಹಾಗೆ ಇದೆ. ಬೇಡವಾದರೂ ಕಣ್ಣು ಮುಚ್ಚಿದಂತೆ, ಅದೆಲ್ಲೋ ದೂರದಲ್ಲಿ “ಸೂಚಿ,ಬಾ ಇಲ್ಲಿ” ಎಂದು ಮಹಾದೇವಿ ಕರೆದ ಭಾವ ಕಿವಿಯ ಮೇಲೆ ಭ್ರಮೆ ಥರಾ ಆವರಿಸಿದೆ.ಮತ್ತೆ ನಶ್ವರದಲ್ಲಿ ತೇಲಿಹೋದೆ.

******

ಕಣ್ಣು ತೆರೆಯುತ್ತಿದ್ದಂತೆ ಕ್ಷಿತಿಜ ನನ್ನ ಕಣ್ಣ ಮುಂದೆ ಕಾಣಿಸಿಕೊಂಡ, ಔಷಧಿಯ ಎರಡು ಹನಿ ಬಾಯಿಯೊಳಗೆ ಹಾಕುತ್ತ ಏನೋ ಹೇಳಲೆಂದೇ ಕಾದು ಕುಳಿತವನು ನೀರು ಪಾತ್ರೆ ಸರಿಸಿ ಹತ್ತಿರಕ್ಕೆ ಬಂದ.ಮಹಾದೇವಿ ಅಮ್ಮ ಅರಿಶಿಣ ಗಂಧದಿಂದ ಒಂದು ಮಗುವನ್ನು ಮಾಡಿದ್ದಾರೆ. ಆ ಸ್ವರೂಪಕ್ಕೆ ತಾವೇ ಉಸಿರಿನಿಂದ ಊದಿ ಜೀವ ತುಂಬಿದ್ದಾರೆ.ಆ ದಿವ್ಯ ಮಗು ಎಷ್ಟು ಶಕ್ತಿಶಾಲಿ ಗೊತ್ತ, ಮಹಾದೇವರ ಯಾರೊಬ್ಬನೂ ಅವರನ್ನು ಅಳುಕಿಸಲು ಸಾಧ್ಯವಿಲ್ಲವಂತೆ. ಸ್ವತಹಃ ಮಹಾದೇವರೆ ಕೋಪದ್ರೇಕವಾಗಿ ಆ ಮಗುವಿಗೆ ಅದೇನೋ ಶಿಕ್ಷೆ ಕೊಟ್ಟಿದ್ದಾರೆ. ಪ್ರಸ್ತುತ ಮಹಾದೇವಿ ಮತ್ತು ಮಹಾದೇವರ ನಡುವೆ ಕಲಾಪವೇ ಏರ್ಪಟ್ಟಿದೆ. ನಾನು ಮುಂದೆ ಏನು ಆಗತ್ತೋ ನೋಡಿ ಬಂದು ಹೇಳುವೆ ನೀವು ವಿಶ್ರಾಂತಿಯಲ್ಲಿ ಇರಿ ಎನ್ನುತ ಕೈಯಲ್ಲಿದ್ದ ರುದ್ರಾಕ್ಷಿ ಮಾಲೆ ಹಿಡಿದು ಹೊರಟೆ ಹೋದ.

ನನಗೆ ಮೊದಲಿನಿಂದ ಅನುಮಾನದ ಕಂಪನಗಳು ಇದ್ದುದ್ದರಿಂದ ಆಘಾತಕ್ಕಿಂತ ಚಿಂತಾಕ್ರಾಂತತೆ ಹೆಚ್ಚಾಗಿತ್ತು. ಮಹಾದೇವಿ ನಂದಿಯ ವಹಿಸಿದ ಕೆಲಸಕ್ಕೆ ಅತೃಪ್ತವಾಗಿದ್ದದ್ದು ನನಗೆ ತಿಳಿದಿತ್ತು. ಅದಕ್ಕೆ ಉತ್ತರವಾಗಿ ಒಂದು ಅಗಾಧ ಸ್ವರೂಪದ ಜನನಕ್ಕೆ ಕಾರಣವಾಗಿ ಮುಂದೆ ಶಿಕ್ಷೆಗೆ ಗುರಿಯಾಗುವ ಲಕ್ಷಣಗಳು ನನ್ನ ಮೀತಿಗೆ ನೀಲುಕದವು. ಗುಣಾತ್ಮಕವಾಗಿ ಯೋಚಿಸುವುದಾದರೆ ನನ್ನ ಆರೋಗ್ಯದ ಏರುಪೇರಿಗೆ ಕಾರಣ ಇದ್ದಂತಿದೆ. ಇದೆಲ್ಲ ತ್ರಿಕಾಲ ಜ್ಞಾನಿಗೆ ಮೊದಲೇ ತಿಳಿದಿತ್ತು ಅನಿಸುತ್ತದೆ. ನನ್ನ ಅನುಪಸ್ಥಿತಿಯಿಂದಲೇ ನಂದಿಗೆ ಮಹಾದೇವಿ ತಮ್ಮ ರಕ್ಷಕನಂತೆ ಕಾಯುವ ಕೆಲಸ ವಹಿಸಿದ್ದು. ಮಹಾದೇವರ ಆಗಮನವನ್ನು ನಂದಿ ತಡೆಯದೇ ಒಳಗೆ ಹೋಗಲು ಅನುವು ಮಾಡಿ ಕೊಟ್ಟಿದ್ದು. ಅದನ್ನೇ ಕಾರಣವಾಗಿ ತಮ್ಮ ಮೈಗಂಟಿದ ಅರಿಸಿನ ಗಂಧದಿಂದ ಮಹಾಸ್ವರೂಪಿಯನ್ನು ಸೃಷ್ಟಿ ಮಾಡಿದ್ದೂ ಎಲ್ಲಕ್ಕೂ ನನ್ನ ಅನುಪಸ್ಥಿತಿಯೇ ಕಾರಣವಿದ್ದಂತಿದೆ.

******

           ಅದೇನೋ  ಕಲ್ಪನೆಯಲ್ಲಿ ತೇಲಿಕೊಂಡು ಎಲ್ಲಾ ಸರಿಯಾಗಲಿ ಎಂಬ ಪ್ರಾರ್ಥನೆ ಮಾಡಿಕೊಂಡಿರುವಾಗಲೇ “ಸೂಚಿ,ನಿನ್ನ ಕಂದನ ನಾಮಕರಣಕ್ಕೆ ತಯಾರಿ ಮಾಡು” ಎಂದು ಮಹಾದೇವ ಹೇಳಿದ ಹಾಗೆ ಭಾಸವಾಯಿತು. ಅಪ್ಪಣೆ ಮಹಾದೇವ ಎಂದು ಹೇಳುತ್ತಾ ಹಾಸಿಗೆ ಮೇಲಿಂದ ಸರಾಗವಾಗಿ ಎದ್ದು ಎಂದಿನಂತೆ ತಯಾರಿ ನಡೆಸಿ ಶುಭ್ರವಾದ ವಸ್ತ್ರ ಧರಿಸಿ ಹೊರ ನಡದೇ.ಅಮ್ಮ ಎಲ್ಲಿಗೆ ಹೊರಟಿದ್ದೀರಿ? ನಿಮ್ಮ ಅರೋಗ್ಯ ಸರಿ ಇಲ್ಲ ಎನ್ನುತ್ತಾ ಕ್ಷಿತಿಜ ನನ್ನೆಡೆಗೆ ಬಂದ. ಅಮ್ಮ ಕೇಳಿ ಮಹಾದೇವ ಮತ್ತೆ ಜಮತ್ಕಾರ ಮಾಡಿದ್ದಾರೆ ಮಗು ಸ್ವರೂಪಿಯ ಶಿರ ಛೇಧನ ಮಾಡಿ ಈಗ ಮತ್ತೆ ಅದನ್ನು ಬೇರೆ ಶಿರದ ಜೊತೆ ಗುಣಪಡಿಸಿದ್ದಾರೆ.ಆ ಮಗು ಸ್ವರೂಪಿ ಈಗ ಅಗಾಧ ಬೆಳಕು ಮತ್ತು ಶಕ್ತಿಯೊಂದಿಗೆ ಕಂಗೊಳಿಸುತ್ತ ನಿಂತದ್ದು ನೋಡಲು ಕಣ್ಣು ಸಾಲದಂತೆ ಇದೆ. ಮಹಾದೇವ ನಿಮ್ಮನ್ನು ಕರೆತರಲು ತಿಳಿಸಿದರು, ನಾನು ನಿಮ್ಮ ಅನಾರೋಗದ ಬಗ್ಗೆ ತಿಳಿಸಿದಾಗೆ ಈಗ ಎಲ್ಲಾ ಸರಿ ಹೋಗಿದೆ ಹೋಗಿ ಕರೆದುಕೊಂಡು ಬರುವುದಾಗಿ ತಿಳಿಸಿದರು.

ಮಗ ಕ್ಷಿತಿಜ ನನ್ನ ಅರೋಗ್ಯ ಈಗ ಸರಿ ಇದೆ, ಆ ಮಗು ಸ್ವರೂಪಿಯ ಜನನಕ್ಕೆ ಏನೆಲ್ಲಾ ಆಗಬೇಕಿತ್ತೋ ಅದು ಆಗಿದೆ. ನನ್ನ ಜೊತೆ ಬಾ ನಾನು ಅವರ ಬಳಿಗೆ ಹೋಗಬೇಕು ತಡಮಾಡದೆ ಎನ್ನುತ್ತಾ ಒಂದೆಂದೋ ದೇಹದ ಭಾಗಗಳ ಚಲನವಲನದಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಗಮನಿಸದೆ ಆತುರ ಆತುರವಾಗಿ ಮಹಾದೇವರ ಮಂಟಪದ ಕಡೆ ಹೊರಟೆ.

ನೆರೆದಿದ್ದ ಎಲ್ಲರು ನನಗೆ ಕಾಯುತ್ತಿರುವ ರೀತಿಯಲ್ಲಿ ನಡುವೆ ದಾರಿಯನ್ನು ಬಿಟ್ಟು ನಿಂತಿದ್ದರು. ಕಣ್ಣು ಕಾಣಿಸುವಷ್ಟು ದೊಡ್ಡ ಮಂಟಪದಲ್ಲಿ ನಡುವೆ ಆಸನದಲ್ಲಿ ಮಹಾದೇವ ಮಹಾದೇವಿಯರ  ಹಸನ್ಮುಖ ಭಾವದ ನಡುವೆ ಪುಟ್ಟ ಬಾಲಕ ಶುಭ್ರ ಬಿಳಿಯ ಪಂಚೆಯಲ್ಲಿ ಅಗಾಧ ಬೆಳಕಿನ ನಡುವೆ ಕುಳಿತಿದ್ದಾರೆ. ಹಿಂದೆ ಕಾಣುತ್ತಿರುವ ಹಿಮಾಲಯದ ಗಿರಿಗೆ ಕಳಸದಂತೆ ಮೂವರು ಕಾಣಿಸುತ್ತಿದ್ದರು. ನಾದವೀಣೆ ಸಂಗೀತ ನೆರೆದ ಮಹಾದೇವರ ಬಳಗ ನನ್ನ ಪಾಲಿಗೆ ಇಲ್ಲದಂತೆ ಭಾಸವಾಗಿ ಮುಂದೆ ನಡೆದೆ. ಮಂಜಾದ ಕಣ್ಣುಗಳನ್ನು ಸರಿ ಮಾಡಿ ಮಗು ಸ್ವರೂಪಿಯ ಮತ್ತೆ ನೋಡಿದೆ,ಅದೊಂದು ಅದ್ಭುತ.

ಮೂಖವಿಸ್ಮಿತಳಾದ ನನಗೆ ಮಹಾದೇವ “ಸೂಚಿ,ಅಂತೂ ಬಂದೆಯಾ,ಬಾ ಇಲ್ಲಿ ನಿನ್ನ ಅನುಪಸ್ಥಿತಿಯಲ್ಲಿ ಬಂದ ನಿನ್ನ ಕಂದನಿಗೆ ನಾಮಕರಣ ಮಾಡುವದಿಲ್ಲವೇ” ಎಂದರು. ಮಹಾದೇವಿ ಎದ್ದು ನಿಂತು ನನ್ನ ಬಳಿ ಕರೆದು ಎಲ್ಲರಿಗೂ ಕೇಳುವ ಹಾಗೆ “ನಾಮಕರಣದ ವಾದ್ಯಗಳು ಶುರುವಾಗಲಿ,ಸೂಚಿ ಬಂದಾಯಿತು” ಎಂದರು. ಯಾವ ಭಾವ ವಿಲ್ಲದೆ ಮಗು ಸ್ವರೂಪಿಯ ನೋಡಿ ಕಂಠದಿಂದ ಬಂದ ಸ್ವರ ” ಗ…….. ಜ …… ಬಾ ” ನಾದಕ್ಕೆ ಸೇರಿದಂತೆ  ಸುತ್ತಲೂ ಇರುವ ಮಹಾದೇವನ ಬಳಗ ಅದನ್ನೇ ಮತ್ತೆ ಅಬ್ಬರದ ಸ್ವರದಲ್ಲಿ ಹೇಳಿದ್ದರು……

ಗಜವದನ ಹೇರಂಭಾ ……. ಗಜವದನ ಹೇರಂಭಾ ……

 

-Anand R C

Facebook ಕಾಮೆಂಟ್ಸ್

Anand Rc: ಹವ್ಯಾಸಿ ಬರಹಗಾರ,ಎಂ,ಸಿ,ಎ ಓದಿ,ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ ಸಲಹೆಗಾರರ ವೃತ್ತಿ.ಕಂಪ್ಯೂಟರ್,ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು ಕಲಿಸಿದ್ದು,Aarsi.org ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ.
Related Post